ಟಿ ಜಿ ಶ್ರೀನಿಧಿ
ಬಾಹ್ಯಾಕಾಶಕ್ಕೆ ಪ್ರವಾಸ ಹೋಗುವ ಆಲೋಚನೆ ಹೊಸದೇನಲ್ಲ. ಹಿಂದೆ ಬರಿಯ ಕತೆ-ಕಾದಂಬರಿಗಳಿಗಷ್ಟೇ ಸೀಮಿತವಾಗಿದ್ದ ಈ ಕನಸು ನನಸಾಗಿಯೇ ಹತ್ತು ವರ್ಷಗಳ ಮೇಲಾಗಿದೆ. ಆದರೆ ಈ ಪ್ರವಾಸದ ವೆಚ್ಚ ಈವರೆಗೂ ಸುಮಾರು ನೂರು ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವುದರಿಂದ ನಮ್ಮಂಥ ಸಾಮಾನ್ಯರು ಬಾಹ್ಯಾಕಾಶ ಪ್ರವಾಸದ ಬಗ್ಗೆ ಯೋಚಿಸುವುದು ಮಾತ್ರ ಸಾಧ್ಯವಾಗಿರಲಿಲ್ಲ.
ಪ್ರಸ್ತುತ ಕೋಟಿಗಳಲ್ಲಿರುವ ಟಿಕೇಟಿನ ಬೆಲೆ ಕನಿಷ್ಠಪಕ್ಷ ಲಕ್ಷಗಳಿಗಾದರೂ ಇಳಿದರೆ ಮಾತ್ರ ಜನಸಾಮಾನ್ಯರು ಬಾಹ್ಯಾಕಾಶಕ್ಕೆ ಹೋಗಿಬರುವುದು ಸಾಧ್ಯ ಎಂದು ಅರಿತುಕೊಂಡ ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಬಹಳವರ್ಷಗಳಿಂದ ಕೆಲಸಮಾಡುತ್ತಿವೆ.
ಇಂಥ ಸಂಸ್ಥೆಗಳಲ್ಲೊಂದು ಅಮೆರಿಕಾದ ಸ್ಕೇಲ್ಡ್ ಕಾಂಪೋಸಿಟ್ಸ್. ಅಂತರಿಕ್ಷಯಾತ್ರೆಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಅತ್ಯುತ್ತಮ ಪ್ರಯತ್ನಕ್ಕಾಗಿ ಮೀಸಲಾಗಿದ್ದ ಒಂದು ಕೋಟಿ ಡಾಲರ್ ಮೊತ್ತದ ’ಎಕ್ಸ್ ಪ್ರೈಜ್’ ಬಹುಮಾನ ಗೆದ್ದ ಸಂಸ್ಥೆ ಇದು. ಈ ಸಂಸ್ಥೆ ತಯಾರಿಸಿದ ’ಸ್ಪೇಸ್ ಶಿಪ್ ಒನ್’ ಎಂಬ ಅಂತರಿಕ್ಷವಾಹನ ೨೦೦೪ರಲ್ಲಿ ಯಶಸ್ವಿ ಯಾನ ಕೈಗೊಂಡು ಭೂಮಿಯ ಮೇಲಿಂದ ನೂರಾ ಹತ್ತು ಕಿಲೋಮೀಟರುಗಳಷ್ಟು ಎತ್ತರದವರೆಗೆ ಹೋಗಿಬಂದಿತ್ತು.
ಅಂತರಿಕ್ಷ ಪ್ರವಾಸದ ಕಮರ್ಷಿಯಲ್ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆದದ್ದೇ ಆಗ. ಎಲ್ಲ ಸರಿಯಾಗಿ ನಡೆದರೆ ಇದೆಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆಯಾಗಬಲ್ಲದು ಎಂದು ಅರಿತುಕೊಂಡ ವರ್ಜಿನ್ ಸಂಸ್ಥೆ ತಕ್ಷಣವೇ ಸ್ಕೇಲ್ಡ್ ಕಾಂಪೋಸಿಟ್ಸ್ ಜೊತೆಗೆ ಕೈಗೂಡಿಸಿತು; ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿತು.
ಈ ಸಹಭಾಗಿತ್ವದ ಫಲವಾಗಿ ಸ್ಪೇಸ್ ಶಿಪ್ ಒನ್‌ನ ಸುಧಾರಿತ ಆವೃತ್ತಿ ’ವಿಎಸ್‌ಎಸ್ ಎಂಟರ್‌ಪ್ರೈಸ್’ ಎಂಬ ಹೆಸರಿನಲ್ಲಿ ಇದೀಗ ಸಿದ್ಧವಾಗಿದೆ. ಈ ಅಂತರಿಕ್ಷವಾಹನ ಬಳಸಿ ಆಸಕ್ತರಿಗೆ ಅಂತರಿಕ್ಷಕ್ಕೆ ಹೋಗಿಬರುವ ಅವಕಾಶ ಕಲ್ಪಿಸುವುದು ವರ್ಜಿನ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಗುರಿ.
ಮುಂದಿನ ಹದಿನೆಂಟು ತಿಂಗಳುಗಳ ಕಾಲ ವಿವಿಧ ಪರೀಕ್ಷೆಗಳಿಗೆ ಒಳಪಡಲಿರುವ ’ವಿಎಸ್‌ಎಸ್ ಎಂಟರ್‌ಪ್ರೈಸ್’ ಆನಂತರ ತನ್ನ ವಾಣಿಜ್ಯ ಸೇವೆ ಪ್ರಾರಂಭಿಸಲಿದೆ. ಅಷ್ಟು ಹೊತ್ತಿಗೆ ಅದರ ಹಾರಾಟಕ್ಕೆ ಬೇಕಾದ ಸ್ಪೇಸ್‌ಪೋರ್ಟ್ ಕೂಡ ಸಿದ್ಧವಾಗಲಿದೆ.
ಈ ಅಂತರಿಕ್ಷ ವಾಹನದಲ್ಲಿ ಆರು ಜನ ಪ್ರವಾಸಿಗರ ಜೊತೆಗೆ ಇಬ್ಬರು ಸಿಬ್ಬಂದಿ ಪ್ರಯಾಣಿಸಬಹುದು. ಸುಮಾರು ಹದಿನೈದು ಕಿಲೋಮೀಟರ್ ಎತ್ತರದವರೆಗೆ ’ವೈಟ್ ನೈಟ್’ ಎಂಬ ಮಾತೃನೌಕೆಯ ಬೆನ್ನೇರಿ ಸವಾರಿಮಾಡುವ ಈ ಅಂತರಿಕ್ಷವಾಹನ ಅಲ್ಲಿ ಮಾತೃನೌಕೆಯಿಂದ ಬೇರ್ಪಟ್ಟು ಗಂಟೆಗೆ ನಾಲ್ಕುಸಾವಿರ ಕಿಲೋಮೀಟರ್ ವೇಗದಲ್ಲಿ ಮೇಲ್ಮುಖವಾಗಿ ಚಲಿಸಲಿದೆ; ಕೇವಲ ಒಂದೂವರೆ ನಿಮಿಷದಲ್ಲಿ ತನ್ನ ಪ್ರಯಾಣಿಕರನ್ನು ೧೧೦ ಕಿಲೋಮೀಟರ್ ಎತ್ತರಕ್ಕೆ ಕೊಂಡೊಯ್ದು ಭಾರರಹಿತ ಸ್ಥಿತಿಯ ಅನುಭವ ನೀಡಲಿದೆ.
ಕ್ಷಣಮಾತ್ರದ್ದಾದರೂ ಅಪೂರ್ವವಾದ ಈ ಅನುಭವವನ್ನು ತಮ್ಮದಾಗಿಸಿಕೊಳ್ಳಲು ಕನಿಷ್ಠ ೩೦೦ ಜನ ಈಗಾಗಲೇ ನೋಂದಾಯಿಸಿಕೊಂಡಿದ್ದಾರಂತೆ. ವರ್ಜಿನ್ ಸಂಸ್ಥೆ ಅವರಿಂದ ತಲಾ ಸುಮಾರು ಒಂದು ಕೋಟಿ ರೂಪಾಯಿ ಶುಲ್ಕ ಪಡೆಯುವ ನಿರೀಕ್ಷೆಯಿದೆ.
ಡಿಸೆಂಬರ್ ೨೪, ೨೦೦೯ರ ಸುಧಾದಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ