ಗುರುವಾರ, ಆಗಸ್ಟ್ 19, 2010

ಬಂದಿದೆ ಬಯೋಬಗ್‌!

ಟಿ ಜಿ ಶ್ರೀನಿಧಿ


ಕೊಳಚೆ ನಿರ್ವಹಣೆ ನಮ್ಮೆಲ್ಲ ನಗರಗಳನ್ನು ಬಾಧಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲೊಂದು. ಬರಿಯ ಪ್ಲಾಸ್ಟಿಕ್ ಒಂದೇ ಅಲ್ಲ, ದೊಡ್ಡ ನಗರಗಳಲ್ಲಿ ಜೈವಿಕ ತ್ಯಾಜ್ಯ (ಮಲಮೂತ್ರ, ಹಾಳಾದ ಆಹಾರ ಪದಾರ್ಥ ಮುಂತಾದ ಕೊಳೆಯುವ ಕಸ) ಕೂಡ ಸಾಕಷ್ಟು ದೊಡ್ಡ ಸಮಸ್ಯೆಯೇ - ಸಹಿಸಲಾರದ ದುರ್ವಾಸನೆ ಹೊರಡಿಸುವುದರಿಂದ ಹಿಡಿದು ಅಂತರ್ಜಲವನ್ನು ಕಲುಷಿತಗೊಳಿಸುವವರೆಗೆ ಅನೇಕ ಬಗೆಯ ತೊಂದರೆಗಳ ಮೂಲ ಅದು.

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಹಾಗೆ ಈ ಸಮಸ್ಯೆಯನ್ನು ಮತ್ತೊಂದು ಸಮಸ್ಯೆಯ ನಿವಾರಣೆಗೆ ಬಳಸುವ ಐಡಿಯಾ ಇಂಗ್ಲೆಂಡಿನಿಂದ ಕೇಳಿಬಂದಿದೆ. ಮಾನವ ತ್ಯಾಜ್ಯದಿಂದ ತಯಾರಾದ ಬಯೋಗ್ಯಾಸ್ ಅನ್ನು ಸಂಸ್ಕರಿಸಿ, ಅದನ್ನೇ ಇಂಧನವನ್ನಾಗಿ ಬಳಸಿ ಕಾರು ಓಡಿಸುವ ವಿಚಿತ್ರ ಕಲ್ಪನೆಯನ್ನು ಅವರು ಪ್ರಾಯೋಗಿಕವಾಗಿ ಸಾಧಿಸಿ ತೋರಿಸಿದ್ದಾರೆ. ಪರ್ಯಾಯ ಇಂಧನ ಬಳಕೆಯಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಮಾಡುವುದು ಸಾಧ್ಯ ಎಂದು ತೋರಿಸುವುದು ಈ ಪ್ರಯತ್ನದ ಹಿಂದಿನ ಉದ್ದೇಶ. ವೆಸೆಕ್ಸ್ ವಾಟರ್ ಹಾಗೂ ಜೆನ್‌ಇಕೋ ಎಂಬ ಸಂಸ್ಥೆಗಳು ಒಟ್ಟಾಗಿ ಈ ಕಲ್ಪನೆಯನ್ನು ಕಾರ್ಯಗತಗೊಳಿಸಿವೆ.

ಈ ವಿಚಿತ್ರ ಇಂಧನ ಬಳಸಿ ಚಲಿಸುವಂತೆ ಪರಿವರ್ತಿಸಲಾಗಿರುವ ಫೋಕ್ಸ್‌ವಾಗನ್ ಬೀಟಲ್ ಕಾರಿಗೆ ಬಯೋ-ಬಗ್ ಎಂದು ಹೆಸರಿಡಲಾಗಿದೆ. ಜೈವಿಕ ತ್ಯಾಜ್ಯವನ್ನು ವಿಘಟನೆಗೊಳಿಸಿ ಮರಳಿ ಮಣ್ಣಿಗೆ ಸೇರಿಸುವ ಕೀಟಗಳ ಪ್ರಾತಿನಿಧಿಕ ಸಂಕೇತವಾಗಿ ಹುಳದ ಹೆಸರಿನ ಬೀಟಲ್ ಕಾರನ್ನು ಆರಿಸಲಾಗಿದೆ ಎನ್ನುವುದು ಈ ಯೋಜನೆಯ ರೂವಾರಿಗಳ ಹೇಳಿಕೆ.

ಜೈವಿಕ ತ್ಯಾಜ್ಯ ಬಳಸಿ ಬಯೋಗ್ಯಾಸ್ ತಯಾರಿಸುವುದು, ಹಾಗೂ ಅದನ್ನು ಇಂಧನವನ್ನಾಗಿ ಬಳಸುವುದು ನಾವು ಕೇಳಿರದ ಸಂಗತಿಯೇನಲ್ಲ. ಆದರೆ ಈ ಕಾರನ್ನು ಚಲಾಯಿಸಲು ಬಳಕೆಯಾಗುತ್ತಿರುವುದು ಈ ಬಯೋಗ್ಯಾಸ್ ಅಲ್ಲ. ಸಾಧಾರಣ ಬಯೋಗ್ಯಾಸ್‌ನಲ್ಲಿರುವ ಹೆಚ್ಚಿನ ಇಂಗಾಲದ ಡೈಆಕ್ಸೈಡ್ ಅಂಶವನ್ನು ಹೋಗಲಾಡಿಸಿದಾಗ ಉಳಿಯುವ ಮೀಥೇನ್ ಅನಿಲವನ್ನು ಈ ಕಾರಿನ ಇಂಧನವನ್ನಾಗಿ ಬಳಸಲಾಗುತ್ತ್ತಿದೆ.

ಸಾಮಾನ್ಯ ಕಾರುಗಳಿಗೆ ಹೋಲಿಸಿದರೆ ಬಯೋ-ಬಗ್‌ನ ಚಲನೆಯಲ್ಲಿ ಯಾವ ಬಗೆಯ ವ್ಯತ್ಯಾಸವೂ ಇರುವುದಿಲ್ಲ; ಕೆಟ್ಟ ವಾಸನೆಯಂತೂ ಖಂಡಿತಾ ಇರುವುದಿಲ್ಲ ಎಂದು ಅದರ ನಿರ್ಮಾತೃಗಳು ಹೇಳುತ್ತಾರೆ. ಅಂದಹಾಗೆ ಈ ಇಂಧನದ ಕಾರ್ಯಕ್ಷಮತೆಯೇನೂ ಕಡಿಮೆಯಿಲ್ಲ - ಕೇವಲ ಎಪ್ಪತ್ತು ಮನೆಗಳಿಂದ ಹೊರಬರುವ ತ್ಯಾಜ್ಯದಿಂದ ಹತ್ತುಸಾವಿರ ಮೈಲಿಗಳ ಪ್ರಯಾಣಕ್ಕೆ ಸಾಕಾಗುವಷ್ಟು ಇಂಧನ ಪಡೆಯಬಹುದಂತೆ!

ಬಯೋಮೀಥೇನ್ ಎಂದು ಕರೆಯಲಾಗುವ ಈ ಅನಿಲ ಬಳಸಿ ವಾಹನಗಳನ್ನು ಚಲಾಯಿಸುವ ಇನ್ನೂ ಹಲವಾರು ಪ್ರಯತ್ನಗಳು ಯುರೋಪಿನಾದ್ಯಂತ ನಡೆಯುತ್ತಿವೆ - ಸ್ವೀಡನ್ ದೇಶದಲ್ಲಿ ಈಗಾಗಲೇ ಹತ್ತು ಸಾವಿರಕ್ಕೂ ಹೆಚ್ಚು ಬಯೋಮೀಥೇನ್ ಚಾಲಿತ ವಾಹನಗಳು ಸಂಚರಿಸುತ್ತಿವೆ ಎಂಬ ಅಂದಾಜಿದೆ.

ಆಗಸ್ಟ್ ೨೬, ೨೦೧೦ರ ಸುಧಾದಲ್ಲಿ ಪ್ರಕಟವಾದ ಲೇಖನ
badge