ಬುಧವಾರ, ಜನವರಿ 23, 2008

ಗಣಕ ವಿಜ್ಞಾನದಲ್ಲೊಂದು ಸಮೂಹ ಕ್ರಾಂತಿ

ಟಿ ಜಿ ಶ್ರೀನಿಧಿ

ಏಳೆಂಟು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿದ್ದ ಗಣಕದ ಪ್ರಾಸೆಸರ್ ಮುನ್ನೂರು ಮೆಗಾಹರ್ಟ್ಸ್ ವೇಗದಲ್ಲಿ ಕೆಲಸಮಾಡುತ್ತಿತ್ತು, ಅರುವತ್ತನಾಲ್ಕು ಮೆಗಾಬೈಟ್ RAM ಹೊಂದಿತ್ತು. ಆದರೆ ಹೋದ ತಿಂಗಳು ನಾವು ಕೊಂಡ ಗಣಕದ ಪ್ರಾಸೆಸರ್ ಮೂರು ಗಿಗಾಹರ್ಟ್ಸ್‌ನದು, ಅದರಲ್ಲಿರುವ RAM ಸಾಮರ್ಥ್ಯ ಬರೋಬ್ಬರಿ ಒಂದು ಗಿಗಾಬೈಟ್. ಒಟ್ಟಿನಲ್ಲಿ ಆ ಹಳೆಯ ಗಣಕಕ್ಕಿಂತ ಹತ್ತು ಪಟ್ಟು ವೇಗವಾಗಿ ಕೆಲಸಮಾಡುವ ಸಾಮರ್ಥ್ಯ ಈ ಗಣಕಕ್ಕಿದೆ. ಮುಂದೆ ಓದಿ

ಶುಕ್ರವಾರ, ಜನವರಿ 18, 2008

ಬೌ... ಬೌಬೌಬೌಬೌಬೌ!

ಟಿ ಜಿ ಶ್ರೀನಿಧಿ

ಹೀಗೇ ಸುಮ್ಮನೆ ಕುಳಿತು ನನ್ನ ಇಷ್ಟದ ತಾಣಗಳನ್ನು ಬ್ರೌಸ್ ಮಾಡುತ್ತಿದ್ದಾಗ ಒಂದೆಡೆ ಕಂಡ ಸುದ್ದಿ ನಾನು ಹಿಂದೆಂದೋ ಓದಿದ್ದ ಡೊನಾಲ್ಡ್ ಡಕ್ ಕಾಮಿಕ್ ಅನ್ನು ನೆನಪಿಸಿತು. ಡೊನಾಲ್ಡ್ ಅದೆಂಥದೋ ಮಾತ್ರೆಗಳನ್ನು ನುಂಗಿ ನಾಯಿಯ ಬೌಬೌ ಭಾಷೆ ಮಾತನಾಡಲು ಕಲಿಯುವ ಕತೆ ಅದು. ಹೀಗೆ ಮಾತಾಡುವಾಗ ಸ್ವಲ್ಪ ಎಡವಟ್ಟಾಗಿ ನಾಯಿ ಕೋಪದಲ್ಲಿ ಡೊನಾಲ್ಡ್ ಅನ್ನು ಅಟ್ಟಿಸಿಕೊಂಡು ಹೋಗುವ ಚಿತ್ರ ನನಗಿನ್ನೂ ಚೆನ್ನಾಗಿ ನೆನಪಿದೆ.

ಆ ಕತೆಯನ್ನು ನೆನಪಿಸಿದ ಸುದ್ದಿ ಬಂದದ್ದು ಹಂಗರಿ ದೇಶದಿಂದ. ಅಲ್ಲಿನ ವಿಜ್ಞಾನಿಗಳು ನಾಯಿಯ ಬೊಗಳುವಿಕೆಯನ್ನು ಅರ್ಥೈಸುವ ತಂತ್ರಾಂಶವನ್ನು ರೂಪಿಸಿದ್ದಾರಂತೆ. ಈ ಸಾಧನೆ ನಡೆದಿರುವುದು ಬುಡಾಪೆಸ್ಟ್ ನಗರದ ವಿಶ್ವವಿದ್ಯಾನಿಲಯವೊಂದರಲ್ಲಿ.
ಈ ತಂತ್ರಾಂಶ ಈವರೆಗೆ ಒಟ್ಟು ಆರುಸಾವಿರ ಬಗೆಯ ಬೊಗಳುವಿಕೆಗಳನ್ನು ಕೇಳಿಸಿಕೊಂಡಿದೆಯಂತೆ.ಇಷ್ಟು ಬೊಗಳಿಸಿಕೊಂದ ಮೇಲೆ ಅದು ಈಗ ಯಾವುದೇ ಬೊಗಳುವಿಕೆ ಕೇಳಿದರೂ ಬೊಗಳಿದ ನಾಯಿ ಏನು ಹೇಳುತ್ತಿದೆ ಎಂದು ನಮಗೆ ತಿಳಿಸುತ್ತದೆ ಎನ್ನುವುದು ತಂತ್ರಾಂಶ ನಿರ್ಮಾತೃಗಳ ಹೇಳಿಕೆ. ನಾಯಿ ಬೌಬೌ ಅಂದಾಗ ಅದು ಸಿಟ್ಟಿನಲ್ಲಿ ಬೊಗಳಿದ್ದೋ, ಆಟವಾಡುತ್ತ ಬೊಗಳಿದ್ದೋ, ಅಪರಿಚಿತನನ್ನು ನೋಡಿ ಬೊಗಳಿದ್ದೋ ಅಥವಾ ಹಸಿವಾಗಿದೆ ಎಂದು ಬೊಗಳಿದ್ದೋ ಎಂಬುದು ಈ ತಂತ್ರಾಂಶದಿಂದ ಗೊತ್ತಾಗಲಿದೆಯಂತೆ. ಇನ್ನುಮುಂದೆ ನಾಯಿಮರೀ ನಾಯಿಮರೀ ತಿಂಡಿಬೇಕೇ ಎಂದು ಕೇಳುವ ಬದಲಿಗೆ ನಿಮ್ಮ ನಾಯಿಯ ಬೊಗಳುವಿಕೆಯನ್ನು ನಮ್ಮ ತಂತ್ರಾಂಶಕ್ಕೆ ಕೇಳಿಸಿ ಸಾಕು ಅಂತಾರೆ ಅವರು.

ಸದ್ಯಕ್ಕೆ ಈ ತಂತ್ರಾಂಶ ಶೇಕಡಾ ೪೩ರಷ್ಟು ನಿಖರವಾಗಿ ನಾಯಿಯ ಬೊಗಳುವಿಕೆಯನ್ನು ಅರ್ಥೈಸಬಲ್ಲದಂತೆ. ಮನುಷ್ಯರು ಶೇ.೪೦ರಷ್ಟು ಸಂದರ್ಭಗಳಲ್ಲಿ ನಾಯಿಯ ಬೊಗಳುವಿಕೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಈ ತಜ್ಞರ ಅಧ್ಯಯನಗಳಿಂದ ತಿಳಿದುಬಂದಿದೆಯಂತೆ. ಹೀಗಾಗಿ ಈ ತಂತ್ರಾಂಶದ ಬುದ್ಧಿವಂತಿಕೆ ಸಧ್ಯಕ್ಕೆ ಮನುಷ್ಯರಿಗಿಂತ ಒಂದು ಕೈ ಮೇಲೆಯೇ ಎಂದು ಹೇಳಬಹುದು.

ಸದ್ಯಕ್ಕೆ ಈ ತಂತ್ರಾಂಶ ಹಂಗರಿಯ ಮೂಡಿ ಎಂಬ ತಳಿಯ ನಾಯಿಗಳ ಬೊಗಳುವಿಕೆಯನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಇದು ಬೇರೆಬೇರೆ ತಳಿಯ ನಾಯಿಗಳು ಏನು ಬೊಗಳುತ್ತಿವೆ ಎಂದೂ ತಿಳಿದುಕೊಳ್ಳಲಿದೆಯಂತೆ. ಈ ತಂತ್ರಾಂಶ ಅಭಿವೃದ್ಧಿಹೊಂದಿದ ಹಾಗೆ ಅದನ್ನು ಇನ್ನೂ ಹಲವಾರು ಬಗೆಯ ಶಬ್ದಗಳನ್ನು ಅರ್ಥೈಸಲು ಬಳಸುವ ಉದ್ದೇಶ ಅದರ ನಿರ್ಮಾತೃಗಳಿಗಿದೆ. ನಾಯಿ ಹಾಗೂ ನಾಯಿಯ ಮಾಲಿಕನ ನಡುವೆ ಸಂವಹನ ಸಾಧ್ಯವಾಗಿಸಬಲ್ಲ ಉಪಕರಣವೊಂದನ್ನು ತಯಾರಿಸುವ ಐಡಿಯಾ ಕೂಡ ಅವರ ತಲೆಗೆ ಬಂದಿದೆ. ಎಲ್ಲಾ ಅವರು ಅಂದುಕೊಂಡ ಹಾಗೆ ನಡೆದರೆ ನಾವೂ ನಮ್ಮ ನಾಯಿಗಳ ಜೊತೆಗೆ ಮಾತನಾಡಬಹುದು, ಅಲ್ಲಲ್ಲ, ಬೊಗಳಬಹುದು - ಡೊನಾಲ್ಡ್ ಡಕ್ ಥರಾ!
________________________
(ಇಂಥದ್ದೇ ಒಂದು ವಿಚಿತ್ರ ಸಾಧನೆ ಕೆಲವರ್ಷಗಳ ಹಿಂದೆ ಕೂಡ ನಡೆದಿತ್ತು. ಆಗ ಜಪಾನಿನ ಸಂಸ್ಥೆಯೊಂದು ನಾಯಿ ಬೆಕ್ಕುಗಳ ಭಾಷೆಯನ್ನು ಅರ್ಥೈಸುವ ಯಂತ್ರವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಮಿಯಾವ್‍ಲಿಂಗ್ವಲ್ ಹಾಗೂ ಬೌ‍ಲಿಂಗ್ವಲ್ ಎಂಬ ಹೆಸರಿನ ಈ ಯಂತ್ರಗಳು ತಕ್ಕಮಟ್ಟಿಗೆ ಮಾರಾಟವೂ ಆಗಿದ್ದವು ಎಂದು ಓದಿದ ನೆನಪು.)

ಬುಧವಾರ, ಜನವರಿ 16, 2008

ಎಲ್ಲೆಲ್ಲೂ ಎಲ್‌ಇಡಿ!

ಟಿ ಜಿ ಶ್ರೀನಿಧಿ

ಎಲ್‌ಇಡಿ ಎಂದೇ ಪ್ರಸಿದ್ಧವಾಗಿರುವ ಲೈಟ್ ಎಮಿಟಿಂಗ್ ಡಯೋಡ್ ಪುಟಾಣಿಗಾತ್ರದ ಆಕರ್ಷಕ ದೀಪ, ನಮ್ಮ ಮನೆಗಳಲ್ಲಿ ಎತ್ತ ನೋಡಿದರೂ ಕನಿಷ್ಟ ಒಂದಾದರೂ ಕಣ್ಣಿಗೆ ಬೀಳುವಷ್ಟು ಸರ್ವೇಸಾಮಾನ್ಯ. ಮಕ್ಕಳ ಆಟಿಕೆಗಳು, ಅಲಂಕಾರಿಕ ಸಾಮಗ್ರಿಗಳಿಂದ ಹಿಡಿದು ಟೀವಿ, ಟೇಪ್ ರೆಕಾರ್ಡರ್, ದೂರವಾಣಿ, ಗಣಕಗಳವರೆಗೆ ಎಲ್ಲ ಉಪಕರಣಗಳಲ್ಲೂ ಎಲ್‌ಇಡಿಯ ಬಳಕೆ ಇದ್ದದ್ದೇ.
ಡಯೋಡ್ ಎಂಬ ಅರೆವಾಹಕ ಸಾಧನದ ಮೂಲಕ ವಿದ್ಯುತ್ ಹರಿಸಿದಾಗ ಬೆಳಕು ಹೊರಹೊಮ್ಮುತ್ತದೆ. ಎಲ್‌ಇಡಿಗಳು ಕೆಲಸಮಾಡುವುದು ಇದೇ ತತ್ವವನ್ನು ಆಧರಿಸಿ... ಮುಂದೆ ಓದಿ
badge