ಶುಕ್ರವಾರ, ಡಿಸೆಂಬರ್ 4, 2009

ಹೊಸ ಕಾರಿನ ಹುಡುಕಾಟ

ಟಿ ಜಿ ಶ್ರೀನಿಧಿ

ಕಾರುಗಳು ಕೆಲವರಿಗೆ ಪ್ರಯಾಣದ ಅನಿವಾರ್ಯ ಆಯ್ಕೆಯಾದರೆ ಇನ್ನು ಕೆಲವರಿಗೆ ಸಾರ್ವಜನಿಕ ಸಾರಿಗೆಗಿಂತ ಹೆಚ್ಚು ಅನುಕೂಲಕರ ಎಂಬ ಕಾರಣಕ್ಕಾಗಿ ಕಾರು ಬೇಕು. ಕಾರಿಟ್ಟುಕೊಳ್ಳುವುದು ಸ್ಟೇಟಸ್ ಸಿಂಬಲ್ ಎಂದು ನಂಬಿರುವವರು, ಶೋಕಿಗಾಗಿಯೇ ಕಾರು ಬಳಸುವವರೂ ಇದ್ದಾರೆ. ಒಟ್ಟಿನಲ್ಲಿ ಇಂತಹ ಯಾವುದೋ ಒಂದು ಕಾರಣದಿಂದ ಕಾರುಗಳು ನಮ್ಮ ಬದುಕುಗಳಲ್ಲಿ ಹಾಸುಹೊಕ್ಕಾಗಿಹೋಗಿವೆ. ಕೆಲವು ಸಾವಿರಗಳಿಗೆ ಸಿಗುವ ಹಳೆಯ ಕಾರುಗಳಿಂದ ಹಲವು ಲಕ್ಷಗಳಲ್ಲಿ ಸಿಗುವ ಹೊಸ ಕಾರುಗಳವರೆಗೆ ಯಾವುದೋ ಒಂದು ಕಾರು - ಅಥವಾ ಅಂಥದ್ದೊಂದನ್ನು ಕೊಳ್ಳುವ ಕನಸು - ಹೆಚ್ಚೂಕಡಿಮೆ ಎಲ್ಲರಲ್ಲೂ ಇರುತ್ತದೆ ಎಂದರೂ ತಪ್ಪಲ್ಲವೇನೋ.

ಕಾರಿನ ಆಕರ್ಷಣೆಯೇ ಅಂಥದ್ದು, ಬಿಡಿ. ಆದರೆ ಕಾರುಗಳ ಬಳಕೆ ಹೆಚ್ಚುತ್ತಾ ಹೋದಂತೆ ನಮ್ಮ ಪರಿಸರದ ಕತೆ ಏನಾಗಬಹುದು ಎಂಬ ಪ್ರಶ್ನೆ ಮಾತ್ರ ಎಂಥವರಲ್ಲೂ ಕೊಂಚಮಟ್ಟಿಗಿನ ಗಾಬರಿ ಹುಟ್ಟಿಸುತ್ತದೆ. ಟ್ರಾಫಿಕ್ ಜಾಮ್ ಇತ್ಯಾದಿಗಳೆಲ್ಲ ಸದ್ಯಕ್ಕೆ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದೆ, ನಿಜ. ಆದರೆ ಪ್ರಪಂಚದಾದ್ಯಂತ ಕಾರುಗಳು ಕಬಳಿಸುತ್ತಿರುವ ಅಪಾರ ಪ್ರಮಾಣದ ಇಂಧನ ಹಾಗೂ ಅದರಿಂದ ಉಂಟಾಗುತ್ತಿರುವ ಮಾಲಿನ್ಯ ಮಾತ್ರ ಯಾವತ್ತಿದ್ದರೂ ದೊಡ್ಡ ಸಮಸ್ಯೆಯೇ.

ಹಾಗಂತ ಕಾರುಗಳೇ ಬೇಡ ಎನ್ನಲೂ ಆಗುವುದಿಲ್ಲವಲ್ಲ. ಹೀಗಾಗಿಯೇ ವಿದ್ಯುತ್ ಕಾರು, ಸಿಎನ್‌ಜಿ ಬಳಸುವ ಕಾರು ಮುಂತಾದ್ದನ್ನೆಲ್ಲ ರೂಪಿಸಿ ಈ ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನಗಳು ನಡೆಯುತ್ತಿವೆ.

ಇಂಥ ಪ್ರಯತ್ನಗಳನ್ನೆಲ್ಲ ಉತ್ತೇಜಿಸಿ ಅವುಗಳಲ್ಲಿ ಅತ್ಯುತ್ತಮ ಎನ್ನಿಸಿಕೊಳ್ಳುವುದನ್ನು ಗುರುತಿಸಿ ಗೌರವಿಸಲು ವಿಶಿಷ್ಟವಾದುದೊಂದು ಸ್ಪರ್ಧೆ ಇದೀಗ ನಡೆಯುತ್ತಿದೆ. ಉತ್ತಮ ಕಾರ್ಯಕ್ಷಮತೆ ಹೊಂದಿರುವ, ಮಾಲಿನ್ಯ ಉಂಟುಮಾಡದ, ಮಾರುಕಟ್ಟೆಗೆ ತರಬಹುದಾದಂಥ ಕಾರುಗಳ ವಿನ್ಯಾಸವನ್ನು ಪ್ರೋತ್ಸಾಹಿಸುವುದು ಈ ’ಪ್ರೋಗ್ರೆಸಿವ್ ಆಟೋಮೋಟಿವ್ ಎಕ್ಸ್ ಪ್ರೈಜ್’ ಸ್ಪರ್ಧೆಯ ಉದ್ದೇಶ.

ವಿವಿಧ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿರುವ ಎಕ್ಸ್ ಪ್ರ್ರೈಜ್ ಪ್ರತಿಷ್ಠಾನ ಈ ಸ್ಪರ್ಧೆ ನಡೆಸುತ್ತಿದೆ. ಒಂದು ಕೋಟಿ ಡಾಲರ್ ಬಹುಮಾನದ ಈ ಸ್ಪರ್ಧೆಯ ಸಹಪ್ರಾಯೋಜಕತ್ವ ಪ್ರೋಗ್ರೆಸಿವ್ ಇನ್ಷೂರೆನ್ಸ್ ಸಂಸ್ಥೆಯದು. ಅಮೆರಿಕಾ ಸರಕಾರದ ಹಲವು ಇಲಾಖೆಗಳೂ ಈ ಪ್ರಯತ್ನದ ಜೊತೆಗೆ ಕೈಗೂಡಿಸಿವೆ. ಈಗಾಗಲೇ ಮೊದಲ ಹಂತ ದಾಟಿ ಮುನ್ನಡೆದಿರುವ ಈ ಸ್ಪರ್ಧೆಯಲ್ಲಿ ಒಟ್ಟು ೪೩ ತಂಡಗಳು ಸ್ಪರ್ಧಿಸುತ್ತಿವೆ. ವಿದ್ಯುತ್ ಚಾಲಿತ ಏಲಿಯಾಸ್, ವಿಚಿತ್ರ ಆಕಾರದ ವೆರಿ ಲೈಟ್ ಕಾರ್, ಬಾಂಡ್ ಸಿನಿಮಾ ನೆನಪಿಸುವ ವೇವ್-೨ ಮುಂತಾದ ಹಲವಾರು ಆಕರ್ಷಕ ಕಾರುಗಳು ಈಗಾಗಲೇ ಸಿದ್ಧವೂ ಆಗಿವೆ.

ಈ ವಿಶಿಷ್ಟ ಸ್ಪರ್ಧೆಯ ಬಗೆಗೆ ಹೆಚ್ಚಿನ ಮಾಹಿತಿ www.progressiveautoxprize.org ತಾಣದಲ್ಲಿ ಲಭ್ಯವಿದೆ.

ಡಿಸೆಂಬರ್ ೧೦, ೨೦೦೯ರ ಸುಧಾದಲ್ಲಿ ಪ್ರಕಟವಾದ ಲೇಖನ

ಬುಧವಾರ, ನವೆಂಬರ್ 11, 2009

ಸೈಬರ್ ಸಮರ

ಟಿ ಜಿ ಶ್ರೀನಿಧಿ
 
ರಷ್ಯಾ ಸಮೀಪವಿರುವ  ಪುಟ್ಟ ರಾಷ್ಟ್ರ ಎಸ್ಟೋನಿಯಾ. ಮಾಹಿತಿ ತಂತ್ರಜ್ಞಾನದಲ್ಲಿ ಅಪಾರ ಪ್ರಗತಿ ಸಾಧಿಸಿರುವ ಈ ದೇಶ ಇ-ಆಡಳಿತವನ್ನು ವ್ಯಾಪಕವಾಗಿ ಅಳವಡಿಸಿಕೊಂಡಿದೆ. ಅಲ್ಲಿನ ಆಡಳಿತದಲ್ಲಿ ಫೈಲು ಕೆಂಪುಪಟ್ಟಿಗಳಿಗೆಲ್ಲ ಜಾಗವೇ ಇಲ್ಲ; iತದಾನದಿಂದ ಪ್ರಾರಂಭಿಸಿ ದೈನಂದಿನ ವಹಿವಾಟುಗಳವರೆಗೆ ಬಹುತೇಕ ಎಲ್ಲ ಕೆಲಸವೂ ಅಂತರಜಾಲದ ಮೂಲಕವೇ ನಡೆಯುತ್ತದೆ.

ರಷ್ಯಾಕ್ಕೂ ಎಸ್ಟೋನಿಯಾಗೂ  ಬಹಳ ಹಿಂದಿನಿಂದಲೂ ಎಣ್ಣೆ ಸೀಗೇಕಾಯಿಯ  ಸಂಬಂಧ. ಇವೆರಡೂ ದೇಶಗಳ ನಡುವೆ ಏನಾದರೊಂದು ಕಿತಾಪತಿ ನಡೆದೇ ಇರುತ್ತದೆ. ಹೀಗಿರುವಾಗ ೨೦೦೭ರಲ್ಲಿ ಎಸ್ಟೋನಿಯಾ ಸರಕಾರ ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸುವ ತೀರ್ಮಾನ ಕೈಗೊಂಡಿತು. ಇದಕ್ಕೆ ರಷ್ಯನ್ನರ ತೀವ್ರ ವಿರೋಧ ವ್ಯಕ್ತವಾಯಿತು, ಬಂದ್-ರಸ್ತೆತಡೆ ಇತ್ಯಾದಿಗಳೂ ನಡೆದವು.

ಇನ್ನು ಕೆಲವರು ಎಸ್ಟೋನಿಯಾದ  ಗಣಕ ವ್ಯವಸ್ಥೆಯನ್ನು ಹಾಳುಗೆಡವುವ  ಪ್ರಯತ್ನ ಶುರುಮಾಡಿದರು. ಜಾಲತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಯಿತು. ಮಾಹಿತಿಯ ಒಳಹರಿವು ಸರ್ವರುಗಳ ಸಾಮರ್ಥ್ಯವನ್ನೂ ಮೀರಿದಾಗ ಜಾಲತಾಣಗಳ ಕಾರ್ಯಾಚರಣೆ ನಿಧಾನವಾಯಿತು. ಇಡೀ ದೇಶದ ಆಡಳಿತ ವ್ಯವಸ್ಥೆಯೇ ಅಲುಗಾಡಿಹೋಗುವ ಪರಿಸ್ಥಿತಿ ಎದುರಾಯಿತು.

ದೇಶದೇಶಗಳ ನಡುವಿನ ಸಮರದ ಹೊಸ ಮುಖ ಜಗತ್ತಿಗೆ ಪರಿಚಯವಾದದ್ದೇ ಆಗ.

* * *

ಎಸ್ಟೋನಿಯಾ ಹೇಳಿಕೇಳಿ  ನ್ಯಾಟೋದ (NATO) ಸದಸ್ಯ ರಾಷ್ಟ್ರ. ಎಸ್ಟೋನಿಯಾ ವಿರುದ್ಧ ಯಾವುದೇ ಬಗೆಯ ಸೇನಾ ದಾಳಿ ನಡೆದರೆ ನ್ಯಾಟೋದ ಮಿಕ್ಕೆಲ್ಲ ರಾಷ್ಟ್ರಗಳೂ ಅದರ ಸಹಾಯಕ್ಕೆ ಧಾವಿಸುತ್ತವೆ. ಆದರೆ ಅಂತರಜಾಲದ ಮೂಲಕ ಯುದ್ಧಸಾರಿದರೆ?

ಈ ಯೋಚನೆಯಿಂದ ಹುಟ್ಟಿಕೊಂಡದ್ದೇ  ಸೈಬರ್ ಸಮರದ ಪರಿಕಲ್ಪನೆ - ಶತ್ರುರಾಷ್ಟ್ರದ ಗಣಕವ್ಯವಸ್ಥೆಯನ್ನು ಹಾಳುಮಾಡಿ ಅಲ್ಲಿನ ಜನರಿಗೆ ತೊಂದರೆಕೊಡುವ ಹೊಸಬಗೆಯ ಭಯೋತ್ಪಾದನೆ.

ತೀರಾ ಈಚೆಗೆ, ೨೦೦೯ರ  ಜುಲೈ ತಿಂಗಳಲ್ಲೂ ಇಂತಹ ದಾಳಿಗಳು ನಡೆದ ಬಗ್ಗೆ ವರದಿಯಾಗಿದೆ. ಆ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಅನೇಕ ಸರಕಾರಿ ಹಾಗೂ ವಾಣಿಜ್ಯ ಜಾಲತಾಣಗಳು ತೊಂದರೆಗೀಡಾಗಿದ್ದವು. ಇದ್ದಕ್ಕಿದ್ದಂತೆ ಮಿತಿಮೀರಿ ಹೆಚ್ಚಿದ ಮಾಹಿತಿಯ ಒಳಹರಿವು ಈ ತಾಣಗಳನ್ನು ಹೆಚ್ಚೂಕಡಿಮೆ ನಿಷ್ಕ್ರಿಯಗೊಳಿಸಿಬಿಟ್ಟಿದ್ದವು. ಇರಾನ್ ಹಾಗೂ ಜಾರ್ಜಿಯಾದ ಗಣಕವ್ಯವಸ್ಥೆಗಳ ಮೇಲೂ ಈ ಬಗೆಯ ದಾಳಿಗಳು ನಡೆದಿವೆ.

* * *

ಕಳೆದ ದಶಕದಲ್ಲಿ  ಅಂತರಜಾಲದ ಬಳಕೆ ತೀವ್ರವಾಗಿ ಹೆಚ್ಚಿದಂತೆ  ಅಂತರಜಾಲ ಬಳಸಿ ಇತರರಿಗೆ ತೊಂದರೆಯುಂಟುಮಾಡುವ ಉದಾಹರಣೆಗಳೂ ಹೆಚ್ಚುತ್ತಿವೆ. ಬಳಕೆದಾರರನ್ನು  ವಂಚಿಸಿ ಹಣ ಸಂಪಾದಿಸುವ ಟೋಪೀವಾಲರಿಂದ ಹಿಡಿದು ಶತ್ರುರಾಷ್ಟ್ರಗಳ ರಹಸ್ಯಮಾಹಿತಿ ಕದಿಯಲು ಪ್ರಯತ್ನಿಸುವ ಗೂಢಚಾರರವರೆಗೆ ಎಲ್ಲರೂ ಅಂತರಜಾಲವನ್ನು ತಮ್ಮ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಸೈಬರ್ ಸಮರದ ಗುಮ್ಮ ನಿಜಕ್ಕೂ ಗಂಡಾಂತರಕಾರಿಯಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಈವರೆಗೆ ದಾಖಲಾಗಿರುವ  ಸೈಬರ್ ಸಮರಗಳಲ್ಲಿ ಹೆಚ್ಚಾಗಿ ಬಳಕೆಯಾಗಿರುವುದು ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಗಳು.

ಪ್ರಸಿದ್ಧ ಜಾಲತಾಣಗಳಿಗೆ ಅಸಂಖ್ಯಾತ ಕೃತಕ ಗ್ರಾಹಕರನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಡಿಡಿಒಎಸ್ ದಾಳಿ ಎಂದು ಕರೆಯುತ್ತಾರೆ. ಇಂತಹ ದಾಳಿಗೆ ಈಡಾಗುವ ತಾಣದ ಸರ್ವರ್‌ಗೆ ಇದ್ದಕ್ಕಿದ್ದಂತೆ ಅಪಾರ ಪ್ರಮಾಣದ ಮಾಹಿತಿ ಹರಿದುಬರಲು ಪ್ರಾರಂಭವಾಗುತ್ತದೆ. ಇದರಿಂದಾಗಿ ಆ ಜಾಲತಾಣದ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ಜಾಲತಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಈ ದಾಳಿಗಳಲ್ಲಿ ಸ್ಪೈವೇರ್‌ಗಳು  ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಸ್ಪೈವೇರ್ ಅಥವಾ ಗೂಢಚಾರಿ ತಂತ್ರಾಂಶಗಳು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ  ಸೋಗಿನಲ್ಲಿ ನಿಮ್ಮ ಗಣಕವನ್ನು ಪ್ರವೇಶಿಸುತ್ತವೆ. ನಿಮ್ಮ ಗಣಕವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಈ ತಂತ್ರಾಂಶಗಳು ಹ್ಯಾಕರ್‌ಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಗಣಕವನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ. ಹೀಗೆ ನಿಮ್ಮ ಗಣಕ ಒಂದು ಜಾಂಬಿ ಗಣಕ ಅಥವಾ ಬಾಟ್ ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ ಬಾಟ್‌ನೆಟ್ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ.

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ಗಳಿಂದ. ಈ ಗಣಕಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಈ ಮೊದಲು ಹೇಳಿದ  ಉದಾಹರಣೆಗಳಲ್ಲಿ ಆಗಿರುವುದೂ ಅದೇ. ತನ್ನ ಗಣಕ ವ್ಯವಸ್ಥೆಗಳನ್ನು ಹಾಳುಗೆಡವಲು ಪ್ರಯತ್ನಿಸಿದ್ದು ರಷ್ಯಾ ಎಂದು ಎಸ್ಟೋನಿಯಾ ಹೇಳಿದರೆ ನನಗೇನೂ ಗೊತ್ತಿಲ್ಲ ಎಂದು ರಷ್ಯಾ ಹೇಳುತ್ತಿದೆ. ಅಮೆರಿಕಾದ ತಾಣಗಳಿಗೆ ತೊಂದರೆ ಕೊಟ್ಟಿದ್ದು ಯಾರು ಎಂಬ ಪ್ರಶ್ನೆ ಇನ್ನೂ ಬಗೆಹರಿದಿಲ್ಲ. ಕೆಲ ರಾಷ್ಟ್ರಗಳ ಸೇನೆಯಲ್ಲಿ ಇಂತಹ ದಾಳಿಗಳಿಗಾಗಿಯೇ ವಿಶೇಷ ತರಬೇತಿ ಪಡೆದ ತಂತ್ರಜ್ಞರಿದ್ದಾರಂತೆ ಎಂಬುದು ಇನ್ನೂ ಗಾಳಿಸುದ್ದಿಯಾಗಿಯೇ ಇದೆ.

* * *

ಸೈಬರ್ ಸಮರತಂತ್ರ ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ  ಮೊದಲೇ ಅದನ್ನು ತಡೆಯುವ ನಿಟ್ಟಿನಲ್ಲಿ  ಸಾಕಷ್ಟು ಪ್ರಯತ್ನಗಳು ಸಾಗಿವೆ. ಕೋಆಪರೇಟಿವ್ ಸೈಬರ್ ಡಿಫೆನ್ಸ್ ಸೆಂಟರ್ ಆಫ್ ಎಕ್ಸೆಲೆನ್ಸ್ ಎಂಬ ಕೇಂದ್ರವನ್ನು ಸ್ಥಾಪಿಸಿರುವ ಎಸ್ಟೋನಿಯಾ ಈ ಪ್ರಯತ್ನಗಳ ಮುಂಚೂಣಿಯಲ್ಲಿದೆ. ಸೈಬರ್ ಸಮರ ತಡೆಗೆ ತಂತ್ರಜ್ಞಾನ ರೂಪಿಸುವುದರಿಂದ ಪ್ರಾರಂಭಿಸಿ ಅಂತರರಾಷ್ಟ್ರೀಯ ಸಹಕಾರ ಒಟ್ಟುಗೂಡಿಸುವವರೆಗೆ ಈ ಕೇಂದ್ರ ಅನೇಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ. ಅಮೆರಿಕಾ ಹಾಗೂ ದಕ್ಷಿಣ ಕೊರಿಯಾಗಳೂ ಈ ನಿಟ್ಟಿನಲ್ಲಿ ಕೆಲಸಮಾಡಲು ಪ್ರಾರಂಭಿಸಿವೆ. ಸೈಬರ್ ಭಯೋತ್ಪಾದಕರ ವಿರುದ್ಧದ ಈ ಹೋರಾಟದಲ್ಲಿ ಅವರೆಲ್ಲರಿಗೂ ಜಯವಾಗಲಿ ಎಂದು ಇಡೀ ಪ್ರಪಂಚ ಹಾರೈಸುತ್ತಿದೆ.

ನವೆಂಬರ್ ೧೧, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಸೋಮವಾರ, ಅಕ್ಟೋಬರ್ 26, 2009

ಹೆಚ್ಚುತ್ತಿದೆ ಬಾಹ್ಯಾಕಾಶದ ಟ್ರಾಫಿಕ್ಕು!

ಟಿ ಜಿ ಶ್ರೀನಿಧಿ

ವಾಹನಗಳು ಒಂದಕ್ಕೊಂದು ಡಿಕ್ಕಿಹೊಡೆದು ಅಪಘಾತಕ್ಕೀಡಾಗುವುದು ಬಹಳ  ಸಾಮಾನ್ಯವಾಗಿ ನಡೆಯುವ ಘಟನೆ. ಎತ್ತಿನಗಾಡಿಗೆ ಸೈಕಲ್ ಡಿಕ್ಕಿ ಎನ್ನುವುದರಿಂದ ಹಿಡಿದು ಎರಡು ರೈಲುಗಳ ಡಿಕ್ಕಿ ಎನ್ನುವುದರವರೆಗೆ ಅದೆಷ್ಟೋ ಅಪಘಾತಗಳ ಸುದ್ದಿ ಕೇಳಿಬರುತ್ತಲೇ ಇರುತ್ತದೆ.

ಇವೆಲ್ಲವುದಕ್ಕಿಂತ ವಿಭಿನ್ನವಾದ  ಸುದ್ದಿ ಕೇಳಿಬಂದದ್ದು ಕೆಲದಿನಗಳ ಹಿಂದೆ. ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಎರಡು ಮಾನವನಿರ್ಮಿತ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ ಎಂಬುದೇ ಆ ಸುದ್ದಿ.

ಅಂತರಿಕ್ಷದ ಇಂತಹ  ಮೊದಲ ಅಪಘಾತ ಎಂದು ಗುರುತಿಸಲಾದ ಈ ಘಟನೆಯಲ್ಲಿ  ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ, ಸೈಬೀರಿಯಾ ದೇಶದ ಮೇಲೆ ಒಂದಕ್ಕೊಂದು ಡಿಕ್ಕಿಹೊಡೆದಿದ್ದವು.

ಈಗಾಗಲೇ ನಿಷ್ಕ್ರಿಯವಾಗಿತ್ತು  ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ  ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಘಟನೆಗೆ ಇಷ್ಟೊಂದು  ಮಹತ್ವ ಕೊಡುತ್ತಿರುವುದು ಯಾಕೆ ಎಂದು  ನೀವು ಕೇಳಬಹುದು. ನೂರಾರು ಉಪಗ್ರಹಗಳು ಅಂತರಿಕ್ಷ ಸೇರುತ್ತಿರುತ್ತವೆ. ಹೊಸ ಉಪಗ್ರಹಗಳು ಸೇವೆಗೆ ಸಿದ್ಧವಾಗುತ್ತಿದ್ದಂತೆ ಹಳೆಯ ಉಪಗ್ರಹಗಳ ರಿಟೈರ್‌ಮೆಂಟೂ ಆಗುತ್ತಿರುತ್ತದೆ. ಕೆಲವೊಂದು ಉಪಗ್ರಹಗಳು ಆಕಸ್ಮಿಕವಾಗಿ ಭೂಮಿಯತ್ತ ಬಂದು ಸುಟ್ಟುಹೋಗುವುದೂ ಉಂಟು. ಇನ್ನುಕೆಲವು ಉಪಗ್ರಹಗಳನ್ನು ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಗುತ್ತದೆ.

ಶತ್ರುರಾಷ್ಟ್ರಗಳ ಉಪಗ್ರಹವನ್ನು ಹೊಡೆದುರುಳಿಸುವ ದಿನ ಕೂಡ ದೂರವೇನೂ ಇಲ್ಲ. ಅಂತರಿಕ್ಷದಲ್ಲಿ ಸಂಚರಿಸುವ ಉಪಗ್ರಹಗಳ ಮೇಲೆ ಭೂಮಿಯಿಂದಲೇ ದಾಳಿಮಾಡುವ ಶಕ್ತಿ ಸಂಪಾದಿಸಿಕೊಳ್ಳಲು ಪೈಪೋಟಿ ಈಗಾಗಲೇ ಶುರುವಾಗಿದೆ. ಇದಕ್ಕೆ ಪೂರ್ವಸೂಚನೆ ಎನ್ನುವಂತೆ ೨೦೦೭ರಲ್ಲಿ ಚೀನಾ ತನ್ನದೇ ಉಪಗ್ರಹವೊಂದನ್ನು ಕ್ಷಿಪಣಿ ಹಾರಿಸಿ ನಾಶಪಡಿಸಿತ್ತು. ತಾನೇನು ಕಡಿಮೆ ಎನ್ನುವಂತೆ ಅಮೆರಿಕಾದ ನೌಕಾಸೇನೆ ಕೂಡ ೨೦೦೮ರಲ್ಲಿ ಕ್ಷಿಪಣಿ ಹಾರಿಸಿ ತನ್ನದೊಂದು ಉಪಗ್ರಹವನ್ನು ಸಿಡಿಸಿಹಾಕಿತು.

ಆದರೆ, ಈ ಬಾರಿಯ ಉಪಗ್ರಹಗಳ ಡಿಕ್ಕಿ ಒಂದು ಆಕ್ಸಿಡೆಂಟು, ಆಕಸ್ಮಿಕವಾಗಿ ಘಟಿಸಿದ್ದು.

ಈ ಉಪಗ್ರಹಗಳು ಅಪಾರ  ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ  ಅವೆರಡೂ ನುಚ್ಚುನೂರಾಗಿ ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಯಿತು. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಾಗುತ್ತದಲ್ಲ ಎಂಬ ಆತಂಕವೂ ಶುರುವಾಯಿತು.

ಇದೇನಪ್ಪ ಹೀಗಾಯಿತಲ್ಲ  ಎಂದು ತಲೆಕೆಡಿಸಿಕೊಳ್ಳುವಷ್ಟರಲ್ಲೇ ವಿಜ್ಞಾನಿಗಳು ಈ ಅಪಘಾತದ ಕಾರಣವನ್ನೂ ಹೇಳಿಬಿಟ್ಟರು - ಅಂತರಿಕ್ಷದಲ್ಲಿ ಟ್ರಾಫಿಕ್ ಜಾಮ್ ಶುರುವಾಗಿದೆ!

* * *

೧೯ನೇ ಶತಮಾನದ  ಅಂತ್ಯದಲ್ಲಿ  'ದಿ ಅಟ್ಲಾಂಟಿಕ್ ಮಂಥ್ಲಿ' ಎಂಬ  ಹೆಸರಿನ ಪತ್ರಿಕೆ ಅಮೆರಿಕಾದಲ್ಲಿ ಪ್ರಕಟವಾಗುತ್ತಿತ್ತು. 'ದ ಬ್ರಿಕ್ ಮೂನ್' ಎನ್ನುವುದು ೧೮೬೯ನೇ ಇಸವಿಯಲ್ಲಿ ಅದರಲ್ಲಿ ಪ್ರಕಟವಾದ ಧಾರಾವಾಹಿ. ಇಟ್ಟಿಗೆಯಿಂದ ನಿರ್ಮಿಸಿದ ೨೦೦ ಅಡಿ ಸುತ್ತಳತೆಯ ಗೋಲವೊಂದನ್ನು ಅಂತರಿಕ್ಷಕ್ಕೆ ಹಾರಿಬಿಡುವ ಕತೆ ಅದು.

ಹೀಗೆ ಹುಟ್ಟಿಕೊಂಡದ್ದು ಕೃತಕ ಉಪಗ್ರಹದ ಕಲ್ಪನೆ.    

೨೦ನೇ ಶತಮಾನದ  ಪ್ರಾರಂಭದ ಹೊತ್ತಿಗೆ ಉಪಗ್ರಹದ ಕಲ್ಪನೆಯನ್ನು ನನಸುಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು ಆಲೋಚಿಸಲು ಪ್ರಾರಂಭಿಸಿದ್ದರು. ವಿಜ್ಞಾನಿಗಳ ಜೊತೆಗೆ ಆರ್ಥರ್ ಕ್ಲಾರ್ಕ್‌ನಂತಹ ವೈಜ್ಞಾನಿಕ ಕತೆಗಾರರು ಕೂಡ ಉಪಗ್ರಹಗಳ ಬಗ್ಗೆ ಹೊಸ ಕನಸುಗಳನ್ನು ಹುಟ್ಟುಹಾಕಿದರು.

೧೯೫೭ರಲ್ಲಿ ಉಡಾವಣೆಯಾದ ರಷ್ಯಾ ನಿರ್ಮಿತ ಸ್ಪುಟ್ನಿಕ್-೧, ಮೊತ್ತಮೊದಲ ಮಾನವನಿರ್ಮಿತ ಉಪಗ್ರಹ. ಅದೇ ವರ್ಷ ಉಡಾವಣೆಯಾದ ಸ್ಪುಟ್ನಿಕ್-೨ ಉಪಗ್ರಹದಲ್ಲಿ ಲೈಕಾ ಎಂಬ ನಾಯಿ ಪ್ರಯಾಣಿಸಿತ್ತು. ಭೂಮಿಯಿಂದ ಅಂತರಿಕ್ಷಕ್ಕೆ ಹಾರಿದ ಮೊತ್ತಮೊದಲ ಜೀವಿ ಇದೇ ಲೈಕಾ.

ಮುಂದಿನ ವರ್ಷ, ಅಂದರೆ ೧೯೫೮ರಲ್ಲಿ ಅಮೆರಿಕಾ ತನ್ನ ಮೊದಲ ಉಪಗ್ರಹ ಎಕ್ಸ್‌ಪ್ಲೋರರ್-೧ ಅನ್ನು ಉಡಾಯಿಸಿತು. ಅದೇ ವರ್ಷ ಉಡಾವಣೆಯಾದ ವ್ಯಾನ್‌ಗಾರ್ಡ್-೧ ಎಂಬ ಉಪಗ್ರಹ ಈಗಲೂ ಭೂಮಿಯ ಸುತ್ತ ಸುತ್ತುತ್ತಿದೆ!

ಮುಂದಿನ ವರ್ಷಗಳಲ್ಲಿ ಜಗತ್ತಿನ ಇತರ ರಾಷ್ಟ್ರಗಳೂ ತಮ್ಮ ಉಪಗ್ರಹಗಳನ್ನು ಉಡಾಯಿಸಿದವು. ೧೯೬೨ರಲ್ಲಿ ಕೆನಡಾ, ೬೪ರಲ್ಲಿ ಇಟಲಿ, ೬೫ರಲ್ಲಿ ಫ್ರಾನ್ಸ್, ೬೭ರಲ್ಲಿ ಆಸ್ಟ್ರೇಲಿಯಾ, ೭೦ರಲ್ಲಿ ಜಪಾನ್ ಹಾಗೂ ಚೀನಾ, ೭೧ರಲ್ಲಿ ಬ್ರಿಟನ್, ೭೪ರಲ್ಲಿ ಪಶ್ಚಿಮ ಜರ್ಮನಿ ತಮ್ಮ ಮೊತ್ತಮೊದಲ ಉಪಗ್ರಹಗಳನ್ನು ಉಡಾಯಿಸಿದವು. ೧೯೭೫ರಲ್ಲಿ ರಷ್ಯಾದಿಂದ ಉಡಾವಣೆಯಾದ ಆರ್ಯಭಟ ಭಾರತದ ಮೊದಲ ಉಪಗ್ರಹ. ಇದಾದ ಐದೇ ವರ್ಷಗಳಲ್ಲಿ (೧೯೮೦) ರೋಹಿಣಿ-೧ ಉಪಗ್ರಹ ಭಾರತದಿಂದಲೇ ಉಡಾವಣೆಯಾಯಿತು.

ವಿಜ್ಞಾನ-ತಂತ್ರಜ್ಞಾನ ಬೆಳೆದಂತೆ ಅಂತರಿಕ್ಷದಲ್ಲಿ ಮಾನವನ ಚಟುವಟಿಕೆಯೂ  ಹೆಚ್ಚುತ್ತಲೇ ಹೋಯಿತು. ಭೂಮಿಯ ಸುತ್ತ ಸುತ್ತುವ ಉಪಗ್ರಹಗಳಷ್ಟೆ ಅಲ್ಲದೆ ಚಂದ್ರ, ಸೂರ್ಯ ಹಾಗೂ ಸೌರಮಂಡಲದ ಇನ್ನಿತರ ಗ್ರಹಗಳತ್ತಲೂ ಮಾನವನಿರ್ಮಿತ ಗಗನನೌಕೆಗಳು ಹೊರಟವು. ಅಂತರಿಕ್ಷದಲ್ಲಿ ನಮ್ಮ ಕಣ್ಣಿನಂತೆ ಇರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಕೂಡ ನಿರ್ಮಾಣವಾಯಿತು.

೧೯೫೭ರ ಮೊದಲ ಉಪಗ್ರಹದಿಂದ ಇಲ್ಲಿಯವರೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಮಿತಿಮೀರಿ ಹೆಚ್ಚಿಸಿದೆ; ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯವನ್ನೂ ಹುಟ್ಟುಹಾಕಿದೆ. ತಮಾಷೆಯ ವಿಷಯವೆಂದರೆ ಇಷ್ಟು ದೊಡ್ಡ ಸಂಖ್ಯೆಯ ಹತ್ತನೆಯ ಒಂದರಷ್ಟು ಉಪಗ್ರಹಗಳು ಮಾತ್ರ ಕೆಲಸಮಾಡುವ ಸ್ಥಿತಿಯಲ್ಲಿವೆ!

* * *

ಈ ಸಂಶಯ ವಿನಾಕಾರಣವೇನೂ ಹುಟ್ಟಿಕೊಂಡಿಲ್ಲ. ಬಾಹ್ಯಾಕಾಶದಲ್ಲಿ ಹೆಚ್ಚುತ್ತಿರುವ ಮಾನವನ ಚಟುವಟಿಕೆ ಭೂಮಿಯ ಹೊರವಲಯದಲ್ಲಿ ಅಪಾರ ಪ್ರಮಾಣದ ಕಸದ ರಾಶಿಯನ್ನೇ ಸೃಷ್ಟಿಸಿದೆ.

ಕಸ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಊರುಗಳ  ಆಚೆ ರಾಶಿಬೀಳುವ ಪ್ಲಾಸ್ಟಿಕ್ ಮಿಶ್ರಿತ  ತ್ಯಾಜ್ಯ, ನದಿಗಳಿಗೆ ಸೇರಿ ಹರಿಯುವ ಕೆಟ್ಟವಾಸನೆಯ ಗಲೀಜು. ಆದರೆ ಅಂತರಿಕ್ಷದಲ್ಲಿ ಕಸ ಎಂಬ ಪದದ ಅರ್ಥವೇ ಬೇರೆ.

ಕಳೆದ ಐದು ದಶಕಗಳಲ್ಲಿ  ಉಡಾಯಿಸಲಾಗಿರುವ ಆರು ಸಾವಿರಕ್ಕೂ ಹೆಚ್ಚು  ಉಪಗ್ರಹಗಳಲ್ಲಿ ಶೇಕಡಾ ಎಂಬತ್ತೈದರಷ್ಟು  ಉಪಗ್ರಹಗಳು ಈಗ ನಿಷ್ಕ್ರಿಯವಾಗಿದ್ದು ಕಸದ  ರೂಪ ತಾಳಿವೆ. ಇದರ ಜೊತೆಗೆ ಉಪಗ್ರಹ ಉಡಾವಣೆಯ ಸಂದರ್ಭದಲ್ಲಿ ಬಳಕೆಯಾಗಿ ನಂತರ ಸಿಡಿದುಹೋಗುವ ರಾಕೆಟ್ ಚೂರುಗಳು, ಉದ್ದೇಶಪೂರ್ವಕವಾಗಿಯೋ ಆಕಸ್ಮಿಕವಾಗಿಯೋ ಸ್ಫೋಟಿಸಲಾದ ಉಪಗ್ರಹಗಳು, ಇನ್ನಿತರ ಚಿಕ್ಕಪುಟ್ಟ ಉಪಕರಣಗಳು - ಎಲ್ಲ ಸೇರಿ ಲಕ್ಷಾಂತರ ಸಂಖ್ಯೆಯ ಕಸದ ತುಣುಕುಗಳು ಇದೀಗ ಭೂಮಿಯ ಸುತ್ತ ಸುತ್ತುತ್ತಿವೆ.

ಈ ಕಸದ ಚೂರುಗಳು ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ಅಪಾರ ವೇಗದಲ್ಲಿ ಭೂಮಿಯನ್ನು ಸುತ್ತುತ್ತಿರುತ್ತದೆ. ಇಷ್ಟು ಭಾರೀ ವೇಗದಲ್ಲಿ ಭೂಮಿಯ ಸುತ್ತ ಸುತ್ತುವ ಕಸದ ತುಣುಕುಗಳು ತಮ್ಮತಮ್ಮಲ್ಲೇ ಡಿಕ್ಕಿ ಹೊಡೆದುಕೊಂಡು ಭೂಮಿಯ ಸುತ್ತ ಕಸದ ಪದರವನ್ನೇ ನಿರ್ಮಿಸಿಬಿಡಬಲ್ಲವು. ಇಂತಹ ಸಣ್ಣದೊಂದು ಚೂರು ಯಾವುದಾದರೂ ಉಪಗ್ರಹಕ್ಕೋ ಗಗನನೌಕೆಗೋ ಬಡಿದರೆ ಆಗಬಹುದಾದ ಅಪಾಯ ಬಹಳ ದೊಡ್ಡ ಪ್ರಮಾಣದ್ದು. ಸಣ್ಣಪುಟ್ಟ ಲೋಹದ ಚೂರುಗಳು ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಸಾಗುವಾಗ ಗಗನಯಾತ್ರಿಯ ಉಡುಗೆಯನ್ನೇ ತೂರಿಕೊಂಡು ಹೋಗಬಹುದು; ಹಳೆಯ ರಾಕೆಟ್‌ನ ತುಣುಕು ಉಪಗ್ರಹಕ್ಕೆ ಬಡಿದು ಅವುಗಳನ್ನು ಹಾಳುಗೆಡವಬಹುದು.

ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಮೇಲೂ ಅಪಾಯದ ನೆರಳು ಸುಳಿದಾಡುತ್ತಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗಷ್ಟೆ ನಾಲ್ಕಾರು ಬಾರಿ ಕಸದ ತುಣುಕುಗಳ ಮಾರಣಾಂತಿಕ ಆಘಾತವನ್ನು ಕೂದಲೆಳೆಯಷ್ಟರಲ್ಲಿ ತಪ್ಪಿಸಿಕೊಂಡಿದ್ದಾರೆ.

ಬಾಹ್ಯಾಕಾಶದ ಕಸ ಇದೇ ಪ್ರಮಾಣದಲ್ಲಿ ಹೆಚ್ಚಿದರೆ ಭೂಮಿಯಿಂದಾಚೆ  ಹೋಗಿ ನೆಲೆಸುವ ನಮ್ಮ ಕನಸು ಕನಸಾಗಿಯೇ ಉಳಿದುಬಿಡಬಹುದು ಎಂಬ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ವಿಜ್ಞಾನಿಗಳು ಈ ಸಮಸ್ಯೆಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳನ್ನು ಕೈಗೊಂಡಿದ್ದಾರೆ, ಅತ್ಯಾಧುನಿಕ ದೂರದರ್ಶಕಗಳ ಮೂಲಕ ಕಸದ ಪ್ರಮಾಣದ ಮೇಲೆ ತೀವ್ರ ನಿಗಾವಹಿಸಿದ್ದಾರೆ. ಅಲ್ಲಿರುವ ಅಪಾರ ಪ್ರಮಾಣದ ಕಸವನ್ನು ಹಿಡಿದು ಭೂಮಿಗೆ ಮರಳಿ ತರುವತ್ತಲೂ ಅವರ ಪ್ರಯತ್ನಗಳು ಸಾಗಿವೆ.

ದೊಡ್ಡ ಉಪಗ್ರಹಗಳ  ಬದಲು ಸಣ್ಣಸಣ್ಣ ಉಪಗ್ರಹಗಳನ್ನು  ಉಡಾಯಿಸುವುದು ಇನ್ನೊಂದು ಪ್ಲಾನು. ಅವುಗಳ  ಸೇವಾವಧಿ ಮುಗಿದ ಕೂಡಲೇ ಅವು  ಮರಳಿ ಭೂಮಿಯ ವಾತಾವರಣ ಪ್ರವೇಶಿಸಿ  ಸುಟ್ಟುಹೋಗುವಂತೆ ಮಾಡಬಹುದು ಎಂದು  ವಿಜ್ಞಾನಿಗಳು ಯೋಚಿಸುತ್ತಿದ್ದಾರೆ.

ಅವರ ಈ ಎಲ್ಲ ಪ್ರಯತ್ನಗಳು ಬಾಹ್ಯಾಕಾಶದ ಕಸದ ಪ್ರಮಾಣವನ್ನು ಆದಷ್ಟು ಬೇಗ ಕಡಿಮೆಮಾಡಿದರೆ ಮಾತ್ರ ನಮ್ಮ ಮುಂದಿನ ಪೀಳಿಗೆಯಾದರೂ ವಾರಾಂತ್ಯದ ರಜೆಯಲ್ಲಿ ಅಂತರಿಕ್ಷದಲ್ಲಿ ವಿಹರಿಸುವ ಕನಸು ಕಾಣುವುದು ಸಾಧ್ಯವಾಗಬಹುದೇನೋ.

'ವಿಜ್ಞಾನ ಲೋಕ' ನವೆಂಬರ್ ೨೦೦೯ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಬುಧವಾರ, ಸೆಪ್ಟೆಂಬರ್ 2, 2009

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ

ಎರಡನೇ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನ ಇದೇ ತಿಂಗಳಿನ ೨೩ ಹಾಗೂ ೨೪ರಂದು ಗುಲಬರ್ಗಾದಲ್ಲಿ ನಡೆಯಲಿದೆ. ಸೆಪ್ಟೆಂಬರ್ ೨೩ರ ಬೆಳಿಗ್ಗೆ ೧೧ ಗಂಟೆಗೆ ಮುಖ್ಯಮಂತ್ರಿಗಳು ಸಮ್ಮೇಳನ ಉದ್ಘಾಟಿಸಲಿದ್ದಾರೆ.

'ಮನುಕುಲದ ಒಳಿತಿಗಾಗಿ ವಿಜ್ಞಾನ-ತಂತ್ರಜ್ಞಾನ' ಈ ಸಮ್ಮೇಳನದ ಪ್ರಮುಖ ವಿಷಯ. ಎರಡು ದಿನಗಳ ಅವಧಿಯಲ್ಲಿ ಈ ವಿಷಯದ ವಿವಿಧ ಆಯಾಮಗಳಿಗೆ ಸಂಬಂಧಿಸಿದ ಅನೇಕ ವಿಚಾರಸಂಕಿರಣಗಳು ನಡೆಯಲಿವೆ. ಪ್ರೊ ಯು ಆರ್ ರಾವ್, ಪ್ರೊ ಪಿ ಬಲರಾಂ, ಪ್ರೊ ಎಂ ಐ ಸವದತ್ತಿ, ಪ್ರೊ ರೊದ್ದಂ ನರಸಿಂಹ, ಡಾ ವಿ ಪ್ರಕಾಶ್, ಡಾ ಪಿ ಎಸ್ ಶಂಕರ್, ಶ್ರೀ ನಾಗೇಶ ಹೆಗಡೆ - ಇವರು ಭಾಷಣಕಾರರಲ್ಲಿ ಪ್ರಮುಖರು.

ಸಮ್ಮೇಳನದ ಸಂದರ್ಭದಲ್ಲಿ ವಸ್ತುಪ್ರದರ್ಶನ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ 'ವಿಜ್ಞಾನ ಲೋಕ' ಪತ್ರಿಕೆಯ ವಿಶೇಷ ಸಂಚಿಕೆಯನ್ನೂ ಹೊರತರಲಾಗುವುದು.

ಸಮ್ಮೇಳನದಲ್ಲಿ ಭಾಗವಹಿಸಲು ಯಾವುದೇ ನೋಂದಣಿ ಶುಲ್ಕ ಇಲ್ಲ. ಹೆಚ್ಚಿನ ವಿವರಗಳಿಗೆ ಸಮ್ಮೇಳನದ ಸಂಘಟನಾ ಕಾರ್ಯದರ್ಶಿಯವರನ್ನು gugksta09@rediffmail.com ವಿಳಾಸದಲ್ಲಿ ಸಂಪರ್ಕಿಸಬಹುದು.

ಬುಧವಾರ, ಆಗಸ್ಟ್ 19, 2009

'ಭುವನ'ರೂಪದರ್ಶನ!

ಟಿ ಜಿ ಶ್ರೀನಿಧಿ

೧೯೫೦ರ ದಶಕದಲ್ಲಿ ಉಡಾವಣೆಯಾದ ಮೊತ್ತಮೊದಲ ಉಪಗ್ರಹ ’ಸ್ಪುಟ್ನಿಕ್’ನಿಂದ ಪ್ರಾರಂಭಿಸಿ ಇಲ್ಲಿಯವರೆಗೆ ಸಾವಿರಗಟ್ಟಲೆ ಉಪಗ್ರಹಗಳು ಬಾಹ್ಯಾಕಾಶಕ್ಕೆ ನೆಗೆದಿವೆ; ಟೀವಿ ಚಾನೆಲ್ ಪ್ರಸಾರದಿಂದ ಹಿಡಿದು ಗೂಢಚಾರಿಕೆಯವರೆಗೆ ವೈವಿಧ್ಯಮಯ ಉದ್ದೇಶಗಳಿಗಾಗಿ ದುಡಿದಿವೆ, ದುಡಿಯುತ್ತಿವೆ.

ಈ ಉಪಗ್ರಹಗಳಲ್ಲಿ ಅನೇಕವು ಭೂಮಿಯ ಮೇಲೆ ಏನು ನಡೆಯುತ್ತಿದೆ ಎನ್ನುವತ್ತ ಸದಾ ಒಂದು ಕಣ್ಣಿಟ್ಟಿರುತ್ತವೆ. ಸದಾ ಒಂದಿಲ್ಲೊಂದು ಚಟುವಟಿಕೆಯ ಕೇಂದ್ರವಾಗಿರುವ ನಮ್ಮ ಗ್ರಹದ ಚಿತ್ರಗಳನ್ನು ತೆಗೆದು ನಮಗೆ ಕಳುಹಿಸುತ್ತಿರುತ್ತವೆ.

ಇಂತಹ ಚಿತ್ರಗಳು ನೋಡಲು ಬಹು ರೋಚಕವಾಗಿರುತ್ತವೆ. ಆಸಕ್ತರ ಕುತೂಹಲ ತಣಿಸುವ, ಭೂಗೋಳಶಾಸ್ತ್ರದ ಪಾಠಹೇಳುವ ಈ ಚಿತ್ರಗಳು ಶಿಕ್ಷಣ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಬಹಳ ಮಹತ್ವ ಹೊಂದಿವೆ. ಜಿಪಿಎಸ್ ಬಳಸಿ ಸಂಚಾರ ನಿರ್ದೇಶನಗಳನ್ನು ಕೊಡುವ ಅನೇಕ ತಂತ್ರಾಂಶಗಳು ಕೂಡ ಭೂಮಿಯ ಸ್ಯಾಟೆಲೈಟ್ ಚಿತ್ರಗಳನ್ನು ಬಳಸುತ್ತವೆ.

ಒಂದೆರಡು ದಶಕಗಳ ಹಿಂದೆ ಇಂತಹ ಚಿತ್ರಗಳು ಜನಸಾಮಾನ್ಯರಿಗೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಭೂಮಿಯ ಉಪಗ್ರಹ ಚಿತ್ರಣ ನೀಡುವ ಒಂದೆರಡು ತಂತ್ರಾಂಶಗಳು ತೊಂಬತ್ತರ ದಶಕದಲ್ಲಿ ಹೊರಬಂದವಾದರೂ ಅವು ಅಷ್ಟೇನೂ ಜನಪ್ರಿಯವಾಗಲಿಲ್ಲ.

ಅಂತರಜಾಲ, ವಿಶ್ವವ್ಯಾಪಿ ಜಾಲಗಳು ವ್ಯಾಪಕ ಬಳಕೆಗೆ ಬಂದ ಮೇಲೆ ಈ ಪರಿಸ್ಥಿತಿ ಬಹುಬೇಗ ಬದಲಾಯಿತು. ೨೦೦೪ರಲ್ಲಿ ನಾಸಾ ಹೊರತಂದ ವರ್ಲ್ಡ್ ವಿಂಡ್ ಹಾಗೂ ೨೦೦೫ರಲ್ಲಿ ಗೂಗಲ್ ಪರಿಚಯಿಸಿದ ಗೂಗಲ್ ಅರ್ಥ್ ತಂತ್ರಾಂಶಗಳಿಂದಾಗಿ ನಮ್ಮ ಕಣ್ಣಮುಂದೆಯೇ ವಿಶ್ವರೂಪದರ್ಶನವಾಯಿತು! ಗೂಗಲ್ ಸಹಕಾರದಿಂದ ಸಿದ್ಧವಾದ ವಿಕಿಮ್ಯಾಪಿಯಾ ಯಾವುದೇ ತಂತ್ರಾಂಶ ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದೆಯೇ ಭೂಮಿಯ ಚಿತ್ರಗಳನ್ನು ನೋಡುವುದನ್ನು ಸಾಧ್ಯವಾಗಿಸಿತು.

ಈ ತಂತ್ರಾಂಶಗಳ ಸಾಲಿಗೆ ಇದೀಗ ’ಭುವನ್’ ಸೇರಿದೆ. ಇದು ಭಾರತದ ಹೆಮ್ಮೆಯ ಸಂಸ್ಥೆ ಇಸ್ರೋ ನಮಗೆ ನೀಡಿರುವ ಕೊಡುಗೆ. ಹೆಸರಾಂತ ವಿಜ್ಞಾನಿ ವಿಕ್ರಂ ಸಾರಾಭಾಯಿಯವರ ತೊಂಬತ್ತನೇ ಜನ್ಮದಿನದಂದು ಭುವನ್ ಲೋಕಾರ್ಪಣೆಯಾದದ್ದು ವಿಶೇಷ.

ಗೂಗಲ್ ಅರ್ಥ್‌ಗೆ ಸಾಟಿಯಾಗಿ ನಿಲ್ಲಬಲ್ಲ ಭುವನ್ ತಂತ್ರಾಂಶವನ್ನು ನಿರ್ಮಿಸಿದವರು ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಏಜೆನ್ಸಿಯ ತಂತ್ರಜ್ಞರು. ಭಾರತೀಯ ಬಳಕೆದಾರರಿಗೆ ಹೆಚ್ಚು ಆಪ್ತವಾಗುವಂತಹ ವಿನ್ಯಾಸ ಹೊಂದಿರುವ ಭುವನ್ ಮೂಲಕ ಲಭ್ಯವಿರುವ ಚಿತ್ರಗಳೆಲ್ಲವನ್ನೂ ರಿಸೋರ್ಸ್‌ಸ್ಯಾಟ್, ಕಾರ್ಟೋಸ್ಯಾಟ್ ಮುಂತಾದ ನಮ್ಮದೇ ಉಪಗ್ರಹಗಳು ತೆಗೆದಿವೆ.

ರಕ್ಷಣಾ ದೃಷ್ಟಿಯಿಂದ ಸಂರಕ್ಷಿತ ಪ್ರದೇಶಗಳನ್ನು ಹೊರತುಪಡಿಸಿ ಇತರ ಪ್ರದೇಶಗಳ ಚಿತ್ರಗಳು ಭುವನ್ ಮೂಲಕ ಲಭ್ಯವಿವೆ. ಗೂಗಲ್ ಅರ್ಥ್‌ನಲ್ಲಿ ಲಭ್ಯವಿರುವ ಚಿತ್ರಗಳಿಗಿಂತ ಹೆಚ್ಚು ಸ್ಪಷ್ಟವಾದ ಚಿತ್ರಗಳು ಭುವನ್‌ನಲ್ಲಿ ಸಿಗಲಿವೆಯಂತೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳ ಮಾಹಿತಿಯ ಬಗ್ಗೆ ಗಮನ ಕೇಂದ್ರೀಕರಿಸಲಿರುವ ಭುವನ್ ನಮ್ಮ ದೇಶದ ಹವಾಮಾನ, ಭೂಮಿಯ ಮೇಲ್ಮೈ ಸ್ವರೂಪ, ನೈಸರ್ಗಿಕ ಪ್ರಕೋಪಗಳು ಮುಂತಾದ ವಿಷಯಗಳ ಕುರಿತು ಅಪಾರ ಮಾಹಿತಿ ಒದಗಿಸುವ ನಿರೀಕ್ಷೆಯಿದೆ.

www.bhuvan.nrsc.gov.in ತಾಣದಲ್ಲಿ ಲಭ್ಯವಿರುವ ’ಭುವನ್’ ಸದ್ಯಕ್ಕೆ ಪರೀಕ್ಷಾರ್ಥ ಆವೃತ್ತಿಯಲ್ಲಿದೆ. ಈ ಜಾಲತಾಣದಲ್ಲಿ ಹೆಸರು, ವಿಳಾಸ ಹಾಗೂ ಬಳಕೆಯ ಉದ್ದೇಶ ದಾಖಲಿಸಿ ನೋಂದಾಯಿಸಿಕೊಂಡ ಯಾರು ಬೇಕಿದ್ದರೂ ಇದನ್ನು ಉಚಿತವಾಗಿ ಬಳಸಬಹುದು.
ಆಗಸ್ಟ್ ೧೯, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಆಗಸ್ಟ್ 13, 2009

ದೂರದರ್ಶಕ ಕಂಡ ವಿಶ್ವರೂಪ

ಕನ್ನಡದ ಅಗ್ರಗಣ್ಯ ವಿಜ್ಞಾನ ಲೇಖಕರಲ್ಲೊಬ್ಬರಾದ ಶ್ರೀ ಟಿ.ಆರ್.ಅನಂತರಾಮು ಅವರ ೫೦ನೇ ಕೃತಿ 'ದೂರದರ್ಶಕ ಕಂಡ ವಿಶ್ವರೂಪ' ಇದೀಗ ಮಾರುಕಟ್ಟೆಯಲ್ಲಿದೆ. ಕನ್ನಡಕ್ಕೆ ಐವತ್ತು ಅಮೂಲ್ಯ ವಿಜ್ಞಾನ ಸಾಹಿತ್ಯಕೃತಿಗಳನ್ನು ಕೊಟ್ಟಿರುವ ಅಪೂರ್ವ ಸಾಧನೆಗಾಗಿ ಶ್ರೀ ಅನಂತರಾಮುರವರನ್ನು 'ಇ-ಜ್ಞಾನ' ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.

ದೂರದರ್ಶಕಗಳ ವಿಕಾಸ ವಿವರಣೆಯನ್ನೊಳಗೊಂಡ ಈ ಕೃತಿಯ ಬಿಡುಗಡೆ ಅನಂತರಾಮುರವರ ಅರವತ್ತನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಆದದ್ದು ವಿಶೇಷ. ಹ್ಯಾಪಿ ಬರ್ತ್‌ಡೇ ಸರ್!

ಬುಧವಾರ, ಆಗಸ್ಟ್ 12, 2009

ವಸುಂಧರೆಯ ಒಡಲು – ಕೋಟಿ ಜೀವಿಗಳ ಮಡಿಲು

ಬೇಳೂರು ಸುದರ್ಶನ

ಕಾಡು ಕಡಿದ ಮೇಲೆ ಅಲ್ಲಿ ಪ್ರಾಣಿಗಳು ಬದುಕಿವೆಯೆ ಎಂದು ನೀವು ಅಚ್ಚರಿಪಡುತ್ತಿರುವ ಈ ಹೊತ್ತಿನಲ್ಲೇ ಮಡಗಾಸ್ಕರ್‌ನಿಂದ ಒಂದು ತಾಜಾ ಸುದ್ದಿ ಬಂದಿದೆ. ಮರಗಳ ಮೇಲೇ ಬದುಕುತ್ತಿದ್ದ ಒಂದು ವಿಶಿಷ್ಟ ಬಾವಲಿಯು ಈಗ ಒಂದು ಗಿಡದ ದೊಡ್ಡ ಎಲೆಗಳ ಮೇಲೆ ಅಂಟಿಕೊಳ್ಳುವುದಕ್ಕೆ ಬೇಕಾದ ರೂಪಾಂತರ ಮಾಡಿಕೊಂಡಿದೆ. ಮಡಗಾಸ್ಕರ್‌ನಲ್ಲಿ ಕೇವಲ ಶೇ. ೬ರಷ್ಟು ಪ್ರದೇಶ ಮಾತ್ರ ಕಾಡು. ಉಳಿದದ್ದೆಲ್ಲ ಮನುಕುಲದ, ನಾಗರಿಕತೆಯ ಜಾಡು. ಇಂಥ ಅರಣ್ಯನಾಶದಿಂದ ತಪ್ಪಿಸಿಕೊಳ್ಳಲೆಂದೇ ಈ ಬಾವಲಿಯು ತನ್ನ ಕಾಲಿನಲ್ಲಿ ಅಂಟುರಸ ಸ್ರವಿಸಿಕೊಂಡು ಎಲೆಗೆ ಅಂಟಿಕೊಳ್ಳುವುದಕ್ಕೆ ಸಜ್ಜಾಗಿದೆ.
ಪೂರ್ತಿ ನಾಶವಾದ ಕಾಡಿನಿಂದಲೇ ಬದುಕಿ ಮೇಲೆದ್ದಿರುವ ಈ ಬಾವಲಿಯನ್ನು ವಿನಾಶದ ಅಂಚಿನಲ್ಲಿರುವ ಪ್ರಾಣಿಸಂಕುಲಕ್ಕೆ ಸೇರಿಸಲಾಗದು ಎಂದು ಈ ಬಾವಲಿಯನ್ನು ಹುಡುಕಿದ ಸ್ಟೀವ್ ಗುಡ್‌ಮನ್ ಹೇಳುತ್ತಾನೆ. ಮೈಝೋಪೋಡಾ ಶ್ಲೀಮಾನ್ನಿ ಎಂಬ ಹೆಸರಿನ ಈ ಬಾವಲಿಯನ್ನು ಹುಡುಕಿದ ಚಿಕಾಗೋದ ಫೀಲ್ಡ್ ಮ್ಯೂಸಿಯಂ ತಂಡದಲ್ಲಿದ್ದ ಗುಡ್‌ಮನ್ ಹೇಳುವಂತೆ ಈ ಬಾವಲಿಯು ನಾಗರಿಕತಯ ಅಟಾಟೋಪಗಳಿಂದ ಪಾರಾಗಲೆಂದೇ ಅಂಟು ತಯಾರಿಸಿಕೊಂಡಿದೆ. ತೀರ ಇತ್ತೀಚೆಗಿನ ಬೆಳವಣಿಗೆ ಇದು.
ಪಶ್ಚಿಮ ಘಟ್ಟದಲ್ಲಿ ಈ ಬಾವಲಿ ಇದ್ದರೆ ಪೂರ್ವದಲ್ಲಿ ಮೈಝೋಪೋಡಾ ಆರಿಟಾ ಎಂಬ ಬಾವಲಿ ಇದೆ. ಅಂತೂ ಶ್ಲೀಮಾನ್ನಿ ಈಗ ಈ ಗುಂಪಿನ ಎರಡನೇ ಸದಸ್ಯ!

ಮಡಗಾಸ್ಕರ್‌ನ ಕಾಡುಪಾಪಗಳು

ಸ್ಟೀವ್ ಗುಡ್‌ಮನ್ ಹೀಗೆ ಹೊಸ ಜೀವಿಗಳನ್ನು ಪತ್ತೆ ಮಾಡುತ್ತಲೇ ಎರಡು ದಶಕ ಕಳೆದಿದ್ದಾನೆ. ಮಡಗಾಸ್ಕರ್‌ನಲ್ಲೇ ಒಂದೂವರೆ ವರ್ಷದ ಹಿಂದೆ ಕಂಡ ಎರಡು ಹೊಸ ಕಾಡುಪಾಪಗಳಿಗೆ ಅವನ ಹೆಸರನ್ನೇ ಇಡಲಾಗಿದೆ. ಇಷ್ಟು ದಿನ ಕೇವಲ ೪೭ ಬಗೆಯ ಕಾಡುಪಾಪಗಳಿದ್ದವು; ಈಗ ಈ ಸಂಖ್ಯೆ ೪೮ಕ್ಕೆ ಹೆಚ್ಚಿತು. ಮನುಷ್ಯನ ವಿಕಾಸವನ್ನು ತಿಳಿಯಲು ಈ ಕಾಡುಪಾಪಗಳು ತುಂಬಾ ಮುಖ್ಯವಂತೆ. ೧೬ ಕೋಟಿ ವರ್ಷಗಳ ಹಿಂದೆ ಮಡಗಾಸ್ಕರ್ ಆಫ್ರಿಕಾಕ್ಕೇ ಅಂಟಿಕೊಂಡಿತ್ತಂತೆ. ಆದು ಆರು ಕೋಟಿ ವರ್ಷಗಳ ಹಿಂದೆ ಬೇರ್ಪಟ್ಟಿತು. ಆಮೇಲೆ ಆಫ್ರಿಕಾದಲ್ಲಿ ಹೆಚ್ಚಿದ ಮಂಗಗಳು ಕಾಡುಪಾಪಗಳನ್ನು ಉಳಿಸಲೇ ಇಲ್ಲ. ಮಡಗಾಸ್ಕರ್ ಒಂದು ರೀತಿಯಲ್ಲಿ ಕಾಡುಪಾಪಗಳ ದ್ವೀಪವಾಗಿಬಿಟ್ಟಿತು! ಈಗ ನೋಡಿ, ಮಡಗಾಸ್ಕರ್ ಬಿಟ್ಟಂತೆ ಹೊರಜಗತ್ತಿನಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ತೀರಾ ಕಮ್ಮಿ. ಮಿರ್ಝಾ ಜಾಜಾ ಮತ್ತು ಮೈಕ್ರೋಸಿಬಿಸ್ ಲೆಹಿಲಾಹಿತ್ಸಾರಾ ಹೆಸರಿನ ಈ ಕಾಡುಪಾಪಗಳು ಮಾನವನ ಕಥೆಗೂ ಸಾಕ್ಷಿ ಎಂದರೆ ಈ ಜೀವಿಗಳ ಮಹತ್ವವನ್ನು ಊಹಿಸಿ.

ಇತ್ತ ಆಫ್ರಿಕಾದಲ್ಲೇ, ತಾಂಜಾನಿಯಾದಲ್ಲಿ ಜಾಕ್ಸನ್ ಮುಂಗುಸಿ ಎಂಬ ಅತ್ಯಪರೂಪದ ಮುಂಗುಸಿ ಪತ್ತೆಯಾಗಿದೆ. ಇಷ್ಟು ದಿನ ಇದು ಕೇವಲ ಮ್ಯೂಸಿಯಂಗಳಲ್ಲಿ ಮಾದರಿಯಾಗಿ ಮಾತ್ರ ಕಂಡುಬಂದಿತ್ತು. ಬಿಳಿ ಬಾಲದ, ಹಳದಿ ಕುತ್ತಿಗೆಯ ಈ ಮುಂಗುಸಿ ನಿಶಾಚರಿ ಮೊದಲು ಕೇವಲ ಕೀನ್ಯಾದಲ್ಲಿ ಮಾತ್ರ ಇದೆ ಎಂದು ನಂಬಲಾಗಿತ್ತು.
ಈ ಮುಂಗುಸಿಯನ್ನು ಪತ್ತೆಮಾಡಿದ ತಂಡವೇ ಮೂರು ವರ್ಷಗಳ ಹಿಂದೆ ಕಿಪುಂಜಿ ಎಂಬ ಅತ್ಯಪರೂಪದ ಮಂಗವನ್ನೂ ಪತ್ತೆ ಮಾಡಿತ್ತು. ಐದು ವರ್ಷಗಳ ಹಿಂದೆ ವನ್ಯಜೀವಿ ಸಂರಕ್ಷಣಾ ಸೊಸೈಟಿಯು ವಿಶಿಷ್ಟ ಪುನುಗಿನ ಬೆಕ್ಕನ್ನು ಕಂಡಿತ್ತು.

ಅಮೆಝಾನ್‌ನ ರಕ್ತಪಿಪಾಸು ಮೀನುಗಳು ಅತ್ತ ಅಮೆಝಾನ್ ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆಯಷ್ಟೇ ವ್ಯಾಂಪೈರ್ ಮೀನು ಕಾಣಿಸಿಕೊಂಡಿದೆ. ಅರಾಗಿಯಾ ನದಿಯಲ್ಲಿ ಕಂಡುಬಂದ ಈ ರಕ್ತಪಿಪಾಸು ಮೀನು ಈ ಪ್ರದೇಶದಲ್ಲೇ ಕಾಣಸಿಗುವ ಕ್ಯಾಂಡಿರು ಎಂಬ ಇನ್ನೊಂದು ರಕ್ತಪಿಪಾಸು ಮೀನಿನ ಸಂಬಂಧಿಯಂತೆ. ಇವೆರಡೂ ಮಾರ್ಜಾಲಮೀನಿನ (ಕ್ಯಾಟ್‌ಫಿಶ್) ಜಾತಿಗೆ ಸೇರಿವೆ. ಬೇರೆ ಮೀನುಗಳ ರೆಕ್ಕೆಬಡಿತದಿಂದ ಉಂಟಾಗುವ ನೀರಿನ ಹರಿವಿನ ಬದಲಾವಣೆಯೇ ಈ ಮೀನಿಗೆ ಸಾಕು, ಹೊಂಚು ಹಾಕಿ ಇಂಥ ಮೀನುಗಳ ಬೆನ್ನುಮೂಳೆಗೆ ಅಂಟಿಕೊಂಡು ರಕ್ತ ಹೀರುತ್ತವೆ. ಕೇವಲ ೨೫ ಮಿಲಿಮೀಟರ್ ಉದ್ದ ಇರುವ ಈ ಮೀನು ಸಂಪೂರ್ಣ ಪಾರದರ್ಶಕ! ದೊಡ್ಡ ಮೀನುಗಳ ಪುಪ್ಪಸದ ಸಂದಿಗೊಂದಿಗಳಲ್ಲಿ ಅಡಗಿ ಅವುಗಳ ರಕ್ತ ಹೀರುವುದೆಂದರೆ ಈ ಮೀನುಗಳಿಗೆ ತುಂಬಾ ಇಷ್ಟ! ಮನುಷ್ಯರ ಮೂತ್ರದ ವಾಸನೆ ಹಿಡಿದೇ ಇವು ದಾಳಿ ಮಾಡುತ್ತವಂತೆ. ಮನುಷ್ಯರ ರಕ್ತವನ್ನೂ ಇವು ಹೀರುತ್ತವೆಯೆ? ಇನ್ನೂ ಗೊತ್ತಾಗಿಲ್ಲ.
ಬಿಬಿಸಿ (ಬ್ರಿಟಿಶ್ ಬ್ರಾಡ್‌ಕಾಸ್ಟಿಂಗ್ ಕಂಪನಿ) ಯ `ಅಮೆಝಾನ್ ಅಬಿಸ್’ ಕಾರ್ಯಕ್ರಮ ನಿರ್ಮಾಣದ ಸಂದರ್ಭದಲ್ಲಿ ಈ ವ್ಯಾಂಪೈರ್ ಮೀನಿನ ಜೊತೆಗೇ ಇನ್ನೂ ಎರಡು ಹೊಸ ಮೀನುಗಳು ದೊರೆತಿವೆ. ಈ ಮೀನು ದೊರೆತದ್ದೆಲ್ಲ ಅಮೆಝಾನ್ ನದಿಯ ಆಳದಲ್ಲಿ. ಬ್ರಿಟಿಶ್ ಚಾನೆಲ್‌ಗಿಂತ ಆಳವಾದ, ಅಗಲವಾದ ಅಮೆಝಾನ್ ನದಿಯ ಹೊಟ್ಟೆಯಲ್ಲಿ ನೂರಾರು ಆಳದ ರಂಧ್ರಗಳಿವೆ. ಅಲ್ಲಿ ಈ ತರಾವರಿ ಜೀವಿಗಳು ಭದ್ರವಾಗಿ ಬದುಕಿವೆ. ಕಾಲದ ಹರಿವನ್ನು ಎದುರಿಸಿಯೂ ಉಳಿದುಕೊಂಡಿವೆ; ಪ್ರಾಣಿಪ್ರಿಯ ಬಿಬಿಸಿ ನಿರ್ದೇಶಕರಿಗೆ ಕಂಡಿವೆ.
ಈ ಮೀನಿಗೆ ಸೂಕ್ತವಾದ ವೈಜ್ಞಾನಿಕ ಹೆಸರೇನು? ಪ್ಯಾರಾಕಾಂತೋಪೋರ್ನಾ ಡ್ರಾಕುಲಾ? ಪ್ಯಾರಾಕಾಂತೋಪೋರ್ನಾ ಇರಿಟಾನ್ಸ್? ಪ್ಯಾರಾಕಾಂತೋಪೋರ್ನಾ ಮಿನ್ಯುಟಾ? ಪ್ಯಾರಾಕಾಂತೋಪೋರ್ನಾ ವ್ಯಾಂಪೈರಾ? ಬಿ ಬಿ ಸಿ ಈಗ ಬಿಸಿಬಿಸಿ ಚರ್ಚೆ ನಡೆಸಿದೆ. ಹುಟ್ಟಿದ ಮಗುವಿಗೆ ಹೆಸರು ಇಡುವಂತೆ ಈ ರಕ್ತಪಿಪಾಸು ಮೀನಿಗೂ ಇನ್ನೇನು ಎಲ್ಲರೂ ಗುರುತಿಸುವ ಹೆಸರು ಬಂದುಬಿಡುತ್ತದೆ. ಮುದ್ದುಮಾಡೀರಿ ಜೋಕೆ…!
ಸಾವೋ ಪಾಲೋ ವಿಶ್ವವಿದ್ಯಾಲಯದ ತಂಡದೊಂದಿಗೆ ಬಿ ಬಿ ಸಿ ನಡೆಸಿದ ಈ ಸಂಶೋಧನೆಯಲ್ಲಿ ಭೂಮಿಯ ಮೇಲೆ ಬದುಕುವ ಒಂದು ಮೀನು ಪತ್ತೆಯಾಗಿದೆ. ಹೀಗೆ ಮರವನ್ನೇ ತಿಂದು ಬದುಕುವ ಈ ಮೀನು ವಿಶ್ವವಿಶಿಷ್ಟ.

ಬ್ರೆಝಿಲ್ ಕಾಡಿನಲ್ಲಿ ಬರ್ನಾಂಡಿ ನಾಲ್ಕು ವರ್ಷಗಳ ಹಿಂದೆ (೨೦೦೨) ಬ್ರೆಝಿಲ್‌ನಲ್ಲಿ ಹರಿಯುವ ಅಮೆಝಾನ್ ನದಿಯ ದಡದಲ್ಲಿ ಎರಡು ವಿಶಿಷ್ಟ ಮಂಗಗಳನ್ನು ಕನ್ಸರ್ವೇಶನ್ ಇಂಟರ್‌ನ್ಯಾಶನಲ್ ಸಂಸ್ಥೆಯು ಪತ್ತೆ ಮಾಡಿತ್ತು. ಬ್ರೆಝಿಲ್‌ನ ಮನಾವುನಲ್ಲಿರುವ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಮೆಝಾನ್ ರಿಸರ್ಚ್ ಸಂಸಯಲ್ಲಿ ಕೆಲಸ ಮಾಡುತ್ತಿರುವ ಡಚ್ ವಿಜ್ಞಾನಿ ಮಾರ್ಕ್ ವಾನ್ ರೂಸ್‌ಮಲೆನ್ ಎಂಬಾತ ಈ ಮಂಗಗಳನ್ನು ರಿಯೋ ಡಿ ಜನೈರೋದಿಂದ ವಾಯುವ್ಯ ದಿಕ್ಕಿನಲ್ಲಿ ೧೮೦೦ ಮೈಲುಗಳಾಚೆ ಇರುವ ಕಾಡಿನಲ್ಲಿ ಹುಡುಕಿದ. ಮದೀರಾ ಮತ್ತು ತಾಪಾಜೋಸ್ ನದಿಗಳು ಅಮೆಝಾನನ್ನು ಸೇರುವ ಈ ತಾಣವು ಇನ್ನೂ ತೀವ್ರ ಸಂಶೋಧನೆಗೆ ಗುರಿಯಾಗಿಲ್ಲವಂತೆ.
ಕ್ಯಾಲಿಸೆಬಸ್ ಬರ್ನಾಂಡಿ ಮತ್ತು ಕ್ಯಾಲಿಸೆಬೆಸ್ ಸ್ಟೀಫೆನ್ನಾಶಿ ಹೆಸರಿನ ಈ ಮಂಗಗಳು ೧೯೯೦ರಿಂದೀಚೆಗೆ ಸಿಕ್ಕಿದ ೩೮ ಮತ್ತು ೩೯ನೇ ಹೊಸ ಮಂಗಗಳು ಎಂದರೆ ನೀವೇ ಹೇಳಿ: ಜೀವವೈವಿಧ್ಯದ ಬಗ್ಗೆ ಮನುಷ್ಯನಿಗೆ ಎಷ್ಟೆಲ್ಲ ಗೊತ್ತಿದೆ? ವಿಚಿತ್ರವೆಂದರೆ ವಾನ್ ರೂಸ್‌ಮಲೆನ್ ವಾಸ್ತವವಾಗಿ ಕುಬ್ಜ ಮಾರ್ಮೋಸೆಟ್ ಎಂಬ ಇನ್ನೊಂದು ಹೊಸ ಮಂಗವನ್ನು ಹುಡುಕುತ್ತಿದ್ದಾಗ ಈ ಬರ್ನಾರ್ಡಿ ಸಿಕ್ಕಿದ್ದು. ವಾನ್‌ಗೆ ಮಂಗಗಳು ಎಂದರೆ ತುಂಬಾ ಪ್ರೀತಿ ಎಂದರಿತ ಒಬ್ಬ ಬೆಸ್ತ ಈ ಮಂಗವನ್ನು ತಂದುಕೊಟ್ಟಿದ್ದ. ಬರ್ನಾರ್ಡಿಯ ದೇಹ ೧೫ ಅಂಗುಲ; ಬಾಲ ೨೨ ಅಂಗುಲ. ತೂಕ ಕೇವಲ ೩೩ ಔನ್ಸ್‌ಗಳು. ಸ್ಟೀಫೆನ್ನಾಶಿ ಮಂಗದ ಉದ್ದ ೧೧ ಅಂಗುಲ; ಬಾಲ ೧೭ ಅಂಗುಲ. ತೂಕ ಸುಮಾರು ೨೪ ಔನ್ಸ್. ಕಪ್ಪು ತಲೆ; ಕೆಂಪು ಕೆನ್ನೆಗಳು.
`ಇನ್ನೂ ಹೆಸರಿಡದ ೨೦ಕ್ಕೂ ಹೆಚ್ಚು ಜೀವಪ್ರಬೇಧಗಳನ್ನು ಗುರುತಿಸಿದ್ದೇನೆ’ ಎಂದು ವಾನ್ ಹೇಳುತ್ತಾನೆ. ಜಗತ್ತಿನಲ್ಲಿ ಇರೋದೇ ೩೧೦ ಮಂಗ ಪ್ರಬೇಧಗಳು. ಅವುಗಳಲ್ಲಿ ೯೫ ಮಂಗ ಪ್ರಬೇಧಗಳು ಬ್ರೆಝಿಲ್‌ನಲ್ಲೇ ಇವೆ.
ಈ ಪ್ರದೇಶದಲ್ಲಿ ಅಮೆಝಾನ್ ನದಿಯೊಳಗೇ ಹತ್ತಾರು ದ್ವೀಪಗಳು ಹುಟ್ಟಿಕೊಂಡಿವೆ. ಅಲ್ಲಿ ಜೀವಪ್ರಬೇಧಗಳು ಹಾಯಾಗಿ ಅರಳಿವೆ. ೧೮೦೦ರಿಂದ ಈ ಪ್ರದೇಶದಲ್ಲಿ ಯಾರೂ ಸಂಶೋಧನೆ ನಡೆಸಿರಲಿಲ್ಲ. ನಾನು ಐದೇ ವರ್ಷ ನಡೆಸಿದ ಸಂಶೋಧನೆಯಿಂದ ಇಷ್ಟೆಲ್ಲ ಜೀವಿಗಳು ಕಂಡುಬಂದಿವೆ ಎಂದು ವಾನ್ ವಿನಮ್ರವಾಗಿ ನುಡಿಯುತ್ತಾನೆ.
ಜೀವಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಇದು ಎಲ್ ಡೊರ್‍ಯಾಡೋ (ಹಿಂದೆ ಚಿನ್ನ ದೊರೆಯುತ್ತಿದ್ಛ್ದ ಇತಿಹಾಸಪ್ರಸಿದ್ಧ ದಕ್ಷಿಣ ಅಮೆರಿಕಾ ಪ್ರದೇಶ) ಇದ್ದ ಹಾಗೆ. ಹುಡುಕಿದಷ್ಟೂ ಜೀವಿಗಳು ಸಿಗುತ್ತವೆ ಎಂಬುದು ವಾನ್ ಅಭಿಮತ.
ಈ ಮಂಗಗಳೇನೂ ವಿನಾಶದ ಅಂಚಿನಲ್ಲಿಲ್ಲ. ಆದರೆ ಅವುಗಳ ರಕ್ಷಣೆಯೂ ಮುಖ್ಯವೇ. ಇಂಥ ರಕ್ಷಣೆಗೆ ನೆರವು ನೀಡಿದವರ ಹೆಸರನ್ನೇ ಹೊಸ ಪ್ರಬೇಧಗಳಿಗೆ ಇಡುವುದು ವಾನ್‌ನ ಒಂದು ಉಪಾಯ. ಬರ್ನಾರ್ಡಿ ಎಂದರೆ ಬೇರಾರೂ ಅಲ್ಲ ; ಡಚ್ ರಾಜಕುಮಾರ!
ಬ್ರೆಝಿಲ್‌ನಲ್ಲಿ ಇರುವ ಕಾಯ್ದೆಯೂ ವಾನ್‌ಗೆ ನೆರವಾಗಿದೆ. ಈ ದೇಶದ ನಾಗರಿಕರು ತಮ್ಮ ಒಡೆತನದ ಪ್ರದೇಶದಲ್ಲಿ ಖಾಸಗಿ ನಿಸರ್ಗ ಮೀಸಲು ಪ್ರದೇಶವನ್ನು ರೂಪಿಸಿ ಆಸ್ತಿ ತ ಎರಿಗೆಯಿಂದ ಬಚಾವಾಗಬಹುದು. ಅದಕ್ಕೇ ವಾನ್ ರೂಸ್‌ಮಲೆನ್ ಡಚ್ ಸರ್ಕಾರದ ನೆರವಿನಿಂದ ಒಂದೂವರೆ ಲಕ್ಷ ಎಕರೆ ಪ್ರದೇಶದಲ್ಲಿ ಎರಡು ಮೀಸಲು ಅರಣ್ಯವನ್ನು ನಿರ್ಮಿಸಿದ್ದಾನೆ.
ಮನುಕುಲದ ನಿರಂತರ ದಾಳಿಯಿಂದ, ನಾಗರಿಕತೆ ಎಂಬ ನಿಸರ್ಗನಾಶದ ಪ್ರಕ್ರಿಯೆಯಿಂದ ಈ ಅಪರೂಪದ ಜೀವಿಗಳು ಉಳಿಯುವಲ್ಲಿ ವಾನ್ ರೂಸ್‌ಮಲೆನ್ ಮಾಡಿದ ಯತ್ನಗಳಿಗೆ ಏನೆನ್ನೋಣ?

ಏಶ್ಯಾದಲ್ಲಿ ಹೊಸ ಜೀವಿಗಳು ಈ ಕಡೆ ಮಲೇಶ್ಯಾಗೆ ಬನ್ನಿ….. ಎರಡು ವರ್ಷಗಳ ಹಿಂದೆ ಮಲೇಶ್ಯಾದ ಜೊಹೊರ್ ರಾಜ್ಯದ ದಟ್ಟ ಅರಣ್ಯದಲ್ಲಿ ದೊಡ್ಡ ಕಾಲಿನ ಆದಿಮಾನವನ ಹೆಜ್ಜೆಗಳೇ ಕಂಡುಬಂದಿದ್ದವು. ಈ ಪರಿಸರದಲ್ಲಿ ಹಿಂದೆಂದೂ ಕಾಣದ ವಿಶಿಷ್ಟ ಜೀವಿಗಳು ಇವೆ ಎಂದು ಈ ದೇಶದ ವಿಜ್ಞಾನಿಗಳು ಹೇಳುತ್ತಿದ್ದಾರೆ.
ಕಳೆದ ಒಂದು ದಶಕದಲ್ಲೇ ಇಂಡೋನೇಶ್ಯಾದ ಬೋರ್ನಿಯೋದಲ್ಲಿ ೩೬೧ ಹೊಸ ಪ್ರಬೇಧಗಳನ್ನು ಹುಡುಕಲಾಗಿದೆ. ದಿನ ಬೆಳಗಾದರೆ ಹಿಂಸೆ ತಾಂಡವವಾಡುವ ಶ್ರೀ ಲಂಕಾದ ಕಾಡುಗಳಲ್ಲಿ ೪೩ ಹೊಸ ಕಶೇರುಕ ಪ್ರಬೇಧಗಳು ಪತ್ತೆಯಾಗಿವೆ. ಇಂಡೋನೇಶ್ಯಾದ ಕಲಿಮಂಟನ್ ಮಳೆಕಾಡಿನಲ್ಲಿ ಅಲ್ಲಿನ ಬೇಟೆಗಾರರ ಕಣ್ಣಿಗೂ ಸಿಗದ ಸಸ್ತನಿಗಳು ಕಂಡಿವೆ. ಮಧ್ಯ ಲಾವೋಸ್‌ನಲ್ಲಿ ವಿಚಿತ್ರವಾದ , ನರಿಯಂತೆ ಕಾಣುವ ಖಾ – ನ್ಯೂ ಎಂಬ ಉದ್ದ ಮೀಸೆಯ ಇಲಿ ಜಾತಿಯ ಪ್ರಾಣಿ ಕಂಡಿದೆ. ಗಿನೀ ಪಿಗ್‌ನ್ನು ಹೋಲುವ ಈ ಪ್ರಾಣಿಯು ಈವರೆಗೂ ಗೊತ್ತೇ ಇರದ ಸಸ್ತನಿ ಕುಟುಂಬಕ್ಕೆ ಸೇರಿದ್ದು.
ಮಲೇಶ್ಯಾದಲ್ಲಿ ಕಾಡು ಸರಸರ ಮಾಯವಾಗುತ್ತಿದೆ. ಅಲ್ಲೀಗ ಕಾಡು ನಾಶದ ವೇಗ ವಾರ್ಷಿಕ ಶೇ. ೮೬. ಒಟ್ಟಾರೆ ಭೂಪ್ರದೇಶದಲ್ಲಿ ಇರುವುದೇ ಶೇ. ೧೦ರಷ್ಟು ಕಾಡು.
ಹಂಟು ಜರಾಂಗ್ ಗಿಗಿ ಎಂಬುದು ಮಲೇಶ್ಯಾದ ಗುಡ್ಡಗಾಡು ಜನರು ಹೇಳುವ ದೊಡ್ಡಕಾಲಿನ ಕೋತಿ ಅರ್ಥಾತ್ ಯೇತಿ. ಭೂತಾನದಲ್ಲಿ ೬೫೦ ಚದರ ಕಿಲೋಮೀಟರ್ ಪ್ರದೇಶವನ್ನೇ ಯೇತಿಗಾಗಿ ಸಂರಕ್ಷಿಸಲಾಗಿದೆ. ಯೇತಿ ಇದೆಯೋ,ಇಲ್ಲವೋ ಎಂದು ಇನ್ನೂ ಖಚಿತವಾಗಿಲ್ಲ ಬಿಡಿ.

ವಿನಾಶದ ಅಂಚಿನಲ್ಲಿ ರುಚಿಕರ ಸೆಪೋರಿಸ್ ಮತ್ತೆ ಬ್ರೆಝಿಲ್‌ಗೆ ಬರೋದಾದರೆ, ಅಮೆಝಾನ್ ನದೀತೀರದಲ್ಲೇ ಅತ್ಯಂತ ರುಚಿಯಾದ ಮಂಗ ಕಂಡುಬಂದಿದೆ ಎಂದು ಜರ್ಮನಿಯ ಸಂಶೋಧಕ ಡಾ|| ಜೆರೋಮ್ ಕೆಲ್ಲರ್ ಹೇಳಿದ್ದಾರೆ. ಆಟೆಲೆಸ್ ಸೆಪೋರಿಸ್ ಎಂದು ಕರೆಯುವ ಈ ಮಂಗವು ೩೫ರಿಂದ ೪೦ ಪೌಂಡ್ ತೂಗುತ್ತೆ; ಹಸಿಯಾಗಲೀ, ಬೇಯಿಸಿಯಾಗಲೀ ತಿನ್ನುವುದಕ್ಕೆ ಇದಕ್ಕಿಂತ ಬೇರೆ ಮಂಗ ಸಿಕ್ಕಿಲ್ಲ ಎಂದು ಕೆಲ್ಲರ್ ಬಾಯಿ ಚಪ್ಪರಿಸುತ್ತಾರೆ. ಆದರೆ ಈ ಮಂಗವು ವಿನಾಶದ ಅಂಚಿನಲ್ಲಿದೆ. ಎಷ್ಟೋ ಪೀಳಿಗೆಗಳ ಕಾಲ ಇದನ್ನು ಸಾಕಿ ಸಂತತಿ ಬೆಳೆಸಬೇಕಂತೆ. ಆಮೇಲೆಯೇ ತಿನ್ನುವ ಯೋಚನೆ ಮಾಡಬಹುದಂತೆ. ಮನುಷ್ಯರ ಥರವೇ ವರ್ತಿಸುವ ಈ ಮಂಗಗಳು ಸಂಸಾರಪ್ರಿಯರಂತೆ.
ನ್ಯೂ ಗಿನಿಯ ಫೋಜಾ ಗುಡ್ಡದಲ್ಲಿ ೨೦೦೫ರ ಡಿಸೆಂಬರಿನಲ್ಲಿ ಓಡಾಡಿದ ವಿಜ್ಞಾನಿಗಳ ತಂಡಕ್ಕೆ ಬಂಪರ್ ಬಹುಮಾನವೇ ಸಿಕ್ಕಿದೆ. ೨೦ ಕಪ್ಪೆಗಳು, ನಾಲ್ಕು ಚಿಟ್ಟೆಗಳು, ಗಿಡಗಳು, ಕಿತ್ತಳೆ ಬಣ್ಣದ ಜೇನುಹಕ್ಕಿ, – ಎಲ್ಲವೂ ಸಿಕ್ಕಿವೆ. ೧೯೩೯ರ ನಂತರ ಈ ಪ್ರದೇಶದಲ್ಲಿ ಕಂಡುಬಂದ ಜೇನುಹಕ್ಕಿಯ ಕಣ್ಣುಗಳ ಕೆಳಗೆ ಪದಕದಂಥ ರಚನೆಗಳಿವೆ. ಉದ್ದ ಕೊಕ್ಕಿನ ಎಕಿಡ್ನಾ ಎಂಬ ಮೊಟ್ಟೆ ಇಡುವ ಸಸ್ತನಿಯೂ ಇಲ್ಲಿ ಕಂಡಿದೆ. ಇಂಡೋನೇಶ್ಯಾದಲ್ಲಿ ಇದೇ ತಂಡಕ್ಕೆ ಚಿನ್ನದ ಬಣ್ಣದ ನೆತ್ತಿಯ ಮರ ಕಾಂಗರೂ – ಡೆಂಡ್ರೋಲೇಗಸ್ ಪಲ್ಚೆರಿಮಸ್ – ಸಿಕ್ಕಿದೆ.
ಪ್ರಾಣಿ ಸಂಕುಲದ ಈ ಹಳೇ ಹೊಸ ಸದಸ್ಯರನ್ನು ಸ್ವಾಗತಿಸೋಣ.

ಸಂಕುಲಪಟ್ಟಿ ಸಾಧ್ಯವೆ? ವಿಶ್ವದಲ್ಲಿ ಒಟ್ಟು ೧೭.೫ ಲಕ್ಷ ಜೀವಿಗಳಿವೆ ಎಂಬುದು ಒಂದು ಸಾಮಾನ್ಯ ಅಂದಾಜು. ಅಮೆರಿಕಾ ಮತ್ತು ಇಂಗ್ಲೆಂಡಿನ ವಿಜ್ಞಾನಿಗಳು ಈ ಪ್ರಾಣಿಸಂಕುಲದ ದೊಡ್ಡ ಪಟ್ಟಿಯನ್ನೇ ಮಾಡುತ್ತಿದ್ದಾರೆ. ೨೦೧೧ರಲ್ಲಿ ಈ ಪಟ್ಟಿಯ ಕರಡು ಸಿದ್ಧವಾಗಬಹುದು. ಈಗ ವಾರ್ಷಿಕ ಕನಿಷ್ಠ ೧೫ರಿಂದ ೨೦ ಸಾವಿರ ಹೊಸ ಜೀವಿಗಳು ಈ ಪಟ್ಟಿಗೆ ಹೊಸದಾಗಿ ಸೇರುತ್ತಿವೆ. ವಿಶ್ವಸಂಸ್ಥೆಯ ಜಾಗತಿಕ ವೈವಿಧ್ಯ ಅಂದಾಜಿನ ಪ್ರಕಾರ ಭೂಮಿಯಲ್ಲಿ ೧.೩೬ ಕೋಟಿ ಜೀವಪ್ರಬೇಧಗಳಿವೆ. ಉದಾಹರಣೆಗೆ ಜೀರುಂಡೆಗಳ ಕರುಳುಗಳಲ್ಲೇ ಇತ್ತೀಚೆಗೆ ೨೦೦ ಬಗೆಯ ಯೀಸ್ಟ್‌ಗಳನ್ನು ಗುರುತಿಸಲಾಗಿದೆ.
ಉಷ್ಣವಲಯದ ಕಾಡುಗಳು ಇಂಥ ಜೀವಿಗಳಿಗೆ ಪ್ರಶಸ್ತವಾದ ತಾಣ. ಜೀವಶಾಸ್ತ್ರಜ್ಞರು ಈಗ ಕೇವಲ ಅರಣ್ಯಗಳ ಛಾವಣಿಗಳಲ್ಲೇ ಸಾಕಷ್ಟು ಹೊಸ ಜೀವಪ್ರಬೇಧಗಳನ್ನು ಹುಡುಕುತ್ತಿದ್ದಾರೆ.
ಇತ್ತ ಸಮುದ್ರದ ಆಳದಲ್ಲಿ ಹೊಸ ಮೀನುಗಳು ಮಿಂಚುತ್ತಿವೆ. ಈ ದಶಕದ ಮೊದಲ ಮೂರೇ ವರ್ಷಗಳಲ್ಲಿ ೫೦೦ ಹೊಸ ಬಗೆಯ ಮೀನುಗಳು ಸಿಕ್ಕಿವೆ. ಈಗ ಸಿದ್ಧವಾದ ಪಟ್ಟಿಯಲ್ಲಿ ಇರುವುದಕ್ಕಿಂತ ಇನ್ನೂ ಹತ್ತು ಪಟ್ಟು ಹೆಚ್ಚು ಜೀವಿಗಳು ಇವೆ ಎಂಬುದು ಒಂದು ಸಣ್ಣ ಅಂದಾಜು.
ಸಸ್ಯಶೋಧನೆಯಲ್ಲಿ ಮಾತ್ರ ವಿಜ್ಞಾನಿಗಳು ಕೊಂಚ ಮುಂದಿದ್ದಾರೆ. ಈಗಾಗಲೇ ಶೇ. ೭೫ರಷ್ಟು ಸಸ್ಯಸಂಕುಲವನ್ನು ಪಟ್ಟಿ ಮಾಡಿದ್ದಾರೆ. ವರ್ಷಕ್ಕೆ ೨೦೦೦ದಷ್ಟು ಹೊಸ ಸಸ್ಯಸಂಕುಲಗಳು ಪತ್ತೆಯಾಗುತ್ತಿವೆ. ಪಾಪುವಾ ನ್ಯೂಗಿನಿ ಮತ್ತು ಮಧ್ಯ ಆಫ್ರಿಕಾದ ಮಳೆಕಾಡುಗಳಲ್ಲಿ ಸಾವಿರಾರು ಸಸ್ಯಗಳು ಹೆಸರಿಲ್ಲದೆ ಬದುಕಿವೆ. ಆದರೆ ಈ ಭಾಗದ ದೇಶಗಳ ಆಂತರಿಕ ಕಲಹದಿಂದ ಸಂಶೋಧಕರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ.
ಒಂದು ಲೆಕ್ಕಾಚಾರದ ಪ್ರಕಾರ, ಜಾಗತಿಕ ಜೀವಿಪಟ್ಟಿ ಪೂರ್ಣಗೊಳಿಸಲು ಮನುಷ್ಯರಿಗೆ ೧೫೦೦ ವರ್ಷಗಳಿಂದ ಹಿಡಿದು ೧೫ ಸಾವಿರ ವರ್ಷಗಳು ಸಾಲುವುದಿಲ್ಲ. ಇಂಟರ್‌ನೆಟ್ ಸಂಪರ್ಕವು ಸಾಧ್ಯ ಮಾಡಿಸಿರುವ ವಿಜ್ಞಾನಿಗಳ ಪರಸ್ಪರ ಸಂಪರ್ಕ, ಡಿ ಎನ್ ಎ ಸರಪಳಿಗಳ ಶೋಧನೆ, ಹೆಚ್ಚುತ್ತಿರುವ ಜೀವಶಾಸ್ತ್ರಜ್ಞರ ಸಂಖ್ಯೆ, – ಇವೆಲ್ಲವೂ ಈ ಪಟ್ಟೀಕರಣದ ವೇಗವನ್ನು ಹೆಚ್ಚಿಸಿವೆ ಎಂಬುದೇನೋ ನಿಜ. ಆದರೆ ದಾರಿ ಮಾತ್ರ ದೂರ.

ಭಾರತದಲ್ಲೂ ಶೋಧದ ಹೊಸ ಹಾದಿ ಭಾರತದಲ್ಲಿ? ಮೊನ್ನೆ ತಾನೇ ಬೆಳಗಾವಿಯಲ್ಲಿ ೬೦ ಕೋಟಿ ವರ್ಷಗಳ ಹಿಂದೆ ಹುಟ್ಟಿದ ಜೀವಿ – ಸಿಹಿನೀರಿನ ಬ್ರಯೋಝೋವಾ – ಕಂಡುಬಂದಿದೆ. ಕನ್ನಡದಲ್ಲಿ ವಿಜ್ಞಾನದ ಸುದ್ದಿಗಳೇ ಪ್ರಕಟವಾಗದ ಈ ದಿನಗಳಲ್ಲಿ `ಕನ್ನಡಪ್ರಭ’ದ ಎಂ.ಕೆ. ಹೆಗಡೆ ಈ ಬಗ್ಗೆ ಸುದ್ದಿ ಬರೆದದ್ದು ಶ್ಲಾಘನೀಯ. ಬೆಳಗಾವಿಯ ಗೋವಿಂದರಾಮ್ ಸೆಕ್ಸಾರಿಯಾ ಸೈನ್ಸ್‌ಕಾಲೇಜಿನ ಪ್ರೊ|| ಎಸ್. ವೈ. ಪ್ರಭು ಈ ಜೀವಿಯನ್ನು ಮೊದಲು ತಮ್ಮ ಜೀವಶಾಸ್ತ್ರ ವಿಭಾಗದ ಮತ್ಸ್ಯಕೊಳದಲ್ಲಿ ಕಂಡರು.
ನಮ್ಮ ವೈವಿಧ್ಯಮಯ ಸಹ್ಯಾದ್ರಿಯ ಒಡಲಲ್ಲಿಯೂ ಇಂಥ ನೂರಾರು ಜೀವಿಗಳು ಅಡಗಿವೆ. ಅವುಗಳನ್ನು ಹುಡುಕುವುದಕ್ಕೆ ವಿಜ್ಞಾನಿಗಳು ಹೊರಟಿದ್ದಾರೆ. ಕೇರಳದಲ್ಲಿ ಹೊಸ ಕಪ್ಪೆಗಳನ್ನು ಹುಡುಕುವುದರಲ್ಲಿ ಎಸ್. ಡಿ. ಬಿಜು ಮತ್ತು ಫ್ರಾಂಕಿ ಬೊಸಿಟ್ ನಿಷ್ಣಾತರು. ಫಿಲಾಟಸ್ ಬಾಬಿಂಗೇರಿ ಮತ್ತು ಫಿಲಾಟಸ್ ಗ್ರಾಮಿನಿರೂಪೆಸ್ ಎಂಬ ಎರಡು ಕಪ್ಪೆಗಳನ್ನು ಪೊನ್‌ಮುಡಿ ಗುಡ್ಡಗಳಲ್ಲಿ ಹುಡುಕಿದ ಈ ಮಹಾಶಯರು ಕಳೆದ ವರ್ಷವಷ್ಟೇ ಸಹ್ಯಾದ್ರಿಯ ತಪ್ಪಲಲ್ಲಿ ನಾಸಿಕಾಬಟ್ರಾಕಸ್ ಸಹ್ಯಾದ್ರೆನ್ಸಿಸ್ ಎಂಬ ನೇರಳೆ ಬಣ್ಣದ ಕಪ್ಪೆಯನ್ನು ಹುಡುಕಿದ್ದಾರೆ. ಈ ಕಪ್ಪೆಯ ಕಥೆ ಬರೆದರೆ ಅದೇ ಒಂದು ದೊಡ್ಡ ಅಧ್ಯಾಯವಾದೀತು!

ಈ ಭೂಮಿಯ ಒಳಗೆ, ಮೇಲೆ, ಮರಗಳ ಬುಡದಲ್ಲಿ, ನೆತ್ತಿಯಲ್ಲಿ, ವಾಯುಗೋಳದ ವಿವಿಧ ಸ್ತರಗಳಲ್ಲಿ… ಜೀವಿಗಳನ್ನು ಹುಡುಕುತ್ತ ಹೋದರೆ ಕಥೆ ಮುಗಿಯುವುದೇ ಇಲ್ಲ.
ಮಂಗಳದಲ್ಲಿ ಜೀವಿಗಳಿದ್ದಾರೆಯೆ?ಬ್ರಹ್ಮಾಂಡದಲ್ಲಿ ಸೌರವ್ಯೂಹದಲ್ಲಿ ನಮ್ಮಂತೆಯೇ ಇರುವ ಗ್ರಹಗಳಲ್ಲಿ ಜೀವಿಗಳಿದ್ದಾರೆಯೆ? ಅವುಗಳನ್ನು ಹುಡುಕಲು ವರ್ಷಗಳಿಂದ ನೌಕೆಗಳು ಆಕಾಶಗಾಮಿಯಾಗಿವೆ. ನಮ್ಮ ಅಕ್ಕಪಕ್ಕದಲ್ಲೇ ಇರುವ ಅಸಂಖ್ಯ ಜೀವಿಗಳನ್ನು ಮಾತ್ರ ನಾವು ಹುಡುಕಿಲ್ಲ; ರಕ್ಷಿಸಿಲ್ಲ; ಸುಮ್ಮನೆ ಬಿಟ್ಟಿಲ್ಲ. ವಿಜ್ಞಾನಿಗಳು ಹೆಚ್ಚೆಂದರೆ ಇವುಗಳನ್ನು ಹೀಗೆಯೇ ಬದುಕಲು ಬಿಡಿ ಎನ್ನಬಹುದು.
ಆದರೆ ಅಭಿವೃದ್ಧಿಯ ಮದ ಹತ್ತಿರುವ ಈ ಮನುಷ್ಯ ಏನು ಮಾಡಬಹುದು?
ಜೀವನಪ್ರೀತಿ ಉಳ್ಳವರಾಗಿ ನಾವು ಸಸ್ಯಶ್ಯಾಮಲೆಯಾಗಿ ಕೋಟಿ ಕೋಟಿ ಜೀವಿಗಳನ್ನು ಒಡಲಿನಲ್ಲಿ ಇಟ್ಟುಕೊಂಡ ಈ ವಸುಂಧರೆಗೆ ಒಮ್ಮೆ ತಲೆಬಾಗಿ ನಮಿಸೋಣ. ಈ ಜೀವಿಗಳನ್ನು ಹುಡುಕುತ್ತಿರುವ ವಿಜ್ಞಾನಿಗಳಿಗೆ ವಂದಿಸೋಣ.
ಸಿದ್ಧಾಂತಗಳ ಮಾತಿರಲಿ, ಮನುಷ್ಯೇತರ ಜೀವಿಗಳನ್ನೂ ಬದುಕಲು ಬಿಡುವುದೇ ಈಗಿರುವ ದೊಡ್ಡ ಸವಾಲು.

(ಹೊಸದಿಗಂತ, ೨೦೦೭ ಜನವರಿ ೨೧, ಈ ಸಂಚಿಕೆಯ ಸಾಪ್ತಾಹಿಕದಲ್ಲಿ ಪ್ರಕಟಿತ)

ಸೋಮವಾರ, ಆಗಸ್ಟ್ 10, 2009

ಸೂರ್ಯನ ಫೋಟೋಗ್ರಾಫರ್!

ಮನುಷ್ಯ ಚಂದ್ರನ ಮೇಲೆ ಇಳಿದು ನಲವತ್ತು ವರ್ಷ ಆಯ್ತು, ಸೂರ್ಯನ ಮೇಲೆ ಇಳಿಯೋದು ಯಾವಾಗ ಅಂತ ಕೇಳಿದರೆ ರಾತ್ರಿಹೊತ್ತು ಹೇಗೂ ಸೂರ್ಯ ತಣ್ಣಗೆ ಇರ್ತಾನಲ್ಲ, ಆಗ ಹೋದರಾಯ್ತು ಅಂತ ಅದ್ಯಾರೋ ಅಂದನಂತೆ. ಹಾಗೆಲ್ಲ ರಾತ್ರಿ ಹೊತ್ತು ಹೋಗಿ ಸೂರ್ಯನ ಮೇಲೆ ಇಳಿಯುವ ಸಾಹಸ ಮಾತ್ರ ಈವರೆಗೆ ಯಾರೂ ಮಾಡಿಲ್ಲ, ಅಷ್ಟೆ!

ಹಾಗಂತ ವಿಜ್ಞಾನಿಗಳು ಸುಮ್ಮನೆ ಕುಳಿತಿರುತ್ತಾರೆಯೇ; ಅಂತರಿಕ್ಷದ ಮೂಲೆಮೂಲೆಗಳಿಗೆ ಗಗನನೌಕೆಗಳನ್ನು ಕಳುಹಿಸಿರುವ ಅವರು ಸೂರ್ಯನನ್ನೂ ಸುಮ್ಮನೆ ಬಿಟ್ಟಿಲ್ಲ.

ನಮ್ಮ ಪರವಾಗಿ ಸೂರ್ಯನ ಮೇಲೊಂದು ಕಣ್ಣಿಟ್ಟಿರುವ ಗಗನನೌಕೆಗಳಲ್ಲಿ ಸೋಲಾರ್ ಆಂಡ್ ಹೀಲಿಯೋಸ್ಫೆರಿಕ್ ಅಬ್ಸರ್ವೇಟರಿ ಅಥವಾ ಸೋಹೋ ಪ್ರಮುಖವಾದದ್ದು. ಭೂಮಿಯಿಂದ ಹದಿನೈದು ಲಕ್ಷ ಕಿಲೋಮೀಟರುಗಳ ದೂರದಲ್ಲಿರುವ ಈ ಗಗನನೌಕೆ ಭೂಮಿಯ ಜತೆಗೇ ಸೂರ್ಯನನ್ನು ಸುತ್ತುಹಾಕುತ್ತಿದೆ.

ಸುಮಾರು ನೂರು ಕೋಟಿ ಯೂರೋಗಳ ವೆಚ್ಚದ ಸೋಹೋ, ಸೂರ್ಯನ ಕುರಿತಾದ ಅಮೂಲ್ಯ ವೈಜ್ಞಾನಿಕ ಮಾಹಿತಿ ಹಾಗೂ ಅತ್ಯದ್ಭುತ ಚಿತ್ರಗಳನ್ನು ಕಳೆದ ಹದಿನಾಲ್ಕು ವರ್ಷಗಳಿಂದ ಸತತವಾಗಿ ಒದಗಿಸುತ್ತಿದೆ. ಅಷ್ಟೇ ಅಲ್ಲ, ಸೂರ್ಯನ ನೆರೆಹೊರೆಯನ್ನೂ ಗಮನಿಸುತ್ತಿದೆ: ಈವರೆಗೆ ಸೋಹೋ ಸಹಾಯದಿಂದ ಸಾವಿರದ ಐದುನೂರು ಧೂಮಕೇತುಗಳನ್ನು ಪತ್ತೆಮಾಡಲಾಗಿದೆ!

ಮನುಕುಲದ ಜೀವಸೆಲೆಯಾಗಿರುವ ಸೂರ್ಯನ ಬಗ್ಗೆ ನಮ್ಮ ಅರಿವನ್ನು ವಿಸ್ತರಿಸುತ್ತಿರುವ ಸೋಹೋ ನಮಗಾಗಿ ಕಳುಹಿಸಿರುವ ಕೆಲ ಅಪರೂಪದ ಚಿತ್ರಗಳು, ನಾನು ಬರೆದ ಪುಟ್ಟ ಪರಿಚಯ ಲೇಖನದೊಡನೆ ಆಗಸ್ಟ್ ೧೩, ೨೦೦೯ರ ಸುಧಾದಲ್ಲಿ ಪ್ರಕಟವಾಗಿವೆ.

ಚಿತ್ರಕೃಪೆ: ಸೋಹೋ (ಇಎಸ್‌ಎ ಹಾಗೂ ನಾಸಾ)

ಗುರುವಾರ, ಜುಲೈ 23, 2009

ಬ್ಲಾಗ್‌ಗೊಂದು ಕಾಲ, ಮೈಕ್ರೋಬ್ಲಾಗ್‌ಗೊಂದು ಕಾಲ!

ಟಿ ಜಿ ಶ್ರೀನಿಧಿ

ಬ್ಲಾಗುಗಳು, ನಾನು-ನೀವು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದಾದ ಜಾಲತಾಣಗಳು. ಜಾಲತಾಣ ಅನ್ನುವುದಕ್ಕಿಂತ ಅಂತರಜಾಲದಲ್ಲಿರುವ ದಿನಚರಿ ಎಂದರೆ ಇನ್ನೂ ಸೂಕ್ತವೇನೋ.

ಓದಿದ ಪುಸ್ತಕ, ಇಷ್ಟವಾದ ತಿಂಡಿ, ಇಷ್ಟವಾಗದ ಚಲನಚಿತ್ರಗಳಿಂದ ಪ್ರಾರಂಭಿಸಿ ನಮ್ಮ ಹವ್ಯಾಸಗಳು, ಬರವಣಿಗೆ, ಅಭಿಪ್ರಾಯಗಳು - ಹೀಗೆ ಮನಸ್ಸಿಗೆ ಬಂದ ಯಾವುದೇ ವಿಷಯವನ್ನು ಇಡೀ ಜಗತ್ತಿನೊಡನೆ ಹಂಚಿಕೊಳ್ಳಲು ಅನುವುಮಾಡಿಕೊಟ್ಟದ್ದು ಬ್ಲಾಗುಗಳು. ನಿನ್ನೆಮೊನ್ನೆ ಗಣಕ ಬಳಸಲು ಕಲಿತವನೂ ಕೂಡ ಬಹಳ ಸುಲಭವಾಗಿ ಬ್ಲಾಗಮಂಡಲದ ಪ್ರಜೆಯಾಗಬಹುದು.

ಇತಿಹಾಸದ ದೃಷ್ಟಿಯಿಂದ ನೋಡಿದರೆ ಬ್ಲಾಗುಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿ ಹತ್ತುವರ್ಷಗಳ ಮೇಲಾಗಿದೆ. ಮೊದಲ ಕನ್ನಡ ಬ್ಲಾಗು ಸೃಷ್ಟಿಯಾಗಿದ್ದೂ ಐದಾರು ವರ್ಷಗಳ ಹಿಂದೆಯೇ. ಈಗಂತೂ ಲೇಖಕರು, ಪತ್ರಕರ್ತರು, ಅಂಕಣಕಾರರು, ತಂತ್ರಜ್ಞರು, ಹವ್ಯಾಸಿ ಬರಹಗಾರರು, ವಿವಿಧ ವಿಷಯಗಳ ಪರಿಣತರು - ಹೀಗೆ ಅನೇಕರು ಬ್ಲಾಗ್ ಪ್ರಪಂಚದಲ್ಲಿ ಸಕ್ರಿಯರಾಗಿ ಕನ್ನಡದ ಬೆಳವಣಿಗೆಗಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ; ಇವರು ಸೃಷ್ಟಿಸಿರುವ ನೂರಾರು ಬ್ಲಾಗುಗಳು ಅಂತರಜಾಲದ ಉದ್ದಗಲಕ್ಕೂ ಕನ್ನಡದ ಕಂಪನ್ನು ಪಸರಿಸುತ್ತಿವೆ.

ಗಣಕ ಜಗತ್ತಿನಲ್ಲಿ ಹತ್ತು ವರ್ಷ ಎನ್ನುವುದು ಬಹಳ ದೀರ್ಘವಾದ ಅವಧಿ. ಅದೂ ಒಂದೇ ಪರಿಕಲ್ಪನೆ ಇಷ್ಟೊಂದು ಕಾಲ ಜನಪ್ರಿಯವಾಗಿ ಉಳಿದುಕೊಳ್ಳುವುದು ಅದ್ಭುತವೇ ಸರಿ.

ಬದಲಾವಣೆಯೇ ಜಗದ ನಿಯಮ ಅಲ್ಲವೇ, ಇನ್ನು ಬ್ಲಾಗ್ ಜಗತ್ತು ಅದು ಹೇಗೆ ಬೇರೆಯಾಗಲು ಸಾಧ್ಯ?

ಹೀಗಾಗಿಯೇ ಬ್ಲಾಗ್ ಜಗತ್ತು ಈಗ ಬದಲಾಗುತ್ತಿದೆ. ಎರಡುಮೂರು ವರ್ಷಗಳ ಹಿಂದೆ ಹುಟ್ಟಿಕೊಂಡ ಹೊಸದೊಂದು ಪರಿಕಲ್ಪನೆಯ ಪುಟ್ಟ ಸಸಿ ಬ್ಲಾಗಮಂಡಲದಲ್ಲಿ ಹೊಸ ಸಂಚಲನೆ ಮೂಡಿಸಿದೆ.

ಈ ಪರಿಕಲ್ಪನೆಯ ಹೆಸರೇ ಮೈಕ್ರೋಬ್ಲಾಗಿಂಗ್ - ಪುಟ್ಟಪುಟ್ಟ ಬರಹಗಳ ಮೂಲಕ ಮಾಹಿತಿ ಸಂವಹನವನ್ನು ಇನ್ನಷ್ಟು ಸರಳ, ಕ್ಷಿಪ್ರ ಹಾಗೂ ಪರಿಣಾಮಕಾರಿಯಾಗಿಸುವ ಸುಂದರ ಪ್ರಯತ್ನ.

ಇದನ್ನು ಬ್ಲಾಗುಲೋಕದ ಎಸ್ಸೆಮ್ಮೆಸ್ ಎಂದೇ ಕರೆಯಬಹುದೇನೋ. ಸಾಮಾನ್ಯ ಬ್ಲಾಗುಗಳಿಗೂ ಮೈಕ್ರೋಬ್ಲಾಗುಗಳಿಗೂ ಇರುವ ವ್ಯತ್ಯಾಸ ಕೂಡ ಇದೇ. ಮೈಕ್ರೋಬ್ಲಾಗಿನಲ್ಲಿ ಪ್ರಕಟವಾಗುವ ಬರಹಗಳು ಎಸ್ಸೆಮ್ಮೆಸ್ಸಿನಂತೆಯೇ ೧೪೦ ಅಕ್ಷರಗಳ ಮಿತಿಯನ್ನು ಹೊಂದಿರುತ್ತವೆ. ಮೈಕ್ರೋಬ್ಲಾಗ್ ತಾಣಗಳಲ್ಲಿ ಪಠ್ಯ ಸಂದೇಶಗಳಿಗೇ ಮಹತ್ವ; ಆದರೆ ಸಾಮಾನ್ಯ ಬ್ಲಾಗುಗಳಂತೆ ಚಿತ್ರಗಳು ಹಾಗೂ ಇತರ ಕಡತಗಳನ್ನೂ ಸೇರಿಸಲು ಅನುವುಮಾಡಿಕೊಡುವ ತಾಣಗಳೂ ಇವೆ.

ಮೈಕ್ರೋಬ್ಲಾಗ್ ತಾಣಗಳಿಗೆ ಮಾಹಿತಿ ಸೇರಿಸಲು ಮೊಬೈಲ್ ಅಥವಾ ಇಮೇಲ್ ಕೂಡ ಬಳಸಬಹುದು; ಅಲ್ಲಿನ ಹೊಸ ಮಾಹಿತಿಯನ್ನೂ ಮೊಬೈಲ್‌ನಲ್ಲೇ ಪಡೆದುಕೊಳ್ಳಬಹುದು. ಹೀಗಾಗಿಯೇ ಮೈಕ್ರೋಬ್ಲಾಗ್ ತಾಣಗಳ ಜನಪ್ರಿಯತೆ ದಿನೇದಿನೇ ಹೆಚ್ಚುತ್ತಿದೆ. ನಾನೇನು ಮಾಡುತ್ತಿದ್ದೇನೆ ಅಥವಾ ಮಾಡುತ್ತಿಲ್ಲ ಎನ್ನುವುದನ್ನು ಲೋಕಕ್ಕೆಲ್ಲ ಹೇಳುವ ವೇದಿಕೆಯಾಗಿ, ಬ್ರೇಕಿಂಗ್ ನ್ಯೂಸ್ ಪಡೆಯುವ ಹೊಸ ಹಾದಿಯಾಗಿ, ಸ್ನೇಹಿತರೊಡನೆ ಹರಟೆಹೊಡೆಯುವ ಸೋಮಾರಿಕಟ್ಟೆಯಾಗಿ, ಚುನಾವಣಾ ಪ್ರಚಾರದ ಹೊಸ ರೀತಿಯಾಗಿ, ಕಡಿಮೆ ಖರ್ಚಿನ ಜಾಹೀರಾತು ಮಾಧ್ಯಮವಾಗಿ - ಒಟ್ಟಾರೆಯಾಗಿ ಮೈಕ್ರೋಬ್ಲಾಗಿಂಗ್ ಪರಿಕಲ್ಪನೆ ಅಂತರಜಾಲದ ಲೇಟೆಸ್ಟ್ ಟೆಂಡ್ ಆಗಿ ಬೆಳೆದಿದೆ. ಶಿಕ್ಷಣ ಮಾಧ್ಯಮವಾಗಿ ಹಾಗೂ ಕಚೇರಿಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಹೊಸ ಉಪಕರಣವಾಗಿಯೂ ಮೈಕ್ರೋಬ್ಲಾಗ್‌ಗಳು ಉಪಯುಕ್ತವಾಗಲಿವೆ ಎಂಬ ಅಭಿಪ್ರಾಯಗಳೂ ಇವೆ.

ಟ್ವೀಟರ್ (www.twitter.com) ಮೈಕ್ರೋಬ್ಲಾಗಿಂಗ್ ತಾಣಗಳಲ್ಲೇ ಅತ್ಯಂತ ಜನಪ್ರಿಯವಾದದ್ದು. ಟ್ವೀಟ್ಗಳೆಂಬ ಹೆಸರಿನ ಪುಟ್ಟ ಸಂದೇಶಗಳ ರೂಪದಲ್ಲಿ ಮಾಹಿತಿವಿನಿಮಯಕ್ಕೆ ಅನುವುಮಾಡಿಕೊಡುವ ವಿಶಿಷ್ಟ ತಾಣ ಇದು.

ಯಾವಾಗ ಎಲ್ಲಿಂದ ಬೇಕಾದರೂ ಸಂದೇಶಗಳನ್ನು ಕಳಿಸಿಕೊಂಡು ಗೆಳೆಯರ ಬಳಗದೊಡನೆ ಸಂಪರ್ಕದಲ್ಲಿರುವುದನ್ನು ಸಾಧ್ಯವಾಗಿಸಿರುವ ಟ್ವೀಟರ್ ತಾಣದಲ್ಲಿ ಲಕ್ಷಾಂತರ ಮಂದಿ ಸದಸ್ಯರಿದ್ದಾರೆ. ಒಂದು ನಯಾಪೈಸೆ ಆದಾಯ ಇಲ್ಲದಿದ್ದರೂ ಈ ತಾಣಕ್ಕೆ ಸುಮಾರು ನೂರು ಮಿಲಿಯ ಡಾಲರುಗಳ ಬೆಲೆ ಕಟ್ಟಲಾಗಿದೆ!

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಪ್ರಚಾರ, ಜಿ-೨೦ ಶೃಂಗಸಭೆ ಮುಂತಾದ ಅನೇಕ ಸಂದರ್ಭಗಳಲ್ಲಿ ಟ್ವೀಟರ್ ವ್ಯಾಪಕವಾಗಿ ಬಳಕೆಯಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿ. ಕೆಲಸಮಯದ ಹಿಂದೆ ಅಮೆರಿಕಾದಲ್ಲಿ ವಿಮಾನವೊಂದು ನದಿಯ ಮೇಲೆ ಇಳಿದ ಸುದ್ದಿ ಮೊದಲು ಬಂದದ್ದೇ ಟ್ವೀಟರಿನಲ್ಲಿ. ನಮ್ಮನಿಮ್ಮಂಥವರ ಜೊತೆಗೆ ಅನೇಕ ಪತ್ರಿಕೆಗಳು, ಟೀವಿ ವಾಹಿನಿಗಳು ಕೂಡ ಟ್ವೀಟರ್ ಬಳಸುತ್ತಿವೆ. ೨೦೦೯ರ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ನಮ್ಮ ರಾಜಕೀಯ ಪಕ್ಷಗಳೂ ಟ್ವೀಟರ್ ಬಳಸಿವೆ.

ಮೈಕ್ರೋಬ್ಲಾಗಿಂಗ್ ಎಂದಾಕ್ಷಣ ಟ್ವೀಟರ್ ನೆನಪಿಗೆ ಬರುವಷ್ಟು ಅದರ ಜನಪ್ರಿಯತೆ ಬೆಳೆದಿದೆ, ನಿಜ. ಆದರೆ ಮೈಕ್ರೋಬ್ಲಾಗಿಂಗ್ ಸೇವೆ ಒದಗಿಸುತ್ತಿರುವ ತಾಣ ಟ್ವೀಟರ್ ಒಂದೇ ಅಲ್ಲ. ಗೂಗಲ್‌ನ ಜೈಕು (www.jaiku.com) ಹಾಗೂ ಪ್ಲರ್ಕ್ (www.plurk.com) ಕೂಡ ಸಾಕಷ್ಟು ಹೆಸರುಮಾಡಿರುವ ಮೈಕ್ರೋಬ್ಲಾಗಿಂಗ್ ತಾಣಗಳು. ಫೇಸ್‌ಬುಕ್, ಮೈಸ್ಪೇಸ್, ಲಿಂಕ್ಡ್‌ಇನ್ ಮುಂತಾದ ತಾಣಗಳು ಕೂಡ ತಮ್ಮ ಸದಸ್ಯರಿಗೆ ಸ್ಟೇಟಸ್ ಅಪ್‌ಡೇಟ್ಸ್ ಹೆಸರಿನಲ್ಲಿ ಸಣ್ಣಪ್ರಮಾಣದ ಮೈಕ್ರೋಬ್ಲಾಗಿಂಗ್ ಸೌಲಭ್ಯ ನೀಡುತ್ತಿವೆ. ಪೋಸ್ಟೆರಸ್ (www.posterous.com) ಎಂಬಲ್ಲಂತೂ ಎಲ್ಲಿಯೂ ಲಾಗಿನ್ ಆಗುವ ಅಗತ್ಯವಿಲ್ಲದೆ ಬರಿಯ ಇಮೇಲ್ ಮೂಲಕವೇ ಮೈಕ್ರೋಬ್ಲಾಗಿಂಗ್ ಸಾಧ್ಯ!

ಸಾಮಾನ್ಯವಾಗಿ ಕೆಲವು ನೂರು ಪದಗಳಷ್ಟೆ ಇರುವ ಬ್ಲಾಗ್ ಬರಹಗಳು ತೀರಾ ಉದ್ದ, ಬೋರಿಂಗು ಎಂದ ಜನ ನೂರಾ ನಲವತ್ತು ಅಕ್ಷರಗಳನ್ನು ಓದುವುದೂ ಕಷ್ಟ ಅಂದುಬಿಟ್ಟರೆ? ಅದಕ್ಕೆ ಉತ್ತರ ಹುಡುಕಿರುವುದು ಅಡೊಕು (www.adocu.com) ಎಂಬ ತಾಣ. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು. ಹಾಗಾಗಿ ಇದು ಮೈಕ್ರೋಬ್ಲಾಗಿಂಗ್ ಅಲ್ಲ, ನ್ಯಾನೋಬ್ಲಾಗಿಂಗ್!

ನಾನೀಗಊಟಮಾಡ್ತಾಇದೀನಿ, ನೀನ್ಯಾವಾಗ್ಸಿಗ್ತೀಯ? ಎಂಬಂತಹ ಸಂದೇಶಗಳನ್ನು ಪ್ರಕಟಿಸುತ್ತಿರುವ ಈ ತಾಣ ಮೇಲ್ನೋಟಕ್ಕೆ ನಗೆತರಿಸಿದರೂ ಅಂತರಜಾಲ ಲೋಕದ ಸಾಧ್ಯತೆಗಳ ಬಗ್ಗೆ ಕುತೂಹಲವನ್ನೂ ಮೂಡಿಸಿದೆ.

ಇಲ್ಲಿ ಇನ್ನೂ ಏನೇನು ಆಗಲಿದೆಯೋ, ಬಲ್ಲವರಾರು?

ಏಪ್ರಿಲ್‌ನಲ್ಲಿ ಬರೆದ ಲೇಖನ, ಆಗಸ್ಟ್ ೨೦೦೯ರ 'ವಿಜ್ಞಾನ ಲೋಕ'ದಲ್ಲಿ ಪ್ರಕಟವಾಗಿದೆ

ಬುಧವಾರ, ಜುಲೈ 22, 2009

ನಿಮಗೆ ಗೊತ್ತೆ, ಬ್ಯಾಕ್ಟೀರಿಯಾ ಅರಿಷಡ್ವರ್ಗ?

ಬೇಳೂರು ಸುದರ್ಶನ

ಬ್ರೆಝಿಲ್ ದೇಶದ ಸುಂದರಿ ಮಾರಿಯಾನಾ ಬ್ರೀಡಿ ಡ ಕಾಸ್ಟಾ ೨೦೦೮ರ ಡಿಸೆಂಬರ್ ೩೦ರಂದು ಮೂತ್ರಕೋಶದ ಕಲ್ಲಿನ ಸಮಸ್ಯೆಗಾಗಿ ಆಸ್ಪತ್ರೆ ಸೇರಿದಳು. ೨೦೦೯ರ ಜನವರಿ ೩ನೇ ತಾರೀಖು ಅವಳ ಅಂಗಾಂಶಗಳಿಗೆ ಸಾಕಷ್ಟು ಗಾಸಿಯಾಗಿದೆ ಎಂದು ಪತ್ತೆಯಾಯಿತು. ಮೊದಲು ಅವಳ ಕೈ ಕತ್ತರಿಸಿದ ವೈದ್ಯರು ಆಮೇಲೆ ಕಾಲುಗಳನ್ನೂ ಬಿಡಲಿಲ್ಲ. ಕೊನೆಗೆ ಹೊಟ್ಟೆ, ಮೂತ್ರಪಿಂಡಗಳನ್ನು ಕತ್ತರಿಸಿ ತೆಗೆದರು. ರೆಸ್ಪಿರೇಟರ್ ಮೂಲಕ ಉಸಿರಾಡುತ್ತಿದ್ದ ಮಾರಿಯಾನಾ ಜನವರಿ ೨೪ರಂದು ಇಹಲೋಕ ತ್ಯಜಿಸಬೇಕಾಯಿತು. ಆಕೆ ತನ್ನ ೨೦ನೇ ವಯಸ್ಸಿನಲ್ಲೇ ಹಠಾತ್ತನೆ ಸತ್ತಿದ್ದಕ್ಕೆ ಸ್ಯೂಡೋನಾಮಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾವೇ ಕಾರಣ ಎಂಬುದೀಗ ದೃಢಪಟ್ಟಿದೆ.

ಮೊನ್ನೆ ವೈರಲ್ ಫಿವರ್‌ಗೆ ತುತ್ತಾಗಿ ಡಯಾಗ್ನಾಸ್ಟಿಕ್ ಸೆಂಟರ್‌ನಿಂದ ವರದಿಯೊಂದನ್ನು ಪಡೆದಾಗ ನನ್ನ ದೇಹದಲ್ಲಿ ಸ್ಯೂಡೋಮೋನಾಸ್ ಏರುಗಿನೋಸಾ ಎಂಬ ಬ್ಯಾಕ್ಟೀರಿಯಾ ಮನೆ ಮಾಡಿದೆ ಎಂದು ಗೊತ್ತಾಗಿ ಗಾಬರಿ ಬಿದ್ದೆ. ಈ ಬ್ಯಾಕ್ಟೀರಿಯಾ ನಾಶಕ್ಕೆ ಆಂಟಿ-ಬಯಾಟಿಕ್ ತಗೊಳ್ಳಲೇಬೇಕು ಕಣೋ ಎಂದು ವೈದ್ಯಮಿತ್ರ ಹೇಳಿದಾಗ ವಿಧಿಯಿಲ್ಲದೆ ಕ್ಯಾಪ್ಸೂಲು, ಮಾತ್ರೆ ನುಂಗತೊಡಗಿದೆ. ಬ್ಯಾಕ್ಟೀರಿಯಾ ಕೊಟ್ಟ ನೋವು ಸಾಕಷ್ಟು ಕಡಿಮೆಯಾಗಿದೆ.

ಈ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾದ ಬಗ್ಗೆ ಏನಾದ್ರೂ ಮಾಹಿತಿ ಸಿಗುತ್ತಾ ಎಂದು ಇಂಟರ್‌ನೆಟ್ ಜಾಲಾಡಿದೆ. ಸಿಗೋದೇನು.... ಪುಟಗಟ್ಟಳೆ ಪ್ರಬಂಧಗಳು, ಸುದ್ದಿಗಳು, ಲೇಖನಗಳು, ವಿಶ್ಲೇಷಣೆಗಳು ಕಂಡವು! ಈ ಮಾಹಿತಿಗಳನ್ನೆಲ್ಲ ಓದ್ತಾ ಇದ್ದ ಹಾಗೆ ಗೊತ್ತಾದ ವಿಷಯ ಏನಪ್ಪಾ ಅಂದ್ರೆ.......

ಮನುಕುಲವನ್ನು ಕಾಡುತ್ತಿರುವ ಆರು ಭಯಾನಕ ಕೀಟಾಣುಗಳಲ್ಲಿ ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ ಕೂಡಾ ಒಂದು! ಈ ಬ್ಯಾಕ್ಟೀರಿಯಾ ಆಕ್ರಮಣವಾದ್ರೆ ಸಾವೂ ಬರಬಹುದು ಎಂದು ಒಂದು ವೈದ್ಯಕೀಯ ಮಾಹಿತಿ ಜಾಲತಾಣ ಪ್ರಕಟಿಸಿದ್ದನ್ನು ನೋಡಿ ದಿಗಿಲು ಬಿದ್ದೆ. ಮತ್ತೆ ವೈದ್ಯಮಿತ್ರನಿಗೆ ಫೋನ್ ಹೊಡೆದೆ.

ಅಂತೂ ಈ ಬ್ಯಾಕ್ಟೀರಿಯಾ ಡೇಂಜರಸ್ ಅನ್ನೋದು ತಿಳೀತಲ್ವ? ಗಾಬ್ರಿ ಆಗ್ಬೇಡ. ಅದೆಲ್ಲ ಪಾಶ್ಚಾತ್ಯ ವೆಬ್‌ಸೈಟ್‌ಗಳ ಹೇಳಿಕೆ. ಭಾರತೀಯರು ಹೆರ್ಡ್ ಕಮ್ಯುನಿಟಿಗೆ ಸೇರಿದವರು. ನಾಟಿ ಜನ. ಆದ್ದರಿಂದ ನಮ್ಮಲ್ಲಿ ಇಮ್ಯುನಿಟಿ ಶಕ್ತಿ ಹೆಚ್ಚು. ಅಮೆರಿಕಾದಲ್ಲಾಗಿದ್ದರೆ ನಿನ್ನ ವಿಮಾ ಏಜೆಂಟರೆಲ್ಲ ಹೌಹಾರಿ ಓಡಿಹೋಗ್ತಿದ್ದರು ಎಂದು ಆತ ಹೇಳಿದ್ದು ಸಮಾಧಾನವೋ, ತಣ್ಣನೆಯ ಬೆದರಿಕೆಯೋ ಗೊತ್ತಾಗಲಿಲ್ಲ. ಮಾರಿಯಾನಾ ಬಗ್ಗೆ ಜನವರಿಯಲ್ಲೇ ಓದಿ ಮರುಕಪಟ್ಟಿದ್ದ ನನಗೆ ಅವಳ ಸಾವಿನ ಕಾರಣ ಗೊತ್ತಾಗಿದ್ದೇ ಈಗ.... ಈ ಬ್ಯಾಕ್ಟೀರಿಯಾ ನನ್ನನ್ನೂ ಆವರಿಸಿದೆ ಎಂಬುದು ಕೊಂಚ ದಿಗಿಲು ಹುಟ್ಟಿಸೋ ವಿಚಾರಾನೇ ಅಂದುಕೊಳ್ಳಿ.

ಹೇಗೂ ಇರಲಿ ಅಂದುಕೊಂಡು ಈ ಅರಿ ಷಡ್ವರ್ಗಗಳ ಬಗ್ಗೆ ಮಾಹಿತಿ ಓದಿ, ಅದನ್ನೆಲ್ಲ ಕ್ರೋಡೀಕರಿಸಿ ಕೊಡ್ತಾ ಇದೀನಿ. ಮೋಡ ಕವಿದ, ಥಂಡಿ ಗಾಳಿ ಬೀಸಿ ಎಲ್ಲೆಲ್ಲೂ ವೈರಲ್ ಫಿವರ್ ಹಾವಳಿ ಹೆಚ್ಚಾದ ಈ ಹೊತ್ತಿನಲ್ಲಿ ಬಾಳೆ ದಿಂಡಿನ ರಸ ಕುಡೀತಾ ಇದನ್ನು ಓದಿ ! ಫೋರ್ಬಿಸ್ ಮ್ಯಾಗಜಿನ್‌ನಲ್ಲೇ ಈ ಟಾಪ್ ರೇಟೆಡ್ ಕೀಟಾಣುಗಳ ಬಗ್ಗೆ ಸ್ಲೈಡ್ ಶೋ ಇದೆ ಅಂದ್ರೆ ಅವು ಎಂಥ ಸ್ಟೇಟಸ್ ಪಡೆದಿವೆ ಅನ್ನೋದನ್ನು ಊಹಿಸಿ...

ಸ್ಯೂಡೋನಾಮಸ್ ಏರುಗಿನೋಸಾ ಬ್ಯಾಕ್ಟೀರಿಯಾ

ಇದು ಶ್ವಾಸಕೋಶ, ಮೂತ್ರನಾಳ ಇಲ್ಲೆಲ್ಲ ಮನೆಮಾಡುತ್ತೆ. ಸಾಮಾನ್ಯವಾಗಿ ಆಸ್ಪತ್ರೆಯಲ್ಲೇ ಈ ಬ್ಯಾಕ್ಟೀರಿಯಾ ಇರುತ್ತಂತೆ! ಸಿಪ್ರೋ, ಲೆವಾಕ್ವಿನ್, ನೋರ್‌ಫ್ಲಾಕ್ಸಾಸಿನ್ ಮುಂತಾದ ಆಚಿಟಿ ಬಯಾಟಿಕ್‌ಗಳಿಗೆ ಪ್ರತಿರೋಧ ಬೆಳೆಸಿಕೊಂಡಿರೋ ಈ ಬ್ಯಾಕ್ಟೀರಿಯಾ ಉಳಿದೈದು ಕೀಟಾಣುಗಳಿಗಿಂತ ತುಂಬಾ ಬೇಗ ಔಷಧಿಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುತ್ತೆ. ಅಂಥ ಬ್ಯಾಕ್ಟೀರಿಯಾ ಶ್ವಾಸಕೋಶಕ್ಕೆ ತಗುಲಿದರೆ, ಶ್ವಾಸಕೋಶವನ್ನೇ ಬದಲಿಸಬೇಕಂತೆ.

ಮೆಥಿಸಿಲಿನ್ ಪ್ರತಿರೋಧಕ ಶಕ್ತಿಯ ಸ್ಟಾಫಿಲೋಕೋಕಸ್ ಆರೆಯಸ್ (ಎಂ ಎಸ್ ಆರ್ ಎ)

ಇದು ಅಮೆರಿಕಾದಲ್ಲಿ ಪ್ರತಿವರ್ಷ ಒಂದು ಲಕ್ಷ ಜನರಿಗೆ ತಗುಲುವ ಕಿಲ್ಲರ್ ಬ್ಯಾಕ್ಟೀರಿಯಾ.

ಎಸ್‌ಶೀರಿಯಾ ಕೋಲಿ ಮತ್ತು ಕೆಬ್‌ಸೀಲಾ

ಇದೂ ಮೂತ್ರನಾಳದಲ್ಲೇ ಕಾಲೋನಿ ಕಟ್ಟುತ್ತೆ. ಕರುಳುಬೇನೆ ಇದ್ದವರನ್ನು, ಗಾಯಗೊಂಡವರನ್ನು ಬಿಡೋದಿಲ್ಲ.

ಅಸಿನೆಟೋಬ್ಯಾಕ್ಟರ್ ಬಾಮಾನ್ನಿ

ಇರಾಕಿನಿಂದ ಬಂದ ಸೈನಿಕರನ್ನೇ ಆಕ್ರಮಣ ಮಾಡಿದ ಬ್ಯಾಕ್ಟೀರಿಯಾ ಇದು. ನ್ಯೂಮೋನಿಯಾ ಕಾಯಿಲೆಗೆ ಈ ಬ್ಯಾಕ್ಟೀರಿಯಾವೂ ಕಾರಣ. ಇದಕ್ಕೂ ಖಚಿತ ಔಷಧಿ ಅಂತ ಇಲ್ಲ.

ಆಸ್ಪರ್‌ಗಿಲ್ಲಿಸ್

ಕ್ಯಾನ್ಸರ್ ರೋಗಿಗಳು, ಅಂಗಾಂಗ ಕಸಿ ಮಾಡಿಕೊಂಡವರು, ಕಡಿಮೆ ಪ್ರತಿರೋಧಕ ಶಕ್ತಿ ಇರೋರು ಇಂಥವರಿಗೆ ಈ ಫಂಗಸ್ (ಇದು ಬ್ಯಾಕ್ಟೀರಿಯಾ ಅಲ್ಲ) ತಗುಲುತ್ತದೆ.

ವ್ಯಾಂಕೋಮೈಸಿನ್ ಪ್ರತಿರೋಧ ಶಕ್ತಿಯ ಎಂಟೆರೋಕಾಕಸ್ ಫೀಸಿಯಮ್ ( ವಿ ಆರ್ ಇ)

ಹೃದಯ, ಮೆದುಳು ಮತ್ತು ಕಿಬ್ಬೊಟ್ಟೆಯಲ್ಲಿ ಈ ಬ್ಯಾಕ್ಟೀರಿಯಾ ವಾಸಿಸುತ್ತದೆ. ಅಮೆರಿಕಾದ ಶೇ. ೧೦ರಷ್ಟು ರೋಗಿಗಳಲ್ಲಿ ಈ ಬ್ಯಾಕ್ಟೀರಿಯಾ ವಾಸಿಸಿದ್ದನ್ನು ಗುರುತಿಸಿದ್ದಾರೆ.

ಈ ಆರು ಕೀಟಾಣುಗಳಿಂದ ಅಮೆರಿಕಾದಲ್ಲೇ ಪ್ರತಿವರ್ಷ ೯೦ ಸಾವಿರ ಜನ ಸಾಯುತ್ತಿದ್ದಾರೆ.

ವಿಶ್ವದಾದ್ಯಂತ ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬ್ಯಾಕ್ಟೀರಿಯಾದ ಸೋಂಕಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಾಂಕ್ರಾಮಿಕ ರೋಗತಜ್ಞ, ಗ್ರೀಸ್ ದೇಶದ ಆಲ್ಫಾ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಸೈನ್ಸಸ್‌ನ ನಿರ್ದೇಶಕ ಮ್ಯಾಥ್ಯೂ ಫಲಗಾಸ್ ಹೇಳುತ್ತಾರೆ.

ಪರಿಹಾರಕ್ಕಾಗಿ ತಡಕಾಟ

ಇಂಥ ಬ್ಯಾಕ್ಟೀರಿಯಾಗಳ ವಿರುದ್ಧ ಔಷಧರಂಗ ಸಮರ ಸಾರುತ್ತಿದೆ. (ಕ್ಷಮಿಸಿ, ಈ ಔಷಧ ರಂಗವೂ ಒಂದು ರ್‍ಯಾಕೆಟ್ ಅಲ್ಲವೆ ಇತ್ಯಾದಿ ವಿಷಯಗಳು ಈ ಲೇಖನದ ಮಿತಿಯಾಚೆ ಇವೆ)

ಸ್ಯೂಡೋನಾಮಸ್ ಏರುಗಿನೋಸಾವು ಶ್ವಾಸಕೋಶದಲ್ಲಿದ್ದರೆ ಅದನ್ನು ನಿವಾರಿಸಲು ಕೇಸ್ಟನ್ (ಸಿ ಎಕ್ಸ್ ಎ ೧೦೧) ಎಂಬ ಪುಡಿಯನ್ನು ಕ್ಯಾಲಿಕ್ಸಾ ಥೆರೋಪೇಟಿಕ್ಸ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿದೆಯಂತೆ.

ಈ ಥರ ಔಷಧಿಗಳಿಗೇ ಸೆಡ್ಡು ಹೊಡೆಯುವ ಕೀಟಾಣುಗಳಿಗೆ ಔಷಧ ತಯಾರಿಸಲು ೭೭ ಲಕ್ಷ ಯೂರೋ (ಸುಮಾರು ೫೨ ಕೋಟಿ ರೂ.) ವೆಚ್ಚದಲ್ಲಿ ಸ್ಪೇನ್, ಜರ್ಮನಿ, ಫ್ರಾನ್ಸ್ ಮತ್ತು ಬಲ್ಗೇರಿಯಾ ದೇಶಗಳ ಆರು ಸಂಸ್ಥೆಗಳು ಒಗ್ಗೂಡಿ ಸಂಶೋಧನೆ ನಡೆಸಲಿವೆ. ಇನ್ನು ನಾಲ್ಕು ವರ್ಷಗಳಲ್ಲಿ ಈ ಸಂಶೋಧನೆಗಳು ಒಂದು ಹಂತಕ್ಕೆ ಬರಬಹುದು. ಮುಖ್ಯವಾಗಿ ಸ್ಯೂಡೋನಾಮಸ್ ಏರುಗಿನೋಸಾ ಮತ್ತು ಅಸಿನೆಟೋಬ್ಯಾಕ್ಟರ್ ಬಾಮಾನ್ನಿ ಬಗ್ಗೆಯೇ ಈ ಸಂಶೋಧನೆಗಳು ನಡೆಯಲಿವೆ. ಈ ಯೋಜನೆಗೆ ಆಂಟಿ ಪ್ಯಾಥೋ ಜಿ ಎನ್ ಎಂದು ಕರೆದಿದ್ದಾರೆ.

ಹಾಗಾದರೆ ಬಾಳೆ ದಿಂಡಿನ ರಸ ಯಾಕೆ ಕುಡೀಬೇಕು ಎಂದು ನೀವೀಗ ಕೇಳಬಹುದು

ಬಾಳೆ ದಿಂಡಿನ ರಸವು ಮೂತ್ರಕೋಶದ ಕಲ್ಲುಗಳನ್ನು ನಿವಾರಿಸಲು ಅತ್ಯಂತ ಶಕ್ತಿಯುತವಾದ ಪರಿಹಾರ ಎಂದು ಸಂಶೋಧನೆಗಳು ದೃಢಪಡಿಸಿವೆ. ಯಾಕೆಂದರೆ ಬಾಳೆ ದಿಂಡಿನ ರಸದ ಚಿಕಿತ್ಸೆಯ ಬಗ್ಗೆ ಆಯುರ್ವೇದದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ವಿವರಣೆಗಳಿವೆ. ಸ್ಯೂಡೋನಾಮಸ್ ಏರುಗಿನೋಸಾ ವಿರುದ್ಧವೂ ಬಾಳೆ ದಿಂಡಿನ ರಸ ಸಮರ್ಥವಾಗಿ ಕೆಲಸ ಮಾಡುತ್ತದೆ. ಇದಕ್ಕೆ, ಈಗ ಆರಾಮಾಗಿ ಲೇಖನ ಬರೆಯುತ್ತಿರುವ ನಾನೇ ಸಾಕ್ಷಿ ! ದಿನಾ ಬೆಳಗ್ಗೆ ಮತ್ತು ರಾತ್ರಿ ಒಂದು ಲೋಟ ಬಾಳೆ ದಿಂಡಿನ ರಸವನ್ನು ಕುಡಿಯುತ್ತೇನೆ. ಆಂಟಿ ಬಯಾಟಿಕ್‌ನನ್ನೇ ನಂಬಿ ಕೂರುವುದಕ್ಕೆ ಸಾಧ್ಯವೆ? ಅದರಲ್ಲೂ ವಿಜ್ಞಾನಿಗಳೇ ಕೈ ಚೆಲ್ಲಿ ಕೂತಿರೋವಾಗ!

ಕ್ರೆಡಿಟ್ ಕಾರ್ಡ್ ಸುರಕ್ಷೆಗೆ ಹೊಸದೊಂದು ಉಪಾಯ

ಟಿ ಜಿ ಶ್ರೀನಿಧಿ

ಕ್ರೆಡಿಟ್ ಕಾರ್ಡು ಬಳಸುವುದು ಎಷ್ಟು ಅನುಕೂಲಕರವೋ ಅಷ್ಟೇ 'ರಿಸ್ಕಿ' ಎಂದು ಎಲ್ಲರೂ ಒಪ್ಪುತ್ತಾರೆ. ಅಂತರಜಾಲದಲ್ಲಿ ಬಳಸುವಾಗಲಂತೂ ಈ ರಿಸ್ಕು ಇನ್ನೂ ಹೆಚ್ಚು. ಕ್ರೆಡಿಟ್ ಕಾರ್ಡ್ ನಿಮ್ಮ ಬಳಿಯಲ್ಲೇ ಭದ್ರವಾಗಿರುವಾಗಲೂ ನಿಮ್ಮ ಕಾರ್ಡ್ ಸಂಖ್ಯೆ, ಮಾನ್ಯತೆಯ ಅವಧಿ ಹಾಗೂ ಕಾರ್ಡ್ ಪರಿಶೀಲಿಸುವ ಸಂಕೇತ(ಸಿವಿವಿ) - ಈ ಮೂರನ್ನೂ ಬಲ್ಲ ಯಾರು ಬೇಕಿದ್ದರೂ ನಿಮ್ಮ ಲೆಕ್ಕದಲ್ಲಿ ಶಾಪಿಂಗ್ ಮಾಡಿಬಿಡಬಹುದು!

ಈ ಎಲ್ಲ ಮಾಹಿತಿಯೂ ಕ್ರೆಡಿಟ್ ಕಾರ್ಡಿನ ಮೇಲೆಯೇ ಮುದ್ರಿತವಾಗಿರುವುದು ತಲೆನೋವಿನ ಸಂಗತಿ. ವಿವಿಧ ಸ್ಥಳಗಳಲ್ಲಿ ಕಾರ್ಡ್ ಬಳಸುವಾಗ ಈ ಮಾಹಿತಿಯನ್ನು ಯಾರು ಬೇಕಾದರೂ ಕದಿಯುವುದು ಸಾಧ್ಯ. ಹೀಗಾಗಿಯೇ ಅಂತರಜಾಲದಲ್ಲಿ ಕ್ರೆಡಿಟ್ ಕಾರ್ಡ್ ಅವ್ಯವಹಾರಗಳು ತೀರಾ ವ್ಯಾಪಕವಾಗಿ ನಡೆಯುತ್ತವೆ. ಒಂದು ಅಂದಾಜಿನ ಪ್ರಕಾರ ೨೦೦೮ರಲ್ಲಿ ನಡೆದ ಇಂತಹ ಅವ್ಯವಹಾರದ ಒಟ್ಟು ಮೊತ್ತ ೨೩೦೦ ಕೋಟಿ ರೂಪಾಯಿಗೂ ಹೆಚ್ಚು.

ಇಷ್ಟೆಲ್ಲ ದೊಡ್ಡ ಪ್ರಮಾಣದ ಅವ್ಯವಹಾರವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಕ್ರೆಡಿಟ್ ಕಾರ್ಡಿನ ಮೇಲೆ ಮುದ್ರಿತವಾಗಿರುವ ಮಾಹಿತಿಯ ಜೊತೆಗೆ ಇನ್ನೊಂದು ರಹಸ್ಯ ಸಂಕೇತವನ್ನೂ ಬಳಸುವಂತೆ ಮಾಡುವ ಮಾಸ್ಟರ್‌ಕಾರ್ಡ್ ಸೆಕ್ಯೂರ್‌ಕೋಡ್, ವೆರಿಫೈಡ್ ಬೈ ವೀಸಾ ಮುಂತಾದ ವ್ಯವಸ್ಥೆಗಳು ಬಳಕೆಗೆ ಬಂದಿರುವುದೂ ಇದೇ ಉದ್ದೇಶದಿಂದ.

ವಿಶ್ವವಿಖ್ಯಾತ ಕ್ರೆಡಿಟ್ ಕಾರ್ಡ್ ಸಂಸ್ಥೆ ವೀಸಾ ಈ ನಿಟ್ಟಿನಲ್ಲಿ ಇನ್ನೊಂದು ವಿಶಿಷ್ಟ ಪ್ರಯತ್ನ ಕೈಗೊಂಡಿದೆ. ಆಸ್ಟ್ರೇಲಿಯಾ ಮೂಲದ ಈಮ್ಯೂ ಟೆಕ್ನಾಲಜೀಸ್ ಎಂಬ ಸಂಸ್ಥೆ ಈ ಪ್ರಯತ್ನದಲ್ಲಿ ವೀಸಾ ಜೊತೆ ಕೈಗೂಡಿಸಿದೆ.

ಈಮ್ಯೂ ಸಂಸ್ಥೆ ತಯಾರಿಸಿರುವ ಹೊಸ ಬಗೆಯ ಕಾರ್ಡು ಈ ಪ್ರಯತ್ನದ ವೈಶಿಷ್ಟ್ಯ. ಕಾರ್ಡಿನಲ್ಲೇ ಅಳವಡಿಸಲಾಗಿರುವ ವಿಶೇಷ ವ್ಯವಸ್ಥೆ ಪ್ರತಿ ಬಾರಿ ಪಾವತಿ ಮಾಡಲು ಪ್ರಯತ್ನಿಸಿದಾಗಲೂ ಹೊಸತೊಂದು ಸಂಖ್ಯೆಯನ್ನು ಪ್ರದರ್ಶಿಸುತ್ತದೆ. ಈ ಸಂಖ್ಯೆಯನ್ನು ಉಪಯೋಗಿಸಿದಾಗ ಮಾತ್ರ ಅಂತರಜಾಲತಾಣಗಳು ಕಾರ್ಡ್ ಬಳಕೆಯನ್ನು ಮಾನ್ಯಮಾಡುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು ಬಳಸುವವರು ಈ ಕಾರ್ಡಿನ ದುರ್ಬಳಕೆ ಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ.

ಈ ವಿಶೇಷ ಸಂಖ್ಯೆಯನ್ನು ಪಡೆಯಲು ನಮ್ಮ ಪಿನ್ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕಾಗಿ ಕಾರ್ಡಿನಲ್ಲಿ ಒಂದು ಪುಟ್ಟ ಕೀಲಿಮಣೆಯನ್ನೂ ಅಳವಡಿಸಲಾಗಿದೆ. ಬಹುರಾಷ್ಟ್ರೀಯ ಸಂಸ್ಥೆಯೊಂದರ ಐನೂರು ಉದ್ಯೋಗಿಗಳು ಸದ್ಯ ಈ ತಂತ್ರಜ್ಞಾನವನ್ನು ಪರೀಕ್ಷಾರ್ಥವಾಗಿ ಬಳಸುತ್ತಿದ್ದಾರೆ. ಅವರ ಪರೀಕ್ಷೆಗಳೆಲ್ಲ ಯಶಸ್ವಿಯಾಗಿ ಮುಗಿದ ಮೇಲೆ ಈ ಕಾರ್ಡುಗಳು ವಿಶ್ವದೆಲ್ಲೆಡೆ ಲಭ್ಯವಾಗಲಿವೆ.

ಪ್ರತಿಬಾರಿ ಬಳಸುವಾಗಲೂ ಪಿನ್ ಸಂಖ್ಯೆ ದಾಖಲಿಸಿ ಹೊಸ ಸಂಕೇತ ಪಡೆಯಬೇಕಾದ 'ಸೆಕ್ಯೂರ್ ಐಡಿ' ಕಾರ್ಡುಗಳು ಗಣಕ ಜಾಲಗಳಿಗೆ ಸುರಕ್ಷಿತ ಪ್ರವೇಶ ಕಲ್ಪಿಸಲು ಈಗಾಗಲೇ ಯಶಸ್ವಿಯಾಗಿ ಬಳಕೆಯಾಗುತ್ತಿವೆ. ಹೀಗಾಗಿ ಕ್ರೆಡಿಟ್ ಕಾರ್ಡುಗಳಲ್ಲೂ ಈ ಪರಿಕಲ್ಪನೆ ಯಶಸ್ಸು ಕಾಣುವ, ಹಾಗೂ ಕೋಟ್ಯಂತರ ರೂಪಾಯಿಗಳ ಅವ್ಯವಹಾರಕ್ಕೆ ತಡೆಹಾಕುವ ನಿರೀಕ್ಷೆಯಿದೆ.

ಜುಲೈ ೨೨, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಗುರುವಾರ, ಜುಲೈ 16, 2009

ಐ.ಸಿ.ಗೆ ಐವತ್ತು!

ಬೇಳೂರು ಸುದರ್ಶನ

ಇಂಟೆಗ್ರೇಟೆಡ್ ಸರ್ಕೂಟ್‌ಗೆ (ಐ ಸಿ) ೫೦ ವರ್ಷ ಆಯ್ತು. ಈಗ ಸಂಭ್ರಮಾಚರಣೆಯ ಸಮಯ!

ನಾನು, ನೀವು, ಜಗತ್ತಿನ ಕೋಟ್ಯಂತರ ಜನ ಬಳಸ್ತಾ ಇರೋ ಕಂಪ್ಯೂಟರುಗಳು ಕುಬ್ಜವಾಗಲು, ಮೊಬೈಲ್‌ಗಳ ಸರ್ಕೂಟ್‌ಗಳು ಮತ್ತಷ್ಟು ಚಪ್ಪಟೆಯಾಗಲು ಕಾರಣವಾದ ಈ ಇಂಟೆಗ್ರೇಟೆಡ್ ಸರ್ಕೂಟ್ ಪರಿಕಲ್ಪನೆ ಮೂಡಿ, ಅದು ಕಾರ್ಯಗತವಾಗಿ, ನಂಬಲಸಾಧ್ಯ ಪ್ರಕ್ರಿಯೆಗಳ ಮೂಲಕ ಕಣ್ಣಿಗೆ ಕಾಣಿಸುವ ಸಾಧನವಾದ ಕಥೆ ನಿಜಕ್ಕೂ ರೋಚಕ. ಥ್ರಿಲ್ಲರ್ ಸಿನೆಮಾ ಥರ!

ಈ ಐ ಸಿ ಸಂಶೋಧನೆಗೆ ಮೂಲ ಕಾರಣ ವಿಜ್ಞಾನರಂಗದಲ್ಲಿ ಅಷ್ಟ ದ್ರೋಹಿಗಳು ಎಂದೇ ಖ್ಯಾತರಾದ ಎಂಟು ವಿಜ್ಞಾನಿಗಳ ಬಂಡಾಯ!

೧೯೫೭ನೇ ಇಸವಿ. ಟ್ರಾನ್ಸಿಸ್ಟರ್‌ನ್ನು ಕಂಡು ಹಿಡಿದಿದ್ದಕ್ಕೆ ಹಿಂದಿನ ವರ್ಷವಷ್ಟೇ ನೋಬೆಲ್ ಪ್ರಶಸ್ತಿ ಬಂದಿತ್ತು. ಮೌಂಟನ್ ವ್ಯೂನಲ್ಲಿದ್ದದ ಶಾಕ್‌ಲೇ ಸೆಮಿಕಂಡಕ್ಟರ್ ಲ್ಯಾಬೋರೇಟರಿ ಸಂಸ್ಥೆಯಲ್ಲಿದ್ದ ಎಂಟು ವಿಜ್ಞಾನಿಗಳು ರಾಜೀನಾಮೆ ಬಿಸಾಕಿ ಹೊರಬಂದರು. ಅವರೇ ಜ್ಯೂಲಿಯಸ್ ಬ್ಲಾಂಕ್, ವಿಕ್ಟರ್ ಗ್ರಿನಿಶ್, ಜೀನ್ ಹೋಯೆರ್ನಿ, ಯೂಜೀನ್ ಕ್ಲೈನರ್, ಜೇ ಲಾಸ್ಟ್, ಗೋರ್ಡೋನ್ ಮೂರ್, ರಾಬರ್ಟ್ ನಾಯ್ಸ್ ಮತ್ತು ಶೆಲ್ಡನ್ ರಾಬರ್ಟ್ಸ್.

ವಿಲಿಯಂ ಶಾಕ್‌ಲೇ ಏನೂ ಕಡಿಮೆ ಆಸಾಮಿಯಲ್ಲ; ಟ್ರಾನ್ಸಿಸ್ಟರ್ನ ಅಧಿಕೃತ ಸ್ವರೂಪವನ್ನು ಕಂಡು ಹಿಡಿದಾತ! ಈ ಸಂಶೋಧನೆಗೆಂದೇ ಅವನಿಗೆ ಜಾನ್ ಬಾರ್ಡೀನ್ ಮತ್ತು ವಾಲ್ಟರ್ ಹೌಸರ್ ಬ್ರಿಟ್ಟನ್ ಜೊತೆಸೇರಿ ನೋಬೆಲ್ ಬಂದಿದ್ದು.

ಈ ಎಂಟು ವಿಜ್ಞಾನಿಗಳು ಇಂಥ ಪ್ರಚಂಡ ವಿಜ್ಞಾನಿಯ ಸಂಸ್ಥೆಗೇ ಸೆಡ್ಡು ಹೊಡೆದು ಫೇರ್‌ಚೈಲ್ಡ್ ಸೆಮಿಕಂಡಕ್ಟರ್ ಕಾರ್ಪೋರೇಶನ್ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಶಾಕ್‌ಲೇಯ ವಿಚಿತ್ರ ವರ್ತನೆಗಳೇ ಇವರ ಈ ಬಂಡಾಯಕ್ಕೆ ಕಾರಣ ಎಂದು ಇತಿಹಾಸ ಹೇಳುತ್ತದೆ.

ಏನೇ ಇರಲಿ, ಫೇರ್‌ಚೈಲ್ಡ್ ಸಂಸ್ಥೆಯಲ್ಲಿ ಸಂಶೋಧನೆಗಳು ಚಿಗುರಿದವು. ಸಿಲಿಕಾನ್ ಸರ್ಕೂಟ್‌ಗಳೇನೋ ಆಗ ಚಾಲ್ತಿಯಲ್ಲಿದ್ದವು. ಆಗ ಜೀನ್ ಹೋಯೆರ್ನಿಯನ್ನು ಉಳಿದವರು ಅಷ್ಟಾಗಿ ಪರಿಗಣಿಸಿರಲಿಲ್ಲ. ಆತ ಎಷ್ಟಂದ್ರೂ ಥಿಯರಿ ವಿಜ್ಞಾನಿ. ಪ್ರಾಯೋಗಿಕವಾಗಿ ಅಂಥದ್ದೇನನ್ನೂ ಮಾಡುತ್ತಿರಲಿಲ್ಲ. ಆದರೆ ಆತ ಒಂದು ಸಲ ಈ ಟ್ರಾನ್ಸಿಸ್ಟರ್‌ಗಳಲ್ಲಿ ಬಳಸುತ್ತಿದ್ದ ಸಿಲಿಕಾನ್ ಆಕ್ಸೈಡ್‌ನ್ನು ಒರೆಸಿಹಾಕದೇ ಹಾಗೇ ಉಳಿಸಿಕೊಂಡರೆ ಹ್ಯಾಗಿರುತ್ತೆ ಎಂದು ಮೂಸೆಯಲ್ಲಿ ಕಷ್ಟಪಡುತ್ತಿದ್ದ ಇತರೆ ವಿಜ್ಞಾನಿಗಳನ್ನು ಕೇಳಿದ್ದ. ಛೆ, ಛೆ, ಎಲ್ಲಾದ್ರೂ ಉಂಟೆ, ಅದನ್ನು ಕ್ಲೀನ್ ಮಾಡ್ಲೇಬೇಕು ಎಂದು ಅವನ ಸ್ನೇಹಿತರು ಹೇಳಿದ್ದರು. ಈ ಥರ ಸರ್ಕೂಟ್‌ಗಳನ್ನು ಪದರ ಪದರವಾಗಿ ಮಾಡೋದರ ಬಗ್ಗೆ ಪ್ರಬಂಧ ಬರೆದ ಹೋಯೆರ್ನಿ ಇದನ್ನು ಪ್ಲೇನಾರ್ ಪ್ರಕ್ರಿಯೆ ಅಂತ ಕರೆದ.

ಹೀಗೇ ಒಂದೂವರೆ ವರ್ಷ ಕಳೆದ ಮೇಲೆ ಒಂದು ದಿನ ಬಾಬ್ ನಾಯ್ಸ್‌ಗೆ ಹೋಯೆರ್ನಿಯ ಸಿದ್ಧಾಂತವನ್ನು ಕಾರ್ಯಗತ ಮಾಡುವ ಉಪಾಯ ಹೊಳೆದೇ ಬಿಟ್ಟಿತು. ಆಕ್ಸೈಡನ್ನು ಹಾಗೇ ಬಿಟ್ಟರೆ ವಿವಿಧ ಟ್ರಾನ್ಸಿಸ್ಟರ್‌ಗಳ ನಡುವೆ ಅಂತರ್ ಸಂಪರ್ಕ ಉಳಿದುಕೊಳ್ಳುತ್ತೆ; ಹಾಗೇ ಈ ಟ್ರಾನ್ಸಿಸ್ಟರ್‌ಗಳನ್ನು ಪ್ರತ್ಯೇಕವಾಗಿಯೂ ಇಟ್ಟುಕೊಳ್ಳಬಹುದು ಅನ್ನೋ ಸೂತ್ರವನ್ನು ರಾಬರ್ಟ್ ನಾಯ್ಸ್ ಕಾರ್ಯಗತಗೊಳಿಸಿದ. ಹೀಗೆ ಪದರ ಪದರವಾಗಿ ಟ್ರಾನ್ಸಿಸ್ಟರ್‌ಗಳನ್ನು ಒಳಗೊಂಡ, ಏಕೀಕೃತ ಸರ್ಕೂಟ್ ಜನ್ಮ ತಾಳಿತು. ಅದೇ ಇಂಟೆಗ್ರೇಟೆಡ್ ಸರ್ಕೂಟ್!

ಅದಕ್ಕೇ ನಾಯ್ಸ್ ಮತ್ತು ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್‌ನಲ್ಲಿದ್ದ ಜಾಕ್ ಎಸ್ ಕಿಲ್ಬಿ (ಈತನಿಗೆ ೨೦೦೦ದಲ್ಲಿ ನೋಬೆಲ್ ಬಂತು) ಇಬ್ಬರನ್ನೂ ಇಂಟೆಗ್ರೇಟೆಡ್ ಸರ್ಕೂಟ್‌ನ ಜಂಟಿ ಸಂಶೋಧಕರು ಎಂದು ಕರೆಯುತ್ತಾರೆ. ಆದರೆ ಇದರಲ್ಲಿ ಹೋಯೆರ್ನಿನ ಪ್ಲೇನಾರ್ ಪ್ರೋಸೆಸ್ ಸಿದ್ಧಾಂತವೇ ಪ್ರಮುಖ ಪಾತ್ರ ವಹಿಸಿತು ಅನ್ನೋದನ್ನ ಮರೆಯಕ್ಕಾಗಲ್ಲ ಅಲ್ವೆ?

ಈ ಎಂಟು ಮಂದಿ ಜಾಣರಲ್ಲಿ ಗೋರ್ಡೋನ್ ಮೂರ್ ಮತ್ತು ರಾಬರ್ಟ್ ನಾಯ್ಸ್ ಸೇರಿಕೊಂಡು ಸ್ಥಾಪಿಸಿದ ಸಂಸ್ಥೆಯೇ ಇಂಟೆಲ್. ಇವತ್ತು ಜಗತ್ತಿನ ಅಗ್ರಮಾನ್ಯ ಐಸಿ ತಯಾರಿಕಾ ಸಂಸ್ಥೆ. ಅಷ್ಟೇ ಅಲ್ಲ, ಐಸಿಗಳ ಬಗ್ಗೆ ಮೂರ್‍ಸ್ ಲಾ ಅಂತ ಒಂದು ಸಿದ್ಧಾಂತ ಇದೆಯಲ್ಲ, ಅದನ್ನು ಮಂಡಿಸಿದವನೇ ಈ ರಾಬರ್ಟ್ ಮೂರ್.

ಹಾಗೆ ನೋಡಿದರೆ, ಸಿಲಿಕಾನ್ ಕಣಿವೆ ಅಂತ ಕರೀತಾರಲ್ಲ, ಈ ಕಣಿವೆಗೆ ಈ ಹೆಸರು ಬಂದಿದ್ದೇ ಈ ವಿಜ್ಞಾನಿಗಳ ಇಂಥ ಇತಿಹಾಸಪ್ರಸಿದ್ಧ ಗಲಾಟೆಯಿಂದ!

ಇಂಟೆಗ್ರೇಟೆಡ್ ಸರ್ಕೂಟ್‌ನ ಸಂಶೋಧನೆ ಮನುಕುಲದ ಅತ್ಯಂತ ಮುಖ್ಯ ಕ್ಷಣಗಳಲ್ಲೊಂದು ಅಂತ ನಮ್ಮ ಮಹಾನ್ ವಿಜ್ಞಾನ ಲೇಖಕ ಐಸಾಕ್ ಅಸಿಮೋವ್ ಹೇಳಿದ್ದಾನೆ. ಅದಕ್ಕೇ ಈ ವರ್ಷ ವಿಶ್ವದ ಎಲೆಕ್ಟ್ರಾನಿಕ್ ರಂಗದ ಸಂಸ್ಥೆ ಐ ಇ ಇ ಇ ಯಿಂದ ಜೀನ್ ಹೋಯೆರ್ನಿ ಮತ್ತು ರಾಬರ್ಟ್ ನಾಯ್ಸ್ ಇಬ್ಬರನ್ನೂ ಗೌರವಿಸಿದೆ. ಸಿದ್ಧಾಂತ ಬರೆದಾತ ಹೋಯೆರ್ನಿ; ಅದನ್ನು ವಾಸ್ತವರೂಪಕ್ಕೆ ತಂದಾತ ನಾಯ್ಸ್. ೧೯೫೯ರ ಜನವರಿ ೨೩ರಂದು ಹೋಯೆರ್ನಿ ಬರೆದ ದಿನಚರಿ ಟಿಪ್ಪಣಿ ಹೀಗಿದೆ:
"In many applications now it would be desirable to make multiple devices on a single piece of silicon in order to be able to make interconnections between devices as part of the manufacturing process, and thus reduce size, weight, etc., as well as cost per active element.”
ಈಗ, ಐವತ್ತು ವರ್ಷಗಳ ನಂತರ, ಐ ಸಿ ತಯಾರಿಕೆ ಅನ್ನೋದು ೨೦೦ ಬಿಲಿಯ ಡಾಲರ್‌ಗಳ ವ್ಯವಹಾರ! ಇಂಥ ಅತಿಬೇಡಿಕೆಯ ಸಾಧನವನ್ನು ರೂಪಿಸಿದ ಈ ಇಬ್ಬರು ಸಂಶೋಧಕರ ಬಗ್ಗೆ ಐ ಇ ಇ ಇ ಹೀಗೆ ಶ್ಲಾಘನಾ ಪತ್ರ ನೀಡಿದೆ.
SEMICONDUCTOR PLANAR PROCESS AND INTEGRATED CIRCUIT, 1959

The 1959 invention of the Planar Process by Jean A. Hoerni and the Integrated Circuit (IC) based on planar technology by Robert N. Noyce catapulted the semiconductor industry into the silicon IC era. This pair of pioneering inventions led to the present IC industry, which today supplies a wide and growing variety of advanced semiconductor products used throughout the world.

May 2009, INSTITUTE OF ELECTRICAL AND ELECTRONICS ENGINEERS
ವಿಕ್ಟರ್ ಗ್ರೀನಿಶ್ ಇಂಟ್ರೊಡಕ್ಷನ್ ಟಿ ಇಂಟೆಗ್ರೇಟೆಡ್ ಸರ್ಕೂಟ್ಸ್ ಅನ್ನೋ ಪುಸ್ತಕ ಬರೆದಿದ್ದಾನೆ. ಯೂಜೀನ್ ಕ್ಲೈನರ್ (೧೯೨೩ ೨೦೦೩) ನೇ ಈ ಎಂಟು ವಿಜ್ಞಾನಿಗಳ ಬಂಡಾಯದ ನಾಯಕ. ಈತ ಮುಂದೆ ಇಂಟೆಲ್‌ನಲ್ಲೂ ಬಂಡವಾಳ ಹೂಡುತ್ತಾನೆ. ೧೯೭೨ರಲ್ಲಿ ಈತ ಕ್ಲೈನರ್ ಪರ್ಕಿನ್ಸ್ ಎಂಬ ವೆಂಚರ್ ಕ್ಯಾಪಿಟಲ್ ಸಂಸ್ಥೆಯನ್ನು ಹುಟ್ಟುಹಾಕುತ್ತಾನೆ. ಜ್ಯೂಲಿಯಸ್ ಬ್ಲಾಂಕ್ ೧೯೭೮ರಲ್ಲಿ ಕ್ಸೈಕಾರ್ ಎಂಬ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಜೇ ಲಾಸ್ಟ್ ಕಲೆಯಲ್ಲೂ ಅಸಕ್ತಿ ಬೆಳೆಸಿಕೊಂಡವನು. ಆತ ಹಲವು ಕಲಾ ಪುಸ್ತಕಗಳನ್ನು ಬರೆದಿದ್ದಾನೆ. ಆರ್ಕಿಯಾಲಾಜಿಕಲ್ ಕನ್ಸರ್ವೆನ್ಸಿ ಎಂಬ ಸಂಸ್ಥೆಯ ಮೂಲಕ ಅಮೆರಿಕಾದ ೧೫೦ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿಸುವಲ್ಲಿ ನೆರವಾಗಿದ್ದಾನೆ. ರಾಬರ್ಟ್ ನಾಯ್ಸ್‌ಗೆ ಸಿಲಿಕಾನ್ ಕಣಿವೆಯ ಮೇಯರ್ ಅನ್ನೋ ಬಿರುದೇ ಇದೆ! ಶೆಲ್ಡನ್ ರಾಬರ್ಟ್ಸ್ ಮುಂದೆ ಹೋಯೆರ್ನಿ ಮತ್ತು ಜೇ ಲಾಸ್ಟ್ ಜೊತೆಗೂಡಿ ಟೆಲೆಡೈನ್ ಸಂಸ್ಥೆಯನ್ನು ಸ್ಥಾಪಿಸುತ್ತಾನೆ. ಗೋರ್ಡೋನ್ ಮೂರ್‌ಗೆ ಮಾರ್ಕೋನಿ ಸೊಸೈಟಿಯ ಜೀವಿತಾವಧಿ ಸಾಧನೆ ಪ್ರಶಸ್ತಿ ಬರುತ್ತೆ.

ಅಂದ್ರೆ ಈ ಎಂಟು ಮಂದಿಯಲ್ಲಿ ಒಬ್ಬರಿಗೂ ನೋಬೆಲ್ ಪ್ರಶಸ್ತಿ ಬರಲಿಲ್ಲ! ಪರವಾಗಿಲ್ಲ ಬಿಡಿ. ಸಿಲಿಕಾನ್ ಕಣಿವೆಯನ್ನೇ ಈಗ ಎಬ್ಬಿಸಿದ್ದಾರಲ್ಲ..... ಅದಕ್ಕಿಂತ ಇನ್ನೇನು ಸಾಧನೆ ಬೇಕು ಹೇಳಿ?
ಹೆಚ್ಚಿನ ಮಾಹಿತಿಗೆ:
ಹೋಯೆರ್ನಿಯ ಸಿದ್ಧಾಂತದ ವೈಜ್ಞಾನಿಕ ವಿವರಣೆ ಇಲ್ಲಿದೆ.
ಅಷ್ಟ ದ್ರೋಹಿಗಳ ಕಥೆಯನ್ನು ಗೋರ್ಡೋನ್ ಮೂರ್ ಇಲ್ಲಿ ಹೀಗೆ ಬಣ್ಣಿಸಿದ್ದಾರೆ.
ಮೂರ್‍ಸ್ ಲಾ ಬಗ್ಗೆ ತಿಳ್ಕೋಬೇಕು ಅಂದ್ರೆ ಇಲ್ಲಿ ಕ್ಲಿಕ್ ಮಾಡಿ.
ಪ್ಲೇನಾರ್ ಪ್ರೋಸೆಸ್ ಬಗ್ಗೆ ಇನ್ನಷ್ಟು ತಿಳ್ಕೊಳ್ಳೋದಕ್ಕೆ ಇಲ್ಲಿಗೆ ಬನ್ನಿ.
ಮೇಲಿನ ಚಿತ್ರದ ಮೂಲ ಇದು.

ಗುರುವಾರ, ಜುಲೈ 9, 2009

ವಿಜ್ಞಾನ ಸಾಹಿತ್ಯ ಪಿತಾಮಹ - ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ

ಸನ್ಮಾನ್ಯ ಶ್ರೀ ಬೆಳ್ಳಾವೆ ವೆಂಕಟನಾರಣಪ್ಪನವರು (ಫೆಬ್ರವರಿ ೧೮೭೨ - ಆಗಸ್ಟ್ ೧೯೪೩) ಕನ್ನಡದ ಮೊದಲ ವಿಜ್ಞಾನ ಲೇಖಕರಲ್ಲೊಬ್ಬರು, ಕನ್ನಡದಲ್ಲಿ ವಿಜ್ಞಾನವನ್ನು ಪರಿಣಾಮಕಾರಿಯಾಗಿ ವಿವರಿಸಲು ಸಾಧ್ಯ ಎಂದು ತೋರಿಸಿಕೊಟ್ಟವರು.

ಬೆ.ವೆಂ. ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಭೌತಶಾಸ್ತ್ರವಷ್ಟೆ ಅಲ್ಲದೆ ಜೀವಶಾಸ್ತ್ರದಲ್ಲಿ ಕೂಡ ಅವರಿಗೆ ಪ್ರಾವೀಣ್ಯವಿತ್ತು. ೧೯೩೦ರ ದಶಕದಲ್ಲಿ ಪ್ರಕಟವಾದ ಅವರ 'ಜೀವವಿಜ್ಞಾನ' ಕೃತಿ (ಮೈಸೂರು ವಿವಿ ಪ್ರಕಟಣೆ) ಕನ್ನಡ ವಿಜ್ಞಾನ ಸಾಹಿತ್ಯದ ಇತಿಹಾಸದಲ್ಲೇ ಅತ್ಯಂತ ಗಮನಾರ್ಹ ಸ್ಥಾನ ಪಡೆದುಕೊಂಡಿದೆ.

ಕನ್ನಡ ಹಾಗೂ ವಿಜ್ಞಾನಗಳೆರಡರ ಬಗೆಗೂ ಅಪಾರ ಕಳಕಳಿ ಹೊಂದಿದ್ದ ಅವರು ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಲ್ಲೊಬ್ಬರಾಗಿ ಸೇವೆಸಲ್ಲಿಸಿದ್ದರು. 'ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ'ಯ ಮೂಲಕ ವಿಜ್ಞಾನ ಎಂಬ ಮಾಸಪತ್ರಿಕೆ ನಡೆಸುತ್ತಿದ್ದರು; ಕನ್ನಡದಲ್ಲಿ ವಿಜ್ಞಾನ ಪ್ರಚಾರಕ್ಕೆ ಮಾರ್ಗದರ್ಶಕರಾಗಿದ್ದರು.

ಬೆ.ವೆಂ.ರವರ ಚಿತ್ರ ನನಗೆ ಸಿಕ್ಕಿದ್ದು ಮತ್ತೊಬ್ಬ ಅದ್ವಿತೀಯ ವಿಜ್ಞಾನ ಬರಹಗಾರ ಡಾ. ಬಿ.ಜಿ.ಎಲ್.ಸ್ವಾಮಿಯವರ 'ಪಂಚಕಲಶ ಗೋಪುರ' ಕೃತಿಯಲ್ಲಿ. ಈ ಕೃತಿಯಲ್ಲಿ ಬೆ.ವೆಂ.ರವರ ಆತ್ಮೀಯ ಪರಿಚಯ ಕೂಡ ಇದೆ.

ಇದೊಂದು ಅಪೂರ್ಣ ಬರಹ. ಬೆ.ವೆಂ.ರವರ ಬಗ್ಗೆ, ಅವರ ಕೃತಿಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿ ಹಂಚಿಕೊಳ್ಳಿ!

ಗುರುವಾರ, ಜೂನ್ 11, 2009

ನಿಮಗೂ ಬೇಕೆ ಚಂದ್ರನ ಚೂರು?

ಮಾನವ ಮೊದಲ ಸಲ ಚಂದ್ರನ ಮೇಲೆ ಕಾಲಿಟ್ಟ ದಿನದ ನಲವತ್ತನೇ ವರ್ಷಾಚರಣೆ ಬರುವ ಜುಲೈ ತಿಂಗಳಲ್ಲಿ ನಡೆಯಲಿದೆ (ಚಂದ್ರನ ಮೇಲೆ ಮಾನವ ಇಳಿದದ್ದು ನಿಜವೋ ಸುಳ್ಳೋ ಎಂಬ ಚರ್ಚೆ ಈ ಬರಹದ ವ್ಯಾಪ್ತಿ ಪ್ರದೇಶದಿಂದ ಹೊರಗಿದೆ, ಕ್ಷಮಿಸಿ!)

ನಲವತ್ತು ವರ್ಷಗಳ ಹಿಂದೆ ಚಂದ್ರನ ಮೇಲೆ ಕಾಲಿಟ್ಟಾಗ ನೀಲ್ ಆರ್ಮ್ ಸ್ಟ್ರಾಂಗ್ "One small step for man, one giant leap for mankind!" ಎಂದಿದ್ದನಂತೆ. ಆತನ ಬದಲು ಅಲ್ಲಿ ನೀವೇನಾದರೂ ಇದ್ದಿದ್ದರೆ ಏನು ಹೇಳುತ್ತಿದ್ದಿರಿ? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿದುಕೊಳ್ಳಲು ನ್ಯೂ ಸೈಂಟಿಸ್ಟ್ ಪತ್ರಿಕೆ ಒಂದು ಸ್ಪರ್ಧೆ ಏರ್ಪಡಿಸಿದೆ.

ಈ ವಿಶಿಷ್ಟ ಸ್ಪರ್ಧೆಗಾಗಿ ನೀವು ನೀಡುವ ಹೇಳಿಕೆ ನಿರ್ಣಾಯಕರಿಗೆ ಇಷ್ಟವಾದರೆ ನಿಮಗೆ ದೊರಕುವ ಬಹುಮಾನ ಏನು ಗೊತ್ತೇ? ಚಂದ್ರನಿಂದ ಬೇರ್ಪಟ್ಟು ಭೂಮಿಯ ಮೇಲೆ ಬಂದು ಬಿದ್ದ ಕಲ್ಲಿನ ಒಂದು ಚೂರು!

ಈ ಚಂದ್ರಶಿಲೆಯ ತೂಕ ೧.೪ ಗ್ರಾಂ. ಇಷ್ಟು ಸಣ್ಣ ಕಲ್ಲಿನ ಚೂರಿಗಾಗಿ ಸ್ಪರ್ಧೆ ಬೇರೆ ಅಂತ ಬೈದುಕೊಳ್ಳುವ ಮೊದಲು ಚಂದ್ರಶಿಲೆಯ ರೇಟು ಕೇಳಿಬಿಡಿ: ಒಂದು ಗ್ರಾಂ ತೂಕದ ಚಂದ್ರಶಿಲೆಯ ಮೌಲ್ಯ ಒ೦ದು ಸಾವಿರ ಡಾಲರ್!!

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿ ಇದ್ದರೆ ಈ ತಾಣದಲ್ಲೊಮ್ಮೆ ಇಣುಕಿ.

ಚಿತ್ರ: ನ್ಯೂ ಸೈಂಟಿಸ್ಟ್ ಕೃಪೆ

ಬುಧವಾರ, ಜೂನ್ 10, 2009

ಬಿಂಗ್ ಬಂತು ಬಿಂಗ್

ಶೋಧನ ಚಾಲಕಗಳ (ಸರ್ಚ್ ಇಂಜನ್) ಸಾಲಿಗೆ ಹೊಸ ಸೇರ್ಪಡೆಯಾಗಿ ಮೈಕೋಸಾಫ್ಟ್ ಸಂಸ್ಥೆಯ 'ಬಿಂಗ್' ಕಾರ್ಯಾರಂಭ ಮಾಡಿದೆ. ಈ ಮೊದಲು ಭಾರೀ ಪ್ರಚಾರ ಗಿಟ್ಟಿಸಿದ್ದ ಲೈವ್ ಸರ್ಚ್‌ನ ವೈಫಲ್ಯದ ನಂತರ ರೂಪಗೊಂಡಿರುವ ಬಿಂಗ್ ಕೂಡ ಗೂಗಲ್‌ಗೆ ಪ್ರಬಲ ಪ್ರತಿಸ್ಪರ್ಧಿಯಾಗುವ ಮಹತ್ವಾಕಾಂಕ್ಷೆ ಹೊಂದಿದೆ.


ಪ್ರಪಂಚದ ಮೂಲೆಮೂಲೆಗಳಲ್ಲಿರುವ ಮಾಹಿತಿ ನಮ್ಮ ಗಣಕದಲ್ಲಿ ಕ್ಷಣಾರ್ಧದಲ್ಲಿ ಲಭ್ಯವಾಗುವಂತೆ ಮಾಡುವ ಶೋಧನ ಚಾಲಕಗಳು ಅಗಾಧವಾದ ವಿಶ್ವವ್ಯಾಪಿ ಜಾಲದಲ್ಲಿ ನಮ್ಮ ಮಾರ್ಗದರ್ಶಕರಿದ್ದಂತೆ. ಹೀಗಾಗಿ ಪ್ರಾರಂಭಿಕ ಬಳಕೆದಾರರಿಂದ ಪರಿಣತರವರೆಗೆ ಎಲ್ಲರೂ ಇವನ್ನು ಬಳಸುವವರೇ! ಇಷ್ಟೊಂದು ದೊಡ್ಡ ಪ್ರಮಾಣದ ಮಾರುಕಟ್ಟೆಯಲ್ಲಿ ಗೂಗಲ್ ಪಾಲು ಶೇ.೬೦ಕ್ಕೂ ಹೆಚ್ಚು. ಅಂತರಜಾಲದಲ್ಲಿ ನಡೆಸುವ ಹುಡುಕಾಟಕ್ಕೆ ಗೂಗ್ಲಿಂಗ್ ಎಂಬ ಸಮಾನಾರ್ಥಕವೇ ಹುಟ್ಟಿಕೊಂಡಿರುವುದು ಗೂಗಲ್ ಯಶಸ್ಸಿಗೆ ಸಾಕ್ಷಿ.

ಈ ಮಾರುಕಟ್ಟೆಯ ಕೇವಲ ಶೇ.೮ರಷ್ಟು ಭಾಗದ ಮೇಲೆ ಮಾತ್ರ ಹಿಡಿತ ಹೊಂದಿರುವ ಮೈಕ್ರೋಸಾಫ್ಟ್ ಸಂಸ್ಥೆ 'ಬಿಂಗ್'ನಿಂದ ಈ ಪರಿಸ್ಥಿತಿಯನ್ನು ಬದಲಿಸಲು ಹೊರಟಿದೆ. ಬಳಕೆದಾರರ ಉದ್ದೇಶವನ್ನು ಅರ್ಥಮಾಡಿಕೊಂಡು ಅವರ ಅಗತ್ಯಕ್ಕೆ ತಕ್ಕಂತ ಮಾಹಿತಿಯನ್ನು ಒದಗಿಸುವ ಸಾಮರ್ಥ್ಯ 'ಬಿಂಗ್'ಗೆ ಇದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.

ಆಕರ್ಷಕ ವಿನ್ಯಾಸ ಹೊಂದಿರುವ ಬಿಂಗ್‌ನಲ್ಲಿ ಸದ್ಯಕ್ಕೆ ಜಾಹೀರಾತುಗಳ ಹಾವಳಿ ಇಲ್ಲ. ಹಾಗೆಯೇ ಗೂಗಲ್‌ಗೆ ಒಗ್ಗಿಕೊಂಡುಬಿಟ್ಟಿರುವ ಬಳಕೆದಾರರನ್ನು ಥಟ್ಟನೆ ತನ್ನತ್ತ ಸೆಳೆಯುವಂತಹ ವಿಶೇಷ ಅಂಶಗಳೂ ಇಲ್ಲಿ ಕಾಣುತ್ತಿಲ್ಲ ಎಂಬ ಅಭಿಪ್ರಾಯ ಅಂತರಜಾಲ ಲೋಕದಲ್ಲಿ ಕೇಳಿಬಂದಿದೆ.

ಜೂನ್ ೧೦, ೨೦೦೯ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ಜೂನ್ 9, 2009

ಇರುವೆ ಮುಖ ನೋಡಿದ್ದೀರಾ?

ಇದೆಂಥ ಪ್ರಶ್ನೆ ಅಂತ ಕೇಳಬೇಡಿ. ಈವರೆಗೆ ನೋಡಿಲ್ಲ ಅನ್ನುವುದಾದರೆ ಈ ತಾಣಕ್ಕೆ ಹೋಗಿ.

ನನ್ನ ನಿಮ್ಮ ಮನೆಗಳಲ್ಲಿರುವ ಇರುವೆ ಇದ್ದಕ್ಕಿದ್ದಹಾಗೆ ೮೦೦ ಪಟ್ಟು ದೊಡ್ಡದಾಗಿ ಬೆಳೆದರೆ ಹೇಗಿರಬಹುದು ಅಂತ ಈ ತಾಣದಲ್ಲಿ ನೋಡಿ ತಿಳಿದುಕೊಳ್ಳಬಹುದು. ಸ್ಕ್ಯಾನಿಂಗ್ ಇಲೆಕ್ಟ್ರಾನ್ ಮೈಕ್ರೋಸ್ಕೋಪ್ ಬಳಸಿ ತೆಗೆದ ನೂರಮೂವತ್ತಾರು ಚಿತ್ರಗಳನ್ನು ಜೋಡಿಸಿ ಈ ಚಿತ್ರವನ್ನು ಸಿದ್ಧಪಡಿಸಲಾಗಿದೆ.

ಇರುವೆ ಮುಖ ಮಾತ್ರ ಅಲ್ಲ, ಅದರ ಕಣ್ಣು, ಮೀಸೆ ಎಲ್ಲ ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ!

ಒಂದು ಸ್ಯಾಂಪಲ್ ಇಲ್ಲಿದೆ ನೋಡಿ:

















ಚಿತ್ರ: gigapan.org

ಸೋಮವಾರ, ಜೂನ್ 8, 2009

ಆಚಿನ ಲೋಕಕ್ಕೆ ಅಕಾಡೆಮಿ ಬಹುಮಾನ

ನಮ್ಮೆಲ್ಲರ ಮೆಚ್ಚಿನ ಶ್ರೀ ನಾಗೇಶ ಹೆಗಡೆಯವರ 'ಆಚಿನ ಲೋಕಕ್ಕೆ ಕಾಲಕೋಶ' ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2007ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ವಿಜ್ಞಾನ ಸಾಹಿತ್ಯ ಪ್ರಕಾರದಲ್ಲಿ ಆಯ್ಕೆಯಾಗಿರುವ ಈ ಕೃತಿ ನಾಗೇಶ ಹೆಗಡೆಯವರ ಅಭಿನಂದನಾ ಸಮಾರಂಭ 'ಸಂಕುಲ'ದ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಇ-ಜ್ಞಾನ ಬಳಗದ ಪರವಾಗಿ ನಾಗೇಶ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು!
ಚಿತ್ರ: ಮಿತ್ರಮಾಧ್ಯಮ ಕೃಪೆ

ಸೋಮವಾರ, ಮೇ 18, 2009

'ಗಣಕಿಂಡಿ' ಶುರುವಾಗಿದೆ!

ಡಾ. ಯು ಬಿ ಪವನಜರ ಹೊಸ ಅಂಕಣ 'ಗಣಕಿಂಡಿ' ಇಂದಿನಿಂದ ಕನ್ನಡ ಪ್ರಭದಲ್ಲಿ ಪ್ರಾರಂಭವಾಗಿದೆ. ಪ್ರತಿ ಸೋಮವಾರ ದಿನಚರಿ ಪುಟದಲ್ಲಿ ಪ್ರಕಟವಾಗುವ ಅಂಕಣ ಮೊದಲ ಸಂಚಿಕೆ ಇಲ್ಲಿದೆ.

ಸೋಮವಾರ, ಮೇ 11, 2009

ಇ ಆರ್ ಪಿ ಲೋಕ

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆ ಮೇ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ

ಸೋಮವಾರ, ಏಪ್ರಿಲ್ 20, 2009

ಇಸ್ರೋ ಮಡಿಲಿಗೆ ಮತ್ತೊಂದು ಯಶಸ್ಸು

ಭಾರತದ ಹೆಮ್ಮೆಯ ಉಪಗ್ರಹ ಉಡಾವಣಾ ವಾಹನ ಪಿಎಸ್‌ಎಲ್‌ವಿ-ಸಿ೧೨ ಮೂಲಕ ಇಂದು ಹಾರಿಬಿಡಲಾದ ಎರಡು ಉಪಗ್ರಹಗಳ ಉಡಾವಣೆ ಯಶಸ್ವಿಯಾಗಿದೆ. ಮುನ್ನೂರು ಕಿಲೋಗ್ರಾಂ ತೂಕದ ರೇಡಾರ್ ಇಮೇಜಿಂಗ್ ಉಪಗ್ರಹ (RISAT-2) ಹಾಗೂ ನಲವತ್ತು ಕೇಜಿಯ ಪುಟಾಣಿ ಉಪಗ್ರಹ ANUSAT ಇಂದು ಉಡಾವಣೆಯಾದ ಉಪಗ್ರಹಗಳು. ಇದರೊಡನೆ ಪಿಎಸ್‌ಎಲ್‌ವಿ ವಾಹನ ಈವರೆಗೆ ಹದಿನೈದು ಉಡಾವಣೆಗಳಲ್ಲಿ ಒಟ್ಟು ಮೂವತ್ತು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದಂತಾಗಿದೆ.

ಇಂದು ಉಡಾವಣೆಯಾದ ಉಪಗ್ರಹಗಳಲ್ಲಿ ತೀವ್ರ ಕುತೂಹಲ ಕೆರಳಿಸಿರುವುದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಸಹಯೋಗದಲ್ಲಿ ತಯಾರಾಗಿರುವ RISAT-2. ಎಲ್ಲ ಬಗೆಯ ವಾತಾವರಣಗಳಲ್ಲೂ ಭೂಮಿಯ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಈ ಉಪಗ್ರಹ ಅಂತರಿಕ್ಷದಲ್ಲಿನ ನಮ್ಮ ಕಣ್ಣಿನಂತೆ ಕೆಲಸಮಾಡಲಿದೆ. ಪ್ರವಾಹ ಹಾಗೂ ಚಂಡಮಾರುತದಂತಹ ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ಈ ಉಪಗ್ರಹ ವಿಪತ್ತು ನಿರ್ವಹಣೆಯ ಕೆಲಸದಲ್ಲಿ ನೆರವಾಗಲಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.

ಈ ಉಪಗ್ರಹದ ನೆರವಿನಿಂದ ನಮ್ಮ ನೆರೆರಾಷ್ಟ್ರಗಳ, ಹಾಗೂ ವಿಶೇಷವಾಗಿ ಅಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೂ ಕಣ್ಣಿಡಬಹುದು; ನಮ್ಮ ಕರಾವಳಿಯನ್ನು ಹಾಗೂ ಅಂತರರಾಷ್ಟ್ರೀಯ ಗಡಿಗಳನ್ನೂ ಗಮನಿಸುತ್ತಿರಬಹುದು. ಹೀಗಾಗಿ ಇದೊಂದು ಗೂಢಚರ ಉಪಗ್ರಹ ಎಂಬ ಅಭಿಪ್ರಾಯ ಮಾಧ್ಯಮಗಳಲ್ಲಿ ಕೇಳಿಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೋ ಮುಖ್ಯಸ್ಥ ಡಾ ಮಾಧವನ್ ನಾಯರ್ "RISAT-2 ಒಂದು ಭೂ ಸರ್ವೇಕ್ಷಣಾ ಉಪಗ್ರಹ ಮಾತ್ರ" ಎಂದು ಹೇಳಿದ್ದಾರೆ. ಇಂತಹುದೇ ಇನ್ನೊಂದು ಉಪಗ್ರಹವನ್ನು ಇದೇ ವರ್ಷ ಉಡಾಯಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ಇಂದು ಉಡಾವಣೆಯಾದ ಇನ್ನೊಂದು ಉಪಗ್ರಹ ANUSAT ಸಣ್ಣ ಗಾತ್ರದ 'ಮೈಕ್ರೋ ಸ್ಯಾಟೆಲೈಟ್' ವರ್ಗಕ್ಕೆ ಸೇರುತ್ತದೆ. ಈ ಉಪಗ್ರಹವನ್ನು ಚೆನ್ನೈನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ನಿರ್ಮಿಸಲಾಗಿತ್ತು. ಇಸ್ರೋ ಮಾರ್ಗದರ್ಶನದಲ್ಲಿ ಭಾರತೀಯ ವಿಶ್ವವಿದ್ಯಾಲಯವೊಂದು ನಿರ್ಮಿಸಿದ ಮೊತ್ತಮೊದಲ ಉಪಗ್ರಹ ಎಂಬ ಹೆಗ್ಗಳಿಕೆ ANUSATಗೆ ಸಲ್ಲುತ್ತದೆ.

ಚಿತ್ರ: ಇಸ್ರೋ ಕೃಪೆ

ಮಂಗಳವಾರ, ಏಪ್ರಿಲ್ 14, 2009

ಯುನಿಕೋಡ್ ಎಂದರೇನು?


ಯುನಿಕೋಡ್ ಕನ್ಸಾರ್ಷಿಯಂನ ತಾಣಕ್ಕಾಗಿ ಮಾಡಿದ ಅನುವಾದ. ಅನುವಾದಿಸಿದ್ದು ಟಿ. ಜಿ. ಶ್ರೀನಿಧಿ

ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ,
ಕ್ರಮವಿಧಿ ಯಾವುದಾದರೂ ಪರವಾಗಿಲ್ಲ,
ಭಾಷೆ ಯಾವುದಾದರೂ ಪರವಾಗಿಲ್ಲ,
ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ.

ಗಣಕಗಳು ಮೂಲತಃ ಅಂಕಿಗಳೊಡನೆ ಮಾತ್ರ ವ್ಯವಹರಿಸುತ್ತವೆ. ಗಣಕಗಳಲ್ಲಿ ಅಕ್ಷರಗಳು ಹಾಗೂ ಇನ್ನಿತರ ಸಂಕೇತಗಳನ್ನು ಶೇಖರಿಸಿಡುವಾಗ ಅವುಗಳಿಗೆ ತಲಾ ಒಂದೊಂದು ಸಂಖ್ಯೆಯನ್ನು ನಿಗದಿಪಡಿಸಲಾಗುತ್ತದೆ. ಯುನಿಕೋಡ್ ಬಳಕೆಗೆ ಬರುವ ಮುನ್ನ ಹೀಗೆ ಸಂಖ್ಯೆಗಳನ್ನು ನಿಗದಿಪಡಿಸುವ ನೂರಾರು ಎನ್‌ಕೋಡಿಂಗ್ ವ್ಯವಸ್ಥೆಗಳು ಉಪಯೋಗದಲ್ಲಿದ್ದವು. ಆದರೆ ಇಂತಹ ಯಾವ ವ್ಯವಸ್ಥೆಯೂ ಬಳಕೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಪ್ರತಿನಿಧಿಸುವಷ್ಟು ಶಕ್ತವಾಗಿರಲಿಲ್ಲ: ಉದಾಹರಣೆಗೆ ಯುರೋಪಿಯನ್ ಒಕ್ಕೂಟದಲ್ಲಿ ಬಳಕೆಯಲ್ಲಿರುವ ಭಾಷೆಗಳನ್ನಷ್ಟೆ ಪ್ರತಿನಿಧಿಸಲು ಅನೇಕ ಎನ್‌ಕೋಡಿಂಗ್ ವ್ಯವಸ್ಥೆಗಳು ಬೇಕಾಗುತ್ತವೆ. ಅಷ್ಟೇ ಏಕೆ, ಇಂಗ್ಲಿಷ್ ಭಾಷೆಯಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಎಲ್ಲ ಅಕ್ಷರಗಳು, ಲೇಖನ ಚಿಹ್ನೆಗಳು ಹಾಗೂ ತಾಂತ್ರಿಕ ಸಂಕೇತಗಳನ್ನು ಪ್ರತಿನಿಧಿಸಲು ಕೂಡ ಯಾವ ಎನ್‌ಕೋಡಿಂಗ್ ವ್ಯವಸ್ಥೆಯೂ ಪರಿಣಾಮಕಾರಿಯಾಗಿರಲಿಲ್ಲ.

ಈ ಎನ್‌ಕೋಡಿಂಗ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ, ಎರಡು ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳು ಒಂದೇ ಅಕ್ಷರವನ್ನು ಪ್ರತಿನಿಧಿಸಲು ಬೇರೆಬೇರೆ ಸಂಖ್ಯೆಗಳನ್ನು ಉಪಯೋಗಿಸುವುದು ಅಥವಾ ಬೇರೆಬೇರೆ ಅಕ್ಷರಗಳನ್ನು ಪ್ರತಿನಿಧಿಸಲು ಒಂದೇ ಸಂಖ್ಯೆಯನ್ನು ಬಳಸುವುದು ಸಾಮಾನ್ಯ. ಗಣಕಗಳು (ಅದರಲ್ಲೂ ವಿಶೇಷವಾಗಿ ಸರ್ವರ್‌ಗಳು) ವಿಭಿನ್ನ ಎನ್‌ಕೋಡಿಂಗ್ ವ್ಯವಸ್ಥೆಗಳ ಬಳಕೆಗೆ ಅನುವುಮಾಡಿಕೊಡಬೇಕಾಗುತ್ತದೆ; ಆದರೆ ಅವುಗಳ ನಡುವಿನ ವೈರುದ್ಧ್ಯದಿಂದಾಗಿ ಒಂದು ವ್ಯವಸ್ಥೆಯಲ್ಲಿ ದಾಖಲಾಗಿರುವ ಪಠ್ಯ ಇನ್ನೊಂದು ವ್ಯವಸ್ಥೆಗೆ ಅಥವಾ ಪ್ಲಾಟ್‌ಫಾರ್ಮ್‌ಗೆ ಬದಲಾಗುವಾಗ ತಪ್ಪುಗಳಾಗುವ ಸಾಧ್ಯತೆ ಸದಾ ಇರುತ್ತದೆ.

ಯುನಿಕೋಡ್ ಅದನ್ನೆಲ್ಲ ಬದಲಿಸುತ್ತಿದೆ!


ಪ್ಲಾಟ್‌ಫಾರ್ಮ್ ಯಾವುದಾದರೂ ಪರವಾಗಿಲ್ಲ, ಕ್ರಮವಿಧಿ ಯಾವುದಾದರೂ ಪರವಾಗಿಲ್ಲ, ಭಾಷೆ ಯಾವುದಾದರೂ ಪರವಾಗಿಲ್ಲ, ಯುನಿಕೋಡ್ ಪ್ರತಿಯೊಂದು ಅಕ್ಷರಕ್ಕೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುತ್ತದೆ. ಮಾರುಕಟ್ಟೆಯ ಮುಂಚೂಣಿಯಲ್ಲಿರುವ ಆಪಲ್, ಹೆಚ್‌ಪಿ, ಐಬಿಎಂ, ಜಸ್ಟ್‌ಸಿಸ್ಟಮ್ಸ್, ಮೈಕ್ರೋಸಾಫ್ಟ್, ಅರೇಕಲ್, ಎಸ್‌ಎ‌ಪಿ, ಸನ್, ಸೈಬೇಸ್, ಯುನಿಸಿಸ್ ಮತ್ತು ಇನ್ನೂ ಹಲವಾರು ಸಂಸ್ಥೆಗಳು ಯುನಿಕೋಡ್ ಮಾನಕವನ್ನು ಒಪ್ಪಿ ಅಳವಡಿಸಿಕೊಂಡಿವೆ. ಎಕ್ಸ್‌ಎಂ‌ಎಲ್, ಜಾವಾ, ಇಸಿಎಂಎಸ್ಕ್ರಿಪ್ಟ್ (ಜಾವಾಸ್ಕ್ರಿಪ್ಟ್), ಎಲ್‍ಡಿಎಪಿ, ಕೋರ್ಬಾ ೩.೦, ಡಬ್ಲ್ಯೂ‌ಎಂಎಲ್ ಮುಂತಾದ ಹಲವಾರು ಆಧುನಿಕ ಮಾನಕಗಳಿಗೆ ಅಗತ್ಯವಾದ ಯುನಿಕೋಡ್, ಐಎಸ್‌ಒ/ಐಇಸಿ ೧೦೬೪೬ ಅನ್ನು ಅಳವಡಿಸುವ ಅಧಿಕೃತ ಮಾರ್ಗವೂ ಆಗಿದೆ. ಹಲವಾರು ಕಾರ್ಯಾಚರಣ ವ್ಯವಸ್ಥೆಗಳು, ಎಲ್ಲ ಆಧುನಿಕ ಬ್ರೌಸರ್‌ಗಳು ಹಾಗೂ ಇನ್ನೂ ಅನೇಕ ಉತ್ಪನ್ನಗಳು ಯುನಿಕೋಡ್ ಬಳಕೆಯನ್ನು ಬೆಂಬಲಿಸುತ್ತವೆ. ಯುನಿಕೋಡ್ ಮಾನಕದ ಉಗಮ ಹಾಗೂ ಅದನ್ನು ಬೆಂಬಲಿಸುವ ತಂತ್ರಾಂಶ ಸಲಕರಣೆಗಳ ಲಭ್ಯತೆ, ಜಾಗತಿಕ ತಂತ್ರಾಂಶ ತಂತ್ರಜ್ಞಾನ ಕ್ಷೇತ್ರದ ಹೊಸ ಒಲವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ.

ಹಳೆಯ ವಿಧಾನಗಳಿಗೆ ಹೋಲಿಸಿದಾಗ, ಕ್ಲೈಂಟ್ - ಸರ್ವರ್ ಅಥವಾ ಬಹುಶ್ರೇಣಿಯ ಆನ್ವಯಿಕ ತಂತ್ರಾಂಶಗಳು ಹಾಗೂ ಜಾಲತಾಣಗಳಲ್ಲಿ ಯುನಿಕೋಡ್ ಬಳಸುವುದರಿಂದ ವೆಚ್ಚದಲ್ಲಿ ಗಮನಾರ್ಹ ಪ್ರಮಾಣದ ಉಳಿತಾಯವನ್ನು ಸಾಧಿಸಬಹುದು. ವಿನ್ಯಾಸದಲ್ಲಿ ಬದಲಾವಣೆಯಿಲ್ಲದೆ ಯಾವುದೇ ತಂತ್ರಾಂಶ ಉತ್ಪನ್ನ ಅಥವಾ ಜಾಲತಾಣವನ್ನು ಹಲವಾರು ಪ್ಲಾಟ್‌ಫಾರ್ಮ್‌ಗಳು, ಭಾಷೆಗಳು ಹಾಗೂ ದೇಶಗಳಲ್ಲಿ ಬಳಸಲು ಯುನಿಕೋಡ್ ಅನುವುಮಾಡಿಕೊಡುತ್ತದೆ. ಹಲವಾರು ವಿಭಿನ್ನ ವ್ಯವಸ್ಥೆಗಳ ನಡುವೆ ತಪ್ಪುಗಳಿಗೆ ಅವಕಾಶವಿಲ್ಲದಂತೆ ದತ್ತಾಂಶವನ್ನು ವಿನಿಮಯ ಮಾಡಿಕೊಳ್ಳಲು ಅದು ಅನುವುಮಾಡಿಕೊಡುತ್ತದೆ.

ಯುನಿಕೋಡ್ ಕನ್ಸಾರ್ಷಿಯಂ ಬಗ್ಗೆ

ಆಧುನಿಕ ತಂತ್ರಾಂಶ ಉತ್ಪನ್ನಗಳು ಹಾಗೂ ಮಾನಕಗಳಲ್ಲಿ ಪಠ್ಯದ ಪ್ರತಿನಿಧಿತ್ವವನ್ನು ನಿರೂಪಿಸುವ ಯುನಿಕೋಡ್ ಮಾನಕದ ಅಭಿವೃದ್ಧಿ, ವಿಸ್ತರಣೆ ಹಾಗೂ ಬಳಕೆಯನ್ನು ಪ್ರೋತ್ಸಾಹಿಸುವುದು ಲಾಭಾಪೇಕ್ಷೆಯಿಲ್ಲದ ಸಂಸ್ಥೆಯಾದ ಯುನಿಕೋಡ್ ಕನ್ಸಾರ್ಷಿಯಂನ ಉದ್ದೇಶ. ಗಣಕ ಹಾಗು ಮಾಹಿತಿ ಸಂಸ್ಕರಣಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಅಪಾರ ಸಂಖ್ಯೆಯ ನಿಗಮಗಳು ಹಾಗೂ ಸಂಸ್ಥೆಗಳು ಈ ಕನ್ಸಾರ್ಷಿಯಂನ ಸದಸ್ಯತ್ವ ಪಡೆದುಕೊಂಡಿವೆ. ಸದಸ್ಯತ್ವ ಶುಲ್ಕದಿಂದ ಬರುವ ಆದಾಯವಷ್ಟರಿಂದಲೇ ಈ ಕನ್ಸಾರ್ಷಿಯಂಗೆ ಆರ್ಥಿಕ ನೆರವು ಒದಗುತ್ತಿದೆ. ಯುನಿಕೋಡ್ ಮಾನಕವನ್ನು ಬೆಂಬಲಿಸುವ ಹಾಗೂ ಅದರ ವಿಸ್ತರಣೆ ಮತ್ತು ಅಳವಡಿಸುವಿಕೆಯಲ್ಲಿ ನೆರವುನೀಡಲು ಇಚ್ಛಿಸುವ ಪ್ರಪಂಚದ ಯಾವುದೇ ಸಂಸ್ಥೆ ಅಥವಾ ವ್ಯಕ್ತಿ ಯುನಿಕೋಡ್ ಕನ್ಸಾರ್ಷಿಯಂ ಸದಸ್ಯತ್ವ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಶಬ್ದ ಪರಿಭಾಷೆ, ತಾಂತ್ರಿಕ ಪರಿಚಯ ಹಾಗೂ ಉಪಯುಕ್ತ ಸಂಪನ್ಮೂಲಗಳನ್ನು ನೋಡಿ.

Kannada translation by T. G. Srinidhi

ಮೈಕ್ರೋ ಅಲ್ಲ, ಇದು ನ್ಯಾನೋಬ್ಲಾಗಿಂಗ್!


ನೂರ ನಲವತ್ತು ಅಕ್ಷರಗಳ ಮಿತಿಯಲ್ಲಿ ಎಸ್ಸೆಮ್ಮೆಸ್ ರೀತಿಯ ಸಂದೇಶಗಳನ್ನು ಬರೆಯಲು ಅನುವುಮಾಡಿಕೊಡುವ ಟ್ವೀಟರ್‍ನಂತಹ ತಾಣಗಳನ್ನು 'ಮೈಕ್ರೋಬ್ಲಾಗು'ಗಳೆಂದು ಕರೆಯುವುದು ನಿಮಗೆ ಗೊತ್ತೇ ಇದೆ.

ನಮ್ಮ ಪಾಲಿಗೆ ಇನ್ನೂ ಹೊಸದಾಗಿಯೇ ಇರುವ ಈ ಮೈಕ್ರೋಬ್ಲಾಗುಗಳು ಈಗಾಗಲೇ ಔಟ್‍ಡೇಟ್ ಆಗಿ ನ್ಯಾನೋಬ್ಲಾಗಿಂಗ್ ಎಂಬ ಹೊಸತೊಂದು ಕಲ್ಪನೆ ಹುಟ್ಟಿಕೊಂಡಿದೆ!

ಅಡೊಕು ಎನ್ನುವುದು ಇಂಥದ್ದೊಂದು ನ್ಯಾನೋಬ್ಲಾಗು. ಟ್ವೀಟರ್‌ನಲ್ಲಿ ಒಂದು ಎಸ್ಸೆಮ್ಮೆಸ್‌ನಷ್ಟು ಉದ್ದದ ಮಾಹಿತಿ ಹಾಕುವಂತೆ ಇಲ್ಲಿ ಕೇವಲ ಒಂದು ಪದವನ್ನಷ್ಟೆ ಬರೆಯಬಹುದು.

http://adocu.com/srinidhitg - ಇದು ನನ್ನ ನ್ಯಾನೋಬ್ಲಾಗು.

"ಇದೊಳ್ಳೆತಮಾಷೆಯಾಗಿದೆಕಣ್ರೀ!", ನಿಜ್ವಾಗ್ಲೂ!

ಬುಧವಾರ, ಏಪ್ರಿಲ್ 8, 2009

ರದ್ದಿ ಸಂದೇಶಗಳಿಗೆ ಜೈ!

ಅಂತರಜಾಲದ ಮೂಲಕ ರವಾನೆಯಾಗುವ ಇಮೇಲ್ ಸಂದೇಶಗಳಲ್ಲಿ ಶೇ.೯೭ಕ್ಕೂ ಹೆಚ್ಚು ಭಾಗ ರದ್ದಿ ಸಂದೇಶಗಳಾಗಿರುತ್ತವೆ (ಸ್ಪಾಮ್) ಎಂದು ಮೈಕ್ರೋಸಾಫ್ಟ್ ವರದಿ ತಿಳಿಸಿದೆ. ಬಯಸದ ಮಾಹಿತಿಯನ್ನು ಬಲವಂತವಾಗಿ ಹೊತ್ತು ತರುವ ಸಂದೇಶಗಳಲ್ಲಿ ಅತ್ಯಂತ ಹೆಚ್ಚಿನ ಭಾಗ ಕಾನೂನು ಬಾಹಿರವಾಗಿ ಔಷಧಮಾರಾಟ ಮಾಡುವವರ ಜಾಹೀರಾತುಗಳಾಗಿರುತ್ತವಂತೆ.

ವೈರಸ್, ವರ್ಮ್, ಸ್ಪೈವೇರ್ ಮುಂತಾದ ಕುತಂತ್ರಾಂಶಗಳನ್ನು (ಮಾಲ್ ವೇರ್) ಹರಡುವಲ್ಲೂ ಸ್ಪಾಮ್ ಸಂದೇಶಗಳ ಪಾತ್ರಬಹಳ ದೊಡ್ಡದು ಎಂದು ವರದಿ ತಿಳಿಸಿದೆ. ಪ್ರಪಂಚದಲ್ಲಿರುವ ಪ್ರತಿ ೧೦೦೦ ಗಣಕಗಳಲ್ಲಿ ಹೆಚ್ಚುಕಡಿಮೆ ಗಣಕಗಳನ್ನು ಇಂತಹ ಕುತಂತ್ರಾಂಶಗಳು ಬಾಧಿಸುತ್ತವಂತೆ.

ಗಣಕ ಜಗತ್ತನ್ನು ಕಾಡುವ ಬಹಳಷ್ಟು ತೊಂದರೆಗಳಿಗೆ ಮೂಲ ಕಾರಣವಾದ ಸ್ಪಾಮ್ ಕಾಟದಿಂದ ಪಾರಾಗಲು ಬಳಕೆದಾರರ ವಿವೇಚನೆಯೇ ಸೂಕ್ತ ಮಾರ್ಗ ಎಂದು ತಜ್ಞರು ಹೇಳುತ್ತಾರೆ. ತಮ್ಮ ಇಮೇಲ್ ವಿಳಾಸಗಳು, ಮೊಬೈಲ್ ದೂರವಾಣಿ ಸಂಖ್ಯೆಗಳು, ಇನ್ಸ್‌ಟೆಂಟ್ ಮೆಸೇಜಿಂಗ್ ಬಳಕೆದಾರ ಹೆಸರು ಮುಂತಾದ ಸಂಪರ್ಕ ವಿವರಗಳು ಅಪಾತ್ರರ ಕೈಗೆ ಸಿಲುಕದಂತೆ ನೋಡಿಕೊಳ್ಳುವುದು ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಡುವ ಅವರು ಸಂದೇಹಾಸ್ಪದ ಅಂತರಜಾಲ ತಾಣಗಳಲ್ಲಿ ಎಂದಿಗೂ ನಿಮ್ಮ ಇಮೇಲ್ ವಿಳಾಸವನ್ನು ದಾಖಲಿಸಬೇಡಿ, ಹಾಗೂ ಅಪರಿಚಿತರಿಂದ ಬರುವ ಸಂದೇಶಗಳನ್ನು ತೆರೆಯಲುಹೋಗಬೇಡಿ ಎನ್ನುತ್ತಾರೆ.

ಸ್ಪಾಮ್ ತೊಂದರೆ ಬಗ್ಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ 'ವಿಜ್ಞಾನ ಲೋಕ' ಪತ್ರಿಕೆಯಲ್ಲಿ ಪ್ರಕಟವಾಗಿದ್ದ ನನ್ನ ಲೇಖನ ಇಲ್ಲಿದೆ.

ಬುಧವಾರ, ಮಾರ್ಚ್ 18, 2009

ಹಾರಿತು ನೋಡಿ ಸೂಪರ್ ಮಾಡೆಲ್ ಸ್ಯಾಟೆಲೈಟು!


ಈವರೆಗೆ ತಯಾರಿಸಲಾಗಿರುವ ಕೃತಕ ಉಪಗ್ರಹಗಳಲ್ಲೆಲ್ಲ ಅತ್ಯಂತ ಆಕರ್ಷಕವಾದದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಯುರೋಪಿನ ಉಪಗ್ರಹ GOCE (Gravity field and steady-state Ocean Circulation Explorer) ಅಂತರಿಕ್ಷಕ್ಕೆ ಚಿಮ್ಮಿದೆ.

ಮುಂದಿನ ದಿನಗಳಲ್ಲಿ ಈ ಉಪಗ್ರಹ ಸಂಗ್ರಹಿಸಲಿರುವ ಮಾಹಿತಿ ಭೂಮಿಯ ಆಂತರಿಕ ರಚನೆ ಹಾಗೂ ಗುರುತ್ವಾಕರ್ಷಣೆಯ ಬಗೆಗಿನ ನಮ್ಮ ಜ್ಞಾನದ ಪರಿಧಿಯನ್ನು ವಿಸ್ತರಿಸಲಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಹೇಳಿದೆ. ಇಎಸ್‌ಎಯ ಅರ್ಥ್ ಎಕ್ಸ್‌ಪ್ಲೋರರ್ ಕಾರ್ಯಕ್ರಮದಡಿಯಲ್ಲಿ ಉಡಾಯಿಸಲಾಗುವ ಏಳು ಉಪಗ್ರಹಗಳ ಪೈಕಿ GOCE ಮೊದಲನೆಯದು.

ಮಂಗಳವಾರ, ಮಾರ್ಚ್ 10, 2009

ಇಂಟರ್‌ನೆಟ್ - 'ಅಂತರ್ಜಾಲ' ಸರಿಯೋ 'ಅಂತರಜಾಲ' ಸರಿಯೋ?

ಪ್ರೊ. ಜಿ. ವೆಂಕಟಸುಬ್ಬಯ್ಯನವರ ನಿಘಂಟಿನಿಂದ ಹೆಕ್ಕಿದ ಈ ಶಬ್ದಾರ್ಥಗಳನ್ನು ನೋಡಿ:

inter-city (ಗು) ಅಂತರ ನಗರ
inter collegiate (ಗು) ಅಂತರ ಕಾಲೇಜು, ಅನೇಕ ಕಾಲೇಜುಗಳ ನಡುವಣ
interprovincial (ಗು) ಅಂತರ ಪ್ರಾಂತೀಯ
interstate (ಗು) ಅಂತರ ರಾಜ್ಯದ, ರಾಜ್ಯಗಳ ನಡುವೆ ನಡೆಯುವ

ಇಂಟರ್ ಅಂದರೆ 'ಅಂತರ', "ಹೊರಗಿನದ್ದು" ಅಂದರೂ ಅನ್ನಬಹುದು ಅಲ್ವಾ?

ಸರಿ ಹಾಗಿದ್ರೆ, ಈಗ ಇಂಟ್ರಾ ಅಥವಾ 'ಅಂತರ್' ಅಂದರೆ ಏನು ನೋಡೋಣ ಬನ್ನಿ:

intra (ಸಪೂಪ) ಒಳಗೆ, ಒಳಗಡೆ, ಅಂತಃ, ಒಳಭಾಗದಲ್ಲಿ ಎಂಬರ್ಥ ಕೊಡುವ ಪದ
ಅಂತರ್ (ಸಂ) (ಅ) ಒಳಗಿನ

ಇದನ್ನೆಲ್ಲಾ ಯಾಕೆ ಹೇಳ್ತಿದೀನಿ ಅಂದ್ರೆ...

ನಾವು ಇಂಟರ್‌ನೆಟ್ ಅನ್ನು ಅಂತರ್ಜಾಲ ಎಂದೇ ಬರೆಯುತ್ತಿದ್ದೇವೆ.

ಅಂತರ್ಜಾಲ (ಅಂತರ್-ಜಾಲ) ಎಂದರೆ ಇಂಟ್ರಾ-ನೆಟ್: ಒಂದು ಸಂಸ್ಥೆ ಅಥವಾ ವ್ಯಕ್ತಿಯ ಒಡೆತನಕ್ಕೆ ಒಳಪಟ್ಟಿರುವ ಖಾಸಗಿ ಜಾಲ, ನಿರ್ದಿಷ್ಟ ಹಾಗೂ ಸೀಮಿತ ವ್ಯಾಪ್ತಿಯ 'ಒಳಗೆ' ಮಾತ್ರ ಅಸ್ತಿತ್ವದಲ್ಲಿರುವುದು. ವಿಕಿಪೀಡಿಯಾ ಪ್ರಕಾರ ಹೇಳುವುದಾದರೆ 'An intranet is a private computer network that uses Internet technologies to securely share any part of an organization's information or operational systems with its employees.'

ಆದರೆ ಇಂಟರ್‌ನೆಟ್ ಖಾಸಗಿ ಸ್ವತ್ತಲ್ಲವಲ್ಲ! ಗಣಕ-ಗಣಕಗಳ, ಜಾಲ-ಜಾಲಗಳ, ದೇಶ-ದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಮಹಾಜಾಲ ಅದು.

ಹೀಗಾಗಿ ಇಂಟರ್‌ನೆಟ್‌ಗೆ 'ಅಂತರಜಾಲ' ಸರಿಯಾದ ಸಮಾನಾರ್ಥಕ, ಅಲ್ಲವೆ?

ನೀವೇನಂತೀರಿ? ಕಮೆಂಟಿಸಿ!!

ಸೋಮವಾರ, ಫೆಬ್ರವರಿ 16, 2009

ಇನ್ನೂ ಒಂದು ಆಕ್ಸಿಡೆಂಟು!! ಹೀಗೂ ಉಂಟೆ!!!


ಟಿ ಜಿ ಶ್ರೀನಿಧಿ

ಮುಂದುವರೆದ ಅಪಘಾತಗಳ ಸರಮಾಲೆಯಲ್ಲಿ ಈ ಬಾರಿ ಎರಡು ಸಬ್‌ಮರೀನ್‌ ಗಳು ಪರಸ್ಪರ ಡಿಕ್ಕಿಹೊಡೆದಿವೆ.

ಅಟ್ಲಾಂಟಿಕ್ ಸಾಗರದಲ್ಲಿ ಈ ಅಪಘಾತ ಸಂಭವಿಸಿದ್ದು ಫ್ರಾನ್ಸ್ ಹಾಗೂ ಬ್ರಿಟನ್ನಿನ ಸಬ್‌ಮರೀನ್‌ಗಳು ಇದರಲ್ಲಿ ಭಾಗಿಯಾಗಿವೆ. ಎರಡೂ ಸಬ್‌ಮರೀನ್‌ಗಳು ಪರಮಾಣುಶಕ್ತಿ ಚಾಲಿತವಾದ್ದರಿಂದ ಈ ಅಪಘಾತ ಹಿಂದೆಂದಿಗಿಂತ ಹೆಚ್ಚಿನ ಪ್ರಾಮುಖ್ಯ ಪಡೆದುಕೊಂಡಿದೆ. ಎರಡೂ ಸಬ್‌ಮರೀನ್‌ಗಳಿಗೆ ಸಾಕಷ್ಟು ಘಾಸಿಮಾಡಿರುವ ಈ ಅಪಘಾತ ತೀವ್ರಪ್ರಮಾಣದ್ದೇ ಆದರೂ ಕೂಡ ಪರಮಾಣು ವಿಕಿರಣ ಹೊರಸೂಸುವಂತಹ ಯಾವುದೇ ತೊಂದರೆ ಸಂಭವಿಸಿಲ್ಲ ಎಂದು ಬ್ರಿಟನ್ ಸೇನಾಮೂಲಗಳು ತಿಳಿಸಿವೆ. ಇದಲ್ಲದೆ ಇವೆರಡೂ ಸಬ್‌ಮರೀನ್‌ಗಳಲ್ಲಿದ್ದ ಕ್ಷಿಪಣಿಗಳು ಹಾಗೂ ಇತರ ಶಸ್ತ್ರಾಸ್ತ್ರಗಳು ಕೂಡ ಕ್ಷೇಮವಾಗಿರುವ ಸುದ್ದಿ ಹೊರಬಂದಿದ್ದು ಅಂತಾರಾಷ್ಟ್ರೀಯ ಸಮುದಾಯ ನಿಟ್ಟುಸಿರಿಡುವಂತೆ ಮಾಡಿದೆ.

ಆಕಾಶದಲ್ಲಿ ಎರಡು ಉಪಗ್ರಹಗಳು ಒಂದಕ್ಕೊಂದು ಡಿಕ್ಕಿಯಾದ ಘಟನೆ ಯ ಬೆನ್ನಲ್ಲೇ ಈ ಘಟನೆ ಸಂಭವಿಸಿದ್ದು ಅಷ್ಟು ವಿಸ್ತಾರವಾದ ಸಾಗರದಲ್ಲಿ ಎರಡು ಸಬ್‌ಮರೀನ್‌ಗಳು ಅದುಹೇಗೆ ಡಿಕ್ಕಿಯಾದವು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿವೆ.

ಸಬ್‌ಮರೀನ್‌ಗಳು ತಮ್ಮ ಸುತ್ತಮುತ್ತ ಇರುವ ಇತರ ನೌಕೆ ಹಾಗೂ ಸಬ್‌ಮರೀನ್‌ಗಳನ್ನು ಗುರುತಿಸಲು ಅನುವುಮಾಡಿಕೊಡುವ ಸೋನಾರ್ ಉಪಕರಣ ಹೊಂದಿರುತ್ತವೆ. ಇದೇರೀತಿ ತಮ್ಮ ರಕ್ಷಣೆಗಾಗಿ ಇತರ ಸಬ್‌ಮರೀನ್‌ಗಳ ಸೋನಾರ್ ಕಣ್ಣಿಗೆ ಬೀಳದಿರಲು ಸೋನಾರ್ ವಿರೋಧಿ ಉಪಕರಣಗಳನ್ನೂ ಅಳವಡಿಸಿಕೊಂಡಿರುತ್ತವೆ. ಈ ಉಪಕರಣಗಳು "ಬಹಳ ಹೆಚ್ಚಿನ" ಕಾರ್ಯಕ್ಷಮತೆ ತೋರಿಸಿದ್ದು ಈ ಅಪಘಾತಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಗುರುವಾರ, ಫೆಬ್ರವರಿ 12, 2009

ಆಕ್ಸಿಡೆಂಟ್ ಆಗ್ಹೋಗಿದೆ!

ಟಿ ಜಿ ಶ್ರೀನಿಧಿ

ಕಳೆದ ವಾರದಲ್ಲಿ ಹೆಚ್ಚೂಕಡಿಮೆ ಪ್ರತಿ ದಿವಸವೂ ಕೇಳಿಬರುತ್ತಿರುವ ವಿಮಾನ ಅಪಘಾತ ಕೊಂಚದರಲ್ಲೇ ತಪ್ಪಿದ ಸುದ್ದಿಗಳ ನಡುವೆ ಈಗ ವಿಮಾನಗಳಿಗೂ ಮೇಲೆ ಹಾರಾಡುವ ಉಪಗ್ರಹಗಳು ಅಪಘಾತಕ್ಕೀಡಾದ ಸುದ್ದಿ ಕೇಳಿಬಂದಿದೆ.

ಕಳೆದ ಮಂಗಳವಾರ ಸಂಭವಿಸಿದ ಘಟನೆಯೊಂದರಲ್ಲಿ ಬಾಹ್ಯಾಕಾಶದಲ್ಲಿ ರೌಂಡು ಹೊಡೆಯುತ್ತಿದ್ದ ಅಮೆರಿಕಾ ಹಾಗೂ ರಷ್ಯಾದ ಉಪಗ್ರಹಗಳು ಮುಖಾಮುಖಿ ಡಿಕ್ಕಿಹೊಡೆದಿವೆ. ಅಂತರಿಕ್ಷದ ಇಂತಹ ಮೊದಲ ಅಪಘಾತ ಎಂದು ಗುರುತಿಸಲಾಗಿರುವ ಈ ಘಟನೆ ಸೈಬೀರಿಯಾದ ಮೇಲೆ ಭೂಮಿಯಿಂದ ಸುಮಾರು ೭೮೦ ಕಿಲೋಮೀಟರುಗಳ ಎತ್ತರದಲ್ಲಿ ಸಂಭವಿಸಿದೆ.

ಈಗಾಗಲೇ ನಿಷ್ಕ್ರಿಯವಾಗಿತ್ತು ಎನ್ನಲಾಗಿರುವ ಹೆಚ್ಚೂಕಡಿಮೆ ಸಾವಿರ ಕೆಜಿ ತೂಕದ ರಷ್ಯಾದ ಉಪಗ್ರಹ ೧೯೯೩ರಲ್ಲಿ ಉಡಾವಣೆಯಾಗಿತ್ತಂತೆ. ಅಪಘಾತದಲ್ಲಿ ಭಾಗಿಯಾಗಿರುವ ೫೬೦ಕಿಲೋ ತೂಕದ ಇನ್ನೊಂದು ಉಪಗ್ರಹ ಅಮೆರಿಕಾದ ಇರಿಡಿಯಂ ಸಂಸ್ಥೆಗೆ ಸೇರಿದ್ದು ೧೯೯೭ರಲ್ಲಿ ಉಡಾವಣೆಯಾಗಿತ್ತು. ಇದು ಇರಿಡಿಯಂ ಸಂಸ್ಥೆ ಒದಗಿಸುವ ಉಪಗ್ರಹ ದೂರವಾಣಿ ಸೇವೆಗಾಗಿ ಬಳಕೆಯಾಗುತ್ತಿದ್ದ ಅನೇಕ ಉಪಗ್ರಹಗಳಲ್ಲಿ ಒಂದು.

ಈ ಉಪಗ್ರಹಗಳು ಅಪಾರ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದಿರುವುದರಿಂದ ಅವೆರಡೂ ನುಚ್ಚುನೂರಾಗಿದ್ದು ಧೂಳು ಹಾಗೂ ಚೂರುಗಳ ದೊಡ್ಡದೊಂದು ಮೋಡವೇ ಸೃಷ್ಟಿಯಾಗಿದೆ. ಈ ಚೂರುಗಳು ಭೂಮಿಯ ವಾತಾವರಣ ಪ್ರವೇಶಿಸಿ ಉರಿದು ಬೂದಿಯಾದರೆ ಪರವಾಗಿಲ್ಲ, ಹಾಗಾಗದೆ ಅವೇನಾದರೂ ಅಂತರಿಕ್ಷದಲ್ಲೇ ಉಳಿದುಕೊಂಡರೆ ಇತರ ಉಪಗ್ರಹಗಳು ಹಾಗೂ ಅಂತರಿಕ್ಷಯಾನಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

೧೯೫೭ರಿಂದ ಈಚೆಗೆ ಉಡಾವಣೆಯಾಗಿರುವ ಉಪಗ್ರಹಗಳ ಸಂಖ್ಯೆ ಸುಮಾರು ಆರು ಸಾವಿರ ತಲುಪಿರುವುದು ಬಾಹ್ಯಾಕಾಶದ ಟ್ರಾಫಿಕ್ಕನ್ನು ಹೆಚ್ಚಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಲಿವೆಯೇ ಎಂಬ ಸಂಶಯ ಹುಟ್ಟುಹಾಕಿದೆ.

ಈ ಲೇಖನ ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿದೆ. ಓದಲು ಇಲ್ಲಿ ಕ್ಲಿಕ್ ಮಾಡಿ!

badge