ಬುಧವಾರ, ಮೇ 9, 2007

ಐಟಿ ಸರ್ವಿಸ್ ಮ್ಯಾನೇಜ್‍ಮೆಂಟ್ (ITSM) ಮತ್ತು ಐಟಿ ಇನ್‍ಫ್ರಾಸ್ಟ್ರಕ್ಚರ್ ಲೈಬ್ರರಿ (ITIL)

ಟಿ ಜಿ ಶ್ರೀನಿಧಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು ಹೆಚ್ಚುತ್ತಿದ್ದಂತೆ ಈ ಕ್ಷೇತ್ರದಲ್ಲಿ ಒದಗಿಸಲಾಗುತ್ತಿರುವ ಸೇವೆಯ ಗುಣಮಟ್ಟದ ಬಗೆಗೆ ನೀಡಲಾಗುತ್ತಿರುವ ಮಹತ್ವ ವ್ಯಾಪಕವಾಗಿ ಹೆಚ್ಚುತ್ತಿದೆ. ಇದರಿಂದಾಗಿ ಐಟಿ ಸೇವೆ ಒದಗಿಸುವ ಸಂಸ್ಥೆಗಳು ತಮ್ಮ ಸೇವೆಗಳನ್ನು ಹೇಗೆ ವ್ಯವಸ್ಥಿತವಾಗಿ ನಿಭಾಯಿಸಬೇಕು ಎನ್ನುವುದೇ ಇದೀಗ ಒಂದು ಪ್ರತ್ಯೇಕ ಕ್ಷೇತ್ರವಾಗಿ ಬೆಳೆದು ನಿಂತಿದೆ. ಈ ಕ್ಷೇತ್ರವೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್ ಅಥವಾ ’ಐಟಿ‌ಎಸ್‌ಎಂ’.
ಐಟಿ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ಪ್ರಯೋಗಿಸಿ ಯಶಸ್ವಿಯಾಗಿರುವ ಉತ್ತಮ ಅಭ್ಯಾಸಗಳು (ಬೆಸ್ಟ್ ಪ್ರಾಕ್ಟೀಸ್) ಹಾಗೂ ಪ್ರಾಸೆಸ್ ಮ್ಯಾನೇಜ್‌ಮೆಂಟ್‌ನಂತಹ ತಂತ್ರಗಳನ್ನು ಉತ್ತಮ ಗುಣಮಟ್ಟದ ಸೇವೆ ನೀಡುವಲ್ಲಿ ಬಳಸಿಕೊಳ್ಳುವುದೇ ಐಟಿ ಸರ್ವಿಸ್ ಮ್ಯಾನೇಜ್‌ಮೆಂಟ್‌ನ ಧ್ಯೇಯ. ಈ ಮೂಲಕ ಸೇವಾಮಟ್ಟ ಒಪ್ಪಂದದ (ಸರ್ವಿಸ್ ಲೆವೆಲ್ ಅಗ್ರಿಮೆಂಟ್) ನಿಬಂಧನೆಗಳಿಗೆ ಒಳಪಟ್ಟಂತೆ ಗ್ರಾಹಕರ ಅಗತ್ಯಗಳಿಗೆ ತಕ್ಕ ಸೇವೆಯನ್ನು ನೀಡಲು ಐಟಿ ಸಂಸ್ಥೆಗಳಿಗೆ ಐಟಿ‌ಎಸ್‌ಎಂ ನೆರವಾಗುತ್ತದೆ.
ಐಟಿ‌ಎಸ್‌ಎಂ ಕ್ಷೇತ್ರದಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಹೊಸ ಹೆಸರು ಐಟಿ‌ಐ‌ಎಲ್ ಅಥವಾ ಐಟಿ ಇನ್‌ಫ್ರಾಸ್ಟ್ರಕ್ಚರ್ ಲೈಬ್ರರಿಯದು. ಐಟಿ ಸೇವಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೇಳಿಬರುವ ತೊಂದರೆಗಳು (ಇನ್‌ಸಿಡೆಂಟ್ ಅಥವಾ ಪ್ರಾಬ್ಲಂ), ಬದಲಾವಣೆಗಳು (ಚೇಂಜ್), ಹೊಸ ಬಿಡುಗಡೆಗಳು (ರಿಲೀಸ್) ಮೊದಲಾದವುಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವಲ್ಲಿ ಐಟಿ‌ಐ‌ಎಲ್ ನೆರವಾಗುತ್ತದೆ.
ಮಾಹಿತಿ ತಂತ್ರಜ್ಞಾನ ಸೇವೆಗಳನ್ನು ನಿಭಾಯಿಸುವಲ್ಲಿ ವಿಶ್ವದಾದ್ಯಂತ ವ್ಯಾಪಕವಾಗಿ ಬಳಕೆಯಾಗುತ್ತಿರುವ ಕಾರ್ಯತಂತ್ರಗಳಲ್ಲಿ ಐಟಿ‌ಐ‌ಎಲ್ ಅಗ್ರಗಣ್ಯವಾಗಿ ಬೆಳೆದುನಿಂತಿದೆ. ಇನ್‌ಸಿಡೆಂಟ್ ಮ್ಯಾನೇಜ್‌ಮೆಂಟ್, ಪ್ರಾಬ್ಲಂ ಮ್ಯಾನೇಜ್‌ಮೆಂಟ್, ಚೇಂಜ್ ಮ್ಯಾನೇಜ್‌ಮೆಂಟ್, ರಿಲೀಸ್ ಮ್ಯಾನೇಜ್‌ಮೆಂಟ್ ಹಾಗೂ ಸರ್ವಿಸ್ ಡೆಸ್ಕ್ ಸೇವೆಗಳಿಗೆ ಸಂಬಂಧಿಸಿದಂತೆ ಬಳಸಬಹುದಾದ ಅತ್ಯುತ್ತಮ ಅಭ್ಯಾಸಗಳ ಬಗೆಗೆ (ಬೆಸ್ಟ್ ಪ್ರಾಕ್ಟೀಸ್) ಐಟಿ‌ಐ‌ಎಲ್ ನಿರ್ದೇಶನಗಳನ್ನು ಒದಗಿಸುತ್ತದೆ.
ಇದೀಗ ವಿಶ್ವವಿಖ್ಯಾತವಾಗಿ ಬೆಳೆದಿರುವ ಐಟಿ‌ಐ‌ಎಲ್ ಅನ್ನು ಮೊತ್ತಮೊದಲ ಬಾರಿಗೆ ಬಳಕೆಗೆ ತಂದದ್ದು ಬ್ರಿಟಿಷ್ ಸರ್ಕಾರದ ಆಫೀಸ್ ಆಫ್ ಗವರ್ನಮೆಂಟ್ ಕಾಮರ್ಸ್. ಆದರೆ ಈಗ ಐಟಿ‌ಐ‌ಎಲ್ ವಿಶ್ವದೆಲ್ಲೆಡೆಯ ಐಟಿ ಸೇವಾ ಸಂಸ್ಥೆಗಳ ಪಾಲಿಗೆ ಆದರ್ಶವಾಗಿದೆ.

ಮಂಗಳವಾರ, ಮೇ 8, 2007

ಅಂಗಡಿ ಸಾಮಾನಿಗೆ ಜೀವತುಂಬುವ ’ಆರ್‌ಎಫ್‌ಐಡಿ’

ಟಿ ಜಿ ಶ್ರೀನಿಧಿ

ಮಹಾನಗರಗಳಲ್ಲಿ ಮೊದಲು ಪ್ರಾರಂಭವಾದ ಸೂಪರ್ ಮಾರ್ಕೆಟ್ ಸಂಸ್ಕೃತಿ ಈಗ ಸಣ್ಣಪುಟ್ಟ ಊರುಗಳಲ್ಲೂ ಕಾಣಿಸಿಕೊಳ್ಳಲು ಶುರುವಾಗಿದೆ. ದೊಡ್ಡದೊಡ್ಡ ಅಂಗಡಿಗಳಲ್ಲಿ ನಮಗೆ ಬೇಕಾದ ವಸ್ತುಗಳನ್ನು ಹೊರಗಡೆಗಿಂತ ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶ ಕೊಡುವ ಈ ಸೂಪರ್‌ಮಾರ್ಕೆಟ್‌ಗಳು ಬಹುತೇಕ ಎಲ್ಲರಿಗೂ ಅಚ್ಚುಮೆಚ್ಚು. ಆದರೆ ಈ ಜನಪ್ರಿಯತೆಯ ಜೊತೆಗೇ ಒಂದು ಸಮಸ್ಯೆ ಕೂಡ ಹುಟ್ಟಿಕೊಂಡಿದೆ. ಅನೇಕ ಸಂದರ್ಭಗಳಲ್ಲಿ ಸೂಪರ್‌ಮಾರ್ಕೆಟ್‌ಗಳಲ್ಲಿ ಅದೆಷ್ಟು ಜನಸಂದಣಿ ಇರುತ್ತದೆಂದರೆ ಸಾಮಾನು ಕೊಳ್ಳುವುದಕ್ಕಿಂತ ಹೆಚ್ಚಿನ ಸಮಯ ಅದಕ್ಕಾಗಿ ಹಣ ಪಾವತಿಸಲು ಬೇಕಾಗುತ್ತದೆ.
ಆದರೆ ಸಾಮಾನುಗಳನ್ನು ಆಯ್ದುಕೊಂಡ ಮೇಲೆ ಬಿಲ್ ಮಾಡಿಸಿ ಹಣ ಪಾವತಿಸಲು ಕಾಯುವ ಬದಲು ಸಾಮಾನುಗಳನ್ನೆಲ್ಲ ತೆಗೆದುಕೊಂಡು ಸೀದಾ ಮನೆಗೆ ಬಂದುಬಿಡುವ ಹಾಗಿದ್ದರೆ?
ಇದೇನು ವಿಚಿತ್ರಾನಪ್ಪಾ ಎಂದು ನೀವು ಕೇಳುವ ಮೊದಲೇ ಹೇಳಿಬಿಡುತ್ತೇನೆ, ಕೇಳಿ: ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಅಥವಾ ಆರ್‌ಎಫ್‌ಐಡಿ ಎಂಬ ತಂತ್ರಜ್ಞಾನದ ಸಹಾಯದಿಂದ ಈ ಕನಸನ್ನು ನನಸು ಮಾಡುವುದು ಸಾಧ್ಯ!
ಈಗ ಚಾಲ್ತಿಯಲ್ಲಿರುವ ಯೂನಿವರ್ಸಲ್ ಪ್ರಾಡಕ್ಟ್ ಕೋಡ್ (ಯುಪಿಸಿ) ’ಬಾರ್ ಕೋಡ್’ ನಿಮಗೆ ಪರಿಚಯವಿರಬೇಕು: ಈ ಬಾರ್ ಕೋಡ್‌ಗಳಲ್ಲಿ ದಪ್ಪ-ಸಣ್ಣ ಗೆರೆಗಳ ಸಂಯೋಜನೆಯಿಂದ ಯಾವುದೇ ವಸ್ತುವಿನ ಬೆಲೆಯನ್ನು ಪ್ರತಿನಿಧಿಸಲಾಗುತ್ತದೆ. ಸೂಪರ್‌ಮಾರ್ಕೆಟ್‌ಗಳಲ್ಲಿ ಬಳಕೆಯಾಗುವ ಪುಟ್ಟ ಸ್ಕ್ಯಾನರ್‌ಗಳು ಈ ಗೆರೆಗಳನ್ನು ಅರ್ಥೈಸಿಕೊಂಡು ನೀವು ಕೊಂಡ ಸಾಮಾನುಗಳ ಬಿಲ್ ತಯಾರಿಸುತ್ತವೆ.
ಇಂತಹ ಬಾರ್ ಕೋಡ್‌ಗಳ ಬದಲು ಅತ್ಯಾಧುನಿಕ ತಂತ್ರಜ್ಞಾನದ ಆರ್‌ಎಫ್‌ಐಡಿ ಟ್ಯಾಗ್‌ಗಳು ಅತಿ ಶೀಘ್ರದಲ್ಲೇ ಬಳಕೆಗೆ ಬರಲಿವೆಯಂತೆ. ಈ ಟ್ಯಾಗ್‌ಗಳ ಬಳಕೆಯಿಂದ ನಮ್ಮ ಶಾಪಿಂಗ್ ಅನುಭವ ಬಹಳ ರೋಚಕವಾಗಿ ಪರವರ್ತನೆಗೊಳ್ಳಲಿದೆ ಎನ್ನುವುದು ತಜ್ಞರ ಹೇಳಿಕೆ.
ಈ ಆರ್‌ಎಫ್‌ಐಡಿ ಟ್ಯಾಗ್‌ಗಳು ಒಂದು ನಿರ್ದಿಷ್ಟ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳುವ ಹಾಗೂ ಆ ಮಾಹಿತಿಯನ್ನು ರೇಡಿಯೋ ಸಂಕೇತಗಳ ಮೂಲಕ ಬಿತ್ತರಿಸುವ ಶಕ್ತಿಯನ್ನು ಹೊಂದಿರುತ್ತವೆ. ಇಂತಹ ಟ್ಯಾಗ್‌ಗಳು ಹಾಗೂ ಅವು ಬಿತ್ತರಿಸುವ ಸಂಕೇತಗಳನ್ನು ಅರ್ಥಮಾಡಿಕೊಳ್ಳಬಲ್ಲ ಗ್ರಾಹಕ(ರೀಡರ್)ಗಳ ನೆರವಿನಿಂದ ಅಪೂರ್ವವಾದ ವ್ಯವಸ್ಥೆಯೊಂದನ್ನು ರೂಪಿಸಬಹುದು.
ನಾವೆಲ್ಲರೂ ನಮ್ಮ ಮನೆಗಳಿಗೆ ಹಾಲಿನ ಪೊಟ್ಟಣಗಳನ್ನು ತರಿಸಿಕೊಳ್ಳುವುದು ಸಾಮಾನ್ಯ ತಾನೆ? ಇಂತಹ ಹಾಲಿನ ಪೊಟ್ಟಣಗಳನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ಡೈರಿಯಲ್ಲಿ ಹಾಲಿನ ಪ್ಯಾಕಿಂಗ್ ನಡೆಯುವಾಗ ಆ ಪೊಟ್ಟಣಗಳಲ್ಲಿ ಒಂದೊಂದು ಆರ್‌ಎಫ್‌ಐಡಿ ಟ್ಯಾಗ್‌ಗಳನ್ನು ಅಳವಡಿಸುತ್ತಾರೆ ಎಂದಿಟ್ಟುಕೊಳ್ಳೋಣ. ಪ್ಯಾಕ್ ಮಾಡಿದ ದಿನಾಂಕ, ಹಾಲಿನ ಪ್ರಮಾಣ, ಆ ಹಾಲನ್ನು ಎಷ್ಟು ದಿನಗಳ ಒಳಗೆ ಉಪಯೋಗಿಸಬೇಕು ಎಂಬಂತಹ ಮಾಹಿತಿಯನ್ನೆಲ್ಲ ಈ ಟ್ಯಾಗ್‌ಗಳಲ್ಲಿ ಶೇಖರಿಸಲಾಗುತ್ತದೆ. ಡೈರಿಯಿಂದ ಹೊರಟ ಈ ಪೊಟ್ಟಣಗಳು ಒಂದು ಸೂಪರ್‌ಮಾರ್ಕೆಟ್‌ಗೆ ಬರುತ್ತವೆ. ಈ ಟ್ಯಾಗ್‌ಗಳಿಂದ ಪ್ರಸಾರವಾಗುವ ಮಾಹಿತಿಯನ್ನು ಅಲ್ಲಿರುವ ರೀಡರ್‌ಗಳು ತಕ್ಷಣವೇ ಗ್ರಹಿಸಿ ಈಗ ಸೂಪರ್‌ಮಾರ್ಕೆಟ್‌ನಲ್ಲಿ ಎಷ್ಟು ಹಾಲಿನ ಪೊಟ್ಟಣಗಳು ದಾಸ್ತಾನಾಗಿವೆ ಎಂಬುದನ್ನು ದಾಖಲಿಸುತ್ತವೆ.
ನಂತರ ನೀವು ಸೂಪರ್‌ಮಾರ್ಕೆಟ್‌ಗೆ ಬಂದು ಹಾಲು ಖರೀದಿಸುತ್ತೀರಿ ಎಂದುಕೊಳ್ಳೋಣ. ಇಲ್ಲಿ ’ಖರೀದಿಸುವುದು’ ಎಂದರೆ ಬಹಳ ಸುಲಭ - ಹಾಲಿನ ಪೊಟ್ಟಣ ಕೈಗೆತ್ತಿಕೊಂಡು ಸೀದಾ ಆಚೆಗೆ ಬರುವುದು ಅಷ್ಟೆ! ನೀವು ಹಾಲಿನ ಪೊಟ್ಟಣದೊಡನೆ ಅಂಗಡಿಯಿಂದ ಹೊರಟ ತಕ್ಷಣ ಕಾರ್ಯಪ್ರವೃತ್ತವಾಗುವ ರೀಡರ್‌ಗಳು ಆ ಹಾಲಿನ ಪೊಟ್ಟಣದ ಬೆಲೆಯನ್ನು ನಿಮ್ಮ ಬ್ಯಾಂಕಿನ ಖಾತೆಯಿಂದ ವರ್ಗಾಯಿಸಿಕೊಳ್ಳುತ್ತವೆ. ದಾಸ್ತಾನಿನಲ್ಲಿದ್ದ ಪೊಟ್ಟಣಗಳ ಪೈಕಿ ಒಂದು ಖರ್ಚಾಯಿತು ಎಂಬುದನ್ನೂ ದಾಖಲಿಸಿಕೊಳ್ಳುತ್ತವೆ.
ನೀವು ಮನೆಗೆ ಬಂದು ಆ ಪೊಟ್ಟಣವನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣವೇ ಅಲ್ಲಿರುವ ರೀಡರ್ ಹಾಲಿನ ಪ್ರಮಾಣ, ಅದನ್ನು ಯಾವತ್ತಿನ ಮುಂಚೆ ಉಪಯೋಗಿಸಬೇಕು ಮುಂತಾದ ವಿವರಗಳನ್ನೆಲ್ಲ ಗ್ರಹಿಸಿಕೊಳ್ಳುತ್ತದೆ. ಇಲ್ಲಿಂದ ಮುಂದಕ್ಕೆ ಹಾಲು ಹಳೆಯದಾಗಿದೆ, ಅಥವಾ ಮುಗಿದುಹೋಗಿದೆ ಮುಂತಾದ ವಿವರಗಳನ್ನೆಲ್ಲ ನಿಮ್ಮ ಫ್ರಿಜ್ ನಿಮಗೆ ಹೇಳುತ್ತದೆ!
ಮುಂಬರುವ ದಿನಗಳಲ್ಲಿ ಆರ್‌ಎಫ್‌ಐಡಿ ಟ್ಯಾಗ್‌ಗಳ ಈ ರೋಚಕ ಜಗತ್ತು ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಕಾಣಲಿದೆ ಎಂಬುದು ವಿಜ್ಞಾನಿಗಳ ಹೇಳಿಕೆ. ಇಂಥ ಉಪಕರಣಗಳ ಬಳಕೆ ಹಾಗೂ ಉತ್ಪಾದನೆ ಇದೇ ಪ್ರಮಾಣದಲ್ಲಿ ಹೆಚ್ಚುತ್ತಾ ಹೋದಾಗ ಅವುಗಳ ಉತ್ಪಾದನಾ ವೆಚ್ಚ ಗಣನೀಯವಾಗಿ ಕಡಿಮೆಯಾಗಲಿದೆ; ಆಗ ಪಕ್ಕದ ಬೀದಿಯ ತರಕಾರಿ ಅಂಗಡಿಯವನೂ ಇವನ್ನು ಉಪಯೋಗಿಸಲು ಶುರುಮಾಡುತ್ತಾನೆ!

ಕಂಪ್ಯೂಟರ್ ಫೊರೆನ್ಸಿಕ್ಸ್

ಟಿ ಜಿ ಶ್ರೀನಿಧಿ

ಫೊರೆನ್ಸಿಕ್ಸ್ ಅಥವಾ ಅಪರಾಧಪತ್ತೆ ಶಾಸ್ತ್ರ - ಅಪರಾಧಗಳು ನಡೆದ ಸಂದರ್ಭದಲ್ಲಿ ಅಲ್ಲಿ ಲಭ್ಯವಿರಬಹುದಾದ ಕುರುಹುಗಳನ್ನು ಪತ್ತೆಮಾಡಿ, ಅಧ್ಯಯನ ನಡೆಸಿ ಅಪರಾಧಿಗಳನ್ನು ಪತ್ತೆಹಚ್ಚಲು ನೆರವು ನೀಡುವ ವಿಜ್ಞಾನದ ಒಂದು ಶಾಖೆ. ಸಮಾಜದ ದುಷ್ಟಶಕ್ತಿಗಳನ್ನು ಹಿಡಿತದಲ್ಲಿಟ್ಟು ಸಾಮಾಜಿಕ ಆರೋಗ್ಯ ಕಾಪಾಡುವಲ್ಲಿ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.
ಆದರೆ ತಂತ್ರಜ್ಞಾನ ಬೆಳೆದಂತೆ ಅಪರಾಧಗಳ ಸ್ವರೂಪವೇ ಬದಲಾಗುತ್ತಿದೆ. ಗಣಕಗಳು ಹಾಗೂ ವಿಶ್ವವ್ಯಾಪಿ ಜಾಲದ ನೆರವಿನಿಂದ ನಡೆಯುತ್ತಿರುವ ಅದೆಷ್ಟೋ ಬಗೆಯ ಹೈಟೆಕ್ ಅಪರಾಧಗಳು ನಾಗರಿಕ ಸಮಾಜದ ನೆಮ್ಮದಿಯನ್ನೇ ಹಾಳುಮಾಡಲು ಹೊರಟಿವೆ.
ಇಂಥ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶದಿಂದ ರೂಪಗೊಂಡಿರುವ ಹೊಸ ಕ್ಷೇತ್ರವೇ ಕಂಪ್ಯೂಟರ್ ಫೊರೆನ್ಸಿಕ್ಸ್. ಡಿಜಿಟಲ್ ಫೊರೆನ್ಸಿಕ್ಸ್ ಎಂದೂ ಪರಿಚಿತವಾಗಿರುವ ಈ ಕ್ಷೇತ್ರ ಗಣಕಗಳಲ್ಲಿ ಶೇಖರವಾಗಿರುವ ಮಾಹಿತಿಯ ಅಧ್ಯಯನನಡೆಸಿ ಸೈಬರ್ ಅಪರಾಧಗಳನ್ನು ಪತ್ತೆಮಾಡುವ ಉದ್ದೇಶ ಹೊಂದಿದೆ. ಕ್ರೆಡಿಟ್ ಕಾರ್ಡ್ ವಂಚನೆ, ಹ್ಯಾಕಿಂಗ್, ಡಿನಯಲ್ ಆಫ್ ಸರ್ವಿಸ್ ಮೊದಲಾದ ಅಪರಾಧಗಳು ಅಥವಾ ಗಣಕದ ನೆರವು ಪಡೆದು ಭಯೋತ್ಪಾದನೆಯಂತಹ ಕೃತ್ಯಗಳು ನಡೆದ ಸಂದರ್ಭದಲ್ಲಿ ಕಂಪ್ಯೂಟರ್ ಫೊರೆನ್ಸಿಕ್ಸ್ ವಹಿಸುವ ಪಾತ್ರ ಬಲು ಮಹತ್ವದ್ದು.

ಪೆಟ್ರೋಲ್ ಬರೋದು ಎಲ್ಲಿಂದ?

ಟಿ ಜಿ ಶ್ರೀನಿಧಿ

ಪೆಟ್ರೋಲ್, ಡೀಸೆಲ್, ಸೀಮೆ ಎಣ್ಣೆ - ಹೀಗೆ ಅನೇಕ ಬಗೆಯ ಇಂಧನಗಳನ್ನು ನಾವು ಪ್ರತಿದಿನವೂ ಒಂದಲ್ಲ ಒಂದು ಬಗೆಯಲ್ಲಿ ಬಳಸುತ್ತಿರುತ್ತೇವೆ. ಆದರೆ ಇವೆಲ್ಲ ಎಲ್ಲಿಂದ ಹೇಗೆ ಬರುತ್ತವೆ ಎನ್ನುವುದು ನಿಮಗೆ ಗೊತ್ತೆ?
ಈ ತೈಲಗಳಿಗೆಲ್ಲ ಮೂಲ ಕಚ್ಚಾ ತೈಲ ಅಥವಾ ಕ್ರೂಡ್ ಆಯಿಲ್, ಭೂಮಿಯೊಳಗೆ ಅದೆಷ್ಟೋ ಆಳದಲ್ಲಿ ಅವಿತಿರುವ ಅತ್ಯಮೂಲ್ಯ ಸಂಪನ್ಮೂಲ.
ಈ ತೈಲವನ್ನು ಹೊರತೆಗೆಯಲೆಂದೇ ಬಹು ದೊಡ್ಡ ತೈಲಬಾವಿಗಳನ್ನು ಕೊರೆಯಲಾಗಿರುತ್ತದೆ. ಭೂಮಿಯ ಆಳದಿಂದ ಕಚ್ಚಾತೈಲವನ್ನು ಹೊರತೆಗೆದು ದೊಡ್ಡದೊಡ್ಡ ಕೊಳವೆಮಾರ್ಗಗಳಿಗೆ ಪೂರೈಸುವುದು ಈ ತೈಲಬಾವಿಗಳ ಕೆಲಸ. ಇದಕ್ಕಾಗಿ ಅತ್ಯಾಧುನಿಕ ಇಂಜಿನಿಯರಿಂಗ್ ತಂತ್ರಜ್ಞಾನ ಬಳಕೆಯಾಗುತ್ತದೆ.
ಸಮುದ್ರದ್ದೋ ಮರುಭೂಮಿಯದೋ ಮಧ್ಯದಲ್ಲಿರುವ ತೈಲಬಾವಿಗಳಿಂದ ಹೊರಬಂದ ಈ ಕಚ್ಚಾತೈಲ ತಮ್ಮ ಮುಂದಿನ ಗುರಿ ಸೇರಲು ಕೊಳವೆಮಾರ್ಗಗಳ ಮೂಲಕ ಪ್ರಯಾಣ ಸಾಗಿಸುತ್ತವೆ. ಸಾವಿರಾರು ಕಿಲೋಮೀಟರ್ ಉದ್ದದ ಈ ಕೊಳವೆಮಾರ್ಗಗಳ ಮೂಲಕ ಕಚ್ಚಾತೈಲ ಸಾಗಲು ಬೇಕಾದ ಒತ್ತಡ ಒದಗಿಸಲು ಕೊಳವೆಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಪಂಪಿಂಗ್ ಕೇಂದ್ರಗಳಿರುತ್ತವೆ. ಹಿಂದಿನ ಕೇಂದ್ರದಿಂದ ಬಂದ ಕಚ್ಚಾತೈಲವನ್ನು ಮುಂದಿನ ಕೇಂದ್ರದವರೆಗೂ ’ನೂಕುವುದು’ ಈ ಕೇಂದ್ರಗಳ ಕೆಲಸ.
ಹೀಗೆ ಕೊಳವೆಮಾರ್ಗದ ಕೊನೆಯ ತನಕ ಪ್ರಯಾಣಿಸುವ ಕಚ್ಚಾತೈಲ ತನ್ನ ಪ್ರಯಾಣದ ಕೊನೆಯಲ್ಲಿ ದೊಡ್ಡದೊಡ್ಡ ತೊಟ್ಟಿಗಳಲ್ಲಿ ಶೇಖರವಾಗುತ್ತದೆ. ಇಲ್ಲಿಂದ ಮುಂದಕ್ಕೆ ಕಚ್ಚಾತೈಲದ ಸಂಸ್ಕರಣೆ ಪ್ರಾರಂಭವಾಗುತ್ತದೆ.
ಕಚ್ಚಾತೈಲದ ಸಂಸ್ಕರಣೆ ನಡೆಯುವುದು ರಿಫೈನರಿ ಎಂಬ ಹೆಸರಿನ ಸಂಸ್ಕರಣಾ ಕೇಂದ್ರಗಳಲ್ಲಿ. ಇಲ್ಲಿ ಕಚ್ಚಾತೈಲವನ್ನು ಹೆಚ್ಚಿನ ತಾಪಮಾನಗಳಲ್ಲಿ ಬಿಸಿಮಾಡಲಾಗುತ್ತದೆ. ಹೀಗೆ ಬಿಸಿಮಾಡಿದಾಗ ಕಚ್ಚಾತೈಲ ವಿವಿಧ ವಸ್ತುಗಳಾಗಿ ವಿಭಜನೆಹೊಂದುತ್ತದೆ. ಹೆಚ್ಚಿನ ಭಾರದಿಂದಾಗಿ ತಳದಲ್ಲಿ ಶೇಖರವಾಗುವ ವಸ್ತು ನಮ್ಮ ರಸ್ತೆಗಳ ಡಾಂಬರೀಕರಣಕ್ಕಾಗಿ ಬಳಕೆಯಾಗುತ್ತದೆ. ಕೀಲೆಣ್ಣೆ, ಮಷೀನ್ ಆಯಿಲ್, ಮೇಣ ಮುಂತಾದವುಗಳು ದೊರೆತ ನಂತರ ಪೆಟ್ರೋಲ್ ಸಿಗುತ್ತದೆ. ಅಲ್ಲಿಂದ ಮುಂದಕ್ಕೆ ಅಡುಗೆ ಅನಿಲ (ಎಲ್‍ಪಿಜಿ) ಕೂಡ ದೊರಕುತ್ತದೆ.
ಇಲ್ಲಿಂದ ಮುಂದೆ ಕೊಳವೆಮಾರ್ಗಗಳು, ರೈಲುಗಳು ಹಾಗೂ ಲಾರಿಗಳ ಮೂಲಕ ಪಯಣಿಸುವ ಪೆಟ್ರೋಲು ನಿಮ್ಮ ಊರಿನ ಪೆಟ್ರೋಲ್ ಬಂಕ್ ತಲುಪುತ್ತದೆ, ನಿಮ್ಮ ವಾಹನಕ್ಕೆ ಆಹಾರ ಒದಗಿಸುತ್ತದೆ!
_____________________
ಈ ಲೇಖನದಲ್ಲಿದ್ದ ಮಾಹಿತಿ ದೋಷವನ್ನು ಸರಿಪಡಿಸಲು ನೆರವಾದ ’ಬಾನಾಡಿ’ಗೆ ಧನ್ಯವಾದಗಳು!
badge