ಬುಧವಾರ, ಅಕ್ಟೋಬರ್ 29, 2014

ಸೈಬರ್ ಯುದ್ಧ

ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಹೀಗಿದ್ದರೂ ಯುದ್ಧ ನಡೆಯುತ್ತದೆ - ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ! 'ಸೈಬರ್ ಯುದ್ಧ' ಕುರಿತು ನವೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಮೊದಲ ವಿಶ್ವಯುದ್ಧ ಪ್ರಾರಂಭವಾಗಿ ಒಂದು ಶತಮಾನ ಕಳೆದ ನೆನಪಿಗೆ ಈ ವರ್ಷ (೨೦೧೪) ಸಾಕ್ಷಿಯಾಗಿದೆ. ಅದರೊಡನೆ ಮಹಾಯುದ್ಧದ ಕಹಿನೆನಪುಗಳೂ ಮರಳಿಬಂದಿವೆ. ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಬೆಳೆದಿರುವ ಪರಿಯನ್ನು ನೆನಪಿಸಿಕೊಂಡರಂತೂ ಇನ್ನೊಂದು ಮಹಾಯುದ್ಧದ ಸಾಧ್ಯತೆಯೇ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ.

ಹೌದಲ್ಲ, ಈಗ ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? ಅಣುಬಾಂಬುಗಳು ಸಿಡಿದು, ವಿಷಾನಿಲಗಳು ಎಲ್ಲೆಲ್ಲೂ ಆವರಿಸಿಕೊಂಡು, ಭೂಮಿಯೆಲ್ಲ ಮರಳುಗಾಡಾಗಿ... ಯಾಕೆ ಕೇಳುತ್ತೀರಿ ಆ ಕತೆ? ಎನ್ನುತ್ತೀರಾ?

ಇದೆಲ್ಲ ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಈಗ ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಹೀಗಿದ್ದರೂ ಯುದ್ಧ ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಆ ಯುದ್ಧ ನಡೆಯುವುದು ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ!

ಶುಕ್ರವಾರ, ಅಕ್ಟೋಬರ್ 17, 2014

ಗಾಯತ್ರಿ ಮೂರ್ತಿ ಹೇಳುತ್ತಾರೆ... "ಯಾವುದೇ ಕಾರ್ಯವನ್ನು ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದಾಗಲೇ ಅದು ಉತ್ತಮವಾಗಿ ನಡೆಯಲು ಸಾಧ್ಯ"

ನಾವೆಲ್ಲ ಕ್ಲಿಷ್ಟವೆಂದು ಭಾವಿಸುವ ಭೌತವಿಜ್ಞಾನದಂತಹ ವಿಷಯವನ್ನೂ ಸರಳವಾಗಿ ಹೇಳಬಹುದೆಂದು ತೋರಿಸಿಕೊಟ್ಟವರಲ್ಲಿ ಶ್ರೀಮತಿ ಗಾಯತ್ರಿ ಮೂರ್ತಿಯವರು  ಒಬ್ಬರು. ಮೈಸೂರು ವಿವಿಯಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಗಾಯತ್ರಿಯವರು ಮೂರು ದಶಕಗಳ ಅಧ್ಯಾಪನದ ನಂತರ ನಿವೃತ್ತರಾಗಿದ್ದಾರೆ. ಗಾಳಿ, ಶಾಖ, ನೀರು, ಬೆಳಕು ಹಾಗೂ ಶಬ್ದಲೋಕ ಎನ್ನುವ ಕೃತಿಗಳು ಹತ್ತಕ್ಕೂ ಹೆಚ್ಚು ಮುದ್ರಣ ಕಂಡಿವೆ. ನಿಶ್ಶಬ್ದದೊಳಗಿನ ಶಬ್ದ, ದೀಪಗಳು, ಎಕ್ಸ್ ಕಿರಣಗಳ ಅದೃಶ್ಯಲೋಕ - ಇವು ಗಾಯತ್ರಿ ಮೂರ್ತಿಯವರ ಇತರ ಕೃತಿಗಳಲ್ಲಿ ಕೆಲವು. ವಿಜ್ಞಾನ ಸಂವಹನದ ಜೊತೆಗೆ ಮಕ್ಕಳ ಸಾಹಿತ್ಯ ಹಾಗೂ ಲಲಿತಪ್ರಬಂಧಗಳ ರಚನೆಯಲ್ಲೂ ಗಾಯತ್ರಿಯವರಿಗೆ ಆಸಕ್ತಿಯಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ..  

ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಾಲೇಜಿನಲ್ಲಿ ಭೌತವಿಜ್ಞಾನದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದೆ. ವಿಜ್ಞಾನ ಬೋಧನೆ ಕೂಡ ವಿಜ್ಞಾನ ಸಂವಹನ ಅಲ್ಲವೇ? ಮಕ್ಕಳಿಗಾಗಿ ಬರೆಯಲಾದ ವಿಜ್ಞಾನದ ಪುಸ್ತಕಗಳನ್ನು ಪರಿಶೀಲಿಸಿದಾಗ ಅನೇಕ ಪುಸ್ತಕಗಳಲ್ಲಿ ಮಕ್ಕಳಿಗೆ ಮಾಹಿತಿ ತಿಳಿಸುವ ಕಾತರ ಕಂಡು ಬಂತೇ ಹೊರತು ಮಾಹಿತಿ ತಿಳಿಸುವಲ್ಲಿ ಇರಬೇಕಾದ ವಿವೇಚನೆ, ಶಿಸ್ತು, ಭಾಷೆಯ ಸರಳತೆಗಳೆಲ್ಲ ಇಲ್ಲದಿರುವುದನ್ನು ಗಮನಿಸಿದೆ. ಆಗ ಮಕ್ಕಳಿಗೆ ಸುಲಭವಾಗಿ ಅರಿವಾಗುವಂತಹ ಸರಳ ಭಾಷೆಯಲ್ಲಿ ವಿಜ್ಞಾನ ಪುಸ್ತಕಗಳನ್ನು ಬರೆಯಬೇಕೆಂಬ ನಿರ್ಧಾರ ಮಾಡಿದೆ.

ಶನಿವಾರ, ಅಕ್ಟೋಬರ್ 11, 2014

ಡಾ. ಶೈಲಜಾ ಹೇಳುತ್ತಾರೆ... "ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು"

ಕನ್ನಡದಲ್ಲಿ ಬಹುಸಮಯದಿಂದ ವಿಜ್ಞಾನದ ಕುರಿತ ಲೇಖನ-ಪುಸ್ತಕಗಳನ್ನು ಬರೆಯುತ್ತಿರುವ ಅಪರೂಪದ ಸಂವಹನಕಾರರು ಡಾ. ಬಿ. ಎಸ್. ಶೈಲಜಾ. ಪ್ರಸ್ತುತ ಇವರು ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕಿಯಾಗಿದ್ದಾರೆ. ಪ್ರಮುಖ ಪತ್ರಿಕೆಗಳಲ್ಲಿ ಲೇಖನ-ಅಂಕಣಗಳಷ್ಟೇ ಅಲ್ಲದೆ ‘ಬಾನಿಗೊಂದು ಕೈಪಿಡಿ’, ‘ಸಫಾರಿ ಎಂಬ ಲಕ್ಷುರಿ’, ‘ಶುಕ್ರಗ್ರಹದ ಸಂಕ್ರಮಣ’, ‘ಆಗಸದ ಅಲೆಮಾರಿಗಳು’, ‘ಏನು...? ಗಣಿತ ಅಂದ್ರಾ...?’ ಮುಂತಾದ ಹಲವು ಪುಸ್ತಕಗಳನ್ನೂ ರಚಿಸಿದ್ದರೆ. ಇವರ ‘ಶುಕ್ರಗ್ರಹದ ಸಂಕ್ರಮಣ’ ಹಾಗೂ ‘ಆಗಸದ ಅಲೆಮಾರಿಗಳು’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ. ೨೦೧೩ರಲ್ಲಿ ಬಿಡುಗಡೆಯಾದ 'ಬಾಲಂಕೃತ ಚುಕ್ಕಿ: ಧೂಮಕೇತು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ‘ಹಸೂಡಿ ವೆಂಕಟಾಚಲಶಾಸ್ತ್ರಿ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ದೊರೆತಿದೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಮೂಲತಃ ವಿಜ್ಞಾನಿ; ಸಂವಹನ ನನ್ನ ಕ್ಷೇತ್ರವಲ್ಲ. ಆದರೆ ಕನ್ನಡದ ಮಕ್ಕಳ ಬಗ್ಗೆ ಕಾಳಜಿ, ಅವರಿಗೆ ಅತ್ಯುತ್ತಮ ಪುಸ್ತಕಗಳನ್ನು ತಲುಪಿಸಬೇಕು ಎಂಬ ಆಸಕ್ತಿ ಮತ್ತು ಬಾಲ್ಯದಲ್ಲಿ ಓದಿದ್ದ ಅನೇಕ ಪುಸ್ತಕಗಳ ಪ್ರಭಾವ ನನ್ನನ್ನು ಬರೆಯುವಂತೆ ಪ್ರೇರೇಪಿಸಿತು.

ನೀವು ಮೆಚ್ಚುವ / ನಿಮ್ಮ ಮೇಲೆ ಪ್ರಭಾವ ಬೀರಿದ ಇತರ ವಿಜ್ಞಾನ ಸಂವಹನಕಾರರು ಯಾರು?
ಕನ್ನಡದಲ್ಲಿ ಪಾ ವೆಂ ಆಚಾರ್ಯ, ಜಿ ಟಿ ನಾರಾಯಣರಾಯರು, ಶಿವರಾಮ ಕಾರಂತರು,  ಬೆಳ್ಳಾವೆ ವೆಂಕಟನಾರಣಪ್ಪನವರು ಮತ್ತು ಈಚೆಗೆ ಟಿ. ಆರ್. ಅನಂತರಾಮು ಹಾಗೂ ನಾಗೇಶ ಹೆಗಡೆ. ಅಲ್ಲದೆ ನೀವು ಕೇಳಿರದ ಹೆಸರುಗಳೂ ಇವೆ - ಆನಂದ ವರ್ಟಿ, ವೆಲ್ಲಾಲ ಸತ್ಯಂ, ಹೀಗೆ.

ಭಾನುವಾರ, ಅಕ್ಟೋಬರ್ 5, 2014

ನಾರಾಯಣ ಬಾಬಾನಗರ ಹೇಳುತ್ತಾರೆ... "ವಿಜ್ಞಾನ ಸಂಘದಿಂದ ನಡೆಸಿದ ಚಟುವಟಿಕೆಗಳು ವಿಜ್ಞಾನ ಸಂವಹನದಲ್ಲಿ ಆಸಕ್ತಿ ಮೂಡಿಸಿದವು"

ವಿಜ್ಞಾನದ ಕಲಿಕೆ ಕಬ್ಬಿಣದ ಕಡಲೆಯಾಗದೆ ಖುಷಿಕೊಡುವ ಕೆಲಸವಾಗಬೇಕೆಂದು ನಂಬಿರುವ, ತಮ್ಮ ವಿದ್ಯಾರ್ಥಿಗಳಿಗೆ ಅದೇ ಅನುಭವವನ್ನು ಕಟ್ಟಿಕೊಡುತ್ತಿರುವ ಅಪರೂಪದ ಶಿಕ್ಷಕರಲ್ಲಿ ಶ್ರೀ ನಾರಾಯಣ ಬಾಬಾನಗರ ಕೂಡ ಒಬ್ಬರು. ವಿಜಾಪುರ ಸಮೀಪದ ಕಾಖಂಡಕಿಯವರಾದ ನಾರಾಯಣರು ಪ್ರಾಣಿಶಾಸ್ತ್ರ ಹಾಗೂ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರೌಢಶಾಲಾ ವಿಜ್ಞಾನ ಶಿಕ್ಷಕರಾಗಿರುವ ಅವರು ಆಟಿಕೆಗಳ ಮೂಲಕ ಪಾಠ ಹೇಳುವ ವಿನೂತನ ಪ್ರಯೋಗ ಮಾಡಿದ್ದಾರೆ, ಹಲವೆಡೆಗಳಲ್ಲಿ ಪ್ರಾತ್ಯಕ್ಷಿಕೆಗಳನ್ನೂ ನೀಡಿದ್ದಾರೆ. ಪತ್ರಿಕಾ ಲೇಖನಗಳಷ್ಟೇ ಅಲ್ಲದೆ 'ಕುಂಟಾಬಿಲ್ಲೆ', 'ವಿಜ್ಞಾನ ವಿಹಾರ', 'ಬಣ್ಣದ ಬಾಲಂಗೋಚಿ', 'ಕೌತುಕದ ಚುಚ್ಚುಮದ್ದು! ...ಸೋಜಿಗದ ಸೂಜಿಮದ್ದು', 'ಆಹಾ! ಆಟಿಕೆಗಳು' ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಿ. ಎನ್. ಆರ್. ರಾವ್ ಶಿಕ್ಷಣ ಪ್ರತಿಷ್ಠಾನದ 'ಉತ್ತಮ ವಿಜ್ಞಾನ ಶಿಕ್ಷಕ' ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇಜ್ಞಾನ ಡಾಟ್ ಕಾಮ್ ಸಂಪಾದಕ ಟಿ. ಜಿ. ಶ್ರೀನಿಧಿ ಜೊತೆಗೆ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದು ಹೀಗೆ...
ವಿಜ್ಞಾನ-ತಂತ್ರಜ್ಞಾನ ಸಂವಹನ ಕ್ಷೇತ್ರಕ್ಕೆ ನೀವು ಬರಲು ಕಾರಣವಾದ ಅಂಶಗಳೇನು?
ನಾನು ಕಲಿತಿದ್ದು ಒಂದು ಚಿಕ್ಕ ಹಳ್ಳಿಯ ಸರಕಾರಿ ಶಾಲೆಯಲ್ಲಿ. ಅಲ್ಲಿ ಪರಿಸರದ ಬೆರಗುಗಳಿಗೆ ಉತ್ತರಗಳು ಅಂತ ಸಿಕ್ಕಿದ್ದು ತುಂಬಾ ಅಪರೂಪ. ಉತ್ತರ ಕೇಳಿದಾಗ ಹೇಳಬೇಕಾದವರಿಂದ ನಿರಾಶೆ ಸಿಕ್ಕಿದ್ದೇ ಹೆಚ್ಚು ಸಲ. ಪ್ರೌಢ ಶಿಕ್ಷಣ ಮುಗಿಸಿ ನಗರದ ಕಾಲೇಜಿಗೆ ಸೇರಿದಾಗ ಕೀಳರಿಮೆಯೇ ತುಂಬಿ ತುಳುಕಾಡಿತು. ಪಠ್ಯದ ಆಚೆಗಿನ ವಿಜ್ಞಾನ ಸಂಬಂಧಿ ಪ್ರಶ್ನೆಗಳನ್ನು ಕೇಳಿದಾಗ ಉಡಾಫೆಯ ಉತ್ತರಗಳೇ ದೊರಕಿದವು. ಏಕೆ?ಹೇಗೆ? ಎಂಬ ಪ್ರಶ್ನೆಗಳಿಗೆ ಸಮಾಧಾನದ ಉತ್ತರಗಳು ಅಂತ ಸಿಕ್ಕದ್ದು ಪದವಿ ಓದುವಾಗ.
badge