ಬುಧವಾರ, ಅಕ್ಟೋಬರ್ 29, 2014

ಸೈಬರ್ ಯುದ್ಧ

ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎಂದು ತಜ್ಞರು ಹೇಳುತ್ತಾರೆ. ಹೀಗಿದ್ದರೂ ಯುದ್ಧ ನಡೆಯುತ್ತದೆ - ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ! 'ಸೈಬರ್ ಯುದ್ಧ' ಕುರಿತು ನವೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ ಇಲ್ಲಿದೆ.
ಟಿ. ಜಿ. ಶ್ರೀನಿಧಿ

ಮೊದಲ ವಿಶ್ವಯುದ್ಧ ಪ್ರಾರಂಭವಾಗಿ ಒಂದು ಶತಮಾನ ಕಳೆದ ನೆನಪಿಗೆ ಈ ವರ್ಷ (೨೦೧೪) ಸಾಕ್ಷಿಯಾಗಿದೆ. ಅದರೊಡನೆ ಮಹಾಯುದ್ಧದ ಕಹಿನೆನಪುಗಳೂ ಮರಳಿಬಂದಿವೆ. ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ-ತಂತ್ರಜ್ಞಾನಗಳ ಬೆಳೆದಿರುವ ಪರಿಯನ್ನು ನೆನಪಿಸಿಕೊಂಡರಂತೂ ಇನ್ನೊಂದು ಮಹಾಯುದ್ಧದ ಸಾಧ್ಯತೆಯೇ ನಮ್ಮನ್ನು ಬೆಚ್ಚಿಬೀಳಿಸುತ್ತಿದೆ.

ಹೌದಲ್ಲ, ಈಗ ಇನ್ನೊಂದು ಮಹಾಯುದ್ಧವೇನಾದರೂ ಶುರುವಾದರೆ ಹೇಗಿರಬಹುದು? ಅಣುಬಾಂಬುಗಳು ಸಿಡಿದು, ವಿಷಾನಿಲಗಳು ಎಲ್ಲೆಲ್ಲೂ ಆವರಿಸಿಕೊಂಡು, ಭೂಮಿಯೆಲ್ಲ ಮರಳುಗಾಡಾಗಿ... ಯಾಕೆ ಕೇಳುತ್ತೀರಿ ಆ ಕತೆ? ಎನ್ನುತ್ತೀರಾ?

ಇದೆಲ್ಲ ಹಳೆಯ ಕಲ್ಪನೆ ಎನ್ನುತ್ತಾರೆ ತಜ್ಞರು. ಈಗ ಇನ್ನೊಂದು ವಿಶ್ವಸಮರವೇನಾದರೂ ಪ್ರಾರಂಭವಾದರೆ ಅಂತಹುದೊಂದು ಯುದ್ಧದಲ್ಲಿ ವಿಮಾನಗಳು-ಟ್ಯಾಂಕುಗಳು ಬಂದು ಬಾಂಬು ಸಿಡಿಸುವುದಿಲ್ಲ, ಸೈನಿಕರು ಮುಖಾಮುಖಿಯಾಗಿ ಹೋರಾಡುವುದೂ ಇಲ್ಲ ಎನ್ನುವುದು ಅವರ ಅಭಿಪ್ರಾಯ.

ಹೀಗಿದ್ದರೂ ಯುದ್ಧ ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ಆ ಯುದ್ಧ ನಡೆಯುವುದು ರಣರಂಗದಲ್ಲಲ್ಲ, ಕಂಪ್ಯೂಟರಿನಲ್ಲಿ!

ಕಂಪ್ಯೂಟರ್ ಜಗತ್ತಿಗೆ ಭಯೋತ್ಪಾದನೆ ಹೊಸ ವಿಷಯವೇನಲ್ಲ. ಇಂಟರ್‌ನೆಟ್ ಲೋಕದ ಅಗಾಧ ಸಾಧ್ಯತೆಗಳನ್ನು ದುರುದ್ದೇಶಗಳಿಗಾಗಿ ಬಳಸಿಕೊಳ್ಳುವ ಬೇಕಾದಷ್ಟು ಜನರಿದ್ದಾರೆ. ಯಾರದೋ ಕ್ರೆಡಿಟ್ ಕಾರ್ಡ್ ಮಾಹಿತಿ, ಇಮೇಲ್ ಪಾಸ್‌ವರ್ಡ್ ಇತ್ಯಾದಿಗಳನ್ನೆಲ್ಲ ಕದ್ದು ದುರ್ಬಳಕೆ ಮಾಡಿಕೊಳ್ಳುವ ಕಳ್ಳರಿಂದ ಪ್ರಾರಂಭಿಸಿ ವಿದೇಶಗಳ ರಹಸ್ಯ ಮಾಹಿತಿ ಕದಿಯುವ, ವೆಬ್‌ಸೈಟುಗಳ ಮೇಲೆ ದಾಳಿ ಮಾಡಿ ಬ್ಲ್ಯಾಕ್‌ಮೇಲ್ ಮಾಡುವ ಹೈಟೆಕ್ ಪಾತಕಿಗಳವರೆಗೆ ಅದೆಷ್ಟೋ ಬಗೆಯ ಕ್ರಿಮಿನಲ್‌ಗಳು ಜಾಲಲೋಕದಲ್ಲಿದ್ದಾರೆ. ಸರ್ವರ್‌ಗಳತ್ತ ಭಾರೀ ಪ್ರಮಾಣದ ಮಾಹಿತಿ ಹರಿಬಿಟ್ಟು ಅದರ ಕಾರ್ಯಾಚರಣೆಗೆ ಅಡ್ಡಿಮಾಡುವ ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ ಅಥವಾ ಡಿಡಿಒಎಸ್ ದಾಳಿಯಂತೂ ಬಹಳ ಸಾಮಾನ್ಯವೇ ಆಗಿಬಿಟ್ಟಿದೆ.

ಸಾಮಾನ್ಯವಾಗಿ ಯಾವುದೋ ಸಂಸ್ಥೆ ಅಥವಾ ನಿರ್ದಿಷ್ಟ ಜಾಲತಾಣದ ವಿರುದ್ಧ ನಡೆಯುತ್ತಿದ್ದ ಇಂತಹ ದಾಳಿಗಳು ಒಂದು ದೇಶ ಅಥವಾ ಸರಕಾರದ ವಿರುದ್ಧ ತಿರುಗಿದ ಉದಾಹರಣೆ ೨೦೦೭ರಲ್ಲಿ ಕೇಳಿಬಂತು. ಸೋವಿಯತ್ ಯುಗದ ಸ್ಮಾರಕವೊಂದನ್ನು ಸ್ಥಳಾಂತರಿಸಿತು ಎಂಬ ಕಾರಣಕ್ಕಾಗಿ ಎಸ್ಟೋನಿಯಾ ದೇಶದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ರಷ್ಯಾದ ಕುತಂತ್ರಿಗಳು ನಡೆಸಿದ ಈ ದಾಳಿ ಎಸ್ಟೋನಿಯಾದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿತ್ತು. ದೇಶದೇಶಗಳ ನಡುವಿನ ಸಮರದ ಹೊಸ ಮುಖವನ್ನು ಜಗತ್ತಿಗೆ ಪರಿಚಯಿಸಿದ ಈ ಘಟನೆಯನ್ನು ಮೊದಲನೇ ವೆಬ್ ಯುದ್ಧ ಎಂದೂ ಗುರುತಿಸಲಾಗುತ್ತದೆ.

ಮುಂದೆ ೨೦೦೮ರಲ್ಲಿ ರಷ್ಯಾ ಹಾಗೂ ಜಾರ್ಜಿಯಾ ನಡುವೆ ಯುದ್ಧ ನಡೆದ ಸಂದರ್ಭದಲ್ಲೂ ಜಾರ್ಜಿಯಾದ ಕಂಪ್ಯೂಟರ್ ವ್ಯವಸ್ಥೆಯ ಮೇಲೆ - ಜಾಲತಾಣಗಳ ಮೇಲೆ ದೊಡ್ಡಪ್ರಮಾಣದಲ್ಲೇ ದಾಳಿ ನಡೆದಿತ್ತು.

ಆದರೆ ಈ ಬಗೆಯ ಯುದ್ಧಗಳು ಎಷ್ಟೇ ಗಂಭೀರವಾದರೂ ಅದರಿಂದ ಆಗುವ ಹಾನಿಯ ಬಹುಪಾಲು ಡಿಜಿಟಲ್ ಪ್ರಪಂಚಕ್ಕಷ್ಟೆ ಸೀಮಿತವಾಗಿತ್ತು. ಹಾಗಾಗಿ ನಮಗೂ ಕಂಪ್ಯೂಟರಿಗೂ ಸಂಬಂಧವಿಲ್ಲ ಎನ್ನುವವರು ಆ ನಿಟ್ಟಿನಲ್ಲಿ ತಲೆಕೆಡಿಸಿಕೊಳ್ಳದಿದ್ದರೂ ಪರವಾಗಿರಲಿಲ್ಲ; ದೈನಂದಿನ ಬದುಕಿನ ಪ್ರತಿ ಹಂತದಲ್ಲೂ ಕಂಪ್ಯೂಟರ್ ಬಳಸುವ, ಇಂಟರ್‌ನೆಟ್ ಮೂಲಕವೇ ಮತದಾನ ಮಾಡುವ ಎಸ್ಟೋನಿಯಾದಂತಹ ದೇಶಕ್ಕೆ ಇದು ತೊಂದರೆಮಾಡಬಹುದು, ಆದರೆ ಕಂಪ್ಯೂಟರಿನ ಕಡತವೂ ಕೆಂಪುಪಟ್ಟಿಯೊಳಗೆ ಸೇರಿ ಟೇಬಲ್ಲಿನಿಂದ ಟೇಬಲ್ಲಿಗೆ ಅಲೆಯುವ ನಮ್ಮ, ಹಾಗೂ ನಮ್ಮಂತಹ ಇನ್ನೆಷ್ಟೋ ದೇಶಗಳಿಗೆ ವೆಬ್ ಯುದ್ಧ ಏನು ತಾನೆ ಮಾಡಬಲ್ಲದು ಎಂಬ ಭಾವನೆ ವ್ಯಾಪಕವಾಗಿತ್ತು.

ಆದರೆ ಈಚಿನ ಕೆಲ ಘಟನೆಗಳನ್ನು ಗಮನಿಸಿದರೆ ಇಂತಹ ಉದಾಸೀನ ಮನೋಭಾವ ಬಹಳ ಸಮಯ ಉಳಿಯುವಂತಿಲ್ಲವೇನೋ ಎನ್ನಿಸುತ್ತಿದೆ.

ಕಂಪ್ಯೂಟರಿಗೆ ಕನ್ನಹಾಕಿ ದೇಶದ ರಹಸ್ಯಗಳನ್ನೆಲ್ಲ ಯಾರಾದರೂ ಕದಿಯುವುದು ಸಣ್ಣ ವಿಷಯವೇನಲ್ಲ, ನಿಜ. ಆದರೆ ರೈಲು-ವಿಮಾನ ಸಂಚಾರ ವ್ಯವಸ್ಥೆಯನ್ನೋ ವಿದ್ಯುತ್ ಜಾಲವನ್ನೋ ಅಣುಶಕ್ತಿ ಕೇಂದ್ರಗಳನ್ನೋ ಬಾಹ್ಯಾಕಾಶ ಯೋಜನೆಯನ್ನೋ ನಿಯಂತ್ರಿಸುವ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ಶತ್ರುಗಳು ದಾಳಿಮಾಡಿದರೆ ನಮ್ಮ ನಿಮ್ಮಂತಹ ಜನಸಾಮಾನ್ಯರ ಕತೆಯೇನಾಗಬಹುದು?

ಕಂಪ್ಯೂಟರ್ ಸುರಕ್ಷತಾ ತಜ್ಞರು ಭಯಪಡುತ್ತಿರುವ ಇಂತಹ ದಾಳಿಗಳೇನಾದರೂ ನಡೆದರೆ ಕಲ್ಪಿಸಿಕೊಳ್ಳಲೂ ಭಯವಾಗುವ ಇಂತಹ ಪರಿಸ್ಥಿತಿ ನಿಜಕ್ಕೂ ಸೃಷ್ಟಿಯಾಗಲಿದೆಯಂತೆ. ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಪ್ರಾರಂಭಿಸಿ ವಿಮಾನ ಸಂಚಾರ ನಿಯಂತ್ರಣ ವ್ಯವಸ್ಥೆಯವರೆಗೆ ಆಧುನಿಕ ತಂತ್ರಜ್ಞಾನ ಬಳಸುವ ಯಾವುದೇ ಕ್ಷೇತ್ರದ ಮೇಲೂ ಇಂತಹ ದಾಳಿ ನಡೆಯಬಹುದು ಎಂದು ಅವರು ಹೇಳುತ್ತಾರೆ. ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಕಂಪ್ಯೂಟರುಗಳ ಬಳಕೆ ವ್ಯಾಪಕವಾಗುತ್ತಿರುವುದು ಅವರ ಈ ಭೀತಿಗೆ ಕಾರಣ.

ಇಂತಹ ಕಂಪ್ಯೂಟರುಗಳ ನಡುವೆ ಸಂಪರ್ಕ ಏರ್ಪಡಿಸಿಕೊಳ್ಳಲು ಕಂಪ್ಯೂಟರ್ ಜಾಲಗಳ ಬಳಕೆಯಾಗುತ್ತದಲ್ಲ, ತೊಂದರೆ ಶುರುವಾಗುವುದೇ ಅಲ್ಲಿ. ಅಂತರಜಾಲದ ಮೂಲಕ ಯಾರಾದರೂ ಕುತಂತ್ರಿಗಳು ಇಂತಹ ಜಾಲದೊಳಕ್ಕೆ ತಲೆಹಾಕಿದರೆಂದರೆ ಅಲ್ಲಿ ಸಮಸ್ಯೆ ಕಾಣಿಸಿಕೊಂಡಿತೆಂದೇ ಅರ್ಥ!

ಸಿದ್ಧಾಂತಗಳಿಗೆ, ಹೆಚ್ಚೆಂದರೆ ಪ್ರಯೋಗಾಲಯಕ್ಕಷ್ಟೆ ಸೀಮಿತವಾಗಿದ್ದ ಇಂತಹುದೊಂದು ಸಾಧ್ಯತೆ ನಿಜಜೀವನದಲ್ಲಿ ಕಾಣಿಸಿಕೊಂಡಿದ್ದು, ಜಗತ್ತನ್ನು ಬೆಚ್ಚಿಬೀಳಿಸಿದ್ದು ೨೦೧೦ರಲ್ಲಿ. ಆ ವರ್ಷದಲ್ಲಿ ಪತ್ತೆಯಾದ ಸ್ಟಕ್ಸ್‌ನೆಟ್ ಎಂಬ ಕುತಂತ್ರಾಂಶದ ಗುರಿಯಾಗಿದ್ದದ್ದು ಇರಾನ್ ದೇಶದ ಅಣುಶಕ್ತಿ ಕಾರ್ಯಕ್ರಮ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯುರೇನಿಯಂ ಸೆಂಟ್ರಿಫ್ಯೂಜ್‌ಗಳನ್ನು ನಿಯಂತ್ರಿಸುತ್ತಿದ್ದ ಕಂಪ್ಯೂಟರಿನೊಳಗೆ ಸೇರಿಕೊಂಡಿದ್ದ ಈ ಕುತಂತ್ರಾಂಶ ಅವು ಪದೇ ಪದೇ ಕೆಡಲು ಕಾರಣವಾಗಿತ್ತು. ಈ ಕುತಂತ್ರಾಂಶದ ಹಾವಳಿಯಿಂದಾಗಿ ಇರಾನಿನ ಅಣುಶಕ್ತಿ ಯೋಜನೆ ಕನಿಷ್ಠ ಎರಡು ವರ್ಷದಷ್ಟಾದರೂ ಹಿಂದುಳಿಯುವಂತಾಯಿತು ಎಂದು ಅಂದಾಜುಗಳು ಹೇಳುತ್ತವೆ. ಅಮೇರಿಕಾ ಹಾಗೂ ಇಸ್ರೇಲ್ ದೇಶಗಳು ಈ ಕುತಂತ್ರಾಂಶದ ಹಿಂದಿನ ಶಕ್ತಿಗಳಿರಬೇಕೆಂದು ಶಂಕಿಸಲಾಗಿತ್ತು. ಇವೆರಡು ದೇಶಗಳ ಬೆಂಬಲದಿಂದಲೇ ಸೃಷ್ಟಿಯಾಗಿದೆ ಎಂದು ಹೇಳಲಾಗಿರುವ 'ಫ್ಲೇಮ್' ಎಂಬ ಇನ್ನೊಂದು ಕುತಂತ್ರಾಂಶವೂ ಸಾಕಷ್ಟು ಸುದ್ದಿಮಾಡಿತ್ತು. ಸ್ಟಕ್ಸ್‌ನೆಟ್‌ನಂತೆಯೇ ಈ ಕುತಂತ್ರಾಂಶ ಕೂಡ ಇರಾನಿನ ಅಣುಶಕ್ತಿ ಕಾರ್ಯಕ್ರಮವನ್ನೇ ತನ್ನ ಗುರಿಯಾಗಿಸಿಕೊಂಡಿತ್ತು ಎನ್ನಲಾಗಿದೆ.

ಅಮೆರಿಕಾ, ಇಸ್ರೇಲ್, ಇರಾನ್‌ಗಳಷ್ಟೆ ಅಲ್ಲ, ನಮ್ಮ ನೆರೆಯ ಚೀನಾ ಸೇರಿದಂತೆ ಇನ್ನೂ ಅನೇಕ ದೇಶಗಳು ಕೂಡ ವೆಬ್ ಯುದ್ಧದಲ್ಲಿ ತೊಡಗಿಕೊಂಡಿರುವ ಶಂಕೆ ದಟ್ಟವಾಗಿದೆ. ಚೀನಾ ದೇಶ ಹಲವು ಸಂದರ್ಭಗಳಲ್ಲಿ ಸ್ವತಃ ಸೈಬರ್ ದಾಳಿಗಳಿಗೆ ತುತ್ತಾಗಿರುವುದು ನಿಜವೇ ಆದರೂ ಅದು ಇತರರ ವಿರುದ್ಧ ಡಿಜಿಟಲ್ ಪ್ರಪಂಚದಲ್ಲಿ ಸಮರ ಸಾರಿರುವ ಹಾಗೂ ಗೌಪ್ಯ ಮಾಹಿತಿಯ ಕಳವಿಗೆ ಪ್ರಯತ್ನಿಸುತ್ತಿರುವ ಬಗೆಗೂ ಹಲವಾರು ಆರೋಪಗಳಿವೆ. ಕೆಲವು ಪ್ರಮುಖ ಕ್ಷೇತ್ರಗಳ ತಂತ್ರಜ್ಞಾನಕ್ಕಾಗಿ ಆ ದೇಶದ ಮೇಲೆ ಅವಲಂಬಿತವಾಗಿರುವ ನಮ್ಮ ದೇಶವಂತೂ ಎಷ್ಟು ಎಚ್ಚರದಿಂದಿದ್ದರೂ ಕಡಿಮೆಯೇ!

ಚೀನಾ ಕುರಿತಂತೆ ಇಂತಹ ಆರೋಪ ಇತ್ತೀಚೆಗೆ ಕೇಳಿಬಂದದ್ದು ಅಮೆರಿಕಾದ ಸಂಸ್ಥೆಯೊಂದರ ಮೇಲೆ ನಡೆದ ಸೈಬರ್ ದಾಳಿಗಳ ಸಂದರ್ಭದಲ್ಲಿ. ಪಳೆಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಹೊಸದೊಂದು ಇಂಧನಮೂಲವನ್ನು ರೂಪಿಸುತ್ತಿರುವ ಆ ಸಂಸ್ಥೆಯಿಂದ ಸಂಶೋಧನೆಗೆ ಸಂಬಂಧಪಟ್ಟ ಮಾಹಿತಿಯನ್ನು ಕದಿಯಲು ಚೀನಾ ಪ್ರಯತ್ನಿಸುತ್ತಿತ್ತು ಎನ್ನಲಾಗಿದೆ.

ಹಾಗೆಂದಮಾತ್ರಕ್ಕೆ ಕಂಪ್ಯೂಟರ್ ಆಧರಿತ ಭಯೋತ್ಪಾದನೆಯೆಲ್ಲ ರಾಷ್ಟ್ರರಾಷ್ಟ್ರಗಳ ನಡುವೆ ದೊಡ್ಡ ಪ್ರಮಾಣದಲ್ಲಷ್ಟೆ ನಡೆಯುವಂಥದ್ದು ಎನ್ನುವಂತಿಲ್ಲ. ವಾಣಿಜ್ಯ ಹಾಗೂ ಕೆಲವೊಮ್ಮೆ ವೈಯಕ್ತಿಕ ಉದ್ದೇಶಗಳಿಂದಲೂ ಕಂಪ್ಯೂಟರ್ ಒಂದು ಭಯೋತ್ಪಾದನೆಯ ಅಸ್ತ್ರವಾಗಿ ಬಳಕೆಯಾಗಬಲ್ಲದು.

ಡಿಸ್ಟ್ರಿಬ್ಯೂಟೆಡ್ ಡಿನಯಲ್ ಆಫ್ ಸರ್ವಿಸ್ (ಡಿಡಿಓಎಸ್) ದಾಳಿಗಳನ್ನು ಇಲ್ಲಿ ಉದಾಹರಿಸುವುದು ಸಾಧ್ಯ. ಕುತಂತ್ರಾಂಶಗಳ ಸಹಾಯದಿಂದ ಕೃತಕ ಮಾಹಿತಿಯ ಪ್ರವಾಹವನ್ನು ಸೃಷ್ಟಿಸುವ ಬ್ಲ್ಯಾಕ್‌ಮೇಲ್ ತಂತ್ರ ಇದು. ಇಂತಹ ದಾಳಿಗೆ ಗುರಿಯಾದ ವ್ಯವಸ್ಥೆ ಅಪಾರ ಪ್ರಮಾಣದ ಅನಗತ್ಯ ಮಾಹಿತಿಯನ್ನು ನಿರ್ವಹಿಸಬೇಕಾಗಿ ಬರುವುದರಿಂದ ಅದರ ಕಾರ್ಯಾಚರಣೆ ಬಲು ನಿಧಾನವಾಗಿಬಿಡುತ್ತದೆ. ಇಂತಹ ದಾಳಿಗಳು ಹೆಚ್ಚುಕಾಲ ಮುಂದುವರೆದದ್ದೇ ಆದರೆ ಮಾಹಿತಿಯ ಮಿತಿಮೀರಿದ ಒತ್ತಡದಿಂದಾಗಿ ದಾಳಿಗೀಡಾದ ವ್ಯವಸ್ಥೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಅನಪೇಕ್ಷಿತ ಇಮೇಲ್ ಸಂದೇಶಗಳನ್ನು ('ಸ್ಪಾಮ್') ಕಳುಹಿಸುವ ದಂಧೆಯಂತೆಯೇ ಈ ದಾಳಿಗಳಲ್ಲೂ ಸ್ಪೈವೇರ್‌ಗಳು ಹಾಗೂ ಬಾಟ್‌ನೆಟ್‌ಗಳ ಬಳಕೆ ಸಾಮಾನ್ಯ.

ಗೂಢಚಾರಿ ತಂತ್ರಾಂಶ ಅಥವಾ ಸ್ಪೈವೇರ್, ವೈರಸ್-ವರ್ಮ್ ಇತ್ಯಾದಿಗಳಂತೆ ಕಂಪ್ಯೂಟರ್ ಲೋಕವನ್ನು ಕಾಡುವ ಕುತಂತ್ರಾಂಶಗಳಲ್ಲೊಂದು. ಇವು ಸಾಮಾನ್ಯವಾಗಿ ಉಪಯುಕ್ತ ತಂತ್ರಾಂಶಗಳ ಸೋಗಿನಲ್ಲಿ ಬಳಕೆದಾರರ ಕಂಪ್ಯೂಟರನ್ನು ಪ್ರವೇಶಿಸುತ್ತವೆ. ಬಳಕೆದಾರರ ಕಂಪ್ಯೂಟರನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ತಮ್ಮ ಕುಕೃತ್ಯಗಳಿಗೆ ಬಳಸಿಕೊಳ್ಳುವಲ್ಲಿ ಇವು ಕುತಂತ್ರಿಗಳಿಗೆ ನೆರವಾಗುತ್ತವೆ. ಪ್ರತಿ ಬಾರಿ ಕಂಪ್ಯೂಟರನ್ನು ಚಾಲೂ ಮಾಡಿದಾಗಲೂ ಸಕ್ರಿಯವಾಗುವ ಈ ತಂತ್ರಾಂಶ ಹ್ಯಾಕರ್‌ನ ಆದೇಶಗಳನ್ನು ಪಾಲಿಸಲು ಪ್ರಾರಂಭಿಸುತ್ತದೆ; ಅಂದರೆ ಆ ಕಂಪ್ಯೂಟರ್ ಒಂದು 'ಬಾಟ್' ಆಗಿ ಬದಲಾಗುತ್ತದೆ (ಬಾಟ್ ಎನ್ನುವುದು ರೋಬಾಟ್ ಎಂಬ ಹೆಸರಿನ ಅಪಭ್ರಂಶ). ಪ್ರಪಂಚದಾದ್ಯಂತ ಇರುವ ಇಂತಹ ನೂರಾರು-ಸಾವಿರಾರು ಬಾಟ್‌ಗಳನ್ನು ಒಗ್ಗೂಡಿಸಿದ 'ಬಾಟ್‌ನೆಟ್'ಗಳೆಂಬ ಜಾಲಗಳೂ ಸಿದ್ಧವಾಗುತ್ತವೆ. ಇಂತಹ ಜಾಲದಲ್ಲಿ ನಮ್ಮನಿಮ್ಮಂತಹ ಸಾಮಾನ್ಯ ಬಳಕೆದಾರರ ಕಂಪ್ಯೂಟರುಗಳೇ ಕುತಂತ್ರಿಗಳ ಹಿಡಿತಕ್ಕೆ ಸಿಕ್ಕು - ನಮಗೆ ಗೊತ್ತಿಲ್ಲದಂತೆ - ಸಮಾಜವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡುಬಿಟ್ಟಿರುತ್ತವೆ!

ಡಿಡಿಒಎಸ್ ದಾಳಿಗೆ ತುತ್ತಾಗುವ ತಾಣಗಳಿಗೆ ಅಪಾರ ಪ್ರಮಾಣದ ಮಾಹಿತಿ ಹರಿದುಬರುವುದು ಇವೇ ಬಾಟ್‌ನೆಟ್‌ಗಳಿಂದ. ಈ ಜಾಲದ ಅಂಗವಾದ ಕಂಪ್ಯೂಟರುಗಳು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಇರಬಹುದಾದ್ದರಿಂದ - ಹಾಗೂ ಅವುಗಳು ದುರ್ಬಳಕೆಯಾಗುತ್ತಿರುವುದು ಅವುಗಳ ಮಾಲಿಕರಿಗೆ ಗೊತ್ತಿಲ್ಲದಿರುವ ಸಾಧ್ಯತೆಯೇ ಹೆಚ್ಚಿರುವುದರಿಂದ - ಅನೇಕ ಸನ್ನಿವೇಶಗಳಲ್ಲಿ ನಿಜವಾದ ಅಪರಾಧಿಯ ಪತ್ತೆಯಾಗುವುದೇ ಇಲ್ಲ.

ಇಂತಹ ದಾಳಿಗಳನ್ನು ನಡೆಸುವುದರಿಂದ ಅದರ ಹಿಂದಿರುವ ಕುತಂತ್ರಿಗಳಿಗೆ ಆಗುವ ಲಾಭಗಳು ಹಲವು ಬಗೆಯವು. ಈ ದಾಳಿಗೆ ತುತ್ತಾದ ಜಾಲತಾಣ ನಿಷ್ಕ್ರಿಯವಾದರೆ ಅವರ ಮೊದಲ ಉದ್ದೇಶ ಪೂರ್ಣವಾದಂತೆ - ಯಾವುದೋ ಸಂಘಸಂಸ್ಥೆಯ ತಾಣವಾದರೆ ಅವರಿಗೆ ಆಗುವ ಅವಮಾನ ಇಲ್ಲವೇ ವಾಣಿಜ್ಯ ಉದ್ದೇಶದ ತಾಣವಾದರೆ ಅವರಿಗೆ ಆಗುವ ನಷ್ಟ ಕುತಂತ್ರಿಗಳಿಗೆ ಸಮಾಧಾನ ನೀಡುತ್ತದೆ. ತಮ್ಮ ವಿರುದ್ಧ ಕೆಲಸಮಾಡುತ್ತಿರುವ ಸಂಸ್ಥೆಗಳಿಗೆ (ಉದಾ: ಸೈಬರ್ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಸ್ಥೆ) ತೊಂದರೆ ಕೊಡಲು ಡಿಡಿಒಎಸ್ ದಾಳಿಗಳನ್ನು ಬಳಸುವ ದುಷ್ಕರ್ಮಿಗಳೂ ಇದ್ದಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾಳಿ ನಿಲ್ಲಿಸಿ ಜಾಲತಾಣ ಮತ್ತೆ ಕೆಲಸಮಾಡುವಂತೆ ಮಾಡಲು ಅವರು ಹಣಕ್ಕಾಗಿ ಬೇಡಿಕೆಯಿಡುವುದೂ ಉಂಟು.

ಒತ್ತೆಹಣಕ್ಕೆ ಬೇಡಿಕೆಯಿಟ್ಟು ಬ್ಲ್ಯಾಕ್‌ಮೇಲ್ ಮಾಡುವ ಈ ಅಭ್ಯಾಸ ಸಂಸ್ಥೆಗಳನ್ನಷ್ಟೇ ಅಲ್ಲದೆ ಸಾಮಾನ್ಯ ಬಳಕೆದಾರರನ್ನೂ ಕಾಡುವುದು ಸಾಧ್ಯವಿದೆ. ಕುತಂತ್ರಾಂಶಗಳನ್ನು ಬಳಕೆದಾರರ ಕಂಪ್ಯೂಟರಿನೊಳಗೆ ಹರಿಯಬಿಡುವ ಕುತಂತ್ರಿಗಳು ಅದರಲ್ಲಿರುವ ಕಡತಗಳನ್ನು ಬಳಸಲಾಗದಂತೆ ಮಾಡಿ ಹಣಕ್ಕಾಗಿ ಬೇಡಿಕೆಯಿಡುವುದು ಸಾಮಾನ್ಯ ಅಭ್ಯಾಸ.

'ರ್‍ಯಾನ್‌ಸಮ್‌ವೇರ್' ಎಂದು ಕರೆಸಿಕೊಳ್ಳುವ ಈ ತಂತ್ರಾಂಶಗಳ ಹಾವಳಿಗೆ ಅಷ್ಟಿಷ್ಟಲ್ಲ. ಕ್ರಿಪ್ಟೋವಾಲ್ ಎಂಬ ಇಂತಹ ತಂತ್ರಾಂಶವೊಂದು ೨೦೧೪ರ ಮೊದಲ ಆರು ತಿಂಗಳುಗಳಲ್ಲೇ ಲಕ್ಷಾಂತರ ಕಂಪ್ಯೂಟರುಗಳನ್ನು ಸೇರಿಕೊಂಡು ಸುಮಾರು ಐದು ನೂರು ಕೋಟಿ ಕಡತಗಳನ್ನು ಬಳಸಲಾಗದಂತೆ ಮಾಡಿತ್ತು ಎನ್ನಲಾಗಿದೆ. ಈ ಕುತಂತ್ರಾಂಶವನ್ನು ಸೃಷ್ಟಿಸಿದವರು ಈ ಅವಧಿಯಲ್ಲಿ ಸುಮಾರು ಹತ್ತು ಲಕ್ಷ ಅಮೆರಿಕನ್ ಡಾಲರುಗಳಷ್ಟು ಹಣವನ್ನು ಕಂಪ್ಯೂಟರ್ ಬಳಕೆದಾರರಿಂದ ವಸೂಲಿ ಮಾಡಿದ್ದರಂತೆ!

ಇನ್ನು ವೈರಸ್ - ವರ್ಮ್ ಮುಂತಾದ ಕುತಂತ್ರಾಂಶಗಳ ಹಾವಳಿಯ ಬಗೆಗಂತೂ ನಮಗೆ ಗೊತ್ತೇ ಇದೆ. ಹಣಕಾಸಿನ ವ್ಯವಹಾರ ಮಾಡುವ ಇಲ್ಲವೇ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವ ಸಂದರ್ಭಗಳಲ್ಲೆಲ್ಲ ಹೊಂಚು ಹಾಕಿ ಮಾಹಿತಿ ಕದಿಯುವುದು ಈ ತಂತ್ರಾಂಶಗಳ ದುರುದ್ದೇಶ. ಆನ್‌ಲೈನ್ ಬ್ಯಾಂಕಿಂಗ್ ಇಲ್ಲವೇ ಕ್ರೆಡಿಟ್ ಕಾರ್ಡಿಗೆ ಸಂಬಂಧಪಟ್ಟ ವಿವರಗಳು ಸಿಕ್ಕರೆ ಅದನ್ನು ದುರುಪಯೋಗಪಡಿಸಿಕೊಳ್ಳುವ ಕುತಂತ್ರಿಗಳು ಇಮೇಲ್ ಖಾತೆಯ ಯೂಸರ್‌ನೇಮ್ ಪಾಸ್‌ವರ್ಡ್ ಇತ್ಯಾದಿಗಳು ಸಿಕ್ಕರೂ ಸುಮ್ಮನಿರುವುದಿಲ್ಲ - ಅದರಿಂದ ಇನ್ನಾರಿಗೋ ಸಂದೇಶ ಕಳುಹಿಸಿ ಅಲ್ಲೇನಾದರೂ ಲಾಭ ಸಿಗಬಹುದೇ ನೋಡುತ್ತಾರೆ. ಇಲ್ಲವೇ ಆ ಖಾತೆಯನ್ನು ಬಳಸಿಕೊಂಡು ಬ್ಯಾಂಕ್ ಖಾತೆಯ ವಿವರವನ್ನೋ ಕ್ರೆಡಿಟ್‌ಕಾರ್ಡ್ ಪಾಸ್‌ವರ್ಡನ್ನೋ ಪತ್ತೆಮಾಡಲು ಯತ್ನಿಸುತ್ತಾರೆ (ಪಾಸ್‌ವರ್ಡ್ ರೀಸೆಟ್ ಇತ್ಯಾದಿಗಳಿಗೆ ನಾವು ಅದೇ ಇಮೇಲ್ ವಿಳಾಸ ಕೊಟ್ಟಿರುತ್ತೇವಲ್ಲ!).

ನಾವು ಕಂಪ್ಯೂಟರ್ ಬಳಸುವುದೇ ಇಲ್ಲ ಎನ್ನುವವರೂ ಈ ಕಾಟದಿಂದ ಪೂರ್ತಿಯಾಗಿ ತಪ್ಪಿಸಿಕೊಳ್ಳುವುದು ಕಷ್ಟ - ಮೊಬೈಲ್ ದೂರವಾಣಿಗಳು ಅಂಗೈ ಮೇಲಿನ ಕಂಪ್ಯೂಟರುಗಳಾಗಿ ಬೆಳೆದುಬಿಟ್ಟಿವೆಯಲ್ಲ, ಕಂಪ್ಯೂಟರುಗಳನ್ನು ಬಾಧಿಸುವ ಸಮಸ್ತ ತೊಂದರೆಗಳು ಅವನ್ನೂ ಕಾಡುತ್ತವೆ.

ಕಂಪ್ಯೂಟರನ್ನು ಬಳಸುವುದಿಲ್ಲ, ಮೊಬೈಲ್ ಕಾಟವೂ ಇಲ್ಲ ಅನ್ನುವವರ ಮಾಹಿತಿ ಸುರಕ್ಷತೆಯೂ ಖಾತರಿಯೇನಲ್ಲ. ವಿವಿಧ ಕಾರಣಗಳಿಂದಾಗಿ (ಆಸ್ಪತ್ರೆ, ಬ್ಯಾಂಕು, ಸರಕಾರಿ ಯೋಜನೆ ಇತ್ಯಾದಿ) ಒಂದಲ್ಲ ಒಂದು ದತ್ತಸಂಚಯದಲ್ಲಿ ಸೇರಿಕೊಳ್ಳುವ ನಮ್ಮ ಮಾಹಿತಿಯನ್ನು ನಿರ್ವಹಿಸುವವರು ಕೊಂಚ ತಪ್ಪುಮಾಡಿದರೂ ಸಾಕು, ಅದು ಬಹಳ ಸುಲಭವಾಗಿ ಕುತಂತ್ರಿಗಳ ಕೈವಶವಾಗಿಬಿಡುತ್ತದೆ. ಕಂಪ್ಯೂಟರ್ ಬಳಕೆದಾರರಿಗಂತೂ ಈ ಸಮಸ್ಯೆ ಇನ್ನೂ ವ್ಯಾಪಕವಾದದ್ದು. ಆನ್‌ಲೈನ್ ಗೇಮಿಂಗ್, ಶಾಪಿಂಗ್, ಚಾಟಿಂಗ್ - ಹೀಗೆ ಎಲ್ಲಿ ಶೇಖರವಾಗಿರುವ ಮಾಹಿತಿ ಬೇಕಿದ್ದರೂ ಅಪಾತ್ರರ ಪಾಲಾಗುವುದು ಸಾಧ್ಯವಿದೆ.

ಟೀವಿ, ಫ್ರಿಜ್, ಕ್ಯಾಮೆರಾ, ಮೈಕ್ರೋವೇವ್ ಓವನ್ - ಹೀಗೆ ಮನೆಯಲ್ಲಿರುವ ಉಪಕರಣಗಳಿಗೆಲ್ಲ ಅಂತರಜಾಲ ಸಂಪರ್ಕ ಕೊಟ್ಟು ಅವನ್ನೆಲ್ಲ 'ಸ್ಮಾರ್ಟ್' ಮಾಡಲು ಹೊರಟಿರುವ 'ಇಂಟರ್‌ನೆಟ್ ಆಫ್ ಥಿಂಗ್ಸ್' ಪರಿಕಲ್ಪನೆಯಿದೆಯಲ್ಲ, ಅದೂ ಕೂಡ ಸೈಬರ್ ದುಷ್ಕರ್ಮಿಗಳ ಕೈಯಲ್ಲಿ ಹೊಸದೊಂದು ಅಸ್ತ್ರವಾಗಿಬಿಡುವ ಅಪಾಯವಿದೆ. ಅಂತರಜಾಲದ ಮೂಲಕ ಮನೆಯ ಚಿತ್ರಗಳನ್ನು ಬಿತ್ತರಿಸುವ ಐಪಿ ಕ್ಯಾಮೆರಾಗಳನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ ಕೆಲ ಘಟನೆಗಳು ಈಗಾಗಲೇ ವರದಿಯಾಗಿವೆ. ಅಂತರಜಾಲ ಸಂಪರ್ಕವಿರುವ ಟೀವಿ, ಫ್ರಿಜ್ ಮುಂತಾದ ಸಾಧನಗಳು ಸ್ಪಾಮ್ ಸಂದೇಶಗಳನ್ನು ಕಳುಹಿಸಲು ಅಥವಾ ವೈರಸ್ ಹರಡಲು ಬಳಕೆಯಾಗುವ ಸಾಧ್ಯತೆಗಳ ಬಗೆಗೂ ಅಧ್ಯಯನಗಳು ನಡೆದಿವೆ.

ವೆಬ್ ಯುದ್ಧದಲ್ಲಿ ತೊಡಗಿರುವ ದೇಶಗಳು ಆ ಮೂಲಕ ಪರಸ್ಪರರ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಹಾಳುಗೆಡವಿದರೆ, ಅಣುಬಾಂಬುಗಳು ಸಿಡಿಯದಂತೆ ಮಾಡಿದರೆ ಒಂದು ರೀತಿಯಲ್ಲಿ ಒಳಿತೇ ಆಯಿತು ಎನ್ನಬಹುದೇನೋ. ಆದರೆ ವೆಬ್ ಯುದ್ಧದ ಪರಿಣಾಮ ಮನುಕುಲಕ್ಕೆ ಉಪಯುಕ್ತವಾದ ತಂತ್ರಜ್ಞಾನದ ಮೇಲೂ ಆದರೆ ಅದರ ಪರಿಣಾಮ ಭೀಕರವಾಗಬಹುದು.

ಸೈಬರ್ ಸಮರತಂತ್ರವನ್ನು ಹಲವು ದೇಶಗಳು ತಮ್ಮ ರಕ್ಷಣಾವ್ಯವಸ್ಥೆಯ ಅಂಗವಾಗಿಯೇ ಬೆಳೆಸುತ್ತಿವೆ ಎನ್ನಲಾಗಿದೆ. ಹೀಗಾಗಿಯೇ ಇದು ಇನ್ನಷ್ಟು ದೊಡ್ಡ ಸಮಸ್ಯೆಯಾಗಿ ಬೆಳೆಯುವ ಮೊದಲೇ ಇಂತಹ ದಾಳಿಗಳನ್ನು ತಡೆಯುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ಸಾಗಿವೆ. ಹಲವು ಅಂತಾರಾಷ್ಟ್ರೀಯ ಸಂಘಟನೆಗಳು ಇಂತಹ ದಾಳಿಗಳನ್ನು ತಡೆಯುವತ್ತ ಕಾರ್ಯೋನ್ಮುಖವಾಗಿವೆ.

ಆ ಪ್ರಯತ್ನಗಳೆಲ್ಲ ಯಶಸ್ವಿಯಾಗಲಿ ಎಂದು ಹಾರೈಸುವುದರ ಜೊತೆಗೆ ನಾವು ಮಾಡಬೇಕಾದ ಇನ್ನೊಂದು ಕೆಲಸವೂ ಇದೆ. ಕಂಪ್ಯೂಟರ್ ಬಳಕೆಯಲ್ಲಿ ಎಚ್ಚರ ವಹಿಸುವುದು ಮತ್ತು ಆ ಮೂಲಕ ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದೇ ಆ ಕೆಲಸ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು - ಅವುಗಳಿಗೆ ಉತ್ತರಿಸದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ನಮ್ಮ ಮಿತಿಯೊಳಗೆ ನಾವು ಸುರಕ್ಷಿತರಾಗಿ ಉಳಿಯುವುದು ಸಾಧ್ಯ.

(ಮಾಹಿತಿ: ಅಂತರಜಾಲದ ವಿವಿಧ ಮೂಲಗಳಿಂದ)

ನವೆಂಬರ್ ೨೦೧೪ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge