ಬುಧವಾರ, ಸೆಪ್ಟೆಂಬರ್ 4, 2019

ಮೋಡಿ ಮಾಡಿದ ಡಾರ್ಕ್ ಮೋಡ್

ಟಿ. ಜಿ. ಶ್ರೀನಿಧಿ


ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬರ್ ಪ್ಲೇಟನ್ನೂ ಕರಿಯ ಅಕ್ಷರಗಳನ್ನೂ ಪರಿಚಯಿಸಲಾಯಿತು.

ಈ ಘಟನೆಯನ್ನು ನೆನಪಿಸುವ ಸಂಗತಿಯೊಂದು ಇದೀಗ ಮೊಬೈಲ್ ಫೋನ್ ಜಗತ್ತಿನಲ್ಲೂ ನಡೆಯುತ್ತಿದೆ. ಬಿಳಿ ಹಿನ್ನೆಲೆಯ ಪರದೆಯ ಮೇಲೆ ಕಪ್ಪು ಅಕ್ಷರಗಳು ಮೂಡುವುದು ಅಲ್ಲಿ ಸಾಮಾನ್ಯ ತಾನೇ? ಈ ಹಳೆಯ ಅಭ್ಯಾಸವನ್ನು ಬದಲಿಸಿಕೊಳ್ಳುತ್ತಿರುವ ಹಲವಾರು ಬಳಕೆದಾರರು ಇದೀಗ ಕಪ್ಪು ಹಿನ್ನೆಲೆಯನ್ನು ಇಷ್ಟಪಡುತ್ತಿದ್ದಾರೆ. ಬೇರೆ ಕಾರಣಗಳೇನೇ ಇರಲಿ, ಇದು ಟೆಕ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಂತೂ ನಿಜ.

ಬುಧವಾರ, ಆಗಸ್ಟ್ 28, 2019

ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ?

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆ ನಮ್ಮನ್ನೆಲ್ಲ ಸೋಮಾರಿಗಳನ್ನಾಗಿಸುತ್ತಿದೆ ಎನ್ನುವುದು ಈಗಾಗಲೇ ಹಳೆಯದಾಗಿರುವ ಆರೋಪ. ಸೋಮಾರಿ ಪೆಟ್ಟಿಗೆಯೆಂದೇ ಹೆಸರಾಗಿರುವ ಟೀವಿಗೆ ರಿಮೋಟ್ ಸೌಲಭ್ಯ ಬಂದಾಗಲೂ ಈ ಆರೋಪ ಇತ್ತು, ಮೊಬೈಲಿನ ಪರದೆಯನ್ನು ಮುಟ್ಟಿ ಊಟವನ್ನು ಮನೆಗೇ ತರಿಸಿಕೊಳ್ಳುವ ಈ ಕಾಲದಲ್ಲೂ ಅದೇ ಆರೋಪ ಉಳಿದುಕೊಂಡಿದೆ.

ಈ ಆರೋಪ ಸುಳ್ಳೇನೂ ಅಲ್ಲ. ಹೋಟಲಿಗೆ ಹೋಗಿಬರುವುದು, ದಿನಸಿ ಖರೀದಿಗೆ ಅಂಗಡಿಗೆ ಹೋಗುವುದೆಲ್ಲ ದೈಹಿಕ ಶ್ರಮ ಎಂದು ನಮಗೆ ಅನ್ನಿಸಲು ಶುರುವಾಗಿರುವುದು ತಂತ್ರಜ್ಞಾನದ ಕಾರಣದಿಂದಲೇ. ಇನ್ನು ತಂತ್ರಜ್ಞಾನದ ಲೋಕ ನಮ್ಮ ನೆನಪಿನಶಕ್ತಿಯ ವಿಸ್ತರಣೆಯಂತೆಯೇ ಆಗಿಬಿಟ್ಟಿರುವುದು ಕೂಡ ವಾಸ್ತವ ಸಂಗತಿ. ಮೊಬೈಲಿನ ಅಡ್ರೆಸ್ ಬುಕ್ ಇಲ್ಲದೆ ಫೋನ್ ನಂಬರುಗಳನ್ನೂ, ಫೇಸ್‌ಬುಕ್ ಸಹಾಯವಿಲ್ಲದೆ ಜನ್ಮದಿನಗಳನ್ನೂ ನೆನಪಿಟ್ಟುಕೊಳ್ಳುವುದನ್ನು ಬಿಟ್ಟು ಯಾವುದೋ ಕಾಲವಾಗಿದೆಯಲ್ಲ!

ಗುರುವಾರ, ಆಗಸ್ಟ್ 22, 2019

ಅಂಡ್ರಾಯ್ಡ್ ಹೊಸ ಆವೃತ್ತಿಯ ಹೆಸರಲ್ಲಿ ಸಿಹಿತಿಂಡಿಯ ರುಚಿಯಿಲ್ಲ!

ಇಜ್ಞಾನ ವಿಶೇಷ


ಸ್ಮಾರ್ಟ್‍ಫೋನುಗಳಲ್ಲಿ ಬಳಕೆಯಾಗುವ ಕಾರ್ಯಾಚರಣ ವ್ಯವಸ್ಥೆಗಳ (ಆಪರೇಟಿಂಗ್ ಸಿಸ್ಟಂ, ಓಎಸ್‍) ಪೈಕಿ ಬಹಳ ಜನಪ್ರಿಯವಾಗಿರುವುದು, ನಮಗೆ ಚೆನ್ನಾಗಿ ಪರಿಚಯವಿರುವುದು ಆಂಡ್ರಾಯ್ಡ್. ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆ ಗೂಗಲ್‍ನ ಉತ್ಪನ್ನ ಆಂಡ್ರಾಯ್ಡ್‌ನ ಹೊಸ ಆವೃತ್ತಿಯನ್ನು ಇದೀಗ ಅಧಿಕೃತವಾಗಿ ಘೋಷಿಸಲಾಗಿದೆ.

ಆಂಡ್ರಾಯ್ಡ್‌ನ ಹೊಸ ಆವೃತ್ತಿ ಬಿಡುಗಡೆಯಾಗುವುದು ಅಪರೂಪದ ಸಂಗತಿಯೇನಲ್ಲ. ಈ ಕಾರ್ಯಾಚರಣ ವ್ಯವಸ್ಥೆಯ ಹೊಸ ಆವೃತ್ತಿಗಳನ್ನು ನಿಯಮಿತವಾಗಿ ಹೊರತರುವ ಗೂಗಲ್ ಆ ಆವೃತ್ತಿಗಳನ್ನು ಸಿಹಿತಿಂಡಿಗಳ ಹೆಸರಿನಿಂದ ಗುರುತಿಸುತ್ತದೆ, ಮತ್ತು ಈ ಹೆಸರಿನ ಸರಣಿ ಇಂಗ್ಲಿಷಿನ ಅಕಾರಾದಿ ಕ್ರಮವನ್ನು ಅನುಸರಿಸುವಂತೆ ನೋಡಿಕೊಳ್ಳುತ್ತದೆ. ಹೀಗಾಗಿಯೇ ಪ್ರತಿಬಾರಿಯೂ ಹೊಸ ಆವೃತ್ತಿಯ ಹೆಸರು ಏನಿರಬಹುದು ಎನ್ನುವ ಅಂಶ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

ಈ ಬಾರಿಯ ಕುತೂಹಲ ಈಗಷ್ಟೇ ಅಂತ್ಯವಾಗಿದ್ದು ಸದ್ಯ ಹೊರಬರಲಿರುವ ಆಂಡ್ರಾಯ್ಡ್‌ನ ಹತ್ತನೇ ಆವೃತ್ತಿಗೆ ಸಿಹಿತಿಂಡಿಯ ಹೆಸರು ಇರುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಅಕ್ಷರಗಳ ಸರಣಿಯಲ್ಲಿ 'ಕ್ಯೂ' ಅಕ್ಷರವನ್ನು ಬಳಸಬೇಕಿದ್ದ ಈ ಆವೃತ್ತಿಯನ್ನು 'ಆಂಡ್ರಾಯ್ಡ್ ೧೦' ಎಂದಷ್ಟೇ ಕರೆಯಲು ಅದು ತೀರ್ಮಾನಿಸಿದೆ.

ಸೋಮವಾರ, ಆಗಸ್ಟ್ 19, 2019

ಛಾಯಾಗ್ರಹಣದ ೧೮೦ ವರ್ಷ: ಇದು ವಿಶ್ವ ಛಾಯಾಗ್ರಹಣ ದಿನ ವಿಶೇಷ!

ಕಂಪ್ಯೂಟರ್ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ 'ಓಪನ್ ಸೋರ್ಸ್' ಪರಿಕಲ್ಪನೆಯ ರೂಪವೊಂದನ್ನು ೧೮೦ ವರ್ಷಗಳ ಹಿಂದೆಯೇ ಪರಿಚಯಿಸಿದ್ದು ಡಿಗೇರೋಟೈಪ್ ತಂತ್ರಜ್ಞಾನ. ಲೂಯಿ ಡಿಗೇರ್ ರೂಪಿಸಿದ ಈ ತಂತ್ರಜ್ಞಾನದ ಹಕ್ಕುಸ್ವಾಮ್ಯವನ್ನು ೧೮೩೯ರಲ್ಲಿ ಫ್ರೆಂಚ್ ಸರಕಾರ ಕೊಂಡು ಅದನ್ನು "ಮನುಕುಲಕ್ಕೆ ಕೊಡುಗೆ"ಯಾಗಿ ಸಮರ್ಪಿಸಿದ ದಿನವೇ ಆಗಸ್ಟ್ ೧೯. ಇದೀಗ ವಿಶ್ವ ಛಾಯಾಗ್ರಹಣ ದಿನವೆಂದು ನಾವು ಗುರುತಿಸುವುದು ಇದೇ ದಿನವನ್ನು. ಈ ಸಂದರ್ಭದಲ್ಲಿ ಛಾಯಾಗ್ರಹಣದ ವಿಕಾಸದತ್ತ ಹೀಗೊಂದು ನೋಟ...
ಟಿ. ಜಿ. ಶ್ರೀನಿಧಿ

ಮನುಷ್ಯ ತನ್ನ ಕಣ್ಣಮುಂದಿನ ದೃಶ್ಯವನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ಉದ್ದೇಶದಿಂದ ಮಾಡದ ಪ್ರಯತ್ನವೇ ಇಲ್ಲ ಎನ್ನಬಹುದೇನೋ. ಶಿಲಾಯುಗದ ರೇಖಾಚಿತ್ರಗಳಿಂದ ಪರಿಣತರ ಕಲಾಕೃತಿಗಳವರೆಗೆ ಅನೇಕ ಸೃಷ್ಟಿಗಳ ಉದ್ದೇಶ ಇದೇ ಆಗಿರುವುದನ್ನು ನಾವು ಗಮನಿಸಬಹುದು.

ಆದರೆ ಇಂತಹ ಪ್ರಯತ್ನಗಳಿಗೆ ಒಂದು ದೊಡ್ಡ ಸಮಸ್ಯೆ ಅಡ್ಡಬರುತ್ತಿತ್ತು - ಕಂಡದ್ದನ್ನು ಕಂಡಂತೆ ಚಿತ್ರಿಸಲು ಎಲ್ಲರಿಗೂ ಬರುವುದಿಲ್ಲ, ಹಾಗೂ ನಮಗೆ ಬಂದಂತೆ ಚಿತ್ರಿಸಿದರೆ ಅದು ನಾವು ಕಂಡದ್ದನ್ನು ನಿಖರವಾಗಿ ಪ್ರತಿನಿಧಿಸುವುದಿಲ್ಲ!

ಹಾಗಾದರೆ ನಾವು ಕಂಡದ್ದನ್ನು ಕಂಡಹಾಗೆಯೇ ದಾಖಲಿಸಿಟ್ಟುಕೊಳ್ಳುವುದು ಹೇಗೆ? ಈ ನಿಟ್ಟಿನಲ್ಲಿ ನಡೆದ ಪ್ರಯತ್ನಗಳು ಒಂದೆರಡಲ್ಲ.

ಬುಧವಾರ, ಆಗಸ್ಟ್ 14, 2019

ಕಂಪ್ಯೂಟರ್ ಜಗತ್ತಿನ ಫೋರ್ಡ್ ಕಾರು

ಟಿ. ಜಿ. ಶ್ರೀನಿಧಿ


ಜಾಗತಿಕ ಆಟೋಮೊಬೈಲ್ ಇತಿಹಾಸದಲ್ಲಿ ಫೋರ್ಡ್ ಸಂಸ್ಥೆಯ 'ಮಾಡೆಲ್ ಟಿ' ಕಾರಿಗೆ ಬಹಳ ಮಹತ್ವದ ಸ್ಥಾನವಿದೆ. ಕಾರುಗಳೇನಿದ್ದರೂ ಶ್ರೀಮಂತರಿಗೆ ಮಾತ್ರ ಎನ್ನುವ ಅನಿಸಿಕೆಯನ್ನು ಮೊತ್ತಮೊದಲ ಬಾರಿಗೆ ಹೋಗಲಾಡಿಸಿದ್ದು, ಕೈಗೆಟುಕುವ ಬೆಲೆ ನಿಗದಿಪಡಿಸುವ ಮೂಲಕ ಮಧ್ಯಮವರ್ಗದ ಜನರೂ ಕಾರು ಕೊಳ್ಳುವುದನ್ನು ಸಾಧ್ಯವಾಗಿಸಿದ್ದು ಈ ಕಾರಿನ ಹೆಗ್ಗಳಿಕೆ. ಈ ಮಾದರಿಯ ಕಾರುಗಳ ಪೈಕಿ ಮೊದಲನೆಯದು ಸಿದ್ಧವಾದದ್ದು ನೂರಾ ಹನ್ನೊಂದು ವರ್ಷಗಳ ಹಿಂದೆ, ಇದೇ ಆಗಸ್ಟ್ ತಿಂಗಳಿನಲ್ಲಿ.

ಕ್ರಾಂತಿಕಾರಕ ಬದಲಾವಣೆ ತಂದ ಇಂತಹ ಘಟನೆಗಳನ್ನು ನಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ನೋಡಬಹುದು. 'ಕಮಡೋರ್ ೬೪' ಎಂಬ ಕಂಪ್ಯೂಟರಿನ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿನಲ್ಲಿ ಪ್ರಮುಖವಾಗಿ ಉದಾಹರಿಸಬಹುದು.

ಸೋಮವಾರ, ಆಗಸ್ಟ್ 12, 2019

ಸೆಪ್ಟೆಂಬರ್ 5ಕ್ಕೆ ಜಿಯೋಫೈಬರ್ ಶುರು!

ಇಜ್ಞಾನ ವಾರ್ತೆ


ಬರುವ ಸೆಪ್ಟೆಂಬರ್ 5ರಂದು ರಿಲಯನ್ಸ್ ಜಿಯೋ ತನ್ನ ಕಾರ್ಯಾಚರಣೆಯ ಮೂರು ವರ್ಷಗಳನ್ನು ಪೂರೈಸಲಿದ್ದು ಅದೇ ಸಂದರ್ಭದಲ್ಲಿ ಬಹುನಿರೀಕ್ಷಿತ ಜಿಯೋಫೈಬರ್ ಸೇವೆಯನ್ನು ವಾಣಿಜ್ಯ ಆಧಾರದ ಮೇಲೆ ಪ್ರಾರಂಭಿಸಲಾಗುವುದು ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ. ಇಂದು ಮುಂಬಯಿಯಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌‌ನ 42ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು.

ಗುರುವಾರ, ಆಗಸ್ಟ್ 8, 2019

ಅಂಟಾರ್ಕ್‌ಟಿಕಾದಲ್ಲಿ ಅಂತರಜಾಲ, ಅಂತರಿಕ್ಷದಲ್ಲೂ ಅಂತರಜಾಲ!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನನ್ನು ಸ್ವಲ್ಪಹೊತ್ತು ಬಿಟ್ಟಿರುವುದೂ ಕಷ್ಟ ಎನ್ನುವ ಮಟ್ಟಕ್ಕೆ ನಮಗೆಲ್ಲ ಅದರ ಬಳಕೆ ಅಭ್ಯಾಸವಾಗಿಹೋಗಿದೆ. ಮೊಬೈಲ್ ಬ್ಯಾಟರಿ ಮುಗಿದುಹೋಗುತ್ತಿದೆ ಎಂದರೆ ಸಾಕು, ನಮಗೆ ಚಡಪಡಿಕೆಯೇ ಶುರುವಾಗಿಬಿಡುತ್ತದೆ.

ಮೊಬೈಲಿಗೆ ಅಂತರಜಾಲ ಸಂಪರ್ಕ ಸಿಗದೇ ಹೋದಾಗಲೂ ಅಷ್ಟೇ, ನಾವು ಇಂಥದ್ದೇ ಚಡಪಡಿಕೆಯನ್ನು ಅನುಭವಿಸುತ್ತೇವೆ. ಬಸ್ಸಿನಲ್ಲೋ ಕಾರಿನಲ್ಲೋ ಪ್ರಯಾಣಿಸುವಾಗ ಮಾರ್ಗಮಧ್ಯೆ ಅಂತರಜಾಲ ಸಂಪರ್ಕದ ಗುಣಮಟ್ಟ ಸರಿಯಿಲ್ಲದಿದ್ದರೆ ನಮಗೆ ಅದೇನೋ ಕಿರಿಕಿರಿ.

ಈಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಅಂತರಜಾಲ ಸಂಪರ್ಕ ನಮಗೆ ಬಹುತೇಕ ಎಲ್ಲಕಡೆಗಳಲ್ಲೂ ಸಿಗುತ್ತಿದೆ, ಬೇರೆಬೇರೆ ಕೆಲಸಗಳಿಗಾಗಿ ಅದನ್ನು ಉಪಯೋಗಿಸಿಕೊಳ್ಳುವುದು ಚೆನ್ನಾಗಿ ಅಭ್ಯಾಸವಾಗಿದೆ. ಹಾಗಾಗಿಯೇ ನಾವು ಹೋದ ಜಾಗದಲ್ಲಿ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಅದು ನಮಗೆ ಇಷ್ಟವಾಗುವುದಿಲ್ಲ. ಇನ್ನು ನಮ್ಮ ಮನೆಯಲ್ಲೇ ಅಂತರಜಾಲ ಸಂಪರ್ಕ ಸರಿಯಿಲ್ಲ ಎಂದರಂತೂ ಏನಾದರೂ ಒಂದು ಉಪಾಯ ಹುಡುಕಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ತನಕ ನಮಗೆ ನೆಮ್ಮದಿಯೇ ಇರುವುದಿಲ್ಲ.

ಭೂಮಿಯ ಮೇಲೆ - ದೂರವಾಣಿ ಜಾಲದ ವ್ಯಾಪ್ತಿಯೊಳಗೆ ಇರುವ ನಮಗೇನೋ ಅಂತರಜಾಲ ಸಂಪರ್ಕ ಸುಲಭವಾಗಿ ಸಿಗುತ್ತಿದೆ. ಆದರೆ ದೂರವಾಣಿ ಜಾಲಗಳಿಂದ ದೂರವಿರುವ ಜನರೂ ವಿಶ್ವದ ವಿವಿಧೆಡೆಗಳಲ್ಲಿ ಇರುತ್ತಾರಲ್ಲ, ಅವರಿಗೆಲ್ಲ ಅಂತರಜಾಲ ಸಂಪರ್ಕ ಸಿಗುವುದು ಹೇಗೆ?

ಶುಕ್ರವಾರ, ಆಗಸ್ಟ್ 2, 2019

ವಾರಾಂತ್ಯ ವಿಶೇಷ: ರೋಬಾಟ್‌ ಜಗತ್ತಿನಲ್ಲಿ ಒಂದು ಸುತ್ತು

ಟಿ. ಜಿ. ಶ್ರೀನಿಧಿ


ಯಂತ್ರಮಾನವ, ಅಂದರೆ ರೋಬಾಟ್‌ಗಳ ಕುರಿತು ನಮಗೆ ಎಲ್ಲಿಲ್ಲದ ಕುತೂಹಲ. ಮೊದಲಿಗೆ ವೈಜ್ಞಾನಿಕ ಕತೆ ಹಾಗೂ ಚಲನಚಿತ್ರಗಳ ಮೂಲಕ ನಮಗೆ ಪರಿಚಯವಾದ ಈ ಪರಿಕಲ್ಪನೆ ಇಂದು ಹಲವು ಕ್ಷೇತ್ರಗಳಲ್ಲಿ ತನ್ನ ಪ್ರಭಾವ ತೋರಿಸುತ್ತಿದೆ. ಕಾರ್ಖಾನೆಯಲ್ಲಿ ಕೆಲಸಮಾಡುವುದರಿಂದ ಪ್ರಾರಂಭಿಸಿ ಮನೆಯ ಕಸ ಗುಡಿಸುವವರೆಗೆ ರೋಬಾಟ್‌ಗಳ ಕಾರ್ಯಕ್ಷೇತ್ರ ಇದೀಗ ಬಹಳ ವಿಸ್ತಾರವಾಗಿ ಬೆಳೆದಿದೆ.

ಈ ಯಂತ್ರಮಾನವರ ಬಗ್ಗೆ ಕುತೂಹಲ ಇರುವಂತೆಯೇ ಅವುಗಳನ್ನು ಕುರಿತ ಭೀತಿಯೂ ನಮ್ಮಲ್ಲಿದೆ. ಮನುಷ್ಯರನ್ನು ಅವು ಆಳಬಹುದು ಎನ್ನುವುದಕ್ಕಿಂತ ನಮ್ಮ ಕೆಲಸಗಳನ್ನು ರೋಬಾಟ್‌ಗಳು ಕಿತ್ತುಕೊಳ್ಳಬಹುದು ಎನ್ನುವುದು ಈ ಭೀತಿಗೆ ಪ್ರಮುಖ ಕಾರಣ. ಈ ಭೀತಿ ಇರಬೇಕೇ ಬೇಡವೇ ಎಂದು ತೀರ್ಮಾನಿಸುವ ಮೊದಲು ರೋಬಾಟ್‌ಗಳ ಬಗ್ಗೆ, ಅವುಗಳ ಕೆಲಸದ ಬಗ್ಗೆ ಕೊಂಚ ತಿಳಿದುಕೊಳ್ಳುವುದು ಒಳ್ಳೆಯದು.

ಸೋಮವಾರ, ಜುಲೈ 29, 2019

ಗ್ಯಾಜೆಟ್ ಇಜ್ಞಾನ: 'ಟೆಕ್ನೋ ಫ್ಯಾಂಟಮ್ ೯' ಫೋನಲ್ಲಿ ಏನೆಲ್ಲ ಇದೆ?

ಇಜ್ಞಾನ ವಿಶೇಷ


ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಮುಂದುವರೆದ ಸೌಲಭ್ಯಗಳು, ಹೆಚ್ಚು ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯಿರುವ 'ಫ್ಲ್ಯಾಗ್‌ಶಿಪ್'ಗಳು ಮೊಬೈಲ್ ಜಗತ್ತಿನಲ್ಲಿ ಸದಾ ಸುದ್ದಿಯಲ್ಲಿರುತ್ತವೆ. ಹತ್ತಾರು ವೈಶಿಷ್ಟ್ಯಗಳೊಡನೆ ಮಾರುಕಟ್ಟೆಗೆ ಬರುವ ಈ ಫೋನುಗಳ ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಣೆಪಟ್ಟಿ ಹೊತ್ತುಬರುವ ಫೋನುಗಳ ಬೆಲೆ ಆರಂಕಿ ಮುಟ್ಟುವುದೂ ಅಪರೂಪವೇನಲ್ಲ.

ಕೈಗೆಟುಕುವ ಬೆಲೆಯ ಫೋನುಗಳಲ್ಲೂ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟು ಫ್ಲ್ಯಾಗ್‌ಶಿಪ್‌ಗಳೊಡನೆ ಸೀಮಿತ ಮಟ್ಟದಲ್ಲಾದರೂ ಸ್ಪರ್ಧೆಗಿಳಿಯುವ ಪ್ರಯತ್ನಗಳನ್ನು ಹಲವು ಸಂಸ್ಥೆಗಳು ಮಾಡುತ್ತಾ ಬಂದಿವೆ. ಇಂತಹ ಪ್ರಯತ್ನಗಳ ಫಲವಾಗಿ ಹಲವು ಹೊಸ ಮಾದರಿಗಳೂ ಮಾರುಕಟ್ಟೆಗೆ ಬಂದಿವೆ, ಬರುತ್ತಿವೆ.

ಇಂತಹ ಮಾದರಿಗಳಿಗೆ ಲೇಟೆಸ್ಟ್ ಉದಾಹರಣೆಯೇ ಟೆಕ್ನೋ ಸಂಸ್ಥೆಯ 'ಫ್ಯಾಂಟಮ್ ೯'.

ಬುಧವಾರ, ಜುಲೈ 24, 2019

ಫೇಸ್ಆಪ್ ಎಂಬ ಹೊಸ ಮುಖ: ಎಷ್ಟು ಸುಖ, ಎಷ್ಟು ದುಃಖ?

ಟಿ. ಜಿ. ಶ್ರೀನಿಧಿ


ಸಮಾಜಜಾಲಗಳಲ್ಲಿ ಸದಾಕಾಲ ಹೊಸ ವಿಷಯಗಳದೇ ಸುದ್ದಿ. ಸುದ್ದಿ ಮಾತ್ರವೇ ಏಕೆ, ಕೆಲವು ವಿಷಯಗಳು ಬಳಕೆದಾರರಲ್ಲಿ ಅತ್ಯುತ್ಸಾಹವನ್ನೂ ಮೂಡಿಸಿಬಿಡುತ್ತವೆ.

ಈಚಿನ ಕೆಲ ವಾರಗಳಲ್ಲಿ ಇಂತಹ ಅತ್ಯುತ್ಸಾಹಕ್ಕೆ ಕಾರಣವಾಗಿರುವ ವಿಷಯಗಳ ಪೈಕಿ 'ಫೇಸ್‌ಆಪ್' ಎಂಬ ಮೊಬೈಲ್ ತಂತ್ರಾಂಶಕ್ಕೆ ಪ್ರಮುಖ ಸ್ಥಾನವಿದೆ. ರಷ್ಯನ್ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆಯೇ ರೂಪಿಸಿದ್ದರೂ ಈಗ ದಿಢೀರ್ ಜನಪ್ರಿಯತೆ ಗಳಿಸಿಕೊಂಡಿರುವುದು ಈ ಆಪ್‌ನ ಹೆಚ್ಚುಗಾರಿಕೆ. ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ಎರಡೂ ಹೆಸರುಗಳ ಅರ್ಧರ್ಧ ಸೇರಿಸಿ ಹೆಸರಿಟ್ಟಂತೆ ತೋರುವ ಈ ತಂತ್ರಾಂಶವನ್ನು ಈವರೆಗೆ ಗೂಗಲ್ ಪ್ಲೇಸ್ಟೋರ್‌ ಒಂದರಿಂದಲೇ ಹತ್ತು ಕೋಟಿಗೂ ಹೆಚ್ಚುಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ!

ಗುರುವಾರ, ಜುಲೈ 18, 2019

ಡಿಜಿಟಲ್ ಸಂವಹನದ ಹಲವು ಅವತಾರ

ಟಿ. ಜಿ. ಶ್ರೀನಿಧಿ


ಕಂಪ್ಯೂಟರಿನ ಜೊತೆ ವ್ಯವಹಾರ ಎಂದ ತಕ್ಷಣ ನಮಗೆ ಅದರ ಕೀಲಿಮಣೆ ಮತ್ತು ಮೌಸ್ ನೆನಪಾಗುತ್ತವೆ. ಮೊಬೈಲ್ ಫೋನ್ ಜೊತೆಗೆ ವ್ಯವಹರಿಸುವಾಗಲೂ ಅಷ್ಟೇ - ಫೀಚರ್ ಫೋನಿನ ಭೌತಿಕ ಕೀಲಿಮಣೆಯನ್ನೋ ಸ್ಮಾರ್ಟ್‌ಫೋನಿನ ವರ್ಚುಯಲ್ ಕೀಲಿಮಣೆಯನ್ನೋ ನಾವು ಬಳಸಿಯೇ ಬಳಸುತ್ತೇವೆ.

ಕ್ಯಾಲ್ಕ್ಯುಲೇಟರ್ ಕಾಲದಿಂದ ಕಂಪ್ಯೂಟರಿನವರೆಗೆ ಏನೆಲ್ಲಾ ಬದಲಾವಣೆಗಳಾಗಿದ್ದರೂ ಹೆಚ್ಚಿನ ವ್ಯತ್ಯಾಸಗಳಾಗದಿರುವುದು ಇದೊಂದು ವಿಷಯದಲ್ಲಿ ಮಾತ್ರವೇ ಇರಬೇಕು. ಕಂಪ್ಯೂಟರ್ ಹಾಗೂ ಮೊಬೈಲುಗಳನ್ನು ಬಳಸಿ ಅತ್ಯಂತ ಸಂಕೀರ್ಣವಾದ ಕೆಲಸಗಳನ್ನು ಸಾಧಿಸಿಕೊಳ್ಳುವ ಸಾಧ್ಯತೆ ಇರುವ ಇಂದಿನ ಕಾಲದಲ್ಲೂ, ನಾವು ಅವುಗಳೊಡನೆ ಸಂವಹನ ನಡೆಸಲು ಮೌಖಿಕವಲ್ಲದ (ನಾನ್-ವರ್ಬಲ್) ಮಾರ್ಗಗಳನ್ನೇ ಹೆಚ್ಚಾಗಿ ಬಳಸುತ್ತೇವೆ. ಮೇಲೆ ಹೇಳಿದ ಕೀಲಿಮಣೆ ಕುಟ್ಟುವ, ಟಚ್ ಸ್ಕ್ರೀನ್ ಮುಟ್ಟುವ ನಿದರ್ಶನಗಳೆಲ್ಲ ಈ ನಾನ್-ವರ್ಬಲ್ ಸಂವಹನದ ಉದಾಹರಣೆಗಳೇ.

ಇದೇಕೆ ಹೀಗೆ? ವ್ಯಕ್ತಿಗಳ ಜೊತೆ ಮೌಖಿಕ (ವರ್ಬಲ್) ಸಂವಹನ ನಡೆಸುವಂತೆ ಯಂತ್ರಗಳ ಜೊತೆಗೂ ಮಾತನಾಡುವುದು, ಬೈಟು ಕಾಫಿ ಬೇಕೆಂದು ಹೋಟಲಿನವರಿಗೆ ಹೇಳುವಂತೆ ಮನೆಗೆ ಫೋನ್ ಮಾಡೆಂದು ಮೊಬೈಲಿಗೂ ಹೇಳುವುದು ಸಾಧ್ಯವಿಲ್ಲವೇ?

ಶುಕ್ರವಾರ, ಜುಲೈ 12, 2019

ವಾರಾಂತ್ಯ ವಿಶೇಷ: ಪರಿಸರ ರಕ್ಷಣೆ ಮತ್ತು ದತ್ತಾಂಶದ ವಿಜ್ಞಾನ

ಟಿ. ಜಿ. ಶ್ರೀನಿಧಿ


ಪ್ರತಿದಿನ ನಾವು ಮಾಡುವ ಪ್ರತಿಯೊಂದು ಕೆಲಸವೂ ಪರಿಸರದ ಮೇಲೆ ಒಂದಲ್ಲ ಒಂದು ರೀತಿಯ ಪರಿಣಾಮ ಬೀರುತ್ತದೆ. ಈ ಪೈಕಿ ಒಳ್ಳೆಯ ಪರಿಣಾಮ ಬೀರುವ ಕೆಲಸಗಳು ಕಡಿಮೆಯೇ ಎನ್ನುವುದು ಪರಿಸರದ ಸದ್ಯದ ಪರಿಸ್ಥಿತಿ ನೋಡಿದರೆ ನಮಗೇ ತಿಳಿಯುವ ವಿಷಯ.

ಇದೇ ರೀತಿ ನಾವು ಮಾಡುವ ಪ್ರತಿ ಕೆಲಸ ಒಂದಷ್ಟು ದತ್ತಾಂಶವನ್ನೂ (ಡೇಟಾ) ಸೃಷ್ಟಿಸುತ್ತದೆ. ದಿನಸಿ ಖರೀದಿಗೆ ಮಾಡಿದ ವೆಚ್ಚ, ವಾಹನಕ್ಕೆ ಹಾಕಿಸಿದ ಪೆಟ್ರೋಲಿನ ಪ್ರಮಾಣ, ವಿದ್ಯುತ್ ಬಿಲ್ಲಿನ ಮೊತ್ತ - ಹೀಗೆ ಈ ದತ್ತಾಂಶ ಹಲವು ವಿಷಯಗಳಿಗೆ ಸಂಬಂಧಪಟ್ಟಿರುವುದು ಸಾಧ್ಯ.

ಎಲ್ಲೋ ಒಂದು ಕಡೆ ದಾಖಲಾಗುವ, ಅಗತ್ಯಬಿದ್ದರೆ ವಿಶ್ಲೇಷಣೆಗೆ ದಕ್ಕುವ ಇಂತಹ ದತ್ತಾಂಶದ ಜೊತೆಗೆ ಎಲ್ಲೂ ದಾಖಲಾಗದೆ ಕಳೆದುಹೋಗುವ ದತ್ತಾಂಶಗಳೂ ಇವೆ. ನಮ್ಮ ಮನೆಗಳ ಉದಾಹರಣೆಯನ್ನೇ ತೆಗೆದುಕೊಂಡರೆ ಹೊರಹೋಗುವ ಕಸ, ಪೋಲಾಗುವ ನೀರು, ಮರುಬಳಕೆಯಾಗದ ಪ್ಲಾಸ್ಟಿಕ್ ಮುಂತಾದವುಗಳ ಪ್ರಮಾಣವನ್ನು ನಾವು ಅಳೆಯುವುದೇ ಇಲ್ಲ!

ಬುಧವಾರ, ಜುಲೈ 3, 2019

ಮೊಬೈಲ್ ಎಂಬ ಮಾಯೆ!

ಟಿ. ಜಿ. ಶ್ರೀನಿಧಿ

ಈ ಹಿಂದೆ ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದ್ದಂಥ ಅನುಕೂಲಗಳನ್ನು ಮೊಬೈಲ್ ಫೋನ್ ನಮಗೆ ತಂದುಕೊಟ್ಟಿದೆ. ಮನೆಗೆ ದಿನಸಿ ತರಿಸಿಕೊಳ್ಳುವುದರಿಂದ ಪ್ರಾರಂಭಿಸಿ ಹೊಸ ವಿಷಯಗಳ ಕುರಿತು ಅಧ್ಯಯನ ನಡೆಸುವವರೆಗೆ ನಾವು ಯಾವ ಕೆಲಸವನ್ನು ಎಲ್ಲಿ ಯಾವಾಗ ಬೇಕಾದರೂ ಮಾಡಿಕೊಳ್ಳಲು ಸಾಧ್ಯವಾಗಿರುವುದು ಈ ಸಾಧನದಿಂದಾಗಿಯೇ.

ಇಷ್ಟೆಲ್ಲ ಅನುಕೂಲಗಳ ಜೊತೆ ಮೊಬೈಲ್ ಫೋನಿನಿಂದಾಗಿ ಹಲವು ಹೊಸ ಸಮಸ್ಯೆಗಳೂ ಕಾಣಿಸಿಕೊಂಡಿವೆ. ಅಷ್ಟೇ ಅಲ್ಲ, ಅಂತಹ ಕೆಲ ಸಮಸ್ಯೆಗಳು ನಾವು ನಿರೀಕ್ಷಿಸಿಯೇ ಇರದ ಮಟ್ಟಕ್ಕೂ ಬೆಳೆಯುತ್ತಿವೆ.

ಮಾಧ್ಯಮಗಳಲ್ಲಿ ಈಚೆಗೆ ಕಾಣಿಸಿಕೊಂಡ ಒಂದೆರಡು ಘಟನೆಗಳನ್ನು ಇಲ್ಲಿ ಉದಾಹರಿಸಬಹುದು. ಮೊಬೈಲಿನಲ್ಲಿ ಚಿತ್ರೀಕರಿಸಲೆಂದು ಮೇಲಕ್ಕೆ ನೆಗೆದ ಯುವಕನೊಬ್ಬ ಕತ್ತಿನ ಮೂಳೆ ಮುರಿದುಕೊಂಡು ಮೃತಪಟ್ಟದ್ದು ಒಂದು ಘಟನೆಯಾದರೆ ಯಾವಾಗಲೂ ಮೊಬೈಲಿನಲ್ಲೇ ಮುಳುಗಿರಬೇಡ ಎಂದಿದ್ದಕ್ಕೆ ಕೋಪಗೊಂಡ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೊಂದು ಘಟನೆ.   

ಈ ಎರಡೂ ಸುದ್ದಿಗಳ ಹಿನ್ನೆಲೆಯಲ್ಲಿರುವುದು 'ಟಿಕ್‌ಟಾಕ್' ಎಂಬ ಮೊಬೈಲ್ ಆಪ್.

ಮಂಗಳವಾರ, ಜೂನ್ 25, 2019

ವೀಡಿಯೋ ಇಜ್ಞಾನ: ಆಪ್ ಬಳಸುವಾಗ ಜೋಪಾನ!

ಇಜ್ಞಾನ ವಿಶೇಷ


ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ಸಹಯೋಗದಲ್ಲಿ ಇಜ್ಞಾನ ಪ್ರಸ್ತುತಪಡಿಸುತ್ತಿರುವ ಸರಣಿಯ ಎರಡನೇ ವೀಡಿಯೋ ಇಲ್ಲಿದೆ. ಮೊಬೈಲ್ ಆಪ್‌ಗಳನ್ನು ಬಳಸುವಾಗ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳೇನು, ನಮ್ಮ ಸುರಕ್ಷತೆಯ ದೃಷ್ಟಿಯಿಂದ ಏನೆಲ್ಲ ಮಾಡಬೇಕು ಎನ್ನುವುದರ ಬಗ್ಗೆ ಈ ವೀಡಿಯೋ ಮಾಹಿತಿ ನೀಡುತ್ತದೆ. ನೋಡಿ, ಶೇರ್ ಮಾಡಿ!

ಶುಕ್ರವಾರ, ಜೂನ್ 21, 2019

ಇಜ್ಞಾನ ವಿಶೇಷ: ಆರ್.ಓ. ನೀರು ಎಷ್ಟು ಸುರಕ್ಷಿತ?

ಡಾ. ವಿನಾಯಕ ಕಾಮತ್

‘ಆರ್.ಓ. ವಿಧಾನದಲ್ಲಿ ಶುದ್ಧೀಕರಿಸಿದ ನೀರು’ ಎಂಬ ಪದಪುಂಜವನ್ನು ನೀವೆಲ್ಲ ಕೇಳಿಯೇ ಇರುತ್ತೀರಿ. ಶುದ್ಧ ನೀರನ್ನು ಪಡೆಯಲು ಅನೇಕರ ಮನೆಗಳಲ್ಲಿ ಈ ವಿಧಾನವನ್ನು ಬಳಸುವುದು ಈಗ ಅತ್ಯಂತ ಸಾಮಾನ್ಯವಾಗಿದೆ. ಮನೆಗಳಲ್ಲಷ್ಟೇ ಅಲ್ಲ, ಶುದ್ಧನೀರನ್ನು ಕ್ಯಾನ್‌ಗಳಿಗೆ ತುಂಬಿ ಮಾರುವವರೂ ಇದೇ ತಂತ್ರಜ್ಞಾನ ಬಳಸುತ್ತಾರೆ. ಇತ್ತೀಚಿಗೆ ಹಲವು ಸಂಘ ಸಂಸ್ಥೆಗಳು ಶುದ್ಧೀಕರಣ ಘಟಕ ಸ್ಥಾಪಿಸಿ, ಉಚಿತವಾಗಿ ಅಥವಾ ಅತಿ ಕಡಿಮೆ ಬೆಲೆಗೆ, ಆರ್.ಓ.  ವಿಧಾನದಲ್ಲಿ ಶುದ್ಧೀಕರಿಸಿದ ನೀರನ್ನು ಸಾರ್ವಜನಿಕರಿಗೆ ಒದಗಿಸುತ್ತಿವೆ.

ಈ ಆರ್.ಓ. ಅತ್ಯಂತ ಶುದ್ಧವಾದ ನೀರನ್ನೇನೋ ಕೊಡುತ್ತದೆ. ಆದರೆ, ಈ ತಂತ್ರಜ್ಞಾನದ ಮೂಲಕ ಶುದ್ಧೀಕರಿಸಿದ ನೀರು ನಿಜವಾಗಿಯೂ ಎಷ್ಟು ಸುರಕ್ಷಿತ? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ತನ್ನ ಇತ್ತೀಚಿನ ವರದಿಯಲ್ಲಿ ಬೆಳಕು ಚೆಲ್ಲಿದೆ.

ಸೋಮವಾರ, ಜೂನ್ 17, 2019

ಇಜ್ಞಾನದ ಹಾದಿಯಲ್ಲಿ ಇನ್ನೊಂದು ಹೆಜ್ಜೆ: ಇಜ್ಞಾನ ಈಗ ವೀಡಿಯೋ ರೂಪದಲ್ಲೂ!

ಇಜ್ಞಾನ ವಿಶೇಷವಿಜ್ಞಾನ ತಂತ್ರಜ್ಞಾನ ವಿಷಯಗಳಿಗೆ ಮೀಸಲಾದ ಕನ್ನಡ ಜಾಲತಾಣ ಇಜ್ಞಾನ ಡಾಟ್ ಕಾಮ್, ವೈವಿಧ್ಯಮಯ ಮಾಹಿತಿಯನ್ನು ೨೦೦೭ರಿಂದ ಸತತವಾಗಿ ನಿಮಗೆ ತಲುಪಿಸುತ್ತಿದೆ. ಈ ಹಾದಿಯಲ್ಲಿ ನಾವು ಅನೇಕ ಹೊಸ ಪ್ರಯೋಗಗಳನ್ನು ಮಾಡಿರುವುದು ನಿಮಗೆ ಗೊತ್ತೇ ಇದೆ. ಇಂಥದ್ದೇ ಇನ್ನೊಂದು ಪ್ರಯೋಗವಾಗಿ ಇದೀಗ ಇಜ್ಞಾನದ ಮಾಹಿತಿಯನ್ನು ವೀಡಿಯೋ ರೂಪದಲ್ಲಿ ನಿಮ್ಮತ್ತ ತರುವ ಪ್ರಯತ್ನವೊಂದನ್ನು ಪ್ರಾರಂಭಿಸುತ್ತಿದ್ದೇವೆ. ಹೊಸದಾಗಿ ಪ್ರಾರಂಭವಾಗುತ್ತಿರುವ ನ್ಯೂಸ್ ಫಸ್ಟ್ ಕನ್ನಡ ವಾಹಿನಿಯ ಸಹಯೋಗದಲ್ಲಿ ಈ ಪ್ರಯೋಗ ನಡೆಯಲಿದ್ದು, ಇದರ ಮೊದಲ ಫಲಿತಾಂಶವನ್ನು ನಿಮ್ಮ ಮುಂದೆ ತರಲು ನಮಗೆ ಖುಷಿಯಾಗುತ್ತಿದೆ.

ಶುಕ್ರವಾರ, ಜೂನ್ 7, 2019

ವಾರಾಂತ್ಯ ವಿಶೇಷ: ಸೆನ್ಸರ್ ಎಂಬ ಸರ್ವಾಂತರ್ಯಾಮಿ

ಟಿ. ಜಿ. ಶ್ರೀನಿಧಿ


ಬೈಕಿನ ಕೀಲಿ ತಿರುಗಿಸುತ್ತಿದ್ದಂತೆಯೇ ಅದರಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಹೋಟಲಿನಲ್ಲಿ ಊಟ ಮುಗಿಸಿ ಕೈತೊಳೆಯಲು ಹೋದರೆ ಅಲ್ಲಿನ ನಲ್ಲಿ ನಾವು ಕೈಯೊಡ್ಡಿದ ಕೂಡಲೇ ಸ್ವಯಂಚಾಲಿತವಾಗಿ ನೀರು ಬಿಡುತ್ತದೆ. ಕಾರು ರಿವರ್ಸ್ ಗೇರಿನಲ್ಲಿದ್ದಾಗ ಯಾವುದಾದರೂ ವಸ್ತುವೋ ವ್ಯಕ್ತಿಯೋ ಅಡ್ಡಬಂದರೆ ಅದರಲ್ಲಿರುವ ಸುರಕ್ಷತಾ ವ್ಯವಸ್ಥೆ ಸದ್ದುಮಾಡಿ ಎಚ್ಚರಿಸುತ್ತದೆ.

ಇದೆಲ್ಲ ಸಾಧ್ಯವಾಗುವುದು ಹೇಗೆಂದು ಹುಡುಕಲು ಹೊರಟರೆ ನಮಗೆ ಸಿಗುವುದು ಸೆನ್ಸರ್ ಎಂಬ ವಸ್ತು.

ಬುಧವಾರ, ಮೇ 29, 2019

ಐಟಿ ಲೋಕಕ್ಕೆ ಹೊಳಪಿನ ಅಂಚು: ಎಡ್ಜ್ ಕಂಪ್ಯೂಟಿಂಗ್

ಟಿ. ಜಿ. ಶ್ರೀನಿಧಿ

ಬಹಳ ಹಿಂದೆ, ಕಂಪ್ಯೂಟರುಗಳನ್ನು ಬಳಸಿ ಮಾಡಬಹುದಾದ ಕೆಲಸಗಳೆಲ್ಲ ನಿರ್ದಿಷ್ಟ ಕಂಪ್ಯೂಟರಿಗೆ ಮಾತ್ರವೇ ಸೀಮಿತವಾಗಿರುತ್ತಿದ್ದವು. ಅಂದರೆ, ಬಳಕೆದಾರರು ತಮ್ಮ ಕಂಪ್ಯೂಟರಿನ ಎದುರಿಗಿದ್ದರಷ್ಟೇ ಅದರ ಉಪಯೋಗ ಪಡೆದುಕೊಳ್ಳುವುದು ಸಾಧ್ಯವಿತ್ತು. ಆಮೇಲೆ, ವೈಯಕ್ತಿಕ ಕಂಪ್ಯೂಟರುಗಳು ಬಂದಾಗ, ಕಂಪ್ಯೂಟರುಗಳು ನಮ್ಮ ಮನೆಗೇ ಬಂದವು. ಅಂತರಜಾಲ ರೂಪುಗೊಂಡ ಮೇಲಂತೂ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳ ನಡುವೆ ಸಂಪರ್ಕ ಸುಲಭಸಾಧ್ಯವಾಯಿತು.

ಸದ್ಯ ಕಂಪ್ಯೂಟರಿನಲ್ಲಿ ನಮ್ಮ ವ್ಯವಹಾರದ ಬಹುಪಾಲು ಅಂತರಜಾಲದ ಮೂಲಕವೇ ನಡೆಯುತ್ತದೆ. ಇಮೇಲ್ ಸಂದೇಶಗಳಿರಲಿ, ಉಳಿಸಿಟ್ಟ ಕಡತಗಳೇ ಇರಲಿ - ಯಾವುದೇ ಕಂಪ್ಯೂಟರ್ ಅಥವಾ ಮೊಬೈಲಿನಿಂದ ಎಲ್ಲಿ ಬೇಕಾದರೂ ನಾವು ಅವನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ. ಕಂಪ್ಯೂಟರಿನಲ್ಲಿ ಜೀಬಿಗಟ್ಟಲೆ ಹಾಡುಗಳನ್ನು, ಸಿನಿಮಾಗಳನ್ನು ಉಳಿಸಿಟ್ಟುಕೊಳ್ಳುತ್ತಿದ್ದವರು ಇಂದು ಅದನ್ನೆಲ್ಲ ಅಂತರಜಾಲದ ಮೂಲಕವೇ, ತಮಗೆ ಬೇಕೆನಿಸಿದಾಗ, ಪಡೆದುಕೊಳ್ಳುತ್ತಿದ್ದಾರೆ.

ಬುಧವಾರ, ಮೇ 22, 2019

ಡಿಜಿಟಲ್ ಬೀಗದ ಎರಡನೇ ಕೀಲಿ

ಟಿ. ಜಿ. ಶ್ರೀನಿಧಿ


ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರಿನ ಮೂಲಕ ನಾವು ಮಾಹಿತಿ ತಂತ್ರಜ್ಞಾನದ ಹಲವು ಸವಲತ್ತುಗಳನ್ನು (ತಂತ್ರಾಂಶ, ಜಾಲತಾಣ ಇತ್ಯಾದಿ) ಬಳಸುತ್ತೇವೆ. ಮನರಂಜನೆಯಿಂದ ಪ್ರಾರಂಭಿಸಿ ನಮ್ಮ ಖಾಸಗಿ ಮಾಹಿತಿಯನ್ನು ನಿಭಾಯಿಸುವವರೆಗೆ, ನಮ್ಮ ಪರವಾಗಿ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವವರೆಗೆ ಈ ಸವಲತ್ತುಗಳು ಅನೇಕ ಕೆಲಸಗಳನ್ನು ಮಾಡುತ್ತವೆ.

ಆಯಾ ಸನ್ನಿವೇಶಕ್ಕೆ ತಕ್ಕಂತೆ ಇಂತಹ ಸವಲತ್ತುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರುತ್ತದೆ. ಅವುಗಳಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾರೂ ಹಾಳುಮಾಡದಂತೆ, ಕದಿಯದಂತೆ, ದುರುಪಯೋಗಪಡಿಸಿಕೊಳ್ಳದಂತೆ ಈ ಸುರಕ್ಷತಾ ಕ್ರಮಗಳು ನೋಡಿಕೊಳ್ಳುತ್ತವೆ. ಇಂತಹ ಬಹುತೇಕ ಸುರಕ್ಷತಾ ಕ್ರಮಗಳ ಜವಾಬ್ದಾರಿ ಆಯಾ ತಂತ್ರಾಂಶ ಅಥವಾ ಜಾಲತಾಣವನ್ನು ನಡೆಸುವವರದ್ದು.

ಈ ಸುರಕ್ಷತೆಯ ಒಂದು ಭಾಗದ ಜವಾಬ್ದಾರಿ ಗ್ರಾಹಕರಾದ ನಮ್ಮದೂ ಆಗಿರುತ್ತದೆ. ಆ ಭಾಗದ ಹೆಸರೇ ಪಾಸ್‌ವರ್ಡ್. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮಾಹಿತಿಯಿರುವ ಕೋಣೆಗೆ ಒಂದು ಬೀಗ ಇದೆ ಎಂದುಕೊಂಡರೆ, ಪಾಸ್‌ವರ್ಡು ಆ ಬೀಗದ ಕೀಲಿಕೈ. ನಮ್ಮ ಮಾಹಿತಿ ಬೇರೆಯವರಿಗೆ ಸಿಗದಂತೆ, ದುರ್ಬಳಕೆ ಆಗದಂತೆ ಇದು ಕಾಪಾಡುತ್ತದೆ.

ಗುರುವಾರ, ಮೇ 16, 2019

ಬೆಳಕಿನ ದಿನ ವಿಶೇಷ: ಟೆಕ್ ಲೋಕದ ಬೆಳಕು

ಟಿ. ಜಿ. ಶ್ರೀನಿಧಿ


ನಮ್ಮ ಬದುಕಿನಲ್ಲಿ ಬೆಳಕಿನ ಪಾತ್ರ ಬಹಳ ಮಹತ್ವದ್ದು. ಸಸ್ಯಗಳಲ್ಲಿ ಆಹಾರ ತಯಾರಿಕೆಯಿರಲಿ, ಸೋಲಾರ್ ಹೀಟರಿನಲ್ಲಿ ಸ್ನಾನಕ್ಕೆ ನೀರು ಬಿಸಿಮಾಡುವುದೇ ಇರಲಿ - ನೂರೆಂಟು ಕೆಲಸಗಳಿಗೆ ಬೆಳಕು ಬೇಕೇಬೇಕು.

ಹೀಗೆ ಬೆಳಕಿನ ಸಹಾಯದಿಂದ ನಡೆಯುವ ಕೆಲಸಗಳನ್ನು ನಾವು ಹಲವು ಕ್ಷೇತ್ರಗಳಲ್ಲಿ ನೋಡಬಹುದು. ಅಂತಹ ಕ್ಷೇತ್ರಗಳ ಪೈಕಿ ಮಾಹಿತಿ ತಂತ್ರಜ್ಞಾನ ಕೂಡ ಒಂದು. ಇಲ್ಲಿ ನಡೆಯುವ ಹಲವಾರು ಮಹತ್ವದ ವಿದ್ಯಮಾನಗಳಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ.

ಬುಧವಾರ, ಮೇ 8, 2019

ಇದು ಡೇಟಾ ಲೋಕ!

ಟಿ. ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ನಾವು ಪ್ರತಿದಿನವೂ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ವಾಟ್ಸ್‌ಆಪ್ ಸಂದೇಶಗಳನ್ನು ಕಳುಹಿಸುವುದು, ಮೊಬೈಲಿನಲ್ಲಿ ವೀಡಿಯೋ ನೋಡುವುದು, ಆನ್‌ಲೈನ್ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು, ಆಪ್ ಬಳಸಿ ಟ್ಯಾಕ್ಸಿ ಕರೆಸುವುದು, ಎಟಿಎಂ‌ನಿಂದ ಹಣ ತೆಗೆಯುವುದು, ಬಸ್ಸಿನ ಕಂಡಕ್ಟರು ನಮ್ಮ ಟಿಕೆಟ್ ಮುದ್ರಿಸಿ ನೀಡುವುದು - ಇವೆಲ್ಲವೂ ಇದಕ್ಕೆ ಉದಾಹರಣೆ.

ಇಂತಹ ಪ್ರತಿಯೊಂದು ಕೆಲಸ ಮಾಡಿದಾಗಲೂ ಒಂದಷ್ಟು ವಿವರಗಳು ಸಂಬಂಧಪಟ್ಟ ವ್ಯವಸ್ಥೆಯಲ್ಲಿ ದಾಖಲಾಗುತ್ತವೆ, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆಯಾಗುತ್ತವೆ. ಮೊಬೈಲಿನಲ್ಲಿ ವೀಕ್ಷಿಸಿದ ವೀಡಿಯೋಗಳು, ಆನ್‌ಲೈನ್ ಅಂಗಡಿಯಲ್ಲಿ ನೋಡಿದ ಹಾಗೂ ಖರೀದಿಸಿದ ವಸ್ತುಗಳು, ಟ್ಯಾಕ್ಸಿ ಬರಬೇಕಾದ ವಿಳಾಸ, ಗೂಗಲ್‌ನಲ್ಲಿ ಹುಡುಕಿದ ವಿಷಯ, ಎಟಿಎಂನಿಂದ ಪಡೆದ ಹಣದ ಮೊತ್ತ, ಬಸ್ಸಿನಲ್ಲಿ ಪ್ರಯಾಣಿಸಿದ ದೂರ - ಹೀಗೆ.

ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು. ಇದನ್ನು ಕನ್ನಡದಲ್ಲಿ ದತ್ತಾಂಶ ಎಂದು ಕರೆಯಬಹುದು. ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎಂದು ಕರೆಯುವವರೂ ಇದ್ದಾರೆ. ಹಲವು ಸಂಸ್ಥೆಗಳ ಇಡೀ ವ್ಯವಹಾರ ನಿಂತಿರುವುದೇ ದತ್ತಾಂಶದ ಮೇಲೆ!

ಬುಧವಾರ, ಮೇ 1, 2019

ನಿಮ್ಮ ಫೋನಿನಲ್ಲಿ ಈ ಆಪ್‌ ಇದೆಯೇ? [ಭಾಗ ೨]

ಇಜ್ಞಾನ ವಿಶೇಷ


ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.

ಬುಧವಾರ, ಏಪ್ರಿಲ್ 24, 2019

ಫೋಲ್ಡಬಲ್ ಫೋನ್ ಎಂಬ ಹೊಸ ಫ್ಯಾಶನ್!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳು ನಮಗೆಲ್ಲ ಪರಿಚಯವಾದ ಸಂದರ್ಭದಲ್ಲಿ ಬೇರೆಬೇರೆ ವಿನ್ಯಾಸದ ಫೋನುಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದವು. ಆಯತಾಕಾರದ 'ಕ್ಯಾಂಡಿಬಾರ್', ಪುಸ್ತಕದ ಹಾಳೆ ಮಗುಚುವಂತೆ ತೆರೆಯಬೇಕಿದ್ದ 'ಫ್ಲಿಪ್', ಒಂದು ಕಡೆಗೆ ಜಾರಿಸಿ ಬಳಸಬಹುದಾಗಿದ್ದ 'ಸ್ಲೈಡರ್', ತಿರುಗುವ ಭಾಗಗಳಿದ್ದ 'ಸ್ವಿವೆಲ್' - ಹೀಗೆ ಮೊಬೈಲ್ ವಿನ್ಯಾಸಗಳಲ್ಲಿ ಸಾಕಷ್ಟು ವೈವಿಧ್ಯವಿದ್ದ ಸಮಯ ಅದು.

ಮುಂದೆ ಸ್ಮಾರ್ಟ್‌ಫೋನುಗಳ ಪರಿಚಯವಾಗಿ ಸ್ಪರ್ಶಸಂವೇದಿ ಪರದೆಗಳ (ಟಚ್‌ಸ್ಕ್ರೀನ್) ಬಳಕೆ ಹೆಚ್ಚಿದಂತೆ ಎಲ್ಲ ಫೋನುಗಳ ವಿನ್ಯಾಸವೂ ಒಂದೇರೀತಿ ಕಾಣಿಸಲು ಶುರುವಾಯಿತು. ಈ ಮೊಬೈಲುಗಳೆಲ್ಲ ಸಾಮಾನ್ಯ ಫೋನಿಗೂ ಟ್ಯಾಬ್ಲೆಟ್ ಕಂಪ್ಯೂಟರಿಗೂ ನಡುವಿನ ಗಾತ್ರಕ್ಕೆ ಬೆಳೆದು 'ಫ್ಯಾಬ್ಲೆಟ್' ಎಂಬ ಹೊಸ ಹೆಸರನ್ನೂ ಪಡೆದುಕೊಂಡವು.

ಇದೀಗ, ಇನ್ನೇನು ಮೊಬೈಲ್ ಫೋನುಗಳೆಲ್ಲ ಹೀಗೆಯೇ ಇರಲಿವೆ ಎನ್ನುವ ಭಾವನೆ ನೆಲೆಗೊಳ್ಳುವ ಹೊತ್ತಿಗೆ, ಫೋನ್ ವಿನ್ಯಾಸದಲ್ಲೊಂದು ಹೊಸ ಫ್ಯಾಶನ್ ಸುದ್ದಿಮಾಡುತ್ತಿದೆ. ಆ ಫ್ಯಾಶನ್ನಿನ ಹೆಸರೇ ಫೋಲ್ಡಬಲ್ ಫೋನ್!

ಗುರುವಾರ, ಏಪ್ರಿಲ್ 18, 2019

ಚುನಾವಣೆ ವಿಶೇಷ: ಅಳಿಸಲಾಗದ ಇಂಕ್ ಬಗ್ಗೆ ನಿಮಗೆಷ್ಟು ಗೊತ್ತು?

ಇಜ್ಞಾನ ವಿಶೇಷ


೨೦೧೯ರ ಚುನಾವಣೆಯ ಅಂಗವಾಗಿ ಕರ್ನಾಟಕದ ಹಲವೆಡೆ ಇಂದು (ಏ. ೧೯) ಮತದಾನ ನಡೆಯುತ್ತಿದೆ. ಇಂಕು ಹಚ್ಚಿದ ಬೆರಳಿನ ಚಿತ್ರಗಳು ಸಮಾಜಜಾಲಗಳಲ್ಲೆಲ್ಲ ಹರಿದಾಡುತ್ತಿವೆ. ಈ ಹೊತ್ತಿನಲ್ಲಿ ಆ ಇಂಕಿನ ಕುರಿತು ಕೆಲವು ಕುತೂಹಲಕರ ಅಂಶಗಳು ಇಲ್ಲಿವೆ. ಇದು ಇಜ್ಞಾನದ ಇಂದಿನ ವಿಶೇಷ!

ಬುಧವಾರ, ಏಪ್ರಿಲ್ 17, 2019

ಚುನಾವಣೆ ವಿಶೇಷ: ಮತದಾನದ ಲೋಕದಲ್ಲಿ ಹೈಟೆಕ್ ಸಾಧ್ಯತೆಗಳು

ಟಿ. ಜಿ. ಶ್ರೀನಿಧಿ


ಒಂದು ಕಾಲದಲ್ಲಿ ನಮ್ಮ ಚುನಾವಣೆಗಳೆಲ್ಲ ಕಾಗದವನ್ನು ಬಳಸಿಕೊಂಡೇ ನಡೆಯುತ್ತಿದ್ದವು. ಮತ ಚಲಾಯಿಸಲು ಹೋದವರು ಕಾಗದದ ಮತಪತ್ರದ ಮೇಲೆ ತಮ್ಮ ಓಟು ಯಾರಿಗೆಂದು ಸೂಚಿಸುತ್ತಿದ್ದರು, ಫಲಿತಾಂಶದ ದಿನ ಅಧಿಕಾರಿಗಳು ಕುಳಿತುಕೊಂಡು ಆ ಮತಪತ್ರಗಳನ್ನೆಲ್ಲ ಒಂದೊಂದಾಗಿ ಎಣಿಸುತ್ತಿದ್ದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಬೇರೆಲ್ಲ ಕ್ಷೇತ್ರಗಳಂತೆ ಚುನಾವಣೆಗಳಲ್ಲೂ ಗಮನಾರ್ಹ ಬದಲಾವಣೆ ತಂದಿವೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಹುಡುಕುವುದಿರಲಿ, ಯಂತ್ರದ ಗುಂಡಿ ಒತ್ತಿ ಮತ ದಾಖಲಿಸುವುದಿರಲಿ, ಬಹಳ ವೇಗವಾಗಿ ಫಲಿತಾಂಶಗಳನ್ನು ಪ್ರಕಟಿಸುವುದೇ ಇರಲಿ - ಹಲವಾರು ರೂಪಗಳಲ್ಲಿ ಐಟಿ ತನ್ನ ಪ್ರಭಾವವನ್ನು ತೋರಿಸುತ್ತಿದೆ.

ಇಷ್ಟೆಲ್ಲ ಆದರೂ ನಮ್ಮ ಒಂದು ಪ್ರಶ್ನೆಗೆ ಮಾತ್ರ ಉತ್ತರ ಇನ್ನೂ ಸಿಕ್ಕಿಲ್ಲ: ಕಂಪ್ಯೂಟರನ್ನೂ ಮೊಬೈಲನ್ನೂ ಬಳಸಿ ಎಷ್ಟೆಲ್ಲ ಕೆಲಸ ಮಾಡಿಕೊಳ್ಳುವ ನಾವು ಓಟು ಹಾಕಲು ಮಾತ್ರ ನಮ್ಮೂರಿನ ಮತಗಟ್ಟೆಗೇ ಏಕೆ ಹೋಗಬೇಕು?

ಮಂಗಳವಾರ, ಏಪ್ರಿಲ್ 9, 2019

ಭಾಷೆಗಳನ್ನು ಬೆಸೆಯುವ ಅನುವಾದ ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ಒಂದು ಕಾಲದಲ್ಲಿ ಪ್ರಯಾಣ ಬಹಳ ಅಪರೂಪವಾಗಿತ್ತು. ಬೇಕಾದ ಸವಲತ್ತುಗಳಿಲ್ಲದೆಯೋ, ಬೇರೆಡೆಗೆ ಹೋಗಬೇಕಾದ ಅಗತ್ಯ ಕಾಣದೆಯೋ ಎಲ್ಲರೂ ಬಹುಪಾಲು ತಮ್ಮ ಸ್ಥಳಗಳಲ್ಲಿ ಇರುತ್ತಿದ್ದದ್ದೇ ಹೆಚ್ಚು. ಎಲ್ಲೋ ಕೆಲವರನ್ನು ಹೊರತುಪಡಿಸಿ ಬೇರೆ ಭಾಷೆಗಳನ್ನು ಕಲಿಯಬೇಕಾದ, ಅವುಗಳಲ್ಲಿ ವ್ಯವಹರಿಸಬೇಕಾದ ಪರಿಸ್ಥಿತಿ ಬರುತ್ತಲೇ ಇರಲಿಲ್ಲ ಎನ್ನಬಹುದು. 

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಂತರಜಾಲದ ಮಾಯಾಜಾಲ ವಿಶ್ವದ ಮೂಲೆಮೂಲೆಗಳಲ್ಲಿರುವ ಮಾಹಿತಿಯನ್ನು ನಮ್ಮ ಅಂಗೈಯಲ್ಲೇ ತಂದಿಡುತ್ತಿದೆ. ವ್ಯಾಪಾರ ವಹಿವಾಟು ಬೆಳೆದಂತೆ ಬೇರೆಬೇರೆ ಭಾಷಿಕರೊಡನೆ ವ್ಯವಹರಿಸುವುದು ದಿನನಿತ್ಯದ ವಿದ್ಯಮಾನವಾಗಿದೆ. ಅಷ್ಟೇ ಅಲ್ಲ. ಸಮಯ - ಹಣ ಇದ್ದರೆ ಸಾಕು, ಯಾರು ಎಲ್ಲಿಗೆ ಬೇಕಾದರೂ ಸುಲಭವಾಗಿ ಹೋಗಿಬರುವುದು ಸಾಧ್ಯವಾಗಿದೆ.

ನಾಗರಹೊಳೆ ಪಕ್ಕದ ಊರಿನವರೊಬ್ಬರು ಕೆಲಸದ ಮೇಲೆ ಜರ್ಮನಿಗೆ ಹೋಗಿದ್ದಾರೆ ಎಂದುಕೊಳ್ಳಿ. ಅವರು ಊಟಕ್ಕೆ ಹೋದ ಹೋಟಲಿನವರು ಚೀನಾದವರು. ಇವರ ಇಂಗ್ಲಿಷ್ ಭಾಷೆ ಅವರಿಗೆ ಗೊತ್ತಿಲ್ಲ, ಅವರ ಚೈನೀಸ್ ಇವರಿಗೆ ಗೊತ್ತಿಲ್ಲ. ಇಷ್ಟರ ಮೇಲೆ ಮೆನು ಕಾರ್ಡ್ ಇರುವುದು ಜರ್ಮನ್ ಭಾಷೆಯಲ್ಲಿ. ಹೀಗಿರುವಾಗ ಇವರಿಗೆ ಏನು ಬೇಕು ಎಂದು ಹೋಟಲಿನವರಿಗೆ ತಿಳಿಯುವುದು ಹೇಗೆ?

ಬುಧವಾರ, ಏಪ್ರಿಲ್ 3, 2019

ಮೊಬೈಲ್ ಫೋನಿಗೆ ನಲವತ್ತಾರು, ಹೊಸ ಸಾಧ್ಯತೆಗಳು ನೂರಾರು!

ಟಿ. ಜಿ. ಶ್ರೀನಿಧಿ


ಏಪ್ರಿಲ್ ೩, ೧೯೭೩. ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಇಟ್ಟಿಗೆಯಷ್ಟು ದೊಡ್ಡ ಸಾಧನವನ್ನು ತಮ್ಮ ಕಿವಿಯ ಬಳಿ ಹಿಡಿದುಕೊಂಡು ಮಾತನಾಡುತ್ತಿದ್ದರು. ಮತ್ತು ಅವರ ಮಾತನ್ನು, ಅದೇ ಕ್ಷಣದಲ್ಲಿ, ನ್ಯೂಜೆರ್ಸಿ ನಗರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೇಳುತ್ತಿದ್ದರು.

ನ್ಯೂಯಾರ್ಕ್‌ನಲ್ಲಿದ್ದ ಆ ವ್ಯಕ್ತಿಯ ಹೆಸರು ಮಾರ್ಟಿನ್ ಕೂಪರ್, ಹಾಗೂ ಅವರ ಕೈಲಿದ್ದ ಇಟ್ಟಿಗೆಯಂಥ ಸಾಧನವೇ ಪ್ರಪಂಚದ ಮೊತ್ತಮೊದಲ ಮೊಬೈಲ್ ಫೋನ್. ಮೋಟರೋಲಾ ಸಂಸ್ಥೆಯ ಉದ್ಯೋಗಿಯಾಗಿದ್ದ ಮಾರ್ಟಿನ್ ಮಾತನಾಡಿದ್ದು ತಮ್ಮ ಪ್ರತಿಸ್ಪರ್ಧಿ ಬೆಲ್ ಲ್ಯಾಬ್ಸ್ ಸಂಸ್ಥೆಯ ಜೋಯೆಲ್ ಎಂಗೆಲ್‌ ಎನ್ನುವವರ ಜೊತೆ.

ಸೋಮವಾರ, ಏಪ್ರಿಲ್ 1, 2019

ಏಪ್ರಿಲ್ ಫೂಲ್ಸ್ ವಿಶೇಷ: ತಂತ್ರಜ್ಞಾನ ಮತ್ತು ತಮಾಷೆ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಕೊಡುಗೆಗಳು ನಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ, ನಿಜ. ಆದರೆ ಅವೆಲ್ಲದರ ವಿನ್ಯಾಸ ಹಾಗೂ ರಚನೆ ಬಹಳ ಸಂಕೀರ್ಣವಾಗಿರುತ್ತದೆ. ಮೊಬೈಲಿನಲ್ಲಿ ಆಡುವ ಆಟ ತಮಾಷೆಯದೇ ಆದರೂ ಅದರ ಹಿಂದಿರುವ ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸ ಮಾತ್ರ ಸಾಕಷ್ಟು ಗಂಭೀರವೇ!

ಹಾಗೆಂದು ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಯಾವಾಗಲೂ ಗಂಭೀರವಾಗಿಯೇ ಕೆಲಸಮಾಡುತ್ತಾರೆ, ಅಲ್ಲಿ ತಮಾಷೆಗೆ ಜಾಗವೇ ಇಲ್ಲ ಎಂದೆಲ್ಲ ಹೇಳಬಹುದೇ? ಖಂಡಿತಾ ಇಲ್ಲ. ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಕುಚೇಷ್ಟೆಗಳು ನಡೆಯುತ್ತವೆ. ಅಷ್ಟೇ ಏಕೆ, ಅಂತಹ ಕುಚೇಷ್ಟೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವನ್ನೂ ಪಡೆಯಲಾಗುತ್ತದೆ.

ಏಪ್ರಿಲ್ ೧ರಂದು, ಮೂರ್ಖರ ದಿನ ಸಂದರ್ಭದಲ್ಲಿ, ಎಲ್ಲೆಡೆಯೂ ಕೀಟಲೆ ಕುಚೇಷ್ಟೆಗಳದೇ ಭರಾಟೆ. ಈ ಸಂಭ್ರಮದಲ್ಲಿ ತಂತ್ರಜ್ಞಾನ ಲೋಕವೂ ಬಲು ಉತ್ಸಾಹದಿಂದ ಭಾಗವಹಿಸುತ್ತದೆ. ಬಳಕೆದಾರರನ್ನು ಏಪ್ರಿಲ್ ಫೂಲ್ ಮಾಡಲು ಹೊಸಹೊಸ ಪ್ರಯತ್ನಗಳನ್ನು ಮಾಡುತ್ತದೆ.

ಬುಧವಾರ, ಮಾರ್ಚ್ 27, 2019

ಏನಿದು ಉಪಗ್ರಹ ವಿರೋಧಿ ಅಸ್ತ್ರ?

ಇಜ್ಞಾನ ವಿಶೇಷ


ಕೃತಕ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಬಿಡುವುದು, ವಿವಿಧ ಉದ್ದೇಶಗಳಿಗಾಗಿ ಅವನ್ನು ಬಳಸಿಕೊಳ್ಳುವುದು ಬಹಳ ಸಾಮಾನ್ಯವಾಗಿರುವ ಸಂಗತಿ. ಈ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿಯಿರುವ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಸಂಘರ್ಷಕ್ಕೇನಾದರೂ ಇಳಿದರೆ ಉಪಗ್ರಹಗಳಿಂದ ಬಲಿಷ್ಠ ರಾಷ್ಟ್ರಕ್ಕೆ ಹೆಚ್ಚಿನ ಅನುಕೂಲಗಳಾಗುವುದು ನಿಶ್ಚಿತ. ಹೀಗಾಗಿಯೇ ಯುದ್ಧಸಂಬಂಧಿ ತಂತ್ರಜ್ಞಾನಗಳ ಬೆಳವಣಿಗೆ ಇದೀಗ ಅಂತರಿಕ್ಷಕ್ಕೂ ವಿಸ್ತರಿಸಿದೆ. ಈ ವಿಸ್ತರಣೆಯ ಫಲವಾಗಿ ರೂಪುಗೊಂಡಿರುವುದೇ ಉಪಗ್ರಹ ವಿರೋಧಿ ಅಸ್ತ್ರಗಳ (ಆಂಟಿ-ಸ್ಯಾಟೆಲೈಟ್ ವೆಪನ್, ASAT) ಪರಿಕಲ್ಪನೆ.

ಗುರುವಾರ, ಮಾರ್ಚ್ 21, 2019

ಮೀಮ್ ಮ್ಯಾಜಿಕ್

ಟಿ. ಜಿ. ಶ್ರೀನಿಧಿ

ಸಮಾಜಜಾಲಗಳಲ್ಲಿ, ಅದರಲ್ಲೂ ಫೇಸ್‌ಬುಕ್‌ನಲ್ಲಿ, ಆಗಿಂದಾಗ್ಗೆ ಹೊಸ ಸಂಗತಿಗಳು ಮುನ್ನೆಲೆಗೆ ಬರುತ್ತಿರುತ್ತವೆ. ಹೊಸ ಟ್ರೆಂಡ್‌ಗಳು ಇಲ್ಲಿ ಸೃಷ್ಟಿಯಾಗುತ್ತಲೇ ಇರುತ್ತವೆ.

ಇಂತಹ ಯಾವುದೇ ಸಂಗತಿ ಸುದ್ದಿಮಾಡಿದಾಗ, ಹೊಸ ಟ್ರೆಂಡ್ ಸೃಷ್ಟಿಯಾದಾಗ ಅದನ್ನೆಲ್ಲ ಲೇವಡಿಮಾಡುವ ಚಿತ್ರಗಳೂ ಅದರ ಜೊತೆಯಲ್ಲೇ ಪ್ರಚಾರ ಪಡೆದುಕೊಳ್ಳುತ್ತವೆ. ಆಯಾ ವಿಷಯಕ್ಕೆ ಸಂಬಂಧಿಸಿದ ಒಂದು ಚಿತ್ರ, ಅದರ ಮೇಲೆ-ಕೆಳಗೆ ಒಂದೆರಡು ಸಾಲಿನ ಬರಹ ಇರುವ ಹಲವಾರು ಪೋಸ್ಟುಗಳು ಸಮಾಜಜಾಲಗಳಲ್ಲಿ ಬಹಳ ಕ್ಷಿಪ್ರವಾಗಿ ಹರಿದಾಡಲು ಶುರುಮಾಡುತ್ತವೆ. ಸುದ್ದಿಯಲ್ಲಿರುವ ಟ್ರೆಂಡ್‌ನ ಮೂಲ ಉದ್ದೇಶ ಏನಿರುತ್ತದೋ ಅದನ್ನು ತಮಾಷೆಯ ದೃಷ್ಟಿಯಿಂದ ನೋಡುವುದು ಇಂತಹ ಬಹುತೇಕ ಚಿತ್ರಗಳ ಉದ್ದೇಶ.

'ಇಂಟರ್‌ನೆಟ್ ಮೀಮ್‌'ಗಳೆಂದು ಗುರುತಿಸುವುದು ಇಂತಹ ಚಿತ್ರಗಳನ್ನೇ.

ಬುಧವಾರ, ಮಾರ್ಚ್ 13, 2019

ಜಗವ ಬೆಸೆವ ಜಾಲಕ್ಕೆ ಮೂವತ್ತು ವರ್ಷ

ವಿಶ್ವವ್ಯಾಪಿ ಜಾಲದ ಬಗ್ಗೆ ಗೊತ್ತಿಲ್ಲದವರಿಗೂ WWW ಹೆಸರಿನ ಪರಿಚಯ ಇರುತ್ತದೆ. ಮೂಲತಃ ವಿಜ್ಞಾನಿಗಳ ಕೆಲಸ ಸುಲಭಮಾಡಲೆಂದು ಸೃಷ್ಟಿಯಾದ ಈ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ವೆಬ್ ವಿಹಾರಕ್ಕೆ ಮೂವತ್ತು ವರ್ಷ ತುಂಬಿರುವ ಸಂದರ್ಭದಲ್ಲಿ ಹೀಗೊಂದು ಹಿನ್ನೋಟ...

ಟಿ. ಜಿ. ಶ್ರೀನಿಧಿ


ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಹೆಸರುಗಳು ಅಪಾರ ಜನಪ್ರಿಯತೆ ಗಳಿಸಿಕೊಂಡಿರುತ್ತವೆ. ಇಂತಹ ಹೆಸರುಗಳ ಪೈಕಿ ವರ್ಲ್ಡ್‌ವೈಡ್ ವೆಬ್ ಕೂಡ ಒಂದು. ಇದನ್ನು ಕನ್ನಡದಲ್ಲಿ ವಿಶ್ವವ್ಯಾಪಿ ಜಾಲ ಎಂದು ಕರೆಯಬಹುದು. ಜಾಲತಾಣ, ಅಂದರೆ ವೆಬ್‌ಸೈಟುಗಳ ವಿಳಾಸದ ಪ್ರಾರಂಭದಲ್ಲಿ ನಾವು ನೋಡುವ WWW ಎನ್ನುವುದು ಇದೇ ಹೆಸರಿನ ಹ್ರಸ್ವರೂಪ.

ಮಂಗಳವಾರ, ಮಾರ್ಚ್ 5, 2019

ನೀರು ಮತ್ತು ಗಾಳಿ: ಈ ಬಗ್ಗೆ ನಿಮಗೆಷ್ಟು ಗೊತ್ತು?

ಡಾ. ವಿನಾಯಕ ಕಾಮತ್


ನೀರು, ಹೆಚ್ಚಿನೆಲ್ಲ ವಸ್ತುಗಳನ್ನು ತನ್ನಲ್ಲಿ ಕರಗಿಸಿಕೊಳ್ಳುವುದರಿಂದ ಅದನ್ನು  'ಸಾರ್ವತ್ರಿಕ  ದ್ರಾವಕ' ಎನ್ನುವುದು ನಿಮಗೆ ಗೊತ್ತಿರಬಹುದು. ಆದರೆ ನೀರಿನಲ್ಲಿ ಗಾಳಿ ಅಥವಾ ಅನಿಲ ಕರಗಬಹುದೆಂದು ಯಾವಾಗಲಾದರೂ ಯೋಚಿಸಿದ್ದೀರೇ? ಅಥವಾ ಈ ರೀತಿ ನೀರಿನಲ್ಲಿ ಕರಗಿದ ಅನಿಲಗಳು, ಕೆಲವೊಮ್ಮೆ ಮಾರಣಾಂತಿಕವಾಗಬಹುದೆಂದು ನಿಮಗೆ ಗೊತ್ತಿದೆಯೇ?

ನೀರಿನಲ್ಲಿ ಅನಿಲ ಕರಗುವುದಿಲ್ಲ ಎಂದೇ ಬಹುತೇಕರ ಅಭಿಪ್ರಾಯವಿರಬಹುದು. ಆದರೆ ವಾಸ್ತವದಲ್ಲಿ ನೀರು ಬಹಳಷ್ಟು ಅನಿಲಗಳಿಗೂ ಸಾರ್ವತ್ರಿಕ ದ್ರಾವಕ (ಇಂಗ್ಲಿಷಿನಲ್ಲಿ ಇದಕ್ಕೆ ಯೂನಿವರ್ಸಲ್ ಸಾಲ್ವೆಂಟ್ ಎನ್ನುತ್ತಾರೆ).

ಗುರುವಾರ, ಫೆಬ್ರವರಿ 28, 2019

ಈ ವಾರಾಂತ್ಯ, ಮೊಬೈಲ್ ಬಿಟ್ಟಿರಲು ಸಿದ್ಧರಿದ್ದೀರಾ?

ಟಿ. ಜಿ. ಶ್ರೀನಿಧಿ

ಹಲವು ದಶಕಗಳ ಹಿಂದೆ ಫೋನುಗಳೇ ಅಪರೂಪವಾಗಿದ್ದವು. ಆಮೇಲೆ, ಮೊಬೈಲ್ ಬಂದ ಹೊಸತರಲ್ಲೂ ಅಷ್ಟೇ. ಅಪರೂಪದ ಜೊತೆಗೆ ದುಬಾರಿಯೂ ಆಗಿದ್ದ ಅವನ್ನು ನಾವು ಹೆಚ್ಚಾಗಿ ಬಳಸುತ್ತಿರಲಿಲ್ಲ.

ತಂತ್ರಜ್ಞಾನ ಬೆಳೆದಂತೆ ಮೊಬೈಲುಗಳಲ್ಲಿ ಹೆಚ್ಚಿನ ಸೌಲಭ್ಯಗಳು ಬಂದವು, ಅವುಗಳ ಜನಪ್ರಿಯತೆಯೂ ಹೆಚ್ಚಾಯಿತು. ಅಷ್ಟೇ ಅಲ್ಲದೆ ಅವುಗಳನ್ನು ಬಳಸಲು ಮಾಡಬೇಕಾದ ವೆಚ್ಚ ಕೂಡ ಗಮನಾರ್ಹವಾಗಿ ಕಡಿಮೆಯಾಯಿತು.

ಇದರ ಪರಿಣಾಮ? ದಿನನಿತ್ಯ ನಾವೆಲ್ಲ ಮೊಬೈಲ್ ಬಳಸುವ ಅವಧಿಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವತನಕ ನಾವು ಪದೇಪದೇ ನಮ್ಮ ಮೊಬೈಲನ್ನು ನೋಡುತ್ತಿರುತ್ತೇವೆ. ನಿದ್ರೆಯ ನಡುವೆ ಎಚ್ಚರವಾದಾಗ ಕೂಡ ಒಮ್ಮೆ ಮೊಬೈಲಿನ ಪರದೆಯೊಳಗೆ ಇಣುಕಿನೋಡುವ ಜನರೂ ಇದ್ದಾರೆ.

ಮೊಬೈಲಿನ ಬಳಕೆ ಒಂದು ಚಟವಾಗಿ ಪರಿಣಮಿಸಿರುವುದಕ್ಕೆ ಕಾರಣವಾಗಿರುವುದು ಈ ಬೆಳವಣಿಗೆಗಳೇ.

ಗುರುವಾರ, ಫೆಬ್ರವರಿ 21, 2019

ತಾಯ್ನುಡಿ ದಿನ ವಿಶೇಷ: ನಮ್ಮ ಭಾಷೆ ಮತ್ತು ತಂತ್ರಜ್ಞಾನ

ಟಿ. ಜಿ. ಶ್ರೀನಿಧಿ

ತಂತ್ರಜ್ಞಾನ, ಅದರಲ್ಲೂ ಮಾಹಿತಿ ತಂತ್ರಜ್ಞಾನ ಎಂದಕೂಡಲೇ ಕೇಳಸಿಗುವ ಆರೋಪ: ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವುದು. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಪೈಕಿ ಶೇ. ೯೬ರಷ್ಟನ್ನು ಬಳಸುವವರು ನಮ್ಮ ಜನಸಂಖ್ಯೆಯ ಶೇ. ೪ರಷ್ಟು ಮಂದಿ ಮಾತ್ರ ಎಂದು ವಿಶ್ವಸಂಸ್ಥೆಯ ಜಾಲತಾಣವೇ ಹೇಳುತ್ತದೆ. ಇಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ.

ಹೌದು, ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ.

ಬುಧವಾರ, ಫೆಬ್ರವರಿ 20, 2019

ಸ್ಯಾಟೆಲೈಟ್ ಫೋನ್ ಸಮಾಚಾರ

ಬೆಂಗಳೂರಿನಲ್ಲಿ ಇಂದು ಪ್ರಾರಂಭವಾಗುತ್ತಿರುವ ಏರೋ ಇಂಡಿಯಾ ಪ್ರದರ್ಶನದ ಆಯೋಜಕರು ಸ್ಯಾಟೆಲೈಟ್ ಫೋನುಗಳನ್ನು ಬಳಸಲಿದ್ದಾರಂತೆ. ಈ ಫೋನಿನ ವೈಶಿಷ್ಟ್ಯವೇನು? ನಮ್ಮ ಮೊಬೈಲಿಗೂ ಈ ಫೋನಿಗೂ ಏನು ವ್ಯತ್ಯಾಸ?

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನುಗಳ ಬಗ್ಗೆ ನಮಗೆಲ್ಲ ಬಹಳ ಪ್ರೀತಿ. ಬೆಳಗಿನಿಂದ ರಾತ್ರಿವರೆಗೆ ನಮ್ಮ ಜೊತೆಯಲ್ಲೇ ಇರುವ ಸಂಗತಿಗಳ ಸಾಲಿನಲ್ಲೂ ಅದಕ್ಕೆ ವಿಶೇಷ ಸ್ಥಾನ. ಹೀಗಾಗಿಯೇ ಮೊಬೈಲ್ ತಯಾರಕರಿಗೂ ನಮ್ಮ ಮಾರುಕಟ್ಟೆಯ ಕುರಿತು ವಿಶೇಷ ಅಕ್ಕರೆ. ದಿನ ಬೆಳಗಾದರೆ ನಮ್ಮ ಮಾರುಕಟ್ಟೆಯಲ್ಲಿ ಹೊಸ ಮಾದರಿಗಳ ಮೆರವಣಿಗೆ.

ಮೊಬೈಲ್ ಫೋನನ್ನು ಇಷ್ಟೆಲ್ಲ ವ್ಯಾಪಕವಾಗಿ ಬಳಸುವ ನಮ್ಮ ದೇಶದಲ್ಲಿ ಅಂಥದ್ದೇ ಇನ್ನೊಂದು ಬಗೆಯ ದೂರವಾಣಿಯನ್ನು ಬಳಸುವುದಿರಲಿ, ಅನುಮತಿಯಿಲ್ಲದೆ ನಮ್ಮೊಡನೆ ಇಟ್ಟುಕೊಳ್ಳುವುದೂ ಅಪರಾಧ ಎನ್ನುವುದು ವಿಚಿತ್ರವೆನಿಸಿದರೂ ಸತ್ಯ!

ಈ ವಿಶಿಷ್ಟ ದೂರವಾಣಿಯ ಹೆಸರೇ ಸ್ಯಾಟೆಲೈಟ್ ಫೋನ್.

ಗುರುವಾರ, ಫೆಬ್ರವರಿ 14, 2019

ಹಿಂದಿನ ಇಜ್ಞಾನ: ಟೆಕ್ ಪ್ರೀತಿ ಶುರುವಾದ ರೀತಿ

ಟಿ. ಜಿ. ಶ್ರೀನಿಧಿ

ಇಂದು ನಮ್ಮ ಬದುಕಿನ ಮೇಲೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಸಾಧನಗಳ ಪ್ರಭಾವ ಅತ್ಯಂತ ವ್ಯಾಪಕವಾಗಿದೆ. ಲ್ಯಾಪ್‌ಟಾಪ್‌ನಿಂದ ಮೊಬೈಲ್ ಫೋನಿನವರೆಗೆ, ಕಾರಿನಿಂದ ಟೀವಿಯವರೆಗೆ ನೂರೆಂಟು ಸಾಧನಗಳು ಈಗ ಸ್ಮಾರ್ಟ್ ಆಗಿವೆ, ನಮ್ಮ ಬದುಕನ್ನು ಪ್ರಭಾವಿಸುತ್ತಿವೆ.

ಇಂದಿನ ಈ ಎಲ್ಲ ಸ್ಮಾರ್ಟ್ ಸಾಧನಗಳೂ ಒಂದಲ್ಲ ಒಂದು ರೀತಿಯ ಕಂಪ್ಯೂಟರುಗಳೇ. ಅವುಗಳ ಬಾಹ್ಯ ರೂಪ ಹೇಗೆಯೇ ಇದ್ದರೂ ಮೂಲಭೂತ ರಚನೆ ಹೆಚ್ಚೂಕಡಿಮೆ ಒಂದೇ ರೀತಿಯದು. ಆಯಾ ಸಾಧನ ಮಾಡುವ ಕೆಲಸ ಎಂಥದ್ದು ಎನ್ನುವುದರ ಮೇಲೆ ಈ ರಚನೆಯ ಸಂಕೀರ್ಣತೆ ಬದಲಾಗುತ್ತದೆ, ಅಷ್ಟೇ.

ಈಗ ಇಷ್ಟೆಲ್ಲ ಸಾಮಾನ್ಯವಾಗಿದ್ದರೂ ಕಂಪ್ಯೂಟರುಗಳ ವಿನ್ಯಾಸ ಯಾವಾಗಲೂ ಹೀಗೆಯೇ ಇರಲಿಲ್ಲ.

ಗುರುವಾರ, ಜನವರಿ 17, 2019

ನಿಮ್ಮ ದಿನದಲ್ಲಿ ಸ್ಕ್ರೀನ್ ಟೈಮ್ ಎಷ್ಟು?

ಟಿ. ಜಿ. ಶ್ರೀನಿಧಿ


ಒಂದು ಕಾಲವಿತ್ತು, ಸ್ಕ್ರೀನ್ ಎಂದರೆ ಆಗ ನೆನಪಿಗೆ ಬರುತ್ತಿದ್ದದ್ದು ಎರಡೇ - ಒಂದು ಹಿರಿತೆರೆ (ಸಿನಿಮಾ), ಇನ್ನೊಂದು ಕಿರಿತೆರೆ (ಟೀವಿ). ದಿನಕ್ಕೆ ಒಂದೆರಡು ಗಂಟೆ ಟೀವಿ, ಥಿಯೇಟರಿನಲ್ಲಿ ಅಪರೂಪಕ್ಕೊಂದು ಸಿನಿಮಾ ನೋಡಿದರೆ ಸ್ಕ್ರೀನ್ ಸಹವಾಸ ಬಹುಪಾಲು ಮುಗಿದುಹೋಗುತ್ತಿತ್ತು.

ಆದರೆ ಈಗ ಹಾಗಿಲ್ಲ. ಹಿರಿಯ ಕಿರಿಯ ತೆರೆಗಳ ಜೊತೆಗೆ ಕಂಪ್ಯೂಟರು, ಟ್ಯಾಬ್ಲೆಟ್ಟು, ಮೊಬೈಲು, ಸ್ಮಾರ್ಟ್ ವಾಚು ಮುಂತಾದ ಇನ್ನೂ ಹಲವು ಕಿರಿಕಿರಿಯ ತೆರೆಗಳು ಸೇರಿಕೊಂಡುಬಿಟ್ಟಿವೆ. ಸುಮ್ಮನೆ ಸೇರಿಕೊಂಡಿರುವುದಷ್ಟೇ ಅಲ್ಲ, ನಮ್ಮ ದಿನದ ಬಹುಪಾಲನ್ನು ಅವು ಕಬಳಿಸುತ್ತಲೂ ಇವೆ.

ಶನಿವಾರ, ಜನವರಿ 12, 2019

ವಾರಾಂತ್ಯ ವಿಶೇಷ: ಡಿಜಿಟಲ್ ಜೋಡಿ - ಏನಿದರ ಮೋಡಿ?

ಟಿ. ಜಿ. ಶ್ರೀನಿಧಿ


ಹೊಸ ಉತ್ಪನ್ನಗಳನ್ನು ತಯಾರಿಸಲು ಹೊರಟಾಗ ಅವುಗಳ ವಿನ್ಯಾಸ, ಮೊದಲ ಮಾದರಿಯ ತಯಾರಿ ಮೊದಲಾದ ಕೆಲಸಗಳಲ್ಲಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಬಳಸುವುದು ಸಾಮಾನ್ಯ. ಆನಂತರ ಉತ್ಪಾದನೆಯ ಕೆಲಸ ಶುರುವಾದಮೇಲೆ ಅಲ್ಲೂ ಕಂಪ್ಯೂಟರಿನ ಬಳಕೆ ಇರುತ್ತದೆ. ಇಷ್ಟೆಲ್ಲ ಆದನಂತರ ತಯಾರಾಗುತ್ತದಲ್ಲ ಉತ್ಪನ್ನ, ಅದೂ ಕಂಪ್ಯೂಟರಿನೊಳಗೇ ಇರುವಂತಿದ್ದರೆ?

ವಿಚಿತ್ರವೆಂದು ತೋರುವ ಈ ಯೋಚನೆಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವುದು 'ಡಿಜಿಟಲ್ ಟ್ವಿನ್' ಎಂಬ ಪರಿಕಲ್ಪನೆ.

ಮಂಗಳವಾರ, ಜನವರಿ 1, 2019

ನಿಮ್ಮ ಫೋನಿಗೆ ಎಷ್ಟು ಅಂಕ?

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನ್ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಹೊಸ ಮಾದರಿಗಳು ಬರುತ್ತಲೇ ಇರುತ್ತವೆ. ಈ ಪೈಕಿ ನಮ್ಮ ಅಗತ್ಯಗಳಿಗೆ ಸರಿಹೊಂದುವ ಫೋನನ್ನು ಆರಿಸಿಕೊಳ್ಳುವುದು ನಿಜಕ್ಕೂ ಗೊಂದಲ ಮೂಡಿಸುವ ಕೆಲಸ. ತಾಂತ್ರಿಕ ವಿವರಗಳೆಲ್ಲ ಹಾಗಿರಲಿ, ನಿರ್ದಿಷ್ಟ ಬೆಲೆಯ ಫೋನನ್ನು ಕೊಳ್ಳುತ್ತೇವೆ ಎಂದುಕೊಂಡರೂ ಆ ಬೆಲೆಯ ಆಸುಪಾಸಿನಲ್ಲೇ ಲಭ್ಯವಿರುವ ಹತ್ತಾರು ಮಾದರಿಗಳು ನಮ್ಮ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿಯೊಂದು ಉತ್ತರಕ್ಕೂ ಇಂತಿಷ್ಟು ಅಂಕವೆಂದು ನಿಗದಿಪಡಿಸಿ, ಗಳಿಸಿದ ಒಟ್ಟು ಅಂಕಗಳ ಮೇಲೆ ಬೇರೆಬೇರೆ ಶ್ರೇಣಿಗಳನ್ನೆಲ್ಲ ಘೋಷಿಸುತ್ತಾರಲ್ಲ. ಮೊಬೈಲುಗಳಿಗೂ ಹಾಗೊಂದು ಪರೀಕ್ಷೆ ಇದ್ದಿದ್ದರೆ? ಫಸ್ಟ್ ಕ್ಲಾಸ್ ಬಂದ ಫೋನನ್ನೇ ಕೊಳ್ಳಬಹುದಾಗಿತ್ತು ಅಲ್ಲವೇ?
badge