ಏಪ್ರಿಲ್ ೩, ೧೯೭೩. ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರು ಇಟ್ಟಿಗೆಯಷ್ಟು ದೊಡ್ಡ ಸಾಧನವನ್ನು ತಮ್ಮ ಕಿವಿಯ ಬಳಿ ಹಿಡಿದುಕೊಂಡು ಮಾತನಾಡುತ್ತಿದ್ದರು. ಮತ್ತು ಅವರ ಮಾತನ್ನು, ಅದೇ ಕ್ಷಣದಲ್ಲಿ, ನ್ಯೂಜೆರ್ಸಿ ನಗರದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೇಳುತ್ತಿದ್ದರು.
ನ್ಯೂಯಾರ್ಕ್‌ನಲ್ಲಿದ್ದ ಆ ವ್ಯಕ್ತಿಯ ಹೆಸರು ಮಾರ್ಟಿನ್ ಕೂಪರ್, ಹಾಗೂ ಅವರ ಕೈಲಿದ್ದ ಇಟ್ಟಿಗೆಯಂಥ ಸಾಧನವೇ ಪ್ರಪಂಚದ ಮೊತ್ತಮೊದಲ ಮೊಬೈಲ್ ಫೋನ್. ಮೋಟರೋಲಾ ಸಂಸ್ಥೆಯ ಉದ್ಯೋಗಿಯಾಗಿದ್ದ ಮಾರ್ಟಿನ್ ಮಾತನಾಡಿದ್ದು ತಮ್ಮ ಪ್ರತಿಸ್ಪರ್ಧಿ ಬೆಲ್ ಲ್ಯಾಬ್ಸ್ ಸಂಸ್ಥೆಯ ಜೋಯೆಲ್ ಎಂಗೆಲ್ ಎನ್ನುವವರ ಜೊತೆ.
ಆ ದಿನ ಮಾರ್ಟಿನ್ ಬಳಸಿದ ಮೊಬೈಲ್ ಫೋನು ಸುಮಾರು ಒಂದು ಕೇಜಿ ತೂಕವಿತ್ತು. ದೂರವಾಣಿ ಕರೆ ಮಾಡುವುದನ್ನು ಬಿಟ್ಟರೆ ಬೇರೆ ಯಾವ ಸೌಲಭ್ಯವೂ ಆ ಫೋನಿನಲ್ಲಿರಲಿಲ್ಲ. ಹತ್ತು ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಅದನ್ನು ಅರ್ಧಗಂಟೆ ಕಾಲ ಬಳಸುವುದು ಸಾಧ್ಯವಾಗುತ್ತಿತ್ತು!
ಅಂದಿನಿಂದ ಇಂದಿನವರೆಗೆ ಮೊಬೈಲಿನಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ನಮಗೆ ಗೊತ್ತೇ ಇದೆ. ಫೋನುಗಳ ಗಾತ್ರ ಕಡಿಮೆಯಾಗಿದೆ, ಅವು ಲಕ್ಷಾಂತರ ಜನರನ್ನು ತಲುಪಿವೆ, ಮೊಬೈಲ್ ಬಳಸಿ ನೂರೆಂಟು ಕೆಲಸಗಳನ್ನು ಮಾಡುವುದು ಸಾಧ್ಯವಾಗಿದೆ, ಸ್ಮಾರ್ಟ್‌ಫೋನ್ ಬೆಳವಣಿಗೆಯಿಂದಾಗಿ ಮೊಬೈಲಿಗೂ ಕಂಪ್ಯೂಟರಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ!
ಮಾರ್ಟಿನ್ ಕೂಪರ್ |
ಅರ್ಧಶತಮಾನಕ್ಕೂ ಕಡಿಮೆ ಅವಧಿಯಲ್ಲಿ ಇಷ್ಟೆಲ್ಲ ಅಭಿವೃದ್ಧಿಯಾಗಿರುವ ಮೊಬೈಲ್ ಫೋನ್ ತಂತ್ರಜ್ಞಾನ ಮುಂದಿನ ವರ್ಷಗಳಲ್ಲಿ ಇನ್ನೆಷ್ಟು ಬದಲಾವಣೆಗಳನ್ನು ಕಾಣಬಹುದು ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸುವ ಪ್ರಶ್ನೆ. ಈ ಪ್ರಶ್ನೆಗೆ ತಂತ್ರಜ್ಞರು ನೀಡುವ ಉತ್ತರಗಳೂ ಅಷ್ಟೇ ಕುತೂಹಲಕಾರಿ ಎನ್ನುವುದು ವಿಶೇಷ.
ಮುಂದಿನ ದಿನಗಳಲ್ಲಿ ಗಮನಾರ್ಹ ಬದಲಾವಣೆ ನಿರೀಕ್ಷಿಸಲಾಗಿರುವ ಸಂಗತಿಗಳಲ್ಲಿ ಪ್ರಮುಖವಾದದ್ದು ಮೊಬೈಲಿನ ಸ್ವರೂಪ. ಗಾತ್ರ ಹಾಗೂ ಕಾರ್ಯಕ್ಷಮತೆಯಲ್ಲಿ ವ್ಯಾಪಕ ಬೆಳವಣಿಗೆಯಾಗಿದ್ದರೂ ಮೊಬೈಲು ಇನ್ನೂ ಒಂದು ಪ್ರತ್ಯೇಕ ಸಾಧನವಾಗಿಯೇ ಉಳಿದಿದೆಯಲ್ಲ, ಈ ಪರಿಸ್ಥಿತಿ ಬದಲಿಸಿ ಕನ್ನಡಕ-ವಾಚು ಮುಂತಾದ ದಿನಬಳಕೆಯ ಸಾಧನಗಳಲ್ಲೇ ಮೊಬೈಲಿನ ಸವಲತ್ತುಗಳನ್ನು ನೀಡುವ ವಿವಿಧ ಪ್ರಯತ್ನಗಳು ಈಗಾಗಲೇ ನಡೆದಿವೆ. ಛಾಯಾವಾಸ್ತವ (ವರ್ಚುಯಲ್ ರಿಯಾಲಿಟಿ, ವಿಆರ್) ಹಾಗೂ ಅತಿರಿಕ್ತ ವಾಸ್ತವದಂತಹ (ಆಗ್ಮೆಂಟೆಡ್ ರಿಯಾಲಿಟಿ, ಎಆರ್) ತಂತ್ರಗಳನ್ನು ಬಳಸಿ ಮೊಬೈಲ್ ಪರದೆಯ ಮೇಲೆ ಕಾಣುವ ಮಾಹಿತಿ - ಯಾವ ಪರದೆಯೂ ಇಲ್ಲದೆ - ನಮ್ಮ ಕಣ್ಣೆದುರೇ ಕಾಣಿಸುವಂತೆ ಮಾಡಬಹುದೆಂದು ತಂತ್ರಜ್ಞರು ತೋರಿಸಿದ್ದಾರೆ.
ಅಷ್ಟೇ ಏಕೆ, ಮುಂದೊಂದು ದಿನ ಮೊಬೈಲು ನಮ್ಮ ದೇಹದೊಳಗೇ ಸೇರಿಕೊಳ್ಳುವ ಸ್ಥಿತಿ ಕೂಡ ಬರಬಹುದು ಎನ್ನಲಾಗಿದೆ. 'ಸೆಲ್ ಫೋನ್ ಇಂಪ್ಲಾಂಟ್' ಎನ್ನುವ ಈ ತಂತ್ರಜ್ಞಾನದ ಮೂಲಕ ಮೊಬೈಲಿನ ಭಾಗಗಳನ್ನು ನಮ್ಮ ದೇಹದೊಳಕ್ಕೇ ಸೇರಿಸಿಕೊಂಡುಬಿಡಬಹುದು. ಈ ತಂತ್ರಜ್ಞಾನದ ಸಾಧ್ಯಾಸಾಧ್ಯತೆಗಳನ್ನು ತೋರಿಸುವ ನಿಟ್ಟಿನಲ್ಲೂ ಹಲವು ಪ್ರಯೋಗಗಳು ನಡೆದಿವೆ.
ಮೊಬೈಲಿನೊಡನೆ ನಾವು ಸಂವಹನ ನಡೆಸುವ ರೀತಿ ಕೂಡ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಮೊದಮೊದಲು ಬಂದ ಮೊಬೈಲುಗಳಲ್ಲಿ ಅಂಕಿಗಳಿದ್ದ ಕೀಲಿಮಣೆ ಮಾತ್ರವೇ ಇತ್ತು. ಕರೆಮಾಡಲು ಅಥವಾ ಸಂದೇಶಗಳನ್ನು ಟೈಪಿಸಲು ನಾವು ಆ ಕೀಲಿಗಳನ್ನೇ ಬಳಸಬೇಕಿತ್ತು. ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಬಂದಮೇಲೆ ಸುಮ್ಮನೆ ಪರದೆಯನ್ನು ಮುಟ್ಟುವ ಮೂಲಕವೇ ಮೊಬೈಲಿಗೆ ಬೇರೆಬೇರೆ ಆದೇಶಗಳನ್ನು ನೀಡುವುದು ಸಾಧ್ಯವಾಯಿತು. ಈಗ, ಧ್ವನಿ ಗುರುತಿಸುವ (ಸ್ಪೀಚ್ ರೆಕಗ್ನಿಶನ್) ತಂತ್ರಜ್ಞಾನದ ನೆರವಿನಿಂದ ನಾವು ಮೊಬೈಲಿಗೆ ಧ್ವನಿರೂಪದ ಆದೇಶಗಳನ್ನೂ ಕೊಡಬಹುದು.
ನಾವು ಮನಸಿನಲ್ಲಿ ಯೋಚಿಸಿಕೊಂಡಿದ್ದನ್ನು ಅರಿತುಕೊಳ್ಳುವ ಶಕ್ತಿ ಮೊಬೈಲ್ ಫೋನುಗಳಿಗೆ ಶೀಘ್ರದಲ್ಲೇ ದೊರಕಲಿದೆ ಎನ್ನುವುದು ತಂತ್ರಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಪ್ರಯೋಗಗಳೂ ನಡೆದಿವೆ.
ಪುಸ್ತಕಗಳನ್ನು ನಾವು ಸದ್ದಿಲ್ಲದೆ ಮನಸಿನಲ್ಲೇ ಓದಿಕೊಳ್ಳುತ್ತೇವಲ್ಲ, ಈ ಪ್ರಕ್ರಿಯೆಯಲ್ಲಿ ಮುಖದ ನರಗಳು ಹಾಗೂ ಸ್ನಾಯುಗಳಲ್ಲಿ ಕೆಲ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ಗುರುತಿಸಿ ನಾವು ಏನು ಹೇಳುತ್ತಿದ್ದೇವೆ ಎಂದು ಗುರುತಿಸುವ 'ಆಲ್ಟರ್ ಇಗೋ' ಎಂಬ ತಂತ್ರಜ್ಞಾನವನ್ನು ಅಮೆರಿಕಾದ ಎಂಐಟಿಯಲ್ಲಿ ಭಾರತೀಯ ಮೂಲದ ವಿಜ್ಞಾನಿ ಅರ್ಣವ್ ಕಪೂರ್ ನೇತೃತ್ವದ ತಂಡ ರೂಪಿಸಿದೆ. ಇದು, ಮತ್ತು ಇಂಥದ್ದೇ ಇನ್ನಿತರ ತಂತ್ರಜ್ಞಾನಗಳನ್ನು ಬಳಸಿ ಮೊಬೈಲು-ಕಂಪ್ಯೂಟರುಗಳ ಜೊತೆ ನಿಶ್ಶಬ್ದ ಸಂವಹನ ನಡೆಸುವುದು ಸಾಧ್ಯವಾಗಲಿದೆ ಎನ್ನಲಾಗಿದೆ.
ಇಷ್ಟೇ ಅಲ್ಲ, 'ಬ್ರೈನ್-ಮಶೀನ್ ಇಂಟರ್‌ಫೇಸ್' ಎನ್ನುವ ಸಂವಹನ ವಿಧಾನ ಬಳಸಿ ನಮ್ಮ ಮೆದುಳು ಹಾಗೂ ಮೊಬೈಲ್ - ಕಂಪ್ಯೂಟರ್ ಮುಂತಾದ ಸಾಧನಗಳೊಡನೆ ನೇರ ಸಂಪರ್ಕ ಕಲ್ಪಿಸುವ ಪ್ರಯತ್ನ ಕೂಡ ನಡೆದಿದೆ. ಈ ಪರಿಕಲ್ಪನೆ ಕಾರ್ಯರೂಪಕ್ಕೆ ಬಂದಾಗ ನಾವು ಯೋಚಿಸಿಕೊಂಡ ಸಂಗತಿಯನ್ನೆಲ್ಲ ಮೊಬೈಲು ತನ್ನಷ್ಟಕ್ಕೆ ತಾನೇ ಟೈಪ್ ಮಾಡಿಡಲಿದೆ! ಅಂಥದ್ದೊಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಫೇಸ್‌ಬುಕ್ ಸಂಸ್ಥೆ ಈಗಾಗಲೇ ಕಾರ್ಯನಿರತವಾಗಿದೆಯಂತೆ.
ಏಪ್ರಿಲ್ ೩, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ