ಬುಧವಾರ, ಏಪ್ರಿಲ್ 17, 2019

ಚುನಾವಣೆ ವಿಶೇಷ: ಮತದಾನದ ಲೋಕದಲ್ಲಿ ಹೈಟೆಕ್ ಸಾಧ್ಯತೆಗಳು

ಟಿ. ಜಿ. ಶ್ರೀನಿಧಿ


ಒಂದು ಕಾಲದಲ್ಲಿ ನಮ್ಮ ಚುನಾವಣೆಗಳೆಲ್ಲ ಕಾಗದವನ್ನು ಬಳಸಿಕೊಂಡೇ ನಡೆಯುತ್ತಿದ್ದವು. ಮತ ಚಲಾಯಿಸಲು ಹೋದವರು ಕಾಗದದ ಮತಪತ್ರದ ಮೇಲೆ ತಮ್ಮ ಓಟು ಯಾರಿಗೆಂದು ಸೂಚಿಸುತ್ತಿದ್ದರು, ಫಲಿತಾಂಶದ ದಿನ ಅಧಿಕಾರಿಗಳು ಕುಳಿತುಕೊಂಡು ಆ ಮತಪತ್ರಗಳನ್ನೆಲ್ಲ ಒಂದೊಂದಾಗಿ ಎಣಿಸುತ್ತಿದ್ದರು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳು ಬೇರೆಲ್ಲ ಕ್ಷೇತ್ರಗಳಂತೆ ಚುನಾವಣೆಗಳಲ್ಲೂ ಗಮನಾರ್ಹ ಬದಲಾವಣೆ ತಂದಿವೆ. ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಹುಡುಕುವುದಿರಲಿ, ಯಂತ್ರದ ಗುಂಡಿ ಒತ್ತಿ ಮತ ದಾಖಲಿಸುವುದಿರಲಿ, ಬಹಳ ವೇಗವಾಗಿ ಫಲಿತಾಂಶಗಳನ್ನು ಪ್ರಕಟಿಸುವುದೇ ಇರಲಿ - ಹಲವಾರು ರೂಪಗಳಲ್ಲಿ ಐಟಿ ತನ್ನ ಪ್ರಭಾವವನ್ನು ತೋರಿಸುತ್ತಿದೆ.

ಇಷ್ಟೆಲ್ಲ ಆದರೂ ನಮ್ಮ ಒಂದು ಪ್ರಶ್ನೆಗೆ ಮಾತ್ರ ಉತ್ತರ ಇನ್ನೂ ಸಿಕ್ಕಿಲ್ಲ: ಕಂಪ್ಯೂಟರನ್ನೂ ಮೊಬೈಲನ್ನೂ ಬಳಸಿ ಎಷ್ಟೆಲ್ಲ ಕೆಲಸ ಮಾಡಿಕೊಳ್ಳುವ ನಾವು ಓಟು ಹಾಕಲು ಮಾತ್ರ ನಮ್ಮೂರಿನ ಮತಗಟ್ಟೆಗೇ ಏಕೆ ಹೋಗಬೇಕು?

ಈ ಪ್ರಶ್ನೆ ನಮ್ಮಂತೆಯೇ ಇನ್ನೂ ಅನೇಕ ದೇಶಗಳ ಮತದಾರರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಕಂಡುಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ. ಓಟು ಹಾಕಲು ಮತಗಟ್ಟೆಗೇ ಹೋಗಬೇಕೆನ್ನುವ ಅನಿವಾರ್ಯತೆ ತೊಡೆದುಹಾಕಿ ಅಂತರಜಾಲದ ಮೂಲಕವೇ ಮತ ಚಲಾಯಿಸುವ ವ್ಯವಸ್ಥೆ ರೂಪಿಸಬಹುದೇ ಎಂದು ತಿಳಿಯುವುದು ಇಂತಹ ಬಹಳಷ್ಟು ಪ್ರಯತ್ನಗಳ ಉದ್ದೇಶ. ಮತದಾನದ ಪ್ರಕ್ರಿಯೆ ಸರಳವಾದರೆ ಮತಚಲಾವಣೆಯ ಪ್ರಮಾಣ ಹೆಚ್ಚಾಗಬಹುದು ಎಂಬ ಆಶಯವೂ ಇದರ ಹಿನ್ನೆಲೆಯಲ್ಲಿದೆ.

ಆಡಳಿತದಲ್ಲಿ ಐಟಿ ಬಳಸುವುದರಲ್ಲಿ ವಿಶ್ವಕ್ಕೇ ಮಾದರಿಯಾಗಿರುವುದು ಎಸ್ಟೋನಿಯಾ. ಮತದಾನದ ಪ್ರಕ್ರಿಯೆಯಲ್ಲಿ ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಲ್ಲೂ ಈ ದೇಶ ಮಹತ್ವದ ಸಾಧನೆ ಮಾಡಿದೆ. ಈ ದೇಶದ ಚುನಾವಣೆಗಳಲ್ಲಿ ನಾಗರಿಕರು ತಮ್ಮ ರಾಷ್ಟ್ರೀಯ ಗುರುತಿನ ಪತ್ರ (ಎಸ್ಟೋನಿಯನ್ ಐಡಿ ಕಾರ್ಡ್) ಬಳಸಿ ಅಂತರಜಾಲದ ಮೂಲಕವೇ ಮತ ಚಲಾವಣೆ ಮಾಡಬಹುದು.

ಎಸ್ಟೋನಿಯಾದ ಒಟ್ಟು ಜನಸಂಖ್ಯೆ ನಮ್ಮ ಬೆಂಗಳೂರಿನ ಜನಸಂಖ್ಯೆಯ ಸುಮಾರು ಹತ್ತನೇ ಒಂದರಷ್ಟು ಮಾತ್ರ. ಆನ್‌ಲೈನ್ ಲೋಕದಲ್ಲೂ ಸುರಕ್ಷಿತವಾಗಿ ಬಳಸಬಹುದಾದ ಗುರುತಿನ ಚೀಟಿಗಳನ್ನು ಅಲ್ಲಿನ ಸರಕಾರ ತನ್ನ ನಾಗರಿಕರಿಗೆ ನೀಡುತ್ತದೆ. ಅಲ್ಲದೆ ಪ್ರತಿಯೊಂದಕ್ಕೂ ಮಾಹಿತಿ ತಂತ್ರಜ್ಞಾನ ಬಳಸುವುದು ಅಲ್ಲಿನ ಜನಕ್ಕೆ ಚೆನ್ನಾಗಿ ಅಭ್ಯಾಸವೂ ಆಗಿದೆ. ಹೀಗಾಗಿ ಎಸ್ಟೋನಿಯಾದಂತಹ ಐಟಿ ರಾಷ್ಟ್ರಗಳಲ್ಲಿ ಆನ್‌ಲೈನ್ ಮತದಾನ ಅನುಷ್ಠಾನಗೊಳಿಸಿದಷ್ಟು ಸುಲಭವಾಗಿ ಬೇರೆಕಡೆ ಅದನ್ನು ಮಾಡುವುದು ಕಷ್ಟ.

ಹಾಗೆಂದು ಮತಗಟ್ಟೆಯೇ ಇರಲಿ ಬಿಡಿ ಎಂದರೆ ಆದೀತೇ? ಹೀಗಾಗಿಯೇ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಮತದಾನವನ್ನು ಹೈಟೆಕ್ ದರ್ಜೆಗೆ ಏರಿಸುವ ಪ್ರಯತ್ನಗಳು ಇನ್ನೂ ನಡೆಯುತ್ತಲೇ ಇವೆ. ಆಸ್ಟ್ರೇಲಿಯಾ ಹಾಗೂ ಅಮೆರಿಕಾದಂತಹ ಕೆಲ ರಾಷ್ಟ್ರಗಳು ಆನ್‌ಲೈನ್ ಮತದಾನವನ್ನು ಸೀಮಿತ ಪ್ರಮಾಣದಲ್ಲಿ (ಉದಾ: ಸ್ಥಳೀಯ ಸಂಸ್ಥೆ ಹಾಗೂ ಪ್ರಾಂತೀಯ ಚುನಾವಣೆಗಳಲ್ಲಿ) ಈಗಾಗಲೇ ಪರಿಚಯಿಸಿವೆ. ನಮ್ಮ ಗುಜರಾತ್ ರಾಜ್ಯದಲ್ಲೂ ೨೦೧೧ರಷ್ಟು ಹಿಂದೆಯೇ ಇಂತಹ ಪ್ರಯತ್ನವೊಂದು ನಡೆದಿತ್ತು.

ಸೇನೆಯಲ್ಲಿ ಸೇವೆಸಲ್ಲಿಸುವವರು, ಚುನಾವಣಾ ಕರ್ತವ್ಯದಲ್ಲಿರುವವರು ಸೇರಿದಂತೆ ಸೀಮಿತ ಸಂಖ್ಯೆಯ ಮತದಾರರು ನಮ್ಮ ದೇಶದಲ್ಲಿ ಅಂಚೆ ಮೂಲಕ ಮತ ಚಲಾಯಿಸುತ್ತಾರಲ್ಲ, ಅಂತಹ ಗುಂಪುಗಳಿಗೆ ಅಂಚೆ ಮತದಾನದ ಬದಲು ಆನ್‌ಲೈನ್ ಮತದಾನದ ಸೌಲಭ್ಯ ನೀಡುವ ಪ್ರಯತ್ನಗಳು ಕೂಡ ಕೆಲ ದೇಶಗಳಲ್ಲಿ ನಡೆದಿವೆ. ಅಷ್ಟೇ ಅಲ್ಲ, ಇಂತಹ ವ್ಯವಸ್ಥೆಗಳನ್ನು ಬಳಸಿ ಬಾಹ್ಯಾಕಾಶದಲ್ಲಿರುವ ಗಗನಯಾನಿಗಳಿಗೂ ಮತದಾನದ ಅವಕಾಶ ಕಲ್ಪಿಸಿಕೊಡಲಾಗಿದೆ!

ಇಂತಹ ಯಾವುದೇ ಪ್ರಯತ್ನ ಇನ್ನೂ ದೊಡ್ಡ ಪ್ರಮಾಣಕ್ಕೆ ವಿಸ್ತರಿಸದಿರುವುದಕ್ಕೆ ಕಾರಣ ಮಾತ್ರ ಒಂದೇ - ಸುರಕ್ಷತೆಯ ಕಾಳಜಿ. ಯಾರು ಯಾರಿಗೆ ಮತ ನೀಡುತ್ತಿದ್ದಾರೆ ಎನ್ನುವ ಸೂಕ್ಷ್ಮ ಮಾಹಿತಿಯನ್ನು ಭಾರೀ ಪ್ರಮಾಣದಲ್ಲಿ ಅಂತರಜಾಲದ ಮೂಲಕ ರವಾನಿಸುವುದು ಯಾವತ್ತಿದ್ದರೂ ತೊಂದರೆಗೆ ಆಹ್ವಾನನೀಡುವ ಕೆಲಸ ಎಂದು ತಜ್ಞರು ಹೇಳುತ್ತಾರೆ. ಈ ಮಾಹಿತಿಯೆಲ್ಲ ದುಷ್ಕರ್ಮಿಗಳ ಕೈಗೆ ಸಿಕ್ಕರೆ ಅವರು ಮತಗಳನ್ನೆಲ್ಲ ತಮಗೆ ಬೇಕಾದಂತೆ ಬದಲಿಸಿಕೊಳ್ಳಬಹುದು ಎನ್ನುವುದು ಅವರ ಅಭಿಪ್ರಾಯ. ಹೀಗಾಗಿಯೇ ಆನ್‌ಲೈನ್ ಮತದಾನ ವ್ಯವಸ್ಥೆಗಳನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಯಾರೂ ಮುಂದಾಗುತ್ತಿಲ್ಲ.

ಈ ಭೀತಿಯನ್ನು ಹೋಗಲಾಡಿಸಿ ಆನ್‌ಲೈನ್ ಮತದಾನವನ್ನು ಇನ್ನಷ್ಟು ಸುರಕ್ಷಿತವಾಗಿಸುವ ನಿಟ್ಟಿನಲ್ಲೂ ಸಾಕಷ್ಟು ಕೆಲಸ ನಡೆದಿದೆ. ಚಲಾವಣೆಯಾದ ಮತಗಳ ಮಾಹಿತಿಯನ್ನು ಯಾರೂ ಬದಲಿಸದಂತೆ ತಡೆಯಲು ಬ್ಲಾಕ್‌ಚೈನ್ ತಂತ್ರಜ್ಞಾನ ಬಳಸುವ ಪ್ರಯತ್ನ ಇದಕ್ಕೊಂದು ಉದಾಹರಣೆ. ಕಳೆದ ವರ್ಷ (೨೦೧೮) ಅಮೆರಿಕಾದ ವೆಸ್ಟ್ ವರ್ಜೀನಿಯಾದಲ್ಲಿ ನಡೆದ ಆನ್‌ಲೈನ್ ಚುನಾವಣಾ ಪ್ರಯೋಗದಲ್ಲಿ ಈ ತಂತ್ರಜ್ಞಾನವನ್ನು ಬಳಸಲಾಗಿತ್ತು.

ಇಂತಹ ಪ್ರಯತ್ನಗಳ ನಡುವೆ, ಆನ್‌ಲೈನ್ ಮತದಾನವನ್ನು ದೊಡ್ಡ ಪ್ರಮಾಣಕ್ಕೆ ವಿಸ್ತರಿಸುವ ಉತ್ಸಾಹ ಮಾತ್ರ ಈವರೆಗೆ ಎಲ್ಲೂ ಕಂಡುಬಂದಿಲ್ಲ. ಆದರೆ ಇಂಥದ್ದೊಂದು ಅವಕಾಶ ಬೇಕು ಎನ್ನುವ ಬೇಡಿಕೆ ಮಾತ್ರ, ಈ ವರ್ಷ ಕಾಣಿಸಿಕೊಂಡ ವಾಟ್ಸ್‌ಆಪ್ ಫಾರ್‌ವರ್ಡುಗಳಂತೆ, ಇನ್ನೂ ಹರಿದಾಡುತ್ತಲೇ ಇದೆ!


* * *

ಐಡಿ ಬದಲು ಬಯೋಮೆಟ್ರಿಕ್ಸ್
ಮತ ಚಲಾಯಿಸಲು ಹೋದಾಗ ನಮ್ಮ ಗುರುತಿನ ಚೀಟಿ ತೋರಿಸಬೇಕಾದ್ದು ಕಡ್ಡಾಯ ತಾನೇ? ಇಂತಹ ಗುರುತಿನ ಚೀಟಿಗಳ ಬದಲು ಬಯೋಮೆಟ್ರಿಕ್ಸ್ ಬಳಸುವ ಪ್ರಯತ್ನಗಳು ಹಲವೆಡೆ ನಡೆದಿವೆ. ಮತದಾರರ ಗುರುತನ್ನು ದೃಢೀಕರಿಸಲು ಬೆರಳೊತ್ತು (ಫಿಂಗರ್‌ಪ್ರಿಂಟ್) ಅಥವಾ ಕಣ್ಣಿನ ಪಾಪೆಯನ್ನು (ಐರಿಸ್) ಸ್ಕ್ಯಾನ್ ಮಾಡುವುದು ಇಂತಹ ಪ್ರಯತ್ನಗಳ ಹೂರಣ. ೨೦೧೭ರಲ್ಲಿ ಆಫ್ರಿಕಾದ ಸೋಮಾಲಿಲ್ಯಾಂಡ್‌ ಚುನಾವಣೆಯಲ್ಲಿ ಮತದಾರರ ಗುರುತು ಪತ್ತೆಗೆ ಐರಿಸ್ ಸ್ಕ್ಯಾನ್ ಮಾಡಿದ್ದು ವಿಶ್ವದಾದ್ಯಂತ ಸುದ್ದಿಯಾಗಿತ್ತು.

* * *

ಇ ವೋಟಿಂಗ್ ಈ ವರ್ಷವಂತೂ ಇಲ್ಲ!
ದೇಶದ ಹೊರಗಿರುವ ಭಾರತೀಯ ಮತದಾರರು ಚುನಾವಣಾ ಆಯೋಗದ ಜಾಲತಾಣದಲ್ಲಿ ನೋಂದಾಯಿಸಿಕೊಂಡು ಆನ್‌ಲೈನ್ ಮತದಾನ ಮಾಡಬಹುದು ಎನ್ನುವ ಸುದ್ದಿ ವಾಟ್ಸ್‌ಆಪ್ ಫಾರ್‌ವರ್ಡುಗಳ ರೂಪದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು. ಚುನಾವಣಾ ಆಯೋಗ ಅಂತಹ ಯಾವುದೇ ವ್ಯವಸ್ಥೆ ಮಾಡಿಲ್ಲದಿರುವುದರಿಂದ ಮತದಾನ ಮಾಡಬೇಕೆನ್ನುವವರು ಮತಗಟ್ಟೆಗೇ ತೆರಳಬೇಕಾದ್ದು ಅನಿವಾರ್ಯ.

ಕಾಮೆಂಟ್‌ಗಳಿಲ್ಲ:

badge