ಬುಧವಾರ, ಏಪ್ರಿಲ್ 24, 2019

ಫೋಲ್ಡಬಲ್ ಫೋನ್ ಎಂಬ ಹೊಸ ಫ್ಯಾಶನ್!

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನುಗಳು ನಮಗೆಲ್ಲ ಪರಿಚಯವಾದ ಸಂದರ್ಭದಲ್ಲಿ ಬೇರೆಬೇರೆ ವಿನ್ಯಾಸದ ಫೋನುಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತಿದ್ದವು. ಆಯತಾಕಾರದ 'ಕ್ಯಾಂಡಿಬಾರ್', ಪುಸ್ತಕದ ಹಾಳೆ ಮಗುಚುವಂತೆ ತೆರೆಯಬೇಕಿದ್ದ 'ಫ್ಲಿಪ್', ಒಂದು ಕಡೆಗೆ ಜಾರಿಸಿ ಬಳಸಬಹುದಾಗಿದ್ದ 'ಸ್ಲೈಡರ್', ತಿರುಗುವ ಭಾಗಗಳಿದ್ದ 'ಸ್ವಿವೆಲ್' - ಹೀಗೆ ಮೊಬೈಲ್ ವಿನ್ಯಾಸಗಳಲ್ಲಿ ಸಾಕಷ್ಟು ವೈವಿಧ್ಯವಿದ್ದ ಸಮಯ ಅದು.

ಮುಂದೆ ಸ್ಮಾರ್ಟ್‌ಫೋನುಗಳ ಪರಿಚಯವಾಗಿ ಸ್ಪರ್ಶಸಂವೇದಿ ಪರದೆಗಳ (ಟಚ್‌ಸ್ಕ್ರೀನ್) ಬಳಕೆ ಹೆಚ್ಚಿದಂತೆ ಎಲ್ಲ ಫೋನುಗಳ ವಿನ್ಯಾಸವೂ ಒಂದೇರೀತಿ ಕಾಣಿಸಲು ಶುರುವಾಯಿತು. ಈ ಮೊಬೈಲುಗಳೆಲ್ಲ ಸಾಮಾನ್ಯ ಫೋನಿಗೂ ಟ್ಯಾಬ್ಲೆಟ್ ಕಂಪ್ಯೂಟರಿಗೂ ನಡುವಿನ ಗಾತ್ರಕ್ಕೆ ಬೆಳೆದು 'ಫ್ಯಾಬ್ಲೆಟ್' ಎಂಬ ಹೊಸ ಹೆಸರನ್ನೂ ಪಡೆದುಕೊಂಡವು.

ಇದೀಗ, ಇನ್ನೇನು ಮೊಬೈಲ್ ಫೋನುಗಳೆಲ್ಲ ಹೀಗೆಯೇ ಇರಲಿವೆ ಎನ್ನುವ ಭಾವನೆ ನೆಲೆಗೊಳ್ಳುವ ಹೊತ್ತಿಗೆ, ಫೋನ್ ವಿನ್ಯಾಸದಲ್ಲೊಂದು ಹೊಸ ಫ್ಯಾಶನ್ ಸುದ್ದಿಮಾಡುತ್ತಿದೆ. ಆ ಫ್ಯಾಶನ್ನಿನ ಹೆಸರೇ ಫೋಲ್ಡಬಲ್ ಫೋನ್!

ಪೇಪರ್ ಓದಿದ ಮೇಲೆ ಅದನ್ನು ಮಡಿಸಿ ಎತ್ತಿಡುತ್ತೇವಲ್ಲ, ಹಾಗೆಯೇ ಈ ವಿನ್ಯಾಸದ ಫೋನುಗಳನ್ನು ಮಡಿಸುವುದು ಸಾಧ್ಯ. ಟ್ಯಾಬ್ಲೆಟ್‌ನಷ್ಟು ದೊಡ್ಡ ಪರದೆಯನ್ನು ಮಡಿಸಿ ಸಾಮಾನ್ಯ ಮೊಬೈಲಿನ ಗಾತ್ರಕ್ಕೆ ತರುವುದು, ಸಾಮಾನ್ಯ ಮೊಬೈಲನ್ನು ಮಡಿಸಿ ಇನ್ನೂ ಚಿಕ್ಕದಾಗಿಸಿಕೊಳ್ಳುವುದೆಲ್ಲ ಈ ವಿನ್ಯಾಸದಿಂದಾಗಿ ಸಾಧ್ಯವಾಗುತ್ತದೆ. ಮೊಬೈಲ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿರುವ ಈ ವಿನ್ಯಾಸವನ್ನು ತಮ್ಮ ಉತ್ಪನ್ನಗಳಲ್ಲಿ ಬಳಸಿಕೊಳ್ಳಲು ಪ್ರಮುಖ ತಯಾರಕರೆಲ್ಲ ಆಸಕ್ತಿ ತೋರಿಸಿದ್ದು, ಈ ವಿನ್ಯಾಸ ಬಳಸುವ ಮೊಬೈಲ್ ಮಾದರಿಗಳನ್ನು ಒಂದರ ಹಿಂದೆ ಒಂದರಂತೆ ಪರಿಚಯಿಸಲಾಗುತ್ತಿದೆ.

ಹಿಂದಿನ ಕಾಲದಲ್ಲಿದ್ದ ಫ್ಲಿಪ್ ಫೋನುಗಳನ್ನೂ ಮಡಿಸುವುದು ಸಾಧ್ಯವಿತ್ತು, ನಿಜ. ಆದರೆ ಅಂತಹ ಫೋನುಗಳ ಪರದೆ ಆ ಮಡಿಕೆಯ ಒಂದು ಬದಿಯಲ್ಲಿ ಮಾತ್ರವೇ ಇರುತ್ತಿತ್ತು. ಹೀಗಾಗಿ ಫೋನನ್ನು ಮಡಿಸಿದರೂ ಪರದೆಯ ಗಾತ್ರ ಬದಲಾಗುತ್ತಿರಲಿಲ್ಲ. ಫೋಲ್ಡಬಲ್ ಫೋನ್ ಪರಿಕಲ್ಪನೆಯೊಡನೆ ಇದೀಗ ಈ ಪರಿಸ್ಥಿತಿ ಬದಲಾಗುತ್ತಿದೆ.

ಸಾಮಾನ್ಯ ಮೊಬೈಲಿನಷ್ಟೇ ಇರುವ ಸಾಧನದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗಾತ್ರದ ಪರದೆಯನ್ನು ನೀಡುವುದು, ಆ ಮೂಲಕ ವೀಕ್ಷಣೆಯ ಅನುಭವವನ್ನು ಉತ್ತಮಪಡಿಸುವುದು ಈ ಹೊಸ ವಿನ್ಯಾಸದ ಉದ್ದೇಶ ಎನ್ನಬಹುದು. ಸದ್ಯ ಪರಿಚಯಿಸಲಾಗಿರುವ ಬಹುತೇಕ ಮಾದರಿಗಳ ಉದ್ದೇಶವೂ ಇದೇ: ಎರಡು ಮೊಬೈಲುಗಳಷ್ಟು ಅಗಲವಾದ ಪರದೆಯನ್ನು ಅರ್ಧಕ್ಕೆ ಮಡಿಸಿದರೆ ಅದು ಸಾಮಾನ್ಯ ಮೊಬೈಲಿನಂತೆಯೇ ಕಾಣುತ್ತದಲ್ಲ!

ಫೋಲ್ಡಬಲ್ ಫೋನನ್ನು ಮಡಿಸುವುದಕ್ಕೂ ಮನೆಯ ಬಾಗಿಲು-ಕಿಟಕಿಗಳನ್ನು ತೆರೆಯುವುದಕ್ಕೂ ತಾಂತ್ರಿಕವಾಗಿ ಹೆಚ್ಚಿನ ವ್ಯತ್ಯಾಸವೇನಿಲ್ಲ. ಅಲ್ಲಿರುವಂತೆಯೇ ಇಲ್ಲೂ ಕೀಲುಗಳಿರುತ್ತವೆ; ಆದರೆ ಫೋನಿನ ಪರದೆ ಆ ಕೀಲುಗಳ ಮೇಲೆ ಹಾದುಹೋಗುವುದರಿಂದ ಫೋನಿನ ಕೀಲುಗಳು ಹೊರಕ್ಕೆ ಕಾಣುವುದಿಲ್ಲ, ಅಷ್ಟೆ. ಹೀಗಾಗಿ ಮಡಿಸಿದ ಫೋನನ್ನು ತೆರೆದಾಗ ಸಿಗುವ ದೊಡ್ಡ ಪರದೆ ಎರಡು ಭಾಗಗಳ ಜೋಡಣೆಯಿಂದ ಆದದ್ದು ಎಂದು ಸುಲಭಕ್ಕೆ ಗೊತ್ತಾಗುವುದೇ ಇಲ್ಲ.

ವೀಕ್ಷಿಸುವ ಅನುಭವದ ದೃಷ್ಟಿಯಿಂದ ಇಷ್ಟು ದೊಡ್ಡ ಪರದೆ ಉತ್ತಮ ಎನ್ನುವುದೇನೋ ಸರಿ. ಆದರೆ ಪರದೆಯನ್ನು ಮಡಿಸಿದಾಗ ಫೋನನ್ನು ನಿಭಾಯಿಸುವುದು ಕಷ್ಟವಾಗುತ್ತದೆ - ಒಳಭಾಗಕ್ಕೆ ಮಡಿಸಿದರೆ ಯಾವಾಗಲೂ ಅಷ್ಟು ದೊಡ್ಡ ಪರದೆ ಬಿಡಿಸಿಟ್ಟುಕೊಂಡು ಬಳಸುವುದು ಕಷ್ಟ, ಇನ್ನು ಪರದೆ ಹೊರಭಾಗದಲ್ಲೇ ಇದ್ದರೆ ಮಡಿಸಿದಾಗ ಅದರ ಮೇಲೆ ಗೀಚುಗಳಾಗುವ ಸಾಧ್ಯತೆ ಜಾಸ್ತಿ.

ಈ ತೊಂದರೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಫ್ಲಿಪ್ ಫೋನ್ ಹಾಗೂ ಫೋಲ್ಡಬಲ್ ಫೋನುಗಳೆರಡರ ವಿನ್ಯಾಸವನ್ನೂ ಸಂಯೋಜಿಸುವ ಪ್ರಯತ್ನ ನಡೆದಿದೆ. ಫೋನಿನ ಅಗಲವನ್ನು ಹಾಗೆಯೇ ಉಳಿಸಿಕೊಂಡು ಉದ್ದವನ್ನು ಮಾತ್ರ ಹೆಚ್ಚಿಸಿದರೆ ಅದನ್ನು ಮಧ್ಯಕ್ಕೆ ಮಡಿಸಿಡುವುದು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಹಿಂದೆ ಫ್ಲಿಪ್ ಫೋನನ್ನು ಬಳಸುತ್ತಿದ್ದಂತೆಯೇ ಇದನ್ನು ಬಳಸಬಹುದು.ಒಂದು ಬಾರಿ ಮಾತ್ರವೇ ಅಲ್ಲ, ಇಂಗ್ಲಿಷಿನ ಜ಼ೆಡ್ ಅಕ್ಷರದಂತೆ ಎರಡು ಬಾರಿ ಮಡಿಸಿಡುವಂತಹ ಫೋನಿನ ವಿನ್ಯಾಸ ಕೂಡ ಇದೀಗ ಸಿದ್ಧವಾಗಿದೆಯಂತೆ!

ಇನ್ನು, ಇದೀಗ (ಏಪ್ರಿಲ್ '೧೯) ಸ್ಯಾಮ್‌ಸಂಗ್ ಉದಾಹರಣೆಯಲ್ಲಿ ಆಗಿರುವಂತೆ, ಮಡಿಸುವ ಭಾಗಗಳಿಂದ ಅನಿರೀಕ್ಷಿತ ತೊಂದರೆಗಳಾಗುವ, ಯಾಂತ್ರಿಕ ವೈಫಲ್ಯಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚು. ಆ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನಗಳೂ ಇದೀಗ ನಡೆದಿವೆ.

ಫೋನ್ ಪರದೆಯನ್ನು ಮಡಿಸುವ ನಿಟ್ಟಿನಲ್ಲಿ ಇಷ್ಟೆಲ್ಲ ಬೆಳವಣಿಗೆ ಆಗಿರುವುದೇನೋ ಸರಿ, ಆದರೆ ಈವರೆಗೆ ಪರಿಚಯಿಸಲಾಗಿರುವ ಮಾದರಿಗಳೆಲ್ಲದರ ಬೆಲೆ ಮಾತ್ರ ಸಾಕಷ್ಟು ದುಬಾರಿ ಎನ್ನುವ ಮಟ್ಟದಲ್ಲೇ ಇದೆ. ಫೋಲ್ಡಬಲ್ ಫೋನಿನ ವಿನ್ಯಾಸ ಇನ್ನಷ್ಟು ಸುಧಾರಿಸಿ, ಅವುಗಳ ಉತ್ಪಾದನೆ ಜಾಸ್ತಿಯಾದರೆ ಬೆಲೆಯೂ ಇಳಿಯುವುದು ಸಾಧ್ಯ. ಆ ವೇಳೆಗೆ ಅವುಗಳ ಜನಪ್ರಿಯತೆಯೂ ಹೆಚ್ಚಬಹುದೇನೋ, ಕಾದುನೋಡಬೇಕು!

ಮಾರ್ಚ್ ೨೭, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge