ಸೋಮವಾರ, ಏಪ್ರಿಲ್ 1, 2019

ಏಪ್ರಿಲ್ ಫೂಲ್ಸ್ ವಿಶೇಷ: ತಂತ್ರಜ್ಞಾನ ಮತ್ತು ತಮಾಷೆ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಕೊಡುಗೆಗಳು ನಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ, ನಿಜ. ಆದರೆ ಅವೆಲ್ಲದರ ವಿನ್ಯಾಸ ಹಾಗೂ ರಚನೆ ಬಹಳ ಸಂಕೀರ್ಣವಾಗಿರುತ್ತದೆ. ಮೊಬೈಲಿನಲ್ಲಿ ಆಡುವ ಆಟ ತಮಾಷೆಯದೇ ಆದರೂ ಅದರ ಹಿಂದಿರುವ ತಂತ್ರಾಂಶವನ್ನು ಸಿದ್ಧಪಡಿಸುವ ಕೆಲಸ ಮಾತ್ರ ಸಾಕಷ್ಟು ಗಂಭೀರವೇ!

ಹಾಗೆಂದು ತಂತ್ರಜ್ಞಾನ ಕ್ಷೇತ್ರದಲ್ಲಿರುವವರು ಯಾವಾಗಲೂ ಗಂಭೀರವಾಗಿಯೇ ಕೆಲಸಮಾಡುತ್ತಾರೆ, ಅಲ್ಲಿ ತಮಾಷೆಗೆ ಜಾಗವೇ ಇಲ್ಲ ಎಂದೆಲ್ಲ ಹೇಳಬಹುದೇ? ಖಂಡಿತಾ ಇಲ್ಲ. ಇತರೆಲ್ಲ ಕ್ಷೇತ್ರಗಳಂತೆ ಇಲ್ಲೂ ಸಾಕಷ್ಟು ಕುಚೇಷ್ಟೆಗಳು ನಡೆಯುತ್ತವೆ. ಅಷ್ಟೇ ಏಕೆ, ಅಂತಹ ಕುಚೇಷ್ಟೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವನ್ನೂ ಪಡೆಯಲಾಗುತ್ತದೆ.

ಏಪ್ರಿಲ್ ೧ರಂದು, ಮೂರ್ಖರ ದಿನ ಸಂದರ್ಭದಲ್ಲಿ, ಎಲ್ಲೆಡೆಯೂ ಕೀಟಲೆ ಕುಚೇಷ್ಟೆಗಳದೇ ಭರಾಟೆ. ಈ ಸಂಭ್ರಮದಲ್ಲಿ ತಂತ್ರಜ್ಞಾನ ಲೋಕವೂ ಬಲು ಉತ್ಸಾಹದಿಂದ ಭಾಗವಹಿಸುತ್ತದೆ. ಬಳಕೆದಾರರನ್ನು ಏಪ್ರಿಲ್ ಫೂಲ್ ಮಾಡಲು ಹೊಸಹೊಸ ಪ್ರಯತ್ನಗಳನ್ನು ಮಾಡುತ್ತದೆ.

ಮಾಹಿತಿ ತಂತ್ರಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಅಗ್ರಪಂಕ್ತಿಯ ಸಂಸ್ಥೆಗಳಲ್ಲೊಂದಾದ ಗೂಗಲ್, ಇಂತಹ ಕುಚೇಷ್ಟೆಗಳನ್ನು ಮಾಡುವಲ್ಲೂ ಮುಂಚೂಣಿಯಲ್ಲಿರುತ್ತದೆ. ಕಳೆದ ಕೆಲವರ್ಷಗಳಲ್ಲಿ ಆ ಸಂಸ್ಥೆ ನಡೆಸಿರುವ ಏಪ್ರಿಲ್ ಫೂಲ್ ಪ್ರಯತ್ನಗಳು ಎಷ್ಟು ವಿಭಿನ್ನವಾಗಿವೆಯೆಂದರೆ ಈಗ ಪ್ರತಿ ವರ್ಷವೂ ಮೂರ್ಖರ ದಿನದಂದು ಗೂಗಲ್ ಏನು ಮಾಡಬಹುದೆಂದು ಟೆಕ್ ಲೋಕವೆಲ್ಲ ಕಾತರದಿಂದ ಕಾಯುತ್ತಿರುತ್ತದೆ.

ನಮ್ಮ ಆಂಡ್ರಾಯ್ಡ್ ಫೋನಿಗೆ ಬೇಕಾದ ಆಪ್‌ಗಳನ್ನು ನಾವು ಪ್ಲೇ ಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಳ್ಳುತ್ತೇವಲ್ಲ, ಹಾಗೆ ನಮ್ಮ ಮನೆಯ ನಾಯಿ-ಬೆಕ್ಕುಗಳೂ ತಮಗಿಷ್ಟವಾದ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಸೌಲಭ್ಯ ಶುರುಮಾಡುತ್ತಿದ್ದೇವೆ ಎಂದು ಗೂಗಲ್ ಸಂಸ್ಥೆ ೨೦೧೮ರ ಏಪ್ರಿಲ್ ೧ರಂದು ಘೋಷಿಸಿತ್ತು. ಅಷ್ಟೇ ಅಲ್ಲ, ಸಾಕುಪ್ರಾಣಿಗಳು ಮೊಬೈಲಿನಲ್ಲೂ ಟ್ಯಾಬ್ಲೆಟ್ಟಿನಲ್ಲೂ ಆಟವಾಡುತ್ತಿರುವ ವೀಡಿಯೋ ಇರುವ ಜಾಹೀರಾತನ್ನೂ ಪ್ರಕಟಿಸಿತ್ತು.

ಗೂಗಲ್‌ನ ಈ ಅಭ್ಯಾಸ ಹೊಸದೇನಲ್ಲ. ನಮ್ಮ ಜಿಮೇಲ್ ಖಾತೆಗೆ ಬರುವ ಇಮೇಲ್ ಸಂದೇಶಗಳ ಪೈಕಿ ನಮಗೆ ಬೇಕಾದ್ದನ್ನು ಮುದ್ರಿಸಿ ಮನೆಗೆ ಕಳುಹಿಸುವ 'ಜಿಮೇಲ್ ಪೇಪರ್' ಎನ್ನುವ ಹೊಸ - ಕಾಲ್ಪನಿಕ - ಸೇವೆಯನ್ನು ಶುರುಮಾಡುವುದಾಗಿ ಅದು ೨೦೦೭ರಲ್ಲೇ ಘೋಷಿಸಿತ್ತು. ಅತಿವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ಒದಗಿಸಲು ನಗರದ ಒಳಚರಂಡಿ ವ್ಯವಸ್ಥೆಯನ್ನು ಬಳಸಿಕೊಳ್ಳುವ 'ಗೂಗಲ್ ಟಾಯ್ಲೆಟ್ ಐಎಸ್‌ಪಿ', ಜನರನ್ನು ಆ ವರ್ಷ ಫೂಲ್ ಮಾಡಿದ ಇನ್ನೊಂದು ಕುಚೇಷ್ಟೆ.

ಇಷ್ಟವಾದ ಪುಸ್ತಕಗಳನ್ನು ಆನ್‌ಲೈನ್ ಅಂಗಡಿಗಳ ಮೂಲಕ ಮನೆಗೆ ತರಿಸಿಕೊಳ್ಳುತ್ತೇವಲ್ಲ, ಹಾಗೆ ನಮ್ಮಿಷ್ಟದ ಲೇಖಕರನ್ನೂ ಮನೆಗೆ ಕರೆಸಿಕೊಳ್ಳುವಂತಿದ್ದರೆ ಹೇಗಿರುತ್ತಿತ್ತು? ೨೦೧೮ರ ಮೂರ್ಖರ ದಿನದಂದು ಅಮೆಜಾನ್ ಸಂಸ್ಥೆ ಇಂಥದ್ದೊಂದು ಸೇವೆ ಶುರುಮಾಡಿರುವುದಾಗಿ ವೀಡಿಯೋ ಜಾಹೀರಾತನ್ನು ಹರಿಬಿಟ್ಟಿತ್ತು.

ತಂತ್ರಜ್ಞಾನ ಲೋಕದಲ್ಲಿ ಕೇಳಿಬಂದ ಏಪ್ರಿಲ್ ಫೂಲ್ ಸುಳ್ಳುಗಳು ಮುಂದೆ ನಿಜವಾಗಿ ಪರಿಣಮಿಸಿದ ಉದಾಹರಣೆಗಳೂ ಇವೆ. ಬೇಕಾದಾಗ ಬೇಕಾದ ಹಾಡು ಕೇಳಲು ನೆರವಾಗುತ್ತಿದ್ದ ಆಪಲ್ ಐಪಾಡ್‌ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಮಯದಲ್ಲಿ, "ಐಪಾಡ್‌ ಜೊತೆ ಬಳಸಬಹುದಾದ ಮೊಬೈಲ್ ಫೋನ್ ಜೋಡಣೆಯೊಂದನ್ನು (ಆಡ್-ಆನ್) ಆಪಲ್ ಸಂಸ್ಥೆ ಬಿಡುಗಡೆಗೊಳಿಸಲಿದೆ" ಎಂಬ ಸುದ್ದಿಯೊಂದು ೨೦೦೪ರ ಮೂರ್ಖರ ದಿನದಂದು ಕಾಣಿಸಿಕೊಂಡಿತ್ತು. ಅಂದಿನ ಮಟ್ಟಿಗೆ ಏಪ್ರಿಲ್ ಫೂಲ್ ಮಾಡುವ ಪ್ರಯತ್ನವಾಗಿದ್ದ ಈ ವಿಷಯ, ಮುಂದೆ ಐಫೋನ್ ಬಿಡುಗಡೆಯಾದಾಗ ಬೇರೆಯದೇ ರೀತಿಯಲ್ಲಿ ನಿಜವಾಗಿಬಿಟ್ಟಿದ್ದು ಈಗ ಇತಿಹಾಸ.

ಮೂರ್ಖರ ದಿನದ ಆಸುಪಾಸಿನಲ್ಲಿ ಕೇಳಿಬಂದ ನಿಜವಾದ ಟೆಕ್ ಸುದ್ದಿಗಳು ಕೂಡ ಏಪ್ರಿಲ್ ಫೂಲ್ ಕುಚೇಷ್ಟೆಯಿರಬಹುದು ಎಂದು ಸಂದೇಹ ಮೂಡಿಸಿದ್ದುಂಟು. ಗೂಗಲ್ ಸಂಸ್ಥೆ ೨೦೦೪ರ ಏಪ್ರಿಲ್ ತಿಂಗಳಿನಲ್ಲಿ ತನ್ನ 'ಜಿಮೇಲ್' ವ್ಯವಸ್ಥೆಯನ್ನು ಘೋಷಿಸಿದಾಗ ಇತರ ಇಮೇಲ್ ಸೇವೆಗಳು ತೀರಾ ಪ್ರಾಥಮಿಕ ಸೌಲಭ್ಯಗಳನ್ನಷ್ಟೇ ಕೊಡುತ್ತಿದ್ದವು. ಅಂತಹ ಸನ್ನಿವೇಶದಲ್ಲಿ ಒಂದು ಜಿಬಿಯಷ್ಟು ಸಂಗ್ರಹಣಾ ಸಾಮರ್ಥ್ಯ ನೀಡುವುದಾಗಿ ಗೂಗಲ್ ಹೇಳಿದಾಗ ಬಹಳಷ್ಟು ಜನ ಇದು ಏಪ್ರಿಲ್ ಫೂಲ್ ಕುಚೇಷ್ಟೆಯೇ ಇರಬೇಕು ಎಂದು ಭಾವಿಸಿದ್ದರು!
ಐಟಿ ಲೋಕದ ತಮಾಷೆ ಏಪ್ರಿಲ್ ಮೊದಲ ದಿನಕ್ಕೆ ಮಾತ್ರವೇ ಸೀಮಿತವೇನಲ್ಲ. ಹಲವು ತಂತ್ರಾಂಶಗಳಲ್ಲಿ, ಜಾಲತಾಣಗಳಲ್ಲಿ ತಮಾಷೆಯ ಅಂಶಗಳನ್ನು ಉದ್ದೇಶಪೂರ್ವಕವಾಗಿ ಸೇರಿಸುವ ಅಭ್ಯಾಸವೇ ಇದೆ. ಅನಿರೀಕ್ಷಿತವಾಗಿ ಕಾಣಿಸಿಕೊಂಡು ಬಳಕೆದಾರರನ್ನು ಚಕಿತಗೊಳಿಸುವ, ಅವರ ಮುಖದಲ್ಲೊಂದು ಮುಗುಳ್ನಗೆ ಮೂಡಿಸುವ ಇಂತಹ ವೈಶಿಷ್ಟ್ಯಗಳನ್ನು 'ಈಸ್ಟರ್ ಎಗ್'ಗಳೆಂದು ಕರೆಯುತ್ತಾರೆ. ಓದಿ: ಡಿಜಿಟಲ್ ಲೋಕದ ಒಂದು ಮೊಟ್ಟೆಯ ಕತೆ!
ತಂತ್ರಜ್ಞಾನ ಲೋಕದಲ್ಲಿ ನೀವು ಕೇಳಿದ, ನೋಡಿದ ಅತ್ಯಂತ ತಮಾಷೆಯ ಸಂಗತಿ ಯಾವುದು? ಕಮೆಂಟ್ ಮಾಡಿ, ನಮ್ಮ ಜೊತೆ ಹಂಚಿಕೊಳ್ಳಿ!

ಏಪ್ರಿಲ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge