ಸೋಮವಾರ, ಮಾರ್ಚ್ 30, 2015

ಟ್ಯಾಬ್ಲೆಟ್‌ಗೊಂದು ಕಾಲ ಫ್ಯಾಬ್ಲೆಟ್‌ಗೊಂದು ಕಾಲ

ಟಿ. ಜಿ. ಶ್ರೀನಿಧಿ

ಹಿಂದಾನೊಂದು ಕಾಲದಲ್ಲಿ ಮೊಬೈಲ್ ಫೋನುಗಳ ಗಾತ್ರ ಬಹಳ ಸಣ್ಣದಾಗಿರುತ್ತಿತ್ತು. ಅದರಲ್ಲೂ ಅರ್ಧಕ್ಕಿಂತ ಹೆಚ್ಚಿನ ಭಾಗವನ್ನು ಕೀಪ್ಯಾಡ್ ಆಕ್ರಮಿಸಿಕೊಳ್ಳುತ್ತಿದ್ದುದರಿಂದ ಪರದೆಯ ಗಾತ್ರ ಒಂದೆರಡು ಇಂಚುಗಳಷ್ಟಿದ್ದರೆ ಅದೇ ಹೆಚ್ಚು. ಮೊಬೈಲ್ ಫೋನಿನ ಬಳಕೆ ದೂರವಾಣಿ ಕರೆ, ಎಸ್ಸೆಮ್ಮೆಸ್ ಹಾಗೂ ಸರಳವಾದ ಆಟಗಳನ್ನು ಆಡುವುದಕ್ಕಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಇದೊಂದು ಕೊರತೆ ಎಂದೇನೂ ಎನಿಸುತ್ತಿರಲಿಲ್ಲ.

ಈ ಪರಿಸ್ಥಿತಿ ಬದಲಾದದ್ದು ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಾಗ. ಕಂಪ್ಯೂಟರಿನಲ್ಲಿ ಮಾಡುವ ಹೆಚ್ಚೂಕಡಿಮೆ ಎಲ್ಲ ಕೆಲಸಗಳನ್ನೂ ಮೊಬೈಲಿನಲ್ಲಿ ಮಾಡಬಹುದು ಎಂದಾಗ ನಮಗೆ ಮೊಬೈಲಿನ ಪರದೆಯ ಗಾತ್ರ ದೊಡ್ಡದಿರಬೇಕು ಎನಿಸಲು ಶುರುವಾಗಿರಬೇಕು. ಆವರೆಗೂ ಒಂದೆರಡು ಇಂಚಿನಷ್ಟೇ ಇದ್ದ ಮೊಬೈಲ್ ಪರದೆ ಮೂರು-ನಾಲ್ಕು ಇಂಚಿಗೆ ಬಡ್ತಿ ಪಡೆದದ್ದು ಆಗಲೇ.

ಸ್ಮಾರ್ಟ್ ಫೋನ್ ಬಳಕೆ ಹೆಚ್ಚಿದಂತೆ ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುವುದು ಶುರುವಾಯಿತು. ಇಮೇಲ್ ಕಳುಹಿಸಲು, ಮೆಸೇಜ್ ಮಾಡಲು, ವೀಡಿಯೋ ನೋಡಲು, ಜಾಲತಾಣಗಳನ್ನು ಬ್ರೌಸ್ ಮಾಡಲು, ಇ-ಪುಸ್ತಕ ಓದಲಿಕ್ಕೆಲ್ಲ ಮೊಬೈಲ್ ಫೋನ್ ಬಳಸಬಹುದು ಎನ್ನುವಾಗ ನಾಲ್ಕಲ್ಲ, ನಾಲ್ಕೂವರೆ-ಐದು ಇಂಚಿನ ಪರದೆಯೂ ಸಾಲದಾಯಿತು.

ಅಷ್ಟರಲ್ಲಿ ಪ್ರಚಲಿತಕ್ಕೆ ಬಂದಿದ್ದ ಟ್ಯಾಬ್ಲೆಟ್‌ಗಳು ಈ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿದವು. ದೂರವಾಣಿ ಕರೆ ಮಾಡುವುದರ ಜೊತೆಗೆ ಇಮೇಲ್-ಮೆಸೇಜ್ ಇತ್ಯಾದಿ ಕಳುಹಿಸಲಿಕ್ಕೆ, ಚೂರುಪಾರು ಬ್ರೌಸಿಂಗ್ ಮಾಡಲಿಕ್ಕಷ್ಟೆ ಮೊಬೈಲ್ ಬಳಸಿ; ವೀಡಿಯೋ ನೋಡುವುದಕ್ಕೆ ಪುಸ್ತಕ ಓದುವುದಕ್ಕೆ ಆಟ ಆಡುವುದಕ್ಕೆಲ್ಲ ಟ್ಯಾಬ್ಲೆಟ್ ಬಳಸಿದರಾಯಿತು ಎನ್ನುವ ಅಭಿಪ್ರಾಯವೂ ಮೂಡಿತು. ನಾಲ್ಕಿಂಚಿನ ಫೋನಿನೊಡನೆ ಹೋಲಿಸಿದಾಗ ಟ್ಯಾಬ್ಲೆಟ್ಟಿನ ಏಳು-ಎಂಟು ಇಂಚಿನ ಪರದೆ ಬಹಳ ಅನುಕೂಲಕರ ಎನಿಸಿದ್ದರಲ್ಲಿ ತಪ್ಪೂ ಇಲ್ಲ ಬಿಡಿ.

ಆದರೆ ಇಲ್ಲೊಂದು ಸಮಸ್ಯೆಯಿತ್ತು.

ಸೋಮವಾರ, ಮಾರ್ಚ್ 23, 2015

ನಮ್ಮ ನಗರ ಸ್ಮಾರ್ಟ್ ನಗರ!

ಟಿ. ಜಿ. ಶ್ರೀನಿಧಿ

ಮೊಬೈಲ್ ಫೋನು, ಮನೆಯ ಟೀವಿಗಳೆಲ್ಲ ಸ್ಮಾರ್ಟ್ ಆಗಿರುವುದು ಈಗಾಗಲೇ ಹಳೆಯ ಸಂಗತಿ. ಇದೀಗ ಸ್ಮಾರ್ಟ್ ಆಗುವ ಸರದಿ ನಮ್ಮ ನಗರಗಳದು. ದಿನ ಬೆಳಗಾದರೆ ಸಾಕು, ಪತ್ರಿಕೆಗಳಲ್ಲಿ ಉದ್ದೇಶಿತ 'ಸ್ಮಾರ್ಟ್ ಸಿಟಿ'ಗಳದೇ ಸುದ್ದಿ: ಸ್ಮಾರ್ಟ್ ನಗರಿಗಳಾಗಿ ಯಾವೆಲ್ಲ ಊರುಗಳು ಆಯ್ಕೆಯಾಗಿವೆ, ಅವುಗಳ ಅಭಿವೃದ್ಧಿಗೆ ಸರಕಾರ ಎಷ್ಟು ಹಣ ಮೀಸಲಿಟ್ಟಿದೆ - ಒಂದರ ಹಿಂದೊಂದರಂತೆ ವರದಿಗಳಿಗೆ ಬಿಡುವೇ ಇಲ್ಲ.

ಇಷ್ಟಕ್ಕೂ 'ಸ್ಮಾರ್ಟ್ ಸಿಟಿ' ಎಂದರೇನು? ಒಂದು ನಗರ ಸ್ಮಾರ್ಟ್ ಆಗಲು ಅರ್ಹತೆಗಳೇನಾದರೂ ಇವೆಯೇ? ಬಹಳ ಜನರನ್ನು ಕಾಡುವ ಪ್ರಶ್ನೆ ಇದು.

ತಮಾಷೆಯ ವಿಷಯವೆಂದರೆ ಈ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವೇ ಇಲ್ಲ. 'ಸ್ಮಾರ್ಟ್' ಎಂಬ ಹಣೆಪಟ್ಟಿಗೆ ಒಂದೊಂದು ನಗರದ ಮಟ್ಟಿಗೆ ಒಂದೊಂದು ಅರ್ಥವಿರುವುದು ಸಾಧ್ಯ.

ಮಂಗಳವಾರ, ಮಾರ್ಚ್ 17, 2015

ವರ್ಚುಯಲ್ ರಿಯಾಲಿಟಿ: ಇಲ್ಲದ್ದು ಇದ್ದಹಾಗೆ ಇಲ್ಲಿಯೇ ಇದ್ದಹಾಗೆ!

ಟಿ. ಜಿ. ಶ್ರೀನಿಧಿ

ಆಸ್ಟ್ರೇಲಿಯಾ ಸಮುದ್ರತೀರದಲ್ಲಿರುವ ಹವಳದ ದಂಡೆಗಳನ್ನು ನೋಡಬೇಕೆನ್ನುವುದು ಬಹುದಿನಗಳ ಆಸೆ. ಆದರೆ ಕಚೇರಿಗೆ ರಜೆ ಸಿಗಬೇಕಲ್ಲ! ಹಾಗೊಮ್ಮೆ ಸಿಕ್ಕಿದರೂ ಹೆಂಡತಿಯನ್ನು ಒಪ್ಪಿಸುವುದು - ಶಾಲೆ ತಪ್ಪಿಸುವಂತೆ ಮಗಳ ಮನವೊಲಿಸುವುದೆಲ್ಲ ಕಷ್ಟ. ದುಡ್ಡು ಹೊಂದಿಸುವ ಚಿಂತೆಯೇನಿದ್ದರೂ ಆಮೇಲಿನ ವಿಷಯ.

ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಮೇಜಿನ ಮೇಲಿರುವ ಮೊಬೈಲ್ ಫೋನ್ ಕೈಗೆತ್ತಿಕೊಳ್ಳಬೇಕು; ಸಾಲ ಕೊಡುವ ಸಂಸ್ಥೆಗೋ ಟಿಕೆಟ್ ಏಜೆಂಟಿಗೋ ಫೋನ್ ಮಾಡಲಿಕ್ಕಲ್ಲ, ಕುಳಿತ ಕಡೆಯೇ ಆಸ್ಟ್ರೇಲಿಯಾ ದರ್ಶನ ಮಾಡಲು!


ಕೇಳಲು ವಿಚಿತ್ರವೆನಿಸುವ ಈ ವಿದ್ಯಮಾನವನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ವರ್ಚುಯಲ್ ರಿಯಾಲಿಟಿ, ಅಂದರೆ ಛಾಯಾವಾಸ್ತವ. ಇಲ್ಲದ್ದನ್ನು ಇರುವ ಹಾಗೆ ತೋರಿಸಿ ನಮ್ಮನ್ನು ಭ್ರಮಾಲೋಕಕ್ಕೆ ಕರೆದೊಯ್ಯುವ ಮಾಯಾಜಾಲ ಇದು.

ನಮ್ಮ ಸುತ್ತಲೂ ಬೇರೆಯದೇ ಸನ್ನಿವೇಶ ಇರುವಂತಹ ಭ್ರಮೆ ಸೃಷ್ಟಿಸಲು ಕನ್ನಡಕದಂತಹ ಸಾಧನಗಳನ್ನು ಬಳಸುವುದು ಹೊಸ ವಿಷಯವೇನೂ ಅಲ್ಲ.

ಬುಧವಾರ, ಮಾರ್ಚ್ 11, 2015

ಬಾಹ್ಯಾಕಾಶಕ್ಕೆ ಪ್ರವಾಸ

ಟಿ. ಜಿ. ಶ್ರೀನಿಧಿ

ಕಳೆದ ಕೆಲ ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಘಟನೆಗಳು ಸಾಕಷ್ಟು ಸುದ್ದಿಮಾಡಿವೆ. ಮೊದಲ ಯತ್ನದಲ್ಲೇ ಯಶಸ್ಸುಪಡೆದ ಮಂಗಳಯಾನ, ಚಂದಿರನ ಭೇಟಿ ಮುಗಿಸಿ ಮರಳಿದ ಚೀನಾದ ಆಕಾಶನೌಕೆ, ಧೂಮಕೇತುವಿನ ಮೇಲಿಳಿದ ಯೂರೋಪಿನ 'ಫೈಲಿ', ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಡುವಷ್ಟರಲ್ಲೇ ಸುಟ್ಟುಹೋದ ಅಮೆರಿಕಾದ ರಾಕೆಟ್ಟು, ಹಾರಾಟದ ನಡುವೆ ಅಪಘಾತಕ್ಕೀಡಾದ ವರ್ಜಿನ್ ಗೆಲಾಕ್ಟಿಕ್ ಅಂತರಿಕ್ಷವಾಹನ - ಎಲ್ಲದರ ಸುದ್ದಿಯೂ ನಮ್ಮನ್ನು ತಲುಪಿದೆ.


ಪ್ರತ್ಯೇಕ ಸಂದರ್ಭಗಳಲ್ಲಿ ನಡೆದ ಈ ಘಟನೆಗಳ ನಡುವೆ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲವೆಂದು ತೋರಿದರೂ ಈ ಎಲ್ಲ ಪ್ರಯತ್ನಗಳ ಉದ್ದೇಶ ಹೆಚ್ಚೂಕಡಿಮೆ ಒಂದೇ ಆಗಿರುವುದನ್ನು ನಾವು ನೋಡಬಹುದು. ಗ್ರಹ-ಉಪಗ್ರಹಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು, ಅಂತರಿಕ್ಷದ ನಿಲ್ದಾಣದಲ್ಲಿ ಉಳಿದುಕೊಂಡು ಸಂಶೋಧನೆಗಳನ್ನು ನಡೆಸುವುದು, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಸುಲಭ ವಿಧಾನಗಳನ್ನು ರೂಪಿಸುವುದು - ಎಲ್ಲದರ ಹಿಂದೆಯೂ ಇರುವ ಆಶಯ ಒಂದೇ: ಮಾನವ ಚಟುವಟಿಕೆಗಳ ವ್ಯಾಪ್ತಿಯನ್ನು ಭೂಮಿಯಿಂದಾಚೆಗೂ ವಿಸ್ತರಿಸುವುದು!

ಭಾನುವಾರ, ಮಾರ್ಚ್ 8, 2015

ಪ್ರಾಣಿಪ್ರಪಂಚದಲ್ಲಿ ಸ್ವಾಮಿ

ಡಿವಿಜಿಯವರ ಪುತ್ರ ಡಾ. ಬಿ. ಜಿ. ಎಲ್. ಸ್ವಾಮಿ ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯವಿಜ್ಞಾನಿ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದ ಸ್ವಾಮಿಯವರು ಕೆಲವು ಸಂದರ್ಭಗಳಲ್ಲಿ ಸಸ್ಯಗಳ ಸಹವಾಸ ಬಿಟ್ಟು ಪ್ರಾಣಿಗಳೊಡನೆಯೂ ಒಡನಾಡಬೇಕಾಗಿ ಬಂದಿತ್ತು. ಆ ಸಂದರ್ಭಗಳ ಹಾಸ್ಯಮಯ ವಿವರಣೆಯನ್ನು ನಾವು ಅವರ ಬರಹಗಳಲ್ಲೇ ನೋಡಬಹುದು. ಅಂತಹ ಎರಡು ಪ್ರಸಂಗಗಳು ಇಲ್ಲಿವೆ.
ಟಿ. ಜಿ. ಶ್ರೀನಿಧಿ

ಪುಸ್ತಕ ಕೊಳ್ಳಲು ಕ್ಲಿಕ್ ಮಾಡಿ
ಡಾ. ಬಿ. ಜಿ. ಎಲ್. ಸ್ವಾಮಿಯವರು ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಸಮಯ. ಸಸ್ಯವಿಜ್ಞಾನದ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆಂದು ಅವರು ಪ್ರತಿವರ್ಷವೂ ಅರಣ್ಯಪ್ರದೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಹೀಗೆ ಪ್ರವಾಸ ಹೋದಾಗಲೆಲ್ಲ ವಿವಿಧ ಬಗೆಯ ಸಸ್ಯಗಳ ಮಾದರಿ ಸಂಗ್ರಹಿಸಿಕೊಂಡು ಬರುವುದು ಸಂಪ್ರದಾಯ. ಒಣ ಸಸ್ಯ ಸಂಗ್ರಹಾಲಯಕ್ಕೆ, ತರಗತಿಗಳ ಉಪಯೋಗಕ್ಕೆ, ಸಸ್ಯವಿಜ್ಞಾನ ಹಾಗೂ ರಸಾಯನ ವಿಜ್ಞಾನ ಸಂಬಂಧಿತ ಸಂಶೋಧನೆಗಳಿಗೆಲ್ಲ ಈ ಸಂಗ್ರಹ ಬಳಕೆಯಾಗುತ್ತಿತ್ತು.

ಹೀಗೊಂದು ವರ್ಷ ಪ್ರವಾಸದ ಸಂದರ್ಭದಲ್ಲಿ ಸಾಮಾನ್ಯಕ್ಕಿಂತ ಹೆಚ್ಚೇ ಎನ್ನಿಸುವಷ್ಟು ಪ್ರಮಾಣದ ಸಸ್ಯಸಾಮಗ್ರಿ ಸಂಗ್ರಹವಾಯಿತು. ಸಂಗ್ರಹವಾದದ್ದನ್ನೆಲ್ಲ ಹೊರುವ ಕೆಲಸವಿತ್ತಲ್ಲ, ಅದಕ್ಕಾಗಿ ಇಬ್ಬರು ಕೂಲಿಗಳ ಜಾಗದಲ್ಲಿ ನಾಲ್ವರನ್ನು ಗೊತ್ತುಮಾಡಿಕೊಳ್ಳುವ ಅನಿವಾರ್ಯತೆ ಬಂತು. ಇದರಿಂದಾಗಿ ಸಸ್ಯಸಂಗ್ರಹವೇನೋ ಸಮಸ್ಯೆಯಿಲ್ಲದೆ ಕಾಲೇಜಿಗೆ ಬಂತು; ಆದರೆ ಪ್ರವಾಸದಿಂದ ಮರಳಿದ ಸ್ವಾಮಿಯವರಿಗೆ ಸಮಸ್ಯೆ ಶುರುವಾಯಿತು.

ಬುಧವಾರ, ಮಾರ್ಚ್ 4, 2015

ಮೊಬೈಲ್ ರೀಚಾರ್ಜ್ ಹೊಸ ಅವತಾರ

ಟಿ. ಜಿ. ಶ್ರೀನಿಧಿ

ದೂರವಾಣಿ ಕರೆಯಿಂದ ಪ್ರಾರಂಭಿಸಿ ವಾಟ್ಸ್‌ಆಪ್‌ವರೆಗೆ, ಇಮೇಲ್ ಬಳಸುವುದರಿಂದ ಫೋಟೋ ತೆಗೆಯುವವರೆಗೆ, ಆನ್‌ಲೈನ್ ಶಾಪಿಂಗಿನಿಂದ ಶೇರು ವ್ಯವಹಾರದವರೆಗೆ ಇಂದು ಪ್ರತಿಯೊಂದಕ್ಕೂ ನಮಗೆ ಮೊಬೈಲ್ ಬೇಕು. ಒಂದಷ್ಟು ಸಮಯ ಮೊಬೈಲ್ ಫೋನ್ ಬಳಸದೆ ಇರಲು ಸಾಧ್ಯವೇ ಎಂದು ಕೇಳಿದರೆ ಬಹಳಷ್ಟು ಜನ ಖಂಡಿತಾ ಇಲ್ಲ! ಎಂದೇ ಹೇಳುತ್ತಾರೇನೋ.

ಮೊಬೈಲ್ ಮಾಯೆ ನಮ್ಮನ್ನು ಆವರಿಸಿಕೊಂಡಿರುವ ಪರಿಯೇ ಅಂಥದ್ದು. ಊಟ ಬಟ್ಟೆ ಹೊಂದಿಸಿಕೊಳ್ಳುವ ಜೊತೆಗೆ ಮೊಬೈಲ್ ರೀಚಾರ್ಜ್ ಮಾಡಿಸುವುದೂ ಇಂದಿನ ಬದುಕಿನ ಅಗತ್ಯಗಳಲ್ಲೊಂದು.

ಹೌದು ಮತ್ತೆ, ಎಷ್ಟು ಸಾವಿರದ ಹ್ಯಾಂಡ್‌ಸೆಟ್ ಆದರೇನಂತೆ - ಸರಿಯಾದ ಸಮಯಕ್ಕೆ ರೀಚಾರ್ಜ್ ಮಾಡಿಸಲಿಲ್ಲ ಅಥವಾ ಬಿಲ್ ಪಾವತಿಸಲಿಲ್ಲ ಎಂದರೆ ಅದು ಬದುಕಿದ್ದೂ ಸತ್ತಂತೆಯೇ ಲೆಕ್ಕ. ಮೊಬೈಲ್ ಕೆಲಸಮಾಡುತ್ತಿಲ್ಲ ಎಂದರೆ ಫೋನ್ ಮಾಡುವುದು ಹೇಗೆ, ಮೆಸೇಜ್ ಕತೆಯೇನು, ಫೇಸ್‌ಬುಕ್ಕಿನ ವೀಡಿಯೋಗಳನ್ನು ನೋಡುವುದು-ಹಂಚಿಕೊಳ್ಳುವುದಾದರೂ ಹೇಗೆ!?

ಕೆಲ ವರ್ಷಗಳ ಹಿಂದೆ ಮೊಬೈಲ್ ರೀಚಾರ್ಜ್ ಮಾಡಿಸಬೇಕೆಂದರೆ ಅಂಗಡಿಗಳನ್ನು ಹುಡುಕಿಕೊಂಡು ಅಲೆಯಬೇಕಿತ್ತು. ಆ ಕಂಪನಿಯ ಕಾರ್ಡು ಸ್ಟಾಕಿಲ್ಲ ನಾಳೆ ಬನ್ನಿ ಎನ್ನುವಂತಹ ಮಾತನ್ನೂ ಕೇಳುವ ಸಾಧ್ಯತೆಯಿತ್ತು. ಪೋಸ್ಟ್‌ಪೇಡ್ ಬಿಲ್ ಪಾವತಿಸಲು ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದದ್ದೂ ಉಂಟು.

ಈ ಪರಿಸ್ಥಿತಿ ನಿಧಾನಕ್ಕೆ ಬದಲಾದಾದಂತೆ ಮೊಬೈಲ್ ರೀಚಾರ್ಜ್ ಎನ್ನುವುದು ಒಂದು ಕಾಲಕ್ಕೆ ಅಂಗಡಿಯಲ್ಲಿ ಸಿಗುತ್ತಿದ್ದ ಭೌತಿಕ ವಸ್ತುವಾಗಿತ್ತು ಎನ್ನುವುದೇ ಮರೆತುಹೋಗುತ್ತಿದೆ. ಹಳೆಯ ಕಡತಗಳಲ್ಲಿ ಸೇರಿಕೊಂಡಿದ್ದು ಯಾವಾಗಲೋ ಕೈಗೆ ಸಿಗುವ ಬಣ್ಣಬಣ್ಣದ ರೀಚಾರ್ಜ್ ಕಾರ್ಡುಗಳು ಮ್ಯೂಸಿಯಂ ಪೀಸುಗಳಂತೆ ಕಾಣಲು ಶುರುವಾಗಿವೆ.

ಸೋಮವಾರ, ಮಾರ್ಚ್ 2, 2015

ಖುಲ್‌ಜಾ ಸಿಮ್ SIM!

ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ, ಸ್ಮಾರ್ಟ್ ಆಗಿರಲಿ ಇಲ್ಲದಿರಲಿ, ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಮೊಬೈಲ್ ಫೋನಿಗೆ ಜೀವತುಂಬುವುದೇ ಈ ಸಿಮ್ಮು. ಕರೆಮಾಡಲು, ಎಸ್ಸೆಮ್ಮೆಸ್ ಕಳುಹಿಸಲು, ಹೋದಲ್ಲೆಲ್ಲ ಅಂತರಜಾಲ ಸಂಪರ್ಕ ಪಡೆದುಕೊಳ್ಳಲು - ಎಲ್ಲದಕ್ಕೂ ಸಿಮ್ ಬೇಕೇ ಬೇಕು.

ಸಿಮ್ ಎನ್ನುವುದು ಒಂದು ನಾಮಪದದಂತೆಯೇ ನಮ್ಮ ಶಬ್ದಭಂಡಾರಕ್ಕೆ ಸೇರಿಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಅದೊಂದು ಸಂಕ್ಷೇಪ (ಅಬ್ರೀವಿಯೇಶನ್). 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್', ಅಂದರೆ ಚಂದಾದಾರರನ್ನು ಗುರುತಿಸುವ ಘಟಕ, ಎನ್ನುವುದು ಇದರ ಪೂರ್ಣರೂಪ.
badge