ಟಿ. ಜಿ. ಶ್ರೀನಿಧಿ
ಆಸ್ಟ್ರೇಲಿಯಾ ಸಮುದ್ರತೀರದಲ್ಲಿರುವ ಹವಳದ ದಂಡೆಗಳನ್ನು ನೋಡಬೇಕೆನ್ನುವುದು ಬಹುದಿನಗಳ ಆಸೆ. ಆದರೆ ಕಚೇರಿಗೆ ರಜೆ ಸಿಗಬೇಕಲ್ಲ! ಹಾಗೊಮ್ಮೆ ಸಿಕ್ಕಿದರೂ ಹೆಂಡತಿಯನ್ನು ಒಪ್ಪಿಸುವುದು - ಶಾಲೆ ತಪ್ಪಿಸುವಂತೆ ಮಗಳ ಮನವೊಲಿಸುವುದೆಲ್ಲ ಕಷ್ಟ. ದುಡ್ಡು ಹೊಂದಿಸುವ ಚಿಂತೆಯೇನಿದ್ದರೂ ಆಮೇಲಿನ ವಿಷಯ.
ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಮೇಜಿನ ಮೇಲಿರುವ ಮೊಬೈಲ್ ಫೋನ್ ಕೈಗೆತ್ತಿಕೊಳ್ಳಬೇಕು; ಸಾಲ ಕೊಡುವ ಸಂಸ್ಥೆಗೋ ಟಿಕೆಟ್ ಏಜೆಂಟಿಗೋ ಫೋನ್ ಮಾಡಲಿಕ್ಕಲ್ಲ, ಕುಳಿತ ಕಡೆಯೇ ಆಸ್ಟ್ರೇಲಿಯಾ ದರ್ಶನ ಮಾಡಲು!
ಕೇಳಲು ವಿಚಿತ್ರವೆನಿಸುವ ಈ ವಿದ್ಯಮಾನವನ್ನು ಸಾಧ್ಯವಾಗಿಸಿರುವ ಪರಿಕಲ್ಪನೆಯ ಹೆಸರೇ ವರ್ಚುಯಲ್ ರಿಯಾಲಿಟಿ, ಅಂದರೆ ಛಾಯಾವಾಸ್ತವ. ಇಲ್ಲದ್ದನ್ನು ಇರುವ ಹಾಗೆ ತೋರಿಸಿ ನಮ್ಮನ್ನು ಭ್ರಮಾಲೋಕಕ್ಕೆ ಕರೆದೊಯ್ಯುವ ಮಾಯಾಜಾಲ ಇದು.
ನಮ್ಮ ಸುತ್ತಲೂ ಬೇರೆಯದೇ ಸನ್ನಿವೇಶ ಇರುವಂತಹ ಭ್ರಮೆ ಸೃಷ್ಟಿಸಲು ಕನ್ನಡಕದಂತಹ ಸಾಧನಗಳನ್ನು ಬಳಸುವುದು ಹೊಸ ವಿಷಯವೇನೂ ಅಲ್ಲ.
ವ್ಯೂ ಮಾಸ್ಟರ್ ಎಂಬ ಮಕ್ಕಳಾಟಿಕೆ ಇರುತ್ತದಲ್ಲ, ವಿಭಿನ್ನ ಚಿತ್ರಗಳನ್ನು ಪ್ರದರ್ಶಿಸುವಂತಹದ್ದು, ಅಂತಹ ಸಾಧನ ಬಳಸಿ ಕಣ್ಣಿನ ಮುಂದೆ ಆಸ್ಟ್ರೇಲಿಯಾ ಸಮುದ್ರತೀರದ ದೃಶ್ಯಗಳನ್ನು ಪ್ರದರ್ಶಿಸಿದರೆ ನಾವು ಅಲ್ಲೇ ಇರುವಂತಹ ಭಾವನೆ ಮೂಡಿಸುವುದು ಸಾಧ್ಯವಾಗುತ್ತದೆ.
ಮೂರು ಆಯಾಮದ (ಥ್ರೀಡಿ) ಚಿತ್ರಣವಾದರಂತೂ ಈ ಅನುಭವ ಇನ್ನಷ್ಟು ನೈಜವಾಗಿರುವುದು ಸಾಧ್ಯ. ಇನ್ನು ಅನಿಮೇಶನ್ ತಂತ್ರಜ್ಞಾನ ಬಳಸಿ ರೂಪಿಸಿದ ಕೃತಕ ದೃಶ್ಯಾವಳಿ ಕಂಡರಂತೂ ನಾವು ನಿಜಕ್ಕೂ ಭ್ರಮಾಲೋಕಕ್ಕೆ ಹೋಗಿಬಿಡಬಹುದು. ಕಂಪ್ಯೂಟರ್ ಗೇಮ್‌ನಲ್ಲಿ ಮೌಸ್-ಕೀಬೋರ್ಡ್-ಜಾಯ್‌ಸ್ಟಿಕ್ ಇತ್ಯಾದಿಗಳನ್ನು ಬಳಸುತ್ತೇವಲ್ಲ, ಆ ಮೂಲಕ ಸಾಧ್ಯವಾಗುವ ಸಂಗತಿಗಳನ್ನು ಇಲ್ಲಿ ಕೈಯನ್ನೋ ತಲೆಯನ್ನೋ ಅಲುಗಿಸುವ ಮೂಲಕವೇ ಸಾಧಿಸಿಕೊಳ್ಳಬಹುದು. ಹಾಗಾಗಿ ಈ ತಂತ್ರಜ್ಞಾನ ಗೇಮಿಂಗ್ ಕ್ಷೇತ್ರಕ್ಕೆ ಹೇಳಿ ಮಾಡಿಸಿದ ಸಂಗಾತಿ ಎನ್ನುವುದು ತಜ್ಞರ ಅಭಿಪ್ರಾಯ. ಅದೇನು ಯಾವಾಗಲೂ ಗೇಮ್‌ನಲ್ಲೇ ಮುಳುಗಿರುತ್ತೀಯಲ್ಲ! ಎಂದು ಬೈಸಿಕೊಳ್ಳುವವರು ವರ್ಚುಯಲ್ ರಿಯಾಲಿಟಿ ಬಳಸುವ ಆಟಗಳ ಮೂಲಕ ನಿಜಕ್ಕೂ ಗೇಮ್ ಅನುಭವದಲ್ಲಿ ಮುಳುಗಿಹೋಗುವುದು ಸಾಧ್ಯವಂತೆ.
ಈ ಪರಿಕಲ್ಪನೆ ಬಹಳ ಸ್ಪಷ್ಟವಾಗಿದ್ದರೂ ಅದನ್ನು ಸಾಮಾನ್ಯ ಬಳಕೆದಾರರಿಗೆ ತಲುಪಿಸುವ ಸರಳ ವಿಧಾನಗಳ ಕೊರತೆ ಈ ತಂತ್ರಜ್ಞಾನದ ಬೆಳವಣಿಗೆಗೆ ಅಡ್ಡಿಯಾಗಿತ್ತು. ಆದರೆ ಕಂಪ್ಯೂಟರ್ ಗೇಮ್‌ಗಳಿಗೆಂದು ಈಚೆಗೆ ಪರಿಚಿತವಾದ 'ಆಕ್ಯುಲಸ್ ರಿಫ್ಟ್'ನಂತಹ ಸಾಧನಗಳು ಈ ಪರಿಸ್ಥಿತಿ ಬದಲಿಸುವ ನಿರೀಕ್ಷೆಯಿದೆ. ದೊಡ್ಡಗಾತ್ರದ ಕನ್ನಡಕದಂತಹ ಈ ಸಾಧನವನ್ನು ತಲೆಗೆ ಕಟ್ಟಿಕೊಂಡರೆ ಸಾಕು, ಈವರೆಗೂ ಕಂಪ್ಯೂಟರಿನ ಪರದೆಯ ಮೇಲಷ್ಟೆ ಕಾಣುತ್ತಿದ್ದ ಗೇಮ್ ಲೋಕಕ್ಕೆ ನಾವು ನೇರವಾಗಿ ಪ್ರವೇಶಿಸುವುದು ಸಾಧ್ಯವಾಗುತ್ತದೆ. ಈ ಸಾಧನದ ಹಿಂದಿರುವ ಸಂಸ್ಥೆಯನ್ನು ಫೇಸ್‌ಬುಕ್ ಕೊಂಡುಕೊಂಡಿರುವ ವಿದ್ಯಮಾನ ವರ್ಚುಯಲ್ ರಿಯಾಲಿಟಿ ಭವಿಷ್ಯದ ಬಗ್ಗೆ ಇನ್ನಷ್ಟು ಭರವಸೆ ಮೂಡಿಸಿದೆ.
ನಾನು ಗೇಮ್ ಪ್ರೇಮಿಯಲ್ಲ, ಉತ್ತಮ ಗೇಮಿಂಗ್ ಅನುಭವ ನೀಡುವ ಸಾಧನಕ್ಕೆಂದು ದೊಡ್ಡಮೊತ್ತದ ಹಣ ನೀಡುವ ಉದ್ದೇಶವೂ ನನಗಿಲ್ಲ ಎನ್ನುವವರು ಹಲವರಿದ್ದಾರೆ. ಅಂತಹವರೂ ನಿರಾಶೆಯಾಗಬೇಕಿಲ್ಲ. ಇದೀಗ ಸರ್ವಾಂತರ್ಯಾಮಿಯಾಗಿರುವ ಸ್ಮಾರ್ಟ್‌ಫೋನುಗಳೇ ನಮಗೆ ವರ್ಚುಯಲ್ ರಿಯಾಲಿಟಿ ಅನುಭವ ನೀಡುವಂತೆ ಮಾಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆಯುತ್ತಿವೆ.
ಅಂತಹ ಪ್ರಯತ್ನಗಳಲ್ಲೊಂದು ಗೂಗಲ್ ಕಾರ್ಡ್‌ಬೋರ್ಡ್. ರಟ್ಟಿನ ಪೆಟ್ಟಿಗೆಯನ್ನು ಕತ್ತರಿಸಿ ಅದರಲ್ಲಿ ಒಂದುಕಡೆ ಸ್ಮಾರ್ಟ್ ಫೋನನ್ನೂ ಇನ್ನೊಂದು ಕಡೆ ಎರಡು ಮಸೂರ(ಲೆನ್ಸ್)ಗಳನ್ನೂ ಅಳವಡಿಸಿಕೊಂಡರೆ ಆಯಿತು, ಆಪ್ ಸ್ಟೋರಿನಲ್ಲಿ ಸಿಗುವ ಹಲವು ಆಪ್‌ಗಳು ನಮ್ಮ ಮುಂದೆ ವರ್ಚುಯಲ್ ರಿಯಾಲಿಟಿ ಲೋಕವನ್ನು ತೆರೆದಿಡುತ್ತವೆ.
ರಟ್ಟಿನ ಪೆಟ್ಟಿಗೆ ಇದೆ, ಮಸೂರವನ್ನು ಅಂಗಡಿಯಲ್ಲಿ ಕೊಳ್ಳಬಹುದು, ಆದರೆ ಅದರಿಂದ ಈ ವಿಶೇಷ ಕನ್ನಡಕ ರೂಪಿಸಿಕೊಳ್ಳುವುದು ಹೇಗೆ ಎಂದು ತಲೆಕೆಡಿಸಿಕೊಳ್ಳುವ ಅಗತ್ಯವೂ ಇಲ್ಲ. ರಟ್ಟಿನ ಪೆಟ್ಟಿಗೆ ಕತ್ತರಿಸಿ ಈ ಸಾಧನವನ್ನು ಮನೆಯಲ್ಲೇ ರೂಪಿಸಿಕೊಳ್ಳುವ ಪಾಠವನ್ನು ಗೂಗಲ್ ಉಚಿತವಾಗಿಯೇ ಹೇಳಿಕೊಡುತ್ತದೆ (g.co/cardboard ನೋಡಿ). ಅಷ್ಟೆಲ್ಲ ಮಾಡಲು ಸಮಯವಿಲ್ಲ ಎನ್ನುವವರು ಕೆಲವೇ ನೂರು ರೂಪಾಯಿಗಳನ್ನು ಖರ್ಚುಮಾಡಿ ಆನ್‌ಲೈನ್ ಅಂಗಡಿಗಳಲ್ಲಿ ಈ ಸಾಧನವನ್ನು ಕೊಳ್ಳಬಹುದು (ವಿವರಗಳಿಗೆ ಗೂಗಲ್ ಮಾಡಿ).
ಇನ್ನು ಗೂಗಲ್ ಕಾರ್ಡ್‌ಬೋರ್ಡ್ ಜೊತೆಗೆ ಕೆಲಸಮಾಡುವ ಆಪ್‌ಗಳಂತೂ ಬಹಳಷ್ಟು ಸಂಖ್ಯೆಯಲ್ಲಿ (ಬಹುಪಾಲು ಉಚಿತವಾಗಿಯೇ) ದೊರಕುತ್ತವೆ. ಈ ಆಪ್‌ಗಳನ್ನು ಬಳಸಿ ಬೇರೆ ಊರಿಗೆ ಹೋದ ಅನುಭವ ಪಡೆದುಕೊಳ್ಳುವುದು, ಮ್ಯೂಸಿಯಮ್ಮಿನ ಸಂಗ್ರಹಗಳನ್ನು ನೋಡುವುದು, ಯೂಟ್ಯೂಬ್ ವೀಡಿಯೋ ನೋಡುವಾಗ ಸಿನಿಮಾ ಥಿಯೇಟರಿನ ಅನುಭವ ಪಡೆದುಕೊಳ್ಳುವುದೆಲ್ಲ ಸಾಧ್ಯ!
ವರ್ಚುಯಲ್ ರಿಯಾಲಿಟಿ ಪ್ರಪಂಚದತ್ತ ಪ್ರಯಾಣಬೆಳೆಸಲು ಇನ್ನೇನು ತಾನೆ ಬೇಕು? ನಿಮ್ಮ ಪ್ರಯಾಣ ಸುಖಮಯವಾಗಿರಲಿ!
ಮಾರ್ಚ್ ೧೭, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ