ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನು, ಮನೆಯ ಟೀವಿಗಳೆಲ್ಲ ಸ್ಮಾರ್ಟ್ ಆಗಿರುವುದು ಈಗಾಗಲೇ ಹಳೆಯ ಸಂಗತಿ. ಇದೀಗ ಸ್ಮಾರ್ಟ್ ಆಗುವ ಸರದಿ ನಮ್ಮ ನಗರಗಳದು. ದಿನ ಬೆಳಗಾದರೆ ಸಾಕು, ಪತ್ರಿಕೆಗಳಲ್ಲಿ ಉದ್ದೇಶಿತ 'ಸ್ಮಾರ್ಟ್ ಸಿಟಿ'ಗಳದೇ ಸುದ್ದಿ: ಸ್ಮಾರ್ಟ್ ನಗರಿಗಳಾಗಿ ಯಾವೆಲ್ಲ ಊರುಗಳು ಆಯ್ಕೆಯಾಗಿವೆ, ಅವುಗಳ ಅಭಿವೃದ್ಧಿಗೆ ಸರಕಾರ ಎಷ್ಟು ಹಣ ಮೀಸಲಿಟ್ಟಿದೆ - ಒಂದರ ಹಿಂದೊಂದರಂತೆ ವರದಿಗಳಿಗೆ ಬಿಡುವೇ ಇಲ್ಲ.
ಇಷ್ಟಕ್ಕೂ 'ಸ್ಮಾರ್ಟ್ ಸಿಟಿ' ಎಂದರೇನು? ಒಂದು ನಗರ ಸ್ಮಾರ್ಟ್ ಆಗಲು ಅರ್ಹತೆಗಳೇನಾದರೂ ಇವೆಯೇ? ಬಹಳ ಜನರನ್ನು ಕಾಡುವ ಪ್ರಶ್ನೆ ಇದು.
ತಮಾಷೆಯ ವಿಷಯವೆಂದರೆ ಈ ಪ್ರಶ್ನೆಗೆ ನಿರ್ದಿಷ್ಟವಾದ ಉತ್ತರವೇ ಇಲ್ಲ. 'ಸ್ಮಾರ್ಟ್' ಎಂಬ ಹಣೆಪಟ್ಟಿಗೆ ಒಂದೊಂದು ನಗರದ ಮಟ್ಟಿಗೆ ಒಂದೊಂದು ಅರ್ಥವಿರುವುದು ಸಾಧ್ಯ.
ನಗರವೊಂದರ ಜಾಣತನ ಒಂದು ಅಥವಾ ಹೆಚ್ಚಿನ ಕ್ಷೇತ್ರಗಳಲ್ಲಿರಬಹುದು. ಸೂಕ್ತ ನಿಯಂತ್ರಣದ ಮೂಲಕ ಸರಾಗ ವಾಹನಸಂಚಾರಕ್ಕೆ ಅನುವುಮಾಡಿಕೊಡುವುದು, ಪರಿಸರ ಸ್ನೇಹಿ ಇಂಧನ ಬಳಸಿ ಮಾಲಿನ್ಯ ತಗ್ಗಿಸುವುದು, ಹೆಚ್ಚುಹೆಚ್ಚು ಹಸಿರು ಪ್ರದೇಶಗಳನ್ನು ಸೃಷ್ಟಿಸುವುದು - ನಗರವೊಂದು ಸ್ಮಾರ್ಟ್ ಆಗಲಿಕ್ಕೆ ಇವೆಲ್ಲವೂ ಸಹಕಾರಿಯೇ.
ಸ್ಮಾರ್ಟ್ ಆಗುವ ನಗರಗಳಲ್ಲೂ ಹಲವು ವಿಧ. ಆ ಪೈಕಿ ಹಲವು ನಗರಗಳು ವರ್ಷಗಳಿಂದಲೇ ಅಸ್ತಿತ್ವದಲ್ಲಿದ್ದರೆ ಕೆಲವು ನಗರಗಳನ್ನು ಪೂರ್ತಿ ಹೊಸದಾಗಿ ರೂಪಿಸಲಾಗಿರುತ್ತದೆ. ಜೌಗುಪ್ರದೇಶವನ್ನು ಮುಚ್ಚಿ ರೂಪಿಸಲಾಗಿರುವ ದಕ್ಷಿಣ ಕೊರಿಯಾದ ಸಾಂಗ್ಡೋ ಇಂತಹ ನಗರಗಳಿಗೊಂದು ಉದಾಹರಣೆ. ಈ ಹೊಸ ಊರಿನಲ್ಲಿ ಶೇ. ೪೦ರಷ್ಟು ಹಸಿರು ಪ್ರದೇಶ, ಸೈಕಲ್ ಮೂಲಕ ಸಾಗುವುದು ಅತ್ಯಂತ ಸುಲಭ ಹಾಗೂ ಕಸದ ಸಮಸ್ಯೆ ಇಲ್ಲವೇ ಇಲ್ಲ. ವಿದ್ಯುತ್ ಚಾಲಿತ ವಾಹನಗಳನ್ನು ಚಾರ್ಜ್ ಮಾಡಿಕೊಳ್ಳುವ ಸೌಲಭ್ಯವೂ ಅಲ್ಲಲ್ಲಿ ಸಿಗುತ್ತದೆ, ನಮ್ಮೂರಿನ ಪೆಟ್ರೋಲ್ ಬಂಕುಗಳಂತೆ!
ಹಾಗೆಂದಮಾತ್ರಕ್ಕೆ ಸ್ಮಾರ್ಟ್ ನಗರಗಳ ಪರಿಕಲ್ಪನೆ ಬರಿಯ ಮುಂದುವರೆದ ದೇಶಗಳಿಗೆ ಸೀಮಿತವೇನೂ ಅಲ್ಲ. ಅಭಿವೃದ್ಧಿಶೀಲ ದೇಶಗಳ, ಹಿಂದುಳಿದ ಪ್ರದೇಶಗಳ ಊರುಗಳು ಸ್ಮಾರ್ಟ್ ಆಗಬಾರದೆಂದು ನಿಯಮವೇನೂ ಇಲ್ಲ. ಊರುಗಳಷ್ಟೇ ಏಕೆ, ಒಂದಷ್ಟು ಉಪನಗರಗಳು ಅಥವಾ ಬಡಾವಣೆಗಳನ್ನು ಮಾತ್ರವೇ ಸ್ಮಾರ್ಟ್ ಆಗಿಸುವುದೂ ಸಾಧ್ಯ. ಇಲ್ಲಿ ಉದಾಹರಿಸಬಹುದಾದ ಹೆಸರು ದಕ್ಷಿಣ ಆಫ್ರಿಕಾದ ಸ್ಟೆಲೆನ್‌ಬಾಶ್ ಎಂಬಲ್ಲಿರುವ ಮಾಜಿ ಕೊಳಗೇರಿಯದ್ದು. ಇತರ ಸ್ಮಾರ್ಟ್ ಶಹರುಗಳಂತೆ ನಮಗಿಲ್ಲಿ ಆಧುನಿಕತೆ ಕಾಣಲಿಕ್ಕಿಲ್ಲ; ಆದರೆ ಇಲ್ಲಿನ ಗುಡಿಸಲಿನಂತಹ ಮನೆಗಳ ಛಾವಣಿ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುತ್ತವೆ, ಮಕ್ಕಳಿಗೆ ಓದಲು ಬೆಳಕನ್ನು - ಮೊಬೈಲ್ ಬ್ಯಾಟರಿಗೆ ಚಾರ್ಜನ್ನೂ ಕೊಡುತ್ತವೆ.
ನೂರಾರು ಸಿಟಿ ಬಸ್ಸುಗಳಿದ್ದರೂ, ಕೆಲವು ಪ್ರದೇಶಗಳಲ್ಲಿ ಒಂದರ ಹಿಂದೊಂದು ಖಾಲಿ ಬಸ್ಸು ಓಡಾಡುತ್ತಿದ್ದರೂ, ಕೆಲ ಬಡಾವಣೆಗಳತ್ತ ಬಸ್ಸುಗಳು ಸುಳಿಯುವುದೇ ಅಪರೂಪವಾದ ಪರಿಸ್ಥಿತಿ ಹಲವು ಊರುಗಳಲ್ಲಿರುತ್ತದೆ. ಸ್ಮಾರ್ಟ್ ನಗರಗಳು ಅಂತಹ ಪರಿಸ್ಥಿತಿ ಬದಲಿಸುವ ಅವಕಾಶವನ್ನೂ ಕೊಡುತ್ತವೆ. ಬಸ್ ಸೌಲಭ್ಯಕ್ಕಾಗಿ ಬೇಡಿಕೆ, ಸಂಚಾರ ದಟ್ಟಣೆ ಇತ್ಯಾದಿಗಳನ್ನೆಲ್ಲ ಗಮನಿಸಿಕೊಂಡು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಇದರಿಂದ ಸಾಧ್ಯವಾಗುತ್ತದೆ. ಕೇಂದ್ರೀಯ ನಿಯಂತ್ರಣಕ್ಕೊಳಪಟ್ಟ ಬೀದಿ ದೀಪದ ವ್ಯವಸ್ಥೆಯೂ ಹೀಗೆಯೇ: ಬೇಕಾದ ಸ್ಥಳಗಳಲ್ಲಿ ಬೇಕಾದ ಸಮಯದಲ್ಲಿ ದೀಪಗಳು ಉರಿಯುತ್ತಿರುವಂತೆ ನೋಡಿಕೊಳ್ಳಲು ಇಂತಹ ವ್ಯವಸ್ಥೆ ಸಹಾಯಮಾಡುತ್ತದೆ. ಸಮಾಜಘಾತಕ ಶಕ್ತಿಗಳು ಕತ್ತಲಿನ ದುರುಪಯೋಗ ಮಾಡಿಕೊಳ್ಳುತ್ತಿವೆ ಎನ್ನುವ ಸಂಶಯ ಬಂದ ತಕ್ಷಣ ನಿಯಂತ್ರಣ ಕೇಂದ್ರದಲ್ಲಿ ಕುಳಿತೇ ಅಂತಹ ಪ್ರದೇಶಗಳಲ್ಲಿ ಹೆಚ್ಚುವರಿ ದೀಪಗಳನ್ನು ಉರಿಸುವುದೂ ಸಾಧ್ಯವಾಗುತ್ತದೆ.
ಮೊಬೈಲ್ ಆಪ್ ಮೂಲಕವೋ ಅಂತರಜಾಲದಲ್ಲೋ ತಮ್ಮ ದೂರುದುಮ್ಮಾನಗಳನ್ನು ಸಲ್ಲಿಸಲು, ಸಲ್ಲಿಸಿದ ದೂರಿನ ಕತೆಯೇನಾಯಿತು ಎಂದು ತಿಳಿದುಕೊಳ್ಳಲು ಸಾರ್ವಜನಿಕರಿಗೆ ಅವಕಾಶ ಕೊಡುವವೂ ಸ್ಮಾರ್ಟ್ ಊರುಗಳೇ. ನಗರಾಡಳಿತಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಈ ಹಿಂದೆ ಸಂಗ್ರಹವಾದ ದತ್ತಾಂಶವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು, ಉಪಯುಕ್ತವಾಗಬಹುದಾದ ದತ್ತಾಂಶವನ್ನು ಸೂಕ್ತವಾಗಿ ಸಂಗ್ರಹಿಸಿ ಸಂಸ್ಕರಿಸುವುದು ಕೂಡ ಇಂತಹುದೇ ಇನ್ನೊಂದು ಕ್ರಮ. ಅಪರಾಧಗಳು, ಸಂಚಾರ ದಟ್ಟಣೆ, ವಿದ್ಯುತ್ ಬಳಕೆ ಮುಂತಾದ ವಿಷಯಗಳ ಕುರಿತು ಮುಂಜಾಗ್ರತೆ ವಹಿಸುವುದು ಇದರಿಂದಾಗಿ ಸಾಧ್ಯವಾಗುತ್ತದೆ. ಇದರ ಜೊತೆಗೆ ಅಗತ್ಯ ಸಂದರ್ಭಗಳಲ್ಲಿ ನಾಗರಿಕರಿಗೆ ಅವಶ್ಯ ಮಾಹಿತಿಯನ್ನು ಕ್ಷಿಪ್ರವಾಗಿ (ಮೊಬೈಲ್ ಮೂಲಕ) ತಲುಪಿಸುವ ವ್ಯವಸ್ಥೆಯನ್ನೂ ರೂಪಿಸಿಕೊಳ್ಳಬಹುದು.
ಹೊಸ ಊರುಗಳನ್ನು ರೂಪಿಸುವ ಸಂದರ್ಭದಲ್ಲಿ ಜನರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಸೌಲಭ್ಯಗಳನ್ನು ರೂಪಿಸುವ ಅನುಕೂಲ ಕೂಡ ಇರುತ್ತದೆ. ಒಂದು ಬಡಾವಣೆಯ ನಿವಾಸಿಗಳಿಗೆ ಬೇಕಾಗುವ ಶಾಲೆ, ಆಸ್ಪತ್ರೆ, ಅಂಗಡಿ, ಮನರಂಜನೆಯ ಸೌಲಭ್ಯಗಳನ್ನೆಲ್ಲ ಹತ್ತಿಪ್ಪತ್ತು ನಿಮಿಷದ ನಡಿಗೆಯ ದೂರದೊಳಗೇ ಒದಗಿಸಿಕೊಡುವುದು ಇಂತಹ ಊರುಗಳ ವೈಶಿಷ್ಟ್ಯ. ಇಂತಹ ಬಡಾವಣೆಗಳ ನಡುವೆ ಓಡಾಡಲು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ಸಮರ್ಪಕವಾಗಿ ರೂಪಿಸಿಬಿಟ್ಟರೆ ನಗರದ ವಾಹನದಟ್ಟಣೆ ತನ್ನಷ್ಟಕ್ಕೆ ತಾನೇ ಕಡಿಮೆಯಾಗಿಬಿಡುತ್ತದೆ.
'ಸ್ಮಾರ್ಟ್' ಎಂದಮಾತ್ರಕ್ಕೆ ತಂತ್ರಜ್ಞಾನದ ತೋರಿಕೆಯ ಬಳಕೆಗಷ್ಟೆ ಜೋತುಬೀಳಬೇಕು ಎಂದೇನೂ ಇಲ್ಲ. ತಂತ್ರಜ್ಞಾನದ ಸಮರ್ಪಕ ಬಳಕೆ, ಉನ್ನತ ಕಾರ್ಯಕ್ಷಮತೆಯ ಆಡಳಿತ ವ್ಯವಸ್ಥೆ ಹಾಗೂ ಜನರ ಜೊತೆಗೆ ಪರಿಸರದ ಕುರಿತೂ ಕಾಳಜಿ ಇಟ್ಟುಕೊಂಡರೆ ನಮ್ಮ ನಗರಗಳಷ್ಟೇ ಅಲ್ಲ, ಹಳ್ಳಿಗಳೂ ಸ್ಮಾರ್ಟ್ ಆಗಬಲ್ಲವು. ಆಗಮಾಡಿಸುವ ಇಚ್ಛಾಶಕ್ತಿಯೊಂದು ಇದ್ದರೆ ಸಾಕು!

ಮಾರ್ಚ್ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ