ಬುಧವಾರ, ಮಾರ್ಚ್ 11, 2015

ಬಾಹ್ಯಾಕಾಶಕ್ಕೆ ಪ್ರವಾಸ

ಟಿ. ಜಿ. ಶ್ರೀನಿಧಿ

ಕಳೆದ ಕೆಲ ತಿಂಗಳುಗಳಲ್ಲಿ ಬಾಹ್ಯಾಕಾಶಕ್ಕೆ ಸಂಬಂಧಪಟ್ಟ ಘಟನೆಗಳು ಸಾಕಷ್ಟು ಸುದ್ದಿಮಾಡಿವೆ. ಮೊದಲ ಯತ್ನದಲ್ಲೇ ಯಶಸ್ಸುಪಡೆದ ಮಂಗಳಯಾನ, ಚಂದಿರನ ಭೇಟಿ ಮುಗಿಸಿ ಮರಳಿದ ಚೀನಾದ ಆಕಾಶನೌಕೆ, ಧೂಮಕೇತುವಿನ ಮೇಲಿಳಿದ ಯೂರೋಪಿನ 'ಫೈಲಿ', ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೊರಡುವಷ್ಟರಲ್ಲೇ ಸುಟ್ಟುಹೋದ ಅಮೆರಿಕಾದ ರಾಕೆಟ್ಟು, ಹಾರಾಟದ ನಡುವೆ ಅಪಘಾತಕ್ಕೀಡಾದ ವರ್ಜಿನ್ ಗೆಲಾಕ್ಟಿಕ್ ಅಂತರಿಕ್ಷವಾಹನ - ಎಲ್ಲದರ ಸುದ್ದಿಯೂ ನಮ್ಮನ್ನು ತಲುಪಿದೆ.


ಪ್ರತ್ಯೇಕ ಸಂದರ್ಭಗಳಲ್ಲಿ ನಡೆದ ಈ ಘಟನೆಗಳ ನಡುವೆ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲವೆಂದು ತೋರಿದರೂ ಈ ಎಲ್ಲ ಪ್ರಯತ್ನಗಳ ಉದ್ದೇಶ ಹೆಚ್ಚೂಕಡಿಮೆ ಒಂದೇ ಆಗಿರುವುದನ್ನು ನಾವು ನೋಡಬಹುದು. ಗ್ರಹ-ಉಪಗ್ರಹಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳುವುದು, ಅಂತರಿಕ್ಷದ ನಿಲ್ದಾಣದಲ್ಲಿ ಉಳಿದುಕೊಂಡು ಸಂಶೋಧನೆಗಳನ್ನು ನಡೆಸುವುದು, ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಸುಲಭ ವಿಧಾನಗಳನ್ನು ರೂಪಿಸುವುದು - ಎಲ್ಲದರ ಹಿಂದೆಯೂ ಇರುವ ಆಶಯ ಒಂದೇ: ಮಾನವ ಚಟುವಟಿಕೆಗಳ ವ್ಯಾಪ್ತಿಯನ್ನು ಭೂಮಿಯಿಂದಾಚೆಗೂ ವಿಸ್ತರಿಸುವುದು!

ಈ ಕಲ್ಪನೆ ಕಾರ್ಟೂನು ಚಿತ್ರ, ಕತೆ-ಕಾದಂಬರಿಗಳಿಂದ ವೈಜ್ಞಾನಿಕ ಸಂಶೋಧನೆಗಳವರೆಗೆ ಪ್ರತಿಯೊಂದು ಕ್ಷೇತ್ರದ ಆಸಕ್ತಿಯನ್ನೂ ಕೆರಳಿಸುತ್ತ ಬಂದಿದೆ. ಇತರ ಗ್ರಹಗಳಲ್ಲಿ ಜೀವಿಗಳಿರಬಹುದೆ, ಆ ಜೀವಿಗಳೊಡನೆ ನಾವು ಸಂಪರ್ಕ ಬೆಳೆಸಬಹುದೆ, ಮುಂದೊಮ್ಮೆ ಮನುಷ್ಯರು ಭೂಮಿಯಿಂದಾಚೆಗೂ ಹೋಗಿ ನೆಲೆಸಬಹುದೆ ಎನ್ನುವಂತಹ ಪ್ರಶ್ನೆಗಳಿಗೆ ಉತ್ತರಹುಡುಕುವ ಪ್ರಯತ್ನಗಳು ಬಹಳ ಸಮಯದಿಂದಲೇ ನಡೆಯುತ್ತಿವೆ.

ಈ ಬಗ್ಗೆ ವೈಜ್ಞಾನಿಕ ಸಂಶೋಧನೆಯ ಕೆಲಸವೆಲ್ಲ ಬಹುಮಟ್ಟಿಗೆ ಸರಕಾರಿ ಆಶ್ರಯದಲ್ಲಿ ನಡೆಯುತ್ತಿದ್ದುದರಿಂದ ಜನಸಾಮಾನ್ಯರಿಗೆ ಬಾಹ್ಯಾಕಾಶದೊಡನೆ ಒಡನಾಡಲು ಹೆಚ್ಚು ಅವಕಾಶಗಳಿರಲಿಲ್ಲ. ಬಾಹ್ಯಾಕಾಶ ಸಂಶೋಧನೆಗಳ ಕುರಿತು ತಿಳಿದುಕೊಳ್ಳುವುದು ಇಲ್ಲವೇ ಆ ಕುರಿತ ಕಾಲ್ಪನಿಕ ಸೃಷ್ಟಿಗಳನ್ನು ದೃಶ್ಯ ಅಥವಾ ಪಠ್ಯ ಮಾಧ್ಯಮದಲ್ಲಿ ಅನುಭವಿಸುವುದಷ್ಟೇ ನಮಗಿದ್ದ ಆಯ್ಕೆ.

ಈ ಪರಿಸ್ಥಿತಿಯನ್ನು ಬದಲಿಸಿದ್ದು ಬಾಹ್ಯಾಕಾಶ ಪ್ರವಾಸೋದ್ಯಮ ಎನ್ನುವ ಪರಿಕಲ್ಪನೆ. ಇದು ಮೊದಲಿಗೆ ಜನ್ಮತಳೆದದ್ದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಅಂಗಳದಲ್ಲಿ. ಬಾಹ್ಯಾಕಾಶ ಪ್ರವಾಸ ಕೇವಲ ವಿಜ್ಞಾನಿಗಳಿಗೆ ಮಾತ್ರವೇ ಸೀಮಿತವಾಗದೆ ಎಲ್ಲರಿಗೂ ಲಭಿಸುವಂತಾಗಬೇಕು ಎಂಬುದು ಈ ಕಲ್ಪನೆಯ ಮೂಲ ಉದ್ದೇಶವಾಗಿತ್ತು.

ಇದು ಮೊದಲ ಬಾರಿಗೆ ಕಾರ್ಯರೂಪಕ್ಕೆ ಇಳಿದದ್ದು ೨೦೦೧ರಲ್ಲಿ. ಆ ವರ್ಷ ರಷ್ಯಾದ ಸೂಯೆಜ್ ರಾಕೆಟ್‌ನ ಯಾತ್ರಿಯಾಗಿ ಅಂತರಿಕ್ಷಕ್ಕೆ ಹೋಗಿಬಂದ ಅಮೆರಿಕಾದ ಡೆನಿಸ್ ಟಿಟೋ ವಿಶ್ವದ ಪ್ರಪ್ರಥಮ ಅಂತರಿಕ್ಷ ಪ್ರವಾಸಿಗ ಎಂಬ ಹಣೆಪಟ್ಟಿಗೆ ಭಾಜನರಾಗಿ ಭಾರೀ ಸುದ್ದಿಮಾಡಿದ್ದರು. ಆನಂತರ ೨೦೦೨ರಲ್ಲಿ ದಕ್ಷಿಣ ಆಫ್ರಿಕಾದ ಮಾರ್ಕ್ ಷಟಲ್‌ವರ್ಥ್ ಕೂಡ ಅಂತರಿಕ್ಷಕ್ಕೆ ಪ್ರಯಾಣ ಕೈಗೊಂಡಿದ್ದರು. ಒಟ್ಟಾರೆಯಾಗಿ ೨೦೦೧-೦೯ರ ಅವಧಿಯಲ್ಲಿ ಏಳು ಜನ ಯಾತ್ರಿಕರು ಒಟ್ಟು ಎಂಟು ಬಾರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿಬಂದಿದ್ದರು.



ಆದರೆ ಇವರೆಲ್ಲ ಅಂತರಿಕ್ಷಕ್ಕೆ ಹೋಗಿಬರುವ ಅನುಭವಕ್ಕಾಗಿ ಕಲ್ಪಿಸಿಕೊಳ್ಳಲೂ ಕಷ್ಟವಾಗುವಷ್ಟು ದೊಡ್ಡ ಮೊತ್ತದ ಹಣವನ್ನು (ಪ್ರತಿ ಪ್ರವಾಸಕ್ಕೆ ಎರಡರಿಂದ ನಾಲ್ಕು ಕೋಟಿ ಡಾಲರ್) ವೆಚ್ಚಮಾಡಬೇಕಾಗಿ ಬಂದಿತ್ತು. ಬಾಹ್ಯಾಕಾಶ ಪ್ರವಾಸದ ಟಿಕೇಟಿನ ಬೆಲೆ ಗಮನಾರ್ಹವಾಗಿ ಕಡಿಮೆಯಾದರೆ ಮಾತ್ರವೇ ಜನಸಾಮಾನ್ಯರೂ ಬಾಹ್ಯಾಕಾಶಕ್ಕೆ ಹೋಗಿಬರುವುದು ಸಾಧ್ಯವಾಗುತ್ತದೆ ಎಂದು ಸಂಸ್ಥೆಗಳು ಅರಿತುಕೊಂಡದ್ದು ಇದೇ ಸಂದರ್ಭದಲ್ಲಿ. ಸದ್ಯ ಈ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅನೇಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿದ್ದು ಸರಿಸುಮಾರು ಇದೇ ಅವಧಿಯಲ್ಲೇ.

ಇಂಥ ಸಂಸ್ಥೆಗಳಲ್ಲೊಂದು ಅಮೆರಿಕಾದ ಸ್ಕೇಲ್ಡ್ ಕಾಂಪೋಸಿಟ್ಸ್. ಅಂತರಿಕ್ಷಯಾತ್ರೆಯನ್ನು  ಸುಲಭವಾಗಿಸುವ ನಿಟ್ಟಿನಲ್ಲಿ ಅತ್ಯುತ್ತಮ  ಪ್ರಯತ್ನಕ್ಕಾಗಿ ಮೀಸಲಾಗಿದ್ದ ಒಂದು ಕೋಟಿ ಡಾಲರ್  ಮೊತ್ತದ 'ಎಕ್ಸ್ ಪ್ರೈಜ್' ಬಹುಮಾನ ಗೆದ್ದ ಸಂಸ್ಥೆ ಇದು. ಈ ಸಂಸ್ಥೆ ತಯಾರಿಸಿದ 'ಸ್ಪೇಸ್ ಶಿಪ್ ಒನ್' ಎಂಬ ಅಂತರಿಕ್ಷವಾಹನ ೨೦೦೪ರಲ್ಲಿ ಯಶಸ್ವಿ ಯಾನ ಕೈಗೊಂಡು ಭೂಮಿಯ ಮೇಲಿಂದ ನೂರಾ ಹತ್ತು ಕಿಲೋಮೀಟರುಗಳಷ್ಟು ಎತ್ತರದವರೆಗೆ ಹೋಗಿಬಂದಿತ್ತು.

ಅಂತರಿಕ್ಷ ಪ್ರವಾಸದ  ಕಮರ್ಷಿಯಲ್ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚಿಂತನೆ ನಡೆದದ್ದೇ ಆಗ. ಎಲ್ಲ ಸರಿಯಾಗಿ ನಡೆದರೆ ಇದೆಷ್ಟು ದೊಡ್ಡ ಪ್ರಮಾಣದ ಮಾರುಕಟ್ಟೆಯಾಗಬಲ್ಲದು ಎಂದು ಅರಿತುಕೊಂಡ ವರ್ಜಿನ್ ಸಂಸ್ಥೆ ತಕ್ಷಣವೇ ಸ್ಕೇಲ್ಡ್ ಕಾಂಪೋಸಿಟ್ಸ್ ಜೊತೆಗೆ ಕೈಗೂಡಿಸಿತು; ವರ್ಜಿನ್ ಗೆಲಾಕ್ಟಿಕ್ ಎಂಬ ಸಂಸ್ಥೆಯನ್ನೂ ಹುಟ್ಟುಹಾಕಿತು. ಈಚೆಗೆ ಅಪಘಾತಕ್ಕೀಡಾದ ಅಂತರಿಕ್ಷವಾಹನ ಇದೇ ವರ್ಜಿನ್ ಗೆಲಾಕ್ಟಿಕ್ ಸಂಸ್ಥೆಯದ್ದು.

ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಪ್ರಾಯೋಗಿಕ ಹಂತದಿಂದ ಮುಂದಕ್ಕೆ, ಒಂದು ಉದ್ದಿಮೆಯಾಗಿ ರೂಪಿಸುವ ನಿಟ್ಟಿನತ್ತ ಕೊಂಡೊಯ್ದದ್ದು ವರ್ಜಿನ್ ಸಂಸ್ಥೆಯ ಮುಖ್ಯಸ್ಥ ರಿಚರ್ಡ್ ಬ್ರಾನ್ಸನ್ ಸಾಧನೆ. ಬಾಹ್ಯಾಕಾಶಕ್ಕೆ ಪ್ರವಾಸ ಆಯೋಜಿಸುವ ಬಗ್ಗೆ ಆತನ ವಿಶ್ವಾಸ ಮತ್ತು ಯೋಜನೆಯ ಸ್ಪಷ್ಟತೆ ಎಷ್ಟರಮಟ್ಟದಲ್ಲಿದ್ದವೆಂದರೆ ವರ್ಜಿನ್ ಸಂಸ್ಥೆ ಸುಮಾರು ಏಳುನೂರಕ್ಕೂ ಹೆಚ್ಚು ಗ್ರಾಹಕರಿಂದ ಈಗಾಗಲೇ ಮುಂಗಡ ಹಣವನ್ನೂ ಪಡೆದುಕೊಂಡುಬಿಟ್ಟಿತ್ತು. ಅವರಲ್ಲಿ ಪ್ರತಿಯೊಬ್ಬರೂ ಸುಮಾರು ಎರಡರಿಂದ ಎರಡೂವರೆ ಲಕ್ಷ ಅಮೆರಿಕನ್ ಡಾಲರುಗಳಷ್ಟು ಹಣ ಪಾವತಿಸಿದ್ದರು ಎಂದು ವರದಿಗಳು ಹೇಳುತ್ತವೆ.

ಅಂದಹಾಗೆ ವರ್ಜಿನ್ ಸಂಸ್ಥೆ ಯೋಜಿಸಿದ್ದ ಈ "ಪ್ರವಾಸ" ದಿನಗಳ-ವಾರಗಳಷ್ಟು ಅವಧಿಯದೇನಲ್ಲ. ಈ ಪ್ರವಾಸದ ಒಟ್ಟು ಅವಧಿ ಸುಮಾರು ಎರಡು ಗಂಟೆಗಳ ಆಸುಪಾಸಿನದು, ಅಷ್ಟೆ.

ವರ್ಜಿನ್ ಗೆಲಾಕ್ಟಿಕ್‌ನ ಪ್ರಮುಖ ಕೇಂದ್ರ ಇರುವುದು ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಮೊಹಾವೀ ಮರುಭೂಮಿಯಲ್ಲಿ. ವಿಮಾನಗಳಿಗೆ ಏರ್‌ಪೋರ್ಟ್ ಇದ್ದಂತೆ ಇದು ಬಾಹ್ಯಾಕಾಶ ವಾಹನಗಳಿಗೆ ಸ್ಪೇಸ್‌ಪೋರ್ಟ್. ಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ 'ಸ್ಪೇಸ್ ಶಿಪ್ ಟೂ' ಅಂತರಿಕ್ಷವಾಹನ (ಎಕ್ಸ್ ಪ್ರೈಜ್ ಗಳಿಸಿದ 'ಸ್ಪೇಸ್ ಶಿಪ್ ಒನ್'ನ ಸುಧಾರಿತ ರೂಪ) ಹೊರಡುವುದು ಇಲ್ಲಿಂದಲೇ. 'ವೈಟ್ ನೈಟ್' ಎಂಬ ಮಾತೃನೌಕೆಯ ಬೆನ್ನೇರಿ ಸವಾರಿ ಹೊರಡುವ ಈ ಅಂತರಿಕ್ಷವಾಹನ ಸುಮಾರು ಹದಿನೈದು ಕಿಲೋಮೀಟರು ಎತ್ತರ ತಲುಪಿದ ಮೇಲೆ ಅದರಿಂದ ಬೇರೆಯಾಗಿ ಅತಿವೇಗದಲ್ಲಿ ಮೇಲ್ಮುಖ ಹಾರಾಟ ಪ್ರಾರಂಭಿಸುತ್ತದೆ, ಕೆಲವೇ ಕ್ಷಣಗಳಲ್ಲಿ ಭೂಮಂಡಲದಾಚೆಯ ಪ್ರದೇಶ ತಲುಪಿಬಿಡುತ್ತದೆ. ಬಾಹ್ಯಾಕಾಶದ ಗುರುತ್ವಾಕರ್ಷಣೆ ಇರುವುದಿಲ್ಲವಲ್ಲ, ಹಾಗಾಗಿ ಯಾತ್ರಿಗಳು ಅಲ್ಲಿ ಭಾರರಾಹಿತ್ಯದ ಅನುಭವ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ. ಸುಮಾರು ಐದು ನಿಮಿಷ ಭಾರರಹಿತರಾಗಿ ತೇಲಾಡುವಷ್ಟರಲ್ಲೇ ಸ್ಪೇಸ್ ಶಿಪ್ ಟೂ ಮರಳಿ ಭೂಮಿಯತ್ತ ಹೊರಟುಬಿಡುತ್ತದೆ, ನಿಧಾನವಾಗಿ ತೇಲುತ್ತ ಬಂದು ಮರಳಿ ಸ್ಪೇಸ್‌ಪೋರ್ಟಿಗೆ ಸೇರುತ್ತದೆ!



ವರ್ಜಿನ್ ಸಂಸ್ಥೆಗೆ ಮುಂಗಡ ಹಣ ಪಾವತಿಸಿ ಕಾಯುತ್ತಿದ್ದರಲ್ಲ, ಅವರೆಲ್ಲ ಹೋಗಬೇಕಿದ್ದದ್ದು ಇಂತಹುದೇ ಒಂದು ಪ್ರವಾಸಕ್ಕೆ. ಅಪಘಾತವಾದ ಸಂದರ್ಭದಲ್ಲಿ ನಡೆಯುತ್ತಿದ್ದದ್ದು ಇಂತಹುದೇ ಪ್ರವಾಸವೊಂದರ ತಾಲೀಮು. ಅದರಲ್ಲಿ ಸುಟ್ಟುಹೋದದ್ದು ಇದೇ ಸ್ಪೇಸ್ ಶಿಪ್ ಟೂ. ಈ ಬಾರಿಯ ಹಾರಾಟದಲ್ಲಿ ಅದು ಹೊಸದೊಂದು ಬಗೆಯ ಇಂಧನ ಬಳಸುವ ಪ್ರಯತ್ನದಲ್ಲಿತ್ತು.

ಅಪಘಾತದ ಸುದ್ದಿ ಹರಡುತ್ತಿದ್ದಂತೆ ಹಲವರು ಬಾಹ್ಯಾಕಾಶ ಪ್ರವಾಸೋದ್ಯಮದ ಭವಿಷ್ಯವನ್ನೇ ಪ್ರಶ್ನಿಸುತ್ತಿದ್ದಾರೆ. ವರ್ಜಿನ್ ಸಂಸ್ಥೆಗೆ ಮುಂಗಡ ಹಣ ಕೊಟ್ಟಿದ್ದ ಹಲವು ಗ್ರಾಹಕರು ಅದನ್ನು ವಾಪಸ್ ಕೇಳುತ್ತಿರುವ ಸುದ್ದಿಯೂ ಇದೆ.

ಈ ಗೊಂದಲದ ನಡುವೆ ವರ್ಜಿನ್ ಗೆಲಾಕ್ಟಿಕ್ ಸಂಸ್ಥೆಯ ಪ್ರವಾಸಗಳ ಪ್ರಾರಂಭ ಅನಿರ್ದಿಷ್ಟಕಾಲ ಮುಂದೆಹೋಗಿದೆ. ಇದೇ ಸಂದರ್ಭದಲ್ಲಿ ವರ್ಜಿನ್ ಸಂಸ್ಥೆ ತನ್ನ ಪ್ರಯತ್ನಗಳು ನಿಲ್ಲುವುದಿಲ್ಲ ಎಂದು ಘೋಷಿಸಿದ್ದೂ ಆಗಿದೆ.

"ವರ್ಜಿನ್ ಸಂಸ್ಥೆಯ ಅಂತರಿಕ್ಷವಾಹನ ಅಪಘಾತಕ್ಕೀಡಾದ ಮಾತ್ರಕ್ಕೆ ಬಾಹ್ಯಾಕಾಶ ಪ್ರವಾಸೋದ್ಯಮದ ಕನಸೇ ಮುರುಟಿಹೋಗುತ್ತದೆಯೇ?" ಎಂದು ಕೇಳುವವರಿಗೆ "ಹಾಗೇನೂ ಇಲ್ಲ" ಎಂದೇ ಉತ್ತರಿಸಬೇಕಾಗುತ್ತದೆ. ಏಕೆಂದರೆ ಸ್ಪೇಸ್‌ಎಕ್ಸ್, ಸ್ಪೇಸ್ ಅಡ್ವೆಂಚರ್ಸ್, ಬ್ಲೂ ಆರಿಜಿನ್, ಸ್ಟ್ರಾಟೋಲಾಂಚ್ ಸಿಸ್ಟಮ್ಸ್, ಎಕ್ಸ್‌ಕಾರ್ ಮುಂತಾದ ಅನೇಕ ಸಂಸ್ಥೆಗಳು ಈ ಕುರಿತು ಹಲವಾರು ವರ್ಷಗಳಿಂದ ಕೆಲಸಮಾಡುತ್ತಿವೆ. ವಿಮಾನಯಾನ ಕ್ಷೇತ್ರದಲ್ಲಿ ಪ್ರಖ್ಯಾತವಾಗಿರುವ ಬೋಯಿಂಗ್‌ನಂತಹ ಸಂಸ್ಥೆಗಳು, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುಮಾಡಿದ ಜೆಫ್ ಬೆಜೋಸ್ - ಪಾಲ್ ಅಲೆನ್ ಮುಂತಾದ ವ್ಯಕ್ತಿಗಳೂ ಈ ಪಟ್ಟಿಯಲ್ಲಿರುವುದು ವಿಶೇಷ. ಪ್ರವಾಸಿಗಳು ಹಾಗಿರಲಿ, ಅಮೆರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ತನ್ನ ಚಟುವಟಿಕೆಗಳಲ್ಲಿ ಖಾಸಗಿ ಸಂಸ್ಥೆಗಳ ನೆರವು ಪಡೆಯುತ್ತಿದೆ.

ಅಂತರಿಕ್ಷವಾಹನಗಳ ಉಡಾವಣೆಗೆ ಬಳಕೆಯಾಗುತ್ತವಲ್ಲ ರಾಕೆಟ್ಟುಗಳು, ಅವನ್ನು ಮತ್ತೆಮತ್ತೆ ಬಳಸುವಂತಾದರೆ ಬಾಹ್ಯಾಕಾಶಕ್ಕೆ ಹೋಗಿಬರುವ ವೆಚ್ಚದಲ್ಲಿ ಭಾರೀ ಉಳಿತಾಯ ಸಾಧ್ಯವಾಗುತ್ತದೆ ಎಂದು ಸ್ಪೇಸ್‌ಎಕ್ಸ್ ಸಂಸ್ಥೆ ನಂಬಿದೆ. ಅಂತಹ ರಾಕೆಟ್ಟುಗಳನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಕೆಲಸಮಾಡುತ್ತಿದೆ.

ಸ್ಪೇಸ್ ಅಡ್ವೆಂಚರ್ಸ್ ಸಂಸ್ಥೆಯಂತೂ ಪ್ರವಾಸಿಗರನ್ನು ಚಂದ್ರನ ಬಳಿಗೆ ಕರೆದೊಯ್ದು ಸೈಟ್ ಸೀಯಿಂಗ್ ಮಾಡಿಸುವ ಯೋಜನೆ ರೂಪಿಸಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಕಳೆದ ದಶಕದಲ್ಲಿ ಡೆನಿಸ್ ಟಿಟೋ, ಮಾರ್ಕ್ ಷಟಲ್‌ವರ್ಥ್ ಮುಂತಾದವರೆಲ್ಲ ಮಾಡಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹೋಗಿಬರುವ ಅವಕಾಶವನ್ನೂ ಅದು ಆಸಕ್ತರಿಗೆ ಒದಗಿಸಿಕೊಡಲಿದೆ. ಭಾರರಾಹಿತ್ಯ ಅನುಭವಿಸುವ ಆಸೆಯಿದೆ, ಆದರೆ ಬಾಹ್ಯಾಕಾಶ ಪ್ರವಾಸಕ್ಕೆ ಕೊಡುವಷ್ಟು ಹಣವಾಗಲಿ ವರ್ಷಗಟ್ಟಲೆ ಕಾಯುವ ವ್ಯವಧಾನವಾಗಲಿ ಇಲ್ಲ ಎನ್ನುವವರಿಗೆ ವಿಮಾನಯಾನದಲ್ಲೇ ಭಾರರಾಹಿತ್ಯ ಅನುಭವಿಸುವ ಆಯ್ಕೆ ಕೂಡ ಇದೆ.

ಬಾಹ್ಯಾಕಾಶಕ್ಕೆ ಹಾಗೆ ಹೋಗಿ ಹೀಗೆ ವಾಪಸ್ ಬಂದರೆ ಅದೆಂಥ ಪ್ರವಾಸ ಎಂದು ಮೂಗುಮುರಿಯುವವರಿಗೂ ವಿಭಿನ್ನ ಆಯ್ಕೆಗಳು ರೂಪುಗೊಳ್ಳುತ್ತಿವೆ. ಬಿಗಲೋ ಏರೋಸ್ಪೇಸ್ ಎಂಬ ಸಂಸ್ಥೆ ಬಾಹ್ಯಾಕಾಶದಲ್ಲಿ ಹೋಟಲುಗಳಂತಹ ಮಾನವ ವಸತಿ ರೂಪಿಸುವ ಪ್ರಯತ್ನದಲ್ಲಿದೆ. ಕೆಲ ಸಂಸ್ಥೆಗಳು ಇನ್ನೂ ದೊಡ್ಡ ಪ್ರಮಾಣದ ಮಾನವ ವಸತಿಗಳನ್ನು ರೂಪಿಸುವುದಾಗಿಯೂ ಹೇಳಿಕೊಂಡದ್ದಿದೆ.

ಇದೆಲ್ಲ ಏನಿದ್ದರೂ ದುಡ್ಡಿದ್ದವರ ಹುಚ್ಚಾಟ, ಅಂತರಿಕ್ಷಕ್ಕೆ ಪ್ರವಾಸ ಹೋಗಿಬಂದರೆ ಏನು ಸಾಧಿಸಿದಂತಾಯಿತು ಎಂದು ಕೇಳುವವರಿಗೂ ವಿಜ್ಞಾನಿಗಳ ಬಳಿ ಉತ್ತರವಿದೆ. ಈ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳಿಂದ ಬಾಹ್ಯಾಕಾಶ ಸಂಶೋಧನೆಯಲ್ಲಂತೂ ಖಂಡಿತಾ ನೆರವು ದೊರಕುತ್ತದೆ; ಅದರ ಜೊತೆಗೆ ವಿಮಾನಯಾನ ಕ್ಷೇತ್ರಕ್ಕೂ ಅನುಕೂಲವಿದೆ ಎಂದು ಅವರು ಹೇಳುತ್ತಾರೆ. ಈ ಉದ್ದೇಶಕ್ಕಾಗಿ ರೂಪುಗೊಳ್ಳುತ್ತಿರುವ ಅಂತರಿಕ್ಷವಾಹನಗಳ ಅಭಿವೃದ್ಧಿ ಮುಂದೊಮ್ಮೆ ಹೆಚ್ಚು ಎತ್ತರ - ಅತಿವೇಗದ (ಹೈ ಆಲ್ಟಿಟ್ಯೂಡ್ - ಹೈಪರ್‌ಸಾನಿಕ್) ವಿಮಾನಯಾನಕ್ಕೆ ನಾಂದಿಹಾಡಲಿದೆ, ಮತ್ತು ಹಾಗಾದಾಗ ಹತ್ತಾರು ಸಾವಿರ ಕಿಲೋಮೀಟರುಗಳ ದೂರವನ್ನು ವಿಮಾನಗಳು ಅತ್ಯಲ್ಪ ಸಮಯದಲ್ಲಿ ಕ್ರಮಿಸುವುದು ಸಾಧ್ಯವಾಗಲಿದೆಯಂತೆ.

ಮಾರ್ಚ್ ೨೦೧೫ರ ಉತ್ಥಾನದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge