ಸೋಮವಾರ, ಮಾರ್ಚ್ 2, 2015

ಖುಲ್‌ಜಾ ಸಿಮ್ SIM!

ಟಿ. ಜಿ. ಶ್ರೀನಿಧಿ

ನಿಮ್ಮ ಮೊಬೈಲ್ ಫೋನು ಯಾವುದೇ ಇರಲಿ, ಸ್ಮಾರ್ಟ್ ಆಗಿರಲಿ ಇಲ್ಲದಿರಲಿ, ಜಿಎಸ್‌ಎಂ ತಂತ್ರಜ್ಞಾನ ಬಳಸುವುದಾದರೆ ಅದರಲ್ಲೊಂದು ಸಿಮ್ ಅಂತೂ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಮೊಬೈಲ್ ಫೋನಿಗೆ ಜೀವತುಂಬುವುದೇ ಈ ಸಿಮ್ಮು. ಕರೆಮಾಡಲು, ಎಸ್ಸೆಮ್ಮೆಸ್ ಕಳುಹಿಸಲು, ಹೋದಲ್ಲೆಲ್ಲ ಅಂತರಜಾಲ ಸಂಪರ್ಕ ಪಡೆದುಕೊಳ್ಳಲು - ಎಲ್ಲದಕ್ಕೂ ಸಿಮ್ ಬೇಕೇ ಬೇಕು.

ಸಿಮ್ ಎನ್ನುವುದು ಒಂದು ನಾಮಪದದಂತೆಯೇ ನಮ್ಮ ಶಬ್ದಭಂಡಾರಕ್ಕೆ ಸೇರಿಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಅದೊಂದು ಸಂಕ್ಷೇಪ (ಅಬ್ರೀವಿಯೇಶನ್). 'ಸಬ್‌ಸ್ಕ್ರೈಬರ್  ಐಡೆಂಟಿಫಿಕೇಶನ್ ಮಾಡ್ಯೂಲ್', ಅಂದರೆ ಚಂದಾದಾರರನ್ನು ಗುರುತಿಸುವ ಘಟಕ, ಎನ್ನುವುದು ಇದರ ಪೂರ್ಣರೂಪ.

ಮುಂದಿನ ವರ್ಷಕ್ಕೆ (೨೦೧೬) ಸಿಮ್ ಆವಿಷ್ಕಾರವಾಗಿ ಕಾಲು ಶತಮಾನ ಪೂರ್ತಿಯಾಗುತ್ತದೆ. ಈ ಅವಧಿಯಲ್ಲಿ ಸಿಮ್ ಮೇಲಿನ ಅವಲಂಬನೆ ಬೆಳೆದಿರುವ ಪರಿ ಆಶ್ಚರ್ಯಹುಟ್ಟಿಸುವಂಥದ್ದು. ನಮ್ಮ ದೇಶದಲ್ಲಿ, ಹಾಗೂ ಪ್ರಪಂಚದ ಬಹಳಷ್ಟು ಭಾಗಗಳಲ್ಲಿ, ಜನಪ್ರಿಯವಾಗಿರುವ ಜಿಎಸ್‌ಎಂ ತಂತ್ರಜ್ಞಾನ ಬಳಸುವ ಫೋನುಗಳಲ್ಲಿ ಇಂದು ಸಿಮ್ ಬಳಕೆ ಅನಿವಾರ್ಯ. ಮೊಬೈಲ್ ಸಂಪರ್ಕ ಸಿಮ್ ಮೇಲೆ ಅವಲಂಬಿತವಾಗಿರುವುದರಿಂದ ಯಾವ ದೂರವಾಣಿಯಲ್ಲಿ (ಹ್ಯಾಂಡ್‌ಸೆಟ್) ಬೇಕಿದ್ದರೂ ನಮ್ಮ ಸಿಮ್ ಬಳಸುವುದು ಸಾಧ್ಯ. ಆದರೆ ಸಿಡಿಎಂಎ ತಂತ್ರಜ್ಞಾನ ಬಳಸುವ ಜಾಲಗಳಲ್ಲಿ ಸಿಮ್ ಬಳಕೆ ಇಲ್ಲ. ಅಲ್ಲಿ ಮೊಬೈಲ್ ಸಂಪರ್ಕ ನೇರವಾಗಿ ಹ್ಯಾಂಡ್‌ಸೆಟ್ ಅನ್ನೇ ಅವಲಂಬಿಸಿರುತ್ತದೆ.

ಮೊಬೈಲ್ ಜಾಲ ಹಾಗೂ ನಮ್ಮ ದೂರವಾಣಿಯ ನಡುವೆ ಸಂಪರ್ಕ ಏರ್ಪಡಿಸುವುದರಲ್ಲಿ ಸಿಮ್‌ನದು ಪ್ರಮುಖ ಪಾತ್ರ. ಹೆಸರೇ ಹೇಳುವಂತೆ ಅದು ಮೊಬೈಲ್ ಚಂದಾದಾರರನ್ನು ಗುರುತಿಸಬೇಕಲ್ಲ, ಈ ಉದ್ದೇಶಕ್ಕಾಗಿ ಬಳಕೆಯಾಗುವ ಇಂಟರ್‌ನ್ಯಾಶನಲ್ ಮೊಬೈಲ್ ಸಬ್‌ಸ್ಕ್ರೈಬರ್ ಐಡೆಂಟಿಟಿ (ಐಎಂಎಸ್‌ಐ) ಸಂಖ್ಯೆ ಸಿಮ್‌ನಲ್ಲಿ ಶೇಖರವಾಗಿರುತ್ತದೆ. ಈ ಸಂಖ್ಯೆಯನ್ನು ಬಳಸಿಕೊಂಡು ಮೊಬೈಲ್ ಚಂದಾದಾರರನ್ನು ಗುರುತಿಸಿ ಅವರ ದೂರವಾಣಿಗೆ ಜಾಲದ ಸಂಪರ್ಕ ಕಲ್ಪಿಸಿಕೊಡುವ ಕೆಲಸವನ್ನು ಸಿಮ್ ಮಾಡುತ್ತದೆ.

ಇಷ್ಟೆಲ್ಲ ಕೆಲಸಮಾಡುವ ಸಿಮ್‌ಗೂ ಒಂದು ಗುರುತು ಬೇಕಲ್ಲ, ಇದಕ್ಕಾಗಿ ಇಂಟಿಗ್ರೇಟೆಡ್ ಸರ್ಕ್ಯೂಟ್ ಕಾರ್ಡ್ ಐಡೆಂಟಿಫೈಯರ್ (ಐಸಿಸಿಐಡಿ) ಎಂಬ ಸಂಖ್ಯೆ ಬಳಕೆಯಾಗುತ್ತದೆ. ಕಾಲೇಜಿನ ವಿದ್ಯಾರ್ಥಿಗಳಿಗೆ, ಕಚೇರಿ ಉದ್ಯೋಗಿಗಳಿಗೆಲ್ಲ ಇರುವಂತೆ ಇದು ಸಿಮ್ ಕಾರ್ಡಿನ ಐಡಿ ಕಾರ್ಡು. ಪ್ರಪಂಚದಲ್ಲಿರುವ ಪ್ರತಿಯೊಂದು ಸಿಮ್‌ಗೂ ಪ್ರತ್ಯೇಕ ಐಸಿಸಿಐಡಿ ಇರಬೇಕು ಎನ್ನುವುದು ನಿಯಮ.

ಫೋನುಗಳ ಸುದ್ದಿ ಬಂದಾಗ ಐಎಂಇಐ ಎನ್ನುವ ಇನ್ನೊಂದು ಸಂಖ್ಯೆಯ ಪ್ರಸ್ತಾಪವೂ ಬರುತ್ತದಲ್ಲ, ಅದಕ್ಕೂ ಸಿಮ್‌ಗೂ ಯಾವ ಸಂಬಂಧವೂ ಇಲ್ಲ. 'ಇಂಟರ್‌ನ್ಯಾಶನಲ್ ಮೊಬೈಲ್ ಇಕ್ವಿಪ್ಮೆಂಟ್ ಐಡೆಂಟಿಟಿ' ಎಂಬ ಹೆಸರಿನ ಹ್ರಸ್ವರೂಪವಾದ ಐಎಂಇಐ, ಪ್ರಪಂಚದಲ್ಲಿರುವ ಪ್ರತಿಯೊಂದು ಮೊಬೈಲ್ ದೂರವಾಣಿಯನ್ನೂ ಪ್ರತ್ಯೇಕವಾಗಿ ಗುರುತಿಸುವ ಸಂಖ್ಯೆ.



ಈಗಿನ ಫೋನುಗಳಲ್ಲಿ ಗಿಗಾಬೈಟ್‌ಗಟ್ಟಲೆ ಮಾಹಿತಿ ಶೇಖರಣಾ ಸಾಮರ್ಥ್ಯ, ಅಂದರೆ ಮೆಮೊರಿ, ಇರುವುದು ನಮಗೆಲ್ಲ ಗೊತ್ತೇ ಇದೆ. ಅದರ ಜೊತೆಗೆ ಸಿಮ್‌ನಲ್ಲಿ ಕೂಡ ಅಲ್ಪಪ್ರಮಾಣದ (ಕೆಲವು ಕಿಲೋಬೈಟ್‌ಗಳಷ್ಟು) ಮಾಹಿತಿ ಶೇಖರಣಾ ಸಾಮರ್ಥ್ಯ ಇರುತ್ತದೆ. ನಮ್ಮ ಮೊಬೈಲಿನಲ್ಲಿ ದಾಖಲಾಗಿರುವ ದೂರವಾಣಿ ಸಂಖ್ಯೆಗಳು ಕೆಲವೊಮ್ಮೆ ಸಿಮ್‌ನಲ್ಲೂ ಶೇಖರವಾಗುತ್ತವಲ್ಲ (ಫೋನ್ ಬದಲಿಸುವಾಗ ನಮ್ಮ ಬಳಗದ ದೂರವಾಣಿ ಸಂಖ್ಯೆಗಳನ್ನು ಸಿಮ್‌ಗೆ ವರ್ಗಾಯಿಸುವ - ಹಳೆಯ - ಅಭ್ಯಾಸ ನೆನಪಿಸಿಕೊಳ್ಳಿ), ಅವು ಇದೇ ಮೆಮೊರಿಯನ್ನು ಬಳಸುತ್ತವೆ. ರೋಮಿಂಗ್‌ನಲ್ಲಿರುವಾಗ ನಮ್ಮ ದೂರವಾಣಿ ಯಾವ ಸಂಸ್ಥೆಯ ಸಂಪರ್ಕ ಬಳಸಬೇಕು ಎಂದು ನಿರ್ದೇಶಿಸುವ ಅಂಶಗಳನ್ನು ಶೇಖರಿಸಲೂ ಮೊಬೈಲ್ ಸಂಸ್ಥೆಗಳು ಈ ಮೆಮೊರಿಯನ್ನು ಬಳಸುವುದು ಸಾಧ್ಯ.

ಮೊಬೈಲ್ ತಂತ್ರಜ್ಞಾನ ಬೆಳೆದಂತೆ ಏನೆಲ್ಲ ಬದಲಾವಣೆಗಳಾಗಿವೆಯಲ್ಲ, ಆ ಸಾಲಿನಲ್ಲಿ ಸಿಮ್ ಗಾತ್ರದ ಬದಲಾವಣೆಗೂ ಸ್ಥಾನವಿದೆ. ಮೊದಮೊದಲು ಮಾರುಕಟ್ಟೆಗೆ ಬಂದ ಸಿಮ್‌ಗಳು ಇಂದಿನ ಕ್ರೆಡಿಟ್ ಕಾರ್ಡಿನಷ್ಟು ದೊಡ್ಡದಾಗಿದ್ದವಂತೆ! ಆಮೇಲೆ ಬಂದದ್ದು, ಸಾಕಷ್ಟು ಸಮಯ ಚಲಾವಣೆಯಲ್ಲಿದ್ದದ್ದು, ಪುಟ್ಟ ಗಾತ್ರದ 'ಮಿನಿ ಸಿಮ್'ಗಳು. ಮಿನಿ ಸಿಮ್ ಗಾತ್ರದ ಅರ್ಧದಷ್ಟಿರುವ 'ಮೈಕ್ರೋ ಸಿಮ್', ಹಾಗೂ ಅದಕ್ಕಿಂತ ಚಿಕ್ಕದಾದ 'ನ್ಯಾನೋ ಸಿಮ್'ಗಳು ಇದೀಗ ವ್ಯಾಪಕವಾಗಿ ಬಳಕೆಯಲ್ಲಿವೆ. ಸಿಮ್ ಗಾತ್ರ ಇಷ್ಟೆಲ್ಲ ಬದಲಾಗಿದೆಯಲ್ಲ, ಅದರ ಗಾತ್ರಕ್ಕೂ ಕಾರ್ಯಾಚರಣೆಯ ವಿಧಾನಕ್ಕೂ ಮೊದಲಿಂದಲೇ ಯಾವ ಸಂಬಂಧವೂ ಇರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ಅಂದರೆ, ಸಿಮ್ ಗಾತ್ರ ಕಡಿಮೆಯಾಗುತ್ತಿರುವುದು ಮೊಬೈಲ್ ಫೋನಿನೊಳಗೆ ಕಡಿಮೆಯಾಗುತ್ತಿರುವ ಸ್ಥಳಾವಕಾಶಕ್ಕೆ ಹೊಂದಿಕೊಳ್ಳಲಷ್ಟೆ ಎನ್ನಬಹುದು.

ಇಂದಿನ ಮೊಬೈಲ್ ತಂತ್ರಾಂಶಗಳು ಮಾಡದ ಕೆಲಸವೇ ಇಲ್ಲ ಎನ್ನಬೇಕು. ಹಾಗಿರುವಾಗ ಸಿಮ್ ಯಾಕಿನ್ನೂ ಯಂತ್ರಾಂಶವಾಗಿಯೇ ಉಳಿದಿದೆ? ಈ ಪ್ರಶ್ನೆಯನ್ನು ತಂತ್ರಜ್ಞರೂ ಕೇಳಿಕೊಳ್ಳುತ್ತಿದ್ದಾರೆ, ಹಾಗೂ ಅದರ ಪರಿಣಾಮವಾಗಿ ಸಿಮ್ ಮಾಡುವ ಕೆಲಸವನ್ನು ತಂತ್ರಾಂಶವೊಂದಕ್ಕೆ ವಹಿಸಿಕೊಡುವ ಪ್ರಯತ್ನಗಳೂ ಸಾಗಿವೆ. ಸದ್ಯ ಅಂತಹುದೊಂದು ವ್ಯವಸ್ಥೆಯ ಸುರಕ್ಷತೆಯ ಬಗೆಗಿರುವ ಪ್ರಶ್ನೆಗಳು ಬಗೆಹರಿದರೆ ನಮ್ಮ ಫೋನಿನಲ್ಲಿ ತಂತ್ರಾಂಶವೇ ಸಿಮ್ ಕೆಲಸ ಮಾಡುವ ಸಮಯವೂ ಬರಬಹುದು.

ಮಾರ್ಚ್ ೨, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಪರಶು.., ಹೇಳಿದರು...

ನಮ್ಮ ಫೋನಿನಲ್ಲಿ ತಂತ್ರಾಂಶವೇ ಸಿಮ್ ಕೆಲಸ ಮಾಡುವ ಸಮಯವೂ ಬರಬಹುದು ನಿಜ.. ವಾಟ್ಸ್ ಆ್ಯಪ್ ತಂತ್ರಾಂಶ ಈಗಾಗಲೇ ಈ ಕಾರ್ಯ ಮಾಡುತ್ತಿದೆ ಅನಿಸುತ್ತಿದೆ. ಒಂದು ಸಾರಿ ವಾಟ್ಸ್ಆಪ್ ನಲ್ಲಿ ನೊಂದಾಯಿಸಿ ಕೊಂಡರೆ ಆ ಸಿಮ್ ಇಲ್ಲದೆನೇ ಸಂದೇಶ ಕಳುಹಿಸಲು, ಚಿತ್ರ ವಿಡಿಯೋ ಕಳುಹಿಸಲು ಸಹಕರಿಸುತ್ತಿದೆ. ಕರೆ ಮಾಡುವ ಸೌಲಭ್ಯವನ್ನೂ ಒಳಗೊಂಡ ಇಂತಹ ಉತ್ಕೃಷ್ಟ ತಂತ್ರಾಂಶಗಳು ಬಂದರೆ ಸಿಮ್ ಕಾರ್ಡ್ ಕೇವಲ ನೊಂದಣಿಗೆ ಮಾತ್ರ ಅಗತ್ಯವಾಗಬಹುದು.

badge