ಬುಧವಾರ, ಮೇ 29, 2019

ಐಟಿ ಲೋಕಕ್ಕೆ ಹೊಳಪಿನ ಅಂಚು: ಎಡ್ಜ್ ಕಂಪ್ಯೂಟಿಂಗ್

ಟಿ. ಜಿ. ಶ್ರೀನಿಧಿ

ಬಹಳ ಹಿಂದೆ, ಕಂಪ್ಯೂಟರುಗಳನ್ನು ಬಳಸಿ ಮಾಡಬಹುದಾದ ಕೆಲಸಗಳೆಲ್ಲ ನಿರ್ದಿಷ್ಟ ಕಂಪ್ಯೂಟರಿಗೆ ಮಾತ್ರವೇ ಸೀಮಿತವಾಗಿರುತ್ತಿದ್ದವು. ಅಂದರೆ, ಬಳಕೆದಾರರು ತಮ್ಮ ಕಂಪ್ಯೂಟರಿನ ಎದುರಿಗಿದ್ದರಷ್ಟೇ ಅದರ ಉಪಯೋಗ ಪಡೆದುಕೊಳ್ಳುವುದು ಸಾಧ್ಯವಿತ್ತು. ಆಮೇಲೆ, ವೈಯಕ್ತಿಕ ಕಂಪ್ಯೂಟರುಗಳು ಬಂದಾಗ, ಕಂಪ್ಯೂಟರುಗಳು ನಮ್ಮ ಮನೆಗೇ ಬಂದವು. ಅಂತರಜಾಲ ರೂಪುಗೊಂಡ ಮೇಲಂತೂ ಪ್ರಪಂಚದ ಮೂಲೆಮೂಲೆಗಳಲ್ಲಿರುವ ಕಂಪ್ಯೂಟರುಗಳ ನಡುವೆ ಸಂಪರ್ಕ ಸುಲಭಸಾಧ್ಯವಾಯಿತು.

ಸದ್ಯ ಕಂಪ್ಯೂಟರಿನಲ್ಲಿ ನಮ್ಮ ವ್ಯವಹಾರದ ಬಹುಪಾಲು ಅಂತರಜಾಲದ ಮೂಲಕವೇ ನಡೆಯುತ್ತದೆ. ಇಮೇಲ್ ಸಂದೇಶಗಳಿರಲಿ, ಉಳಿಸಿಟ್ಟ ಕಡತಗಳೇ ಇರಲಿ - ಯಾವುದೇ ಕಂಪ್ಯೂಟರ್ ಅಥವಾ ಮೊಬೈಲಿನಿಂದ ಎಲ್ಲಿ ಬೇಕಾದರೂ ನಾವು ಅವನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ. ಕಂಪ್ಯೂಟರಿನಲ್ಲಿ ಜೀಬಿಗಟ್ಟಲೆ ಹಾಡುಗಳನ್ನು, ಸಿನಿಮಾಗಳನ್ನು ಉಳಿಸಿಟ್ಟುಕೊಳ್ಳುತ್ತಿದ್ದವರು ಇಂದು ಅದನ್ನೆಲ್ಲ ಅಂತರಜಾಲದ ಮೂಲಕವೇ, ತಮಗೆ ಬೇಕೆನಿಸಿದಾಗ, ಪಡೆದುಕೊಳ್ಳುತ್ತಿದ್ದಾರೆ.

ಬುಧವಾರ, ಮೇ 22, 2019

ಡಿಜಿಟಲ್ ಬೀಗದ ಎರಡನೇ ಕೀಲಿ

ಟಿ. ಜಿ. ಶ್ರೀನಿಧಿ


ಸ್ಮಾರ್ಟ್‌ಫೋನ್ ಹಾಗೂ ಕಂಪ್ಯೂಟರಿನ ಮೂಲಕ ನಾವು ಮಾಹಿತಿ ತಂತ್ರಜ್ಞಾನದ ಹಲವು ಸವಲತ್ತುಗಳನ್ನು (ತಂತ್ರಾಂಶ, ಜಾಲತಾಣ ಇತ್ಯಾದಿ) ಬಳಸುತ್ತೇವೆ. ಮನರಂಜನೆಯಿಂದ ಪ್ರಾರಂಭಿಸಿ ನಮ್ಮ ಖಾಸಗಿ ಮಾಹಿತಿಯನ್ನು ನಿಭಾಯಿಸುವವರೆಗೆ, ನಮ್ಮ ಪರವಾಗಿ ಹಣಕಾಸಿನ ವ್ಯವಹಾರಗಳನ್ನು ನಿಭಾಯಿಸುವವರೆಗೆ ಈ ಸವಲತ್ತುಗಳು ಅನೇಕ ಕೆಲಸಗಳನ್ನು ಮಾಡುತ್ತವೆ.

ಆಯಾ ಸನ್ನಿವೇಶಕ್ಕೆ ತಕ್ಕಂತೆ ಇಂತಹ ಸವಲತ್ತುಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿರುತ್ತದೆ. ಅವುಗಳಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾರೂ ಹಾಳುಮಾಡದಂತೆ, ಕದಿಯದಂತೆ, ದುರುಪಯೋಗಪಡಿಸಿಕೊಳ್ಳದಂತೆ ಈ ಸುರಕ್ಷತಾ ಕ್ರಮಗಳು ನೋಡಿಕೊಳ್ಳುತ್ತವೆ. ಇಂತಹ ಬಹುತೇಕ ಸುರಕ್ಷತಾ ಕ್ರಮಗಳ ಜವಾಬ್ದಾರಿ ಆಯಾ ತಂತ್ರಾಂಶ ಅಥವಾ ಜಾಲತಾಣವನ್ನು ನಡೆಸುವವರದ್ದು.

ಈ ಸುರಕ್ಷತೆಯ ಒಂದು ಭಾಗದ ಜವಾಬ್ದಾರಿ ಗ್ರಾಹಕರಾದ ನಮ್ಮದೂ ಆಗಿರುತ್ತದೆ. ಆ ಭಾಗದ ಹೆಸರೇ ಪಾಸ್‌ವರ್ಡ್. ಡಿಜಿಟಲ್ ಜಗತ್ತಿನಲ್ಲಿ ನಮ್ಮ ಮಾಹಿತಿಯಿರುವ ಕೋಣೆಗೆ ಒಂದು ಬೀಗ ಇದೆ ಎಂದುಕೊಂಡರೆ, ಪಾಸ್‌ವರ್ಡು ಆ ಬೀಗದ ಕೀಲಿಕೈ. ನಮ್ಮ ಮಾಹಿತಿ ಬೇರೆಯವರಿಗೆ ಸಿಗದಂತೆ, ದುರ್ಬಳಕೆ ಆಗದಂತೆ ಇದು ಕಾಪಾಡುತ್ತದೆ.

ಗುರುವಾರ, ಮೇ 16, 2019

ಬೆಳಕಿನ ದಿನ ವಿಶೇಷ: ಟೆಕ್ ಲೋಕದ ಬೆಳಕು

ಟಿ. ಜಿ. ಶ್ರೀನಿಧಿ


ನಮ್ಮ ಬದುಕಿನಲ್ಲಿ ಬೆಳಕಿನ ಪಾತ್ರ ಬಹಳ ಮಹತ್ವದ್ದು. ಸಸ್ಯಗಳಲ್ಲಿ ಆಹಾರ ತಯಾರಿಕೆಯಿರಲಿ, ಸೋಲಾರ್ ಹೀಟರಿನಲ್ಲಿ ಸ್ನಾನಕ್ಕೆ ನೀರು ಬಿಸಿಮಾಡುವುದೇ ಇರಲಿ - ನೂರೆಂಟು ಕೆಲಸಗಳಿಗೆ ಬೆಳಕು ಬೇಕೇಬೇಕು.

ಹೀಗೆ ಬೆಳಕಿನ ಸಹಾಯದಿಂದ ನಡೆಯುವ ಕೆಲಸಗಳನ್ನು ನಾವು ಹಲವು ಕ್ಷೇತ್ರಗಳಲ್ಲಿ ನೋಡಬಹುದು. ಅಂತಹ ಕ್ಷೇತ್ರಗಳ ಪೈಕಿ ಮಾಹಿತಿ ತಂತ್ರಜ್ಞಾನ ಕೂಡ ಒಂದು. ಇಲ್ಲಿ ನಡೆಯುವ ಹಲವಾರು ಮಹತ್ವದ ವಿದ್ಯಮಾನಗಳಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ.

ಬುಧವಾರ, ಮೇ 8, 2019

ಇದು ಡೇಟಾ ಲೋಕ!

ಟಿ. ಜಿ. ಶ್ರೀನಿಧಿ

ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ಬಳಸಿ ನಾವು ಪ್ರತಿದಿನವೂ ಅನೇಕ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ. ವಾಟ್ಸ್‌ಆಪ್ ಸಂದೇಶಗಳನ್ನು ಕಳುಹಿಸುವುದು, ಮೊಬೈಲಿನಲ್ಲಿ ವೀಡಿಯೋ ನೋಡುವುದು, ಆನ್‌ಲೈನ್ ಅಂಗಡಿಗಳಲ್ಲಿ ಶಾಪಿಂಗ್ ಮಾಡುವುದು, ಆಪ್ ಬಳಸಿ ಟ್ಯಾಕ್ಸಿ ಕರೆಸುವುದು, ಎಟಿಎಂ‌ನಿಂದ ಹಣ ತೆಗೆಯುವುದು, ಬಸ್ಸಿನ ಕಂಡಕ್ಟರು ನಮ್ಮ ಟಿಕೆಟ್ ಮುದ್ರಿಸಿ ನೀಡುವುದು - ಇವೆಲ್ಲವೂ ಇದಕ್ಕೆ ಉದಾಹರಣೆ.

ಇಂತಹ ಪ್ರತಿಯೊಂದು ಕೆಲಸ ಮಾಡಿದಾಗಲೂ ಒಂದಷ್ಟು ವಿವರಗಳು ಸಂಬಂಧಪಟ್ಟ ವ್ಯವಸ್ಥೆಯಲ್ಲಿ ದಾಖಲಾಗುತ್ತವೆ, ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾವಣೆಯಾಗುತ್ತವೆ. ಮೊಬೈಲಿನಲ್ಲಿ ವೀಕ್ಷಿಸಿದ ವೀಡಿಯೋಗಳು, ಆನ್‌ಲೈನ್ ಅಂಗಡಿಯಲ್ಲಿ ನೋಡಿದ ಹಾಗೂ ಖರೀದಿಸಿದ ವಸ್ತುಗಳು, ಟ್ಯಾಕ್ಸಿ ಬರಬೇಕಾದ ವಿಳಾಸ, ಗೂಗಲ್‌ನಲ್ಲಿ ಹುಡುಕಿದ ವಿಷಯ, ಎಟಿಎಂನಿಂದ ಪಡೆದ ಹಣದ ಮೊತ್ತ, ಬಸ್ಸಿನಲ್ಲಿ ಪ್ರಯಾಣಿಸಿದ ದೂರ - ಹೀಗೆ.

ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು. ಇದನ್ನು ಕನ್ನಡದಲ್ಲಿ ದತ್ತಾಂಶ ಎಂದು ಕರೆಯಬಹುದು. ಮನುಷ್ಯನ ದೇಹದಲ್ಲಿ ರಕ್ತ ಹೇಗೋ ಐಟಿ ಕ್ಷೇತ್ರದಲ್ಲಿ ದತ್ತಾಂಶವೂ ಅಷ್ಟೇ ಮುಖ್ಯ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎಂದು ಕರೆಯುವವರೂ ಇದ್ದಾರೆ. ಹಲವು ಸಂಸ್ಥೆಗಳ ಇಡೀ ವ್ಯವಹಾರ ನಿಂತಿರುವುದೇ ದತ್ತಾಂಶದ ಮೇಲೆ!

ಬುಧವಾರ, ಮೇ 1, 2019

ನಿಮ್ಮ ಫೋನಿನಲ್ಲಿ ಈ ಆಪ್‌ ಇದೆಯೇ? [ಭಾಗ ೨]

ಇಜ್ಞಾನ ವಿಶೇಷ


ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.
badge