ಬುಧವಾರ, ಮೇ 1, 2019

ನಿಮ್ಮ ಫೋನಿನಲ್ಲಿ ಈ ಆಪ್‌ ಇದೆಯೇ? [ಭಾಗ ೨]

ಇಜ್ಞಾನ ವಿಶೇಷ


ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಆಪ್‌ಗಳಿಗೆ ವಿಶೇಷ ಸ್ಥಾನ. ನಮ್ಮ ಗಮನಸೆಳೆಯಲು ಸ್ಪರ್ಧಿಸುವ ಅಸಂಖ್ಯ ಆಪ್‌ಗಳ ಪೈಕಿ ಕೆಲವೊಂದನ್ನು ಆಗೊಮ್ಮೆ ಈಗೊಮ್ಮೆ ಪರಿಚಯಿಸುವುದು ಇಜ್ಞಾನದ ಪ್ರಯತ್ನ. ನಮ್ಮ ಪ್ರಯತ್ನ ನಿಮಗೆ ಇಷ್ಟವಾಯಿತೇ? ಕಮೆಂಟ್ ಮಾಡಿ ತಿಳಿಸಿ.

ವ್ಯವಸ್ಥಿತರಾಗಿರಲು ಆಪ್ ನೆರವು
ಮಾಹಿತಿ ಮಹಾಪೂರದ ಈ ದಿನಗಳಲ್ಲಿ ನಮ್ಮ ಸಂಪರ್ಕಕ್ಕೆ ಬರುವ ಮಾಹಿತಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಬಹಳ ಕಷ್ಟ. ಇತರ ಅನೇಕ ಉದ್ದೇಶಗಳಂತೆ ಇಲ್ಲೂ ಮೊಬೈಲ್ ಆಪ್‌ಗಳ ಸಹಾಯ ಪಡೆದುಕೊಳ್ಳುವುದು ಸಾಧ್ಯ. ವಿವಿಧ ಜಾಲತಾಣಗಳಲ್ಲಿ ನಾವು ನೋಡುವ, ಮತ್ತೊಮ್ಮೆ ಬೇಕಾಗಬಹುದು ಅನ್ನಿಸುವ ಮಾಹಿತಿಯನ್ನು ಉಳಿಸಿಟ್ಟುಕೊಂಡು ಬೇಕಾದಾಗ ಬಳಸಲು 'Pocket: Save. Read. Grow.' ಆಪ್ ಅನ್ನು ಬಳಸಬಹುದು. ಡಿಜಿಟಲ್ ಕಡತಗಳ ಜೊತೆ ಭೌತಿಕ ಕಡತಗಳೂ ಇರುತ್ತವಲ್ಲ, ಅವನ್ನೆಲ್ಲ ಡಿಜಿಟಲ್ ರೂಪಕ್ಕೆ ತಂದು ಜೋಡಿಸಿಟ್ಟುಕೊಳ್ಳಲು 'CamScanner - Phone PDF Creator' ಆಪ್ ನೆರವಾಗುತ್ತದೆ.

ಕ್ಲಿಕ್ ಮಾಡಿ ನೋಡಿ
ಸಾಂಪ್ರದಾಯಿಕ ಕ್ಯಾಮೆರಾಗಳನ್ನೇ ಹಿಂದಿಕ್ಕುವ ಮಟ್ಟಿಗೆ ಮೊಬೈಲ್ ಕ್ಯಾಮೆರಾಗಳು ಈಗ ಜನಪ್ರಿಯವಾಗಿವೆ. ಮೊಬೈಲ್ ಫೋನುಗಳಲ್ಲಿರುವ ಕ್ಯಾಮೆರಾ ಗುಣಮಟ್ಟವೂ ದಿನೇದಿನೇ ಜಾಸ್ತಿಯಾಗುತ್ತಿದೆ. ಮೊಬೈಲಿನಲ್ಲಿ ಸೆರೆಹಿಡಿದ ಚಿತ್ರಗಳನ್ನು ಎಡಿಟ್ ಮಾಡುವ, ಇನ್ನಷ್ಟು ಚೆಂದಗಾಣಿಸುವ ಕೆಲಸವನ್ನೂ ಮೊಬೈಲ್ ಆಪ್‌ಗಳೇ ಮಾಡಿಕೊಡುತ್ತವೆ. ಇಂತಹ ಆಪ್‌ಗಳ ಪೈಕಿ 'Snapseed' ಹಾಗೂ 'Adobe Photoshop Express:Photo Editor Collage Maker' ಗಮನಾರ್ಹ ಹೆಸರುಗಳು. ಸೆರೆಹಿಡಿದ ಚಿತ್ರಗಳನ್ನು ಬೇಕಾದಂತೆ ಬದಲಿಸಲು, ಅವನ್ನೆಲ್ಲ ಜೋಡಿಸಿ ಕೊಲಾಜ್ ಮಾಡಿ ಹಂಚಿಕೊಳ್ಳಲು ಈ ಆಪ್‌ಗಳು ನೆರವಾಗಬಲ್ಲವು.

ಮೊಬೈಲಿನೊಳಗೆ ನೋಟ್ ಬುಕ್ಕು
ನೂರೆಂಟು ಕೆಲಸಗಳಲ್ಲಿ ಬಿಜ಼ಿಯಾಗಿರುವವರಿಗೆ ಎಲ್ಲ ವಿವರಗಳನ್ನೂ ಸರಿಯಾಗಿ ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಕೆಲಸ. ಕಾಲೇಜಿನ ಮನೆಗೆಲಸದಿಂದ ಮನೆಗೆ ತರಬೇಕಾದ ದಿನಸಿಯವರೆಗೆ ನೂರೆಂಟು ವಿಷಯಗಳನ್ನು ಮೊಬೈಲಿನಲ್ಲಿ ಬರೆದಿಟ್ಟುಕೊಳ್ಳಲು ನೋಟ್‌ಪುಸ್ತಕದಂತೆ ಕೆಲಸಮಾಡುವ ಹಲವು ಆಪ್‌ಗಳಿವೆ. ಇಂತಹ ಆಪ್‌ಗಳಿಗೆ 'Google Keep - Notes and Lists' ಹಾಗೂ 'Evernote' ಎರಡು ಉದಾಹರಣೆಗಳು. ನಮಗೆ ಬೇಕಾದ ಮಾಹಿತಿಯನ್ನು ಗುರುತುಮಾಡಿಕೊಳ್ಳುವುದಷ್ಟೇ ಅಲ್ಲ, ಬೇಕಾದಾಗ ನೆನಪಿಸುವ (ರಿಮೈಂಡರ್) ಹಾಗೂ ಬೇರೆಯವರೊಡನೆ ಹಂಚಿಕೊಳ್ಳುವಂತಹ (ಶೇರ್) ಸವಲತ್ತುಗಳೂ ಈ ಆಪ್‌ಗಳಲ್ಲಿ ಸಿಗುತ್ತವೆ.

ಈ ಸರಣಿಯ ಹಿಂದಿನ ಕಂತನ್ನು ಇಲ್ಲಿ ಓದಬಹುದು

ಇಲ್ಲಿ ಹೆಸರಿಸಿದ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್‌ಗೆ  (play.google.com/store) ಹೋಗಿ, ಸರ್ಚ್ ಕಿಟಕಿಯಲ್ಲಿ ಆಪ್ ಹೆಸರನ್ನು ಅಂಟಿಸಿ, ಗುಂಡಿ ಒತ್ತಿ.

ಕಾಮೆಂಟ್‌ಗಳಿಲ್ಲ:

badge