ಸೋಮವಾರ, ಏಪ್ರಿಲ್ 27, 2015

ಸೂಪರ್‌ಕಂಪ್ಯೂಟರ್ ಸಮಾಚಾರ

ಟಿ. ಜಿ. ಶ್ರೀನಿಧಿ

ಕೆಲವು ದಿನಗಳ ಹಿಂದೆ ಭಾರತ ಸರಕಾರ 'ರಾಷ್ಟ್ರೀಯ ಸೂಪರ್‌ಕಂಪ್ಯೂಟಿಂಗ್ ಮಿಶನ್' ಎನ್ನುವ ಕಾರ್ಯಕ್ರಮವೊಂದನ್ನು ಘೋಷಿಸಿತು. ಒಟ್ಟು ನಾಲ್ಕೂವರೆ ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತದಾದ್ಯಂತ ಸೂಪರ್‌ಕಂಪ್ಯೂಟರುಗಳ ಜಾಲವನ್ನೇ ನಿರ್ಮಿಸುವುದು ಈ ಕಾರ್ಯಕ್ರಮದ ಉದ್ದೇಶ.

ಸರಿ, ಆದರೆ ಈ ಸೂಪರ್‌ಕಂಪ್ಯೂಟರ್ ಎಂದರೇನು?

ಪ್ರಪಂಚದಲ್ಲಿ ಅನೇಕ ಬಗೆಯ ಕಂಪ್ಯೂಟರುಗಳಿರುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಅವುಗಳ ಪೈಕಿ ಅತಿ ಹೆಚ್ಚು ಸಂಸ್ಕರಣಾ ಸಾಮರ್ಥ್ಯ  ಇರುವ ಕಂಪ್ಯೂಟರುಗಳಿಗೆ ಸೂಪರ್‌ಕಂಪ್ಯೂಟರ್‌ಗಳೆಂದು ಹೆಸರು.

ಬಹಳ ಕ್ಲಿಷ್ಟ ಲೆಕ್ಕಾಚಾರಗಳ ಅಗತ್ಯವಿರುವ ಕ್ಷೇತ್ರಗಳಲ್ಲಿ ಇವು ಬಳಕೆಯಾಗುತ್ತವೆ. ವಿಶ್ವದ ಹುಟ್ಟಿನ ಬಗ್ಗೆ ತಿಳಿದುಕೊಳ್ಳುವುದಿರಲಿ, ಭೂಕಂಪ-ಚಂಡಮಾರುತಗಳಂತಹ ವಿದ್ಯಮಾನಗಳ ವಿಶ್ಲೇಷಣೆಯಿರಲಿ - ಉನ್ನತ ಮಟ್ಟದ ವೈಜ್ಞಾನಿಕ ಸಂಶೋಧನೆಗಳಲ್ಲಿ ಸೂಪರ್‌ಕಂಪ್ಯೂಟರುಗಳ ಬಳಕೆ ಸಾಮಾನ್ಯ. ಅಣ್ವಸ್ತ್ರಗಳ ಪರೀಕ್ಷೆಯಲ್ಲೂ ಸೂಪರ್‌ಕಂಪ್ಯೂಟರುಗಳ ಸಹಾಯ ಪಡೆದುಕೊಳ್ಳುವ ಪ್ರಯತ್ನಗಳು ನಡೆದಿವೆ. ಹವಾಗುಣ ಬದಲಾವಣೆಯಂತಹ ಪ್ರಕ್ರಿಯೆಗಳ ಅಧ್ಯಯನದಲ್ಲಿ ಕೂಡ ಸೂಪರ್‌ಕಂಪ್ಯೂಟರ್ ಪಾತ್ರವನ್ನು ನೋಡುವುದು ಸಾಧ್ಯ.

ವೈದ್ಯಕೀಯ ರಂಗದಲ್ಲೂ ಸೂಪರ್‌ಕಂಪ್ಯೂಟರುಗಳ ಬಳಕೆ ಇದೆ - ಪ್ರೋಟೀನುಗಳ ರಚನೆಯ ಬಗ್ಗೆ ತಿಳಿದುಕೊಂಡು, ಅವುಗಳಲ್ಲಾಗುವ ಬದಲಾವಣೆಗೂ ಮಾನವರಲ್ಲಿ ಕಾಣಿಸಿಕೊಳ್ಳುವ ರೋಗಗಳಿಗೂ ನಡುವಿನ ಸಂಬಂಧವನ್ನು ಅಧ್ಯಯನ ಮಾಡುತ್ತಿರುವ 'ಬ್ಲೂ ಜೀನ್' ಸೂಪರ್‌ಕಂಪ್ಯೂಟರ್ ಕಳೆದ ದಶಕದಲ್ಲಿ ಸಾಕಷ್ಟು ಸುದ್ದಿಮಾಡಿತ್ತು. ಮಾನವ ದೇಹದಲ್ಲಿ ರಕ್ತಸಂಚಾರದ ವಿವರವಾದ ವಿಶ್ಲೇಷಣೆಗೂ ಸೂಪರ್‌ಕಂಪ್ಯೂಟರುಗಳನ್ನು ಬಳಸಲಾಗುತ್ತಿದೆ.

ಹಂದಿಜ್ವರದಂತಹ ರೋಗಗಳು ಕಾಣಿಸಿಕೊಂಡಾಗ ಅವುಗಳ ಸ್ವರೂಪ ಮತ್ತು ಹರಡುತ್ತಿರುವ ವಿಧಾನವನ್ನು ಅಧ್ಯಯನ ಮಾಡಿ ಕ್ಷಿಪ್ರವಾಗಿ ಪರಿಹಾರ ಕಂಡುಕೊಳ್ಳುವಲ್ಲೂ ಸೂಪರ್‌ಕಂಪ್ಯೂಟರುಗಳು ನೆರವಾಗಬಲ್ಲವು.

ಮಂಗಳವಾರ, ಏಪ್ರಿಲ್ 21, 2015

ಮೇ ೧೬ರಂದು ಕನ್ನಡ ವಿಜ್ಞಾನ ಬರಹಗಾರರ ಕಾರ್ಯಾಗಾರ

ಇಜ್ಞಾನ ವಾರ್ತೆ

ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಶಾಸ್ತ್ರಗಳಲ್ಲಿ ಅಭೂತಪೂರ್ವ ಬೆಳವಣಿಗೆಗಳು ನಡೆಯುತ್ತಿವೆ. ಇವುಗಳನ್ನು ಕುರಿತು ಕನ್ನಡದಲ್ಲಿ ಬರೆಯುವವರ ಸಂಖ್ಯೆ ವಿರಳವಾಗಿದೆ.  ವಿಶ್ವಕೋಶಗಳು, ವಿಕಿಪೀಡಿಯಾ, ಪಠ್ಯಪುಸ್ತಕಗಳು,  ಇ-ಪುಸ್ತಕಗಳು, ವಿಜ್ಞಾನ ಪತ್ರಿಕೆಗಳು, ಜನಪ್ರಿಯ ಪತ್ರಿಕೆಗಳಲ್ಲಿ ವಿಜ್ಞಾನ ಲೇಖನಗಳು, ಬ್ಲಾಗ್ ಬರಹಗಳು, ವಿಜ್ಞಾನ ಕಥಾಸಾಹಿತ್ಯ, ... ಹೀಗೆ ವಿಜ್ಞಾನ ಬರಹಗಾರರಿಗೆ ಲಭ್ಯವಾಗಿರುವ ಮಾಧ್ಯಮಗಳು ಹಲವಾರು.

ಕನ್ನಡ ವಿಜ್ಞಾನ ಬರಹಗಾರರು ವ್ಯವಸ್ಥಿತವಾಗಿ ಕೆಲಸ ಮಾಡಿದರೆ ವಿಜ್ಞಾನ ಸಾಹಿತ್ಯವನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ಸಾಧ್ಯ ಎಂಬ ಆಶಯದಿಂದ ಮೇ ೧೬ರಂದು ಬೆಂಗಳೂರಿನಲ್ಲಿ ಕನ್ನಡ ವಿಜ್ಞಾನ - ತಂತ್ರಜ್ಞಾನ ಬರಹಗಾರರ ಸಮ್ಮೇಳನ ಮತ್ತು ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ವಿಜ್ಞಾನ ಸಂವಹನ ಕ್ಷೇತ್ರದ ಪರಿಣತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಸಕ್ತರಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಸೋಮವಾರ, ಏಪ್ರಿಲ್ 20, 2015

ನೆಟ್ ನ್ಯೂಟ್ರಾಲಿಟಿಯ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಎಲ್ಲೆಡೆಯೂ ನೆಟ್ ನ್ಯೂಟ್ರಾಲಿಟಿಯದೇ ಸುದ್ದಿ. ಜಾಲಲೋಕದಲ್ಲಿ ಸಮಾನತೆ ಇರಬೇಕು, ಏನೇ ಆದರೂ ಭೇದಭಾವಕ್ಕೆ ಅವಕಾಶ ಬೇಡ ಎನ್ನುವುದು ಈ ಕುರಿತು ಮಾತನಾಡುತ್ತಿರುವ ಬಹುತೇಕ ಜನರ ಅಭಿಪ್ರಾಯ.

ಅದೇನೋ ಸರಿ. ಏಕೆಂದರೆ ಜಾಲಲೋಕದ ಮೂಲ ಕಲ್ಪನೆಯೇ ಸಮಾನತೆ. ಕಂಪ್ಯೂಟರ್ ಮತ್ತು ಅಂತರಜಾಲ ಸಂಪರ್ಕ ಇರುವ ಎಲ್ಲರಿಗೂ ಇಲ್ಲಿನ ಅವಕಾಶಗಳು ಮುಕ್ತ. ಅಂತಹ ಯಾರು ಬೇಕಾದರೂ ತಮ್ಮ ಐಡಿಯಾಗಳನ್ನು ಜಾಲಲೋಕದಲ್ಲಿ ಸಾಕಾರಗೊಳಿಸುವುದು, ಪ್ರಪಂಚವನ್ನೇ ಬದಲಿಸುವುದು ಸಾಧ್ಯ.

ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್‌ವೈಡ್ ವೆಬ್ ಸೃಷ್ಟಿಯ ಹಿಂದೆ ಇದ್ದದ್ದೂ ಇಂತಹುದೇ ಒಂದು ಕಲ್ಪನೆ. ಎರಡು-ಮೂರು ದಶಕಗಳ ಹಿಂದೆ ಟಿಮ್ ಬರ್ನರ್ಸ್-ಲೀ ವಿಶ್ವವ್ಯಾಪಿ ಜಾಲವನ್ನು ರೂಪಿಸಿದರಲ್ಲ, ಅವರು ಅದಕ್ಕಾಗಿ ಯಾವ ಪೇಟೇಂಟನ್ನೂ ಪಡೆದುಕೊಂಡಿಲ್ಲ - ಸಂಭಾವನೆಯ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಮುಂದೆ ಅವರದೇ ನೇತೃತ್ವದಲ್ಲಿ ಸ್ಥಾಪನೆಯಾದ ವರ್ಲ್ಡ್‌ವೈಡ್ ವೆಬ್ ಕನ್ಸಾರ್ಷಿಯಂ ಕೂಡ ಅಷ್ಟೆ, ಮಾನಕಗಳನ್ನು ಶುಲ್ಕರಹಿತ ತಂತ್ರಜ್ಞಾನದ ಸುತ್ತಲೇ ರೂಪಿಸುತ್ತಿದೆ.

ಆದರೆ ಈಚೆಗೆ ಜಾಲಲೋಕದ ವಾತಾವರಣದಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಜಾಲಲೋಕದ ಸ್ವಾತಂತ್ರ್ಯವನ್ನು ಸರಕಾರಗಳು - ವಾಣಿಜ್ಯ ಸಂಸ್ಥೆಗಳು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದೇ ಈ ಬದಲಾವಣೆಗೆ ಕಾರಣವಾಗಿರುವ ಅಂಶ. ಜಾಲಲೋಕದ ತಾಟಸ್ಥ್ಯ (ನೆಟ್ ನ್ಯೂಟ್ರಾಲಿಟಿ) ಕುರಿತ ಚರ್ಚೆಯನ್ನು ಹುಟ್ಟುಹಾಕಿರುವುದೂ ಇದೇನೇ.

ಸೋಮವಾರ, ಏಪ್ರಿಲ್ 13, 2015

ಆಕಾಶದಲ್ಲೂ ಅಂತರಜಾಲ

ಟಿ. ಜಿ. ಶ್ರೀನಿಧಿ


ಮನೆ-ಕಚೇರಿಗಳಲ್ಲಿ ವೈ-ಫಿ ಸಂಪರ್ಕ ಅಭ್ಯಾಸವಾದವರಿಗೆ, ನಗರಗಳಲ್ಲಿ ಸದಾಕಾಲ ಥ್ರೀಜಿ-ಫೋರ್‌ಜಿಗಳ ವ್ಯಾಪ್ತಿ ಪ್ರದೇಶದಲ್ಲೇ ಇರುವವರಿಗೆ ಅಂತರಜಾಲ ಸಂಪರ್ಕವೆನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಇಂತಹವರಿಗೆ ಪ್ರವಾಸದ ಸಂದರ್ಭದಲ್ಲೂ ನಿರಂತರವಾಗಿ ಅಂತರಜಾಲ ಸಂಪರ್ಕ ಇರಲೇಬೇಕು ಎನಿಸುತ್ತಿರುತ್ತದೆ.

ಹೋದ ಜಾಗದಲ್ಲೇನೋ ಸರಿ - ತೀರಾ ದೂರದ ಪ್ರದೇಶಗಳನ್ನು ಹೊರತುಪಡಿಸಿ ಬಹಳಷ್ಟು ಕಡೆ ಅಂತರಜಾಲ ಸಂಪರ್ಕ ಸಿಕ್ಕಿಬಿಡುತ್ತದೆ. ಕಾರಿನಲ್ಲೋ, ಬಸ್ಸು-ರೈಲಿನಲ್ಲೋ ಪ್ರಯಾಣಿಸುವಾಗಲೂ ಮೊಬೈಲ್ ಸಂಪರ್ಕ ಇದ್ದ ಬಹುತೇಕ ಕಡೆಗಳಲ್ಲೊ ಅಂತರಜಾಲಾಟ ಸಾಧ್ಯ.

"ಮೊಬೈಲ್ ಸಂಪರ್ಕ ಇದ್ದ ಕಡೆ" ಎನ್ನುವುದೇ ಇಲ್ಲಿನ ದೊಡ್ಡ ಸಮಸ್ಯೆ. ನಗರ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಮೊಬೈಲ್ ಸಂಪರ್ಕ ಸಮಸ್ಯೆಯೇನಲ್ಲ. ಆದರೆ ಹೆದ್ದಾರಿಗಳನ್ನು ಬಿಟ್ಟು ದೂರಹೋದಂತೆ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಗುತ್ತದೆ; ಅಂತರಜಾಲ ನಮ್ಮಿಂದ ದೂರವೇ ಉಳಿಯುತ್ತದೆ.

ಕಚೇರಿ ಜಂಜಾಟದಿಂದ ಬೇಸತ್ತು ಪ್ರವಾಸ ಹೊರಟವರಿಗೆ ಅಂತರಜಾಲದ ಕಾಟವಿಲ್ಲ ಎನ್ನುವುದು ಖುಷಿಯ ವಿಷಯವೇ ಇರಬಹುದು. ಆದರೆ ಪ್ರಯಾಣಿಸುತ್ತಿರುವುದು ಕೆಲಸದ ಮೇಲೆಯೇ ಆದರೆ? ಬೇಕೆಂದಾಗ ಅಂತರಜಾಲ ಸಂಪರ್ಕ ದೊರಕದಿದ್ದರೆ ಕೆಲಸವೂ ಹಾಳು, ಸಮಯವೂ ವ್ಯರ್ಥ.

ಹೌದು, ನಮ್ಮ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದಷ್ಟು ಕಾಲ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಕಚೇರಿಯ ಕೆಲಸವೇ ನಡೆಯುವುದಿಲ್ಲ. ಸಿಬ್ಬಂದಿ ಎಲ್ಲೇ ಇದ್ದರೂ ಸರಿ, ಅವರು ಬೇಕೆಂದಾಗ ಅಂತರಜಾಲ ಸಂಪರ್ಕಕ್ಕೆ ಸಿಗುವಂತಿರಬೇಕು ಎನ್ನುತ್ತವೆ ಸಂಸ್ಥೆಗಳು.

ಹೀಗಿರುವಾಗ ಕಚೇರಿ ಕೆಲಸದ ಮೇಲೆ ಪ್ರಯಾಣಿಸುವ ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಸತತವಾಗಿ ಹಲವು ಗಂಟೆಗಳ ಕಾಲ ಅಂತರಜಾಲ ಸಂಪರ್ಕವಿಲ್ಲದೆ ಇರುವುದು ಎಲ್ಲಾದರೂ ಸಾಧ್ಯವೆ?

ಸೋಮವಾರ, ಏಪ್ರಿಲ್ 6, 2015

ಇಂದಿನ ಕನಸುಗಳ ಮುಂದಿನ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಬೆಳೆದಂತೆ ನಮ್ಮ ದಿನನಿತ್ಯದ ಬದುಕಿನ ಹಲವು ಸಂಗತಿಗಳು ಬದಲಾಗಿವೆ. ಹೊಸಬಗೆಯ ಕಾರು-ಬಸ್ಸುಗಳು ಬಂದಿವೆ. ಅವುಗಳಿಗೆ ತಕ್ಕ ರಸ್ತೆಗಳೂ ಸಿದ್ಧವಾಗಿವೆ. ಹೊಸಹೊಸ ರೈಲುಗಳ ಮೂಲಕ ದೇಶದ ಮೂಲೆಮೂಲೆಗಳ ನಡುವೆ ಸಂಪರ್ಕ ಸಾಧ್ಯವಾಗಿದೆ. ಇಂದಿನ ವಿಮಾನಯಾನ ಹಿಂದಿನ ಬಸ್ ಪ್ರಯಾಣಗಳಿಗಿಂತ ಸುಲಭವಾಗಿದೆ.

ಪರಿಚಯವಾಗುತ್ತಿರುವುದು ಹೊಸಹೊಸ ವಾಹನಗಳಷ್ಟೆ ಅಲ್ಲ, ಅವುಗಳ ಕಾರ್ಯಕ್ಷಮತೆಯಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ಜನರ ಆರ್ಥಿಕ ಮಟ್ಟ ಉತ್ತಮಗೊಳ್ಳುತ್ತಿರುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಪ್ರಗತಿಯೂ ಸೇರಿಕೊಂಡು ವಾಹನಗಳ ಖರೀದಿ ಬಹುತೇಕ ಎಲ್ಲರಿಗೂ ಸಾಧ್ಯವಾಗುವಂತಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಖುಷಿಪಡಬಹುದಿತ್ತೋ ಏನೋ. ಆದರೆ ಇದೇ ತಂತ್ರಜ್ಞಾನ ಆಧುನಿಕ ಜಗತ್ತಿನೆದುರು ದೊಡ್ಡ ಸವಾಲನ್ನೂ ಸೃಷ್ಟಿಸಿ ಇಟ್ಟುಬಿಟ್ಟಿದೆ.

ವಿಪರೀತವಾಗಿ ಹೆಚ್ಚುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಜಗತ್ತಿನ ಬಹುತೇಕ ನಗರಗಳಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದೆ. ಕಡಿಮೆ ಬೆಲೆಗೆ ವಾಹನಗಳನ್ನು ಸೃಷ್ಟಿಸುವ ಪೈಪೋಟಿ ಅಪಘಾತಗಳಿಗೆ, ಮಿತಿಮೀರಿದ ಮಾಲಿನ್ಯಕ್ಕೆ ಕಾರಣವಾಗಿದೆ. ಅತ್ಯಾಧುನಿಕ ಕಾರು-ಬಸ್ಸುಗಳ ಐಷಾರಾಮಿ ಸೌಲಭ್ಯಗಳು ಪ್ರಯಾಣಿಕರಿಗೆ ಟ್ರಾಫಿಕ್ ಜಾಮುಗಳಲ್ಲೇ ಹೆಚ್ಚಾಗಿ ಉಪಯೋಗಕ್ಕೆ ಬರುತ್ತಿವೆ!

ತಂತ್ರಜ್ಞಾನದ ಬಳಕೆಯಿಂದ ಹೊಸಬಗೆಯ ವಾಹನಗಳನ್ನು ಸೃಷ್ಟಿಸುವುದು - ಬೆಲೆ ಇಳಿಸುವುದು ಸಾಧ್ಯವಾದರೆ ಇಷ್ಟೆಲ್ಲ ವಾಹನಗಳು ಸೃಷ್ಟಿಸುವ ಅವಾಂತರವನ್ನು ತಪ್ಪಿಸುವುದೂ ಸಾಧ್ಯವಾಗಬೇಕಲ್ಲ!
badge