ಸೋಮವಾರ, ಏಪ್ರಿಲ್ 20, 2015

ನೆಟ್ ನ್ಯೂಟ್ರಾಲಿಟಿಯ ಸುತ್ತಮುತ್ತ

ಟಿ. ಜಿ. ಶ್ರೀನಿಧಿ

ಈಚೆಗೆ ಕೆಲದಿನಗಳಿಂದ ಎಲ್ಲೆಡೆಯೂ ನೆಟ್ ನ್ಯೂಟ್ರಾಲಿಟಿಯದೇ ಸುದ್ದಿ. ಜಾಲಲೋಕದಲ್ಲಿ ಸಮಾನತೆ ಇರಬೇಕು, ಏನೇ ಆದರೂ ಭೇದಭಾವಕ್ಕೆ ಅವಕಾಶ ಬೇಡ ಎನ್ನುವುದು ಈ ಕುರಿತು ಮಾತನಾಡುತ್ತಿರುವ ಬಹುತೇಕ ಜನರ ಅಭಿಪ್ರಾಯ.

ಅದೇನೋ ಸರಿ. ಏಕೆಂದರೆ ಜಾಲಲೋಕದ ಮೂಲ ಕಲ್ಪನೆಯೇ ಸಮಾನತೆ. ಕಂಪ್ಯೂಟರ್ ಮತ್ತು ಅಂತರಜಾಲ ಸಂಪರ್ಕ ಇರುವ ಎಲ್ಲರಿಗೂ ಇಲ್ಲಿನ ಅವಕಾಶಗಳು ಮುಕ್ತ. ಅಂತಹ ಯಾರು ಬೇಕಾದರೂ ತಮ್ಮ ಐಡಿಯಾಗಳನ್ನು ಜಾಲಲೋಕದಲ್ಲಿ ಸಾಕಾರಗೊಳಿಸುವುದು, ಪ್ರಪಂಚವನ್ನೇ ಬದಲಿಸುವುದು ಸಾಧ್ಯ.

ವಿಶ್ವವ್ಯಾಪಿ ಜಾಲ, ಅಂದರೆ ವರ್ಲ್ಡ್‌ವೈಡ್ ವೆಬ್ ಸೃಷ್ಟಿಯ ಹಿಂದೆ ಇದ್ದದ್ದೂ ಇಂತಹುದೇ ಒಂದು ಕಲ್ಪನೆ. ಎರಡು-ಮೂರು ದಶಕಗಳ ಹಿಂದೆ ಟಿಮ್ ಬರ್ನರ್ಸ್-ಲೀ ವಿಶ್ವವ್ಯಾಪಿ ಜಾಲವನ್ನು ರೂಪಿಸಿದರಲ್ಲ, ಅವರು ಅದಕ್ಕಾಗಿ ಯಾವ ಪೇಟೇಂಟನ್ನೂ ಪಡೆದುಕೊಂಡಿಲ್ಲ - ಸಂಭಾವನೆಯ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಮುಂದೆ ಅವರದೇ ನೇತೃತ್ವದಲ್ಲಿ ಸ್ಥಾಪನೆಯಾದ ವರ್ಲ್ಡ್‌ವೈಡ್ ವೆಬ್ ಕನ್ಸಾರ್ಷಿಯಂ ಕೂಡ ಅಷ್ಟೆ, ಮಾನಕಗಳನ್ನು ಶುಲ್ಕರಹಿತ ತಂತ್ರಜ್ಞಾನದ ಸುತ್ತಲೇ ರೂಪಿಸುತ್ತಿದೆ.

ಆದರೆ ಈಚೆಗೆ ಜಾಲಲೋಕದ ವಾತಾವರಣದಲ್ಲಿ ಕೊಂಚ ಬದಲಾವಣೆ ಕಾಣುತ್ತಿದೆ. ಜಾಲಲೋಕದ ಸ್ವಾತಂತ್ರ್ಯವನ್ನು ಸರಕಾರಗಳು - ವಾಣಿಜ್ಯ ಸಂಸ್ಥೆಗಳು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದೇ ಈ ಬದಲಾವಣೆಗೆ ಕಾರಣವಾಗಿರುವ ಅಂಶ. ಜಾಲಲೋಕದ ತಾಟಸ್ಥ್ಯ (ನೆಟ್ ನ್ಯೂಟ್ರಾಲಿಟಿ) ಕುರಿತ ಚರ್ಚೆಯನ್ನು ಹುಟ್ಟುಹಾಕಿರುವುದೂ ಇದೇನೇ.

ನಮ್ಮ ದೇಶದಲ್ಲಿ ಆದ ಬೆಳವಣಿಗೆಗಳನ್ನೇ ನೋಡಿ. ಫೇಸ್‌ಬುಕ್ ಬೆಂಬಲಿತ 'ಇಂಟರ್‌ನೆಟ್.ಆರ್ಗ್' ಯೋಜನೆ ಕೆಲ ತಿಂಗಳುಗಳ ಹಿಂದೆ ನಮ್ಮ ದೇಶಕ್ಕೆ ಬಂತು. ಅಂತರಜಾಲದಿಂದ ದೂರವೇ ಉಳಿದಿರುವ ಅದೆಷ್ಟೋ ಭಾರತೀಯರನ್ನು ಜಾಲಲೋಕಕ್ಕೆ ಪರಿಚಯಿಸುವ ಉದ್ದೇಶ ಈ ಯೋಜನೆಗಿತ್ತು.

ಮೊಬೈಲ್ ಸಂಸ್ಥೆಗಳ 'ಜೀರೋ ರೇಟಿಂಗ್' ಯೋಜನೆಗಳದು ಕೊಂಚ ಬೇರೆಯದೇ ಯೋಚನೆ. ಜಾಲತಾಣ ಅಥವಾ ಮೊಬೈಲ್ ಆಪ್‌ಗಳು ನಿರ್ದಿಷ್ಟ ಮೊಬೈಲ್ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡರೆ ಆ ಸಂಸ್ಥೆಯ ಚಂದಾದಾರರು ಆಯಾ ಜಾಲತಾಣ ಅಥವಾ ಆಪ್ ಅನ್ನು ಬಳಸಲು ಯಾವುದೇ ಡೇಟಾ ವೆಚ್ಚ ಇರುವುದಿಲ್ಲ ಎನ್ನುವುದು ಇಂತಹ ಯೋಜನೆಗಳ ಸಾರಾಂಶ. ಟ್ವಿಟರ್ - ಫೇಸ್‌ಬುಕ್ - ವಾಟ್ಸ್‌ಆಪ್‌ಗಳನ್ನೆಲ್ಲ ಉಚಿತವಾಗಿ ಬಳಸಲು ಅನುವುಮಾಡಿಕೊಡುತ್ತವಲ್ಲ, ಆ 'ಪ್ಲಾನು'ಗಳೂ ಇಂತಹವೇ.

ಮೇಲ್ನೋಟಕ್ಕೆ ಇವೆರಡೂ ರೀತಿಯ ಯೋಜನೆಗಳು ಬಳಕೆದಾರರ ಅನುಕೂಲವನ್ನೇ ಗಮನದಲ್ಲಿಟ್ಟುಕೊಂಡಂತೆ ಕಾಣುತ್ತವೆ. ಆದರೆ ಕೊಂಚ ವಿವರವಾಗಿ ನೋಡುತ್ತ ಹೋದರೆ ನಮಗೆ ಕಾಣುವ ಸಂಗತಿಯೇ ಬೇರೆ.

'ಇಂಟರ್‌ನೆಟ್.ಆರ್ಗ್'ನಂತಹ ಯಾವುದೋ ಒಂದು ಯೋಜನೆಯಿಂದ ಹೊಸ ಬಳಕೆದಾರರು ಅಂತರಜಾಲದತ್ತ ಬರುತ್ತಾರೆ ಎಂದುಕೊಳ್ಳೋಣ. ಇಂತಹ ಯೋಜನೆಯಲ್ಲಿ ಉಚಿತ ಅಂತರಜಾಲ ಸಂಪರ್ಕ ಪಡೆಯಲು ಅವರು ನಿರ್ದಿಷ್ಟ ಸಂಸ್ಥೆಯ ಮೊಬೈಲ್ ಸಂಪರ್ಕ ಪಡೆದುಕೊಳ್ಳಬೇಕು. ಆಮೇಲೆ ಕೂಡ ಅವರಿಗೆ ಅಂತರಜಾಲದಲ್ಲಿ ಏನೆಲ್ಲ ಸಿಗುತ್ತದೆ ಎನ್ನುವುದನ್ನು ಆ ಯೋಜನೆಯ ನಿರ್ಮಾತೃಗಳು ಮುಂಚೆಯೇ ನಿರ್ಧರಿಸಿರುತ್ತಾರೆ. ಅಂದರೆ, ಆ ಯೋಜನೆಯಲ್ಲಿ ಒಂದು ಸೋಶಿಯಲ್ ನೆಟ್‌ವರ್ಕ್, ಒಂದು ಸರ್ಚ್ ಇಂಜನ್ ಹಾಗೂ ಒಂದು ಶಾಪಿಂಗ್ ತಾಣ ಇದ್ದರೆ ಅಷ್ಟೂ ಜನ ಬಳಕೆದಾರರಿಗೆ ಅಂತರಜಾಲವೆಂದರೆ ಇಷ್ಟೇ ಎಂಬ ಭಾವನೆ ಬರುವ ಎಲ್ಲ ಸಾಧ್ಯತೆಗಳೂ ಇರುತ್ತವೆ.

'ಜೀರೋ ರೇಟಿಂಗ್' ಯೋಜನೆಯ ಕತೆಯೂ ಇಷ್ಟೆ. ಅಂತರಜಾಲ ಸಂಪರ್ಕ ಒದಗಿಸುವ ಸಂಸ್ಥೆಗಳ ಜೊತೆಗೆ ಒಪ್ಪಂದ ಮಾಡಿಕೊಂಡವರೇನೋ ಇದರಿಂದ ಖುಷಿಪಡಬಹುದು, ಡೇಟಾ ಖರ್ಚು ಉಳಿಯಿತೆಂದು ಬಳಕೆದಾರರಿಗೂ ಸಮಾಧಾನವಾಗಬಹುದು.

ಆದರೆ ಹಾಗೊಂದು ಒಪ್ಪಂದ ಮಾಡಿಕೊಳ್ಳಲು ಸಾಧ್ಯವಾಗದ ಜಾಲತಾಣಗಳು - ಆಪ್ ನಿರ್ಮಾತೃಗಳು ಹೆಚ್ಚು ಜನರನ್ನು ತಲುಪುವುದೇ ಕಷ್ಟವಾಗುವ ಪರಿಸ್ಥಿತಿ ಮುಂದೊಮ್ಮೆ ನಿರ್ಮಾಣವಾಗಬಹುದಲ್ಲ! ಹಾಗೊಮ್ಮೆ ಹೊಸ ಆಲೋಚನೆಗಳ ಹರಿವಿಗೆ ಅಡ್ಡಿಯಾದರೆ ಬಳಕೆದಾರರಿಗೂ ನಷ್ಟವೇ - ಇಷ್ಟವಿದೆಯೋ ಇಲ್ಲವೋ ಅವರು ಉಚಿತವಾಗಿ ದೊರಕುವ ಸೇವೆಗಳಿಗೇ ಅಂಟಿಕೊಂಡಿರುವುದು ಅನಿವಾರ್ಯವಾಗಿಬಿಡುತ್ತದೆ.

ಅಂತರಜಾಲ ಸಂಸ್ಥೆಗಳೊಡನೆ ಒಪ್ಪಂದ ಮಾಡಿಕೊಂಡು ಬಳಕೆದಾರರರಿಗೆ ತಮ್ಮ ಸೇವೆಗಳನ್ನು ಉಚಿತವಾಗಿ ಒದಗಿಸಲು ಹೊರಟಿರುವ ಸಂಸ್ಥೆಗಳು ಒಂದು ಕಾಲದಲ್ಲಿ ಸಣ್ಣ ಪ್ರಮಾಣದಲ್ಲಿ ಶುರುವಾದವರೇ ತಾನೆ? ಈಗ ಅವರೇ ಹೊಸ ಸಂಸ್ಥೆಗಳ ಭವಿಷ್ಯಕ್ಕೆ ಅಡ್ಡಿಯಾಗಲು ಹೊರಡುವುದು ಎಷ್ಟು ಸರಿ ಎನ್ನುವ ಪ್ರಶ್ನೆಯೇ ನೆಟ್ ನ್ಯೂಟ್ರಾಲಿಟಿ ಪರ ಬಲವಾದ ಜನಾಭಿಪ್ರಾಯ ಮೂಡಲು ಕಾರಣವಾಗಿದೆ. 'ಇಂಟರ್‌ನೆಟ್.ಆರ್ಗ್' ಇರಲಿ, ಜೀರೋ ರೇಟಿಂಗ್ ಕಾರ್ಯಕ್ರಮಗಳಿರಲಿ ಹಲವು ಅಂತರಜಾಲ ಸಂಸ್ಥೆಗಳು ಅವುಗಳಿಂದ ದೂರ ಉಳಿಯುವಂತೆ ಮಾಡುವಲ್ಲಿ ಈ ಜನಾಭಿಪ್ರಾಯದ್ದೇ ಪ್ರಮುಖ ಪಾತ್ರ.

ಅಂತರಜಾಲದ ಮೂಲಕವೇ ಸಂದೇಶ ಕಳುಹಿಸುವುದು - ಕರೆಮಾಡುವುದನ್ನೆಲ್ಲ ಸಾಧ್ಯವಾಗಿಸಿರುವ ಆಪ್‌ಗಳ ಬಳಕೆ ಮೊಬೈಲ್ ಸಂಸ್ಥೆಗಳ ಆದಾಯದ ಮೇಲೆ ಪರಿಣಾಮ ಬೀರಿದೆಯಲ್ಲ, ಅಂತಹ ಆಪ್‌ಗಳ ಬಳಕೆಗೆ ಹೆಚ್ಚು ಶುಲ್ಕ ವಿಧಿಸಬೇಕೆಂದು ಮೊಬೈಲ್ ಸಂಸ್ಥೆಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ 'ಟ್ರಾಯ್' ಈಚೆಗೆ ಸಾರ್ವಜನಿಕರಿಂದ ಪತ್ರಿಕ್ರಿಯೆಗಳನ್ನು ಆಹ್ವಾನಿಸಿತ್ತು. ಇದಕ್ಕೆ ಕೆಲವೇ ದಿನಗಳ ಅವಧಿಯಲ್ಲಿ ಲಕ್ಷಾಂತರ ಜನ ಉತ್ತರಿಸಿರುವುದು, ಎಲ್ಲ ಬಗೆಯ ಸೇವೆಗಳಿಗೂ ಮುಕ್ತ ಅವಕಾಶ ಕೊಟ್ಟು ಜಾಲಲೋಕದ ತಾಟಸ್ಥ್ಯ ಕಾಪಾಡುವಂತೆ ಒತ್ತಾಯಿಸಿರುವುದು ಕೂಡ ಇದೇ ಜನಾಭಿಪ್ರಾಯದ ಇನ್ನೊಂದು ಫಲಿತಾಂಶ.

ಆದರೆ ಹೋರಾಟ ಇಷ್ಟಕ್ಕೇ ಮುಗಿದಿಲ್ಲ. ಜೀರೋ ರೇಟಿಂಗ್‌ನಂತಹ ಯೋಜನೆಗಳು ಬೇರೊಂದು ರೂಪದಲ್ಲಿ ಮರಳಿಬರುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದೂ ಅತ್ಯಗತ್ಯ. ಏಕೆಂದರೆ ಜಾಲಲೋಕದಲ್ಲಿ ಸೋಲು ಗೆಲುವುಗಳನ್ನು ನಿರ್ಧರಿಸುವವರು ಬಳಕೆದಾರರೇ ಹೊರತು ಅಂತರಜಾಲ ಸಂಪರ್ಕ ಒದಗಿಸುವ ಸಂಸ್ಥೆಗಳಲ್ಲ.

ಒಂದು ಕಾಲದಲ್ಲಿ ಇಮೇಲ್ ಪ್ರಪಂಚವನ್ನು ಆಳುತ್ತಿದ್ದ ಹಾಟ್‌ಮೇಲ್ ಸೇವೆ ಇಂತಹ ಯೋಜನೆಗಳನ್ನೇನಾದರೂ ಬಳಸಿಕೊಂಡು ತನ್ನ ಸ್ಪರ್ಧಿಗಳನ್ನೆಲ್ಲ ಮಟ್ಟಹಾಕಿಬಿಟ್ಟಿದ್ದರೆ ಇಂದು ಜಿಮೇಲ್ ತಾನೆ ಎಲ್ಲಿರುತ್ತಿತ್ತು? ಗೂಗಲ್ ಪ್ರಾಬಲ್ಯದ ಮೇಲೆ ಸವಾರಿ ಮಾಡಿಕೊಂಡು ಆರ್ಕುಟ್ ಎಲ್ಲರನ್ನೂ ತಲುಪಿಬಿಟ್ಟಿದ್ದರೆ ಫೇಸ್‌ಬುಕ್ ಬೆಳೆಯುವ ಪ್ರಶ್ನೆ ಎಲ್ಲಿತ್ತು? ಆನ್‌ಲೈನ್ ಶಾಪಿಂಗ್ ಕ್ಷೇತ್ರದಲ್ಲಿ ಹಳೆಯ ಹುಲಿಗಳೇ ಮೆರೆಯುತ್ತಿದ್ದರೆ ಅವನ್ನೆಲ್ಲ ಸೋಲಿಸಿ ಬೆಳೆಯಲು ಫ್ಲಿಪ್‌ಕಾರ್ಟ್‌ನಂತಹ ತಾಣಗಳಿಗೆ ಹೇಗೆ ಸಾಧ್ಯವಾಗುತ್ತಿತ್ತು?

ಹೌದು, ನಿರ್ದಿಷ್ಟ ತಾಣ ಅಥವಾ ಸೇವೆಗಳನ್ನು ಉಚಿತವಾಗಿಯೋ ಹೆಚ್ಚು ವೇಗವಾಗಿಯೋ ಒದಗಿಸುವುದು ಒಟ್ಟಾರೆ ಜಾಲಲೋಕದ ಹಿತದೃಷ್ಟಿಯಿಂದ ಖಂಡಿತಾ ಒಳ್ಳೆಯದಲ್ಲ. ತಮ್ಮೊಡನೆ ಸೇರುವ, ಅಥವಾ ತಮಗೆ ಹಣ ನೀಡುವ ಸಂಸ್ಥೆಗಳ ಜಾಲತಾಣ ಉಳಿದ ಜಾಲತಾಣಗಳಿಗಿಂತ ಹೆಚ್ಚು ವೇಗವಾಗಿ ದೊರಕುವಂತೆ ಮಾಡುವಂತಹ ಕ್ರಮಗಳು ಮುಂದೆ ಕೆಲವೇ ಸಂಸ್ಥೆಗಳಿಗೆ ಅಂತರಜಾಲದ ಮೇಲೆ ಪೂರ್ಣ ಹತೋಟಿಯನ್ನು ನೀಡಿಬಿಡಬಹುದು.

ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಸರಕಾರಗಳು ಸೂಕ್ತ ನಿಯಮಗಳನ್ನು ರೂಪಿಸುವುದು ಸಾಧ್ಯವಿದೆ. ಅಮೆರಿಕದಂತಹ ದೊಡ್ಡ ರಾಷ್ಟ್ರಗಳ ಮಾತು ಹಾಗಿರಲಿ, ಬ್ರೆಜಿಲ್-ಚಿಲಿ ಮುಂತಾದ ದೇಶಗಳೂ ನಮಗೆ ಇಲ್ಲಿ ಮಾದರಿಯಾಗಬಲ್ಲವು. ಚಿಲಿಯ ಉದಾಹರಣೆ ತೆಗೆದುಕೊಂಡರೆ ೨೦೧೦ರಷ್ಟು ಹಿಂದಿನಿಂದಲೇ ಅಲ್ಲಿ ನೆಟ್ ನ್ಯೂಟ್ರಾಲಿಟಿಯನ್ನು ಖಾತರಿಪಡಿಸುವ ನಿಯಮಗಳು ಜಾರಿಯಲ್ಲಿವೆ. 'ಜೀರೋ ರೇಟಿಂಗ್' ಅಥವಾ ನಿರ್ದಿಷ್ಟ ತಾಣಗಳನ್ನು ಉಚಿತವಾಗಿ ಬಳಸಲು ಅನುವುಮಾಡಿಕೊಡುವ ಯೋಜನೆಗಳನ್ನೆಲ್ಲ ಯಾವುದೇ ಸಂಸ್ಥೆ ಅಲ್ಲಿ ಪರಿಚಯಿಸುವಂತಿಲ್ಲ.

ನೆಟ್ ನ್ಯೂಟ್ರಾಲಿಟಿ ಕುರಿತು ಭಾರತ ಸರಕಾರ ಹಾಗೂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಎರಡೂ ಈಗಾಗಲೇ ಗಮನಹರಿಸಿರುವುದು ಒಳ್ಳೆಯ ಸಂಗತಿ ಎಂದೇ ಹೇಳಬಹುದು. ಅಂತರಜಾಲದ ತಾಟಸ್ಥ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎನ್ನುವತ್ತ ಎಲ್ಲರ ಗಮನವೂ ಕೇಂದ್ರೀಕೃತವಾಗಿದೆ.

ಅಂತರಜಾಲವನ್ನು ನಾವು ಪ್ರಗತಿಯ ಸಾಧನವನ್ನಾಗಿ ಉಳಿಸಿಕೊಳ್ಳಬೇಕಾದರೆ ಅದಕ್ಕೆ ಯಾವುದೇ ರೀತಿಯ ಅಡೆತಡೆಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು ಎಂದು ವಿಶ್ವವ್ಯಾಪಿ ಜಾಲದ ರೂವಾರಿ ಟಿಮ್ ಬರ್ನರ್ಸ್-ಲೀ ಹಿಂದೊಮ್ಮೆ ಹೇಳಿದ್ದರು. ಅಂತರಜಾಲ ಸೇವೆ ನೀಡುವ ಸಂಸ್ಥೆಗಳು ಕಾನೂನು ವಿರೋಧಿಯಲ್ಲದ ಯಾವುದೇ ಮಾಹಿತಿ ಅಥವಾ ಸೇವೆಯನ್ನು ಪಕ್ಷಪಾತ ಧೋರಣೆಯಿಂದ ನಿರ್ಬಂಧಿಸುವುದಾಗಲಿ ಬೆಂಬಲಿಸುವುದಾಗಲಿ ತಪ್ಪು ಎನ್ನುವುದು ಅವರ ಖಚಿತ ನಿಲುವು.
ಇಂತಹ ಕ್ರಮಗಳನ್ನು ತಡೆಯದಿದ್ದರೆ ಅದು ಜಾಲಲೋಕದ ಭವಿಷ್ಯವನ್ನೇ ಮಸುಕಾಗಿಸಬಹುದು ಎನ್ನುವ ಅವರ ಮಾತನ್ನು ನೆಟ್ ನ್ಯೂಟ್ರಾಲಿಟಿ ಕುರಿತು ಮಾತನಾಡುವ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದ್ದು ಅತ್ಯಗತ್ಯ. ಹೆಚ್ಚು ಪ್ರಬಲರಾದ ಸಂಸ್ಥೆಗಳಿಗೆಂದು ಜಾಲಲೋಕದಲ್ಲಿ ಟೋಲ್ ರಸ್ತೆಗಳ ನಿರ್ಮಾಣ ಶುರುವಾದರೆ ಮಿಕ್ಕವರಿಗೆ ರಸ್ತೆಯೇ ಇಲ್ಲದ ಪರಿಸ್ಥಿತಿ ಸೃಷ್ಟಿಯಾದೀತು, ಎಚ್ಚರ!
ನೆಟ್ ನ್ಯೂಟ್ರಾಲಿಟಿ ಕುರಿತು ಹೆಚ್ಚಿನ ಮಾಹಿತಿ, ಹಾಗೂ ನಾವೇನು ಮಾಡಬಹುದು ಎಂದು ತಿಳಿದುಕೊಳ್ಳಲು www.savetheinternet.in ಹಾಗೂ www.netneutrality.in ತಾಣಗಳಿಗೆ ಭೇಟಿಕೊಡಬಹುದು.
ಏಪ್ರಿಲ್ ೨೦, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge