ಸೋಮವಾರ, ಏಪ್ರಿಲ್ 6, 2015

ಇಂದಿನ ಕನಸುಗಳ ಮುಂದಿನ ಪಯಣ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನ ಬೆಳೆದಂತೆ ನಮ್ಮ ದಿನನಿತ್ಯದ ಬದುಕಿನ ಹಲವು ಸಂಗತಿಗಳು ಬದಲಾಗಿವೆ. ಹೊಸಬಗೆಯ ಕಾರು-ಬಸ್ಸುಗಳು ಬಂದಿವೆ. ಅವುಗಳಿಗೆ ತಕ್ಕ ರಸ್ತೆಗಳೂ ಸಿದ್ಧವಾಗಿವೆ. ಹೊಸಹೊಸ ರೈಲುಗಳ ಮೂಲಕ ದೇಶದ ಮೂಲೆಮೂಲೆಗಳ ನಡುವೆ ಸಂಪರ್ಕ ಸಾಧ್ಯವಾಗಿದೆ. ಇಂದಿನ ವಿಮಾನಯಾನ ಹಿಂದಿನ ಬಸ್ ಪ್ರಯಾಣಗಳಿಗಿಂತ ಸುಲಭವಾಗಿದೆ.

ಪರಿಚಯವಾಗುತ್ತಿರುವುದು ಹೊಸಹೊಸ ವಾಹನಗಳಷ್ಟೆ ಅಲ್ಲ, ಅವುಗಳ ಕಾರ್ಯಕ್ಷಮತೆಯಲ್ಲೂ ಗಮನಾರ್ಹ ಬದಲಾವಣೆಗಳಾಗಿವೆ. ಜನರ ಆರ್ಥಿಕ ಮಟ್ಟ ಉತ್ತಮಗೊಳ್ಳುತ್ತಿರುವುದರ ಜೊತೆಗೆ ಉತ್ಪಾದನಾ ಕ್ಷೇತ್ರದ ಪ್ರಗತಿಯೂ ಸೇರಿಕೊಂಡು ವಾಹನಗಳ ಖರೀದಿ ಬಹುತೇಕ ಎಲ್ಲರಿಗೂ ಸಾಧ್ಯವಾಗುವಂತಾಗಿದೆ.

ವಿಷಯ ಇಷ್ಟೇ ಆಗಿದ್ದರೆ ಖುಷಿಪಡಬಹುದಿತ್ತೋ ಏನೋ. ಆದರೆ ಇದೇ ತಂತ್ರಜ್ಞಾನ ಆಧುನಿಕ ಜಗತ್ತಿನೆದುರು ದೊಡ್ಡ ಸವಾಲನ್ನೂ ಸೃಷ್ಟಿಸಿ ಇಟ್ಟುಬಿಟ್ಟಿದೆ.

ವಿಪರೀತವಾಗಿ ಹೆಚ್ಚುತ್ತಿರುವ ವಾಹನಗಳಿಂದಾಗಿ ಟ್ರಾಫಿಕ್ ಜಾಮ್ ಸಮಸ್ಯೆ ಜಗತ್ತಿನ ಬಹುತೇಕ ನಗರಗಳಲ್ಲಿ ಸಾಂಕ್ರಾಮಿಕ ಪಿಡುಗಿನಂತೆ ಹಬ್ಬುತ್ತಿದೆ. ಕಡಿಮೆ ಬೆಲೆಗೆ ವಾಹನಗಳನ್ನು ಸೃಷ್ಟಿಸುವ ಪೈಪೋಟಿ ಅಪಘಾತಗಳಿಗೆ, ಮಿತಿಮೀರಿದ ಮಾಲಿನ್ಯಕ್ಕೆ ಕಾರಣವಾಗಿದೆ. ಅತ್ಯಾಧುನಿಕ ಕಾರು-ಬಸ್ಸುಗಳ ಐಷಾರಾಮಿ ಸೌಲಭ್ಯಗಳು ಪ್ರಯಾಣಿಕರಿಗೆ ಟ್ರಾಫಿಕ್ ಜಾಮುಗಳಲ್ಲೇ ಹೆಚ್ಚಾಗಿ ಉಪಯೋಗಕ್ಕೆ ಬರುತ್ತಿವೆ!

ತಂತ್ರಜ್ಞಾನದ ಬಳಕೆಯಿಂದ ಹೊಸಬಗೆಯ ವಾಹನಗಳನ್ನು ಸೃಷ್ಟಿಸುವುದು - ಬೆಲೆ ಇಳಿಸುವುದು ಸಾಧ್ಯವಾದರೆ ಇಷ್ಟೆಲ್ಲ ವಾಹನಗಳು ಸೃಷ್ಟಿಸುವ ಅವಾಂತರವನ್ನು ತಪ್ಪಿಸುವುದೂ ಸಾಧ್ಯವಾಗಬೇಕಲ್ಲ!
ಇದೇ ಉದ್ದೇಶ ಇಟ್ಟುಕೊಂಡ ವಿಜ್ಞಾನಿಗಳು ಹಲವು ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಂಡಿದ್ದಾರೆ.

[ಜಾಹೀರಾತು] ನಿಮ್ಮ ಮೊಬೈಲಿನಲ್ಲಿ ಫ್ಲಿಪ್‌ಕಾರ್ಟ್ ಆಪ್ ಇದೆಯೆ? ಇಂದೇ ಇನ್‌ಸ್ಟಾಲ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ, ಇಜ್ಞಾನ ಡಾಟ್ ಕಾಮ್‌ಗೆ ನೆರವಾಗಿ!

ಪರಿಸರ ಸ್ನೇಹಿ ತಂತ್ರಜ್ಞಾನದ ಅಭಿವೃದ್ಧಿ, ಇಂತಹ ಪ್ರಯತ್ನಗಳಲ್ಲೊಂದು. ಪರಿಣಾಮಕಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಬೆಳೆಸುವಾಗ ಮಾಲಿನ್ಯಕಾರಕ ಪೆಟ್ರೋಲಿಯಂ ಉತ್ಪನ್ನಗಳ ಬದಲಿಗೆ ನವೀಕರಿಸಬಹುದಾದ ಇಂಧನಗಳನ್ನು ಬಳಸಿದರೆ ವಾಹನ ದಟ್ಟಣೆ ಹಾಗೂ ಪರಿಸರ ಮಾಲಿನ್ಯಗಳೆರಡನ್ನೂ ನಿಯಂತ್ರಣಕ್ಕೆ ತರಬಹುದೆಂದು ತಜ್ಞರು ಭಾವಿಸುತ್ತಾರೆ. ವಿದ್ಯುತ್ ಚಾಲಿತ ಬಸ್ಸುಗಳ ಬಳಕೆ ಈ ನಿಟ್ಟಿನಲ್ಲೊಂದು ಮಹತ್ವದ ಹೆಜ್ಜೆ (೨೦೧೪ರಲ್ಲಿ ಇಂತಹುದೊಂದು ಬಸ್ಸು ಬೆಂಗಳೂರಿನ ರಸ್ತೆಗಳಿಗೂ ಬಂದಿತ್ತು). ಇಂತಹ ಬಸ್ಸುಗಳನ್ನು ಪದೇ ಪದೇ ಚಾರ್ಜ್ ಮಾಡುತ್ತಿರಬೇಕಾಗುತ್ತದಲ್ಲ, ಆ ಪ್ರಕ್ರಿಯೆಯನ್ನು ಸುಲಭಗೊಳಿಸುವತ್ತಲೂ ಪ್ರಯತ್ನಗಳು ಸಾಗಿವೆ. ಡಿಪೋಗಳಲ್ಲಿ ಬಸ್ ತೊಳೆಯಲು ಒಂದು ಕಟ್ಟೆಯ ಮೇಲೆ ನಿಲ್ಲಿಸುತ್ತಾರಲ್ಲ, ಅಂತಹವೇ ಕಟ್ಟೆಗಳ ಮೇಲೆ ನಿಲ್ಲಿಸಿ ಬಸ್ಸಿನ ಬ್ಯಾಟರಿಯನ್ನೂ ಚಾರ್ಜ್ ಮಾಡುವಂತಹ ವ್ಯವಸ್ಥೆಗಳು ರೂಪುಗೊಳ್ಳುತ್ತಿವೆ. ಪುಟ್ಟದೊಂದು ಫಲಕದ ಮೇಲೆ ಮೊಬೈಲ್ ಇಟ್ಟು ಚಾರ್ಜ್ ಮಾಡುವ ವೈರ್‌ಲೆಸ್ ಚಾರ್ಜಿಂಗ್ ವ್ಯವಸ್ಥೆಯಂತೆಯೇ ಇದೂ.

ಸಾರ್ವಜನಿಕ ಸಾರಿಗೆ ಬಳಸದವರು ಕನಿಷ್ಠ ಪಕ್ಷ ತಮ್ಮ ಕಾರುಗಳು ಉಗುಳುವ ಮಾಲಿನ್ಯವನ್ನಾದರೂ ಕಡಿಮೆ ಮಾಡಬಹುದಲ್ಲ, ಅದನ್ನು ಸಾಧ್ಯವಾಗಿಸಲು ವಿದ್ಯುತ್ ಚಾಲಿತ ಕಾರು ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಇಂತಹ ಕಾರುಗಳ ತಾಂತ್ರಿಕತೆ ಹಾಗೂ ಕಾರ್ಯಕ್ಷಮತೆಯನ್ನು ಉತ್ತಮಪಡಿಸುವ ಪ್ರಯತ್ನಗಳೂ ನಡೆದಿವೆ. ವಿದ್ಯುತ್ ಚಾಲಿತ ಕಾರು ನಿರ್ಮಾತೃಗಳ ಪೈಕಿ ಪ್ರಪಂಚದಲ್ಲೇ ಪ್ರಮುಖ ಸ್ಥಾನದಲ್ಲಿರುವ ಟೆಸ್ಲಾ ಮೋಟಾರ್ಸ್ ಸಂಸ್ಥೆಯಂತೂ ತಾನು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನದ ದೊಡ್ಡದೊಂದು ಪಾಲನ್ನು ಮುಕ್ತ ಬಳಕೆಗಾಗಿ ನೀಡುವುದಾಗಿ ಹೇಳಿಕೊಂಡಿದೆ. ಆ ಮೂಲಕ ವಿದ್ಯುತ್ ಚಾಲಿತ ವಾಹನಗಳ ಕುರಿತ ಆಸಕ್ತಿಯನ್ನು ಹೆಚ್ಚಿಸುವುದು ಆ ಸಂಸ್ಥೆಯ ಯೋಚನೆ. ಸಂಪೂರ್ಣವಾಗಿ ವಿದ್ಯುತ್ತಿನಿಂದ ಚಲಿಸುವ ಕಾರುಗಳಷ್ಟೇ ಅಲ್ಲ, ಅಗತ್ಯವಿದ್ದಾಗ ಮಾತ್ರ ಪೆಟ್ರೋಲ್ ಬಳಸಿ ಮಿಕ್ಕ ಸಮಯಗಳಲ್ಲೆಲ್ಲ ಬ್ಯಾಟರಿ ಚಾಲಿತವಾಗಿರುವ ಕಾರುಗಳು ಈಗಾಗಲೇ ರಸ್ತೆಗಿಳಿದಿವೆ. ಚಾರ್ಜ್ ಮಾಡುವ ಅಗತ್ಯವೇ ಇಲ್ಲದೆ ಕಾರಿನ ಚಲನೆಯಿಂದಲೇ ವಿದ್ಯುತ್ ಉತ್ಪಾದಿಸಿಕೊಳ್ಳುವುದು ಇಂತಹ ಕಾರುಗಳ ವೈಶಿಷ್ಟ್ಯ.

ಸಾರ್ವಜನಿಕ ಸಾರಿಗೆ ಬೇಡ, ಕಾರಿನ ಸಹವಾಸ ಮೊದಲೇ ಬೇಡ ಎನ್ನುವವರು ದ್ವಿಚಕ್ರ ವಾಹನಗಳಿಗೆ ಜೈ ಎನ್ನುತ್ತಾರಲ್ಲ, ಅವರ ಮುಂದೆಯೂ ಪರ್ಯಾಯ ಇಂಧನ ಬಳಸುವ ಹಲವಾರು ಆಯ್ಕೆಗಳಿವೆ. ಸೈಕಲ್ ತುಳಿಯುವುದಂತೂ ಸರಿಯೇ ಸರಿ, ಅದರ ಜೊತೆಗೆ ವಿದ್ಯುತ್ ಚಾಲಿತ ಸೈಕಲ್-ಸ್ಕೂಟರುಗಳನ್ನು ಇನ್ನಷ್ಟು ಜನಪ್ರಿಯಗೊಳಿಸುವ ಹಲವು ಪ್ರಯತ್ನಗಳು ವಿಶ್ವದ ಹಲವೆಡೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ೨೦೨೫ರ ವೇಳೆಗೆ ಇಂಗಾಲದ ಡಯಾಕ್ಸೈಡ್ ಮಾಲಿನ್ಯವನ್ನು ಹದ್ದುಬಸ್ತಿಗೆ ತರಲು ಹೊರಟಿರುವ ಡೆನ್ಮಾರ್ಕ್‌ನ ಕೋಪನ್‌ಹೇಗನ್ ನಗರ ವಿದ್ಯುತ್ ಚಾಲಿತ ಸೈಕಲ್ಲುಗಳ ಬಳಕೆಗೆ ವ್ಯಾಪಕ ಪ್ರೋತ್ಸಾಹ ನೀಡುವ ಮೂಲಕ ವಿಶ್ವದ ಗಮನ ಸೆಳೆದಿದೆ. ನಗರ ಸಂಚಾರಕ್ಕೆ ನಾವು ಆಟೋ-ಟ್ಯಾಕ್ಸಿಗಳನ್ನೆಲ್ಲ ಬಳಸುವಂತೆ ಅಲ್ಲಿನ ನಾಗರಿಕರು ಇಂತಹ ಸೈಕಲ್ಲುಗಳನ್ನು ಬಾಡಿಗೆಗೆ ಪಡೆದುಕೊಳ್ಳುವುದು ಸಾಧ್ಯವಂತೆ. ಸೈಕಲ್ ನಿಲ್ಲಿಸಲು ಜಾಗ ಹುಡುಕುವುದೇ ಕಷ್ಟವಾಗುವ ಮಟ್ಟಿಗೆ ಅಲ್ಲಿನ ಜನರಿಗೆ ಸೈಕಲ್ ಬಳಕೆ ಅಭ್ಯಾಸವಾಗಿಹೋಗಿದೆ ಎಂದು ವರದಿಗಳು ಹೇಳುತ್ತವೆ.

[ಜಾಹೀರಾತು] ನಿಮ್ಮ ಮೊಬೈಲಿನಲ್ಲಿ ಫ್ಲಿಪ್‌ಕಾರ್ಟ್ ಆಪ್ ಇದೆಯೆ? ಇಂದೇ ಇನ್‌ಸ್ಟಾಲ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ, ಇಜ್ಞಾನ ಡಾಟ್ ಕಾಮ್‌ಗೆ ನೆರವಾಗಿ!

ಅಂದಹಾಗೆ ಸಾರ್ವಜನಿಕ ಸಾರಿಗೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಪ್ರಯತ್ನ ವಿದ್ಯುತ್ ಚಾಲಿತ ಬಸ್ಸುಗಳನ್ನು ಪರಿಚಯಿಸುವುದಕ್ಕಷ್ಟೇ ಸೀಮಿತವೇನೂ ಆಗಿಲ್ಲ. ಇಂಧನ ಕೋಶಗಳಿಂದ (ಫ್ಯುಯೆಲ್ ಸೆಲ್) ಚಾಲನೆಯಾಗುವ ಬಸ್ಸುಗಳ ನಿರ್ಮಾಣವೂ ಪ್ರಗತಿಯಲ್ಲಿದೆ. ಆಮ್ಲಜನಕ ಹಾಗೂ ಜಲಜನಕದಿಂದ ದೊರಕುವ ರಾಸಾಯನಿಕ ಶಕ್ತಿಯನ್ನು ವಿದ್ಯುತ್ತನ್ನಾಗಿ ಪರಿವರ್ತಿಸಿಕೊಳ್ಳುವುದು ಇಂಧನ ಕೋಶಗಳ ವೈಶಿಷ್ಟ್ಯ. ಇವುಗಳಿಂದ ವಿಷಕಾರಿ ಹೊಗೆಯ ಬದಲಿಗೆ ಬರಿಯ ನೀರಷ್ಟೇ ತ್ಯಾಜ್ಯವಾಗಿ ಹೊರಹೊಮ್ಮುತ್ತದೆ; ಸಾಮಾನ್ಯ ಬಸ್ಸಿನಿಂದ ಹೊರಹೊಮ್ಮುವ ಶಬ್ದವೂ ನಮಗಿಲ್ಲಿ ಕೇಳಸಿಗದು. ಈ ತಂತ್ರಜ್ಞಾನ ಬಳಸುತ್ತಿರುವ ಸಂಸ್ಥೆಗಳ ಒಕ್ಕೂಟವಾದ 'ಹೈಡ್ರೋಜನ್ ಬಸ್ ಅಲಾಯನ್ಸ್' ಸದಸ್ಯರು ವಿಶ್ವದ ವಿವಿಧೆಡೆಗಳಲ್ಲಿ ಐವತ್ತಕ್ಕೂ ಹೆಚ್ಚು ಫ್ಯುಯೆಲ್ ಸೆಲ್ ಚಾಲಿತ ಬಸ್ಸುಗಳನ್ನು ರಸ್ತೆಗಿಳಿಸಿದ್ದಾರೆ. ಈ ದಶಕದ ಕೊನೆಯ ವೇಳೆಗೆ ಇಂತಹ ಬಸ್ಸುಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ಗಮನಾರ್ಹವಾಗಿ ಬದಲಿಸಲಿವೆ ಎನ್ನುವ ವಿಶ್ವಾಸವೂ ಅವರಲ್ಲಿದೆ.

ಹೊಸಬಗೆಯ ವಾಹನಗಳ ಬಳಕೆಯಷ್ಟೇ ಅಲ್ಲ, ಈಗಾಗಲೇ ಇರುವ ಸಂಚಾರ ವ್ಯವಸ್ಥೆಯನ್ನು ಹೆಚ್ಚು ಸಮರ್ಪಕವಾಗಿ ಬಳಸುವುದರಿಂದಲೂ ಹಲವು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ನಗರಗಳ ಸಂಚಾರ ವ್ಯವಸ್ಥೆಯನ್ನು ಏಕೀಕರಿಸುವುದರಿಂದ (ಉದಾ: ರೈಲು ಹಾಗೂ ಬಸ್ಸುಗಳ ನಡುವೆ ಸಮಯದ ಹೊಂದಾಣಿಕೆ ಹಾಗೂ ಒಂದೇ ಪಾಸಿನ ಬಳಕೆ) ಪ್ರಾರಂಭಿಸಿ ಹವಾಮಾನ-ಸಂಚಾರದಟ್ಟಣೆ ಇತ್ಯಾದಿಗಳನ್ನೆಲ್ಲ ಗಮನಿಸಿಕೊಂಡು ನಮ್ಮ ಪ್ರಯಾಣ ಯೋಜಿಸಲು ನೆರವಾಗುವ ತಂತ್ರಜ್ಞಾನವನ್ನು (ಜಾಲತಾಣ, ಮೊಬೈಲ್ ಆಪ್ ಇತ್ಯಾದಿ) ಅಭಿವೃದ್ಧಿಪಡಿಸುವವರೆಗೆ ಇಲ್ಲಿ ಹಲವು ಆಯ್ಕೆಗಳಿವೆ. ಸದ್ಯದ ಬೇಡಿಕೆಗೆ ಅನುಗುಣವಾಗಿ ಸಾರ್ವಜನಿಕ ಸಾರಿಗೆಯ ಓಡಾಟವನ್ನು ಹೆಚ್ಚು ಅಥವಾ ಕಡಿಮೆ ಮಾಡುವುದು - ಇಲ್ಲವೇ ಕ್ಷಿಪ್ರವಾಗಿ ಮಾರ್ಗಗಳನ್ನು ಬದಲಿಸುವುದು ಕೂಡ ತಂತ್ರಜ್ಞಾನದ ಸಹಾಯದಿಂದ ಸಾಧ್ಯವಾಗಬಹುದು.

ಒಂದೇ ಮಾರ್ಗದಲ್ಲಿ ಕಚೇರಿಗೆ ಪ್ರಯಾಣಿಸುವವರನ್ನೆಲ್ಲ ಒಂದು ವೇದಿಕೆಗೆ ಕರೆತಂದು ಕಾರ್‌ಪೂಲಿಂಗ್‌ನಂತಹ ಅಭ್ಯಾಸಗಳಿಗೆ (ಪ್ರತಿಯೊಬ್ಬರೂ ಒಂದೊಂದು ಕಾರಿನಲ್ಲಿ ಪ್ರಯಾಣಿಸುವ ಬದಲು ನಾಲ್ಕು ಜನರು ಒಂದೇ ಕಾರಿನಲ್ಲಿ ಪ್ರಯಾಣಿಸುವ ವ್ಯವಸ್ಥೆ) ಪ್ರೋತ್ಸಾಹ ಕೊಡುವುದೂ ಒಳ್ಳೆಯದೇ. ಈ ನಿಟ್ಟಿನಲ್ಲಿ ನಮ್ಮ ಬೆಂಗಳೂರಿನಂತಹ ನಗರಗಳಲ್ಲೂ ಯೋಚಿಸಲಾಗುತ್ತಿದೆ, ಹಲವು ಕಾರ್‌ಪೂಲಿಂಗ್ ವ್ಯವಸ್ಥೆಗಳು ಈಗಾಗಲೇ ರೂಪುಗೊಂಡಿವೆ ಎನ್ನುವುದು ಖುಷಿಯ ವಿಷಯ. ಬೇಡದ ವಿಷಯಗಳಿಗಾಗಿ ಸುದ್ದಿಯಲ್ಲಿದ್ದ ಟ್ಯಾಕ್ಸಿ ಸಂಸ್ಥೆ 'ಉಬರ್' ಕೂಡ ತನ್ನ ಟ್ಯಾಕ್ಸಿ ಗ್ರಾಹಕರು ಒಟ್ಟಿಗೆ ಪ್ರಯಾಣಿಸಿ ವೆಚ್ಚವನ್ನು ಹಂಚಿಕೊಳ್ಳುವ ವ್ಯವಸ್ಥೆ ಪರಿಚಯಿಸಿದ್ದೂ ಉಂಟು, ಶೇರ್ ಆಟೋಗಳ ಹಾಗೆ!

[ಜಾಹೀರಾತು] ನಿಮ್ಮ ಮೊಬೈಲಿನಲ್ಲಿ ಫ್ಲಿಪ್‌ಕಾರ್ಟ್ ಆಪ್ ಇದೆಯೆ? ಇಂದೇ ಇನ್‌ಸ್ಟಾಲ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ, ಇಜ್ಞಾನ ಡಾಟ್ ಕಾಮ್‌ಗೆ ನೆರವಾಗಿ!

ರಸ್ತೆಗಿಳಿಯುವ ವಾಹನಗಳ ಸಂಖ್ಯೆಯನ್ನು ಕಡಿಮೆಮಾಡುವುದೇನೋ ಸರಿ, ಆದರೆ ಕಡಿಮೆ ಸಂಖ್ಯೆಯ ಆ ವಾಹನಗಳ ಚಾಲಕರು ರಸ್ತೆಯಲ್ಲಿ ಉತ್ತಮ ನಡವಳಿಕೆಯನ್ನೇ ತೋರುತ್ತಾರೆ ಎಂಬ ಗ್ಯಾರಂಟಿ ಏನು? ಅವರು ಎಂದಿನಂತೆ ಸಂದಿಗೊಂದಿಗಳಲ್ಲಿ ನುಗ್ಗಿಸುತ್ತಲೋ ಸುಖಾಸುಮ್ನನೆ ಹಾರ್ನ್ ಬಾರಿಸುತ್ತಲೋ ಸಾಗಿದರೆ ರಸ್ತೆಗಳಲ್ಲಿ ಕಿರಿಕಿರಿ ಮರುಕಳಿಸುತ್ತದೆ.

ಅದರ ಬದಲು ಚಾಲಕರಹಿತ ವಾಹನಗಳನ್ನು ಪರಿಚಯಿಸಿಬಿಟ್ಟರೆ ಈ ತಲೆನೋವೇ ಇರುವುದಿಲ್ಲವಲ್ಲ! ಆ ಕನಸನ್ನು ನನಸಾಗಿಸುವತ್ತಲೂ ಅನೇಕರು ಕೆಲಸಮಾಡುತ್ತಿದ್ದಾರೆ. ಸ್ವಯಂಚಾಲಿತ ಕಾರುಗಳ ನಿರ್ಮಾಣದಲ್ಲಿ ಗೂಗಲ್, ಆಪಲ್ ಮುಂತಾದ ತಂತ್ರಜ್ಞಾನ ಕ್ಷೇತ್ರದ ದೈತ್ಯರೆಲ್ಲ ತೊಡಗಿಕೊಂಡಿರುವುದು ಈ ಬಗೆಯ ಕಾರುಗಳು ಮುಂದೊಮ್ಮೆ ಖಂಡಿತವಾಗಿಯೂ ರಸ್ತೆಗಿಳಿಯಲಿವೆ ಎಂಬ ಭರವಸೆ ಮೂಡಿಸಿದೆ. ಸ್ವಯಂಚಾಲಿತ ಕಾರುಗಳಿಂದಾಗಿ ಚಾಲಕನ ಮೇಲಿನ ಅವಲಂಬನೆ ತಪ್ಪುವುದರಿಂದ ಒಂದು ಕುಟುಂಬದ ಎಲ್ಲರೂ ಒಂದೇ ಕಾರನ್ನು ಬಳಸುವ ಕಲ್ಪನೆಯೂ ನನಸಾಗಬಹುದು: ಬೆಳಿಗ್ಗೆ ಮಗನನ್ನು ಶಾಲೆಗೆ ಬಿಟ್ಟು ಬಂದು ಅಪ್ಪ-ಅಮ್ಮನನ್ನು ಕಚೇರಿಗೆ ಕರೆದೊಯ್ದು ಆಮೇಲೆ ಮಗಳನ್ನು ಕಾಲೇಜಿಗೆ ಡ್ರಾಪ್ ಮಾಡುವ ಕೆಲಸವಷ್ಟನ್ನೂ ಕಾರು ತನ್ನಷ್ಟಕ್ಕೆ ತಾನೇ ಮಾಡಿದರೆ! ಅಷ್ಟೇ ಅಲ್ಲ, ಮದ್ಯಪಾನ ಮಾಡದ - ತೂಕಡಿಸಿ ಎಚ್ಚರತಪ್ಪದ ಈ ಕಾರುಗಳಿಂದಾಗಿ ಅಪಘಾತಗಳೂ ಕಡಿಮೆಯಾಗುವ ನಿರೀಕ್ಷೆಯಿದೆ.

ಸಂಚಾರವೆಂದ ಮಾತ್ರಕ್ಕೆ ಅದು ರಸ್ತೆಯ ಮೇಲೆಯೇ ಆಗಬೇಕು ಎಂದೇನೂ ಇಲ್ಲವಲ್ಲ. ಹಾಗಾಗಿ ನಮ್ಮ ದಿನನಿತ್ಯದ ಓಡಾಟಕ್ಕೆ ಆಕಾಶಮಾರ್ಗವನ್ನು ಬಳಸುವ ಸಾಧ್ಯತೆಯತ್ತಲೂ ವಿಜ್ಞಾನಿಗಳು ಗಮನಹರಿಸಿದ್ದಾರೆ. ವಿಮಾನ ನಿಲ್ದಾಣದವರೆಗೂ ರಸ್ತೆಯ ಮೇಲೆಯೇ ಚಲಾಯಿಸಿಕೊಂಡು ಹೋಗಿ ಅಲ್ಲಿಂದ ಥಟ್ಟನೆ ಗಗನಕ್ಕೆ ನೆಗೆಯಲು ಅನುವುಮಾಡಿಕೊಡುವ ವಾಹನಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆಯಂತೆ. ವಿಮಾನನಿಲ್ದಾಣಕ್ಕೆ ತಲುಪುವುದೇ ಸಮಸ್ಯೆಯಲ್ಲ ಎಂದು ಕೇಳುವವರು ಮನೆಯಂಗಳದಿಂದಲೇ ಹಾರಲು ನೆರವಾಗುವ ಜೆಟ್-ಪ್ಯಾಕ್‌ಗಳೂ ಸಿದ್ಧವಾಗುತ್ತಿವೆ.

ಒಟ್ಟಿನಲ್ಲಿ ತನ್ನದೇ ಕೊಡುಗೆಯಾದ ವಾಹನದಟ್ಟಣೆ, ಮಾಲಿನ್ಯಗಳಂತಹ ನಿತ್ಯದ ಸಮಸ್ಯೆಗಳನ್ನು ನಿವಾರಿಸಲು ತಂತ್ರಜ್ಞಾನವೇ ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕಾರಿಯಾಗುತ್ತದೆ, ನಗರಗಳ ಟ್ರಾಫಿಕ್ ಸಮಸ್ಯೆ ಎಷ್ಟು ಬೇಗ ಪರಿಹಾರವಾಗುತ್ತದೆ ಎನ್ನುವ ಪ್ರಶ್ನೆಗಳಿಗೆಲ್ಲ ಸಮಯವೇ ಉತ್ತರಿಸಬೇಕು.

ಏಪ್ರಿಲ್ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge