ಶುಕ್ರವಾರ, ಜುಲೈ 31, 2015

ಸ್ಮಾರ್ಟ್‌ಫೋನ್ ಮುಖ ೧೦: ಟಿಕ್‌ಟಿಕ್ ಗೆಳೆಯ

ಮೊಬೈಲ್ ಬಳಸಲು ಶುರುಮಾಡಿದ ಮೇಲೆ ವಾಚ್ ಕಟ್ಟುವುದನ್ನೇ ಬಿಟ್ಟುಬಿಟ್ಟಿದ್ದೇನೆ ಎನ್ನುವ ಅನೇಕರನ್ನು ನಾವು ನೋಡಬಹುದು. ಕೈಗಡಿಯಾರ ಮಾತ್ರವೇ ಏಕೆ, ಹಾಸಿಗೆ ಪಕ್ಕದಲ್ಲಿರುತ್ತಿದ್ದ ಅಲಾರಂ ಗಡಿಯಾರಕ್ಕೆ ನಿವೃತ್ತಿ ಕೊಟ್ಟದ್ದೂ ಮೊಬೈಲ್ ದೂರವಾಣಿಯೇ. ಅಷ್ಟೇ ಅಲ್ಲ, ಅಲಾರಂ ಗಡಿಯಾರಕ್ಕೆ ಆಧುನಿಕತೆಯ ಸ್ಪರ್ಶ ಕೊಟ್ಟದ್ದೂ ಮೊಬೈಲಿನ ಹೆಚ್ಚುಗಾರಿಕೆ. ಒಮ್ಮೆ ಹೊಂದಿಸಿದ ಅಲಾರಂ ಪ್ರತಿದಿನವೂ ಹೊಡೆಯುವಂತೆ ನೋಡಿಕೊಳ್ಳುವುದು, ವಾರದ ಬೇರೆಬೇರೆ ದಿನ ಬೇರೆಬೇರೆ ಸಮಯಕ್ಕೆ ಅಲಾರಂ ಹೊಂದಿಸುವುದು ಮುಂತಾದ ಕೆಲಸಗಳೆಲ್ಲ ಮೊಬೈಲಿನಲ್ಲಿ ಬಲು ಸುಲಭ. ಅರ್ಧನಿದ್ದೆಯಲ್ಲಿ ಎದ್ದು, ಅಲಾರಂ ಗಡಿಯಾರದ ತಲೆಯ ಮೇಲೆ ಮೊಟಕಿ ಮತ್ತೆ ಮಲಗುತ್ತಿದ್ದೆವಲ್ಲ - ಅಂತಹ ಸನ್ನಿವೇಶಗಳನ್ನು ತಪ್ಪಿಸಲು ಬೇಕಾದ ಸೌಲಭ್ಯಗಳನ್ನೂ ಆಪ್‌ಗಳ ಮೂಲಕ ಪಡೆದುಕೊಳ್ಳಬಹುದು. ಪೂರ್ತಿಯಾಗಿ ಎಚ್ಚರಮಾಡಿಕೊಂಡು ಸಣ್ಣದೊಂದು ಪ್ರಶ್ನೆಗೆ ಉತ್ತರಿಸುವವರೆಗೂ ಅಲಾರಂ ನಿಲ್ಲದಿರುವ ವ್ಯವಸ್ಥೆ ಇಂತಹ ಕೆಲ ಆಪ್‌ಗಳಲ್ಲಿರುತ್ತದೆ.

ಮೊಬೈಲ್ ಫೋನುಗಳು ಕೈಗಡಿಯಾರದ ಕಾಲವನ್ನು ಇನ್ನೇನು ಮುಗಿಸಿಯೇಬಿಟ್ಟವು ಎನ್ನುವಷ್ಟರಲ್ಲಿ ಸ್ಮಾರ್ಟ್ ವಾಚುಗಳು ಮಾರುಕಟ್ಟೆಗೆ ಬಂದಿವೆ. ಸಮಯ ತೋರಿಸುವ ಹಾಗೂ ಅಲಾರಂ ಹೊಡೆಯುವ ಕೆಲಸಗಳಿಗಷ್ಟೇ ಸೀಮಿತವಾಗದೆ ಈ ಹೊಸಬಗೆಯ ವಾಚುಗಳು ಆರೋಗ್ಯದ ಮೇಲೆ ನಿಗಾ ಇಡುವುದನ್ನು, ಮೊಬೈಲಿನ ವಿಸ್ತರಣೆಯಂತೆ ಕೆಲಸಮಾಡುವುದನ್ನೆಲ್ಲ ಕಲಿತುಬಿಟ್ಟಿವೆ (ಸ್ಮಾರ್ಟ್‌ವಾಚ್ ಬಳಸಿ ಮೊಬೈಲಿಗೆ ಬರುವ ಸಂದೇಶವನ್ನು ಓದುವುದು, ಕರೆಗಳಿಗೆ ಉತ್ತರಿಸುವುದು ಸಾಧ್ಯ; ಹೃದಯದ ಬಡಿತ-ದೇಹದ ಉಷ್ಣತೆಯನ್ನು, ನಾವು ಮಾಡುತ್ತಿರುವ ವ್ಯಾಯಾಮದ ಪ್ರಮಾಣವನ್ನು ಗಮನಿಸಿಕೊಳ್ಳುವ ಸಾಮರ್ಥ್ಯವೂ ಕೆಲ ವಾಚುಗಳಲ್ಲಿರುತ್ತವೆ). ಮೊದಲಿಗೆ ಮೊಬೈಲ್ ಫೋನಿನ ಜೊತೆಗಷ್ಟೆ ಬಳಕೆಯಾಗುತ್ತಿದ್ದ ಈ ಸ್ಮಾರ್ಟ್ ಕೈಗಡಿಯಾರಗಳು ಮುಂದೊಮ್ಮೆ ಮೊಬೈಲಿಗೆ ಪರ್ಯಾಯವಾಗಿ ಬೆಳೆದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. 

ತಂತ್ರಜ್ಞಾನದ ಪ್ರಪಂಚವೆಂದರೆ ಹಾಗೆಯೇ ತಾನೆ? ಬದಲಾವಣೆಯೇ ಈ ಜಗದ ನಿಯಮ!

ಪ್ರಸ್ತುತ ಬರಹದೊಡನೆ ಈ ಸರಣಿ ಮುಕ್ತಾಯವಾಯಿತು | ಈವರೆಗಿನ ಮುಖಗಳು

ಶುಕ್ರವಾರ, ಜುಲೈ 24, 2015

ಸ್ಮಾರ್ಟ್‌ಫೋನ್ ಮುಖ ೯: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ

ಎಲ್ಲ ಸಾಧನಗಳೂ ಒಂದೊಂದಾಗಿ ಸ್ಮಾರ್ಟ್ ಆಗುತ್ತಿದ್ದಂತೆ ಒಟ್ಟಾರೆಯಾಗಿ ನಮ್ಮ ಮನೆಯೇ ಸ್ಮಾರ್ಟ್ ಆಗಿಬಿಟ್ಟಿದೆಯಲ್ಲ, ಈ ಸ್ಮಾರ್ಟ್ ಮನೆಯೊಡನೆ ಸುಲಭವಾಗಿ ವ್ಯವಹರಿಸಲು ಮೊಬೈಲ್ ಫೋನನ್ನು ಬಳಸಬಹುದು. ಮೊಬೈಲ್ ಫೋನ್ ಸಹಾಯದಿಂದ ತೆರೆಯಬಹುದಾದ ಸ್ಮಾರ್ಟ್ ಬೀಗಗಳು ಈಗಾಗಲೇ ತಯಾರಾಗಿವೆ. ಮನೆಯ ಸ್ವಿಚ್ಚುಗಳನ್ನು ಮೊಬೈಲ್ ಬಳಸಿಯೇ ಹೊತ್ತಿಸುವುದು - ಆರಿಸುವುದು, ಮನೆಯಲ್ಲಿ ನಡೆಯುತ್ತಿರುವ ಘಟನೆಗಳ ಮೇಲೆ ಮೊಬೈಲ್ ಮೂಲಕವೇ ಕಣ್ಣಿಡುವುದು ಸಾಧ್ಯವಾಗಿದೆ. ಬಿಸಿಲಿನಲ್ಲಿ ನಿಂತಿರುವ ಕಾರಿನ ಬಳಿ ಹೋಗುವಷ್ಟರಲ್ಲೇ ಅದರ ಏಸಿ ಪ್ರಾರಂಭವಾಗುವಂತೆ ಮಾಡುವ ವ್ಯವಸ್ಥೆ ಕೂಡ ಇದೆ. ಕಂಪ್ಯೂಟರಿನ ಪ್ರೆಸೆಂಟೇಶನ್ ಇರಲಿ, ಟೀವಿಯ ಚಾನೆಲ್ ಇರಲಿ - ಎಲ್ಲವನ್ನೂ ಮೊಬೈಲ್ ಬಳಸಿಯೇ ನಿಯಂತ್ರಿಸುವುದು ಇದೀಗ ಸಾಧ್ಯ. ಇಂಟರ್‌ನೆಟ್ ಸೌಲಭ್ಯ ಕೈಕೊಟ್ಟರೆ ಮೊಬೈಲ್ ಫೋನನ್ನೇ ವೈ-ಫಿ ಹಾಟ್‌ಸ್ಪಾಟ್ ಆಗಿ ಬದಲಿಸಿ ಹಲವು ಸಾಧನಗಳಿಗೆ ಅಂತರಜಾಲ ಸಂಪರ್ಕ ಒದಗಿಸಿಕೊಡುವುದಂತೂ ಈಗಾಗಲೇ ಹಳೆಯ ಸಂಗತಿ!

ಮುಂದಿನ ವಾರ: ಟಿಕ್‌ಟಿಕ್ ಗೆಳೆಯ | ಈವರೆಗಿನ ಮುಖಗಳು

ಶನಿವಾರ, ಜುಲೈ 18, 2015

ಸ್ಮಾರ್ಟ್‌ಫೋನ್ ಮುಖ ೮: ಡಿಜಿಟಲ್ ಸಹಾಯಕ

ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ ಅವರ ಕೆಲಸದಲ್ಲಿ ನೆರವಾಗಲು ಸಹಾಯಕರಿರುತ್ತಾರಲ್ಲ, ಅದೇ ರೀತಿಯಲ್ಲಿ ಮೊಬೈಲ್ ದೂರವಾಣಿ ನಮ್ಮೆಲ್ಲರಿಗೂ ಸಹಾಯಕನಂತೆ ಕೆಲಸಮಾಡುತ್ತಿದೆ ಎನ್ನಬಹುದು. ಮಾಡಬೇಕಿರುವ ಕೆಲಸದ ಬಗ್ಗೆ ನೆನಪಿಸುವುದು, ಹುಟ್ಟುಹಬ್ಬದಂತಹ ಸಂದರ್ಭಗಳನ್ನು ನೆನಪಿಟ್ಟುಕೊಳ್ಳುವುದು, ಮುಂಬರುವ ಪ್ರಯಾಣದ ವಿವರಗಳನ್ನು ನೀಡುವುದು, ಹವಾಮಾನದ ವಿವರಗಳನ್ನು ಕೊಡುವುದು - ಎಲ್ಲವನ್ನೂ ಮೊಬೈಲ್ ಫೋನ್ ಮಾಡುತ್ತದೆ. ಬೇಕಾದಾಗ ಆಟೋ-ಟ್ಯಾಕ್ಸಿಗಳನ್ನು ಕರೆಸುತ್ತದೆ, ಹೋಟಲಿನಿಂದ ಊಟ ತರಿಸಿಕೊಡುತ್ತದೆ. ಮುಖ್ಯವಾದ ಮಾಹಿತಿಯನ್ನು ಗುರುತುಹಾಕಿಕೊಳ್ಳುವುದಕ್ಕೆ, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೂಕ್ತವಾಗಿ ವಿಂಗಡಿಸಿಟ್ಟುಕೊಳ್ಳುವುದಕ್ಕೂ ಮೊಬೈಲ್ ಫೋನ್ ಬಳಸುವುದು ಸಾಧ್ಯ. ಹೀಗೆ ಶೇಖರಿಸಿಟ್ಟುಕೊಂಡ ಮಾಹಿತಿ ನಾವು ಉಪಯೋಗಿಸುವ ಎಲ್ಲ ಸಾಧನಗಳಲ್ಲೂ (ಕಂಪ್ಯೂಟರ್, ಟ್ಯಾಬ್ಲೆಟ್ ಇತ್ಯಾದಿ) ದೊರಕುವಂತೆ ಕೂಡ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ, ನಾವು ನಿದ್ರಿಸುತ್ತಿರುವ ಸಂದರ್ಭದಲ್ಲಿ ಯಾರೂ ನಮಗೆ ಕರೆಮಾಡಿ ತೊಂದರೆಕೊಡದಂತೆ, ಆಫೀಸಿನಲ್ಲಿದ ಸೈಲೆಂಟ್ ಮೋಡ್ ಅಲ್ಲಿಂದ ಹೊರಬಂದ ತಕ್ಷಣ ಬದಲಾಗುವಂತೆಲ್ಲ ಮಾಡುಕೊಳ್ಳಲು ಕೂಡ ಮೊಬೈಲ್ ಸಹಾಯಕನ ಮೊರೆಹೋಗುವುದು ಸಾಧ್ಯ.

ಮುಂದಿನ ವಾರ: ಸ್ಮಾರ್ಟ್ ಮನೆಯ ಸ್ಮಾರ್ಟ್ ಕೀಲಿ | ಈವರೆಗಿನ ಮುಖಗಳು

ಭಾನುವಾರ, ಜುಲೈ 12, 2015

ಸ್ಮಾರ್ಟ್‌ಫೋನ್ ಮುಖ ೭: ಜೇಬಿನೊಳಗಿನ ಪರ್ಸು

ಅಂಗಡಿಯಲ್ಲಿ ಏನಾದರೂ ಕೊಂಡರೆ ಅದಕ್ಕೆ ನೋಟು-ನಾಣ್ಯಗಳ ರೂಪದ ಪಾವತಿ ನೀಡಬೇಕಿದ್ದ ಪರಿಸ್ಥಿತಿಯನ್ನು ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡುಗಳು ಬದಲಿಸಿದವಲ್ಲ, ಈಗ ಮೊಬೈಲ್ ಫೋನುಗಳು ಕಾರ್ಡುಗಳನ್ನೇ ಹಳತಾಗಿಸಲು ಹೊರಟಿವೆ. ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಇರಲಿ, ಮೊಬೈಲ್ ರೀಚಾರ್ಜ್ ಅಥವಾ ಬಿಲ್ ಪಾವತಿ ಇರಲಿ - ಎಲ್ಲವೂ ಈಗ ಮೊಬೈಲಿನಲ್ಲೇ ಸಾಧ್ಯ. ಮನೆಯ ಟೀವಿಯಿಂದ ಹಲ್ಲುಜ್ಜುವ ಬ್ರಶ್‌ವರೆಗೆ, ದ್ವಿಚಕ್ರ ವಾಹನದಿಂದ ದ್ವಿದಳ ಧಾನ್ಯಗಳವರೆಗೆ ಸಮಸ್ತವನ್ನೂ ಮೊಬೈಲಿನಲ್ಲೇ ಕೊಳ್ಳಬಹುದು. ಬಸ್ಸು-ರೈಲು-ವಿಮಾನಗಳಲ್ಲಿ ಟಿಕೇಟು ಕಾಯ್ದಿರಿಸಬಹುದು. ಮೊಬೈಲ್ ರೀಚಾರ್ಜ್, ಟ್ಯಾಕ್ಸಿ, ಆನ್‌ಲೈನ್ ಶಾಪಿಂಗ್ ಮುಂತಾದ ಅನೇಕ ಸೇವೆಗಳನ್ನು ಬಳಸಲು 'ವ್ಯಾಲೆಟ್'ಗಳಲ್ಲಿ ಹಣ ಇಟ್ಟು ಬೇಕಾದಾಗ ಬೇಕಾದಷ್ಟು ಮೊತ್ತವನ್ನು ಮೊಬೈಲಿನಿಂದಲೇ ಪಾವತಿಸುವ ಅಭ್ಯಾಸವೂ ಬೆಳೆಯುತ್ತಿದೆ. ಅಷ್ಟೇ ಅಲ್ಲ, ಒಂದೇ ವ್ಯಾಲೆಟ್ ಅನ್ನು ಹಲವು ಸೇವೆಗಳಿಗಾಗಿ ಬಳಸುವ ಯೋಚನೆಗಳೂ ಕಾರ್ಯರೂಪಕ್ಕೆ ಬಂದಿವೆ. ಅಂಗಡಿಯಲ್ಲಿ ಕಾರ್ಡ್ ಉಜ್ಜುವ ಬದಲು ಮೊಬೈಲನ್ನೇ ಸ್ಕ್ಯಾನ್ ಮಾಡಿ ಹಣ ಪಾವತಿಸುವ ರೋಚಕ ಕಲ್ಪನೆ ನಿಯರ್ ಫೀಲ್ಡ್ ಕಮ್ಯುನಿಕೇಶನ್‌ನಂತಹ (ಎನ್‌ಎಫ್‌ಸಿ) ತಂತ್ರಜ್ಞಾನಗಳಿಂದ ಸಾಕಾರವಾಗುತ್ತಿದೆ.

ಮುಂದಿನ ವಾರ: ಡಿಜಿಟಲ್ ಸಹಾಯಕ | ಈವರೆಗಿನ ಮುಖಗಳು

ಬುಧವಾರ, ಜುಲೈ 8, 2015

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ

ಕಂಪ್ಯೂಟರ್ ಬಳಕೆ ಬಹಳ ಸಾಮಾನ್ಯವಾದ ಸಂಗತಿ. ಪುಟ್ಟ ಮಕ್ಕಳಿಂದ ಅಜ್ಜ-ಅಜ್ಜಿಯರವರೆಗೆ ಬಹುತೇಕ ಎಲ್ಲರೂ ತಮ್ಮತಮ್ಮ ಅಗತ್ಯಗಳಿಗಾಗಿ ಕಂಪ್ಯೂಟರನ್ನು ಸರಾಗವಾಗಿ ಬಳಸುತ್ತಾರೆ.

ಆದರೆ ಕಂಪ್ಯೂಟರಿನ ನಿರ್ವಹಣೆ ಮಾತ್ರ ನಮ್ಮಲ್ಲಿ ಅನೇಕರಿಗೆ ತಲೆನೋವು ತರಿಸುವ ಸಂಗತಿ. ತಂತ್ರಾಂಶಗಳನ್ನು ಇನ್‌ಸ್ಟಾಲ್ ಮಾಡುವುದು, ಅವುಗಳನ್ನು ನವೀಕರಿಸುವುದು (ಅಪ್‌ಗ್ರೇಡ್), ವೈರಸ್ ಇತ್ಯಾದಿ ಬರದಂತೆ ನೋಡಿಕೊಳ್ಳುವುದು - ಇದನ್ನೆಲ್ಲ ಇಷ್ಟಪಟ್ಟು ಮಾಡುವವರು ಬಹಳ ಕಡಿಮೆ ಎಂದೇ ಹೇಳಬೇಕು.

ಈ ಸಮಸ್ಯೆಗೆ ಪರಿಹಾರ ಏನು? ಇನ್‌ಸ್ಟಾಲ್-ಅಪ್‌ಗ್ರೇಡುಗಳ ತಲೆಬಿಸಿಯಿಲ್ಲದೆ ಕಂಪ್ಯೂಟರನ್ನು ಬಳಸುವುದು ಸಾಧ್ಯವಿಲ್ಲವೆ?

ಕಂಪ್ಯೂಟರ್ ಬಳಕೆಯ ಹೊಸದೊಂದು ಆಯಾಮ ಕುರಿತ ವಿಶೇಷ ಲೇಖನ ಇಲ್ಲಿದೆ. ಓದಿ, ಪ್ರತಿಕ್ರಿಯೆ ನೀಡಿ.

ಈ ಲೇಖನದಲ್ಲಿ ಬಳಸಲಾಗಿರುವ ಹೊಸಬಗೆಯ ವಿನ್ಯಾಸ ಹೇಗಿದೆ? ನಿಮ್ಮ ಅನಿಸಿಕೆ ತಿಳಿಯುವ ಕುತೂಹಲ ನಮ್ಮದು.

ಶುಕ್ರವಾರ, ಜುಲೈ 3, 2015

ಸ್ಮಾರ್ಟ್‌ಫೋನ್ ಮುಖ ೬: ದಾರಿತೋರುವ ಮಾರ್ಗದರ್ಶಕ

ಪ್ರಯಾಣದ ಸಂದರ್ಭದಲ್ಲಿ ಸಾಗಬೇಕಾದ ದಾರಿಯ ಕುರಿತು ಗೊಂದಲವಾಗುವುದು ಅದೆಷ್ಟೋ ಬಾರಿ. ನಾವು ಹೋಗಬೇಕಿರುವ ಸ್ಥಳ ಎಷ್ಟು ದೂರದಲ್ಲಿದೆ, ಅಲ್ಲಿಗೆ ಹೋಗಬೇಕಿರುವ ದಾರಿ ಯಾವುದು, ಮಾರ್ಗಮಧ್ಯೆ ಯಾವ ರಸ್ತೆಯಲ್ಲಿ ತಿರುಗಬೇಕು - ಇದೆಲ್ಲ ಸಾಕಷ್ಟು ಗೊಂದಲಮೂಡಿಸುವ ಸಂಗತಿಗಳು. ಇಂತಹ ಗೊಂದಲಗಳಿಂದ ಪಾರಾಗಲು ನಾವು ಮೊಬೈಲ್ ಮೊರೆಹೋಗುವುದು ಸಾಧ್ಯ. ಈಗಿನ ಬಹುತೇಕ ಎಲ್ಲ ಫೋನುಗಳಲ್ಲೂ ಜಿಪಿಎಸ್ ಸೌಲಭ್ಯ ಇರುತ್ತದಲ್ಲ, ನಮ್ಮ ಮಾರ್ಗದರ್ಶಕನಂತೆ ಕೆಲಸಮಾಡಲು ಮೊಬೈಲ್ ಫೋನ್ ಅದೇ ತಂತ್ರಜ್ಞಾನವನ್ನು ಬಳಸುತ್ತದೆ. ನಾವು ಎಲ್ಲಿದ್ದೇವೆ ಎಂದು ಮ್ಯಾಪಿನಲ್ಲಿ ನೋಡಲು, ಹೋಗಬೇಕಾದ ದಾರಿಯನ್ನು ಗುರುತುಹಾಕಿಕೊಳ್ಳಲು 'ಗೂಗಲ್ ಮ್ಯಾಪ್ಸ್'ನಂತಹ ಹಲವು ಆಪ್‌ಗಳನ್ನು ಬಳಸುವುದು ಸಾಧ್ಯ. ಟ್ಯಾಕ್ಸಿ-ಆಟೋಗಳನ್ನು ಮೊಬೈಲ್ ಮೂಲಕವೇ ಕರೆಸುವ ಸೌಲಭ್ಯ ನೀಡುವ ಆಪ್‌ಗಳಲ್ಲಿ ವಾಹನ ಎಲ್ಲಿದೆ ಎಂದು ನಮಗೆ ತೋರಿಸುವುದಕ್ಕೆ, ನಾವೆಲ್ಲಿದ್ದೇವೆ ಎಂದು ಚಾಲಕರಿಗೆ ತಿಳಿಸುವುದಕ್ಕೂ ಇದೇ ತಂತ್ರಜ್ಞಾನ ಬಳಕೆಯಾಗುತ್ತದೆ. ಅಂದಹಾಗೆ ದಾರಿತೋರುವುದು ಎಂದರೆ ಮ್ಯಾಪ್ ತೋರಿಸುವುದಷ್ಟೇ ಏನೂ ಅಲ್ಲವಲ್ಲ, ಸುತ್ತಮುತ್ತ ಕತ್ತಲೆಯಿದ್ದಾಗ ಮೊಬೈಲ್ ಫೋನನ್ನೇ ಟಾರ್ಚಿನಂತೆ ಬಳಸುವುದು ಕೂಡ ಸಾಧ್ಯ. ಫ್ಲ್ಯಾಶ್ ಇಲ್ಲದ ಫೋನುಗಳಲ್ಲಿ ಬಳಸಲು ಪರದೆಯನ್ನೇ ಟಾರ್ಚಿನಂತೆ ಬೆಳಗಬಲ್ಲ ಆಪ್‌ಗಳೂ ಇವೆ.

ಮುಂದಿನ ವಾರ: ಜೇಬಿನೊಳಗಿನ ಪರ್ಸು | ಈವರೆಗಿನ ಮುಖಗಳು
badge