ಬುಧವಾರ, ನವೆಂಬರ್ 30, 2016

ನಿಮಗೆ 'ರುಪೇ' ಗೊತ್ತೇ?

ಟಿ. ಜಿ. ಶ್ರೀನಿಧಿ


ಪ್ರಪಂಚದಲ್ಲಿ ಕ್ರೆಡಿಟ್ ಕಾರ್ಡ್ - ಡೆಬಿಟ್ ಕಾರ್ಡ್ ನೀಡುವ ಸಾವಿರಾರು ಬ್ಯಾಂಕುಗಳಿವೆ, ಲಕ್ಷಗಟ್ಟಲೆ ವ್ಯಾಪಾರಸ್ಥರಿದ್ದಾರೆ, ಕೋಟ್ಯಂತರ ಸಂಖ್ಯೆಯ ಗ್ರಾಹಕರಿದ್ದಾರೆ. ಕಾರ್ಡ್ ನೀಡುವ ಪ್ರತಿ ಬ್ಯಾಂಕಿನ ಸಂಪರ್ಕ ಪ್ರತಿಯೊಬ್ಬ ವ್ಯಾಪಾರಸ್ಥನಿಗೂ ಇರಬೇಕು ಎಂದರೆ ಅದು ಅಸಾಧ್ಯವೇ ಸರಿ. ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕ, ವ್ಯಾಪಾರಸ್ಥ ಹಾಗೂ ಬ್ಯಾಂಕುಗಳ ನಡುವಿನ ಸಂಪರ್ಕ ಸೇತುವಿನಂತೆ ವೀಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಸಂಸ್ಥೆಗಳು ಕೆಲಸಮಾಡುತ್ತವೆ.

ಯಾವುದೇ ವ್ಯಾಪಾರಸ್ಥನೊಡನೆ ವ್ಯವಹರಿಸುವಾಗ ಗ್ರಾಹಕ ತನ್ನ ಕಾರ್ಡ್ ಬಳಸುತ್ತಾನೆ ಎಂದುಕೊಳ್ಳೋಣ. ಆತನ ಬ್ಯಾಂಕ್ ಖಾತೆ ಪರಿಶೀಲಿಸಿ ಅದರಲ್ಲಿ ಸಾಕಷ್ಟು ಹಣವಿದ್ದರೆ ಅದನ್ನು ಆತನ ಬ್ಯಾಂಕಿನಿಂದ ವ್ಯಾಪಾರಸ್ಥನ ಬ್ಯಾಂಕಿಗೆ-ಖಾತೆಗೆ ವರ್ಗಾಯಿಸಲು ನೆರವಾಗುವುದು ಈ ಸಂಸ್ಥೆಗಳ ಕೆಲಸ. ಇದಕ್ಕಾಗಿ ಅವು ಬ್ಯಾಂಕುಗಳಿಂದ ಶುಲ್ಕ ವಸೂಲಿ ಮಾಡುತ್ತವೆ.

ಸೋಮವಾರ, ನವೆಂಬರ್ 28, 2016

ಪವರ್‌ಸ್ಟೋರಿ: ಇದು ಬ್ಯಾಟರಿ ಸಮಾಚಾರ!

ಟಿ. ಜಿ. ಶ್ರೀನಿಧಿ

ಬಾಲ್ಯದ ದಿನಗಳ ವಿಷಯ. ಪಶ್ಚಿಮಘಟ್ಟದ ತಪ್ಪಲಿನ ನಮ್ಮ ಊರಿನಲ್ಲಿ ಹಗಲಿನಲ್ಲೇ ಕರೆಂಟು ಇರುತ್ತಿರಲಿಲ್ಲ, ಇನ್ನು ರಾತ್ರಿ ಸ್ಟ್ರೀಟ್ ಲೈಟಿರುತ್ತದೆಯೇ? ಮನೆಯೊಳಗೆ ಬೆಳಕಿಗಾಗಿ ಸೀಮೆಎಣ್ಣೆ ದೀಪ ಉರಿಸಿದಂತೆ ಹೊರಗಡೆಯ ಸಂಚಾರಕ್ಕೆ ಟಾರ್ಚು ನಮ್ಮ ಅಚ್ಚುಮೆಚ್ಚಿನ ಸಂಗಾತಿಯಾಗಿತ್ತು.

ಟಾರ್ಚನ್ನೇ ಬ್ಯಾಟರಿಯೆಂದು ಕರೆಯುವ ಅಭ್ಯಾಸ ಹಲವರಿಗಿದೆ; ಆದರೆ ನಮಗೆ ಪರಿಚಯವಿದ್ದ ಬ್ಯಾಟರಿ ಟಾರ್ಚಿನೊಳಗಿರುತ್ತದಲ್ಲ, ಅದು (ಕೆಲವರು ಅದನ್ನು ಸೆಲ್ಲು ಅಂತಲೂ ಕರೆಯುತ್ತಾರೆ). ಯಾವತ್ತೋ ಒಂದು ದಿನ ಸಂಜೆಯ ವಾಕಿಂಗ್ ಮುಗಿಸುವ ವೇಳೆಗೆ ಟಾರ್ಚಿನ ಬೆಳಕು ಮಂಕಾಯಿತು ಅನ್ನಿಸಿದರೆ ಹೊಸ ಬ್ಯಾಟರಿ ಕೊಂಡುತರುವ ಕೆಲಸ ನಾಳೆಯ ಕೆಲಸಗಳ ಪಟ್ಟಿಗೆ ಸೇರಿಬಿಡುವುದು.

ನಿಶ್ಶಕ್ತವಾಗಿ ನಿವೃತ್ತಿ ಪಡೆಯುವ ಬ್ಯಾಟರಿಗೆ ವಿದಾಯ ಹೇಳುವ ಕ್ರಮವೂ ನಮ್ಮೂರಿನಲ್ಲಿತ್ತು. ನೆಲಕ್ಕೆ ಸಗಣಿ ನೀರು ಹಾಕಿ ಸಾರಿಸುವವರು ಬಣ್ಣ ಗಾಢವಾಗಿ ಬರಲಿ ಎಂದು ಬ್ಯಾಟರಿಯೊಳಗಿನ ಕಪ್ಪು ಪುಡಿಯನ್ನು ಸಗಣಿ ನೀರಿಗೆ ಬೆರೆಸುತ್ತಿದ್ದರು.

ನಿಶ್ಶಕ್ತ ಬ್ಯಾಟರಿ ಹಾಗಿರಲಿ, ಅಂಗಡಿಗೆ ಹೋಗಿ ಬ್ಯಾಟರಿ ಕೊಳ್ಳುವ ಅಭ್ಯಾಸಕ್ಕೇ ವಿದಾಯ ಹೇಳಬೇಕಾದ ಪರಿಸ್ಥಿತಿ ಮುಂದಿನ ವರ್ಷಗಳಲ್ಲಿ ಬಂತು.

ಬುಧವಾರ, ನವೆಂಬರ್ 23, 2016

ಮನರಂಜನೆ, ಈಗ ನಮ್ಮ ಅಂಗೈಯಲ್ಲಿ!

ಟಿ. ಜಿ. ಶ್ರೀನಿಧಿ


ನಮ್ಮ ಮನೆಗಳಿಗೆ ಟಿವಿ ಬಂದು ಒಂದೆರಡು ದಶಕಗಳಾಗಿವೆ. ಟಿವಿ ಪರಿಚಯವಾದ ಹೊಸತರಲ್ಲಿ ನಮಗೆ ದೊರಕುತ್ತಿದ್ದದ್ದು ಸೀಮಿತ ಆಯ್ಕೆಗಳಷ್ಟೇ. ಚಿತ್ರಗೀತೆ ಕೇಳಲು ಶುಕ್ರವಾರ ರಾತ್ರಿ, ಸಿನಿಮಾ ನೋಡಲು ಭಾನುವಾರ ಸಂಜೆಗಳಿಗೆ ಕಾಯಬೇಕಿದ್ದ ಸಮಯ ಅದು.

ಆನಂತರ ದೊಡ್ಡ ಊರುಗಳಿಗೆ ಕೇಬಲ್ ಬಂತು, ಕೊಂಚ ಸಮಯದ ನಂತರ ಹಳ್ಳಿಗಳಲ್ಲೂ ಡಿಶ್ ಆಂಟೆನಾಗಳು ಕಾಣಿಸಿಕೊಂಡವು. ಒಂದೇ ಚಾನೆಲ್ ನೋಡಬೇಕಿದ್ದ ಅನಿವಾರ್ಯತೆ ಹೋಗಿ ಹತ್ತಾರು ಚಾನಲ್ಲುಗಳ ಪೈಕಿ ಇಷ್ಟವಾದುದನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ನಮಗೆ ಸಿಕ್ಕಿತು. ಈಗಂತೂ ಟಿವಿಯ ಸೆಟ್‌ಟಾಪ್ ಬಾಕ್ಸು ನೂರಾರು ಚಾನಲ್ಲುಗಳ ಲೋಕಕ್ಕೆ ನಮ್ಮನ್ನು ನೇರವಾಗಿ ಕರೆದೊಯ್ಯುತ್ತದೆ.

ಇಷ್ಟೆಲ್ಲ ಬದಲಾವಣೆಯಾದರೂ ನಾವು ಟೀವಿ ಕಾರ್ಯಕ್ರಮಗಳನ್ನು ನೋಡುವ ರೀತಿ ಮಾತ್ರ ತೀರಾ ಈಚಿನವರೆಗೂ ಹೆಚ್ಚೇನೂ ಬದಲಾಗಿರಲಿಲ್ಲ. ನೋಡಲು ಇಷ್ಟವಾಗುವಂತಹ ಕಾರ್ಯಕ್ರಮ ಸಿಗುವವರೆಗೂ ಚಾನಲ್ಲುಗಳನ್ನು ಬದಲಿಸುತ್ತಾ ಹೋಗುವುದು ಈಗಲೂ ನಮ್ಮಲ್ಲಿ ಅನೇಕರ ಅಭ್ಯಾಸ.

ಈ ಪರಿಸ್ಥಿತಿ ಬದಲಿಸಿ, ನಮ್ಮ ಆಯ್ಕೆಯ ಕಾರ್ಯಕ್ರಮವನ್ನು ನಮಗೆ ಬೇಕಾದಾಗ ನೋಡಲು ಅನುವುಮಾಡಿಕೊಟ್ಟಿರುವುದು ವೀಡಿಯೋ ಆನ್ ಡಿಮ್ಯಾಂಡ್ ಎಂಬ ಪರಿಕಲ್ಪನೆ.

ಭಾನುವಾರ, ನವೆಂಬರ್ 20, 2016

ತಂತ್ರಜ್ಞಾನ: ನಾಳೆಗಳ ನಿರ್ಮಾಣ

ಆಳ್ವಾಸ್ ನುಡಿಸಿರಿ - ೨೦೧೬ರಲ್ಲಿ ಮಾಡಿದ ಭಾಷಣದ ಪೂರ್ಣರೂಪ

ಟಿ. ಜಿ. ಶ್ರೀನಿಧಿ

ನಾಳೆಗಳನ್ನು ನಿರ್ಮಿಸುವಲ್ಲಿ ವಿದ್ಯಾಸಂಸ್ಥೆಗಳ ಪಾತ್ರ ಬಹಳ ಮಹತ್ವದ್ದು. ಅಂತಹ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ಸಂಸ್ಥೆಯೊಂದು ನಾಳೆಗಳ ನಿರ್ಮಾಣದ ಕುರಿತಾಗಿಯೇ ಈ ಸಮ್ಮೇಳನವನ್ನು ಆಯೋಜಿಸಿರುವುದು ಅತ್ಯಂತ ಸಮಂಜಸವಾಗಿದೆ. ಕಳೆದೆರಡು ದಿನಗಳಿಂದ ವಿವಿಧ ಕ್ಷೇತ್ರದ ನಾಳೆಗಳ ಕುರಿತ ಅನೇಕ ಸಂಗತಿಗಳನ್ನು, ಅನಿಸಿಕೆ-ಅಭಿಪ್ರಾಯಗಳನ್ನು ನಾವೆಲ್ಲ ತಿಳಿದುಕೊಂಡಿದ್ದೇವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ನಾಳೆಗಳ ಕುರಿತು ಮಾತನಾಡುವ ಸಮಯ.

೨೦೦೦ನೇ ಸಾಲಿನಲ್ಲಿ ಜಾವೆದ್ ಅಖ್ತರ್‌ ಅವರಿಗೆ ಅತ್ಯುತ್ತಮ ಗೀತರಚನೆಗೆಂದು ಚಲನಚಿತ್ರ ಕ್ಷೇತ್ರದ ರಾಷ್ಟ್ರಪುರಸ್ಕಾರ ಲಭಿಸಿತ್ತು. "ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ" - ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ.

ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ.

ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ.
badge