ಶನಿವಾರ, ಫೆಬ್ರವರಿ 28, 2015

ವಿಜ್ಞಾನ ದಿನ ವಿಶೇಷ: ಜ್ವರಪೀಡಿತ, ಬರಪೀಡಿತರ ಮಧ್ಯೆ ವಿಜ್ಞಾನ ಹಬ್ಬ

ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಕುರಿತು ಫೆ. ೨೬ರ ಪ್ರಜಾವಾಣಿಯಲ್ಲಿ ಪ್ರಕಟವಾದ ನಾಗೇಶ ಹೆಗಡೆಯವರ ಈ ಬರಹವನ್ನು ಲೇಖಕರ ಅನುಮತಿಯೊಡನೆ ಇಲ್ಲಿ ಪ್ರಕಟಿಸುತ್ತಿದ್ದೇವೆ.  
ನಾಗೇಶ ಹೆಗಡೆ

ನಮ್ಮ ದೇಶದಲ್ಲಿ ಪ್ರತಿದಿನ ಸುಮಾರು ೧೩೦೦ ಜನರು ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಮಲೇರಿಯಾದಿಂದ ನಿತ್ಯವೂ ಸರಾಸರಿ ೩೨೫ ಜನರು ಇಹಲೋಕ ತ್ಯಜಿಸುತ್ತಿದ್ದಾರೆ. ಏಡ್ಸ್ ಸಾವು ಇನ್ನೂರರ ಆಸುಪಾಸು ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭೇದಿ- ಅತಿಸಾರದಿಂದ- (ಡಯಾರಿಯಾ) ಸುಮಾರು ಒಂದು ಸಾವಿರ ಮಕ್ಕಳು ಪ್ರತಿದಿನವೂ ಸಾಯುತ್ತಿದ್ದಾರೆ. ಒಂದು ಸಾವಿರ! ಆ ಯಾವವೂ ನಮಗೆ ಲೆಕ್ಕಕ್ಕಿಲ್ಲ. ಆದರೆ ಪ್ರತಿದಿನ ಸರಾಸರಿ ೨೦ ರೋಗಿಗಳ ಪ್ರಾಣ ಹೀರುತ್ತಿರುವ ಹಂದಿಜ್ವರದ ಬಗ್ಗೆ ಮಾತ್ರ ಹುಯಿಲು ಹೆಚ್ಚುತ್ತಿದೆ. ಕಳೆದ ಒಂದು ತಿಂಗಳಲ್ಲಿ ೬೦೦ ದಾಟಿತು,೭೦೦ ದಾಟಿತು, ೮೦೦ನ್ನೂ ದಾಟಿತು ಎಂದು ದಿಗಿಲುಗೊಳಿಸುವ ವರದಿಗಳು ಬರುತ್ತಿವೆ.  ‘ರೋಗ­ಪೀಡಿತರ ಸಂಖ್ಯೆ ೧೪ ಸಾವಿರ ತಲು­ಪಿದೆ’ ಎಂದು ಮೊನ್ನೆ ಸಂಸತ್ತಿನಲ್ಲೂ ಸಚಿವರು ಘೋಷಿಸಿ­ದ್ದಾರೆ. ಬೇಕೆಂದಷ್ಟು ಲಸಿಕೆ ಮಾತ್ರೆ, ಮುಖ­ವಾಡ ಎಲ್ಲ ಕಡೆ ಸಿಗುವಂತೆ ವ್ಯವಸ್ಥೆ ಮಾಡ­ಲಾ­ಗಿದೆಯಂತೆ. ಔಷಧ ಕಂಪೆನಿ­ಗಳು ತಮ್ಮ ಮುಖ­ವಾಡದ ಹಿಂದೆ ಮುಸುಮುಸು ನಗುತ್ತಿರ­ಬಹುದು.

ಕಂಗಾಲಾಗುವ ಸುದ್ದಿಯನ್ನೇ ಎಲ್ಲರೂ ಬಯಸುವ ಕಾಲ ಇದು. ಆದರೆ ಈ ಜ್ವರಕ್ಕೆ ಅಷ್ಟೊಂದು ಕಂಗಾಲು ಬೇಕಾಗಿಲ್ಲ. ಹಿಂದೆಲ್ಲ  ಇದು ಬರೀ ‘ಫ್ಲೂ’ ಅಥವಾ ‘ಇನ್‌ಫ್ಲುಯೆಂಝಾ’ ಹೆಸರಲ್ಲಿ ಬರುತ್ತಿತ್ತು. ಅಂಥ ಪ್ರಾಣಾಂತಿಕ ಏನಲ್ಲ. ಹಂದಿಗಳಿಗೂ ಬೆದರಬೇಕಾಗಿಲ್ಲ. ಜ್ವರ ಬಂದ ಹಂದಿಗಳಿಂದ ನಮಗೆ ಸೋಂಕು ತಗುಲು­ವುದು ಇಲ್ಲವೇ ಇಲ್ಲವೆಂಬಷ್ಟು ಅಪರೂಪ. ಅಕಸ್ಮಾತ್ ತಗುಲಿದರೂ ಆ ಒಬ್ಬರಿಂದ ಇನ್ನೊಬ್ಬ ವ್ಯಕ್ತಿಗೆ ದಾಟುವುದು ಇನ್ನೂ ಅಪ­ರೂಪ. ಯಾವುದೋ ದೇಶದಲ್ಲಿ ಹೇಗೋ ಇಬ್ಬರ ದೇಹದಲ್ಲಿ ಹೊಕ್ಕು -ಹೊರಟ ಹಂದಿ ವೈರಸ್ ತುಸು ಹೊಸರೂಪ ಧರಿಸಿ, ಒಬ್ಬರಿಂದೊ­ಬ್ಬರಿಗೆ ದಾಟಲು ಕಲಿತಿರುತ್ತದೆ. ಅಲ್ಲಿಂದ ಮುಂದೆ ಅದು ಸಾಂಕ್ರಾಮಿಕ ಎನಿಸು­ತ್ತದೆ. ಈಗ ಅಂಥದೊಂದು ಸಾಂಕ್ರಾಮಿಕ ಎಲ್ಲಿಂದಲೋ ಇಲ್ಲಿಗೆ ಬಂದಿದೆ. ತಾನಾಗಿ ಬಂತೋ ಅಥವಾ ಬೇಕಂತಲೇ ತಂದಿದ್ದೊ ಗೊತ್ತಿಲ್ಲ.

ಭಾನುವಾರ, ಫೆಬ್ರವರಿ 22, 2015

ಕಂಪ್ಯೂಟರಿನ ರೂಪಾಂತರ ಪರ್ವ

ಕಂಪ್ಯೂಟರ್ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್ ಹಾಗೂ ಪಕ್ಕದಲ್ಲೊಂದು ದೊಡ್ಡ ಕ್ಯಾಬಿನೆಟ್. ಇಂತಹ ದೊಡ್ಡ ಪರದೆಯ, ಮೇಜಿನ ಮೇಲೆ ಸ್ಥಾಪಿತವಾಗುವ ('ಡೆಸ್ಕ್‌ಟಾಪ್') ಕಂಪ್ಯೂಟರುಗಳ ಕಾಲ ಲ್ಯಾಪ್‌ಟಾಪು-ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಂಪ್ಯೂಟರಿನ ರೂಪಾಂತರ ಪರ್ವ ಪ್ರಾರಂಭವಾಗಿದೆ. ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಕಂಪ್ಯೂಟರ್ ಇಡಲು ಬೇಕಾದ ಜಾಗವನ್ನು ಕಡಿಮೆ ಮಾಡಲಾಗುತ್ತಿದೆ. ದಿವಾನಖಾನೆಯ ಟೀವಿಗೇ ಜೋಡಿಸಬಹುದಾದ ಸಾಧನಗಳು ದಶಕಗಳ ಹಿಂದಿನ ವಿನ್ಯಾಸವನ್ನು ಮತ್ತೆ ನೆನಪಿಸುತ್ತಿವೆ. ಕಂಪ್ಯೂಟರ್ ಜಗದ ಫ್ಯಾಶನ್ ಚಕ್ರ ಪೂರ್ತಿ ಒಂದು ಸುತ್ತು ಬಂದಿದೆ!
ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ನಮ್ಮ ಮನೆಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದು ಮಾಹಿತಿ ತಂತ್ರಜ್ಞಾನದ ಪ್ರಭಾವ ಬೆಳೆಯಲು ಶುರುವಾದ ಸಮಯದಲ್ಲೇ ಇರಬೇಕು. ಅಲ್ಲಿಂದ ಈಚೆಗಿನ ದಶಕಗಳಲ್ಲಿ ಟೀವಿ ಫ್ರಿಜ್ಜು ಮಿಕ್ಸಿಗಳಂತೆ  ಕಂಪ್ಯೂಟರ್ ಕೂಡ ಮನೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಸಾಧನಗಳ ಪಟ್ಟಿಗೆ ಸೇರಿಕೊಂಡುಬಿಟ್ಟಿದೆ.

ಮನೆಯ ಕಂಪ್ಯೂಟರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್, ಸ್ಪೀಕರ್ ಮತ್ತು ಅದೆಲ್ಲವನ್ನೂ ಸಂಪರ್ಕಿಸುವ - ಮದರ್‌ಬೋರ್ಡ್, ಹಾರ್ಡ್ ಡಿಸ್ಕ್, ರ್‍ಯಾಮ್ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಂಡಿರುವ - ದೊಡ್ಡದೊಂದು ಪೆಟ್ಟಿಗೆ. ಡಬ್ಬ ಎಂದಾದರೂ ಕರೆಯಿರಿ, ಕ್ಯಾಬಿನೆಟ್ ಎಂದಾದರೂ ಹೆಸರಿಸಿ - ಅದಂತೂ ಆದರ್ಶ ಡೆಸ್ಕ್‌ಟಾಪ್ ಕಂಪ್ಯೂಟರಿನ ಅವಿಭಾಜ್ಯ ಅಂಗ. ಇನ್ನು ವಿದ್ಯುತ್ ಕೈಕೊಟ್ಟಾಗ ನೆರವಿಗೆ ಬರುವ ಚಿಕ್ಕದೊಂದು ಯುಪಿಎಸ್ ಹಾಗೂ ಕಂಪ್ಯೂಟರಿನ ಸಮಸ್ತ ಅಂಗಗಳಿಗೂ ಆಶ್ರಯನೀಡುವ ಕಂಪ್ಯೂಟರ್ ಟೇಬಲ್ ಕೂಡ ಬಹಳ ಮನೆಗಳಲ್ಲಿ ಇರುತ್ತವೆ.

ಮನೆ ದೊಡ್ಡದಾಗಿದ್ದರೆ ಇಂಥದ್ದೊಂದು ಕಂಪ್ಯೂಟರ್ ಕುಟುಂಬಕ್ಕೆ ಜಾಗ ಕೊಡುವುದರಲ್ಲಿ ಹೆಚ್ಚಿನ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಮನೆ ಕಟ್ಟಲು ಬೇಕಾಗುವ ರಿಯಲ್ ಎಸ್ಟೇಟ್ ಹಾಗೂ ನಾವು ಕೊಳ್ಳುವ ಅಸಂಖ್ಯ ವಸ್ತುಗಳಿಗೆ ಮನೆಯೊಳಗೆ ಒದಗಿಸಬೇಕಾದ ರಿಯಲ್ ಎಸ್ಟೇಟುಗಳೆರಡೂ ದುಬಾರಿ. ಹೀಗಿರುವಾಗ ಕಂಪ್ಯೂಟರಿಗೆ ಅಷ್ಟೆಲ್ಲ ಜಾಗ ಕೊಡುವುದೆಂದರೇನು ತಮಾಷೆಯೇ?

ಹಾಗಾಗಿಯೇ ಈಗ ಸ್ಮಾಲ್ ಈಸ್ ಬ್ಯೂಟಿಫುಲ್. ದಿನದಿಂದ ದಿನಕ್ಕೆ ಕಂಪ್ಯೂಟರಿನ ಮೂತಿ, ಅಂದರೆ ಪರದೆ, ಚಿಕ್ಕದಾಗುತ್ತ ಸಾಗುತ್ತಿದೆ. ಈ ವಿದ್ಯಮಾನದಿಂದ ಅದರ ಕೀರ್ತಿಗೇನೂ ಕುಂದು ಬಾರದಂತೆ ನೋಡಿಕೊಳ್ಳಲು ಇತರ ಅಂಗಗಳೂ ಗಾತ್ರದಲ್ಲಿ ಕುಗ್ಗುವುದನ್ನು ಕಲಿತುಬಿಟ್ಟಿವೆ.

ಕಂಪ್ಯೂಟರಿಗೆ ಟೇಬಲ್ ಬೇರೆ ಯಾಕೆ, ಕೆಲಸಮಾಡುವಷ್ಟು ಹೊತ್ತು ತೊಡೆಯ ಮೇಲಿಟ್ಟುಕೊಂಡಿದ್ದು ಆನಂತರ ಬ್ಯಾಗಿನೊಳಕ್ಕೆ ತೂರಿಸಿದರೆ ಆಯಿತು - ಈಗ ಲ್ಯಾಪ್‌ಟಾಪ್ ಕೃಪೆಯಿಂದ ಕುಳಿತ ಜಾಗವೇ ಆಫೀಸು. ಆಫೀಸು ಕೆಲಸ ಮುಗಿಸಿದ ಮೇಲೆ ಇಂಟರ್‌ನೆಟ್ಟಿನಲ್ಲಿ ಆರಾಮವಾಗಿ ಈಜಾಡಲು ಹೇಗೂ ಟ್ಯಾಬ್ಲೆಟ್ ಇದೆ. ಇನ್ನು ಇಪ್ಪತ್ತನಾಲ್ಕು ಗಂಟೆಯೂ ವಾಟ್ಸಾಪಿನಲ್ಲಿ ವಾಟ್ಸಪ್ ಎನ್ನಲು ಜೇಬಿನಲ್ಲೊಂದು ಸ್ಮಾರ್ಟ್ ಫೋನು, ಅದನ್ನು ಜೇಬಿನಿಂದಾಚೆ ತೆಗೆಯದೆಯೇ ಓದಬೇಕೆಂದರೆ ಮುಂಗೈಯ ವಾಚ್ ಕೂಡ ಸ್ಮಾರ್ಟು. ಇಷ್ಟಿದ್ದ ಮೇಲೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಇನ್ನೇನು!

ಸೋಮವಾರ, ಫೆಬ್ರವರಿ 16, 2015

ಕ್ರಿಕೆಟ್ ಕಣದಲ್ಲಿ ತಂತ್ರಜ್ಞಾನದ ಆಟ

ಟಿ. ಜಿ. ಶ್ರೀನಿಧಿ

ವರ್ಷಗಳು ಕಳೆದಂತೆ ಕ್ರಿಕೆಟ್ ಆಟದ ಸ್ವರೂಪ ಬದಲಾಗುತ್ತಿದೆ. ಪಂದ್ಯಗಳು ಟೆಸ್ಟ್‌ನಿಂದ ಒನ್‌ಡೇಗೆ, ಒನ್‌ಡೇಯಿಂದ ಟ್ವೆಂಟಿ ಟ್ವೆಂಟಿಗೆ ರೂಪಾಂತರಗೊಂಡಿವೆ. ಪಂದ್ಯಗಳ ಕಾಲಾವಧಿಯಷ್ಟೇ ಅಲ್ಲ, ಆಟದ ಶೈಲಿಯಿಂದ ಆಟಗಾರರ ಜೀವನ ಶೈಲಿಯವರೆಗೆ ಎಲ್ಲೆಲ್ಲೂ ಬದಲಾವಣೆ ಕಾಣಸಿಗುತ್ತಿದೆ.

ತಂತ್ರಜ್ಞಾನದ ಅನುಕೂಲತೆಗಳನ್ನು ಅಳವಡಿಸಿಕೊಳ್ಳುವುದರಲ್ಲೂ ಕ್ರಿಕೆಟ್ ಸದಾ ಮುಂದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹರಿದು ಬರುವ ಹಣದ ಪ್ರವಾಹವೇ ಜೊತೆಗಿರುವಾಗ ಖರ್ಚಿನ ಚಿಂತೆಯೂ ಇಲ್ಲ. ಹಾಗಾಗಿ ಇಂದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ಜೊತೆಗೆ ತಂತ್ರಜ್ಞಾನವೂ ಆಟವಾಡುತ್ತದೆ.

ಕ್ರಿಕೆಟ್ ಆಟದಲ್ಲಿ ತಂತ್ರಜ್ಞಾನದ ಪಾತ್ರ ನಮ್ಮ ಗಮನಕ್ಕೆ ಬಂದದ್ದು ಬಹಳ ವರ್ಷಗಳ ಹಿಂದೆ: ಬ್ಯಾಟ್ಸ್‌ಮನ್ ರನೌಟ್ ಆಗಿದ್ದಾನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಮೈದಾನದಲ್ಲಿದ್ದ ಅಂಪೈರ್ ಟೀವಿ ಮುಂದಿದ್ದ ಅಂಪೈರನ್ನು ಕೇಳಿದರಲ್ಲ, ಆಗಲೇ! ಮನೆಯ ಸೋಫಾ ಮೇಲಿನ ಆಲೂಗಡ್ಡೆಗಳಿಗಷ್ಟೆ ಸಿಗುತ್ತಿದ್ದ ಆಕ್ಷನ್ ರೀಪ್ಲೇ ಸೌಲಭ್ಯ ಆಟಗಾರರಿಗೂ ಸಿಗುವಂತಾದದ್ದು ಆಗಿನ ಕಾಲಕ್ಕೆ ಸಾಕಷ್ಟು ಕುತೂಹಲಕರ ಎನ್ನಿಸಿತ್ತು.

ಈಗ ಇನ್ನಷ್ಟು ಸಮಯ ಸರಿದಿದೆ, ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಯಾಗಿದೆ. ಕ್ರಿಕೆಟ್ ಕಣದ ಮೇಲೆ ಅದರ ಪ್ರಭಾವವೂ ಜಾಸ್ತಿಯಾಗಿದೆ. ಜಾಹೀರಾತು ಫಲಕಗಳಿಂದ ಪ್ರಾರಂಭಿಸಿ ಟೀವಿ ಪ್ರಸಾರದ ಕ್ಯಾಮೆರಾವರೆಗೆ, ಚೆಂಡು ತಗುಲಿದರೆ ದೀಪ ಮಿನುಗಿಸುವ ಹೈಟೆಕ್ ವಿಕೆಟ್ಟುಗಳಿಂದ ಚೆಂಡಿನ ವೇಗ ಅಳೆಯುವ ವ್ಯವಸ್ಥೆಯವರೆಗೆ ಇದೀಗ ಎಲ್ಲೆಲ್ಲೂ ತಂತ್ರಜ್ಞಾನದ್ದೇ ಭರಾಟೆ.

ಮಂಗಳವಾರ, ಫೆಬ್ರವರಿ 3, 2015

ಫೋನ್ ಬ್ಯಾಟರಿಗೆ ಬದಲಾವಣೆಯ ಸಮಯ

ಟಿ. ಜಿ. ಶ್ರೀನಿಧಿ

ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಬಹುಶಃ ನಮ್ಮ ಕಲ್ಪನೆಗೂ ನಿಲುಕದಿದ್ದ ಮೊಬೈಲ್ ಫೋನು ಇಂದು ಜೀವನಾವಶ್ಯಕ ವಸ್ತು. ಮೊಬೈಲ್ ನೆಟ್‌ವರ್ಕ್ ಇಲ್ಲ ಅಥವಾ ಕರೆನ್ಸಿ ಖಾಲಿಯಾಗಿದೆ ಎಂದುಬಿಟ್ಟರೆ ಕೆಲವರಲ್ಲಿ ಏನನ್ನೋ ಕಳೆದುಕೊಂಡ ಭಾವನೆ ಉಂಟಾಗುವುದೂ ಅಪರೂಪವಲ್ಲ.

ನೆಟ್‌ವರ್ಕು-ಕರೆನ್ಸಿಗಳಿಗಿಂತ ಹೆಚ್ಚಿನ ತೊಂದರೆ ಕೊಡುವ ಸಂಗತಿಯೆಂದರೆ ಅದು ಮೊಬೈಲಿನ ಬ್ಯಾಟರಿ. ರಾಕ್ಷಸನ ಜೀವ ಏಳು ಸಮುದ್ರದಾಚೆ ಬಂಗಾರದ ಪಂಜರದಲ್ಲಿರುವ ಗಿಣಿಯಲ್ಲಿರುತ್ತಿತ್ತು ಎನ್ನುವ ಕತೆ ಕೇಳಿದ್ದೇವಲ್ಲ, ಈಗಿನ ಕಾಲದ ಮೊಬೈಲುಗಳ ಜೀವವೂ ಈ ಬ್ಯಾಟರಿಯೆನ್ನುವ ಪಂಜರದೊಳಗೇ ಇರುತ್ತದೆ. ಬ್ಯಾಟರಿ ಫೋನಿನೊಳಗೇ ಇರುವುದರಿಂದ ಏಳು ಸಮುದ್ರದಾಚೆ ಹೋಗುವ ಗೊಡವೆಯೆಲ್ಲ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.

ಮೊಬೈಲುಗಳು ಎಷ್ಟೆಲ್ಲ ಸ್ಮಾರ್ಟ್ ಆದರೂ, ಬಳಕೆಯಾಗುವ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾದರೂ ಅವುಗಳ ಬ್ಯಾಟರಿಗಳಲ್ಲಿ ಹಾಗೂ ಒಮ್ಮೆ ಚಾರ್ಜ್ ಮಾಡಿದಾಗ ಅವನ್ನು ಬಳಸಬಹುದಾದ ಕಾಲಾವಧಿಯಲ್ಲಿ ಮಾತ್ರ ಹೆಚ್ಚು ಬದಲಾವಣೆಯೇನೂ ಆಗಿಲ್ಲ.

ಸೋಮವಾರ, ಫೆಬ್ರವರಿ 2, 2015

ಹ್ಯಾಶ್‌ಟ್ಯಾಗ್ ಹೇಳುವ ಕತೆ

ಟಿ. ಜಿ. ಶ್ರೀನಿಧಿ

"ಚಳಿಗಾಲದ #ಬೆಂಗಳೂರು ಮತ್ತು ಬಿಸಿಬಿಸಿ #ಫಿಲ್ಟರ್‌ಕಾಫಿ - ಹೇಳಿ ಮಾಡಿಸಿದ ಜೋಡಿ!"

- ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ತಾಣಗಳಲ್ಲಿ ದಿನನಿತ್ಯವೂ ನಮ್ಮ ಕಣ್ಣಿಗೆ ಬೀಳುವ ಅಸಂಖ್ಯ ಸಂದೇಶಗಳಿಗೆ ಇದೊಂದು ಉದಾಹರಣೆ ಅಷ್ಟೆ. ಸಮಾಜ ಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಂದೇಶಗಳನ್ನು ಪೋಸ್ಟಿಸುವಾಗ - ಈ ಉದಾಹರಣೆಯಲ್ಲಿರುವಂತೆ - ಪ್ರಾರಂಭದಲ್ಲೋ ನಡುವಿನಲ್ಲೋ ಕೊನೆಯಲ್ಲೋ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇಂತಹ ಪದಗಳನ್ನು 'ಹ್ಯಾಶ್‌‌ಟ್ಯಾಗ್'ಗಳೆಂದು ಕರೆಯುತ್ತಾರೆ.

ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌‌ಟ್ಯಾಗ್‍ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿ ಎಂದು ಸೂಚಿಸಲು #Udayavani, ಬೆಂಗಳೂರಿಗೆ ಸಂಬಂಧಪಟ್ಟಿದ್ದು ಎಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ  #Kannada, ವಿಜ್ಞಾನದ ವಿಷಯಕ್ಕೆ #Science - ಹೀಗೆ ಯಾವ ವಿಷಯಕ್ಕೇ ಆದರೂ ನಾವು ಹ್ಯಾಶ್‌ಟ್ಯಾಗ್‌ಗಳನ್ನು ರೂಪಿಸಿಕೊಳ್ಳಬಹುದು, ಹಾಗೂ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಬಹುದು.

ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗ‌ಳನ್ನು ಹಾಗೂ ಖಾಲಿಜಾಗಗಳಿಗೆ (ಸ್ಪೇಸ್) ಹ್ಯಾಶ್‌ಟ್ಯಾಗ್‌‌ನಲ್ಲಿ ಜಾಗವಿಲ್ಲ.
badge