ಟಿ. ಜಿ. ಶ್ರೀನಿಧಿ
ವರ್ಷಗಳು ಕಳೆದಂತೆ ಕ್ರಿಕೆಟ್ ಆಟದ ಸ್ವರೂಪ ಬದಲಾಗುತ್ತಿದೆ. ಪಂದ್ಯಗಳು ಟೆಸ್ಟ್‌ನಿಂದ ಒನ್‌ಡೇಗೆ, ಒನ್‌ಡೇಯಿಂದ ಟ್ವೆಂಟಿ ಟ್ವೆಂಟಿಗೆ ರೂಪಾಂತರಗೊಂಡಿವೆ. ಪಂದ್ಯಗಳ ಕಾಲಾವಧಿಯಷ್ಟೇ ಅಲ್ಲ, ಆಟದ ಶೈಲಿಯಿಂದ ಆಟಗಾರರ ಜೀವನ ಶೈಲಿಯವರೆಗೆ ಎಲ್ಲೆಲ್ಲೂ ಬದಲಾವಣೆ ಕಾಣಸಿಗುತ್ತಿದೆ.
ತಂತ್ರಜ್ಞಾನದ ಅನುಕೂಲತೆಗಳನ್ನು ಅಳವಡಿಸಿಕೊಳ್ಳುವುದರಲ್ಲೂ ಕ್ರಿಕೆಟ್ ಸದಾ ಮುಂದೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಹರಿದು ಬರುವ ಹಣದ ಪ್ರವಾಹವೇ ಜೊತೆಗಿರುವಾಗ ಖರ್ಚಿನ ಚಿಂತೆಯೂ ಇಲ್ಲ. ಹಾಗಾಗಿ ಇಂದಿನ ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರ ಜೊತೆಗೆ ತಂತ್ರಜ್ಞಾನವೂ ಆಟವಾಡುತ್ತದೆ.
ಕ್ರಿಕೆಟ್ ಆಟದಲ್ಲಿ ತಂತ್ರಜ್ಞಾನದ ಪಾತ್ರ ನಮ್ಮ ಗಮನಕ್ಕೆ ಬಂದದ್ದು ಬಹಳ ವರ್ಷಗಳ ಹಿಂದೆ: ಬ್ಯಾಟ್ಸ್‌ಮನ್ ರನೌಟ್ ಆಗಿದ್ದಾನೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಮೈದಾನದಲ್ಲಿದ್ದ ಅಂಪೈರ್ ಟೀವಿ ಮುಂದಿದ್ದ ಅಂಪೈರನ್ನು ಕೇಳಿದರಲ್ಲ, ಆಗಲೇ! ಮನೆಯ ಸೋಫಾ ಮೇಲಿನ ಆಲೂಗಡ್ಡೆಗಳಿಗಷ್ಟೆ ಸಿಗುತ್ತಿದ್ದ ಆಕ್ಷನ್ ರೀಪ್ಲೇ ಸೌಲಭ್ಯ ಆಟಗಾರರಿಗೂ ಸಿಗುವಂತಾದದ್ದು ಆಗಿನ ಕಾಲಕ್ಕೆ ಸಾಕಷ್ಟು ಕುತೂಹಲಕರ ಎನ್ನಿಸಿತ್ತು.
ಈಗ ಇನ್ನಷ್ಟು ಸಮಯ ಸರಿದಿದೆ, ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಯಾಗಿದೆ. ಕ್ರಿಕೆಟ್ ಕಣದ ಮೇಲೆ ಅದರ ಪ್ರಭಾವವೂ ಜಾಸ್ತಿಯಾಗಿದೆ. ಜಾಹೀರಾತು ಫಲಕಗಳಿಂದ ಪ್ರಾರಂಭಿಸಿ ಟೀವಿ ಪ್ರಸಾರದ ಕ್ಯಾಮೆರಾವರೆಗೆ, ಚೆಂಡು ತಗುಲಿದರೆ ದೀಪ ಮಿನುಗಿಸುವ ಹೈಟೆಕ್ ವಿಕೆಟ್ಟುಗಳಿಂದ ಚೆಂಡಿನ ವೇಗ ಅಳೆಯುವ ವ್ಯವಸ್ಥೆಯವರೆಗೆ ಇದೀಗ ಎಲ್ಲೆಲ್ಲೂ ತಂತ್ರಜ್ಞಾನದ್ದೇ ಭರಾಟೆ.
ಇಂದಿನ ಕ್ರಿಕೆಟ್ ಪಂದ್ಯಗಳಲ್ಲಿ ಬಳಕೆಯಾಗುವ ಇಂತಹ ತಂತ್ರಜ್ಞಾನಗಳಲ್ಲಿ 'ಹಾಕ್ ಐ' ಒಂದು ಪ್ರಮುಖ ಹೆಸರು. ಹಾಕ್ ಐ ಅಂದರೆ ಹದ್ದಿನ ಕಣ್ಣು. ಕೋಳಿಪಿಳ್ಳೆಯನ್ನೋ ಇಲಿ-ಹೆಗ್ಗಣಗಳನ್ನೋ ಹುಡುಕುವ ಬದಲಿಗೆ ತಂತ್ರಜ್ಞಾನದ ಈ ಹದ್ದು ಕ್ರಿಕೆಟ್ ಚೆಂಡಿನ ಮೇಲೆ ಕಣ್ಣಿಡುತ್ತದೆ ಎನ್ನುವ ವ್ಯತ್ಯಾಸವೊಂದಿದೆ ಅಷ್ಟೆ.
ಚೆಂಡಿನ ಪಥವನ್ನು ಊಹಿಸಿ ಎಲ್‌ಬಿಡಬ್ಲ್ಯೂ ನಿರ್ಣಯಗಳಲ್ಲಿ ನೆರವಾಗುವುದು ಇದೇ ತಂತ್ರಜ್ಞಾನ. ಬ್ಯಾಟ್ಸ್‌ಮನ್ ಮೈದಾನದ ಯಾವಯಾವ ಭಾಗಕ್ಕೆ ಚೆಂಡನ್ನು ಕಳುಹಿಸಿ ಎಷ್ಟೆಷ್ಟು ರನ್ನುಗಳನ್ನು ಗಳಿಸಿದ್ದಾನೆ ಎಂದು ತೋರಿಸುವ 'ವ್ಯಾಗನ್ ವೀಲ್' ಕೂಡ ಇದೇ ತಂತ್ರಜ್ಞಾನದ ಕೊಡುಗೆ. ಬೌಲರ್ ಎಸೆದ ಯಾವ ಚೆಂಡು ಪಿಚ್‌ನ ಯಾವ ಭಾಗದಲ್ಲಿ ಪುಟಿಯಿತು ಎಂದೋ ಸ್ಪಿನ್ನರ್ ತಾನು ಎಸೆಯುವ ಚೆಂಡನ್ನು ಎಷ್ಟು ತಿರುಗಿಸುತ್ತಿದ್ದಾನೆ ಎಂದೋ ತೋರಿಸುವ ಚಿತ್ರಗಳು ಕಾಣುತ್ತವಲ್ಲ, ಅದರ ಹಿಂದೆಯೂ ಇದೇ ಹಾಕ್ ಐ ಇರುತ್ತದೆ.
ಆಟದ ಅಂಕಣದ ಸುತ್ತ ಪೂರ್ವನಿರ್ಧಾರಿತ ಸ್ಥಳಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳನ್ನು ಈ ತಂತ್ರಜ್ಞಾನ ಬಳಸುತ್ತದೆ. ಅಷ್ಟೂ ಕ್ಯಾಮೆರಾಗಳಿಂದ ಬರುವ ಚಿತ್ರಗಳನ್ನು ಕ್ಷಿಪ್ರವಾಗಿ ಸಂಸ್ಕರಿಸುವ ವ್ಯವಸ್ಥೆ ಮೇಲೆ ಹೇಳಿದ ವಿವಿಧ ಚಿತ್ರಣಗಳನ್ನೆಲ್ಲ ಕಟ್ಟಿಕೊಡುತ್ತದೆ. ಎಲ್‌ಬಿಡಬ್ಲ್ಯೂ ಮನವಿ ಕೇಳಿಬಂದ ಮರುಕ್ಷಣದಲ್ಲೇ ಚೆಂಡಿನ ಪಥದ ಚಿತ್ರಣ ನಮ್ಮೆದುರು ಪ್ರತ್ಯಕ್ಷವಾಗುತ್ತದೆ ಎಂದರೆ ಈ ವ್ಯವಸ್ಥೆ ಅದೆಷ್ಟು ವೇಗವಾಗಿ ಕೆಲಸಮಾಡುತ್ತದೆ ಎನ್ನುವುದು ಅರಿವಾಗಬಹುದು.
ಮೂಲತಃ ಕ್ರಿಕೆಟ್ ಪಂದ್ಯಗಳಿಗೆಂದೇ ತಯಾರಾಗಿದ್ದರೂ ಈ ವ್ಯವಸ್ಥೆ ಈಗ ಟೆನಿಸ್ ಸೇರಿದಂತೆ ಇನ್ನಿತರ ಹಲವು ಕ್ರೀಡೆಗಳಲ್ಲೂ ಬಳಕೆಯಾಗುತ್ತಿರುವುದು ವಿಶೇಷ.
ವಿಕೆಟ್ ಕೀಪರ್ ಕೈಸೇರಿದ ಚೆಂಡು ಬ್ಯಾಟಿಗೆ ತಗುಲಿತ್ತೋ ಇಲ್ಲವೋ ಎಂದು ತೀರ್ಮಾನಿಸುವುದು ಎಲ್‌ಬಿಡಬ್ಲ್ಯೂನಷ್ಟೇ ಗೊಂದಲಮೂಡಿಸುವ ಇನ್ನೊಂದು ಸನ್ನಿವೇಶ. ಈ ಗೊಂದಲ ಪರಿಹರಿಸುವುದಕ್ಕೂ ತಂತ್ರಜ್ಞಾನದ ನೆರವು ಪಡೆಯುವುದು ಸಾಧ್ಯ. ಇಲ್ಲಿ ಬಳಕೆಯಾಗುವ ವ್ಯವಸ್ಥೆಗೆ 'ಸ್ನಿಕೋಮೀಟರ್' ಎಂದು ಹೆಸರು.
ವಿಕೆಟ್ಟಿನಲ್ಲಿ ಕ್ಯಾಮೆರಾ ಇರುವುದು ನಮಗೆಲ್ಲ ಗೊತ್ತೇ ಇದೆಯಲ್ಲ, ಸ್ನಿಕೋಮೀಟರ್ ಬಳಸುವಾಗ ಒಂದು ಸೂಕ್ಷ್ಮ ಮೈಕ್ರೋಫೋನ್ ಅನ್ನೂ ಅದರೊಳಗೆ ಹುದುಗಿಸಿಟ್ಟಿರುತ್ತಾರೆ. ವಿಕೆಟ್ ಆಸುಪಾಸಿನಲ್ಲಿ ಎಷ್ಟೇ ಸಣ್ಣ ಶಬ್ದವಾದರೂ ಅದನ್ನು ದಾಖಲಿಸಿಕೊಳ್ಳುವುದು ಆ ಮೈಕ್ರೋಫೋನಿನ ಕೆಲಸ. ಬ್ಯಾಟಿನ ಆಸುಪಾಸಿನಲ್ಲಿ ಚೆಂಡಿನ ಚಲನೆಯನ್ನು ಹೈ-ಸ್ಪೀಡ್ ಕ್ಯಾಮೆರಾ ಮೂಲಕ ಪ್ರತ್ಯೇಕವಾಗಿ ಚಿತ್ರಿಸಿಕೊಳ್ಳಲಾಗುತ್ತದೆ. ಮೈಕ್ರೋಫೋನ್ ಸೆರೆಹಿಡಿದ ಧ್ವನಿಯನ್ನು ಆ ಚಿತ್ರದ ಜೊತೆಗೆ ಹೊಂದಿಸಿದಾಗ ಚೆಂಡು ಬ್ಯಾಟಿಗೆ ತಗುಲಿತ್ತೇ ಇಲ್ಲವೇ ಎನ್ನುವುದು ಗೊತ್ತಾಗುತ್ತದೆ. ಶಬ್ದದ ಅಲೆಗಳ ಸ್ವರೂಪವನ್ನು ಆಧರಿಸಿ ಚೆಂಡು ತಗುಲಿದ್ದು ಬ್ಯಾಟಿಗೋ ಪ್ಯಾಡಿಗೋ ಎನ್ನುವುದನ್ನು ಹೇಳುವ ಸಾಮರ್ಥ್ಯ ಕೂಡ ಈ ವ್ಯವಸ್ಥೆಗಿದೆ.
ಬ್ಯಾಟ್ ಇಲ್ಲವೇ ಪ್ಯಾಡಿಗೆ ಚೆಂಡು ತಗುಲಿದಾಗ ವ್ಯತ್ಯಾಸವಾಗುವುದು ಧ್ವನಿ ತರಂಗಗಳಲ್ಲಿ ಮಾತ್ರವೇ ಅಲ್ಲ; ವೇಗವಾಗಿ ಸಾಗುವ ಚೆಂಡು ಬಂದು ತಗುಲಿದಾಗ ಉಂಟಾಗುವ ಘರ್ಷಣೆಯಿಂದ ಉಷ್ಣತೆಯಲ್ಲೂ ಕೊಂಚಮಟ್ಟದ ವ್ಯತ್ಯಾಸವಾಗುತ್ತದೆ. ಆಗ ಹೊರಹೊಮ್ಮುವ ನಸುಗೆಂಪು (ಇನ್‌ಫ್ರಾ-ರೆಡ್) ಕಿರಣಗಳನ್ನು ಗಮನಿಸುವ ಮೂಲಕ ಈ ವ್ಯತ್ಯಾಸವನ್ನು ಪತ್ತೆಹಚ್ಚುವುದು ಸಾಧ್ಯ. ಸಾಮಾನ್ಯ ಕ್ಯಾಮೆರಾಗಳು ಬೆಳಕಿನ ಕಿರಣಗಳನ್ನು ದಾಖಲಿಸಿ ಚಿತ್ರ ಮೂಡಿಸುತ್ತವಲ್ಲ, ಅದೇ ರೀತಿ ಇನ್‌ಫ್ರಾ-ರೆಡ್ ಕಿರಣಗಳನ್ನು ದಾಖಲಿಸುವ ಕ್ಯಾಮೆರಾಗಳೂ ಇವೆ. ಮೈದಾನದ ಎರಡೂ ಕಡೆ ಇಂತಹ ಕ್ಯಾಮೆರಾಗಳನ್ನು ಅಳವಡಿಸಿಟ್ಟು ಚೆಂಡು-ಬ್ಯಾಟಿನ ಸಂಪರ್ಕವನ್ನು ಸತತವಾಗಿ ಗಮನಿಸುವ ವ್ಯವಸ್ಥೆ ರೂಪುಗೊಳ್ಳಲು ಇನ್ನೇನು ತಾನೆ ಬೇಕು? 'ಹಾಟ್ ಸ್ಪಾಟ್' ಎನ್ನುವ ಈ ವ್ಯವಸ್ಥೆ ಈಗಾಗಲೇ ಅನೇಕ ಪಂದ್ಯಗಳಲ್ಲಿ ಬಳಕೆಯಾಗಿದೆ.
ಇವಿಷ್ಟೇ ಅಲ್ಲ, ಕ್ರಿಕೆಟ್ ಪಂದ್ಯದ ಇನ್ನೂ ಹಲವು ಸನ್ನಿವೇಶಗಳಲ್ಲಿ ತಂತ್ರಜ್ಞಾನದ ಬಳಕೆ ಸಾಧ್ಯ. ಚೆಂಡೆಸೆಯುವ ಬೌಲರ್ ಕ್ರೀಸಿನಿಂದ ಆಚೆ ಕಾಲಿಟ್ಟಿದ್ದನೋ ಇಲ್ಲವೋ ಎಂದು ತಿಳಿಯಲು ಅಂಪೈರನ್ನು ಕಾಯುವುದೇಕೆ, ನೋಬಾಲ್ ಪತ್ತೆಮಾಡುವುದಕ್ಕೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬಹುದಲ್ಲ! ಟೀವಿ ಅಂಪೈರ್ ಕಾಯದೆ ರನೌಟ್ ಇತ್ಯಾದಿಗಳನ್ನು ಥಟ್ಟನೆ ಗುರುತಿಸಿಬಿಡಲಿಕ್ಕೂ ಅಂತಹುದೊಂದು ವ್ಯವಸ್ಥೆ ನೆರವಾಗಬಲ್ಲದು.
ಒಟ್ಟಿನಲ್ಲಿ ತಂತ್ರಜ್ಞಾನದ ಇಷ್ಟೆಲ್ಲ ಸೌಲಭ್ಯಗಳು ಕ್ರಿಕೆಟ್ ಆಟಕ್ಕೆ ಇನ್ನಷ್ಟು ಮೆರುಗು ನೀಡಿವೆ ಎನ್ನುವುದು ಹಲವರ ಅಭಿಪ್ರಾಯ. ಆದರೆ ಕ್ರೀಡೆಯಲ್ಲಿ ತಂತ್ರಜ್ಞಾನದದ್ದೇ ಪ್ರಾಮುಖ್ಯವಾದರೆ ಅದೇನು ಚೆನ್ನ ಎನ್ನುವುದು ಎದುರು ಬದಿಯಲ್ಲಿರುವ ಇನ್ನು ಕೆಲವರ ಪ್ರಶ್ನೆ. ಈ ಎರಡು ವಿಕೆಟ್ಟುಗಳ ನಡುವಿನ ಪಿಚ್‌ನಲ್ಲಿ ತಂತ್ರಜ್ಞಾನದ ಆಟ - ಸದ್ಯಕ್ಕಂತೂ - ಜೋರಾಗಿ ನಡೆದಿದೆ ಎನ್ನುವುದು ಇಂದಿನ ಸಮಾಚಾರ.
ಫೆಬ್ರುವರಿ ೧೬, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ