ಟಿ. ಜಿ. ಶ್ರೀನಿಧಿ
ಹದಿನೈದು-ಇಪ್ಪತ್ತು ವರ್ಷಗಳ ಹಿಂದೆ ಬಹುಶಃ ನಮ್ಮ ಕಲ್ಪನೆಗೂ ನಿಲುಕದಿದ್ದ ಮೊಬೈಲ್ ಫೋನು ಇಂದು ಜೀವನಾವಶ್ಯಕ ವಸ್ತು. ಮೊಬೈಲ್ ನೆಟ್‌ವರ್ಕ್ ಇಲ್ಲ ಅಥವಾ ಕರೆನ್ಸಿ ಖಾಲಿಯಾಗಿದೆ ಎಂದುಬಿಟ್ಟರೆ ಕೆಲವರಲ್ಲಿ ಏನನ್ನೋ ಕಳೆದುಕೊಂಡ ಭಾವನೆ ಉಂಟಾಗುವುದೂ ಅಪರೂಪವಲ್ಲ.
ನೆಟ್‌ವರ್ಕು-ಕರೆನ್ಸಿಗಳಿಗಿಂತ ಹೆಚ್ಚಿನ ತೊಂದರೆ ಕೊಡುವ ಸಂಗತಿಯೆಂದರೆ ಅದು ಮೊಬೈಲಿನ ಬ್ಯಾಟರಿ. ರಾಕ್ಷಸನ ಜೀವ ಏಳು ಸಮುದ್ರದಾಚೆ ಬಂಗಾರದ ಪಂಜರದಲ್ಲಿರುವ ಗಿಣಿಯಲ್ಲಿರುತ್ತಿತ್ತು ಎನ್ನುವ ಕತೆ ಕೇಳಿದ್ದೇವಲ್ಲ, ಈಗಿನ ಕಾಲದ ಮೊಬೈಲುಗಳ ಜೀವವೂ ಈ ಬ್ಯಾಟರಿಯೆನ್ನುವ ಪಂಜರದೊಳಗೇ ಇರುತ್ತದೆ. ಬ್ಯಾಟರಿ ಫೋನಿನೊಳಗೇ ಇರುವುದರಿಂದ ಏಳು ಸಮುದ್ರದಾಚೆ ಹೋಗುವ ಗೊಡವೆಯೆಲ್ಲ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ.
ಮೊಬೈಲುಗಳು ಎಷ್ಟೆಲ್ಲ ಸ್ಮಾರ್ಟ್ ಆದರೂ, ಬಳಕೆಯಾಗುವ ತಂತ್ರಜ್ಞಾನದಲ್ಲಿ ಏನೆಲ್ಲ ಬದಲಾವಣೆಗಳಾದರೂ ಅವುಗಳ ಬ್ಯಾಟರಿಗಳಲ್ಲಿ ಹಾಗೂ ಒಮ್ಮೆ ಚಾರ್ಜ್ ಮಾಡಿದಾಗ ಅವನ್ನು ಬಳಸಬಹುದಾದ ಕಾಲಾವಧಿಯಲ್ಲಿ ಮಾತ್ರ ಹೆಚ್ಚು ಬದಲಾವಣೆಯೇನೂ ಆಗಿಲ್ಲ.
ಮೊಬೈಲುಗಳಲ್ಲಷ್ಟೆ ಏಕೆ, ಇಂದಿನ ಬಹುತೇಕ ವಿದ್ಯುನ್ಮಾನ ಉಪಕರಣಗಳಲ್ಲಿ ಬಳಕೆಯಾಗುವುದು ಲಿಥಿಯಂ-ಅಯಾನ್ ಬ್ಯಾಟರಿಗಳು. ಸಣ್ಣ ಗಾತ್ರ ಹಾಗೂ ದುಬಾರಿಯಲ್ಲದ ವೆಚ್ಚದಲ್ಲಿ ಆದಷ್ಟೂ ಹೆಚ್ಚಿನ ಸಾಮರ್ಥ್ಯ ಒದಗಿಸುವುದು ಈ ಬ್ಯಾಟರಿಗಳ ವೈಶಿಷ್ಟ್ಯ. ಈ ಬ್ಯಾಟರಿಗಳ ಸಾಮರ್ಥ್ಯವನ್ನು ಎಂಎಎಚ್(mAh)ಗಳಲ್ಲಿ ಅಳೆಯಲಾಗುತ್ತದೆ.
ಎಂಎಎಚ್, ಅಂದರೆ ಮಿಲಿ ಆಂಪಿಯರ್ ಅವರ್, ಬ್ಯಾಟರಿಯಲ್ಲಿ ಎಷ್ಟು ಚಾರ್ಜ್ ಉಳಿಸಿಡಬಹುದು ಎನ್ನುವುದನ್ನು ಸೂಚಿಸುತ್ತದೆ. ಹೆಚ್ಚು ಎಂಎಎಚ್ ಸಾಮರ್ಥ್ಯದ ಬ್ಯಾಟರಿಗಳನ್ನು ಹೆಚ್ಚು ಸಮಯದವರೆಗೆ ಉಪಯೋಗಿಸುವುದು ಸಾಧ್ಯ.
ಸದಾಕಾಲ ಮೊಬೈಲ್ ಬಳಸುವ ಇಂದಿನ ಸಂದರ್ಭದಲ್ಲಿ ಈ ಬ್ಯಾಟರಿಗಳ ಸಾಮರ್ಥ್ಯ ಎಷ್ಟಿದ್ದರೂ ಸಾಲದು ಎಂಬಂತಾಗಿದೆ. ಬ್ಯಾಟರಿ ಗಾತ್ರ ಹೆಚ್ಚಿಸಿದರೆ ಅದರ ಸಾಮರ್ಥ್ಯವನ್ನೂ ಹೆಚ್ಚಿಸುವುದು ಸಾಧ್ಯ; ಆದರೆ ಮೊಬೈಲುಗಳು ಆದಷ್ಟೂ ತೆಳ್ಳಗಿರಬೇಕು ಎನ್ನುವ ಬೇಡಿಕೆಯ ಹಿನ್ನೆಲೆಯಲ್ಲಿ ಈ ಬದಲಾವಣೆಯೂ ಅಷ್ಟು ಸುಲಭವಲ್ಲ.
ಹೋಗಲಿ, ಲಭ್ಯವಿರುವ ಸಾಮರ್ಥ್ಯದ ಬ್ಯಾಟರಿಯನ್ನೇ ಬಳಸೋಣವೆಂದರೆ ಅದನ್ನು ಪದೇಪದೇ ಚಾರ್ಜ್ ಮಾಡುವುದೊಂದು ತಲೆನೋವಿನ ಸಂಗತಿ. ಚಾರ್ಜ್ ಮಾಡಲು ಹೆಚ್ಚಿನ ಸಮಯ ಬೇಕು ಎನ್ನುವುದು ಒಂದು ಸಮಸ್ಯೆಯಾದರೆ ನಿರ್ದಿಷ್ಟ ಫೋನಿಗೆ ನಿರ್ದಿಷ್ಟ ಚಾರ್ಜರ್/ಕೇಬಲ್ಲುಗಳನ್ನೇ ಬಳಸಬೇಕು ಎನ್ನುವುದು ಇನ್ನೊಂದು ಕಿರಿಕಿರಿ.
ಮೊಬೈಲ್ ಫೋನುಗಳೆಲ್ಲ ಸ್ಮಾರ್ಟ್ ಆದಂತೆ ಅವುಗಳ ಬ್ಯಾಟರಿಯನ್ನೂ ಸ್ಮಾರ್ಟ್ ಆಗಿಸುವ ಪ್ರಯತ್ನಗಳಿಗೆ ಪ್ರೇರಣೆಯಾಗಿರುವುದು ಇವೇ ಸಮಸ್ಯೆಗಳು. ಒಮ್ಮೆ ಚಾರ್ಜ್ ಮಾಡಿದ ನಂತರ ದಿನಗಟ್ಟಲೆ ಬಳಸಬಹುದಾದ ಬ್ಯಾಟರಿಗಳು, ಕೇಬಲ್ ಗೊಡವೆಯಿಲ್ಲದೆಯೇ ಚಾರ್ಜ್ ಮಾಡಬಹುದಾದ ಬ್ಯಾಟರಿಗಳನ್ನೆಲ್ಲ ಸೃಷ್ಟಿಸುವುದು ಈ ಪ್ರಯತ್ನಗಳ ಉದ್ದೇಶ. ಫೋನ್ ಚಾರ್ಜ್ ಆಗಲು ಗಂಟೆಗಟ್ಟಲೆ ಕಾಯುವ ಬದಲಿಗೆ ಕೆಲವೇ ಸೆಕೆಂಡುಗಳಲ್ಲಿ ಪೂರ್ತಿ ಚಾರ್ಜ್ ಆಗುವ ಬ್ಯಾಟರಿ ಸಿಕ್ಕರೆ ಹೇಗೆ?
ಇನ್ನು ಕೇಬಲ್ ಚುಚ್ಚದೆಯೇ ಚಾರ್ಜ್ ಮಾಡಬಲ್ಲ ಚಾರ್ಜರುಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಅಡುಗೆಮನೆಯ ಆಧುನಿಕ ಒಲೆಯಂತೆ ಇಲ್ಲೂ ಬಳಕೆಯಾಗುವುದು ಇಂಡಕ್ಷನ್ (ಪ್ರೇರಣೆ) ಎಂಬ ವಿದ್ಯಮಾನ. ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ಶಾಖದ ಬದಲಿಗೆ ಇಲ್ಲಿ ಬ್ಯಾಟರಿ ಚಾರ್ಜ್ ಆಗುತ್ತದೆ ಅಷ್ಟೆ.
ಇಲ್ಲಿ ಫೋನಿಗೆ ಕೇಬಲ್ ಚುಚ್ಚುವ ಅಗತ್ಯವಿಲ್ಲದಿದ್ದರೂ ಚಾರ್ಜರ್ ಬಳಕೆಯಿಂದಂತೂ ಮುಕ್ತಿಯಿಲ್ಲ. ಹಾಗಾದರೆ ಚಾರ್ಜರ್ ಬಳಸದೆ ಫೋನನ್ನು ಚಾರ್ಜ್ ಮಾಡುವುದು ಸಾಧ್ಯವೇ ಇಲ್ಲವೆ?
ಯಾಕಿಲ್ಲ ಎನ್ನುತ್ತಾರೆ ತಂತ್ರಜ್ಞರು. ಹಳೆಯಕಾಲದ ರೇಡಿಯೋ, ಹೊಸಕಾಲದ ವೈ-ಫಿಗಳೆಲ್ಲ ಗಾಳಿಯಿಂದಲೇ ಸಂಕೇತಗಳನ್ನು ಹಿಡಿದುಕೊಳ್ಳುತ್ತವಲ್ಲ; ಅಂತಹ ಸಂಕೇತಗಳನ್ನೇ ಬಳಸಿ ಬ್ಯಾಟರಿ ಚಾರ್ಜ್ ಮಾಡುವ ನಿಟ್ಟಿನಲ್ಲೂ ಹಲವು ಪ್ರಯತ್ನಗಳು ಸಾಗಿವೆ. ದೇಹದ ಶಾಖ, ಸುತ್ತಮುತ್ತಲಿನ ಶಬ್ದ ಇತ್ಯಾದಿಗಳನ್ನೆಲ್ಲ ಬಳಸಿಕೊಂಡು ಚಾರ್ಜ್ ಆಗುವ ಬ್ಯಾಟರಿ ತಂತ್ರಜ್ಞಾನಗಳೂ ಪ್ರಾಯೋಗಿಕ ಹಂತದಲ್ಲಿವೆ. ಫೋನನ್ನು ಬಹಳಷ್ಟು ಸಮಯ ನಮ್ಮ ಜೇಬಿನಲ್ಲೇ ಇಟ್ಟುಕೊಂಡಿರುತ್ತೇವಲ್ಲ, ಆ ಜೇಬಿನೊಳಕ್ಕೇ ಒಂದು ಚಾರ್ಜರ್ ಅಳವಡಿಸಿಬಿಟ್ಟರೆ ಹೇಗೆ ಎಂದು ಯೋಚಿಸಿದವರೂ ಇದ್ದಾರೆ!
ಲಭ್ಯವಿರುವಷ್ಟೇ ಬ್ಯಾಟರಿ ಸಾಮರ್ಥ್ಯವನ್ನು ಆದಷ್ಟೂ ಮಿತವಾಗಿ ಬಳಸುವ, ಆ ಮೂಲಕ ಬ್ಯಾಟರಿ ಹೆಚ್ಚುಕಾಲ ಬಾಳಿಕೆಬರುವಂತೆ ಮಾಡುವ ತಂತ್ರಜ್ಞಾನಗಳೂ ತಯಾರಾಗುತ್ತಿವೆ. ಇಂದಿನ ಗಾತ್ರದ ಲಿಥಿಯಂ-ಅಯಾನ್ ಬ್ಯಾಟರಿಗಳಲ್ಲೇ ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವ ಪ್ರಯತ್ನ ಕೂಡ ನಡೆಯುತ್ತಿದೆ. ಫೋನಿನೊಳಗೇ ಸೋಲಾರ್ ಚಾರ್ಜಿಂಗ್ ಸೆಲ್‌ಗಳನ್ನು ಅಳವಡಿಸಿ ಆ ಫೋನನ್ನು ಬೆಳಕಿನಲ್ಲಿ ಇಡುವುದರಿಂದಲೇ ಬ್ಯಾಟರಿ ಒಂದಷ್ಟು ಚಾರ್ಚ್ ಆಗುವಂತೆ ಮಾಡುವ ಆಲೋಚನೆ ಕೂಡ ಇದೆ.
ಕಂಪ್ಯೂಟರುಗಳು ಅಂಗೈಗೆ ಬಂದು ಫೋನುಗಳಾದಂತೆ ಫೋನುಗಳು ಇದೀಗ ಸ್ಮಾರ್ಟ್‌ವಾಚುಗಳಾಗಿ ಮುಂಗೈಗೆ ಬರುತ್ತಿವೆಯಲ್ಲ, ಈ ಬದಲಾವಣೆಯಿಂದಾಗಿ ಬ್ಯಾಟರಿಗಳು ಹೆಚ್ಚುಹೆಚ್ಚು ಬಾಳಿಕೆ ಬರುವಂತೆ ಮಾಡುವ ಅನಿವಾರ್ಯತೆ ತಂತ್ರಜ್ಞರಿಗೆ ಎದುರಾಗಿದೆ. ಈ ನಿಟ್ಟಿನಲ್ಲಿ ಅವರು ನಡೆಸಲಿರುವ ಪ್ರಯತ್ನಗಳು ಒಂದಲ್ಲ ಒಂದು ರೀತಿಯಲ್ಲಿ ನಮಗೆ ನೆರವಾಗುವುದಂತೂ ಖಂಡಿತ. ಐದು ನಿಮಿಷದಲ್ಲಿ ಚಾರ್ಜ್ ಆಗಿ ದಿನವಿಡೀ ಬಾಳಿಕೆ ಬರುವ ಬ್ಯಾಟರಿಯಿರುವ ಫೋನು ಯಾರಿಗೆ ತಾನೆ ಬೇಡ, ಹೇಳಿ?
ಫೆಬ್ರುವರಿ ೩, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ