ಭಾನುವಾರ, ಫೆಬ್ರವರಿ 22, 2015

ಕಂಪ್ಯೂಟರಿನ ರೂಪಾಂತರ ಪರ್ವ

ಕಂಪ್ಯೂಟರ್ ಎಂದತಕ್ಷಣ ನಮ್ಮ ಮನಸ್ಸಿಗೆ ಬರುವ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್ ಹಾಗೂ ಪಕ್ಕದಲ್ಲೊಂದು ದೊಡ್ಡ ಕ್ಯಾಬಿನೆಟ್. ಇಂತಹ ದೊಡ್ಡ ಪರದೆಯ, ಮೇಜಿನ ಮೇಲೆ ಸ್ಥಾಪಿತವಾಗುವ ('ಡೆಸ್ಕ್‌ಟಾಪ್') ಕಂಪ್ಯೂಟರುಗಳ ಕಾಲ ಲ್ಯಾಪ್‌ಟಾಪು-ಟ್ಯಾಬ್ಲೆಟ್ಟುಗಳ ಭರಾಟೆಯಲ್ಲಿ ಇನ್ನೇನು ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಕಂಪ್ಯೂಟರಿನ ರೂಪಾಂತರ ಪರ್ವ ಪ್ರಾರಂಭವಾಗಿದೆ. ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಕಂಪ್ಯೂಟರ್ ಇಡಲು ಬೇಕಾದ ಜಾಗವನ್ನು ಕಡಿಮೆ ಮಾಡಲಾಗುತ್ತಿದೆ. ದಿವಾನಖಾನೆಯ ಟೀವಿಗೇ ಜೋಡಿಸಬಹುದಾದ ಸಾಧನಗಳು ದಶಕಗಳ ಹಿಂದಿನ ವಿನ್ಯಾಸವನ್ನು ಮತ್ತೆ ನೆನಪಿಸುತ್ತಿವೆ. ಕಂಪ್ಯೂಟರ್ ಜಗದ ಫ್ಯಾಶನ್ ಚಕ್ರ ಪೂರ್ತಿ ಒಂದು ಸುತ್ತು ಬಂದಿದೆ!
ಟಿ. ಜಿ. ಶ್ರೀನಿಧಿ

ಕಂಪ್ಯೂಟರಿಗೆ ನಮ್ಮ ಮನೆಗಳಲ್ಲಿ ಪ್ರಮುಖ ಸ್ಥಾನ ಸಿಕ್ಕಿದ್ದು ಮಾಹಿತಿ ತಂತ್ರಜ್ಞಾನದ ಪ್ರಭಾವ ಬೆಳೆಯಲು ಶುರುವಾದ ಸಮಯದಲ್ಲೇ ಇರಬೇಕು. ಅಲ್ಲಿಂದ ಈಚೆಗಿನ ದಶಕಗಳಲ್ಲಿ ಟೀವಿ ಫ್ರಿಜ್ಜು ಮಿಕ್ಸಿಗಳಂತೆ  ಕಂಪ್ಯೂಟರ್ ಕೂಡ ಮನೆಯಲ್ಲಿ ಸಾಮಾನ್ಯವಾಗಿ ಇರಬೇಕಾದ ಸಾಧನಗಳ ಪಟ್ಟಿಗೆ ಸೇರಿಕೊಂಡುಬಿಟ್ಟಿದೆ.

ಮನೆಯ ಕಂಪ್ಯೂಟರ್ ಎಂದಾಕ್ಷಣ ನಮ್ಮ ಮನಸ್ಸಿಗೆ ಬರುವ ಮೊದಲ ಚಿತ್ರ ಮಾನಿಟರ್, ಕೀಬೋರ್ಡ್, ಮೌಸ್, ಸ್ಪೀಕರ್ ಮತ್ತು ಅದೆಲ್ಲವನ್ನೂ ಸಂಪರ್ಕಿಸುವ - ಮದರ್‌ಬೋರ್ಡ್, ಹಾರ್ಡ್ ಡಿಸ್ಕ್, ರ್‍ಯಾಮ್ ಇತ್ಯಾದಿಗಳನ್ನೆಲ್ಲ ತುಂಬಿಟ್ಟುಕೊಂಡಿರುವ - ದೊಡ್ಡದೊಂದು ಪೆಟ್ಟಿಗೆ. ಡಬ್ಬ ಎಂದಾದರೂ ಕರೆಯಿರಿ, ಕ್ಯಾಬಿನೆಟ್ ಎಂದಾದರೂ ಹೆಸರಿಸಿ - ಅದಂತೂ ಆದರ್ಶ ಡೆಸ್ಕ್‌ಟಾಪ್ ಕಂಪ್ಯೂಟರಿನ ಅವಿಭಾಜ್ಯ ಅಂಗ. ಇನ್ನು ವಿದ್ಯುತ್ ಕೈಕೊಟ್ಟಾಗ ನೆರವಿಗೆ ಬರುವ ಚಿಕ್ಕದೊಂದು ಯುಪಿಎಸ್ ಹಾಗೂ ಕಂಪ್ಯೂಟರಿನ ಸಮಸ್ತ ಅಂಗಗಳಿಗೂ ಆಶ್ರಯನೀಡುವ ಕಂಪ್ಯೂಟರ್ ಟೇಬಲ್ ಕೂಡ ಬಹಳ ಮನೆಗಳಲ್ಲಿ ಇರುತ್ತವೆ.

ಮನೆ ದೊಡ್ಡದಾಗಿದ್ದರೆ ಇಂಥದ್ದೊಂದು ಕಂಪ್ಯೂಟರ್ ಕುಟುಂಬಕ್ಕೆ ಜಾಗ ಕೊಡುವುದರಲ್ಲಿ ಹೆಚ್ಚಿನ ಸಮಸ್ಯೆಯೇನೂ ಇರುವುದಿಲ್ಲ. ಆದರೆ ಈಗಿನ ಕಾಲದಲ್ಲಿ ಮನೆ ಕಟ್ಟಲು ಬೇಕಾಗುವ ರಿಯಲ್ ಎಸ್ಟೇಟ್ ಹಾಗೂ ನಾವು ಕೊಳ್ಳುವ ಅಸಂಖ್ಯ ವಸ್ತುಗಳಿಗೆ ಮನೆಯೊಳಗೆ ಒದಗಿಸಬೇಕಾದ ರಿಯಲ್ ಎಸ್ಟೇಟುಗಳೆರಡೂ ದುಬಾರಿ. ಹೀಗಿರುವಾಗ ಕಂಪ್ಯೂಟರಿಗೆ ಅಷ್ಟೆಲ್ಲ ಜಾಗ ಕೊಡುವುದೆಂದರೇನು ತಮಾಷೆಯೇ?

ಹಾಗಾಗಿಯೇ ಈಗ ಸ್ಮಾಲ್ ಈಸ್ ಬ್ಯೂಟಿಫುಲ್. ದಿನದಿಂದ ದಿನಕ್ಕೆ ಕಂಪ್ಯೂಟರಿನ ಮೂತಿ, ಅಂದರೆ ಪರದೆ, ಚಿಕ್ಕದಾಗುತ್ತ ಸಾಗುತ್ತಿದೆ. ಈ ವಿದ್ಯಮಾನದಿಂದ ಅದರ ಕೀರ್ತಿಗೇನೂ ಕುಂದು ಬಾರದಂತೆ ನೋಡಿಕೊಳ್ಳಲು ಇತರ ಅಂಗಗಳೂ ಗಾತ್ರದಲ್ಲಿ ಕುಗ್ಗುವುದನ್ನು ಕಲಿತುಬಿಟ್ಟಿವೆ.

ಕಂಪ್ಯೂಟರಿಗೆ ಟೇಬಲ್ ಬೇರೆ ಯಾಕೆ, ಕೆಲಸಮಾಡುವಷ್ಟು ಹೊತ್ತು ತೊಡೆಯ ಮೇಲಿಟ್ಟುಕೊಂಡಿದ್ದು ಆನಂತರ ಬ್ಯಾಗಿನೊಳಕ್ಕೆ ತೂರಿಸಿದರೆ ಆಯಿತು - ಈಗ ಲ್ಯಾಪ್‌ಟಾಪ್ ಕೃಪೆಯಿಂದ ಕುಳಿತ ಜಾಗವೇ ಆಫೀಸು. ಆಫೀಸು ಕೆಲಸ ಮುಗಿಸಿದ ಮೇಲೆ ಇಂಟರ್‌ನೆಟ್ಟಿನಲ್ಲಿ ಆರಾಮವಾಗಿ ಈಜಾಡಲು ಹೇಗೂ ಟ್ಯಾಬ್ಲೆಟ್ ಇದೆ. ಇನ್ನು ಇಪ್ಪತ್ತನಾಲ್ಕು ಗಂಟೆಯೂ ವಾಟ್ಸಾಪಿನಲ್ಲಿ ವಾಟ್ಸಪ್ ಎನ್ನಲು ಜೇಬಿನಲ್ಲೊಂದು ಸ್ಮಾರ್ಟ್ ಫೋನು, ಅದನ್ನು ಜೇಬಿನಿಂದಾಚೆ ತೆಗೆಯದೆಯೇ ಓದಬೇಕೆಂದರೆ ಮುಂಗೈಯ ವಾಚ್ ಕೂಡ ಸ್ಮಾರ್ಟು. ಇಷ್ಟಿದ್ದ ಮೇಲೆ ಸ್ವರ್ಗಕ್ಕೆ ಕಿಚ್ಚು ಹಚ್ಚುವುದೇ ಇನ್ನೇನು!



ಈ ಕತೆ ಕೇಳಲಿಕ್ಕೆ ಚೆನ್ನಾಗಿದ್ದರೂ ನಮ್ಮಲ್ಲಿ ಬಹಳಷ್ಟು ಜನರಿಗೆ ಈ ಬದಲಾವಣೆಗೆ ಹೊಂದಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಲ್ಯಾಪ್‌ಟಾಪಿನ ಪರದೆ ಚಿಕ್ಕದು, ಅದನ್ನು ಹೊತ್ತುಕೊಂಡು ಓಡಾಡುವುದು ಕಿರಿಕಿರಿ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ದೂರು. ಲ್ಯಾಪ್‌ಟಾಪಿನ ಕೀಲಿಮಣೆಯೇ ಇಕ್ಕಟ್ಟು, ಇನ್ನು ಟ್ಯಾಬ್ಲೆಟ್ಟಿನ-ಮೊಬೈಲಿನ ಟಚ್‌ಸ್ಕ್ರೀನಿನಲ್ಲಿ ಟೈಪಿಸುವುದು ಆ ದೇವರಿಗೇ ಪ್ರೀತಿ ಎಂಬ ಗೊಣಗಾಟವೂ ಅಪರೂಪವಲ್ಲ. ಅಪರೂಪಕ್ಕೊಮ್ಮೆ ಬಳಸುವವರಷ್ಟೇ ಏಕೆ, ಕಂಪ್ಯೂಟರಿನಲ್ಲಿ ಹೆಚ್ಚುಪ್ರಮಾಣದ ಕೆಲಸಮಾಡುವವರಿಗೂ ದೊಡ್ಡ ಪರದೆ - ಪೂರ್ಣಗಾತ್ರದ ಕೀಲಿಮಣೆಯೇ ಅಚ್ಚುಮೆಚ್ಚು.

ಅಲ್ಲಿಗೆ ಡೆಸ್ಕ್‌ಟಾಪ್ ಕಂಪ್ಯೂಟರುಗಳು ಇನ್ನೂ ಉಳಿದುಕೊಂಡಿರುವುದರ ಹಿಂದೆ ಇಂತಹ ಬಳಕೆದಾರರ ಕೊಡುಗೆಯೂ ಇದೆ ಎಂದಾಯಿತು. ಹಾಗೆಂದು ಡೆಸ್ಕ್‌ಟಾಪ್ ಕಂಪ್ಯೂಟರುಗಳ ಕುಂದುಕೊರತೆಗಳನ್ನೆಲ್ಲ ಮರೆಮಾಚಲು ಸಾಧ್ಯವೆ?

ಖಂಡಿತಾ ಇಲ್ಲ. ಪರಿಣತ ಬಳಕೆದಾರರನ್ನು ಹೊರತುಪಡಿಸಿದಂತೆ ತಮ್ಮ ಕಂಪ್ಯೂಟರಿನ ಕ್ಯಾಬಿನೆಟ್ ಅನ್ನು ತೆರೆಯುವವರು, ಅದರೊಳಗಿನ ಭಾಗಗಳನ್ನು ಸ್ವತಃ ತಾವೇ ಬದಲಿಸುವವರು ಬಹಳ ಅಪರೂಪ. ತಂತ್ರಜ್ಞರ ನೆರವಿನಿಂದ ಅಪ್‌ಗ್ರೇಡ್ ಮಾಡಿಸುವುದೂ ಎಲ್ಲೋ ಕೆಲ ವರ್ಷಗಳಿಗೆ ಒಮ್ಮೆಯಷ್ಟೆ. ಹೀಗಿರುವಾಗ ದೊಡ್ಡ ಪರದೆ ಹಾಗೂ ಪೂರ್ಣಗಾತ್ರದ ಕೀಲಿಮಣೆಯನ್ನು ಮೆಚ್ಚುವವರಿಗೂ ದೊಡ್ಡ ಪೆಟ್ಟಿಗೆಯ ಗಾತ್ರದ ಕ್ಯಾಬಿನೆಟ್ ಅವಶ್ಯಕವೆಂದೇನೂ ಇಲ್ಲ.

ಇಂತಹ ಬಳಕೆದಾರರಿಗೆಂದೇ ಕಂಪ್ಯೂಟರ್ ನಿರ್ಮಾತೃಗಳು ಹೊಸಬಗೆಯ ಸಾಧ್ಯತೆಗಳನ್ನು ಪರಿಚಯಿಸುತ್ತಿದ್ದಾರೆ. ಕಂಪ್ಯೂಟರಿನ ಕ್ಯಾಬಿನೆಟ್ ಹಾಗೂ ಅದರೊಳಗಿನ ಎಲ್ಲ ಭಾಗಗಳನ್ನು ಆದಷ್ಟೂ ಸಣ್ಣ ಗಾತ್ರಕ್ಕೆ ಇಳಿಸುವ ಅವರ ಪ್ರಯತ್ನದ ಒಂದು ಫಲವೇ 'ಮಿನಿ ಪಿಸಿ'ಗಳ ಸೃಷ್ಟಿ (ಪಿಸಿ ಎನ್ನುವುದು ಪರ್ಸನಲ್ ಕಂಪ್ಯೂಟರ್ ಎನ್ನುವುದರ ಹ್ರಸ್ವರೂಪ).

ಅಸುಸ್ ಸಂಸ್ಥೆಯ VivoMini UN62
ಮಿನಿ ಪಿಸಿಗಳ ಕ್ಯಾಬಿನೆಟ್ ಗಾತ್ರ ಸಾಮಾನ್ಯ ಕ್ಯಾಬಿನೆಟ್‌ಗಳಿಗಿಂತ ಕನಿಷ್ಠ ನಾಲ್ಕಾರು ಪಟ್ಟು ಕಡಿಮೆಯಿರುತ್ತದೆ. ಇವು ಬಳಸುವ ವಿದ್ಯುತ್ ಪ್ರಮಾಣವೂ ಕಡಿಮೆಯೇ. ಒಳಗಿನ ಭಾಗಗಳನ್ನು ತಣ್ಣಗಿಡಲು ದೊಡ್ಡ ಫ್ಯಾನುಗಳ ಬಳಕೆ ಇಲ್ಲವಾದ್ದರಿಂದ ಇವು ಇಂದಿನ ಡೆಸ್ಕ್‌ಟಾಪ್ ಕಂಪ್ಯೂಟರುಗಳಷ್ಟು ಶಬ್ದ ಮಾಡುವುದಿಲ್ಲ. ಬಹಳಷ್ಟು ಮಾದರಿಗಳಲ್ಲಿ ರ್‍ಯಾಮ್-ಹಾರ್ಡ್ ಡಿಸ್ಕ್ ಇತ್ಯಾದಿಗಳನ್ನು ಬದಲಿಸಿಕೊಳ್ಳುವ ಸೌಲಭ್ಯವೂ ಇರುವುದರಿಂದ ಇವುಗಳ ಸಾಮರ್ಥ್ಯ ಸಾಮಾನ್ಯ ಡೆಸ್ಕ್‌ಟಾಪ್ ಕಂಪ್ಯೂಟರುಗಳಿಗಿಂತ ಕಡಿಮೆಯೇನೂ ಇಲ್ಲ. ಆದರೆ ಬೆಲೆ ಮಾತ್ರ, ಸಹಜವಾಗಿಯೇ, ಅವುಗಳಿಗಿಂತ ಕೊಂಚ ಜಾಸ್ತಿ (ಸರಳ ಅಗತ್ಯಗಳನ್ನು ಪೂರೈಸುವ ಕೆಲ ಮಾದರಿಗಳು ಕಡಿಮೆ ಬೆಲೆಗೂ ದೊರಕುತ್ತವೆ).



ಕೆಲ ದಶಕಗಳ ಹಿಂದೆ ಕಮಡೋರ್ ೬೪ ಎನ್ನುವ ಕಂಪ್ಯೂಟರ್ ಲಕ್ಷಾಂತರ ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿತ್ತು. ಪ್ರತ್ಯೇಕ ಮಾನಿಟರ್ ಅಗತ್ಯವಿಲ್ಲದೆ ಮನೆಯ ಟೀವಿಗೆ ನೇರವಾಗಿ ಸಂಪರ್ಕಗೊಳ್ಳುತ್ತಿದ್ದದ್ದು ಆ ಕಂಪ್ಯೂಟರಿನ ವೈಶಿಷ್ಟ್ಯ. ಇಂದಿನ ಮಿನಿ ಪಿಸಿಗಳನ್ನೂ ಅದೇ ರೀತಿ ಟೀವಿಗೆ ಸಂಪರ್ಕಿಸುವುದು ಸಾಧ್ಯ. ಟಿಫನ್ ಬಾಕ್ಸಿನ ಗಾತ್ರದ ಕ್ಯಾಬಿನೆಟ್‌ಗೆ ಟೀವಿಯನ್ನೂ ಕೀಬೋರ್ಡ್-ಮೌಸ್‌ಗಳನ್ನೂ ಜೋಡಿಸಿಬಿಟ್ಟರೆ ಕಂಪ್ಯೂಟರ್ ರೆಡಿ!

ನಮ್ಮನೆ ಟೀವಿಯನ್ನು ಗೋಡೆಗೆ ನೇತುಹಾಕಿದ್ದೇವೆ. ಅದಕ್ಕೆ ಪೆನ್‌ಡ್ರೈವ್ ಇತ್ಯಾದಿಗಳನ್ನೇನೋ ಜೋಡಿಸಬಹುದು, ಮಿನಿ ಪಿಸಿಯೂ ದೊಡ್ಡದೇ ಎನ್ನುವವರಿಗೂ ಬೇರೊಂದು ಆಯ್ಕೆ ಇದೆ. ಪೆನ್‌ಡ್ರೈವ್‌ಗಳಂತೆಯೇ ಬಳಸಬಹುದಾದ, ಗಾತ್ರದಲ್ಲಿ ಅವುಗಳಿಗಿಂತ ಕೊಂಚವಷ್ಟೇ ದೊಡ್ಡದಾದ ಈ ಕಂಪ್ಯೂಟರುಗಳಿಗೆ 'ಮೈಕ್ರೋ ಪಿಸಿ'ಗಳೆಂದು ಹೆಸರು.

ಟೀವಿಯ ಎಚ್‌ಡಿಎಂಐ ಪೋರ್ಟ್ ಮೂಲಕ ಜೋಡಿಸಬಹುದಾದ ಈ ಪುಟ್ಟ ಸಾಧನದಲ್ಲಿ ಕಂಪ್ಯೂಟರಿನ ಅಂಗಗಳೆಲ್ಲ ಅಡಕವಾಗಿರುತ್ತವೆ. ಈ ವರ್ಷದ ಪ್ರಾರಂಭದಲ್ಲಿ ಇಂಟೆಲ್ ಪ್ರದರ್ಶಿಸಿದ 'ಕಂಪ್ಯೂಟ್ ಸ್ಟಿಕ್' ಎನ್ನುವ ಇಂತಹುದೊಂದು ಮಾದರಿ ಈಗಾಗಲೇ ಸಾಕಷ್ಟು ಸುದ್ದಿಮಾಡಿದೆ. ಬೇರೆ ಕೆಲ ಸಂಸ್ಥೆಗಳ ಇಂತಹವೇ ಉತ್ಪನ್ನಗಳು ಈಗಾಗಲೇ ಮಾರುಕಟ್ಟೆಗೂ ಬಂದುಬಿಟ್ಟಿವೆ.

ಕಂಪ್ಯೂಟರಿನ ಗಾತ್ರ ತೀರಾ ಇಷ್ಟೆಲ್ಲ ಕುಗ್ಗಿದರೂ ಕಷ್ಟವೇ ಎನ್ನುವ ಅಭಿಪ್ರಾಯವೂ ಇದೆ. ಮನೆಯ ಟೀವಿಯೇ ಕಂಪ್ಯೂಟರಿನ ಪರದೆಯಾಗಿಯೂ ಡಬಲ್ ಆಕ್ಟಿಂಗ್ ಮಾಡುವ ಪರಿಸ್ಥಿತಿ ಬಂದರೆ ಫೇಸ್‌ಬುಕ್ ಫ್ಯಾನುಗಳಿಗೂ ಸೀರಿಯಲ್ ಅಭಿಮಾನಿಗಳಿಗೂ ತಿಕ್ಕಾಟ ಶುರುವಾಗಿಬಿಡುತ್ತದಲ್ಲ! ಟೀವಿ ರಿಮೋಟ್ ಎಲ್ಲಿ ಹೋಯಿತೆಂದು ಹುಡುಕುವಂತೆ ಈ ಪುಟಾಣಿ ಕಂಪ್ಯೂಟರನ್ನೂ ಹುಡುಕುವ ಪರಿಸ್ಥಿತಿ ಕೂಡ ಬರಬಹುದು.



ಆ ತಂಟೆಯೆಲ್ಲ ಬೇಡ, ಕಂಪ್ಯೂಟರ್ ಪಾಡಿಗೆ ಕಂಪ್ಯೂಟರ್ ಬೇರೆಯಾಗಿಯೇ ಇರಲಿ ಎನ್ನುವವರಿಗಾಗಿ 'ಆಲ್-ಇನ್-ಒನ್ ಪಿಸಿ'ಗಳು ಮಾರುಕಟ್ಟೆಗೆ ಬಂದಿವೆ. ಸಾಮಾನ್ಯ ಕಂಪ್ಯೂಟರುಗಳಲ್ಲಿರುವ ಗಾತ್ರದ್ದೇ ಪರದೆ ಹಾಗೂ ಕೀಬೋರ್ಡ್ ಇರುವ ಇವುಗಳಲ್ಲಿ ಕ್ಯಾಬಿನೆಟ್ ತಂಟೆಯೇ ಇಲ್ಲ: ಏಕೆಂದರೆ ಕಂಪ್ಯೂಟರಿನ ಭಾಗಗಳೆಲ್ಲ ಇವುಗಳ ಮಾನಿಟರ್‌ನೊಳಗೇ ಅಡಕವಾಗಿರುತ್ತವೆ! ಪ್ರಾಸೆಸರ್, ರ್‍ಯಾಮ್, ಹಾರ್ಡ್ ಡಿಸ್ಕ್, ಕ್ಯಾಮೆರಾ, ಸ್ಪೀಕರ್, ವೈ-ಫಿ ಅಡಾಪ್ಟರುಗಳೆಲ್ಲ ಮಾನಿಟರಿನೊಳಗೇ ಇರುವುದರಿಂದ ಇಂತಹ ಕಂಪ್ಯೂಟರುಗಳನ್ನು ಇರಿಸಲು ಬಹಳ ಕಡಿಮೆ ಸ್ಥಳಾವಕಾಶ ಸಾಕು. ಹಾಂ, ಇಷ್ಟೆಲ್ಲ ಭಾಗಗಳಿದ್ದರೂ ಕಂಪ್ಯೂಟರಿನ ಮಾನಿಟರ್ ಸಿನಿಮಾ ನಾಯಕಿಯರಂತೆ ತೆಳ್ಳಗೇ ಇರುತ್ತದೆ!

ಮಿನಿ ಪಿಸಿಗಳಂತೆ ಆಲ್-ಇನ್-ಒನ್ ಕಂಪ್ಯೂಟರುಗಳಲ್ಲೂ ಅತ್ಯಂತ ಕಡಿಮೆ ಜಾಗದಲ್ಲಿ ಭಾಗಗಳೆಲ್ಲ ಅಡಕವಾಗಿರುತ್ತವೆ; ಹಾಗಾಗಿ ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲಿ ಮಾಡುವಂತೆ ಇಲ್ಲಿ ಹೊಸ ಭಾಗಗಳನ್ನು ಸೇರಿಸುವುದು ಕಷ್ಟ. ಜಾಗದ ಕೊರತೆಯಿಂದಾಗಿ ಸಿಡಿ ಡ್ರೈವ್‌ಗೂ ನಿವೃತ್ತಿ ಕೊಟ್ಟಾಗಿರುತ್ತದೆ. ಹೆಚ್ಚು ಸಂಖ್ಯೆಯಲ್ಲಿರುವ ಯುಎಸ್‌ಬಿ ಪೋರ್ಟುಗಳು ಈ ಕೊರತೆಗಳನ್ನು ತಕ್ಕಮಟ್ಟಿಗೆ ತುಂಬಿಕೊಡಲು ಪ್ರಯತ್ನಿಸುತ್ತವೆ ಎನ್ನಬಹುದು.

ಆಲ್-ಇನ್-ಒನ್‌ಗಳ ಬೆಲೆ, ಅಷ್ಟೇ ಸಾಮರ್ಥ್ಯದ ಸಾಮಾನ್ಯ ಕಂಪ್ಯೂಟರುಗಳ ಹೋಲಿಕೆಯಲ್ಲಿ ಕೊಂಚ ಹೆಚ್ಚೇ ಎನ್ನಬೇಕು. ಆದರೆ ತೀರಾ ಹೆಚ್ಚಿನ ಸಾಮರ್ಥ್ಯವೇನೂ ಬೇಡ ಎನ್ನುವ ಗ್ರಾಹಕರಿಗಾಗಿ ಸಾಧಾರಣ ಸಾಮರ್ಥ್ಯದ ಆಲ್-ಇನ್-ಒನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸುವ ಪ್ರಯತ್ನವೂ ನಡೆದಿದೆ.

ರೂ. ೨೪,೯೯೯ಕ್ಕೆ ಲಭ್ಯವಿರುವ ಅಸುಸ್ ಸಂಸ್ಥೆಯ 'ಇಟಿ೨೦೪೦' ಇಂತಹ ಕಂಪ್ಯೂಟರುಗಳಲ್ಲೊಂದು. ಇದರಲ್ಲಿ ೨.೪೧ ಗಿಗಾಹರ್ಟ್ಸ್ ಸಾಮರ್ಥ್ಯದ ಇಂಟೆಲ್ ಜೆ೨೯೦೦ ಕ್ವಾಡ್ ಕೋರ್ ಪ್ರಾಸೆಸರ್, ೨ ಜಿಬಿ ರ್‍ಯಾಮ್ ಮತ್ತು ೫೦೦ ಜಿಬಿ ಹಾರ್ಡ್ ಡಿಸ್ಕ್‌ಗಳೆಲ್ಲ ೧೯.೫ ಇಂಚಿನ ಎಲ್‌ಇಡಿ ಮಾನಿಟರಿನಲ್ಲೇ ಅಡಕವಾಗಿವೆ. ವಿಂಡೋಸ್ ೮.೧ ಕಾರ್ಯಾಚರಣ ವ್ಯವಸ್ಥೆ, ವೈ-ಫಿ ಸೌಲಭ್ಯ ಹಾಗೂ ವಿದ್ಯುತ್ ಇಲ್ಲದಾಗ ಒಂದು ಗಂಟೆಯಷ್ಟು ಕಾಲ ಕೆಲಸಮಾಡಲು ನೆರವಾಗುವ ಬ್ಯಾಟರಿ ಇದೆ. ಅಷ್ಟೇ ಅಲ್ಲ, ಕ್ಯಾಮೆರಾ ಮತ್ತು ಅದರ ಜೊತೆಗಿರುವ ತಂತ್ರಾಂಶದ ನೆರವಿನಿಂದ ಈ ಕಂಪ್ಯೂಟರ್ ನಮ್ಮ ಸಂಜ್ಞೆಗಳನ್ನೂ (ಜೆಸ್ಚರ್) ಅರ್ಥಮಾಡಿಕೊಳ್ಳಬಲ್ಲದು: ಮೌಸ್ ಬಳಸಬೇಕಾದ ಹಲವು ಕೆಲಸಗಳನ್ನು ಕಂಪ್ಯೂಟರಿನೆದುರು ಕೈ ಆಡಿಸುವುದರಿಂದಲೇ ಸಾಧಿಸಿಕೊಳ್ಳಬಹುದು!


ದೊಡ್ಡದಾದ ಕ್ಯಾಬಿನೆಟ್‌ಗೇನೋ ಗೇಟ್‌ಪಾಸ್ ಕೊಟ್ಟಾಯಿತು, ಆದರೆ ಕೀಬೋರ್ಡ್-ಮೌಸುಗಳು ಇನ್ನೂ ಇವೆ. ಅವನ್ನು ಬೇಕಾದಾಗ ಬಳಸಿ ಬೇಡವಾದಾಗ ಟಚ್‌ಸ್ಕ್ರೀನ್ ಬಳಸುವಂತಿರಬೇಕು ಎನ್ನುವವರೂ ನಿರಾಸೆಯಾಗಬೇಕಿಲ್ಲ. ಹೆಚ್ಚಿನ ಕೆಲಸವಿದ್ದಷ್ಟು ಹೊತ್ತು ಮೇಜಿನ ಮುಂದೆ ಕುಳಿತು ಕೀಬೋರ್ಡ್-ಮೌಸ್ ಬಳಸಿ, ಸೋಫಾ ಮೇಲೆ ಕುಳಿತು ಸಿನಿಮಾ ನೋಡುವಾಗ ಮಾನಿಟರ್ ಪರದೆಯನ್ನಷ್ಟೆ ಪ್ರತ್ಯೇಕಿಸಿ ಟ್ಯಾಬ್ಲೆಟ್ಟಿನಂತೆ ಬಳಸುವ ಸೌಲಭ್ಯವಿರುವ ಕಂಪ್ಯೂಟರುಗಳೂ ಬಂದಿವೆ. ಟ್ರಾನ್ಸ್‌ಫಾರ್ಮರ್ (ಪರಿವರ್ತಕ) ಎಂದು ಕರೆಸಿಕೊಳ್ಳುವ ಇಂತಹ ಮಾದರಿಗಳು ಡೆಸ್ಕ್‌ಟಾಪ್‌ಗಳಲ್ಲಷ್ಟೇ ಅಲ್ಲದೆ ಲ್ಯಾಪ್‌ಟಾಪ್‌ಗಳಲ್ಲೂ ಇವೆ. ಡೆಸ್ಕ್‌ಟಾಪ್ ಟ್ರಾನ್ಸ್‌ಫಾರ್ಮರುಗಳು ಟ್ಯಾಬ್ಲೆಟ್ ಆಗಿ ಬದಲಾದಾಗ ಅವುಗಳ ಗಾತ್ರ ಕೊಂಚ ಹೆಚ್ಚೇ ಎನಿಸುವಂತಿರುತ್ತದೆ ಅಷ್ಟೆ (ಸಾಮಾನ್ಯ ಟ್ಯಾಬ್ಲೆಟ್ಟುಗಳ ಪರದೆ ೭-೧೦ ಇಂಚುಗಳಷ್ಟೇ ಇರುತ್ತದೆ; ಟ್ರಾನ್ಸ್‌ಫಾರ್ಮರುಗಳ ಪರದೆ ಅವುಗಳಿಗಿಂತ ಕನಿಷ್ಟ ಎರಡು ಪಟ್ಟು ದೊಡ್ಡದಾಗಿರುತ್ತವೆ)!



ಅಂದಹಾಗೆ ಕೀಬೋರ್ಡ್-ಮೌಸುಗಳನ್ನೂ ನಿವಾರಿಸಲು ಇರುವ ಆಯ್ಕೆ ಇದೊಂದೇ ಅಲ್ಲ. ಅವುಗಳ ಬದಲಿಗೆ ಸ್ಪರ್ಶಸಂವೇದಿ ಹಾಸನ್ನು (ಟಚ್ ಮ್ಯಾಟ್) ಬಳಸುವ ಕಂಪ್ಯೂಟರ್ ಕೂಡ ಸಿದ್ಧವಾಗುತ್ತಿದೆ. ಎಚ್‌ಪಿ ಸಂಸ್ಥೆ ರೂಪಿಸಿರುವ 'ಸ್ಪ್ರೌಟ್' ಎನ್ನುವ ಇಂತಹುದೊಂದು ಕಂಪ್ಯೂಟರಿನ ಪರದೆಯಲ್ಲಿ ಏನೇನೆಲ್ಲ ಇರುತ್ತದೋ ಅದೆಲ್ಲ ಕೀಬೋರ್ಡ್ ಜಾಗದಲ್ಲಿರುವ ಟಚ್ ಮ್ಯಾಟ್‌ನಲ್ಲೂ ಮೂಡಿಬರುತ್ತವೆ. ಸಾಮಾನ್ಯ ಸ್ಪರ್ಶಸಂವೇದಿ ಪರದೆಗಳನ್ನು ಉಪಯೋಗಿಸಿದಂತೆಯೇ ಅದನ್ನು ಉಪಯೋಗಿಸುವ ಮೂಲಕ ನಮಗೆ ಬೇಕಾದ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು; ಅಷ್ಟೇ ಅಲ್ಲ, ನಮಗೆ ಬೇಕಾದ ವಸ್ತುಗಳನ್ನು ಮೂರು ಆಯಾಮದಲ್ಲಿ ಸ್ಕ್ಯಾನ್ ಮಾಡಿಕೊಳ್ಳುವುದು, ಭೌತಿಕ ಜಗತ್ತನ್ನು ಕಂಪ್ಯೂಟರಿನೊಳಕ್ಕೆ ಕರೆದೊಯ್ಯುವುದೂ ಸಾಧ್ಯ!

ಒಟ್ಟಿನಲ್ಲಿ ಟ್ಯಾಬ್ಲೆಟ್ ಹಾಗೂ ಮೊಬೈಲ್ ಫೋನುಗಳ ಭರಾಟೆಯಲ್ಲಿ ಇನ್ನೇನು ಮರೆಯಾಗಿಯೇ ಹೋಯಿತು ಎನಿಸಿದ್ದ ದೊಡ್ಡ ಪರದೆಯ ಕಂಪ್ಯೂಟರುಗಳು ಇದೀಗ ಮಿನಿ, ಮೈಕ್ರೋ ಹಾಗೂ ಆಲ್-ಇನ್-ಒನ್‌ಗಳ ಮೂಲಕ ಮತ್ತೆ ಪ್ರಚಲಿತಕ್ಕೆ ಬರುತ್ತಿವೆ. ಕಂಪ್ಯೂಟರುಗಳಿಗಿದು ರೂಪಾಂತರ ಪರ್ವವಾದರೆ ಸಣ್ಣ ಪರದೆಗಳಿಗೂ ಟಚ್ ಸ್ಕ್ರೀನುಗಳಿಗೂ ಹೊಂದಿಕೊಳ್ಳಲು ಕಷ್ಟಪಡುವವರಿಗೆ - ಇಷ್ಟಪಡದವರಿಗೆ ಇದು ಸಂತೋಷದ ಸಮಯ!

ಫೆಬ್ರುವರಿ ೨೨, ೨೦೧೫ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge