ಟಿ. ಜಿ. ಶ್ರೀನಿಧಿ
"ಚಳಿಗಾಲದ #ಬೆಂಗಳೂರು ಮತ್ತು ಬಿಸಿಬಿಸಿ #ಫಿಲ್ಟರ್‌ಕಾಫಿ - ಹೇಳಿ ಮಾಡಿಸಿದ ಜೋಡಿ!"
- ಟ್ವಿಟ್ಟರ್, ಫೇಸ್‌ಬುಕ್ ಮುಂತಾದ ತಾಣಗಳಲ್ಲಿ ದಿನನಿತ್ಯವೂ ನಮ್ಮ ಕಣ್ಣಿಗೆ ಬೀಳುವ ಅಸಂಖ್ಯ ಸಂದೇಶಗಳಿಗೆ ಇದೊಂದು ಉದಾಹರಣೆ ಅಷ್ಟೆ. ಸಮಾಜ ಜಾಲಗಳಲ್ಲಿ (ಸೋಶಿಯಲ್ ನೆಟ್‌ವರ್ಕ್) ಸಂದೇಶಗಳನ್ನು ಪೋಸ್ಟಿಸುವಾಗ - ಈ ಉದಾಹರಣೆಯಲ್ಲಿರುವಂತೆ - ಪ್ರಾರಂಭದಲ್ಲೋ ನಡುವಿನಲ್ಲೋ ಕೊನೆಯಲ್ಲೋ ಹ್ಯಾಶ್ (#) ಚಿಹ್ನೆಯಿಂದ ಪ್ರಾರಂಭವಾಗುವ ಪದಗಳನ್ನು ಬಳಸುವುದು ಸಾಮಾನ್ಯ ಅಭ್ಯಾಸ. ಇಂತಹ ಪದಗಳನ್ನು 'ಹ್ಯಾಶ್‌ಟ್ಯಾಗ್'ಗಳೆಂದು ಕರೆಯುತ್ತಾರೆ.
ಸಂದೇಶ ಬರೆಯುವವರ ಭಾವನೆಯನ್ನು ಪ್ರತಿನಿಧಿಸುವುದರಿಂದ ಪ್ರಾರಂಭಿಸಿ ಸಂಸ್ಥೆಗಳ ಹೆಸರನ್ನೋ ಭಾಷೆಯ ವಿಷಯವನ್ನೋ ನಿರ್ದಿಷ್ಟ ಘಟನೆಯನ್ನೋ ನಿರ್ದೇಶಿಸುವವರೆಗೆ ಹ್ಯಾಶ್‌ಟ್ಯಾಗ್‍ಗಳು ಅನೇಕ ಉದ್ದೇಶಗಳಿಗಾಗಿ ಬಳಕೆಯಾಗುತ್ತವೆ. ಉದಯವಾಣಿಯಲ್ಲಿ ಪ್ರಕಟವಾದ ಸುದ್ದಿ ಎಂದು ಸೂಚಿಸಲು #Udayavani, ಬೆಂಗಳೂರಿಗೆ ಸಂಬಂಧಪಟ್ಟಿದ್ದು ಎಂದು ಹೇಳಲು #Bengaluru, ಕನ್ನಡದ ಮಾಹಿತಿ ಎನ್ನುವುದಕ್ಕೆ #Kannada, ವಿಜ್ಞಾನದ ವಿಷಯಕ್ಕೆ #Science - ಹೀಗೆ ಯಾವ ವಿಷಯಕ್ಕೇ ಆದರೂ ನಾವು ಹ್ಯಾಶ್‌ಟ್ಯಾಗ್‌ಗಳನ್ನು ರೂಪಿಸಿಕೊಳ್ಳಬಹುದು, ಹಾಗೂ ಈಗಾಗಲೇ ಇರುವ ಟ್ಯಾಗ್‌ಗಳನ್ನು ನಮ್ಮ ಸಂದೇಶಗಳಲ್ಲಿ ಬಳಸಬಹುದು.
ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು, ಪ್ರಾರಂಭ '#'ನೊಡನೆ ಆಗಿರಬೇಕು ಎನ್ನುವುದು ನಿಯಮ. ಹ್ಯಾಶ್‌ಟ್ಯಾಗ್‌ನಲ್ಲಿ ಅಕ್ಷರ, ಅಂಕಿ ಹಾಗೂ ಅಂಡರ್‌ಸ್ಕೋರ್('_')ಗಳನ್ನು ಮಾತ್ರ ಬಳಸಬಹುದು. ಇತರ ಲೇಖನಚಿಹ್ನೆಗಳನ್ನು ಹಾಗೂ ಖಾಲಿಜಾಗಗಳಿಗೆ (ಸ್ಪೇಸ್) ಹ್ಯಾಶ್‌ಟ್ಯಾಗ್‌ನಲ್ಲಿ ಜಾಗವಿಲ್ಲ.
ಇಂತಹ ಯಾವುದೇ ಹ್ಯಾಶ್‌ಟ್ಯಾಗ್ ಬಳಸಿರುವ ಎಲ್ಲ ಸಂದೇಶಗಳನ್ನೂ ಸಮಾಜ ಜಾಲಗಳು ಪ್ರತ್ಯೇಕವಾಗಿ ವರ್ಗೀಕರಿಸುತ್ತವೆ. ಹಾಗಾಗಿ ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿರುವ ಸಂದೇಶಗಳನ್ನು ಒಟ್ಟಾಗಿ ನೋಡುವುದು, ಹಾಗೂ ಅದನ್ನು ಎಷ್ಟು ಮಂದಿ ಬಳಸಿದ್ದಾರೆ ಎನ್ನುವುದರ ಆಧಾರದ ಮೇಲೆ ಆ ವಿಷಯದ ಜನಪ್ರಿಯತೆಯನ್ನು ಅರಿಯುವುದು ಕೂಡ ಸಾಧ್ಯವಾಗುತ್ತದೆ. ನಿರ್ದಿಷ್ಟ ವಿಷಯದ ಕುರಿತು ಹಂಚಿಕೊಳ್ಳಲಾಗಿರುವ ಮಾಹಿತಿ ಅಥವಾ ಸಂದೇಶಗಳನ್ನು ಹುಡುಕುವುದಕ್ಕೂ ಹ್ಯಾಶ್‌ಟ್ಯಾಗ್‌ಗಳು ಸಹಕಾರಿ.
ವ್ಯಾಕರಣಚಿಹ್ನೆಗಳ ದೃಷ್ಟಿಯಿಂದ ಹೇಳುವುದಾದರೆ ಹ್ಯಾಶ್ (#) ಚಿಹ್ನೆಗೆ ಸುದೀರ್ಘ ಇತಿಹಾಸವಿದೆ. ನಮ್ಮಲ್ಲಿ ತೂಕದ ಏಕಮಾನವಾಗಿ ಕಿಲೋಗ್ರಾಮ್ ಬಳಕೆಯಾಗುವಂತೆ ಹಲವು ದೇಶಗಳಲ್ಲಿ ಪೌಂಡ್ ಬಳಸುತ್ತಾರಲ್ಲ, ಕಿಲೋಗ್ರಾಮ್‌ಗೆ ಕೆಜಿ ಇದ್ದಂತೆ ಪೌಂಡ್‌ಗೆ ಎಲ್‌ಬಿ ಎನ್ನುವುದು ಸಂಕ್ಷಿಪ್ತರೂಪ (ಇದು 'ಪೌಂಡ್ ತೂಕ'ದ ರೋಮನ್ ಹೆಸರು libra pondoದ ಹ್ರಸ್ವರೂಪ). ಈ ಸಂಕ್ಷಿಪ್ತರೂಪವನ್ನು ಬರೆಯುತ್ತಿದ್ದ ವಿಶೇಷ ಶೈಲಿಯೇ ಇಂದಿನ ಹ್ಯಾಶ್ ಚಿಹ್ನೆ ರೂಪುಗೊಳ್ಳಲು ಕಾರಣವಾಯಿತಂತೆ. ಹಲವು ಸಂದರ್ಭಗಳಲ್ಲಿ # ಅನ್ನು ಪೌಂಡ್ ಚಿಹ್ನೆ ಎಂದು ಕರೆಯುವ ಅಭ್ಯಾಸ ಇಂದಿಗೂ ಇದೆ ಎನ್ನುವುದು ಗಮನಾರ್ಹ. ಕ್ರಮಸಂಖ್ಯೆ, ಮನೆಯ ಡೋರ್ ನಂಬರ್ ಇತ್ಯಾದಿಗಳನ್ನು ಗುರುತಿಸಲಿಕ್ಕೂ ಈ ಚಿಹ್ನೆ ಬಳಕೆಯಾಗುತ್ತದೆ. ಕಂಪ್ಯೂಟರ್ ಪ್ರಪಂಚದಲ್ಲೂ ಅಷ್ಟೆ, ಈ ಚಿಹ್ನೆ ಹಲವು ಸನ್ನಿವೇಶಗಳಲ್ಲಿ ಹಲವು ಉದ್ದೇಶಗಳಿಗಾಗಿ ಬಳಕೆಯಾದ ಕುರಿತು ದಾಖಲೆಗಳಿವೆ.
ಸಮಾಜ ಜಾಲಗಳೊಡನೆ ಹ್ಯಾಶ್ ಚಿಹ್ನೆಯ ಸಂಬಂಧ ಪ್ರಾರಂಭವಾದದ್ದು ೨೦೦೭ರಲ್ಲಿ. ಇಂಟರ್‌ನೆಟ್ ರಿಲೇ ಚಾಟ್ (ಐಆರ್‌ಸಿ) ಜಾಲಗಳಲ್ಲಿ ಬಳಕೆಯಾಗುತ್ತಿದ್ದ # ಚಿಹ್ನೆಯನ್ನು ಟ್ವಿಟ್ಟರಿನಲ್ಲೂ ಬಳಸಬಹುದಲ್ಲ ಎಂಬ ಸಲಹೆ ಕ್ರಿಸ್ ಮೆಸೀನ ಎಂಬ ತಂತ್ರಜ್ಞನಿಂದ ಬಂತು. ಈ ಸಲಹೆಗೆ ಮೊದಲಿಗೆ ಅಷ್ಟೇನೂ ಉತ್ತಮ ಪ್ರತಿಕ್ರಿಯೆ ಬಾರದಿದ್ದರೂ ಪದಗಳೊಡನೆ ಚಿಹ್ನೆಯ ಬಳಕೆ ಕೆಲವೇ ಸಮಯದಲ್ಲಿ ಬಹಳ ಜನಪ್ರಿಯವಾಯಿತು. ನಂತರದ ಕೆಲ ವರ್ಷಗಳಲ್ಲಿ ಇನ್ಸ್‌ಟಾಗ್ರಾಮ್, ಫ್ಲಿಕರ್, ಗೂಗಲ್ ಪ್ಲಸ್, ಫೇಸ್‌ಬುಕ್ ಮುಂತಾದ ಇನ್ನಿತರ ಸಮಾಜ ಜಾಲಗಳಲ್ಲೂ ಹ್ಯಾಶ್‌ಟ್ಯಾಗ್‌ಗಳು ಕಾಣಿಸಿಕೊಂಡವು.
ತಮ್ಮ ಅಸ್ತಿತ್ವದ ಒಂದು ದಶಕಕ್ಕಿಂತ ಕಡಿಮೆ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವುದು ಹ್ಯಾಶ್‌ಟ್ಯಾಗ್‌ಗಳ ಹಿರಿಮೆ. ಅಮೆರಿಕಾದ ಸಾನ್ ಡಿಯೇಗೋ ನಗರದ ಆಸುಪಾಸು ೨೦೦೭ರಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನ ಸಂದರ್ಭದಲ್ಲಿ ತಕ್ಷಣದ ಮಾಹಿತಿಯನ್ನು ತಲುಪಿಸಲು ಬಳಕೆಯಾದ #sandiegofire ಹ್ಯಾಶ್‌ಟ್ಯಾಗ್ ಇಂತಹ ಪ್ರಯತ್ನಗಳಲ್ಲಿ ಮೊದಲನೆಯದು. ಮಧ್ಯಪ್ರಾಚ್ಯ ಸೇರಿದಂತೆ ಹಲವೆಡೆಗಳಲ್ಲಿ ನಡೆದ ಸಾಮಾಜಿಕ ಕ್ರಾಂತಿಗಳಲ್ಲೂ ಹ್ಯಾಶ್‌ಟ್ಯಾಗ್‌ಗಳು ವ್ಯಾಪಕವಾಗಿ ಬಳಕೆಯಾದವು.
ನೈಜೀರಿಯಾ ಉಗ್ರಗಾಮಿಗಳಿಂದ ಬಾಲಕಿಯರ ಅಪಹರಣವಾದಂತಹ ಸಂದರ್ಭದಲ್ಲೂ #BringBackOurGirlsನಂತಹ ಹ್ಯಾಶ್‌ಟ್ಯಾಗ್‌ಗಳು ಜಾಲಲೋಕದ ಧ್ವನಿಯಾದವು. ರಷ್ಯಾ-ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಸರಕಾರಗಳನ್ನು ಪ್ರತಿನಿಧಿಸುವ ಟ್ವಿಟ್ಟರ್ ಖಾತೆಗಳೂ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದುಂಟು. ಉಕ್ರೇನಿನ ವಿದೇಶಾಂಗ ವ್ಯವಹಾರ ಇಲಾಖೆಯಂತೂ ತನ್ನ ಟ್ವಿಟ್ಟರ್ ಖಾತೆಯ ಮೂಲಕ #UkraineUnderAttack ಹಾಗೂ #RussiaInvadedUkraine ಎನ್ನುವ ಹ್ಯಾಶ್‌ಟ್ಯಾಗುಗಳಿಗೆ ಪ್ರಚಾರ ನೀಡುವಂತೆ ಕೇಳಿಕೊಂಡಿತ್ತು.
ಇಷ್ಟೆಲ್ಲ ಉದಾಹರಣೆಗಳಿವೆ ಎಂದಮಾತ್ರಕ್ಕೆ ಹ್ಯಾಶ್‌ಟ್ಯಾಗ್‌ಗಳ ಬಳಕೆ ಇಂತಹ ಸನ್ನಿವೇಶಗಳಿಗಷ್ಟೆ ಸೀಮಿತ ಎನ್ನುವಂತೇನೂ ಇಲ್ಲ. ಜಾಹೀರಾತು ಹಾಗೂ ಪ್ರಚಾರೋದ್ಯಮದಲ್ಲಿ, ಹಬ್ಬಗಳು, ವಿವಿಧ ದಿನಾಚರಣೆ, ಕ್ರೀಡಾಕೂಟಗಳ ಸಂದರ್ಭಗಳಲ್ಲೆಲ್ಲ ಹ್ಯಾಶ್‌ಟ್ಯಾಗ್‌ಗಳ ಭರಾಟೆ ಜೋರು. ಬ್ರಿಟನ್ನಿನ ಯುವರಾಣಿ ಕೇಟ್ ಮೊದಲ ಮಗು ಹುಟ್ಟಿದ ಸಂದರ್ಭದಲ್ಲಿ #royalbaby ಎನ್ನುವ ಹ್ಯಾಶ್‌ಟ್ಯಾಗ್ ಒಂಬತ್ತು ಲಕ್ಷಕ್ಕಿಂತ ಹೆಚ್ಚುಬಾರಿ ಬಳಕೆಯಾಗಿತ್ತಂತೆ.
ಸಂಸ್ಥೆಗಳು ತಮ್ಮ ಉತ್ಪನ್ನಗಳ ಪ್ರಚಾರಕ್ಕೆಂದು ಹ್ಯಾಶ್‌ಟ್ಯಾಗುಗಳನ್ನು ರೂಪಿಸಿಕೊಳ್ಳುವುದೇನೋ ಸರಿ, ಆದರೆ ಅವೇ ಹ್ಯಾಶ್‌ಟ್ಯಾಗುಗಳು ಸಂಸ್ಥೆಗೆ ಕೆಟ್ಟಹೆಸರನ್ನೂ ತಂದುಕೊಡಬಲ್ಲವು. ತನ್ನ ಗ್ರಾಹಕರ ಅನುಭವಗಳನ್ನು ತಿಳಿದುಕೊಳ್ಳಲು ಮೆಕ್‌ಡೊನಾಲ್ಡ್‌ಸ್ ಸಂಸ್ಥೆ ರೂಪಿಸಿದ #McDStories ಹ್ಯಾಶ್‌ಟ್ಯಾಗನ್ನು ಗ್ರಾಹಕರು ತಮ್ಮ ದೂರುದುಮ್ಮಾನಗಳ ಸಲ್ಲಿಕೆಗೆಂದು ಬಳಸಲು ಪ್ರಾರಂಭಿಸಿ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿಬಿಟ್ಟಿದ್ದರು!
ಹ್ಯಾಶ್‌ಟ್ಯಾಗ್‌ಗಳ ಸುತ್ತ ಹೊಸ ತಂತ್ರಜ್ಞಾನಗಳೂ ರೂಪುಗೊಂಡಿವೆ. ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಬಳಸಿದಾಗ ಅವುಗಳ ಜೊತೆಗೆ ಅಥವಾ ಅವುಗಳ ಸ್ಥಾನದಲ್ಲಿ ಪೂರಕ ಮಾಹಿತಿ ಪ್ರದರ್ಶಿಸುವ ವ್ಯವಸ್ಥೆಗಳನ್ನು ಇಲ್ಲಿ ಉದಾಹರಿಸಬಹುದು. ಟ್ವಿಟರ್ ಹಾಗೂ ಅಮೆರಿಕನ್ ಎಕ್ಸ್‌ಪ್ರೆಸ್ ಸಹಯೋಗದ ಪ್ರಯತ್ನವೊಂದು ವಿಶೇಷ ಹ್ಯಾಶ್‌ಟ್ಯಾಗ್‌ಗಳನ್ನು ಟ್ವೀಟಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಮಾಡಲು ಸಾಧ್ಯವಾಗಿಸಿದ್ದು ಇನ್ನೊಂದು ಉದಾಹರಣೆ.
ಸಿಕ್ಕಸಿಕ್ಕ ವಿಷಯಗಳಿಗೆಲ್ಲ ಹ್ಯಾಶ್‌ಟ್ಯಾಗ್ ಸೃಷ್ಟಿಸುವ, ಸಂದೇಶದಲ್ಲಿರುವ ಪದಗಳಿಗಿಂತ ಹೆಚ್ಚಿನ ಸಂಖ್ಯೆಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವ ಅಭ್ಯಾಸವೂ ಅಪರೂಪವೇನಲ್ಲ. ಹ್ಯಾಶ್‌ಟ್ಯಾಗ್‌ನಲ್ಲಿ ಒಂದೇ ಪದ ಇರಬೇಕು ಎನ್ನುವ ನಿಯಮ ಪಾಲಿಸಲು ನಾಲ್ಕಾರು ಪದಗಳನ್ನು ಒಟ್ಟುಸೇರಿಸಿ ತೀರಾ ಉದ್ದವಾದ ಹ್ಯಾಶ್‌ಟ್ಯಾಗ್‌ಗಳನ್ನು ರೂಪಿಸುವ ದುರಭ್ಯಾಸವೂ ಕೆಲವರಲ್ಲಿರುತ್ತವೆ.
ಇದರ ಜೊತೆಯಲ್ಲೇ ಹ್ಯಾಶ್‌ಟ್ಯಾಗ್ ಅತಿಬಳಕೆಯನ್ನು ವಿರೋಧಿಸುವವರ ಧ್ವನಿಯೂ ಸಾಕಷ್ಟು ಜೋರಾಗಿದೆ. ಇಮೇಲ್ ಹಾಗೂ ಸಮಾಜ ಜಾಲಗಳಲ್ಲಿದ್ದಂತೆ ಹ್ಯಾಶ್‌ಟ್ಯಾಗ್ ಸಮರ್ಪಕ ಬಳಕೆಗೂ ಶಿಷ್ಟಾಚಾರ (ಎಟಿಕೆಟ್) ರೂಪುಗೊಂಡಿದೆ. ಹ್ಯಾಶ್‌ಟ್ಯಾಗ್ ಅತಿಬಳಕೆಯನ್ನು ಲೇವಡಿಮಾಡುವವರೂ ಇದ್ದಾರೆ: ಕಾರ್ಯಕ್ರಮವೊಂದರಲ್ಲಿ ಗಾಯಕ ಜಸ್ಟಿನ್ ಟಿಂಬರ್‌ಲೇಕ್ ಹ್ಯಾಶ್‌ಟ್ಯಾಗ್‌ಗಳ ಬಳಕೆಯನ್ನು ತಮಾಷೆಮಾಡಿದ್ದು ಸಾಕಷ್ಟು ಸುದ್ದಿಮಾಡಿತ್ತು.
ಇಮೇಲಿನ @ ಚಿಹ್ನೆಯಷ್ಟು ಪ್ರಮಾಣದಲ್ಲಿ ಬಳಕೆಯಾಗದಿದ್ದರೂ ಅಂತರಜಾಲ ಬಳಕೆದಾರರ ಮೇಲೆ ಹ್ಯಾಶ್‌ನ ಪ್ರಭಾವ ಸಾಕಷ್ಟು ಪ್ರಮಾಣದಲ್ಲಿಯೇ ಇದೆ ಎನ್ನಬಹುದು. ಸಾಮಾನ್ಯ ಬಳಕೆದಾರರ ಜೊತೆಗೆ ಸಂಸ್ಥೆಗಳು, ಜಾಹೀರಾತುದಾರರು ಹಾಗೂ ಕಾರ್ಯಕ್ರಮಗಳ ಆಯೋಜಕರೂ ಹ್ಯಾಶ್ ಶಕ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಅಂತರಜಾಲ ಪ್ರಪಂಚದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಈ ಚಿಹ್ನೆಗೆ ನಮ್ಮದೂ ಒಂದು #ಮೆಚ್ಚುಗೆ ತಲುಪಿಸಿಬಿಡೋಣ.
ಫೆಬ್ರುವರಿ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್:
ದೂರವಾಣಿ ಸಾಧನದ ಮೇಲೆ "#" ಹ್ಯಾಶ್ ಬಟನ್ ಸುಮ್ಮನೆ ಕುಳಿತಿದೆ!?
ಸಮಾಜ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತಿರುವುದು ಸ೦ತಸ ತ೦ದಿದೆ.
ಕಾಮೆಂಟ್ ಪೋಸ್ಟ್ ಮಾಡಿ