ಶನಿವಾರ, ಜನವರಿ 24, 2015

ಪ್ರಿಯ ಮಿತ್ರ ಅನಂತರಾಮು...

ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಹಿರಿಯ ವಿಜ್ಞಾನ ಲೇಖಕ, ವಿಜ್ಞಾನಿ ಟಿ. ಆರ್. ಅನಂತರಾಮು ಅವರಿಗೆ ಇನ್ನೊಬ್ಬ ಹಿರಿಯ ಲೇಖಕರಾದ ನಾಗೇಶ ಹೆಗಡೆಯವರು ಬರೆದ ಬಹಿರಂಗ ಪತ್ರ ಇಲ್ಲಿದೆ. ಇಂತಹುದೊಂದು ಅಪರೂಪದ ಪತ್ರ ಪ್ರಕಟಿಸಲು ನಮಗೆ ಹೆಮ್ಮೆ.
(ಚಿತ್ರ ಕೃಪೆ: ನವಕರ್ನಾಟಕ ಪ್ರಕಾಶನ)
ಪ್ರಿಯ ಮಿತ್ರ ಅನಂತರಾಮು,
ನಿಮಗೆ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿಯನ್ನು ನೀಡುವುದಾಗಿ ಘೋಷಿಸಿದ್ದು ತಿಳಿದು ಅತೀವ ಸಂತಸವಾಯಿತು. ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೇ ಈಗ ಗೌರವ ಸಿಕ್ಕಂತಾಗಿದೆ. 30 ವರ್ಷಗಳ ಹಿಂದೆ ನಾನು 'ಸುಧಾ'ದಲ್ಲಿದ್ದಾಗ ನೀವು ದೂರದ ಮಿಝೊರಾಂನ ದಟ್ಟಡವಿಯಲ್ಲಿ ಭೂಸರ್ವೇಕ್ಷಣೆ ಮಾಡುತ್ತಲೇ ಅಲ್ಲಿನ ನಿಸರ್ಗ ಸಿರಿಯ ಬಗ್ಗೆ ಸೊಗಸಾದ ಲೇಖನವನ್ನು ಕಳಿಸಿದ್ದಿರಿ. ಕನ್ನಡ ಸಾಹಿತ್ಯ ಪರಂಪರೆಯ ಸೊಗಡು ನಿಮ್ಮ ಬರವಣಿಗೆಯಲ್ಲಿತ್ತು. ಅಂದಿನಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಭೂವಿಸ್ಮಯಗಳ ಆಳಗಲಗಳನ್ನು ಕನ್ನಡಿಗರಿಗ ಪರಿಚಯಿಸುತ್ತ ಎತ್ತರಕ್ಕೆ ಬೆಳೆಯುತ್ತ ಹೋದಿರಿ. ನಿಮ್ಮ ಈ ಬೆಳವಣಿಗೆಗೆ ಆರಂಭದಲ್ಲಿ ಆಗೀಗ ಅಷ್ಟಿಷ್ಟು ನೀರೆರೆದ ನಾನು ಬೀಗುತ್ತ ಹೋದೆ. ನೀವು ಪ್ರೊ. ನಿಸಾರ್ ಅಹ್ಮದರ ಜೊತೆಯಲ್ಲೇ ಭೂವಿಜ್ಞಾನದ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರೂ ನಿಮ್ಮ ಕಾವ್ಯಮಯ ಶೈಲಿಯನ್ನು ವಿಜ್ಞಾನ ಬರವಣಿಗೆಗೇ ಸೀಮಿತಗೊಳಿಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, ಕನ್ನಡ ವಿಜ್ಞಾನ ಸಾಹಿತ್ಯವನ್ನು ಶ್ರೀಮಂತಗೊಳಿಸಿದಿರಿ. ವಿಜ್ಞಾನ ಸಾಹಿತಿಗಳೆನಿಸಿದ ನಾವೆಲ್ಲ ಒಂದರ್ಥದಲ್ಲಿ ಅಳಿವಿನಂಚಿನ ಜೀವಿಗಳೆನಿಸಿದ್ದೇವೆ. ವಿಜ್ಞಾನ ವಿಷಯಗಳನ್ನು ಕನ್ನಡದಲ್ಲಿ ಸರಳವಾಗಿ ಬರೆಯಬಲ್ಲವರ ಸಂಖ್ಯೆ ದಿನದಿನಕ್ಕೆ ಕ್ಷೀಣವಾಗುತ್ತಿದೆ. ಸಾಹಿತ್ಯದ ಮೇರು ವಿಮಶ೯ಕರು ನಮ್ಮತ್ತ ನೋಡುವುದಿಲ್ಲ. 'ಕಡೆಗಣಿಸಲ್ಪಟ್ಟ ಸಾಹಿತ್ಯ'ಗಳ ಪಟ್ಟಿಯಲ್ಲೂ ನಮ್ಮ ಕೃತಿಗಳಿಗೆ ಸ್ಥಾನವಿಲ್ಲ. ಅಷ್ಟಾದರೂ ನಿಮ್ಮ ಶಿರಾ ತಾಲ್ಲೂಕಿನ ಜನರು ಪ್ರೀತಿಯಿಂದ ನಿಮ್ಮನ್ನು ಕಳೆದ ವಾರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮೆರೆಸಿ ಗೌರವಿಸಿದ್ದಾರೆ. ಕತೆ, ಕಾದಂಬರಿ, ನಾಟಕ, ಕವನ ಬರೆದರೆ ಸಿಗುವ ಗೌರವ ಇತರ ಸಾಹಿತ್ಯ ಪ್ರಕಾರಗಳಿಗೆ ಸಿಗುವುದಿಲ್ಲ ಎಂಬ ಮಾತನ್ನು ಸುಳ್ಳಾಗಿಸಿ ಇದೀಗ ನಿಮಗೆ ಯಾವ ಲಾಬಿ ಇಲ್ಲದೆಯೂ ಡಾಕ್ಟರೇಟ್ ಸಿಕ್ಕಿದೆ. ಅಭಿನಂದನೆಗಳು- ನಿಮಗೊಂದೇ ಅಲ್ಲ, ತುಮಕೂರು ವಿಶ್ವವಿದ್ಯಾಲಯಕ್ಕೂ!
ನಾಗೇಶ ಹೆಗಡೆ

2 ಕಾಮೆಂಟ್‌ಗಳು:

Holalkere rangarao laxmivenkatesh ಹೇಳಿದರು...

ಸದ್ದು ಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಸಾಹಿತ್ಯ ಕೃಷಿಯನ್ನು ನಿಷ್ಟೆಯಿಂದ ಮಾಡುತ್ತಿರುವ, ಹಲವಾರು ಅಪರೂಪದ ಕೃತಿಗಳನ್ನು ಕನ್ನಡಿಗರಿಗೆ ಕೊಟ್ಟು ಉಪಕಾರ ಮಾಡುತ್ತಿರುವ ಟಿ.ಆರ್.ಆ ರಿಗೆ ಅಭಿನಂದನೆಗಳು !


ದುರಹಂಕಾರಿ ಹೇಳಿದರು...

"ಅಭಿನಂದನೆಗಳು- ನಿಮಗೊಂದೇ ಅಲ್ಲ, ತುಮಕೂರು ವಿಶ್ವವಿದ್ಯಾಲಯಕ್ಕೂ!"

+1. ನಮ್ಮ ಅಭಿನಂದನೆಗಳು.

badge