ಟಿ. ಜಿ. ಶ್ರೀನಿಧಿ
ಮೊಬೈಲ್ ಫೋನ್ ಬಳಸಿ ಸಂವಹನ ನಡೆಸಲು ಆಯ್ಕೆಗಳು ಹಲವು. ಕರೆಮಾಡಿ ಮಾತನಾಡಿ, ಐವಿಆರ್‌ಎಸ್ ವ್ಯವಸ್ಥೆ ಬಳಸಿ, ಪಠ್ಯರೂಪದ ಸಂದೇಶ ಕಳುಹಿಸಿ ಇಲ್ಲವೇ ಸುಮ್ಮನೆ ಒಂದು ಮಿಸ್ಡ್ ಕಾಲ್ ಆದರೂ ಕೊಡಿ - ಬಳಸುವ ಪ್ರತಿಯೊಂದು ವಿಧಾನದಲ್ಲೂ ತಾಂತ್ರಿಕವಾಗಿ ಒಂದಲ್ಲ ಒಂದು ಬಗೆಯ ಸಂವಹನ ನಡೆದಿರುತ್ತದೆ.
ಇಂತಹ ಪ್ರತಿಯೊಂದು ವಿಧದ ಸಂವಹನದಲ್ಲೂ ಹಲವು ಸಾಧ್ಯತೆಗಳಿರುತ್ತವೆ. ಎಸ್ಸೆಮ್ಮೆಸ್ಸಿನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಗುಡ್ ಮಾರ್ನಿಂಗ್ ಗುಡ್ ಈವನಿಂಗ್ ಸಂದೇಶಗಳನ್ನು ಕಳುಹಿಸುವ ಜೊತೆಗೆ ಸ್ಪರ್ಧೆಗಳಲ್ಲಿ ಭಾಗವಹಿಸುವ, ಬಸ್ಸು-ವಿಮಾನ ಇತ್ಯಾದಿಗಳ ಪ್ರಯಾಣ ವಿವರ ತಿಳಿಯುವ, ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳುವಂತಹ ಕೆಲಸಗಳಿಗೆಲ್ಲ ಎಸ್ಸೆಮ್ಮೆಸ್ಸುಗಳನ್ನು ಬಳಸಬಹುದು.
ಮೊಬೈಲಿನ ಪ್ರೀಪೇಯ್ಡ್ ಖಾತೆಯಲ್ಲಿ ದುಡ್ಡೆಷ್ಟಿದೆ ಎನ್ನುವುದನ್ನೋ ಪೋಸ್ಟ್‌ಪೇಯ್ಡ್ ಖಾತೆಯ ಇಂದಿನ ಬಾಕಿ ಎಷ್ಟು ಎನ್ನುವುದನ್ನೋ ತಿಳಿಯುವುದೂ ಸಾಧ್ಯ ತಾನೆ? ಈ ಉದ್ದೇಶಕ್ಕೆ ಬಳಸುವ ವ್ಯವಸ್ಥೆ ಎಸ್ಸೆಮ್ಮೆಸ್ಸಿಗಿಂತ ಕೊಂಚ ಭಿನ್ನವಾಗಿರುವುದನ್ನು ನಾವು ಗಮನಿಸಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಲೋ ವಿಮಾನದ ಸಮಯ ತಿಳಿದುಕೊಳ್ಳಲೋ ನಾವು ಸಂಖ್ಯೆಯೊಂದಕ್ಕೆ ಎಸ್ಸೆಮ್ಮೆಸ್ ಕಳುಹಿಸುತ್ತೇವೆ; ಆದರೆ ಮೊಬೈಲ್ ಖಾತೆಯಲ್ಲಿ ದುಡ್ಡೆಷ್ಟಿದೆ ಎಂದು ತಿಳಿಯಲು ನಾವು ಬಳಸುವ ಸಂಖ್ಯೆಯಲ್ಲಿ *, # ಮುಂತಾದ ಚಿಹ್ನೆಗಳೆಲ್ಲ ಇರುತ್ತವೆ ಎನ್ನುವುದು ನಮ್ಮ ಗಮನಕ್ಕೆ ಬರುವ ಮೊದಲ ವ್ಯತ್ಯಾಸ.
ಇಲ್ಲಿ ನಾವು ಪಡೆಯುವ ಇಲ್ಲವೇ ಕಳುಹಿಸುವ ಮಾಹಿತಿಯನ್ನು ಎಸ್ಸೆಮ್ಮೆಸ್ಸಿನ ಹಾಗೆ ಮತ್ತೆ ನೋಡಲು ಸಾಧ್ಯವಾಗುವುದಿಲ್ಲ ಎನ್ನುವುದು ಇನ್ನೊಂದು ವ್ಯತ್ಯಾಸ.
ಇಲ್ಲಿ ಬಳಕೆಯಾಗುವ ವ್ಯವಸ್ಥೆಯ ಹೆಸರೇ ಅನ್‌ಸ್ಟ್ರಕ್ಚರ್ಡ್ ಸಪ್ಲಿಮೆಂಟರಿ ಸರ್ವಿಸ್ ಡೇಟಾ, ಅಥವಾ ಯುಎಸ್‌ಎಸ್‌ಡಿ. ಜಿಎಸ್‌ಎಂ ಮೊಬೈಲ್ ಸೇವೆ ಒದಗಿಸುವ ಸಂಸ್ಥೆ ಹಾಗೂ ಗ್ರಾಹಕರ ನಡುವೆ ಮಾಹಿತಿ ಸಂವಹನಕ್ಕೆಂದು ಬಳಕೆಯಾಗುವ ಶಿಷ್ಟಾಚಾರಕ್ಕೆ (ಪ್ರೋಟೋಕಾಲ್, ಅಂತರಜಾಲದಲ್ಲಿ ಎಚ್‌ಟಿಟಿಪಿ ಇದ್ದಂತೆ) ಇದೊಂದು ಉದಾಹರಣೆ.
ತಾಂತ್ರಿಕ ವಿವರಗಳೇನೇ ಇರಲಿ, ಯುಎಸ್‌ಎಸ್‌ಡಿ ಮುಖ್ಯವಾಗುವುದು ತನ್ನ ಸರಳತೆಯಿಂದಾಗಿ. ಮೊಬೈಲ್ ಸೇವೆ ಒದಗಿಸುವ ಸಂಸ್ಥೆಯೊಂದು ತನ್ನ ಗ್ರಾಹಕರಿಗೆ ಅಗತ್ಯ ಮಾಹಿತಿ ಒದಗಿಸಲು ಯುಎಸ್‌ಎಸ್‌ಡಿ ಆಧಾರಿತ ಸೇವೆಯನ್ನು ಒದಗಿಸುತ್ತಿದೆ ಎಂದುಕೊಂಡರೆ ನಿರ್ದಿಷ್ಟ ಕ್ರಮದಲ್ಲಿ ಚಿಹ್ನೆ ಹಾಗೂ ಅಂಕಿಗಳನ್ನು ಒತ್ತುವ ಮೂಲಕ (ಉದಾ: *೧೨೧#) ನಾವು ಆ ಸೇವೆಯನ್ನು ಪಡೆದುಕೊಳ್ಳಬಹುದು. ಒಮ್ಮೆ ಆ ಸೇವೆ ತೆರೆದುಕೊಂಡ ನಂತರವೂ ಅಷ್ಟೆ, ನಿರ್ದಿಷ್ಟ ಅಂಕಿಗಳನ್ನು ಒತ್ತುವ ಮೂಲಕ ಪರದೆಯ ಮೇಲೆ ಕಾಣುವ ಆಯ್ಕೆಗಳನ್ನು (ಉದಾ: ಬಿಲ್ ಆಗದಿರುವ ಮೊತ್ತ, ಹಿಂದಿನ ಬಿಲ್ ವಿವರ, ಸೇವೆಗಳ ನಿಲುಗಡೆ/ಸೇರ್ಪಡೆ ಇತ್ಯಾದಿ) ಬಳಸಬಹುದು. ನಾವಾಗಿ ನಿರ್ಗಮಿಸುವವರೆಗೂ ಯುಎಸ್‌ಎಸ್‌ಡಿ ಸಂಪರ್ಕ ತೆರೆದೇ ಇರುವುದರಿಂದ ಪ್ರತಿಕ್ರಿಯೆ ತಕ್ಷಣವೇ ದೊರಕುತ್ತದೆ, ಎಸ್ಸೆಮ್ಮೆಸ್ಸಿನ ಹಾಗೆ ಕಾಯುವ ಅಗತ್ಯ ಇರುವುದಿಲ್ಲ.
ಎಲ್ಲ ಯುಎಸ್‌ಎಸ್‌ಡಿ ಸೇವೆಗಳಲ್ಲೂ ಮೇಲೆ ಹೇಳಿದಂತೆ ಬಹುಸಂಖ್ಯೆಯ ಆಯ್ಕೆಗಳಿರಬೇಕು ಎಂದೇನೂ ಇಲ್ಲ. ಪ್ರೀಪೇಯ್ಡ್ ಖಾತೆಯಲ್ಲಿರುವ ಹಣ ಎಷ್ಟೆಂದು ತಿಳಿಯಲು *೧೨೩#ನಂತಹ ಆಯ್ಕೆಗಳನ್ನು ಬಳಸುತ್ತೇವಲ್ಲ, ಬ್ಯಾಲೆನ್ಸ್ ತಿಳಿಸುವುದೊಂದೇ ಅದರ ಕೆಲಸವಾದ್ದರಿಂದ ಅಲ್ಲಿ ಹೆಚ್ಚಿನ ಆಯ್ಕೆಗಳೇನೂ ಇರುವುದಿಲ್ಲ. ಪ್ರೀಪೇಯ್ಡ್ ಸಂಖ್ಯೆ ಬಳಸಿ ದೂರವಾಣಿ ಕರೆ ಮಾಡಿದ ನಂತರ ಇಷ್ಟು ಹಣ ಖರ್ಚಾಯಿತು ಎನ್ನುವ ಸಂದೇಶ ಬರುತ್ತದಲ್ಲ, ಆ ಮಾಹಿತಿ ನೀಡುವ ವ್ಯವಸ್ಥೆಯೂ ಇಂತಹ ಸೇವೆಯನ್ನೇ ಬಳಸುತ್ತದೆ.
ಈ ಉದಾಹರಣೆಗಳಷ್ಟನ್ನೇ ಗಮನಿಸಿ ಯುಎಸ್‌ಎಸ್‌ಡಿ ಉಪಯೋಗ ಬರಿಯ ಮೊಬೈಲ್ ಸೇವೆಯ ವಿವರ ಪಡೆದುಕೊಳ್ಳುವುದಕ್ಕಷ್ಟೆ ಎನ್ನುವಂತೇನೂ ಇಲ್ಲ. ಸ್ಮಾರ್ಟ್‌ಫೋನ್ ಬಳಕೆದಾರರಲ್ಲದವರಿಗೆ ವಿಶ್ವವ್ಯಾಪಿ ಜಾಲದಿಂದ ಅಗತ್ಯ ಮಾಹಿತಿ ತಲುಪಿಸಲು ಹಲವು ಮೊಬೈಲ್ ಸಂಸ್ಥೆಗಳು ಯುಎಸ್‌ಎಸ್‌ಡಿ ಬಳಸುತ್ತವೆ. ದತ್ತಾಂಶ ಸೇವೆಗಳಿಗೆ (ಡೇಟಾ) ಖರ್ಚುಮಾಡದೆ ವಿಕಿಪೀಡಿಯಾದಿಂದ ಮಾಹಿತಿ ಪಡೆದುಕೊಳ್ಳುವುದನ್ನು ಸಾಧ್ಯವಾಗಿಸುವ 'ವಿಕಿಪೀಡಿಯಾ ಜೀರೋ' ಕಾರ್ಯಕ್ರಮದಲ್ಲೂ ಯುಎಸ್‌ಎಸ್‌ಡಿ ಬಳಕೆ ಉಂಟು.
ಅದೆಲ್ಲ ಸರಿ, ಎಲ್ಲೆಲ್ಲೂ ಸ್ಮಾರ್ಟ್‌ಫೋನುಗಳೇ ರಾರಾಜಿಸುತ್ತಿರುವ ಇಂದಿನ ಕಾಲದಲ್ಲಿ ಹಳೆಯ ತಂತ್ರಜ್ಞಾನದಂತೆ ತೋರುವ ಈ ಯುಎಸ್‌ಎಸ್‌ಡಿ ಪುರಾಣ ಏಕೆ ಎಂದು ನೀವು ಕೇಳಬಹುದು. ಆ ಪ್ರಶ್ನೆ ಸಮರ್ಥನೀಯವೂ ಹೌದು - ಆಕರ್ಷಕ ಚಿತ್ರಗಳನ್ನು ಬಳಸುವ, ಸ್ಪರ್ಶಸಂವೇದಿ ಪರದೆ (ಟಚ್‌ಸ್ಕ್ರೀನ್) ಹಾಗೂ ಮೊಬೈಲ್ ಪ್ರಾಸೆಸರಿನ ಸಕಲ ಸಾಧ್ಯತೆಗಳನ್ನೂ ಬಳಸಿಕೊಳ್ಳುವ ಈ ಸಂದರ್ಭದಲ್ಲಿ ಓಬೀರಾಯನ ಕಾಲದ ಪಠ್ಯಾಧಾರಿತ ವ್ಯವಸ್ಥೆ ಎಷ್ಟು ಮಹಾ ಉಪಯುಕ್ತವಾಗಬಲ್ಲದು?
ಈ ಪ್ರಶ್ನೆಗೂ ಉತ್ತರವಿದೆ. ಬ್ಯಾಂಕಿಂಗ್‌ನಂತಹ ಅಗತ್ಯ ಸೇವೆಗಳನ್ನು ಕಟ್ಟಕಡೆಯ ಗ್ರಾಹಕನವರೆಗೂ ಬಹಳ ಸುಲಭವಾಗಿ ತಲುಪಿಸಲು ಯುಎಸ್‌ಎಸ್‌ಡಿ ನೆರವಾಗಬಲ್ಲದು. ಜಿಪಿಆರ್‌ಎಸ್ / ೩ಜಿ ಮುಂತಾದ ಪ್ರತ್ಯೇಕ ಅಂತರಜಾಲ ಸಂಪರ್ಕ ಬಳಸದ, ವಿಶೇಷ ತಂತ್ರಾಂಶ (ಆಪ್) ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲದ ಯುಎಸ್‌ಎಸ್‌ಡಿ ವ್ಯವಸ್ಥೆಯನ್ನು ಹಲವಾರು ಬ್ಯಾಂಕುಗಳು ಈಗಾಗಲೇ ಬಳಸುತ್ತಿವೆ. ಬ್ಯಾಂಕುಗಳಷ್ಟೇ ಅಲ್ಲ, ಇತರ ಸಂಸ್ಥೆಗಳು ನಿರ್ವಹಿಸುವ ಮೊಬೈಲ್ ಆಧರಿತ ಹಣ ವರ್ಗಾವಣೆ ವ್ಯವಸ್ಥೆಗಳಲ್ಲೂ (ಉದಾ: ಏರ್‌ಟೆಲ್ ಮನಿ, ಎಂ-ಪೆಸಾ ಇತ್ಯಾದಿ) ಯುಎಸ್‌ಎಸ್‌ಡಿಯದು ಮಹತ್ವದ ಪಾತ್ರ. ಆಫ್ರಿಕಾದ ಅನೇಕ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಈಗಾಗಲೇ ಯಶಸ್ವಿಯಾಗಿ ಬಳಸಿರುವ, ಬಳಸುತ್ತಿರುವ ಇಂತಹ ವ್ಯವಸ್ಥೆಗಳು ಇದೀಗ ನಮ್ಮ ದೇಶದಲ್ಲೂ ಪ್ರಚಲಿತಕ್ಕೆ ಬರುತ್ತಿವೆ. ಎಲ್ಲ ನಾಗರಿಕರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಒದಗಿಸುವ ಮಹತ್ವಾಕಾಂಕ್ಷೆ ನನಸಾಗಿಸುವ ನಿಟ್ಟಿನಲ್ಲಿ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ರೂಪಿಸಿರುವ ನ್ಯಾಶನಲ್ ಯೂನಿಫೈಡ್ ಯುಎಸ್‌ಎಸ್‌ಡಿ ಪ್ಲಾಟ್‌ಫಾರ್ಮ್‌ನಂತಹ (ಎನ್‌ಯುಯುಪಿ) ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಜನವರಿ ೫, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ