ಟಿ. ಜಿ. ಶ್ರೀನಿಧಿ
ಸಂವಹನದಲ್ಲಿ ಮಾತಿಗೆಷ್ಟು ಮಹತ್ವವೋ ಅದರೊಡನೆ ವ್ಯಕ್ತವಾಗುವ ಭಾವನೆಗಳಿಗೂ ಅಷ್ಟೇ ಮಹತ್ವವಿದೆ. ಹೇಳುವ ಮಾತನ್ನು ನಗುತ್ತ ಹೇಳಿದರೆ ಒಂದು ಅರ್ಥವಿದ್ದರೆ ಸಿಟ್ಟಿನಲ್ಲಿದ್ದಾಗ ಅದೇ ಮಾತಿಗೆ ಬೇರೆಯದೇ ಅರ್ಥ ಹುಟ್ಟಿಕೊಂಡುಬಿಡುತ್ತದೆ.
ಮುಖಾಮುಖಿ ಸಂವಹನದಲ್ಲೇನೋ ಸರಿ, ಭಾವನೆಗಳನ್ನು ವ್ಯಕ್ತಪಡಿಸುವುದು ಸುಲಭ. ಆದರೆ ಈಚೆಗೆ ನಮ್ಮ ಸಂವಹನ ಎಸ್ಸೆಮ್ಮೆಸ್, ಇಮೇಲ್, ಸೋಶಿಯಲ್ ನೆಟ್‌ವರ್ಕ್‌ಗಳ ಮೂಲಕವೇ ಹೆಚ್ಚುಹೆಚ್ಚಾಗಿ ನಡೆಯುತ್ತಿದೆಯಲ್ಲ, ಅಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದು ಹೇಗೆ?
ಈ ಪ್ರಶ್ನೆ ಇಂದು ನಿನ್ನೆಯದೇನೂ ಅಲ್ಲ.
೧೯೮೦ರ ದಶಕದಲ್ಲಿ ಅಮೆರಿಕಾದ ಕಾರ್ನೆಜಿ ಮೆಲನ್ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲೊಂದು ಮೆಸೇಜ್ ಬೋರ್ಡ್ ಇತ್ತು. ಸಮುದಾಯದ ಸದಸ್ಯರ ನಡುವೆ ಇಮೇಲ್ ಮೂಲಕ ಸಂದೇಶ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡುತ್ತಿದ್ದ ವ್ಯವಸ್ಥೆ ಅದು.
ಈ ಮೆಸೇಜ್ ಬೋರ್ಡಿನಲ್ಲಿ ಹಲವು ವ್ಯಂಗ್ಯಾತ್ಮಕ (ಸರ್ಕಾಸ್ಟಿಕ್) ಸಂದೇಶಗಳು ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದವು. ಆದರೆ ಆ ಸಂದೇಶಗಳ ಹಿಂದಿನ ವ್ಯಂಗ್ಯ ಎಲ್ಲರಿಗೂ ಅರ್ಥವಾಗುತ್ತಿರಲಿಲ್ಲ. ಪರಿಣಾಮ - ವ್ಯಂಗ್ಯದ ಸಂದೇಶಗಳಿಗೂ ಕಟು ವಿಮರ್ಶೆ, ಟೀಕೆಗಳ ಪ್ರತಿಕ್ರಿಯೆ ಹರಿದುಬರುತ್ತಿತ್ತು.
ಪದೇಪದೇ ಇಂತಹ ಘಟನೆಗಳನ್ನು ನೋಡಿ ಬೇಸತ್ತವರು ವ್ಯಂಗ್ಯದ ಸಂದೇಶಗಳನ್ನು "ಇದು ತಮಾಷೆಗೆ" ಎಂದು ಯಾರಾದರೂ ಗುರುತಿಸಬಾರದೇ ಎಂದು ತಮ್ಮಲ್ಲೇ ಅಂದುಕೊಳ್ಳುತ್ತಿದ್ದರು. ಪಠ್ಯಾಧಾರಿತ ಸಂದೇಶಗಳಲ್ಲಿ ಮುಖಾಮುಖಿ ಸಂವಹನದಲ್ಲಿರುವಂತೆ ಮಾತನಾಡುವವರ ಹಾವಭಾವಗಳನ್ನು ಗಮನಿಸುವ ಅನುಕೂಲವಿರುವುದಿಲ್ಲವಲ್ಲ, ಹಾಗಾಗಿ ವ್ಯಂಗ್ಯದ ಸಂದೇಶಗಳಿಗೆ ಎಂತಹ ಅಭಾದ್ಯತೆಯ ಸೂಚನೆ (ಡಿಸ್‌ಕ್ಲೇಮರ್) ಸೇರಿಸಬೇಕು ಎನ್ನುವುದು ಇನ್ನೂ ಚರ್ಚಾಸ್ಪದವಾಗಿಯೇ ಉಳಿದಿತ್ತು.
ತಮಾಷೆಯ ಸಂದೇಶಗಳನ್ನು ಗುರುತಿಸಲು ಬಳಸಬಹುದಾದ ಹಲವು ಚಿಹ್ನೆಗಳ ಪ್ರಸ್ತಾಪ ಈ ಚರ್ಚೆಯ ನಡುವೆ ಬಂದುಹೋಯಿತು. ಆದರೆ ಕಾರ್ಯಸಾಧನೆಯ ದೃಷ್ಟಿಯಿಂದ ಅವು ಯಾವುದಕ್ಕೂ ಸಮುದಾಯದ ಬೆಂಬಲ ದೊರಕಲಿಲ್ಲ. ಈ ಚರ್ಚೆಯ ನಡುವೆ ಸ್ಕಾಟ್ ಫಾಲ್‌ಮನ್ ಎಂಬ ವಿಜ್ಞಾನಿ ಸರಳವಾಗಿ ಬಳಸಬಹುದಾದ ಚಿಹ್ನೆಗಳ ಹುಡುಕಾಟದಲ್ಲಿ ತೊಡಗಿದ್ದರು. ೧೯೮೨ರ ಸೆಪ್ಟೆಂಬರ್ ೧೯ರಂದು ಆ ಸಮುದಾಯಕ್ಕೆ ಕಳುಹಿಸಿದ ಸಂದೇಶದಲ್ಲಿ ಅವರು ತಮಾಷೆಯ ಸಂದೇಶಗಳಿಗೆ :-) ಎಂದು, ಗಂಭೀರ ಸಂದೇಶಗಳಿಗೆ :-( ಎಂದು ಬಳಸಬಹುದಲ್ಲ ಎಂದು ಸೂಚಿಸಿದರು.
ಇದೀಗ ವಿಶ್ವದೆಲ್ಲೆಡೆ ಜನಪ್ರಿಯವಾಗಿರುವ ಎಮೋಟೈಕನ್‌ಗಳು ಹುಟ್ಟಿದ್ದು ಹೀಗೆ. ಭಾವನೆಗಳನ್ನು (ಎಮೋಶನ್) ವ್ಯಕ್ತಪಡಿಸಲು ನೆರವಾಗುವ ಈ ಸಂಕೇತಗಳ (ಐಕನ್) ಹೆಸರು ರೂಪುಗೊಂಡಿರುವುದು ಎಮೋಶನ್ ಹಾಗೂ ಐಕನ್ - ಎರಡೂ ಪದಗಳ ಜೋಡಣೆಯಿಂದ.
ಸ್ಕಾಟ್ ಫಾಲ್‌ಮನ್‌ರ ಈ ಯೋಚನೆ ಜನಪ್ರಿಯವಾಗುತ್ತಿದ್ದಂತೆ ಇನ್ನೂ ಹಲವಾರು ಎಮೋಟೈಕನ್‌ಗಳೂ ಸೃಷ್ಟಿಯಾದವು. ಗಹಗಹಿಸಿ ನಗುವ ಮುಖ, ಆಶ್ಚರ್ಯದಿಂದ ಬಾಯಿತೆರೆದಿರುವ ಮುಖ, ಕಿಲಾಡಿತನದಿಂದ ಕಣ್ಣುಹೊಡಿಯುತ್ತಿರುವ ಮುಖ, ಕನ್ನಡಕ ಧರಿಸಿ ಸ್ಮಾರ್ಟ್ ಆಗಿರುವ ಮುಖ, ಮೀಸೆಧಾರಿಯ ನಗುಮುಖ - ಈಗ ಎಮೋಟೈಕನ್ ಲೋಕದಲ್ಲಿ ಇವೆಲ್ಲವೂ ಇವೆ. ಎಮೋಟೈಕನ್‌ಗಳ ವ್ಯಾಪ್ತಿ ಇಂತಹ ಸರಳ ವಿನ್ಯಾಸಗಳಿಗಷ್ಟೆ ಸೀಮಿತವಾಗಿಲ್ಲ ಎನ್ನುವುದೂ ಗಮನಾರ್ಹ: ಖುಷಿಯಾಗಿ ಕೈಬೀಸುತ್ತಿರುವ, ಮುಖ ಗಂಟಿಕ್ಕಿಕೊಂಡು ಮೇಜನ್ನು ಎಸೆಯುತ್ತಿರುವ ಎಮೋಟೈಕನ್‌ಗಳೂ ಇವೆ. ಇಲ್ಲಿನ ಸೃಜನಶೀಲತೆ ಎಷ್ಟರಮಟ್ಟಿನದು ಎಂದರೆ ಅಸಮ್ಮತಿಯನ್ನು ಸೂಚಿಸುವ ಠ_ಠ ಎಂಬ ಎಮೋಟೈಕನ್‌ನಲ್ಲಿ (ಯುನಿಕೋಡ್ ಕೃಪೆಯಿಂದ) ಕನ್ನಡದ 'ಠ' ಅಕ್ಷರವೂ ಬಳಕೆಯಾಗಿದೆ.
ಎಮೋಟೈಕನ್ ಬಳಸಿ ಇಷ್ಟೆಲ್ಲ ಭಾವನೆಗಳನ್ನು ವ್ಯಕ್ತಪಡಿಸಬಹುದು ಎನ್ನುವುದು ನಿಜವೇ ಆದರೂ ಮೂಲತಃ ಅವು ಅಕ್ಷರ ಹಾಗೂ ಲೇಖನ ಚಿಹ್ನೆಗಳ ಜೋಡಣೆಗಳಷ್ಟೆ. ಎಮೋಟೈಕನ್ ಪರಿಚಯವಿದ್ದವರಿಗೆ <3 ಎನ್ನುವುದು ಹೃದಯದ ಸಂಕೇತವಾದರೆ ಬೇರೆಯವರು ಅದನ್ನು ಯಾವುದೋ ಲೆಕ್ಕ ಇರಬೇಕು ಎಂದುಕೊಳ್ಳುವ ಸಾಧ್ಯತೆಯೂ ಇದೆ.
ಇಂತಹ ಜೋಡಣೆಗಳ ಬದಲಿಗೆ ಬಣ್ಣಬಣ್ಣದ ಚಿತ್ರಗಳೇ ಕಾಣಿಸುವಂತಿದ್ದರೆ ಎಷ್ಟು ಚೆಂದ ಅಲ್ಲವೆ? ಇಂದಿನ ಎಸ್ಸೆಮ್ಮೆಸ್, ವಾಟ್ಸ್‌ಆಪ್, ಚಾಟಿಂಗ್ ಇತ್ಯಾದಿಗಳಲ್ಲೆಲ್ಲ ಕಾಣಸಿಗುವ ಪುಟಾಣಿ ಚಿತ್ರಗಳು ರೂಪುಗೊಳ್ಳಲು ಕಾರಣವಾದದ್ದು ಇದೇ ಅಂಶ.
'ಎಮೋಜಿ' (emoji) ಎಂದು ಕರೆಸಿಕೊಳ್ಳುವ ಈ ಚಿತ್ರಾಕ್ಷರಗಳು ಮೊದಲಿಗೆ ಕಾಣಿಸಿಕೊಂಡದ್ದು ಜಪಾನ್ ದೇಶದಲ್ಲಿ. ಅಲ್ಲಿನ ಎನ್‌ಟಿಟಿ ಡೋಕೋಮೋ ಸಂಸ್ಥೆ ೧೯೯೦ರ ದಶಕದ ಕೊನೆಯಲ್ಲಿ ಇವುಗಳನ್ನು ಪರಿಚಯಿಸಿತಂತೆ. ಸ್ಮಾರ್ಟ್‌ಫೋನುಗಳ, ಮೆಸೇಜಿಂಗ್ ಸೇವೆಗಳ ಬಳಕೆ ಹೆಚ್ಚುತ್ತಿದ್ದಂತೆ ಇವು ಈಗ ಎಲ್ಲೆಲ್ಲೂ ಕಾಣಸಿಗುತ್ತಿವೆ.
ಜಿಮೇಲ್, ಫೇಸ್‌ಬುಕ್ ಸೇರಿದಂತೆ ಹಲವೆಡೆ ಎಮೋಟೈಕನ್‌ಗಳನ್ನು ಟೈಪಿಸುತ್ತಿದ್ದಂತೆ ಅದು ತನ್ನಷ್ಟಕ್ಕೆ ತಾನೇ ಚಿತ್ರವಾಗಿ ಬದಲಾಗುವ ವ್ಯವಸ್ಥೆ ಕೂಡ ಇದೆ. ಯುನಿಕೋಡ್ ಶಿಷ್ಟತೆಯಲ್ಲೂ ಈ ಚಿತ್ರಾಕ್ಷರಗಳು ಸ್ಥಾನಪಡೆದಿವೆ. ಈ ಚಿತ್ರಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಗೇ ಹೆಚ್ಚಿನ ಪ್ರಾಮುಖ್ಯವಿರುವ ಸದ್ಯದ ಪರಿಸ್ಥಿತಿಯನ್ನು ಬದಲಿಸುವ ಪ್ರಯತ್ನಗಳೂ ನಡೆದಿವೆ.
ಎಸ್ಸೆಮ್ಮೆಸ್ ಇರಲಿ, ಇಮೇಲ್ ಇರಲಿ, ಟ್ವಿಟರ್-ವಾಟ್ಸ್‌ಆಪ್ ಸಂದೇಶಗಳೇ ಇರಲಿ; ಇಂತಹ ಯಾವುದೇ ರೂಪದ ಡಿಜಿಟಲ್ ಸಂವಹನದಲ್ಲಿ ಕೊಂಚಮಟ್ಟಿಗಾದರೂ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಟೈಕನ್-ಎಮೋಜಿಗಳು ನೆರವಾಗುತ್ತಿವೆ ಎನ್ನಬಹುದು.
ಭಾವನೆಗಳ ಅಭಿವ್ಯಕ್ತಿ ಹಾಗಿರಲಿ, ನಾಲ್ಕಾರು ಪದಗಳಲ್ಲಿ ಬರೆಯಬೇಕಾದ್ದನ್ನು ಒಂದೇ ಚಿತ್ರದಲ್ಲಿ ಹೇಳುವುದನ್ನು ಇವು ಸಾಧ್ಯವಾಗಿಸಿವೆ. ಆ ಮೂಲಕ ಎಸ್ಸೆಮ್ಮೆಸ್ ಭಾಷೆಗಿಂತ ಸಂಕ್ಷಿಪ್ತವಾದ ಹೊಸ ಮಾಧ್ಯಮವೇ ರೂಪುಗೊಂಡಿದೆ.
ಎಲ್ಲವೂ ಕ್ಷಿಪ್ರವಾಗಿರಬೇಕು, ಸಂಕ್ಷಿಪ್ತವಾಗಿರಬೇಕು ಎನ್ನುತ್ತಿರುವ ಡಿಜಿಟಲ್ ಜಗತ್ತಿಗೆ ಇದು ಇಷ್ಟವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ ಬಿಡಿ!
ಜನವರಿ ೨೦೧೫ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ