ಶುಕ್ರವಾರ, ಸೆಪ್ಟೆಂಬರ್ 28, 2018

'ಫೋಮೋ'ದಿಂದ 'ಜೋಮೋ'ವರೆಗೆ

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಹೊಸ ಸವಲತ್ತುಗಳು ಕಾಲಕಾಲಕ್ಕೆ ನಮ್ಮ ಸಂಪರ್ಕಕ್ಕೆ ಬರುವುದು ಸಾಮಾನ್ಯ ಸಂಗತಿ; ಅವು ನಮ್ಮ ಬದುಕಿನ ಮೇಲೆ ಬೇರೆಬೇರೆ ಮಟ್ಟದಲ್ಲಿ ಪರಿಣಾಮ ಬೀರುವುದೂ ಸಾಮಾನ್ಯವೇ. ರೇಡಿಯೋದಿಂದ ಕಂಪ್ಯೂಟರಿನವರೆಗೆ, ತಂತಿ ಸಂದೇಶದಿಂದ ವಾಟ್ಸ್‌ಆಪ್‌ವರೆಗೆ ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.

ಇಂತಹ ಸವಲತ್ತುಗಳ ಪೈಕಿ ಕೆಲವು, ಬೇರೆ ಸವಲತ್ತುಗಳ ಹೋಲಿಕೆಯಲ್ಲಿ, ನಮ್ಮನ್ನು ಕೊಂಚ ಹೆಚ್ಚಾಗಿಯೇ ಪ್ರಭಾವಿಸುತ್ತವೆ. ಅದರಲ್ಲಿ ಕೆಲವನ್ನಂತೂ ಬಿಟ್ಟಿರುವುದೇ ಕಷ್ಟ ಎನ್ನಿಸುವ ಪರಿಸ್ಥಿತಿಯೂ ನಿರ್ಮಾಣವಾಗುತ್ತದೆ. ಈಚಿನ ವರ್ಷಗಳಲ್ಲಿ ಇಂತಹ ವಿಶೇಷ ಸ್ಥಾನ ಪಡೆದುಕೊಂಡಿರುವ ಸವಲತ್ತುಗಳ ಪೈಕಿ ಅಗ್ರಸ್ಥಾನ ಸಲ್ಲುವುದು ಸ್ಮಾರ್ಟ್‌ಫೋನ್‌ಗಳಿಗೆ. ಬ್ಲ್ಯಾಕ್‌ಬೆರಿ ಹಾಗೂ ಐಫೋನ್‌‌ನಿಂದ ಶುರುವಾಗಿ ಆಂಡ್ರಾಯ್ಡ್ ಫೋನುಗಳ ಮೂಲಕ ಹೆಚ್ಚಿದ ಅವುಗಳ ಜನಪ್ರಿಯತೆ ಕಳೆದ ಒಂದು ದಶಕದ ಅವಧಿಯಲ್ಲಿ ಅಗಾಧವಾಗಿ ಬೆಳೆದಿದೆ. ಇದರ ಪರಿಣಾಮ, ಇಂದು ನಮ್ಮ ಬದುಕಿನಲ್ಲಿ ಸ್ಮಾರ್ಟ್‌ಫೋನಿಗೆ ಎಲ್ಲಿಲ್ಲದ ಮಹತ್ವ.

ಪ್ರಪಂಚದ ಮೂಲೆಮೂಲೆಗಳ ನಡುವೆ ಸಂವಹನವನ್ನು ಕ್ಷಣಾರ್ಧದಲ್ಲಿ ಸಾಧ್ಯವಾಗಿಸುವ ಈ ಸಾಧನಕ್ಕೆ ಇಷ್ಟು ಗೌರವ ಸಲ್ಲಲೇಬೇಕು, ನಿಜ. ಆದರೆ ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಪ್ರತಿಯೊಂದು ಕ್ಷಣದಲ್ಲೂ ಸ್ಮಾರ್ಟ್‌ಫೋನು ನಮ್ಮೊಡನೆ ಇರಬೇಕು ಎನಿಸುವ ಪರಿಸ್ಥಿತಿಯೂ, ಗೊತ್ತಿದ್ದೋ ಗೊತ್ತಿಲ್ಲದೆಯೋ, ಅನೇಕ ಬಳಕೆದಾರರಲ್ಲಿ ನಿರ್ಮಾಣವಾಗಿಬಿಟ್ಟಿದೆ.

ಶುಕ್ರವಾರ, ಸೆಪ್ಟೆಂಬರ್ 21, 2018

ವೀಕೆಂಡ್ ವಿಶೇಷ: ಮಶೀನ್ ಲರ್ನಿಂಗ್ ಅಂದರೇನು?

ಟಿ. ಜಿ. ಶ್ರೀನಿಧಿ


ಈಚಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹೊಸ ವಿಷಯಗಳ ಪೈಕಿ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಎಐ) ಕೂಡ ಒಂದು. ಬೇರೆಬೇರೆ ಸಂದರ್ಭಗಳಿಗೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುವ  ಮನುಷ್ಯನ ಸಾಮರ್ಥ್ಯವನ್ನು ಯಂತ್ರಗಳಲ್ಲೂ ಅಭಿವೃದ್ಧಿಪಡಿಸುವ ಉದ್ದೇಶ ವಿಜ್ಞಾನದ ಈ ಶಾಖೆಯದು. ಇಲ್ಲಿನ ಬೆಳವಣಿಗೆಗಳ ದೆಸೆಯಿಂದ ನಮ್ಮ ಅನೇಕ ಕೆಲಸಗಳು ಮುಂದೆ ಇನ್ನೂ ಸುಲಭವಾಗಲಿವೆ ಎನ್ನುವುದರಿಂದ ಪ್ರಾರಂಭಿಸಿ ಇದು ನಮ್ಮ ಕೆಲಸಗಳನ್ನೆಲ್ಲ ಕಿತ್ತುಕೊಂಡು ಮನುಷ್ಯರ ಶತ್ರುವಾಗಿ ಬೆಳೆಯಲಿದೆ ಎನ್ನುವವರೆಗೆ ಹಲವು ಅಭಿಪ್ರಾಯಗಳನ್ನು ನಾವು ಕೇಳಬಹುದು.

ಅದೆಲ್ಲ ಇರಲಿ, ಯಂತ್ರಗಳಲ್ಲಿ ಬುದ್ಧಿಮತ್ತೆ ಬೆಳೆಸುವುದು ಎಂದರೇನು? ಮೇಷ್ಟರು ನಮಗೆಲ್ಲ ಪಾಠ ಹೇಳಿ ಬೆಳೆಸಿದಂತೆ ಯಂತ್ರಗಳಿಗೂ ಪಾಠ ಹೇಳಿಕೊಡುವುದು ಸಾಧ್ಯವೇ?

ಬುಧವಾರ, ಸೆಪ್ಟೆಂಬರ್ 12, 2018

ಕ್ಲೌಡ್ ಸ್ಟೋರೇಜ್ ಎಂಬ ಮಾಹಿತಿಯ ಮೋಡ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪರಿಚಯವಾದ ಹೊಸತರಲ್ಲಿ ನಮಗೆ ಬೇಕಾದ ಮಾಹಿತಿಯನ್ನೆಲ್ಲ ಫ್ಲಾಪಿ, ಸೀಡಿ, ಪೆನ್ ಡ್ರೈವ್‌ಗಳಲ್ಲಿ ಇಟ್ಟುಕೊಂಡು ಬೇಕೆಂದ ಕಡೆಗೆ ಕೊಂಡೊಯ್ಯುವ ಪರಿಪಾಠ ಇತ್ತು. ಇಮೇಲ್ ಬಳಕೆ ಎಲ್ಲೆಡೆಯಲ್ಲೂ ಇರದಿದ್ದಾಗ ಮಾಹಿತಿಯನ್ನು ಫ್ಲಾಪಿ-ಸೀಡಿಗಳಲ್ಲಿ ತುಂಬಿಸಿ ಅಂಚೆಮೂಲಕ ಕಳುಹಿಸುತ್ತಿದ್ದದ್ದೂ ಉಂಟು. ನಮ್ಮ ಕಂಪ್ಯೂಟರಿನಲ್ಲಷ್ಟೇ ಇರುವ ಮಾಹಿತಿಗೆ ಏನಾದರೂ ತೊಂದರೆಯಾದರೆ ಬೇಕಾಗುತ್ತದೆ ಎಂದು ಅದನ್ನೆಲ್ಲ ನಿರ್ದಿಷ್ಟ ಅವಧಿಗೊಮ್ಮೆ ಬೇರೊಂದು ಮಾಧ್ಯಮದಲ್ಲಿ ಪ್ರತಿಮಾಡಿಡುವ (ಬ್ಯಾಕಪ್) ಅಭ್ಯಾಸ ಕೂಡ ಕೆಲವರಿಗಿತ್ತು.

ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಕಚೇರಿಯ ಕಡತ, ಪ್ರವಾಸದ ಫೋಟೋ, ಮಿತ್ರರ ಫೋನ್ ನಂಬರು, ಅವರು ಕಳಿಸಿದ ವಾಟ್ಸ್‌ಆಪ್‌ ಮೆಸೇಜುಗಳ ಪ್ರತಿ - ಎಲ್ಲವನ್ನೂ ನಾವು ಅಂತರಜಾಲದಲ್ಲೇ ಉಳಿಸಿಟ್ಟಿರುತ್ತೇವೆ; ಬೇಕಾದ ಕಡೆ ಬೇಕೆಂದ ಸಾಧನದಲ್ಲಿ ದೊರಕಿಸಿಕೊಳ್ಳುತ್ತೇವೆ. ನಮ್ಮ ಕಡತಗಳ ಹೆಚ್ಚುವರಿ ಪ್ರತಿಯೂ ಅಂತರಜಾಲದಲ್ಲೇ ಇರುತ್ತದೆ.

ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್.

ಮಂಗಳವಾರ, ಸೆಪ್ಟೆಂಬರ್ 4, 2018

ಹುಡುಕಾಟದ ಎರಡು ದಶಕ

ಟಿ. ಜಿ. ಶ್ರೀನಿಧಿ


ಮನುಕುಲದ ಇತಿಹಾಸದ ಪ್ರತಿ ಕಾಲಘಟ್ಟದಲ್ಲೂ ಕ್ರಾಂತಿಕಾರಕ ಬದಲಾವಣೆಗಳಿಗೆ ಕಾರಣವಾದ ಘಟನೆಗಳನ್ನು ನಾವು ನೋಡಬಹುದು. ಕಾಲಕ್ರಮದಲ್ಲಿ ಬೇಸಾಯ, ಬೆಂಕಿ, ಚಕ್ರ, ವಿದ್ಯುಚ್ಛಕ್ತಿ ಮೊದಲಾದ ಸಂಗತಿಗಳ ಆವಿಷ್ಕಾರ ಹೇಗೆ ಮಹತ್ವ ಪಡೆದುಕೊಂಡಿತೋ ಕಳೆದ ಶತಮಾನದಲ್ಲಿ ಅಂಥದ್ದೇ ಗೌರವಕ್ಕೆ ಭಾಜನವಾದದ್ದು ಕಂಪ್ಯೂಟರಿನ ಆವಿಷ್ಕಾರ. ಇದಾದ ನಂತರದಲ್ಲಿ ಇಂಥವೇ ಇನ್ನಷ್ಟು ಬೆಳವಣಿಗೆಗಳು ಬಹಳ ಕ್ಷಿಪ್ರಗತಿಯಲ್ಲಿ ಘಟಿಸಿದ್ದು ಈಗ ಇತಿಹಾಸ.

ಅಂತರಜಾಲದ ಹುಟ್ಟು, ಮೊಬೈಲ್ ಫೋನ್ ವಿಕಾಸವೇ ಮೊದಲಾದ ಇಂತಹ ಐತಿಹಾಸಿಕ ಬೆಳವಣಿಗೆಗಳ ಸಾಲಿನಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಘಟನೆ ಗೂಗಲ್ ಸಂಸ್ಥೆಯ ಪ್ರಾರಂಭ. ಈ ಘಟನೆ ಸಂಭವಿಸಿ ಇದೀಗ ಇಪ್ಪತ್ತು ವರ್ಷ. ಬರಿಯ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಒಂದು ವಾಣಿಜ್ಯ ಸಂಸ್ಥೆ ಪ್ರಪಂಚದ ಜನಸಂಖ್ಯೆಯ ಬಹುದೊಡ್ಡ ಭಾಗದ ಮೇಲೆ ಈ ಪರಿಯ ಪ್ರಭಾವ ಬೀರಿರುವ ಇನ್ನೊಂದು ಉದಾಹರಣೆ ಹುಡುಕಲು ಸಾಕಷ್ಟು ಕಷ್ಟಪಡಬೇಕಾಗುತ್ತದೋ ಏನೋ!
badge