ಬುಧವಾರ, ಸೆಪ್ಟೆಂಬರ್ 12, 2018

ಕ್ಲೌಡ್ ಸ್ಟೋರೇಜ್ ಎಂಬ ಮಾಹಿತಿಯ ಮೋಡ

ಟಿ. ಜಿ. ಶ್ರೀನಿಧಿ

ಕಂಪ್ಯೂಟರ್ ಪರಿಚಯವಾದ ಹೊಸತರಲ್ಲಿ ನಮಗೆ ಬೇಕಾದ ಮಾಹಿತಿಯನ್ನೆಲ್ಲ ಫ್ಲಾಪಿ, ಸೀಡಿ, ಪೆನ್ ಡ್ರೈವ್‌ಗಳಲ್ಲಿ ಇಟ್ಟುಕೊಂಡು ಬೇಕೆಂದ ಕಡೆಗೆ ಕೊಂಡೊಯ್ಯುವ ಪರಿಪಾಠ ಇತ್ತು. ಇಮೇಲ್ ಬಳಕೆ ಎಲ್ಲೆಡೆಯಲ್ಲೂ ಇರದಿದ್ದಾಗ ಮಾಹಿತಿಯನ್ನು ಫ್ಲಾಪಿ-ಸೀಡಿಗಳಲ್ಲಿ ತುಂಬಿಸಿ ಅಂಚೆಮೂಲಕ ಕಳುಹಿಸುತ್ತಿದ್ದದ್ದೂ ಉಂಟು. ನಮ್ಮ ಕಂಪ್ಯೂಟರಿನಲ್ಲಷ್ಟೇ ಇರುವ ಮಾಹಿತಿಗೆ ಏನಾದರೂ ತೊಂದರೆಯಾದರೆ ಬೇಕಾಗುತ್ತದೆ ಎಂದು ಅದನ್ನೆಲ್ಲ ನಿರ್ದಿಷ್ಟ ಅವಧಿಗೊಮ್ಮೆ ಬೇರೊಂದು ಮಾಧ್ಯಮದಲ್ಲಿ ಪ್ರತಿಮಾಡಿಡುವ (ಬ್ಯಾಕಪ್) ಅಭ್ಯಾಸ ಕೂಡ ಕೆಲವರಿಗಿತ್ತು.

ಆದರೆ ಈಗಿನ ಪರಿಸ್ಥಿತಿಯೇ ಬೇರೆ. ಕಚೇರಿಯ ಕಡತ, ಪ್ರವಾಸದ ಫೋಟೋ, ಮಿತ್ರರ ಫೋನ್ ನಂಬರು, ಅವರು ಕಳಿಸಿದ ವಾಟ್ಸ್‌ಆಪ್‌ ಮೆಸೇಜುಗಳ ಪ್ರತಿ - ಎಲ್ಲವನ್ನೂ ನಾವು ಅಂತರಜಾಲದಲ್ಲೇ ಉಳಿಸಿಟ್ಟಿರುತ್ತೇವೆ; ಬೇಕಾದ ಕಡೆ ಬೇಕೆಂದ ಸಾಧನದಲ್ಲಿ ದೊರಕಿಸಿಕೊಳ್ಳುತ್ತೇವೆ. ನಮ್ಮ ಕಡತಗಳ ಹೆಚ್ಚುವರಿ ಪ್ರತಿಯೂ ಅಂತರಜಾಲದಲ್ಲೇ ಇರುತ್ತದೆ.

ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವ ಪರಿಕಲ್ಪನೆಯ ಹೆಸರೇ ಕ್ಲೌಡ್.

ಯಾವುದೇ ಮಾಹಿತಿಯನ್ನು ಒಂದು ಸ್ಥಳದಲ್ಲಿ (ಉದಾ: ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್) ಮಾತ್ರವೇ ಉಳಿಸಿಟ್ಟುಕೊಳ್ಳುವುದರಿಂದ ಹಲವು ಸಮಸ್ಯೆಗಳು ಉದ್ಭವಿಸುವುದು ಸಾಧ್ಯ. ಕಂಪ್ಯೂಟರಿನ ಭಾಗಗಳು ಕೆಟ್ಟರೆ, ಕುತಂತ್ರಾಂಶದ ಹಾವಳಿ ಕಾಣಿಸಿಕೊಂಡರೆ ನಮ್ಮ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದು ಕಷ್ಟ. ಇದರ ಬದಲು ಮಾಹಿತಿಯನ್ನೆಲ್ಲ ಹೆಚ್ಚು ಸಕ್ಷಮವಾದ ಬೇರೊಂದು ಸ್ಥಳದಲ್ಲಿ ಉಳಿಸಿಟ್ಟು ಅದನ್ನು ನಮಗೆ ಬೇಕಾದಾಗ ಅಂತರಜಾಲದ ಮೂಲಕ ಪಡೆದುಕೊಳ್ಳುವುದನ್ನು ಕ್ಲೌಡ್ ಪರಿಕಲ್ಪನೆ ಸಾಧ್ಯವಾಗಿಸುತ್ತದೆ.

ನಾವು ಏಳೆಂಟು ವರ್ಷಗಳ ಹಿಂದೆ ಫೇಸ್‌ಬುಕ್‌ಗೆ ಸೇರಿಸಿದ್ದ ಚಿತ್ರಗಳು ಇವತ್ತಷ್ಟೇ ಕೊಂಡ ಮೊಬೈಲಿನಲ್ಲಿ ಕೂಡ ಥಟ್ಟನೆ ಕಾಣಿಸಿಕೊಳ್ಳುತ್ತವಲ್ಲ, ಅದರ ಹಿಂದಿರುವುದು ಇದೇ ಪರಿಕಲ್ಪನೆ. ಗೂಗಲ್ ಡ್ರೈವ್‌‌ನಲ್ಲಿ ಮಾಹಿತಿ ಉಳಿಸಿಟ್ಟಾಗ, ಬೇರೆಬೇರೆ ಸಾಧನಗಳ ಮೂಲಕ ನಮ್ಮ ಜಿಮೇಲ್ ಖಾತೆ‌ಗೆ ಲಾಗಿನ್ ಆದಾಗಲೆಲ್ಲ ನಾವು ಬಳಸುವುದೂ ಇದೇ ಪರಿಕಲ್ಪನೆಯನ್ನು. ನಮ್ಮದೇ ಯಂತ್ರಾಂಶ ಉಪಕರಣಗಳನ್ನು ನಂಬಿಕೊಳ್ಳುವ ಬದಲಿಗೆ ಬೇರೆಲ್ಲೋ ಇರುವ ಶೇಖರಣಾ ವ್ಯವಸ್ಥೆಯನ್ನು ಅಂತರಜಾಲದ ಮೂಲಕ ಉಪಯೋಗಿಸಿಕೊಳ್ಳುತ್ತೇವಲ್ಲ, ಆ ಹೊರಗಿನ ವ್ಯವಸ್ಥೆಯನ್ನು ಮೋಡಕ್ಕೆ ಹೋಲಿಸಿ ಇದಕ್ಕೆ ಕ್ಲೌಡ್ ಎಂದು ಹೆಸರಿಡಲಾಗಿದೆ.

ಅಂದಹಾಗೆ ಕ್ಲೌಡ್ ಬಳಕೆ ಮಾಹಿತಿ ಸಂಗ್ರಹಣೆಗೆ ಮಾತ್ರವೇ ಸೀಮಿತವೇನಲ್ಲ; ಅದರ ಜೊತೆಗೆ ತಂತ್ರಾಂಶಗಳು ಹಾಗೂ ಸಂಸ್ಕರಣಾ ಸಾಮರ್ಥ್ಯದಂತಹ ಇನ್ನಿತರ ಸಂಪನ್ಮೂಲಗಳೂ ಕ್ಲೌಡ್ ಮೂಲಕ ದೊರಕುತ್ತವೆ. ಆದರೆ ಮಾಹಿತಿ ಸಂಗ್ರಹಣೆಗಾಗಿ ಕ್ಲೌಡ್ ಬಳಕೆ ಹೆಚ್ಚು ವ್ಯಾಪಕ, ಹಾಗಾಗಿಯೇ ಅದಕ್ಕೆ ಹೆಚ್ಚಿನ ಪ್ರಾಮುಖ್ಯ. ಗ್ರಾಹಕರ ಮಾತು ಹಾಗಿರಲಿ, ಸರಕಾರಗಳಿಗೂ ಈ ಮೋಡದ ಮೇಲೆ ಕಣ್ಣು!

ಮಾಹಿತಿಯನ್ನು ಕ್ಲೌಡ್‌ನಲ್ಲಿ ಸಂಗ್ರಹಿಸಿಡುವ ಇಂತಹ ವ್ಯವಸ್ಥೆಯನ್ನು ಒಟ್ಟಾರೆಯಾಗಿ 'ಕ್ಲೌಡ್ ಸ್ಟೋರೇಜ್' ಎಂದು ಕರೆಯುತ್ತಾರೆ. ಇಲ್ಲಿ ಬಳಕೆಯಾಗುವ ಶೇಖರಣಾ ಮಾಧ್ಯಮಕ್ಕೂ ನಾವು ಸಾಮಾನ್ಯವಾಗಿ ಬಳಸುವ ಶೇಖರಣಾ ಮಾಧ್ಯಮಗಳಿಗೂ ಹೆಚ್ಚು ವ್ಯತ್ಯಾಸವೇನೂ ಇರುವುದಿಲ್ಲ; ಆದರೆ ಇಲ್ಲಿ ಮಾಹಿತಿ ಶೇಖರವಾಗುವ ವಿಧಾನಕ್ಕೂ ನಮ್ಮ ಕಂಪ್ಯೂಟರಿನಲ್ಲಿ ಮಾಹಿತಿ ಉಳಿಸಿಡುವ ವಿಧಾನಕ್ಕೂ ನಡುವೆ ಅಜಗಜಾಂತರ!

ನಮ್ಮ ವೈಯಕ್ತಿಕ ಕಂಪ್ಯೂಟರಿನಲ್ಲಿ ಉಳಿಸಿಟ್ಟ ಮಾಹಿತಿ ನಮ್ಮ ಹಾರ್ಡ್ ಡಿಸ್ಕ್‌ನಲ್ಲಿ ಮಾತ್ರವೇ ಇರುತ್ತದೆ. ಆ ಹಾರ್ಡ್ ಡಿಸ್ಕ್ ಅನ್ನು ಯಾವ ಕಂಪ್ಯೂಟರಿಗೆ ಸಂಪರ್ಕಿಸುತ್ತೇವೋ ನಮ್ಮ ಮಾಹಿತಿಯನ್ನು ಆ ಕಂಪ್ಯೂಟರಿನಲ್ಲಿ ಮಾತ್ರ ತೆರೆಯುವುದು ಸಾಧ್ಯ. ಆದರೆ ಕ್ಲೌಡ್ ಸ್ಟೋರೇಜಿನಲ್ಲಿ ಹಾಗಲ್ಲ. ಅಲ್ಲಿ ಸಂಗ್ರಹಿಸಿಟ್ಟ ನಮ್ಮ ಮಾಹಿತಿಯನ್ನು ಅಂತರಜಾಲ ಸಂಪರ್ಕ ಬಳಸಿ - ನಾವು ಯಾವ ಕಂಪ್ಯೂಟರನ್ನೇ ಬಳಸುತ್ತಿದ್ದರೂ - ಮತ್ತೆ ಪಡೆದುಕೊಳ್ಳಬಹುದು, ನಮಗೆ ಬೇಕಾದಾಗಲೆಲ್ಲ ಆ ಮಾಹಿತಿಯನ್ನು ಥಟ್ಟನೆ ಇತರರೊಡನೆ ಹಂಚಿಕೊಳ್ಳಲೂಬಹುದು. ಹಾರ್ಡ್ ಡಿಸ್ಕ್‌ನಲ್ಲಿ ಜಾಗ ಮುಗಿಯುವ ಚಿಂತೆಯೇ ಇಲ್ಲದಂತೆ ಎಷ್ಟು ಬೇಕಾದರೂ ಮಾಹಿತಿಯನ್ನು (ಕೆಲವೊಮ್ಮೆ ನಿರ್ದಿಷ್ಟ ಶುಲ್ಕ ಪಾವತಿಸಿ) ಕ್ಲೌಡ್ ಸ್ಟೋರೇಜಿನಲ್ಲಿ ಉಳಿಸಿಡುತ್ತಲೇ ಇರಬಹುದು.

ಇದು ಕೇಳಲು ಬಹಳ ಸರಳವೆಂದು ತೋರುತ್ತದೆ, ನಿಜ. ಆದರೆ ಅಗಾಧ ಪ್ರಮಾಣದ ಮಾಹಿತಿಯನ್ನು ಅಂತರಜಾಲದ ಮೂಲಕ ಯಾವುದೇ ಅಡಚಣೆಗಳಿಲ್ಲದೆ ಒದಗಿಸಲು ಕ್ಲೌಡ್ ಸ್ಟೋರೇಜ್ ವ್ಯವಸ್ಥೆಗಳು ಬಹಳ ಸಂಕೀರ್ಣ ವಿನ್ಯಾಸವನ್ನು ಬಳಸುತ್ತವೆ. ನಮ್ಮ ಮಾಹಿತಿಯ ಇತ್ತೀಚಿನ ಪ್ರತಿಗಳನ್ನು ಹಲವಾರು ಕಡೆ ಶೇಖರಿಸಿಟ್ಟುಕೊಳ್ಳುವುದು ಈ ವಿನ್ಯಾಸದ ಒಂದು ಭಾಗ. ಈ ಪೈಕಿ ಯಾವುದೋ ಒಂದು ಪ್ರತಿಯಲ್ಲಿ ತೊಂದರೆ ಕಾಣಿಸಿಕೊಂಡರೂ ಅಲ್ಲಿನ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾದರೂ ಇತರ ಪ್ರತಿಗಳಲ್ಲಿ ಯಾವುದೋ ಒಂದು ನಮಗೆ ದೊರಕುವಂತಿರುತ್ತದೆ ಎನ್ನುವುದು ಇದರ ಉದ್ದೇಶ. ಮಾಹಿತಿಯನ್ನು ಹೀಗೆ ಶೇಖರಿಸಿಡುವ ಕೇಂದ್ರಗಳನ್ನು ಕಂಪ್ಯೂಟರ್ ಪರಿಭಾಷೆಯಲ್ಲಿ ಡೇಟಾ ಸೆಂಟರುಗಳೆಂದು ಕರೆಯುವ ಅಭ್ಯಾಸವಿದೆ.

ಇಂತಹ ಡೇಟಾ ಸೆಂಟರುಗಳು ವಿಶ್ವದ ಯಾವುದೇ ಮೂಲೆಯಲ್ಲಿ ಬೇಕಾದರೂ ಇರಬಹುದು, ಹಾಗೂ ಕ್ಲೌಡ್‌ನಲ್ಲಿ ಉಳಿಸಿಟ್ಟ ನಮ್ಮ ಮಾಹಿತಿ ಇಂತಹ ಯಾವುದೇ ಡೇಟಾಸೆಂಟರಿನಲ್ಲಿ ಶೇಖರವಾಗಿರಬಹುದು. ಇಂತಹ ಕಡೆಗಳಲ್ಲಿ ಉಳಿಸಿಟ್ಟ ಮಾಹಿತಿಯ ಸುರಕ್ಷತೆಗಾಗಿ ಕ್ಲೌಡ್ ಸ್ಟೋರೇಜ್ ಸಂಸ್ಥೆಗಳು ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಾರೆ. ಆದರೆ ಈ ಮಾಹಿತಿ ಬೇರೆ ಯಾವುದೋ ದೇಶದಲ್ಲಿದ್ದರೆ ನಮ್ಮ ಸರಕಾರಕ್ಕೆ, ಪೋಲೀಸ್ ಮತ್ತಿತರ ಇಲಾಖೆಗಳಿಗೆ ಅದರ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ನಮ್ಮ ದೇಶದ ಮಾಹಿತಿಯನ್ನು ನಮ್ಮ ದೇಶದಲ್ಲೇ ಉಳಿಸಿಡಿ ಎಂದು ತಂತ್ರಜ್ಞಾನ ಸಂಸ್ಥೆಗಳ ಮೇಲೆ ಸರಕಾರ ಒತ್ತಡ ಹೇರುತ್ತಿರುತ್ತದಲ್ಲ, ಇಂತಹ ಪರಿಸ್ಥಿತಿಯನ್ನು ತಪ್ಪಿಸುವುದೇ ಅದರ ಉದ್ದೇಶ.

ತಂತ್ರಜ್ಞಾನ ಕ್ಷೇತ್ರದ ಹಲವು ದಿಗ್ಗಜ ಸಂಸ್ಥೆಗಳು ಕ್ಲೌಡ್ ಸ್ಟೋರೇಜ್ ಸೇವೆ ಒದಗಿಸುತ್ತಿರುವುದರಿಂದ ಈ ವ್ಯವಸ್ಥೆಯ ವಿಶ್ವಾಸಾರ್ಹತೆ ಸಾಕಷ್ಟು ಉನ್ನತ ಮಟ್ಟದಲ್ಲಿಯೇ ಇದೆ ಎನ್ನಬಹುದು. ಆದರೆ ಇಂತಹ ಬಹುತೇಕ ವ್ಯವಸ್ಥೆಗಳಲ್ಲಿ ನಮ್ಮ ಪಾಸ್‌ವರ್ಡ್ ಬಲ್ಲ ಯಾರು ಬೇಕಾದರೂ ನಮ್ಮ ಮಾಹಿತಿಯನ್ನು ಪಡೆದುಕೊಳ್ಳುವುದು ಸಾಧ್ಯ. ಹೀಗಾಗಿ, ಬೇರೆಲ್ಲ ಕಡೆಗಳಲ್ಲಿ ಮಾಡುವಂತೆ, ನಮ್ಮ ಪಾಸ್‌ವರ್ಡ್ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕಾದ್ದು ಇಲ್ಲಿಯೂ ಅತ್ಯಗತ್ಯ. ಮುಖ್ಯವಾದ ಮಾಹಿತಿಯನ್ನು ಕ್ಲೌಡ್ ಸ್ಟೋರೇಜಿನಲ್ಲಿ ಮಾತ್ರವೇ ಇಡದೆ ಬೇರೆಯೂ ಒಂದು ಕಡೆ ಉಳಿಸಿಟ್ಟುಕೊಳ್ಳುವುದು ಕೂಡ ಒಳ್ಳೆಯದು.

ಆಗಸ್ಟ್ ೨೯, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

Unknown ಹೇಳಿದರು...

ಬಹಳ ಉಪಯುಕ್ತ ಸೂಕ್ತ ಮಾಹಿತಿ ಸರ್
ಇದಕ್ಕೆ ನಿಮಗೆ ಧನ್ಯವಾದಗಳು

ಮತ್ತು ಇನ್ನು ನನಗೆ ಅನೇಕ ಗೊಂದಲಗಳಿವೆ ಇದರಬಗ್ಗೆ
ನಾನು ಗೂಗಲ್ drive ನ್ನು ಕಳೆದ 5 ವರ್ಷಗಳಿಂದ ಬಳಸುತ್ತಿದ್ದು ಗೂಗಲ್ photos ಕೂಡ ಬಳಸುತ್ತಿದ್ದೇನೆ

ಗೂಗಲ್ ನ ಡಾಟಾ ಸೆಂಟರ್ಗಳು ಎಲ್ಲಿವೆ
ಅದರ ಸುರಕ್ಷತೆ ಬಗ್ಗೆ ಮಾಹಿತಿ ನೀಡಿ

badge