ಮಂಗಳವಾರ, ನವೆಂಬರ್ 30, 2010

ಹುಡುಕಾಟದ ಎರಡು ದಶಕ

ಟಿ ಜಿ ಶ್ರೀನಿಧಿ

೧೯೯೦ನೇ ಇಸವಿ. ಅಂತರಜಾಲ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಸಮಯ. ವಿಶ್ವವ್ಯಾಪಿ ಜಾಲವಂತೂ ಆಗತಾನೇ ಕಣ್ಣುಬಿಡುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿದ್ದ ಅಲಾನ್ ಎಮ್‌ಟೇಜ್ ಹಾಗೂ ಆತನ ಮಿತ್ರರು ಆ ವರ್ಷದಲ್ಲಿ 'ಆರ್ಚಿ' ಎಂಬ ತಂತ್ರಾಂಶ ಸೃಷ್ಟಿಸಿದರು. ಈ ತಂತ್ರಾಂಶ ಅಂದಿನ ಅಂತರಜಾಲದಲ್ಲಿ ಲಭ್ಯವಿದ್ದ ಕಡತಗಳ ಹೆಸರನ್ನೆಲ್ಲ ಪಟ್ಟಿಮಾಡಿಟ್ಟುಕೊಂಡು ಅವುಗಳಲ್ಲಿ ನಿಮಗೆ ಬೇಕಾದ್ದನ್ನು ಹುಡುಕಲು ಅನುವುಮಾಡಿಕೊಡುತ್ತಿತ್ತು.

ಅದೇ 'ಆರ್ಚಿ' ಇಂದಿನ ಸರ್ಚ್ ಇಂಜನ್‌ಗಳ ಪೂರ್ವಜ. ಪ್ರಪಂಚದ ಮೊದಲ ಸರ್ಚ್‌ಇಂಜನ್ ಎಂದು ಗುರುತಿಸಲಾಗುವ ಈ ತಂತ್ರಾಂಶ ಸೃಷ್ಟಿಯಾಗಿ ಇದೀಗ ಇಪ್ಪತ್ತು ವರ್ಷ.

ಸರ್ಚ್ ಇಂಜನ್ ಅಂದರೇನು?ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿಯನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಹುಡುಕಲು ಸಹಾಯಮಾಡುವ ತಂತ್ರಾಂಶಕ್ಕೆ ಸರ್ಚ್ ಇಂಜನ್ ಅಥವಾ ಶೋಧನ ಚಾಲಕ ತಂತ್ರಾಂಶ ಎಂದು ಹೆಸರು. ನಮಗೆಲ್ಲ ಚಿರಪರಿಚಿತವಾದ ಗೂಗಲ್, ಬಿಂಗ್ ಮುಂತಾದವೆಲ್ಲ ಸರ್ಚ್ ಇಂಜನ್‌ಗೆ ಉದಾಹರಣೆಗಳು.

ಅಂತರಜಾಲದಲ್ಲಿದ್ದ ಕಡತಗಳನ್ನಷ್ಟೆ ಹುಡುಕುತ್ತಿದ್ದ 'ಆರ್ಚಿ' ತಂತ್ರಾಂಶಕ್ಕಿಂತ ಭಿನ್ನವಾಗಿ ಕೆಲಸಮಾಡುವ ಇವು ವಿಶ್ವವ್ಯಾಪಿ ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಹುಡುಕಿಕೊಡುತ್ತವೆ. ವಿವಿಧ ವಿಷಯಗಳಿಗೆ ಸಂಬಂಧಪಟ್ಟ ಪಠ್ಯವನ್ನಷ್ಟೆ ಅಲ್ಲದೆ ಚಿತ್ರಗಳು, ಸುದ್ದಿಗಳು, ಇ-ಪುಸ್ತಕಗಳು, ವೀಡಿಯೋಗಳು, ಭೂಪಟಗಳು ಮುಂತಾದವನ್ನೆಲ್ಲ ಈ ಸರ್ಚ್ ಇಂಜನ್‌ಗಳು ಹುಡುಕಿಕೊಡಬಲ್ಲವು.

ಎಲ್ಲಬಗೆಯ ಮಾಹಿತಿಯನ್ನೂ ಹುಡುಕಿಕೊಡುವ ಇಂತಹ ಸರ್ಚ್‌ಇಂಜನ್‌ಗಳ ಜೊತೆಗೆ ವಿಜ್ಞಾನ, ಪ್ರವಾಸ ಮುಂತಾದ ನಿರ್ದಿಷ್ಟ ವಿಷಯಗಳಿಗೆ ಮಾತ್ರವೇ ಸೀಮಿತವಾದ ವರ್ಟಿಕಲ್ ಸರ್ಚ್ ಇಂಜನ್‌ಗಳು ಕೂಡ ಇವೆ; ಯಾವುದೇ ವಿಷಯದ ಕುರಿತು ಸಮಗ್ರ ಮಾಹಿತಿ ಒದಗಿಸುವ ವುಲ್ಫ್‌ರಮ್ ಆಲ್ಫಾದಂತಹ ನಾಲೆಜ್ ಇಂಜನ್‌ಗಳೂ ರೂಪಗೊಂಡಿವೆ.

ಹುಡುಕುವ ಜೇಡವಿಶ್ವವ್ಯಾಪಿ ಜಾಲದಲ್ಲಿ ಮಾಹಿತಿಗಾಗಿ ಹುಡುಕಾಟ ನಡೆಸಲು ಸರ್ಚ್ ಇಂಜನ್‌ಗಳು ವೆಬ್ ಸ್ಪೈಡರ್‌ಗಳೆಂಬ ತಂತ್ರಾಂಶಗಳನ್ನು ಬಳಸುತ್ತವೆ. ಇವನ್ನು ನಾವು ಜೇಡಗಳೆಂದು ಕರೆಯೋಣ. ವಿಶ್ವವ್ಯಾಪಿ ಜಾಲದಲ್ಲಿರುವ ಲಕ್ಷಾಂತರ ಜಾಲತಾಣಗಳನ್ನು ಹಾಗೂ ಅವುಗಳಲ್ಲಿರುವ ಪುಟಗಳನ್ನು ಅವುಗಳ ಜನಪ್ರಿಯತೆಗೆ ಅನುಗುಣವಾಗಿ ವರ್ಗೀಕರಿಸಿ, ಆ ಪುಟಗಳಲ್ಲಿರುವ ಮಾಹಿತಿ ಯಾವ ವಿಷಯಗಳಿಗೆ ಸಂಬಂಧಿಸಿದ್ದು ಎಂಬ ಅಂಶವನ್ನು ದಾಖಲಿಸಿಕೊಳ್ಳುವುದು ಈ ಜೇಡಗಳ ಕೆಲಸ.

ಜಾಲತಾಣಗಳನ್ನು ರೂಪಿಸುವವರು ಜೇಡಗಳಿಗೆ ಸಹಾಯವಾಗಲೆಂದೇ ತಮ್ಮ ತಾಣದಲ್ಲಿರುವ ಪುಟಗಳ ಬಗ್ಗೆ ವಿವರಗಳನ್ನು ಮೆಟಾ ಟ್ಯಾಗ್‌ಗಳ ರೂಪದಲ್ಲಿ ಶೇಖರಿಸಿಟ್ಟಿರುತ್ತಾರೆ. ಜೇಡಗಳ ಹುಡುಕಾಟ ಇವೇ ಮೆಟಾ ಟ್ಯಾಗ್‌ಗಳನ್ನು ಆಧರಿಸಿರುತ್ತದೆ.

ಈ ಜೇಡಗಳು ಸಾಮಾನ್ಯವಾಗಿ ತಮ್ಮ ಹುಡುಕಾಟವನ್ನು ಅತ್ಯಂತ ಪ್ರಸಿದ್ಧ ಜಾಲತಾಣಗಳಿಂದ ಪ್ರಾರಂಭಿಸುತ್ತವೆ. ಅಲ್ಲಿಂದ ಮುಂದಕ್ಕೆ ಆ ಜಾಲತಾಣ ಹಾಗೂ ಅದರ ಸರ್ವರ್‌ನಲ್ಲಿರುವ ಇತರ ಎಲ್ಲ ಪುಟಗಳ ಮೇಲೂ ಒಮ್ಮೆ ಕಣ್ಣಾಡಿಸಿ ಅವುಗಳಲ್ಲಿರುವ ಮಾಹಿತಿಗೆ ಅನುಗುಣವಾಗಿ ಅವನ್ನು ವರ್ಗೀಕರಿಸಿಟ್ಟುಕೊಳ್ಳುವ ಕೆಲಸ ಶುರುವಾಗುತ್ತದೆ. ಒಂದು ಜಾಲತಾಣದಲ್ಲಿರುವ ಎಲ್ಲ ಲಿಂಕ್‌ಗಳನ್ನೂ ಈ ಜೇಡಗಳು ಹಿಂಬಾಲಿಸುವುದರಿಂದ ಅವುಗಳ ನಿಲುಕಿಗೆ ಸಿಗುವ ಪುಟಗಳ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಸಂಗ್ರಹಿಸಲಾದ ಮಾಹಿತಿಯ ಅಧಾರದ ಮೇಲೆ ಒಂದು ಅಕಾರಾದಿಯನ್ನು (ಇಂಡೆಕ್ಸ್) ತಯಾರಿಸಿಕೊಳ್ಳುವ ಸರ್ಚ್ ಇಂಜನ್‌ಗಳು ನಮಗೆ ಬೇಕಾದದ್ದನ್ನು ಅತ್ಯಂತ ವೇಗವಾಗಿ ಹುಡುಕಿಕೊಳ್ಳಲು ಸಹಾಯ ಮಾಡುತ್ತವೆ.

ಹುಡುಕಾಟದ ವ್ಯವಹಾರನಮಗೆ ಬೇಕಾದ ಮಾಹಿತಿಯ ಪಕ್ಕದಲ್ಲೇ ಒಂದಷ್ಟು ಜಾಹೀರಾತುಗಳನ್ನೂ ಪ್ರದರ್ಶಿಸುವ ಮೂಲಕ ಸರ್ಚ್ ಇಂಜನ್‌ಗಳು ಹಣ ಸಂಪಾದಿಸುತ್ತವೆ. ಬಳಕೆದಾರ ಯಾವುದೋ ನಿರ್ದಿಷ್ಟ ಮಾಹಿತಿಗಾಗಿ ಹುಡುಕಿದಾಗ ಪ್ರಾಯೋಜಿತ ಲಿಂಕ್‌ಗಳನ್ನು ಪ್ರದರ್ಶಿಸುವ ಸರ್ಚ್ ಇಂಜನ್‌ಗಳೂ ಇವೆ. ಈ ಲಿಂಕ್‌ಗಳನ್ನು ತೋರಿಸಲು ಅವು ಜಾಹೀರಾತುದಾರರಿಂದ ಹಣ ಪಡೆದಿರುತ್ತವೆ.

ಮುಂದಿನ ಹಾದಿಪ್ರತಿಯೊಬ್ಬ ಬಳಕೆದಾರನೂ ಯಾವಯಾವ ತಾಣಗಳಿಗೆ ಭೇಟಿಕೊಡುತ್ತಾನೆ ಎಂಬುದನ್ನು ಗಮನಿಸಿಕೊಂಡು ಅದರ ಆಧಾರದ ಮೇಲೆ ಅಕಾರಾದಿ (ಇಂಡೆಕ್ಸ್) ಸಿದ್ಧಪಡಿಸಿಕೊಳ್ಳುವ ವಾವ್ಡ್ ಹಾಗೂ ಫಾರೂನಂತಹ ಸರ್ಚ್ ಇಂಜನ್‌ಗಳು ಇತ್ತೀಚೆಗೆ ಪ್ರಾರಂಭವಾಗಿವೆ. ಈ ಸರ್ಚ್ ಇಂಜನ್‌ಗಳು ಎಲ್ಲ ಬಳಕೆದಾರರ ಗಣಕದಲ್ಲೂ ಒಂದೊಂದು ಅಕಾರಾದಿಯನ್ನು ಇರಿಸುವ, ಹಾಗೂ ಅತಿ ಹೆಚ್ಚು ಬಳಕೆದಾರರನ್ನು ಆಕರ್ಷಿಸುವ ತಾಣಗಳನ್ನಷ್ಟೆ ತೋರಿಸುವ ಮೂಲಕ ಹುಡುಕಾಟವನ್ನು ಇನ್ನಷ್ಟು ಕ್ಷಿಪ್ರ ಹಾಗೂ ನಿಖರಗೊಳಿಸುವ ಮಹತ್ವಾಕಾಂಕ್ಷೆ ಹೊಂದಿವೆ.

ಯಾವುದೇ ವಿಷಯವನ್ನು ಕುರಿತ ಮಾಹಿತಿಯನ್ನು ಜನರ ನೆರವಿನಿಂದಲೇ ಒಟ್ಟುಗೂಡಿಸಿ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸುವ ಸಮುದಾಯ ಸರ್ಚ್‌ಇಂಜನ್‌ಗಳ ಸೃಷ್ಟಿಗಾಗಿ ಅನೇಕ ಪ್ರಯತ್ನಗಳು ಸಾಗಿವೆ. ಇಂತಹ ತಾಣಗಳು ಟ್ವೀಟರ್ ಹಾಗೂ ಫೇಸ್‌ಬುಕ್‌ನಂತಹ ತಾಣಗಳಲ್ಲಿ ಲಭ್ಯವಿರುವ ಸಂದೇಶಗಳನ್ನೂ ಹುಡುಕಿಕೊಡುವಂತಿರಬೇಕು ಎನ್ನುವ ಉದ್ದೇಶವೂ ಇದೆ.

ತನ್ನನ್ನು 'ಹೆಲ್ಪ್ ಇಂಜನ್' ಎಂದು ಗುರುತಿಸಿಕೊಳ್ಳುವ ಆರ್ಡ್‌ವರ್ಕ್ ಎಂಬ ತಾಣ ಬ್ಲಾಗುಗಳು, ಫೇಸ್‌ಬುಕ್ ಸಂದೇಶಗಳು ಹಾಗೂ ಟ್ವೀಟ್‌ಗಳನ್ನು ಜಾಲಾಡಿ ಅವುಗಳ ಲೇಖಕರಿಂದ ನಿಮಗೆ ಬೇಕಾದ ಮಾಹಿತಿ ಪಡೆದುಕೊಡುವ ಕೆಲಸವನ್ನು ಈಗಾಗಲೇ ಶುರುಮಾಡಿದೆ. ಇತರ ಬಳಕೆದಾರರಿಂದ ನಿಮ್ಮ ಪ್ರಶ್ನೆಗೆ ಉತ್ತರ ದೊರಕಿಸಿಕೊಳ್ಳುವ ಸೌಲಭ್ಯವನ್ನು ಫೇಸ್‌ಬುಕ್ ಕೂಡ ಪರಿಚಯಿಸಿದೆ.

ಇಷ್ಟೇ ಅಲ್ಲ, ಚಿತ್ರಗಳ ನೆರವಿನಿಂದ ಹುಡುಕಾಟವನ್ನು ಸಾಧ್ಯವಾಗಿಸುವ ಸರ್ಚ್ ಇಂಜನ್‌ಗಳು, ಆಡುಮಾತಿನ ಪ್ರಶ್ನೆಗಳಿಗೆ (ನ್ಯಾಚುರಲ್ ಲ್ಯಾಂಗ್ವೇಜ್ ಕ್ವೆರಿಯಿಂಗ್) ಉತ್ತರಿಸುವಂತಹ ಸರ್ಚ್ ಇಂಜನ್‌ಗಳು, ಅಷ್ಟೇ ಏಕೆ, ಧ್ವನಿಯ ರೂಪದಲ್ಲಿ ನಾವು 'ಕೇಳುವ' ಪ್ರಶ್ನೆಗಳಿಗೂ ಉತ್ತರಿಸಬಲ್ಲ ಸರ್ಚ್ ಇಂಜನ್‌ಗಳೂ ಸಿದ್ಧವಾಗುತ್ತಿವೆಯಂತೆ.

ಇಷ್ಟೆಲ್ಲ ಆದರೂ ಅಡುಗೆ ಮನೆ ಮೂಲೆಯಲ್ಲಿ ಅಡಗಿಕುಳಿತಿರುವ ಸಾಸಿವೆ ಡಬ್ಬ, ಪ್ಯಾಂಟಿನ ಜೇಬಿನಲ್ಲಿಟ್ಟು ಮರೆತ ಬೈಕಿನ ಕೀಲಿ ಇವನ್ನೆಲ್ಲ ಹುಡುಕಿಕೊಡುವ ಸರ್ಚ್ ಇಂಜನ್ ಮಾತ್ರ ಇದುವರೆಗೂ ತಯಾರಾಗಿಲ್ಲ. ಇಷ್ಟರಲ್ಲೇ ತಯಾರಾದರೂ ಆಗಬಹುದು, ಕಾದುನೋಡೋಣ!


ನವೆಂಬರ್ ೩೦, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಭಾನುವಾರ, ನವೆಂಬರ್ 28, 2010

ಮೊಬೈಲ್ ಬಗ್ಗೆ ಹೀಗೊಂದು ಬರಹ...

ಹಿಂದೊಮ್ಮೆ ಆಕಾಶವಾಣಿ ಮಡಿಕೇರಿಯ ಫೋನ್-ಔಟ್ ಕಾರ್ಯಕ್ರಮದಲ್ಲಿ ಮಾತನಾಡಲು ಬರೆದಿಟ್ಟಿದ್ದ ನೋಟ್ಸು ಇದು. ಬರೆವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಈಚಿನ ವರ್ಷಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಗೆ ಬಹಳ ಪ್ರಮುಖವಾದ ಸ್ಥಾನ. ಹೊಸದೊಂದು ವಸ್ತು ಮಾರುಕಟ್ಟೆಗೆ ಪರಿಚಯವಾದ ಕೆಲವೇ ವರ್ಷಗಳ ಅವಧಿಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ಬೇರೆ ಯಾವುದೇ ಉದಾಹರಣೆ, ನಮ್ಮ ದೇಶದ ಮಟ್ಟಿಗಂತೂ, ಇಲ್ಲವೇ ಇಲ್ಲ ಅಂತ ಹೇಳಬೇಕಾಗುತ್ತದೆ.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ - ಅಂದ್ರೆ ಲ್ಯಾಂಡ್‌ಲೈನು - ಆ ವೇಳೆಗಾಗ್ಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು, ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಮಾಮೂಲಿ ಫೋನು ತಂತಿಗಳ ನೆರವಿಲ್ಲದೆ - ಅಂದರೆ ರೇಡಿಯೋ ರೀತಿಯಲ್ಲಿ - ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಆಗುತ್ತಲ್ಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಇದೆಲ್ಲ ಆಗಿದ್ದು ೧೯೪೦-೫೦ರ ದಶಕದಲ್ಲಿ. ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಫೋನುಗಳು ತೀರಾ ದೊಡ್ಡದಾಗಿದ್ದವು, ಬೆಲೆ ವಿಪರೀತ ಜಾಸ್ತಿ ಇತ್ತು, ಹೋಗಲಿ ಅಂದರೆ ಅದರಲ್ಲಿ ಆಡುವ ಮಾತುಗಳಿಗೆ ಒಂಚೂರೂ ಪ್ರೈವಸಿ ಅನ್ನೋದೇ ಇರಲಿಲ್ಲ. ನೀವು ನಿಮ್ಮ ಹೆಂಡ್ತಿ ಜೊತೇನೋ ಬಾಸ್ ಜೊತೇನೋ ಗರ್ಲ್‌ಫ್ರೆಂಡ್ ಜೊತೇನೋ ಮೊಬೈಲಲ್ಲಿ ಮಾತಾಡ್ತಾ ಇದ್ರೆ ಅದ್ನ ಮೊಬೈಲ್ ಫೋನ್ ಇರುವ ಬೇರೆ ಯಾರು ಬೇಕಾದರೂ ಕೇಳಿಸಿಕೊಳ್ಳುವಂಥ ಪರಿಸ್ಥಿತಿ ಇತ್ತು. ಹೀಗಾಗಿ ಮೊಬೈಲ್ ಫೋನುಗಳಿಗೆ ಒಂದು ಭವಿಷ್ಯ ಇದೆ ಅಂತಲೇ ಯಾರೂ ನಂಬಿರಲಿಲ್ಲ.

ಆದರೆ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ ಕರೆಮಾಡುವ ಸೌಲಭ್ಯ ಒದಗಿಸ್ತಲ್ಲ ಈ ಮೊಬೈಲ್ ದೂರವಾಣಿ, ಆ ಅನುಕೂಲ ಮಾತ್ರ ಎಲ್ಲರ ನಿರೀಕ್ಷೆಯನ್ನೂ ಮೀರಿ ಜನಪ್ರಿಯವಾಯ್ತು. ಆದರೆ ಈ ಜನಪ್ರಿಯತೆ ಬರೋದಕ್ಕೆ ಸುಮಾರು ಐವತ್ತು ವರ್ಷ ಕಾಯಬೇಕಾಯ್ತು ಅಷ್ಟೆ.

ನಮ್ಮ ದೇಶದ ಉದಾಹರಣೆಯನ್ನೇ ತೊಗೊಂಡ್ರೆ ನಮ್ಮ ಮಾರುಕಟ್ಟೆಗೆ ಮೊಬೈಲ್ ದೂರವಾಣಿ ಬಂದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟು ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹದಿನೈದು ಇಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಯಾವಾಗ ಮೊಬೈಲ್ ಕ್ಷೇತ್ರದ ಮೇಲೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ ಟ್ರಾಯ್ ಸಂಸ್ಥೆಯ ನಿಯಂತ್ರಣ ಬಂತೋ, ಅಲ್ಲಿಂದ ಪರಿಸ್ಥಿತಿ ನಿಧಾನಕ್ಕೆ ಬದಲಾಯ್ತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿ ಆಯ್ತು, ಹೊಸಹೊಸ ಸಂಸ್ಥೆಗಳು ಮೊಬೈಲ್ ಸಂಪರ್ಕ ಕೊಡೋದಕ್ಕೆ ಪ್ರಾರಂಭಿಸಿದವು. ಇದರಿಂದ ಮೊಬೈಲ್‌ಗಾಗಿ ಮಾಡಬೇಕಾದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಯ್ತು. ತುಂಬಾ ಕಡಿಮೆ ಖರ್ಚಿನಲ್ಲಿ ದೂರವಾಣಿ ಸಂಪರ್ಕ ಸಿಗತ್ತೆ ಅಂತ ಆದ ತಕ್ಷಣ ಜನಪ್ರಿಯತೆನೂ ಜಾಸ್ತಿಯಾಯ್ತು.

ಇದೆಲ್ಲದರ ಪರಿಣಾಮ - ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಈಗ ಎರಡನೇ ಸ್ಥಾನ. ಮೊಬೈಲ್ ಸೇವೆಯ ಬೆಲೆ ಅತ್ಯಂತ ಕಡಿಮೆಯಿರುವ ದೇಶಗಳ ಸಾಲಿನಲ್ಲೂ ನಮಗೆ ಪ್ರಮುಖ ಸ್ಥಾನ ಇದೆ.

ಬಳಕೆದಾರರು ಜಾಸ್ತಿ ಆದ ಹಾಗೆ ಮೊಬೈಲ್ ಮೂಲಕ ಲಭ್ಯವಾಗ್ತಾ ಇರುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊಬೈಲಲ್ಲಿ ಕರೆ ಮಾಡಿ ಮಾತಾಡಬಹುದು ಅನ್ನುವ ದಿನಗಳು ಹೋಗಿ ಇತರ ನೂರೆಂಟು ಕೆಲಸಗಳ ಜೊತೆಗೆ ದೂರವಾಣಿ ಕರೆಯನ್ನು ಕೂಡ ಮಾಡಬಹುದು ಅನ್ನುವಂತಹ ಸಂದರ್ಭ ಬಂದಿದೆ. ಎಸ್ಸೆಮ್ಮೆಸ್, ಎಮ್ಮೆಮ್ಮೆಸ್, ವಾಯ್ಸ್‌ಮೇಲ್ ಮುಂತಾದ ಸೌಲಭ್ಯಗಳಿಂದ ಪ್ರಾರಂಭಿಸಿ ಇಮೇಲ್ ಕಳಿಸೋದು, ಇಂಟರ್‌ನೆಟ್ ಬ್ರೌಸಿಂಗ್ ಮಾಡೋದು, ಟೀವಿ ನೋಡೋದು, ವೀಡಿಯೋಕಾನ್ಫರೆನ್ಸಿಂಗ್ - ಹೀಗೆ ನೂರೆಂಟು ಹೊಸ ಸಾಧ್ಯತೆಗಳು ನಮ್ಮ ಮುಂದೆ ಬಂದಿವೆ.

ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಕಲ್ಪಿಸಿಕೊಳ್ಳೋದು ಸಾಧ್ಯ ಆದ ಮೇಲಂತೂ ಕಂಪ್ಯೂಟರ್ ಬಳಸಿ ಏನೇನು ಮಾಡ್ತೀವೋ ಅದೆಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಮುಗಿಸೋದು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸಿನಿಮಾ ಟಿಕೆಟ್ ಬುಕಿಂಗ್ ಮಾಡೋದು, ಬೇರೆಬೇರೆ ವೆಬ್‌ಸೈಟುಗಳಲ್ಲಿ ನಮಗೆ ಬೇಕಾದ ಮಾಹಿತಿಗಾಗಿ ಹುಡುಕಾಟ ನಡೆಸೋದು ಇದೆಲ್ಲ ಸಾಧ್ಯವಾಗಿದೆ. ಥ್ರೀ-ಜಿ ಬಂದಮೇಲಂತೂ ನೀವು ಯಾರ ಜೊತೆ ಮಾತಾಡ್ತೀರೋ ಅವರನ್ನ ನಿಮ್ಮ ಫೋನಿನ ಪರದೆಯ ಮೇಲೆ ನೋಡಿಕೊಂಡೇ ಮಾತಾಡುವುದು ಸಾಧ್ಯವಾಗಿದೆ.
ಇನ್ನು ಮೌಲ್ಯವರ್ಧಿತ ಸೇವೆ ಅಥವಾ ವ್ಯಾಲ್ಯೂ ಆಡೆಡ್ ಸರ್ವಿಸ್ - ವಿಎಎಸ್. ಕ್ರಿಕೆಟ್ ಸ್ಕೋರ್ ಇಂದ ಪ್ರಾರಂಭಿಸಿ ದಿನಭವಿಷ್ಯದ ತನಕ ಏನೆಲ್ಲ ಮಾಹಿತಿಯಲ್ಲಿ ನಿಮಗೆ ಆಸಕ್ತಿ ಇದೆಯೋ ಅದೆಲ್ಲ ಎಸ್ಸೆಮ್ಮೆಸ್ ಮಾಧ್ಯಮದಲ್ಲಿ ಸಿಗ್ತಾ ಇದೆ. ಬಿಡುವಿನ ವೇಳೆಯಲ್ಲಿ ಕೇಳಲು ಹಾಡುಗಳನ್ನ ಆಟಾಡೋದಕ್ಕೆ ಗೇಮ್‌ಗಳನ್ನ ಡೌನ್‌ಲೋಡ್ ಮಾಡಿಕೊಳ್ಳೋದು, ರಿಂಗ್‌ಟೋನ್ ಕಾಲರ್ ಟ್ಯೂನ್ ಇವನ್ನೆಲ್ಲ ಇಷ್ಟಬಂದಹಾಗೆ ಇಷ್ಟಬಂದಷ್ಟು ಸಲ ಬದಲಾಯಿಸೋದು ಎಲ್ಲ ಚಿಟಿಕೆ ಹೊಡೆದಷ್ಟು ಸುಲಭ ಆಗಿಬಿಟ್ಟಿದೆ.

ಮೊಬೈಲ್ ಕ್ಷೇತ್ರದಲ್ಲಿ ಆಗಿರುವ ಇಷ್ಟೆಲ್ಲ ಬದಲಾವಣೆಗಳು ಇನ್ನೂ ಅದೆಷ್ಟೋ ಬಗೆಯ ಹೊಸಹೊಸ ಸೌಲಭ್ಯಗಳನ್ನ ನಾವೆಲ್ಲ ನಿರೀಕ್ಷಿಸುವ ಹಾಗೆ ಮಾಡಿವೆ. ಏನೇನಾಗುತ್ತೋ, ಕಾದು ನೋಡೋಣ!

ಮಂಗಳವಾರ, ನವೆಂಬರ್ 23, 2010

ಕುತಂತ್ರ ತಡೆಗೆ ಕ್ಯಾಪ್ಚಾ

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ 'ಸ್ಪಾಮ್' ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ. ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್‌ಗಳನ್ನು ಹರಡುವುದು - ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್‌ಬಾಕ್ಸ್‌ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.

ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ 'ಕ್ಯಾಪ್ಚಾ'ಗಳು ಬಳಕೆಯಾಗುತ್ತವೆ.

ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.

ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ದಾಖಲಿಸುವಾಗ, ಆನ್‌ಲೈನ್ ಪಾವತಿ ಸಂದರ್ಭದಲ್ಲಿ - ಹೀಗೆ ಅನೇಕ ಕಡೆ ಕ್ಯಾಪ್ಚಾಗಳ ಬಳಕೆಯಾಗುತ್ತದೆ. ಕ್ಯಾಪ್ಚಾ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಾಗಲಷ್ಟೆ ಬಳಕೆದಾರರಿಗೆ ತಮ್ಮ ಪ್ರಯತ್ನದಲ್ಲಿ ಮುಂದುವರೆಯಲು ಅನುಮತಿ ಸಿಗುತ್ತದೆ. ಸಾಮಾನ್ಯವಾಗಿ ಕ್ಯಾಪ್ಚಾ ಕೇಳುವ ಪ್ರಶ್ನೆಗೆ ಉತ್ತರಿಸಲು ತಂತ್ರಾಂಶಗಳು ಅಸಮರ್ಥವಾಗಿರುತ್ತವೆ; ಹೀಗಾಗಿ ಕ್ಯಾಪ್ಚಾ ಬಳಕೆಯಿಂದ ದುರುದ್ದೇಶಪೂರಿತ ತಂತ್ರಾಂಶಗಳ ಹಾವಳಿಯನ್ನು ಕಡಿಮೆಮಾಡಬಹುದು.

ಆದರೆ ಇದರಲ್ಲಿ ಕ್ಯಾಪ್ಚಾಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ ಎಂದು ಹೇಳುವುದು ಕಷ್ಟ. ದುರುದ್ದೇಶಪೂರಿತ ತಂತ್ರಾಂಶ ನಿರ್ಮಾತೃಗಳು ಕ್ಯಾಪ್ಚಾಗಳನ್ನು ಸೋಲಿಸುವ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಕೆಲವೆಡೆ ಅವರು ತಮ್ಮ ತಂತ್ರಾಂಶವನ್ನು ಇನ್ನಷ್ಟು ಉತ್ತಮಪಡಿಸಿದ್ದರೆ ಇನ್ನು ಕೆಲ ಸಂದರ್ಭಗಳಲ್ಲಿ ಕ್ಯಾಪ್ಚಾ ಬಳಸುವ ತಾಣದಲ್ಲಿನ ಸುರಕ್ಷತಾ ನ್ಯೂನತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಕ್ಯಾಪ್ಚಾಗಳೂ ಸತತವಾಗಿ ಸುಧಾರಣೆಹೊಂದಬೇಕಾದ ಅಗತ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ನಡೆದಿರುವ ಒಂದು ಪ್ರಯತ್ನ ವೀಡಿಯೋ ರೂಪದ ಕ್ಯಾಪ್ಚಾ ಬಳಕೆ. ಪುಟ್ಟದೊಂದು ವೀಡಿಯೋ ತೋರಿಸಿ ಅದರಲ್ಲಿ ಬರುವ ಅಕ್ಷರಗಳನ್ನು ಗುರುತಿಸಿ ದಾಖಲಿಸಿ ಎಂದು ಕೇಳುವುದು ಈ ಕ್ಯಾಪ್ಚಾದ ವೈಶಿಷ್ಟ್ಯ. ಸುಮ್ಮನೆ ಯಾವುದೋ ವೀಡಿಯೋ ತೋರಿಸುವ ಬದಲಿಗೆ ಜಾಹೀರಾತುಗಳನ್ನು ತೋರಿಸಿದರೆ ತಾಣಗಳು ಅದರಲ್ಲೂ ಹಣಸಂಪಾದನೆ ಮಾಡಬಹುದು ಎಂದು ಇದರ ಸೃಷ್ಟಿಕರ್ತರು ಹೇಳುತ್ತಾರೆ.

ಚಿತ್ರಗಳ ದೊಡ್ಡದೊಂದು ಸಂಗ್ರಹದಿಂದ ನಾಲ್ಕಾರನ್ನು ಆಯ್ದು ತೋರಿಸಿ ಅವುಗಳಲ್ಲಿ ಒಂದನ್ನು ಗುರುತಿಸುವಂತೆ ಕೇಳುವುದು ಕ್ಯಾಪ್ಚಾದ ಇನ್ನೊಂದು ರೂಪ. ಹಣ್ಣು, ಹೂವು, ಮನೆ, ವಿಮಾನ, ನಾಯಿ - ಹೀಗೆ ಐದು ಚಿತ್ರಗಳನ್ನು ಒಟ್ಟಿಗೆ ತೋರಿಸಿ ವಿಮಾನದ ಚಿತ್ರದ ಮೇಲೆ ಕ್ಲಿಕ್ ಮಾಡಿ ಎಂದರೆ ನಾನು-ನೀವು ಗುರುತಿಸುವಷ್ಟು ಸುಲಭವಾಗಿ ತಂತ್ರಾಂಶಗಳು ಗುರುತಿಸಲಾರವು. ಇದೇ ಈ ಕ್ಯಾಪ್ಚಾದ ಹೈಲೈಟ್. ಆದರೆ ಈ ವಿಧಾನ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ.

ಹಳೆಯ ಕ್ಯಾಪ್ಚಾ ಕಲ್ಪನೆಯನ್ನೇ ಉಳಿಸಿಕೊಂಡು ಅದರಲ್ಲೇ ವಿಶಿಷ್ಟ ಸುಧಾರಣೆಗಳನ್ನು ಮಾಡಿರುವುದು 'ರೀಕ್ಯಾಪ್ಚಾ'. ಇದರ ನಿರ್ವಹಣೆ ಗೂಗಲ್ ಸಂಸ್ಥೆಯದು. ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಆದರೆ ಅವುಗಳಲ್ಲಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಎರಡನೆಯ ಪದ ಯಾವುದೋ ಹಳೆಯ ಪತ್ರಿಕೆಯಿಂದಲೋ ಪುಸ್ತಕದಿಂದಲೋ ಬಂದಿರುತ್ತದೆ! ಅದು ಹೇಗೆ ಎಂದಿರಾ, ಗೂಗಲ್ ಸಂಸ್ಥೆ ಲಕ್ಷಾಂತರ ಮುದ್ರಿತ ಪುಸ್ತಕ-ಪತ್ರಿಕೆಗಳ ಗಣಕೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ಮುದ್ರಿತ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ತಂತ್ರಾಂಶಗಳಿಗೆ ಎಲ್ಲ ಪದಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅಂತಹ ಪದಗಳ ಚಿತ್ರವನ್ನು ರೀಕ್ಯಾಪ್ಚಾ ವ್ಯವಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಯಾವುದೇ ಪದವನ್ನು ಒಬ್ಬರಿಗಿಂತ ಹೆಚ್ಚು ಜನ ಒಂದೇ ರೀತಿ ಗುರುತಿಸಿದ ಮೇಲೆ ಅದು ಸರಿಯೇ ತಾನೆ!

ಲಕ್ಷಾಂತರ ಜನ ಪ್ರಪಂಚದ ಮೂಲೆಮೂಲೆಗಳಿಂದ ರೀಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಾಗ ಎಷ್ಟೆಲ್ಲ ಪದಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸುವುದು ಸಾಧ್ಯವಾಗುತ್ತಿದೆ; ಸ್ಪಾಮ್ ತಡೆಯಲು ರೂಪಗೊಂಡ ಕ್ಯಾಪ್ಚಾ ವ್ಯವಸ್ಥೆ ತನ್ನ ಹೊಸ ಅವತಾರದಲ್ಲಿ ನಮ್ಮ ಇತಿಹಾಸವನ್ನು ಗಣಕೀಕರಣಗೊಳಿಸಲು ನೆರವುನೀಡುತ್ತಿದೆ.

ನವೆಂಬರ್ ೨೩, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 16, 2010

ಟ್ಯಾಬ್ಲೆಟ್ ಕದನ

ಟಿ ಜಿ ಶ್ರೀನಿಧಿ

ಈಚಿನ ಕೆಲ ತಿಂಗಳುಗಳಿಂದ ಗಣಕ ಲೋಕದಲ್ಲೆಲ್ಲ ಟ್ಯಾಬ್ಲೆಟ್‌ಗಳದ್ದೇ ಸುದ್ದಿ. ಮೊದಲಿಗೆ ಈ ಸಂಚಲನ ಹುಟ್ಟುಹಾಕಿದ್ದು ವರ್ಷದ ಪ್ರಾರಂಭದಲ್ಲಿ ಮಾರುಕಟ್ಟೆಗೆ ಬಂದ ಆಪಲ್ ಸಂಸ್ಥೆಯ ಐಪ್ಯಾಡ್. ಆಮೇಲಂತೂ ಸಾಲುಸಾಲಾಗಿ ಟ್ಯಾಬ್ಲೆಟ್‌ಗಳು ಸುದ್ದಿಯಲ್ಲಿವೆ - ಬ್ಲಾಕ್‌ಬೆರಿಯ ಪ್ಲೇಬುಕ್, ಎಚ್‌ಪಿ ಸ್ಲೇಟ್, ಸ್ಯಾಮ್‌ಸಂಗ್ ಗೆಲಾಕ್ಸಿ ಟ್ಯಾಬ್ ಎಲ್ಲ ಸೇರಿಕೊಂಡು ದೊಡ್ಡಪ್ರಮಾಣದ ಟ್ಯಾಬ್ಲೆಟ್ ಸಮರಕ್ಕೆ ನಾಂದಿಹಾಡಿವೆ.

ಏನಿದು ಟ್ಯಾಬ್ಲೆಟ್?
ಸ್ಪರ್ಶ ಸಂವೇದನೆ ಹೊಂದಿರುವ ಒಂದೇ ಫಲಕದಲ್ಲಿ (ಟಚ್-ಸ್ಕ್ರೀನ್) ಅಡಕವಾಗಿರುವ ಸಂಪೂರ್ಣ ಗಣಕವೇ ಟ್ಯಾಬ್ಲೆಟ್. ಸಾಮಾನ್ಯ ಗಣಕಗಳನ್ನು ಬಳಸಿ ಏನೆಲ್ಲ ಮಾಡಬಹುದೋ ಅದನ್ನೆಲ್ಲ ಟ್ಯಾಬ್ಲೆಟ್ ಕೂಡ ಮಾಡಬಲ್ಲದು. ಸಾಮಾನ್ಯವಾಗಿ ಇವುಗಳಲ್ಲಿ ಕೀಲಿಮಣೆ ಇರುವುದಿಲ್ಲ; ಕೈಬೆರಳು ಅಥವಾ ಸ್ಟೈಲಸ್ ಕಡ್ಡಿ ಉಪಯೋಗಿಸಬೇಕಾಗುತ್ತದೆ. ನಾವೆಲ್ಲ ಚಿಕ್ಕವಯಸ್ಸಿನಲ್ಲಿ ಉಪಯೋಗಿಸಿದ್ದ ಸ್ಲೇಟನ್ನು ನೆನಪಿಸಿಕೊಳ್ಳಿ. ಟ್ಯಾಬ್ಲೆಟ್ ಗಣಕವನ್ನು ಅದರ ಮಾಡರ್ನ್ ಅವತಾರ ಎಂದು ಕರೆಯಬಹುದು.

ಆಪಲ್ ಐಪ್ಯಾಡ್ ಈ ವರ್ಷ ಮಾರುಕಟ್ಟೆಗೆ ಬಂತು ಎಂದಮಾತ್ರಕ್ಕೆ ಟ್ಯಾಬ್ಲೆಟ್ ತಂತ್ರಜ್ಞಾನ ನಿನ್ನೆಮೊನ್ನೆ ಹುಟ್ಟಿದ್ದೇನೂ ಅಲ್ಲ. ಕೈಯಲ್ಲಿ ಹಿಡಿದುಕೊಳ್ಳಬಹುದಾದ (ಹ್ಯಾಂಡ್‌ಹೆಲ್ಡ್) ಗಣಕಗಳ ಸೃಷ್ಟಿಗೆ ಸುಮಾರು ನೂರು ವರ್ಷಗಳಿಂದ ಪ್ರಯತ್ನ ನಡೆಯುತ್ತಿದ್ದ ಬಗ್ಗೆ ದಾಖಲೆಗಳಿವೆ. ಆದರೆ ಟ್ಯಾಬ್ಲೆಟ್ ಗಣಕಕ್ಕೆ ನಾಮಕರಣವಾದದ್ದು ಮಾತ್ರ ೨೦೦೦ದಲ್ಲಿ, ಮೈಕ್ರೋಸಾಫ್ಟ್ ಸಂಸ್ಥೆ ತನ್ನ 'ಟ್ಯಾಬ್ಲೆಟ್ ಪಿಸಿ'ಯನ್ನು ಪರಿಚಯಿಸಿದಾಗ. ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಟ್ಯಾಬ್ಲೆಟ್‌ಗಳು ಹೆಚ್ಚಿನ ಜನಪ್ರಿಯತೆ ಕಾಣಲಿಲ್ಲ. ಹೆಚ್ಚಿನ ತೂಕ, ಬಳಕೆದಾರ ಸ್ನೇಹಿಯಲ್ಲದ ತಂತ್ರಾಂಶಗಳು - ಹೀಗೆ ಅನೇಕ ಕಾರಣಗಳಿಂದ ಟ್ಯಾಬ್ಲೆಟ್ ಮಾರುಕಟ್ಟೆ ಅಷ್ಟಾಗಿ ಬೆಳೆದಿರಲಿಲ್ಲ.

ಟ್ಯಾಬ್ಲೆಟ್ ಸಮರ
ಆದರೆ ೨೦೧೦ರಲ್ಲಿ ಆಪಲ್ ಐಪ್ಯಾಡ್ ಮಾರುಕಟ್ಟೆಗೆ ಬಂದಾಗ ಈ ಪರಿಸ್ಥಿತಿ ಬಹುಮಟ್ಟಿಗೆ ಬದಲಾಗಿತ್ತು. ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳು, ಉತ್ತಮ ಗುಣಮಟ್ಟದ ಟಚ್-ಸ್ಕ್ರೀನ್, ಕಡಿಮೆ ತೂಕ, ಜೊತೆಗೆ ಆಪಲ್‌ನ ಬ್ರಾಂಡ್ ನೇಮ್ ಎಲ್ಲ ಸೇರಿಕೊಂಡು ಟ್ಯಾಬ್ಲೆಟ್‌ಗಳಿಗೊಂದು ಪುನರ್ಜನ್ಮ ದೊರೆಯಿತು.

ಐಪ್ಯಾಡ್ ಜನಪ್ರಿಯವಾಗುತ್ತಿದ್ದಂತೆಯೇ ಹೊಸ ಟ್ಯಾಬ್ಲೆಟ್ಟುಗಳು ಸಾಲುಸಾಲಾಗಿ ಮಾರುಕಟ್ಟೆಗೆ ಬರುವುದು ಪ್ರಾರಂಭವಾಗಿದೆ. ಬ್ಲಾಕ್‌ಬೆರಿ ನಿರ್ಮಾತೃಗಳಾದ ರೀಸರ್ಚ್ ಇನ್ ಮೋಷನ್ ಸಂಸ್ಥೆ ತನ್ನ 'ಪ್ಲೇಬುಕ್' ಅನ್ನು ಈಗಾಗಲೇ ಪ್ರದರ್ಶಿಸಿದೆ. ಸ್ಯಾಮ್‌ಸಂಗ್‌ನ ಗೆಲಾಕ್ಸಿ ಟ್ಯಾಬ್ ಮತ್ತು ಎಚ್‌ಪಿ ಸ್ಲೇಟ್ ಟ್ಯಾಬ್ಲೆಟ್‌ಗಳು ಇಷ್ಟರಲ್ಲೇ ಮಾರುಕಟ್ಟೆಗೆ ಬರಲಿವೆ.

ಬಡವರ ಟ್ಯಾಬ್ಲೆಟ್
ಟ್ಯಾಬ್ಲೆಟ್‌ಗಳದು ಹೆಚ್ಚಿನ ಯಂತ್ರಾಂಶ ಅಗತ್ಯವಿಲ್ಲದ ಸರಳ ವಿನ್ಯಾಸ; ಜೊತೆಗೆ ಅವುಗಳನ್ನು ಉಪಯೋಗಿಸುವುದೂ ಸುಲಭ. ಇದೀಗ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಕೂಡ ಲಭ್ಯವಿರುವುದರಿಂದ ತಂತ್ರಾಂಶಗಳೂ ದುಬಾರಿಯಲ್ಲ. ಹೀಗಾಗಿ ಅಭಿವೃದ್ಧಿಶೀಲ ದೇಶಗಳ ಮಕ್ಕಳಿಗೆ ಆಧುನಿಕ ಶಿಕ್ಷಣ ಒದಗಿಸಲು ಟ್ಯಾಬ್ಲೆಟ್‌ಗಳೇ ಸರಿಯಾದ ಮಾಧ್ಯಮ ಎಂಬ ಅಭಿಪ್ರಾಯ ಮೂಡಿದೆ.

ಸುಲಭ ಬೆಲೆಯ ಲ್ಯಾಪ್‌ಟಾಪ್‌ಗಳನ್ನು ತಯಾರಿಸುವ ಉದ್ದೇಶದೊಡನೆ ಕೆಲಸಮಾಡುತ್ತಿರುವ 'ಒನ್ ಲ್ಯಾಪ್‌ಟಾಪ್ ಪರ್ ಚೈಲ್ಡ್' ಕಾರ್ಯಕ್ರಮ (ಒಎಲ್‌ಪಿಸಿ) ಇದೀಗ ಟ್ಯಾಬ್ಲೆಟ್ ಗಣಕವನ್ನೂ ಸೃಷ್ಟಿಸಲು ಹೊರಟಿದೆ. ಎಕ್ಸ್‌ಒ-೩ ಹೆಸರಿನ ಈ ಟ್ಯಾಬ್ಲೆಟ್ ಅನ್ನು ಐದು ಸಾವಿರ ರೂಪಾಯಿಗಳ ಒಳಗೆ ಲಭ್ಯವಾಗುವಂತೆ ಮಾಡುವುದು ಒಎಲ್‌ಪಿಸಿ ಉದ್ದೇಶ.

ಭಾರತ ಕೂಡ ಈ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇದೇ ವರ್ಷ ಅನಾವರಣಗೊಂಡ 'ಸಾಕ್ಷಾತ್' ವಿಶ್ವದ ಅತ್ಯಂತ ಕಡಿಮೆ ಬೆಲೆಯ ಟ್ಯಾಬ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದೂವರೆ ಸಾವಿರ ರೂಪಾಯಿ ವೆಚ್ಚದಲ್ಲಿ ಸಿದ್ಧವಾಗಿರುವ ಈ ಟ್ಯಾಬ್ಲೆಟ್ ಅನ್ನು ಭಾರತೀಯ ವಿಜ್ಞಾನ ಮಂದಿರ ಹಾಗೂ ಐಐಟಿಗಳು ಜಂಟಿಯಾಗಿ ರೂಪಿಸಿವೆ. ಎರಡು ಗಿಗಾಬೈಟ್ ಮೆಮೊರಿ, ಅಂತರಜಾಲ ಸಂಪರ್ಕ, ಸ್ಪರ್ಶಸಂವೇದಿ ಪರದೆಗಳನ್ನು ಹೊಂದಿರುವ ಸಾಕ್ಷಾತ್‌ಗಾಗಿಯೇ ಐಐಟಿಗಳು ಅನೇಕ ಶೈಕ್ಷಣಿಕ ತಂತ್ರಾಂಶಗಳನ್ನು ರೂಪಿಸಿವೆ.

ಮುಂದಿನ ವರ್ಷದ ವೇಳೆಗೆ ಇಂತಹ ಹತ್ತು ಲಕ್ಷ ಟ್ಯಾಬ್ಲೆಟ್‌ಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಇವುಗಳ ಉತ್ಪಾದನೆ ಹೆಚ್ಚಿದಂತೆ ಬೆಲೆ ಇನ್ನೂ ಕಡಿಮೆಯಾಗಬಹುದು ಎಂಬ ನಿರೀಕ್ಷೆಯೂ ಇದೆ.

ನವೆಂಬರ್ ೧೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಬುಧವಾರ, ನವೆಂಬರ್ 10, 2010

ಕಲ್ಪನೆಯ ಯಾತ್ರೆಗೆ ಸಿದ್ಧರಾಗಿ!

'ಕಲ್ಪನೆಯ ಯಾತ್ರೆ ೨೦೧೦' ಹೆಸರಿನ ಖಗೋಳ ಉತ್ಸವ ಬರುವ ನವೆಂಬರ್ ೨೬ರಿಂದ ಡಿಸೆಂಬರ್ ೫ರವರೆಗೆ ಬೆಂಗಳೂರಿನ ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ನಡೆಯಲಿದೆ.

ಈ ವಿಶಿಷ್ಟ ಕಾರ್ಯಕ್ರಮದ ವಿವರಗಳಿಗೆ ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ, ಅಥವಾ ಕಲ್ಪನೆಯ ಯಾತ್ರೆಯ ಜಾಲತಾಣ ನೋಡಿ.


ಮಂಗಳವಾರ, ನವೆಂಬರ್ 9, 2010

ಗಣಕ ಲೋಕದಿಂದ ಮೇಘ ಸಂದೇಶ

ಟಿ ಜಿ ಶ್ರೀನಿಧಿ


ಕ್ಲೌಡ್ ಕಂಪ್ಯೂಟಿಂಗ್ - ಗಣಕ ಲೋಕದಲ್ಲಿ ಹೊಸ ಸಂಚಲನ ಮೂಡಿಸಿರುವ ಪರಿಕಲ್ಪನೆ. ಗೂಗಲ್, ಅಮೆಜಾನ್ ಮುಂತಾದ ಅಂತರಜಾಲ ಸಂಸ್ಥೆಗಳು ಈಗಾಗಲೇ ಬಳಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ತಂತ್ರಜ್ಞಾನವನ್ನು ತಾವೂ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಮೈಕ್ರೋಸಾಫ್ಟ್, ಎಚ್‌ಪಿ, ಡೆಲ್ ಮುಂತಾದ ಸಂಸ್ಥೆಗಳು ಈಗಾಗಲೇ ದೊಡ್ಡಪ್ರಮಾಣದ ಪ್ರಯತ್ನಗಳನ್ನು ಶುರುಮಾಡಿವೆ. ಗ್ರಾಹಕ ಸಂಪರ್ಕ ನಿರ್ವಹಣೆ ವ್ಯವಸ್ಥೆಯನ್ನು ಕ್ಲೌಡ್ ಮೂಲಕ ಒದಗಿಸುತ್ತಿರುವ ಸೇಲ್ಸ್‌ಫೋರ್ಸ್ ಡಾಟ್ ಕಾಮ್‌ನಂತಹ ಸಂಸ್ಥೆಗಳು ಈಗಾಗಲೇ ಅದ್ಭುತ ಯಶಸ್ಸು ಸಾಧಿಸಿವೆ. ಈಗ ವಾರ್ಷಿಕ ೨.೪ ಬಿಲಿಯನ್ ಡಾಲರುಗಳಷ್ಟು ವಹಿವಾಟು ನಡೆಸುತ್ತಿರುವ ಕ್ಲೌಡ್ ಕಂಪ್ಯೂಟಿಂಗ್ ಕ್ಷೇತ್ರ ಮುಂದಿನ ಮೂರು ವರ್ಷಗಳಲ್ಲಿ ನಾಲ್ಕು ಪಟ್ಟು ದೊಡ್ಡದಾಗಿ ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ಗಣಕ ಲೋಕದ ಭವಿಷ್ಯವೇ ಈ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವ ಧಾಟಿಯ ಮಾತುಗಳೂ ಬೇಕಾದಷ್ಟು ಕೇಳಿಬರುತ್ತಿವೆ.

ಇಲ್ಲಿ ಕ್ಲೌಡ್ ಎಂದರೆ ಮೋಡವಲ್ಲ. ಕ್ಲೌಡ್ ಕಂಪ್ಯೂಟಿಂಗ್ ಬಳಕೆದಾರರು ಮೋಡದ ಮೇಲೆ ಕುಳಿತಿರಬೇಕಾದ ಅಗತ್ಯವೂ ಇಲ್ಲ. ಹಾಗಾದರೆ ಈ ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನು?

ತಂತ್ರಾಂಶ, ಶೇಖರಣಾ ಸಾಮರ್ಥ್ಯ, ದುಬಾರಿ ಯಂತ್ರಾಂಶ - ಹೀಗೆ ಗಣಕದಲ್ಲಿ ನಿಮಗೆ ಅಗತ್ಯವಾದ ಯಾವುದೇ ಸೇವೆಯನ್ನು ಅಂತರಜಾಲದ ಮೂಲಕ ಒದಗಿಸುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್. ಯಾವುದೇ ಸಂಸ್ಥೆ ತನ್ನ ಅಗತ್ಯಗಳಿಗೆ ಬೇಕಾದ ಗಣಕ ವ್ಯವಸ್ಥೆಯನ್ನು ಸ್ವತಃ ಸ್ಥಾಪಿಸಿಕೊಂಡು ನಿರ್ವಹಿಸುವ ಬದಲು ಬೇರೊಂದು ಸಂಸ್ಥೆಗೆ ಗುತ್ತಿಗೆ ಕೊಟ್ಟುಬಿಡುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ.

ಉದಾಹರಣೆಗೆ ಇಪ್ಪತ್ತೈದು ಉದ್ಯೋಗಿಗಳಿರುವ ಒಂದು ಸಂಸ್ಥೆಯನ್ನೇ ತೆಗೆದುಕೊಳ್ಳಿ. ಆ ಸಂಸ್ಥೆ ತನ್ನ ಎಲ್ಲ ನೌಕರರಿಗೆ ಇಮೇಲ್ ಸೌಲಭ್ಯ ಕೊಡಲು ತನ್ನದೇ ಆದ ಸರ್ವರ್ ಸ್ಥಾಪಿಸಿಕೊಂಡು ಅದರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹೊರಟರೆ ದೊಡ್ಡ ಪ್ರಮಾಣದ ಖರ್ಚು ಬರುತ್ತದೆ. ಅದರ ಬದಲು ಆ ಸಂಸ್ಥೆ ಗೂಗಲ್‌ನ ಎಂಟರ್‌ಪ್ರೈಸ್ ಇಮೇಲ್ ಸೌಲಭ್ಯವನ್ನು ಕೊಳ್ಳುತ್ತದೆ ಎಂದುಕೊಳ್ಳೋಣ. ಸರ್ವರ್ ಬೇಡ, ತಂತ್ರಾಂಶ ಬೇಡ, ಹೆಚ್ಚುವರಿ ಸಿಬ್ಬಂದಿಯೂ ಬೇಡ; ಆ ಖರ್ಚಿನ ಸಣ್ಣದೊಂದು ಭಾಗದಲ್ಲಿ ಸಂಸ್ಥೆಯ ಎಲ್ಲ ನೌಕರರಿಗೂ ಇಮೇಲ್ ಸೌಲಭ್ಯ ದೊರಕಿಬಿಡುತ್ತದೆ. ಜೊತೆಗೆ ನೌಕರರು ವಿಶ್ವದ ಯಾವುದೇ ಮೂಲೆಯಲ್ಲಿ - ಕಚೇರಿಯಲ್ಲಿ, ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲೇ ಇದ್ದರೂ ತಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ.

ಬಳಕೆದಾರರ ಸಂಸ್ಥೆಯ ಹೊರಗೆ, ಬೇರೊಬ್ಬರ ಸಂಪೂರ್ಣ ಉಸ್ತುವಾರಿಯಲ್ಲಿ ಕ್ಲೌಡ್ ಕಂಪ್ಯೂಟಿಂಗ್ ವ್ಯವಸ್ಥೆ ಕೆಲಸಮಾಡುತ್ತದೆ. ಹೀಗಾಗಿ ಗಣಕ ವ್ಯವಸ್ಥೆಗಳನ್ನು ಚಿತ್ರದಲ್ಲಿ ಪ್ರತಿನಿಧಿಸುವಾಗ ಈ ಭಾಗವನ್ನು ಮೋಡದ ಆಕಾರದಲ್ಲಿ ತೋರಿಸುತ್ತಾರೆ; ಅದು ನಮ್ಮ ವ್ಯವಸ್ಥೆಯಿಂದ ಹೊರಗಿದೆ ಎಂದು ತೋರಿಸುವುದು ಅದರ ಉದ್ದೇಶ. ಈ ಮೋಡದ ಆಕಾರವೇ 'ಕ್ಲೌಡ್' ಎಂಬ ಹೆಸರಿನ ಮೂಲ.

ಕ್ಲೌಡ್ ಕಂಪ್ಯೂಟಿಂಗ್ ತೀರಾ ಹೊಸ ಪರಿಕಲ್ಪನೆಯೇನಲ್ಲ. ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಬ್ಲಾಗರ್, ಫ್ಲಿಕರ್, ಫೇಸ್‌ಬುಕ್, ಹಾಟ್‌ಮೇಲ್ ಮುಂತಾದ ಯಾವುದೋ ರೂಪದಲ್ಲಿ ಈಗಾಗಲೇ ಇದನ್ನು ಬಳಸುತ್ತಿದ್ದೇವೆ. ಆದರೆ ಸಂಸ್ಥೆಗಳ ದೃಷ್ಟಿಯಿಂದ ಇದಿನ್ನೂ ಈಗ ಬೆಳೆಯುತ್ತಿರುವ ಕ್ಷೇತ್ರ. ಇಮೇಲ್ ವ್ಯವಸ್ಥೆಯಿಂದ ಪ್ರಾರಂಭಿಸಿ ದತ್ತಸಂಚಯಗಳು, ಇಆರ್‌ಪಿ, ಥ್ರೀಡಿ ಮಾಡೆಲಿಂಗ್ ಇತ್ಯಾದಿಗಳವರೆಗೆ ಅನೇಕಬಗೆಯ ಸೇವೆಗಳು ಈಗ ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದೊರಕುತ್ತಿವೆ. ಅವೆಲ್ಲವೂ ಅಂತರಜಾಲದ ಮೂಲಕವೇ ಲಭ್ಯವಾಗುತ್ತಿರುವುದರಿಂದ ಬಳಕೆದಾರರು ಗಣಕೀಕರಣಕ್ಕೆ ಮಾಡಬೇಕಾದ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗುತ್ತಿದೆ.

ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವ ಸಂಸ್ಥೆಗಳು ಅನೇಕ ಬಳಕೆದಾರರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತವೆ. ಇಲ್ಲಿ ಒಂದೆರಡು ಸರ್ವರ್‌ಗಳಲ್ಲ, ಅನೇಕ ಸರ್ವರ್‌ಗಳ ತೋಟವೇ (ಸರ್ವರ್ ಫಾರ್ಮ್) ಇರುತ್ತದೆ. ಹೀಗಾಗಿ ಒಬ್ಬೊಬ್ಬರಿಗೂ ಬೇರೆಬೇರೆಯಾಗಿ ಯಂತ್ರಾಂಶಗಳನ್ನು ಕೊಳ್ಳುವ, ಸ್ಥಾಪಿಸುವ ಅಥವಾ ನಿರ್ವಹಿಸುವ ಅಗತ್ಯ ಇರುವುದಿಲ್ಲ; ಇದರ ಪರಿಣಾಮ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಬೇಕಾದ ಸೇವೆಗಳೆಲ್ಲ ದೊರಕಿಬಿಡುತ್ತವೆ. ಯಂತ್ರಾಂಶ ನಿರ್ವಹಣೆ, ಆಗಿಂದಾಗ್ಗೆ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು, ಇದಕ್ಕೆಲ್ಲ ಬೇಕಾದ ನೌಕರರ ಸಂಬಳ... ಈ ರೀತಿಯ ಯಾವ ತಲೆನೋವೂ ಇಲ್ಲ; ಬಿಲ್ ಬಂದಾಗ ದುಡ್ಡು ಕೊಟ್ಟರೆ ಮುಗಿಯಿತು - ನೀರಿನದೋ ಕರೆಂಟಿನದೋ ಕೇಬಲ್‌ದೋ ಬಿಲ್ ಕಟ್ಟಿದ ಹಾಗೆ! ಹೀಗಾಗಿಯೇ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಐಟಿ-ಆಸ್-ಎ-ಸರ್ವಿಸ್ ಎಂದೂ ಕರೆಯುತ್ತಾರೆ.

ಈ ವ್ಯವಸ್ಥೆಯಲ್ಲಿ ಬಳಕೆದಾರರ ಮಾಹಿತಿಯೆಲ್ಲ ಬೇರೊಬ್ಬರ ಗಣಕದಲ್ಲಿ ಶೇಖರವಾಗುವುದರಿಂದ ಕ್ಲೌಡ್ ಕಂಪ್ಯೂಟಿಂಗ್ ಸುರಕ್ಷಿತವೇ ಎಂಬ ಪ್ರಶ್ನೆ ಈಗಾಗಲೇ ಕೇಳಿಬಂದಿದೆ. ಆದರೆ ನಾವು ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ; ಅಷ್ಟೆಲ್ಲ ಹೆಚ್ಚಿನ ಸುರಕ್ಷತೆ ಸಣ್ಣಪುಟ್ಟ ಸಂಸ್ಥೆಗಳ ಗಣಕ ವ್ಯವಸ್ಥೆಯಲ್ಲಿ ಖಂಡಿತಾ ಇರುವುದಿಲ್ಲ ಎಂದು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ವಾದಿಸಿವೆ.

ಅದೆಲ್ಲ ಏನೇ ಇರಲಿ, ಗಣಕ ಲೋಕದಲ್ಲೊಂದು ಕ್ರಾಂತಿಕಾರಕ ಬದಲಾವಣೆ ತರಲು ರಂಗಸಜ್ಜಿಕೆ ಸಿದ್ಧವಾಗಿದೆ ಎನ್ನುವುದಂತೂ ನಿಜ.

ನವೆಂಬರ್ ೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಮಂಗಳವಾರ, ನವೆಂಬರ್ 2, 2010

ಬೂಟ್ ಮಾಡಲು ಅರೆಕ್ಷಣ ಸಾಕು

ಟಿ ಜಿ ಶ್ರೀನಿಧಿ

ಗಣಕ ಉಪಯೋಗಿಸುವವರೆಲ್ಲ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ ಎಂಬ ಹೆಸರು ಕೇಳಿಯೇ ಇರುತ್ತಾರೆ. ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ ಇದು. ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಗಣಕದಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಇವುಗಳಲ್ಲಿ ಏನನ್ನು ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ನೀವು ಗುಂಡಿ ಒತ್ತಿದ ತಕ್ಷಣವೇ ಗಣಕ ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ.

ಬೂಟ್ ಮಾಡುವುದು ಬಯಾಸ್ ಎಂಬ ತಂತ್ರಾಂಶದ ಕೆಲಸ. ಬಯಾಸ್ ಎನ್ನುವುದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ'ನ ಹ್ರಸ್ವರೂಪ.

ಗಣಕ ಲೋಕದಲ್ಲಿ ಎಲ್ಲವೂ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುತ್ತವೆ; ಇವತ್ತು ಅತ್ಯಾಧುನಿಕ ಎಂದು ಕರೆಸಿಕೊಳ್ಳುವುದು ನಾಳೆಗಾಗಲೇ ಹಳತಾಗಿರುತ್ತದೆ. ಆದರೆ ಇದಕ್ಕೆ ಅಪವಾದದಂತಿರುವುದು ಈ ಬಯಾಸ್. ಇಪ್ಪತ್ತೈದು ವರ್ಷಗಳ ಹಿಂದೆ ಸೃಷ್ಟಿಯಾದ ಈ ತಂತ್ರಾಂಶ ಇಲ್ಲಿಯವರೆಗೂ ಅಬಾಧಿತವಾಗಿ ಬಳಕೆಯಾಗುತ್ತಾ ಬಂದಿದೆ.

ಬಯಾಸ್ ಸೃಷ್ಟಿಯಾದಾಗ ಅದರ ಆಯುಷ್ಯದ ಬಗೆಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಹೆಚ್ಚೆಂದರೆ ಎರಡು ಎರಡೂವರೆ ಲಕ್ಷ ಗಣಕಗಳಲ್ಲಷ್ಟೆ ಬಳಕೆಯಾಗಬಹುದು ಎನ್ನಲಾಗಿದ್ದ ಬಯಾಸ್ ೧೯೭೯ರಿಂದ ಇಲ್ಲಿಯವರೆಗೂ ಗಣಕಗಳ ಅವಿಭಾಜ್ಯ ಅಂಗವಾಗಿ ಸಾಗಿಬಂದಿದೆ.

ಆದರೆ ಈ ಸುದೀರ್ಘ ಅವಧಿಯಲ್ಲಿ ಇತರ ತಂತ್ರಾಂಶ-ಯಂತ್ರಾಂಶಗಳು ಆಮೂಲಾಗ್ರವಾಗಿ ಬದಲಾದಂತೆ ಬಯಾಸ್ ಬದಲಾಗಿಲ್ಲ. ಹೀಗಾಗಿ ಹತ್ತು ವರ್ಷಗಳ ಹಿಂದಿನ ಗಣಕ ಬೂಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತೋ ಇಂದಿನ ಅತ್ಯಾಧುನಿಕ ಗಣಕವೂ ಹೆಚ್ಚೂಕಡಿಮೆ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದೆ.

ಈಗ ಕಡೆಗೂ ಬಯಾಸ್‌ಗೆ ಬದಲಾವಣೆಯ ಸಮಯ ಬಂದಿದೆ. ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ (ಯುಇಎಫ್‌ಐ) ಎಂಬ ಹೊಸ ತಂತ್ರಜ್ಞಾನ ಮುಂದಿನ ವರ್ಷದಿಂದ ಗಣಕಗಳಲ್ಲಿ ಬಯಾಸ್‌ನ ಬದಲಿಗೆ ಕಾಣಿಸಿಕೊಳ್ಳಲಿದೆಯಂತೆ. ಈ ತಂತ್ರಜ್ಞಾನದ ಸಹಾಯದಿಂದ ಗಣಕಗಳನ್ನು ಕೆಲವೇ ಸೆಕೆಂಡುಗಳಲ್ಲಿ ಬೂಟ್ ಆಗುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಬಯಾಸ್‌ನಲ್ಲಿದ್ದ ಅನೇಕ ಸಮಸ್ಯೆಗಳನ್ನು ಈ ಹೊಸ ತಂತ್ರಜ್ಞಾನ ಹೋಗಲಾಡಿಸಲಿದೆ. ಬಯಾಸ್ ಬಳಸುವ ಗಣಕಗಳಲ್ಲಿ ಎರಡು ಟೆರಾಬೈಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳನ್ನು ಬಳಸುವುದು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಅಷ್ಟೊಂದು ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳು ದೊರಕುತ್ತಿರಲಿಲ್ಲವಾದ್ದರಿಂದ ಈ ಸಮಸ್ಯೆ ಯಾರಿಗೂ ಅಷ್ಟೊಂದು ದೊಡ್ಡದಾಗಿ ಕಂಡಿರಲಿಲ್ಲ. ಆದರೆ ತೀರಾ ಈಚೆಗೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ವಿಶ್ವದ ಮೊದಲ ಮೂರು ಟೆರಾಬೈಟ್ ಹಾರ್ಡ್ ಡಿಸ್ಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾರ್ಡ್ ಡಿಸ್ಕ್ ಬಳಸಬೇಕಾದರೆ ಗಣಕದಲ್ಲಿ ಯುಇಎಫ್‌ಐ ಇರಲೇಬೇಕು (ಈಗಿನ ಗಣಕದಲ್ಲೇ ಇದನ್ನು ಬಳಸಬೇಕು ಎನ್ನುವ ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ ೭ ಬಳಕೆದಾರರು ಅದಕ್ಕೊಂದು ಪ್ರತ್ಯೇಕ ಅಡಾಪ್ಟರ್ ಕೊಳ್ಳಬೇಕಾಗುತ್ತದೆ).

ಮೊದಲಿಗೆ ಇಂಟೆಲ್ ಸಂಸ್ಥೆಯ ಆಶ್ರಯದಲ್ಲಿ ರೂಪಗೊಂಡ ಯುಇಎಫ್‌ಐ ಇದೀಗ ಒಂದು ಮಾನಕವಾಗಿ ಬೆಳೆಯುತ್ತಿದೆ. ೨೦೧೧ರ ವೇಳೆಗೆ ಪ್ರಪಂಚದಾದ್ಯಂತ ಮಾರಾಟವಾಗುವ ಗಣಕಗಳಲ್ಲಿ ಬಹುಪಾಲು ಈ ತಂತ್ರಜ್ಞಾನವನ್ನೇ ಬಳಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಯುಇಎಫ್‌ಐ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಸಮಯದಿಂದ ಅಭಿವೃದ್ಧಿಯಲ್ಲಿರುವುದನ್ನು ಗಮನಿಸಿದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವುದು ಕಷ್ಟ ಎಂಬ ಅಭಿಪ್ರಾಯವೂ ಇದೆ.

ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ವಿವರಗಳು ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ ಫೋರಂನ ಜಾಲತಾಣದಲ್ಲಿ ಲಭ್ಯವಿವೆ.

ನವೆಂಬರ್ ೨, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
badge