ಮಂಗಳವಾರ, ನವೆಂಬರ್ 23, 2010

ಕುತಂತ್ರ ತಡೆಗೆ ಕ್ಯಾಪ್ಚಾ

ಟಿ ಜಿ ಶ್ರೀನಿಧಿ

ವಿಶ್ವವ್ಯಾಪಿ ಜಾಲದಲ್ಲಿ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ಇಮೇಲ್ ಅದ್ಭುತ ಸಂಪರ್ಕ ಮಾಧ್ಯಮ; ಆದರೆ ಅದರಲ್ಲಿ ಅನಗತ್ಯ 'ಸ್ಪಾಮ್' ಸಂದೇಶಗಳ ಹಾವಳಿ ವಿಪರೀತ. ವಿಚಾರವಿನಿಮಯಕ್ಕೆ ಪರಿಣಾಮಕಾರಿ ವೇದಿಕೆ ಬ್ಲಾಗಿಂಗ್; ಆದರೆ ಬ್ಲಾಗುಗಳಲ್ಲಿ ಅನಪೇಕ್ಷಿತ ಪ್ರತಿಕ್ರಿಯೆಗಳು ಸಾಕಷ್ಟು ತೊಂದರೆಕೊಡುತ್ತವೆ. ಅಷ್ಟೇ ಅಲ್ಲ, ಎಲ್ಲೆಲ್ಲಿ ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುತ್ತವೋ ಅಲ್ಲೆಲ್ಲ ದುರುದ್ದೇಶಪೂರಿತ ತಂತ್ರಾಂಶಗಳು ಅನಗತ್ಯವಾಗಿ ಹಸ್ತಕ್ಷೇಪಮಾಡುತ್ತವೆ; ಸ್ವಯಂಚಾಲಿತವಾಗಿ ಯದ್ವಾತದ್ವಾ ಮಾಹಿತಿ ಪೂರೈಸುತ್ತವೆ. ಸೌಲಭ್ಯಗಳ ದುರುಪಯೋಗ, ಜಾಲತಾಣದ ಕಾರ್ಯಾಚರಣೆಗೆ ಅಡ್ಡಿಪಡಿಸುವುದು, ಸ್ಪಾಮ್ ಸಂದೇಶಗಳನ್ನು ಕಳಿಸುವುದು, ವೈರಸ್-ವರ್ಮ್‌ಗಳನ್ನು ಹರಡುವುದು - ಈ ತಂತ್ರಾಂಶಗಳಿಗೆ ಇಂತಹ ಯಾವುದೇ ದುರುದ್ದೇಶ ಇರಬಹುದು. ನಮ್ಮ ಇಮೇಲ್ ಇನ್‌ಬಾಕ್ಸ್‌ಗೆ ಹರಿದುಬರುವ ನೂರಾರು ಸ್ಪಾಮ್ ಸಂದೇಶಗಳು ಇಂತಹವೇ ತಂತ್ರಾಂಶಗಳ ಸೃಷ್ಟಿ.

ಈ ಮಾಹಿತಿ ಪ್ರವಾಹವನ್ನು ನಿಲ್ಲಿಸಿ, ಕುತಂತ್ರಗಳನ್ನು ಸೋಲಿಸಬೇಕಾದರೆ ಯಾವುದೇ ಸೌಲಭ್ಯವನ್ನು ಬಳಸಲು ಪ್ರಯತ್ನಿಸುತ್ತಿರುವವರು ನಿಜಕ್ಕೂ ನಮ್ಮನಿಮ್ಮಂತಹ ಬಳಕೆದಾರರೋ ಅಥವಾ ಸ್ವಯಂಚಾಲಿತವಾಗಿ ಮಾಹಿತಿ ಪೂರೈಸುತ್ತಿರುವ ದುರುದ್ದೇಶಪೂರಿತ ತಂತ್ರಾಂಶಗಳೋ ಎನ್ನುವುದನ್ನು ಪತ್ತೆಮಾಡಬೇಕಾಗುತ್ತದೆ. ಒಂದುವೇಳೆ ಸ್ವಯಂಚಾಲಿತ ತಂತ್ರಾಂಶವೇನಾದರೂ ನಕಲಿ ಮಾಹಿತಿ ಪ್ರವಾಹ ಸೃಷ್ಟಿಸಲು ಪ್ರಯತ್ನಿಸುತ್ತಿದ್ದರೆ ಅದನ್ನು ತಡೆಯುವುದೂ ಅಗತ್ಯ. ಈ ಉದ್ದೇಶಕ್ಕಾಗಿಯೇ 'ಕ್ಯಾಪ್ಚಾ'ಗಳು ಬಳಕೆಯಾಗುತ್ತವೆ.

ಕ್ಯಾಪ್ಚಾ ಎನ್ನುವ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ. ಈ ನಾಮಕರಣವಾದದ್ದು ೨೦೦೦ದಲ್ಲಿ. ಯಾವುದೇ ಪ್ರಶ್ನೆಗೆ ಉತ್ತರಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಕ್ಯಾಪ್ಚಾಗಳ ಬಳಕೆ ಪ್ರಾರಂಭವಾಯ್ತು.

ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳುವುದು ಕ್ಯಾಪ್ಚಾಗಳ ಲಕ್ಷಣ.

ಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.

ಹೊಸ ಇಮೇಲ್ ಖಾತೆ ತೆರೆಯುವಾಗ, ಬ್ಲಾಗ್‌ನಲ್ಲಿ ಪ್ರತಿಕ್ರಿಯೆ ದಾಖಲಿಸುವಾಗ, ಆನ್‌ಲೈನ್ ಪಾವತಿ ಸಂದರ್ಭದಲ್ಲಿ - ಹೀಗೆ ಅನೇಕ ಕಡೆ ಕ್ಯಾಪ್ಚಾಗಳ ಬಳಕೆಯಾಗುತ್ತದೆ. ಕ್ಯಾಪ್ಚಾ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಾಗಲಷ್ಟೆ ಬಳಕೆದಾರರಿಗೆ ತಮ್ಮ ಪ್ರಯತ್ನದಲ್ಲಿ ಮುಂದುವರೆಯಲು ಅನುಮತಿ ಸಿಗುತ್ತದೆ. ಸಾಮಾನ್ಯವಾಗಿ ಕ್ಯಾಪ್ಚಾ ಕೇಳುವ ಪ್ರಶ್ನೆಗೆ ಉತ್ತರಿಸಲು ತಂತ್ರಾಂಶಗಳು ಅಸಮರ್ಥವಾಗಿರುತ್ತವೆ; ಹೀಗಾಗಿ ಕ್ಯಾಪ್ಚಾ ಬಳಕೆಯಿಂದ ದುರುದ್ದೇಶಪೂರಿತ ತಂತ್ರಾಂಶಗಳ ಹಾವಳಿಯನ್ನು ಕಡಿಮೆಮಾಡಬಹುದು.

ಆದರೆ ಇದರಲ್ಲಿ ಕ್ಯಾಪ್ಚಾಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ ಎಂದು ಹೇಳುವುದು ಕಷ್ಟ. ದುರುದ್ದೇಶಪೂರಿತ ತಂತ್ರಾಂಶ ನಿರ್ಮಾತೃಗಳು ಕ್ಯಾಪ್ಚಾಗಳನ್ನು ಸೋಲಿಸುವ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ಕೆಲವೆಡೆ ಅವರು ತಮ್ಮ ತಂತ್ರಾಂಶವನ್ನು ಇನ್ನಷ್ಟು ಉತ್ತಮಪಡಿಸಿದ್ದರೆ ಇನ್ನು ಕೆಲ ಸಂದರ್ಭಗಳಲ್ಲಿ ಕ್ಯಾಪ್ಚಾ ಬಳಸುವ ತಾಣದಲ್ಲಿನ ಸುರಕ್ಷತಾ ನ್ಯೂನತೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಹೀಗಾಗಿ ಕ್ಯಾಪ್ಚಾಗಳೂ ಸತತವಾಗಿ ಸುಧಾರಣೆಹೊಂದಬೇಕಾದ ಅಗತ್ಯ ಎದುರಾಗಿದೆ. ಈ ನಿಟ್ಟಿನಲ್ಲಿ ನಡೆದಿರುವ ಒಂದು ಪ್ರಯತ್ನ ವೀಡಿಯೋ ರೂಪದ ಕ್ಯಾಪ್ಚಾ ಬಳಕೆ. ಪುಟ್ಟದೊಂದು ವೀಡಿಯೋ ತೋರಿಸಿ ಅದರಲ್ಲಿ ಬರುವ ಅಕ್ಷರಗಳನ್ನು ಗುರುತಿಸಿ ದಾಖಲಿಸಿ ಎಂದು ಕೇಳುವುದು ಈ ಕ್ಯಾಪ್ಚಾದ ವೈಶಿಷ್ಟ್ಯ. ಸುಮ್ಮನೆ ಯಾವುದೋ ವೀಡಿಯೋ ತೋರಿಸುವ ಬದಲಿಗೆ ಜಾಹೀರಾತುಗಳನ್ನು ತೋರಿಸಿದರೆ ತಾಣಗಳು ಅದರಲ್ಲೂ ಹಣಸಂಪಾದನೆ ಮಾಡಬಹುದು ಎಂದು ಇದರ ಸೃಷ್ಟಿಕರ್ತರು ಹೇಳುತ್ತಾರೆ.

ಚಿತ್ರಗಳ ದೊಡ್ಡದೊಂದು ಸಂಗ್ರಹದಿಂದ ನಾಲ್ಕಾರನ್ನು ಆಯ್ದು ತೋರಿಸಿ ಅವುಗಳಲ್ಲಿ ಒಂದನ್ನು ಗುರುತಿಸುವಂತೆ ಕೇಳುವುದು ಕ್ಯಾಪ್ಚಾದ ಇನ್ನೊಂದು ರೂಪ. ಹಣ್ಣು, ಹೂವು, ಮನೆ, ವಿಮಾನ, ನಾಯಿ - ಹೀಗೆ ಐದು ಚಿತ್ರಗಳನ್ನು ಒಟ್ಟಿಗೆ ತೋರಿಸಿ ವಿಮಾನದ ಚಿತ್ರದ ಮೇಲೆ ಕ್ಲಿಕ್ ಮಾಡಿ ಎಂದರೆ ನಾನು-ನೀವು ಗುರುತಿಸುವಷ್ಟು ಸುಲಭವಾಗಿ ತಂತ್ರಾಂಶಗಳು ಗುರುತಿಸಲಾರವು. ಇದೇ ಈ ಕ್ಯಾಪ್ಚಾದ ಹೈಲೈಟ್. ಆದರೆ ಈ ವಿಧಾನ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ.

ಹಳೆಯ ಕ್ಯಾಪ್ಚಾ ಕಲ್ಪನೆಯನ್ನೇ ಉಳಿಸಿಕೊಂಡು ಅದರಲ್ಲೇ ವಿಶಿಷ್ಟ ಸುಧಾರಣೆಗಳನ್ನು ಮಾಡಿರುವುದು 'ರೀಕ್ಯಾಪ್ಚಾ'. ಇದರ ನಿರ್ವಹಣೆ ಗೂಗಲ್ ಸಂಸ್ಥೆಯದು. ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಆದರೆ ಅವುಗಳಲ್ಲಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಎರಡನೆಯ ಪದ ಯಾವುದೋ ಹಳೆಯ ಪತ್ರಿಕೆಯಿಂದಲೋ ಪುಸ್ತಕದಿಂದಲೋ ಬಂದಿರುತ್ತದೆ! ಅದು ಹೇಗೆ ಎಂದಿರಾ, ಗೂಗಲ್ ಸಂಸ್ಥೆ ಲಕ್ಷಾಂತರ ಮುದ್ರಿತ ಪುಸ್ತಕ-ಪತ್ರಿಕೆಗಳ ಗಣಕೀಕರಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಆದರೆ ಮುದ್ರಿತ ಪಠ್ಯವನ್ನು ಗುರುತಿಸಿ ಗಣಕೀಕರಣಗೊಳಿಸುವ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ತಂತ್ರಾಂಶಗಳಿಗೆ ಎಲ್ಲ ಪದಗಳನ್ನೂ ಸರಿಯಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಅಂತಹ ಪದಗಳ ಚಿತ್ರವನ್ನು ರೀಕ್ಯಾಪ್ಚಾ ವ್ಯವಸ್ಥೆಗೆ ಕಳುಹಿಸಿಕೊಡಲಾಗುತ್ತದೆ.

ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಯಾವುದೇ ಪದವನ್ನು ಒಬ್ಬರಿಗಿಂತ ಹೆಚ್ಚು ಜನ ಒಂದೇ ರೀತಿ ಗುರುತಿಸಿದ ಮೇಲೆ ಅದು ಸರಿಯೇ ತಾನೆ!

ಲಕ್ಷಾಂತರ ಜನ ಪ್ರಪಂಚದ ಮೂಲೆಮೂಲೆಗಳಿಂದ ರೀಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಾಗ ಎಷ್ಟೆಲ್ಲ ಪದಗಳನ್ನು ಅತ್ಯಂತ ಕಡಿಮೆ ಸಮಯದಲ್ಲಿ ಗುರುತಿಸುವುದು ಸಾಧ್ಯವಾಗುತ್ತಿದೆ; ಸ್ಪಾಮ್ ತಡೆಯಲು ರೂಪಗೊಂಡ ಕ್ಯಾಪ್ಚಾ ವ್ಯವಸ್ಥೆ ತನ್ನ ಹೊಸ ಅವತಾರದಲ್ಲಿ ನಮ್ಮ ಇತಿಹಾಸವನ್ನು ಗಣಕೀಕರಣಗೊಳಿಸಲು ನೆರವುನೀಡುತ್ತಿದೆ.

ನವೆಂಬರ್ ೨೩, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge