ಮಂಗಳವಾರ, ನವೆಂಬರ್ 2, 2010

ಬೂಟ್ ಮಾಡಲು ಅರೆಕ್ಷಣ ಸಾಕು

ಟಿ ಜಿ ಶ್ರೀನಿಧಿ

ಗಣಕ ಉಪಯೋಗಿಸುವವರೆಲ್ಲ ಆಪರೇಟಿಂಗ್ ಸಿಸ್ಟಂ ಅಥವಾ ಕಾರ್ಯಾಚರಣ ವ್ಯವಸ್ಥೆ ಎಂಬ ಹೆಸರು ಕೇಳಿಯೇ ಇರುತ್ತಾರೆ. ಗಣಕದ ಪ್ರಾಥಮಿಕ ಚಟುವಟಿಕೆಗಳನ್ನು ನಿಯಂತ್ರಿಸುವ ಜೊತೆಗೆ ಅದರ ವಿವಿಧ ಸೌಲಭ್ಯಗಳನ್ನು ಬಳಸಿಕೊಳ್ಳಲು ನಮಗೆ ಸಹಾಯಮಾಡುವ ತಂತ್ರಾಂಶ ಇದು. ಮೈಕ್ರೋಸಾಫ್ಟ್ ವಿಂಡೋಸ್, ಲಿನಕ್ಸ್ ಮುಂತಾದವು ಕಾರ್ಯಾಚರಣ ವ್ಯವಸ್ಥೆಗೆ ಕೆಲ ಉದಾಹರಣೆಗಳು.

ಗಣಕದಲ್ಲಿ ಯಾವುದೇ ಯಂತ್ರಾಂಶ ಅಥವಾ ತಂತ್ರಾಂಶ ಬಳಸಬೇಕಾದರೂ ಕಾರ್ಯಾಚರಣ ವ್ಯವಸ್ಥೆ ಇರಲೇಬೇಕು. ಅಷ್ಟೇ ಅಲ್ಲ, ಇವುಗಳಲ್ಲಿ ಏನನ್ನು ಬಳಸಬೇಕಾದರೂ ಮೊದಲಿಗೆ ಕಾರ್ಯಾಚರಣ ವ್ಯವಸ್ಥೆ ಪ್ರಾರಂಭವಾಗಿರಬೇಕು.

ನೀವು ಗುಂಡಿ ಒತ್ತಿದ ತಕ್ಷಣವೇ ಗಣಕ ತನ್ನಲ್ಲಿ ಈ ಕಾರ್ಯಾಚರಣ ವ್ಯವಸ್ಥೆ ಎಲ್ಲಿ ಶೇಖರವಾಗಿದೆ ಎಂದು ಹುಡುಕಿ ಅದನ್ನು ಪ್ರಾರಂಭಿಸುತ್ತದೆ. 'ಬೂಟ್' ಮಾಡುವುದು ಎನ್ನುವುದು ಇದಕ್ಕೇ.

ಬೂಟ್ ಮಾಡುವುದು ಬಯಾಸ್ ಎಂಬ ತಂತ್ರಾಂಶದ ಕೆಲಸ. ಬಯಾಸ್ ಎನ್ನುವುದು 'ಬೇಸಿಕ್ ಇನ್‌ಪುಟ್/ಔಟ್‌ಪುಟ್ ಸಿಸ್ಟಂ'ನ ಹ್ರಸ್ವರೂಪ.

ಗಣಕ ಲೋಕದಲ್ಲಿ ಎಲ್ಲವೂ ಅತ್ಯಂತ ಕ್ಷಿಪ್ರವಾಗಿ ಬದಲಾಗುತ್ತಿರುತ್ತವೆ; ಇವತ್ತು ಅತ್ಯಾಧುನಿಕ ಎಂದು ಕರೆಸಿಕೊಳ್ಳುವುದು ನಾಳೆಗಾಗಲೇ ಹಳತಾಗಿರುತ್ತದೆ. ಆದರೆ ಇದಕ್ಕೆ ಅಪವಾದದಂತಿರುವುದು ಈ ಬಯಾಸ್. ಇಪ್ಪತ್ತೈದು ವರ್ಷಗಳ ಹಿಂದೆ ಸೃಷ್ಟಿಯಾದ ಈ ತಂತ್ರಾಂಶ ಇಲ್ಲಿಯವರೆಗೂ ಅಬಾಧಿತವಾಗಿ ಬಳಕೆಯಾಗುತ್ತಾ ಬಂದಿದೆ.

ಬಯಾಸ್ ಸೃಷ್ಟಿಯಾದಾಗ ಅದರ ಆಯುಷ್ಯದ ಬಗೆಗೆ ಹೆಚ್ಚಿನ ನಿರೀಕ್ಷೆಯೇನೂ ಇರಲಿಲ್ಲ. ಹೆಚ್ಚೆಂದರೆ ಎರಡು ಎರಡೂವರೆ ಲಕ್ಷ ಗಣಕಗಳಲ್ಲಷ್ಟೆ ಬಳಕೆಯಾಗಬಹುದು ಎನ್ನಲಾಗಿದ್ದ ಬಯಾಸ್ ೧೯೭೯ರಿಂದ ಇಲ್ಲಿಯವರೆಗೂ ಗಣಕಗಳ ಅವಿಭಾಜ್ಯ ಅಂಗವಾಗಿ ಸಾಗಿಬಂದಿದೆ.

ಆದರೆ ಈ ಸುದೀರ್ಘ ಅವಧಿಯಲ್ಲಿ ಇತರ ತಂತ್ರಾಂಶ-ಯಂತ್ರಾಂಶಗಳು ಆಮೂಲಾಗ್ರವಾಗಿ ಬದಲಾದಂತೆ ಬಯಾಸ್ ಬದಲಾಗಿಲ್ಲ. ಹೀಗಾಗಿ ಹತ್ತು ವರ್ಷಗಳ ಹಿಂದಿನ ಗಣಕ ಬೂಟ್ ಆಗಲು ಎಷ್ಟು ಸಮಯ ತೆಗೆದುಕೊಳ್ಳುತ್ತಿತ್ತೋ ಇಂದಿನ ಅತ್ಯಾಧುನಿಕ ಗಣಕವೂ ಹೆಚ್ಚೂಕಡಿಮೆ ಅಷ್ಟೇ ಸಮಯ ತೆಗೆದುಕೊಳ್ಳುತ್ತಿದೆ.

ಈಗ ಕಡೆಗೂ ಬಯಾಸ್‌ಗೆ ಬದಲಾವಣೆಯ ಸಮಯ ಬಂದಿದೆ. ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ (ಯುಇಎಫ್‌ಐ) ಎಂಬ ಹೊಸ ತಂತ್ರಜ್ಞಾನ ಮುಂದಿನ ವರ್ಷದಿಂದ ಗಣಕಗಳಲ್ಲಿ ಬಯಾಸ್‌ನ ಬದಲಿಗೆ ಕಾಣಿಸಿಕೊಳ್ಳಲಿದೆಯಂತೆ. ಈ ತಂತ್ರಜ್ಞಾನದ ಸಹಾಯದಿಂದ ಗಣಕಗಳನ್ನು ಕೆಲವೇ ಸೆಕೆಂಡುಗಳಲ್ಲಿ ಬೂಟ್ ಆಗುವಂತೆ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಬಯಾಸ್‌ನಲ್ಲಿದ್ದ ಅನೇಕ ಸಮಸ್ಯೆಗಳನ್ನು ಈ ಹೊಸ ತಂತ್ರಜ್ಞಾನ ಹೋಗಲಾಡಿಸಲಿದೆ. ಬಯಾಸ್ ಬಳಸುವ ಗಣಕಗಳಲ್ಲಿ ಎರಡು ಟೆರಾಬೈಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳನ್ನು ಬಳಸುವುದು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಅಷ್ಟೊಂದು ಹೆಚ್ಚಿನ ಸಾಮರ್ಥ್ಯದ ಹಾರ್ಡ್‌ಡಿಸ್ಕ್‌ಗಳು ದೊರಕುತ್ತಿರಲಿಲ್ಲವಾದ್ದರಿಂದ ಈ ಸಮಸ್ಯೆ ಯಾರಿಗೂ ಅಷ್ಟೊಂದು ದೊಡ್ಡದಾಗಿ ಕಂಡಿರಲಿಲ್ಲ. ಆದರೆ ತೀರಾ ಈಚೆಗೆ ವೆಸ್ಟರ್ನ್ ಡಿಜಿಟಲ್ ಸಂಸ್ಥೆ ವಿಶ್ವದ ಮೊದಲ ಮೂರು ಟೆರಾಬೈಟ್ ಹಾರ್ಡ್ ಡಿಸ್ಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾರ್ಡ್ ಡಿಸ್ಕ್ ಬಳಸಬೇಕಾದರೆ ಗಣಕದಲ್ಲಿ ಯುಇಎಫ್‌ಐ ಇರಲೇಬೇಕು (ಈಗಿನ ಗಣಕದಲ್ಲೇ ಇದನ್ನು ಬಳಸಬೇಕು ಎನ್ನುವ ವಿಂಡೋಸ್ ವಿಸ್ತಾ ಅಥವಾ ವಿಂಡೋಸ್ ೭ ಬಳಕೆದಾರರು ಅದಕ್ಕೊಂದು ಪ್ರತ್ಯೇಕ ಅಡಾಪ್ಟರ್ ಕೊಳ್ಳಬೇಕಾಗುತ್ತದೆ).

ಮೊದಲಿಗೆ ಇಂಟೆಲ್ ಸಂಸ್ಥೆಯ ಆಶ್ರಯದಲ್ಲಿ ರೂಪಗೊಂಡ ಯುಇಎಫ್‌ಐ ಇದೀಗ ಒಂದು ಮಾನಕವಾಗಿ ಬೆಳೆಯುತ್ತಿದೆ. ೨೦೧೧ರ ವೇಳೆಗೆ ಪ್ರಪಂಚದಾದ್ಯಂತ ಮಾರಾಟವಾಗುವ ಗಣಕಗಳಲ್ಲಿ ಬಹುಪಾಲು ಈ ತಂತ್ರಜ್ಞಾನವನ್ನೇ ಬಳಸುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಯುಇಎಫ್‌ಐ ತಂತ್ರಜ್ಞಾನ ಈಗಾಗಲೇ ಸಾಕಷ್ಟು ಸಮಯದಿಂದ ಅಭಿವೃದ್ಧಿಯಲ್ಲಿರುವುದನ್ನು ಗಮನಿಸಿದರೆ ಈ ಹೇಳಿಕೆಯನ್ನು ಸಂಪೂರ್ಣವಾಗಿ ನಂಬುವುದು ಕಷ್ಟ ಎಂಬ ಅಭಿಪ್ರಾಯವೂ ಇದೆ.

ಈ ತಂತ್ರಜ್ಞಾನದ ಬಗೆಗಿನ ಹೆಚ್ಚಿನ ವಿವರಗಳು ಯೂನಿಫೈಡ್ ಎಕ್ಸ್‌ಟೆನ್ಸಿಬಲ್ ಫರ್ಮ್‌ವೇರ್ ಇಂಟರ್‌ಫೇಸ್ ಫೋರಂನ ಜಾಲತಾಣದಲ್ಲಿ ಲಭ್ಯವಿವೆ.

ನವೆಂಬರ್ ೨, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

1 ಕಾಮೆಂಟ್‌:

ಮಹೇಶ ಭಟ್ಟ ಹೇಳಿದರು...

ತುಂಬಾ ಆಸಕ್ತಿಕರವಾಗಿದೆ. ಕಂಪ್ಯೂಟರಿನಲ್ಲಿ ಎಲ್ಲವೂ ಬದಲಾದರೂ ಬಯಾನ್ ಮಾತ್ರ ಕಳೆದ 25 ವರ್ಷಗಳಿಂದು ಬದಲಾಗಿಲ್ಲ ಎಂಬುದು ಆಸಕ್ತಿಕರವಾಗಿದೆ

badge