ಟಿ ಜಿ ಶ್ರೀನಿಧಿ
ಆರ್ಕುಟ್ ಡಾಟ್ ಕಾಮ್ - ವಿಶ್ವವ್ಯಾಪಿ ಜಾಲದಲ್ಲಿ ಗೆಳೆಯರೊಡನೆ ಸಂಪರ್ಕದಲ್ಲಿರಲು ಅನುವುಮಾಡಿಕೊಡುವ ತಾಣಗಳಲ್ಲೊಂದು; ವಿಶ್ವವೆಲ್ಲ ಫೇಸ್‌ಬುಕ್ ಜಪ ಮಾಡುತ್ತಿರುವಾಗಲೂ ಭಾರತ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣ. ಈಚೆಗೊಂದು ದಿನ ಈ ತಾಣದಲ್ಲೆಲ್ಲ 'ಬಾಮ್ ಸಬಾಡೋ'ದೇ ಸುದ್ದಿ; ಎರಡು ಪದಗಳ ಈ ಸಂದೇಶವನ್ನು ಕಂಡ ಬಳಕೆದಾರರೆಲ್ಲ ಬೆಚ್ಚಿಬೀಳುವ ಪರಿಸ್ಥಿತಿ.
ಬಾಮ್ ಸಬಾಡೋ ಅಂದರೆ ಪೋರ್ಚುಗೀಸ್ ಭಾಷೆಯಲ್ಲಿ ಶುಭ ಶನಿವಾರ ಎಂದರ್ಥ. ಆರ್ಕುಟ್ ಬಳಕೆದಾರರ ಸ್ಕ್ರಾಪ್‌ಬುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಂದೇಶ ಅವರ ಗೆಳೆಯರ ಹೆಸರಿನಲ್ಲೇ ಬಂದಿರುತ್ತಿತ್ತು; ಅಷ್ಟೇ ಅಲ್ಲ, ಅದರಲ್ಲೊಂದು ಕೊಂಡಿ (ಹೈಪರ್‌ಲಿಂಕ್) ಕೂಡ ಇರುತ್ತಿತ್ತು. ಅಪ್ಪಿತಪ್ಪಿ ಅದರ ಮೇಲೇನಾದರೂ ಕ್ಲಿಕ್ ಮಾಡಿದ್ದೇ ಆದರೆ ಆ ಸಂದೇಶ ಅವರ ಮಿತ್ರರೆಲ್ಲರ ಸ್ಕ್ರಾಪ್‌ಬುಕ್‌ಗೂ ತಲುಪುತ್ತಿತ್ತು. ಜೊತೆಗೆ ಬಳಕೆದಾರರ ಖಾತೆಗೆ ಯಾವ್ಯಾವುದೋ ಕಮ್ಯೂನಿಟಿಗಳು ತನ್ನಷ್ಟಕ್ಕೇ ಸೇರಿಕೊಳ್ಳುತ್ತಿದ್ದವು. ಈ ಸಂದೇಶ ಪಡೆದ ಮಿತ್ರರ ಖಾತೆಯಲ್ಲೂ ಇದೇ ಘಟನಾವಳಿ ರಿಪೀಟ್. ಕೆಲವೇ ಗಂಟೆಗಳಲ್ಲಿ ಇದರ ಹಾವಳಿ ತಡೆಯಲಾರದೆ ಇಡೀ ಆರ್ಕುಟ್ ತಾಣ ಅಲ್ಲಾಡಿಹೋಗಿತ್ತು.
ಇಷ್ಟೆಲ್ಲ ಹಾವಳಿ ಮಾಡಿದ ಬಾಮ್ ಸಬಾಡೋ ಒಂದು ವರ್ಮ್, ಕಂಪ್ಯೂಟರ್‌ಗಳನ್ನು ಕಾಡುವ ಕುತಂತ್ರಾಂಶಗಳಲ್ಲೊಂದು.
ಗಣಕದಲ್ಲಿರುವ ಮಾಹಿತಿಯನ್ನು ಅಳಿಸಿಹಾಕುವುದು, ತಂತ್ರಾಂಶಗಳು ಕೆಲಸಮಾಡದಂತೆ ಮಾಡುವುದು, ಕಡತಗಳನ್ನು ತೆರೆಯಲಾಗದಂತೆ ಮಾಡಿ ಅವುಗಳಲ್ಲಿರುವ ಮಾಹಿತಿ ನಮಗೆ ಸಿಗದಂತೆ ಮಾಡುವುದು, ಅಂತರ್ಜಾಲದ ಸಂಪನ್ಮೂಲಗಳನ್ನು ಸುಖಾಸುಮ್ಮನೆ ಬಳಸಿಕೊಂಡು ನಿಜವಾದ ಬಳಕೆದಾರರಿಗೆ ತೊಂದರೆ ಉಂಟುಮಾಡುವುದು - ಹೀಗೆ ನೂರೆಂಟು ಬಗೆಯಲ್ಲಿ ತೊಂದರೆಕೊಡುವ ದುರುದ್ದೇಶಪೂರಿತ ತಂತ್ರಾಂಶಗಳನ್ನು ಮಾಲ್‌ವೇರ್‌ಗಳೆಂದು ಕರೆಯುತ್ತಾರೆ.
ವರ್ಮ್‌ಗಳು ಈ ಮಾಲ್‌ವೇರ್‌ನ ಒಂದು ವಿಧ. ಈ ತಂತ್ರಾಂಶಗಳು ಗಣಕ ಜಾಲಗಳ ಮೂಲಕ ಹರಡುತ್ತ ಹೋಗಿ ಗಣಕಗಳ ನಡುವಿನ ಮಾಹಿತಿ ಸಂಚಾರಕ್ಕೆ ತಡೆಯೊಡ್ಡುತ್ತವೆ. ವೆಬ್‌ಸರ್ವರ್‌ಗಳ ಮೇಲೆ ದಾಳಿಮಾಡಿ ಅಲ್ಲಿ ಶೇಖರವಾಗಿರುವ ಜಾಲತಾಣದ ಪುಟಗಳನ್ನು ವಿರೂಪಗೊಳಿಸುವ ಉದ್ದೇಶ ಕೂಡ ಕೆಲ ವರ್ಮ್‌ಗಳಿಗಿರುತ್ತದೆ. ಒಂದೇ ಸಮಯದಲ್ಲಿ ಒಂದೇ ಜಾಲತಾಣಕ್ಕೆ ಸಾವಿರಾರು ಗಣಕಗಳಿಂದ ಮಾಹಿತಿಗಾಗಿ ಕೋರಿಕೆ ಕಳುಹಿಸಿ ಆ ತಾಣವನ್ನು ನಿಷ್ಕ್ರಿಯಗೊಳಿಸುವ ಕಾನ್ಸರ್ಟೆಡ್ ಅಟ್ಯಾಕ್‌ಗಳೆಂಬ ದಾಳಿ ನಡೆಸುವುದು ಕೂಡ ವರ್ಮ್‌ಗಳ ಉದ್ದೇಶವಾಗಿರುವುದು ಸಾಧ್ಯ.
ಇನ್ನು ಬಾಮ್ ಸಬಾಡೋನಂತಹ ವರ್ಮ್‌ಗಳು ಜಾಲತಾಣಗಳಲ್ಲಿರುವ ಸುರಕ್ಷತಾ ದೌರ್ಬಲ್ಯಗಳನ್ನು ದುರುಪಯೋಗಪಡಿಸಿಕೊತ್ತವೆ. ಸಾಮಾನ್ಯ ಕೊಂಡಿಯಂತೆಯೇ ಕಾಣುವ ಹೈಪರ್‌ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಬೇರೊಂದು ದುರುದ್ದೇಶಪೂರಿತ ತಾಣಕ್ಕೆ ಕೊಂಡೊಯ್ಯುವುದು, ಬಳಕೆದಾರರ ಖಾಸಗಿ ಮಾಹಿತಿ ಕದಿಯುವುದು ಇವೆಲ್ಲ ಈ 'ಕ್ರಾಸ್-ಸೈಟ್ ಸ್ಕ್ರಿಪ್ಟಿಂಗ್' ವರ್ಮ್‌ಗಳ ಕೆಲಸ. ಆರ್ಕುಟ್ ಮಾತ್ರವಲ್ಲದೆ ಫೇಸ್‌ಬುಕ್, ಟ್ವಿಟರ್ ಮುಂತಾದ ಹಲವಾರು ಸಾಮಾಜಿಕ ಜಾಲತಾಣಗಳು ಈಗಾಗಲೇ ಈ ವರ್ಮ್‌ಗಳಿಂದ ತೊಂದರೆ ಅನುಭವಿಸಿವೆ.
ಈವರೆಗೆ ವರ್ಮ್‌ಗಳ ಹಾವಳಿ ಕೇವಲ ವೈಯುಕ್ತಿಕ ಗಣಕ ಅಥವಾ ಪರ್ಸನಲ್ ಕಂಪ್ಯೂಟರ್‌ಗಳಿಗೆ ಮಾತ್ರ ಸೀಮಿತವಾಗಿತ್ತು. ಸಿಡಿ, ಪೆನ್‌ಡ್ರೈವ್ ಮೂಲಕವೋ ವಿಶ್ವವ್ಯಾಪಿ ಜಾಲದಲ್ಲೋ ಹರಡುವ ಇಂತಹ ವರ್ಮ್‌ಗಳಿಂದ ಉಂಟಾಗುವ ತೊಂದರೆ ದೊಡ್ಡಪ್ರಮಾಣದ್ದೇ ಆದರೂ ಅವುಗಳಿಂದ ಪಾರಾಗುವ ವಿಧಾನ ಸುಲಭ. ವೈರಸ್ ವಿರೋಧಿ ತಂತ್ರಾಂಶಗಳ (ಆಂಟಿ ವೈರಸ್) ಬಳಕೆ, ಅಪರಿಚಿತ ಜಾಲತಾಣಗಳಿಂದ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡದಿರುವುದು, ಸಂಶಯಾಸ್ಪದ ಇಮೇಲ್‌ಗಳನ್ನು ತೆರೆಯದಿರುವುದು, ಸಿಕ್ಕಸಿಕ್ಕ ಹೈಪರ್‌ಲಿಂಕ್‌ಗಳ ಮೇಲೆಲ್ಲ ಕ್ಲಿಕ್ ಮಾಡದಿರುವುದು ಮುಂತಾದ ಕೆಲ ಸರಳ ಕ್ರಮಗಳನ್ನು ಪಾಲಿಸುವುದರಿಂದ ವರ್ಮ್‌ಗಳನ್ನು ದೂರವಿಡುವುದು ಸಾಧ್ಯ.
ಆದರೆ ಇದೀಗ ವರ್ಮ್‌ಗಳ ವ್ಯಾಪ್ತಿ ನಮ್ಮ ನಿಮ್ಮ ಗಣಕಗಳಿಂದಾಚೆಗೆ ಬೆಳೆಯುತ್ತಿದೆ. ಸಂಶೋಧನಾ ಸಂಸ್ಥೆಗಳು, ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು, ಕಾರ್ಖಾನೆಗಳು ಮುಂತಾದ ಕಡೆ ಪ್ರಮುಖ ಚಟುವಟಿಕೆಗಳಲ್ಲಿ ಬಳಕೆಯಾಗುವ ಗಣಕೀಕೃತ ಯಂತ್ರೋಪಕರಣಗಳನ್ನು ಬಾಧಿಸುವ ಸ್ಟಕ್ಸ್‌ನೆಟ್ ಎಂಬ ಕಂಪ್ಯೂಟರ್ ವರ್ಮ್ ಇತ್ತೀಚೆಗೆ ಬೆಳಕಿಗೆ ಬಂದಿದೆ.
ಔದ್ಯಮಿಕ ಕೇಂದ್ರಗಳನ್ನೇ ಗುರಿಯಾಗಿಸಿಕೊಂಡ ಇಂತಹ ವರ್ಮ್‌ಗಳನ್ನು ಸೈಬರ್ ಬ್ರಹ್ಮಾಸ್ತ್ರಗಳೆಂದು ಕರೆಯಬಹುದು. ದೇಶದ ಅತ್ಯಂತ ಮಹತ್ವದ ಕೇಂದ್ರಗಳ ಚಟುವಟಿಕೆಯನ್ನೇ ಹಾಳುಗೆಡವಬಲ್ಲ ಇಂತಹ ವರ್ಮ್‌ಗಳಿಂದ ಉಂಟಾಗಬಹುದಾದ ತೊಂದರೆ ಅಗಾಧ ಪ್ರಮಾಣದ್ದು. ಅತ್ಯುನ್ನತ ಮಟ್ಟದ ತಾಂತ್ರಿಕತೆ ಬಳಸುವ ಈ ಬಗೆಯ ವರ್ಮ್‌ಗಳನ್ನು ವೈರಿದೇಶಗಳು ತಮ್ಮ ಶತ್ರುಗಳಿಗೆ ತೊಂದರೆಕೊಡಲು ಬಳಸುತ್ತಿವೆ ಎಂದು ನಂಬಲಾಗಿದೆ.
ಸ್ಟಕ್ಸ್‌ನೆಟ್ ಹಾವಳಿಯ ಬಗೆಗೆ ಮೊದಲ ಗಂಭೀರ ಸುದ್ದಿ ಬಂದದ್ದು ಇರಾನ್ ದೇಶದಿಂದ. ಅಲ್ಲಿನ ಅಣುಶಕ್ತಿ ಕೇಂದ್ರವೊಂದರ ಯಂತ್ರೋಪಕರಣಗಳು ಈ ವರ್ಮ್‌ನಿಂದ ಬಾಧಿತವಾಗಿರುವ ಸಮಾಚಾರ ವಿಶ್ವದೆಲ್ಲೆಡೆ ಗಾಬರಿ ಮೂಡಿಸಿದೆ. ಇರಾನ್ ಮಾತ್ರವಲ್ಲದೆ ಚೀನಾ, ಇಂಡೋನೇಶಿಯಾ ಮೊದಲಾದೆಡೆಗಳಲ್ಲೂ ಈ ವರ್ಮ್ ಹರಡುತ್ತಿದೆಯಂತೆ.
ಭಾರತದಲ್ಲೂ ಈ ವರ್ಮ್ ಹಾವಳಿ ಕಾಣಿಸಿಕೊಂಡಿದೆ ಎಂದು ಗಣಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಜುಲೈನಲ್ಲಿ ಇದ್ದಕ್ಕಿದ್ದಂತೆ ತೊಂದರೆಗೀಡಾಗಿ ಈಗ ಭಾಗಶಃ ನಿಷ್ಕ್ರಿಯವಾಗಿರುವ ಇನ್‌ಸ್ಯಾಟ್-೪ಬಿ ಉಪಗ್ರಹದ ವೈಫಲ್ಯಕ್ಕೆ ಇದೇ ವರ್ಮ್ ಕಾರಣವಿರಬಹುದು ಎಂದು ಜೆಫ್ರಿ ಕಾರ್ ಎಂಬ ತಜ್ಞ ಹೇಳಿದ್ದಾನೆ. ಈ ಉಪಗ್ರಹದ ವೈಫಲ್ಯದಿಂದಾಗಿ ಭಾರತದ ಎರಡು ಪ್ರಮುಖ ಡಿಟಿಎಚ್ ಸಂಸ್ಥೆಗಳು ಚೀನಾದೇಶದ ಉಪಗ್ರಹವೊಂದರ ಸೇವೆಯನ್ನು ಕೊಳ್ಳಬೇಕಾಯಿತು. ಬಾಹ್ಯಾಕಾಶ ವಿಜ್ಞಾನದಲ್ಲಿ ಹೆಚ್ಚುಹೆಚ್ಚಿನ ಸಾಧನೆ ಮಾಡಲು ಭಾರತ ಹಾಗೂ ಚೀನಾದ ನಡುವೆ ಏರ್ಪಟ್ಟಿರುವ ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ಘಟನೆಯನ್ನು ಗಮನಿಸಿದರೆ ಸೈಬರ್ ಯುದ್ಧದ ಇನ್ನೂ ಕುತೂಹಲಕರ ಅಂಶಗಳು ಹೊರಬರಬಹುದೇನೋ!
ಅಕ್ಟೋಬರ್ ೨೬, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ