ಮಂಗಳವಾರ, ಅಕ್ಟೋಬರ್ 19, 2010

ನೊಬೆಲ್ ಅಲ್ಲ, ಇಗ್-ನೊಬೆಲ್!

ನನ್ನ ಅಂಕಣ 'ವಿಜ್ಞಾಪನೆ' ಇಂದಿನಿಂದ ಉದಯವಾಣಿಯಲ್ಲಿ ಪ್ರಾರಂಭವಾಗಿದೆ. ಪ್ರತಿ ಮಂಗಳವಾರದ ಪುರವಣಿಯಲ್ಲಿ ಪ್ರಕಟವಾಗುವ ಈ ಅಂಕಣದ ಮೊದಲ ಬರಹ ಇಲ್ಲಿದೆ.

ವಿಜ್ಞಾನ ತಂತ್ರಜ್ಞಾನ ಕ್ಷೇತ್ರ ಎಷ್ಟು ರೋಚಕವೋ ಅಷ್ಟೇ ವಿಚಿತ್ರ ಕೂಡ. ವಿಜ್ಞಾನಿಗಳು ಏನೇನನ್ನೋ ಕಂಡುಹಿಡಿಯುತ್ತಿರುತ್ತಾರೆ. ಹೊಸಹೊಸ ಸಿದ್ಧಾಂತಗಳನ್ನು ಮಂಡಿಸುತ್ತಿರುತ್ತಾರೆ; ಉಪಯೋಗವಿದೆಯೋ ಇಲ್ಲವೋ ಚಿತ್ರವಿಚಿತ್ರ ವಸ್ತುಗಳನ್ನು ನಿರಂತರವಾಗಿ ಸೃಷ್ಟಿಸುತ್ತಲೇ ಇರುತ್ತಾರೆ. ಜೀವನವನ್ನೇ ಬದಲಿಸುವಂಥ ಅನ್ವೇಷಣೆಗಳ ಜೊತೆಗೆ ಹಾಸ್ಯಾಸ್ಪದವಾದ ಸಂಶೋಧನೆಗಳೂ ಆಗಿಂದಾಗ್ಗೆ ಸುದ್ದಿಮಾಡುತ್ತಿರುತ್ತವೆ.

ನಮ್ಮ ಜೀವನದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಬಲ್ಲ ಸಂಶೋಧನೆಗಳಿಗೆ ನೂರೆಂಟು ಪ್ರಶಸ್ತಿಗಳಿವೆ; ಯಾವ್ಯಾವುದೋ ಏಕೆ, ನೊಬೆಲ್ ಪ್ರಶಸ್ತಿಯೇ ಇದೆ. ಅದರಲ್ಲೂ ರಾಸಾಯನಶಾಸ್ತ್ರಕ್ಕೆ, ಜೀವಶಾಸ್ತ್ರಕ್ಕೆ, ಭೌತಶಾಸ್ತ್ರಕ್ಕೆ, ವೈದ್ಯವಿಜ್ಞಾನಕ್ಕೆ - ಹೀಗೆ ಬೇರೆಬೇರೆ ವಿಷಯಗಳಿಗೆ ಬೇರೆಯದೇ ಆದ ನೊಬೆಲ್ ಪ್ರಶಸ್ತಿಗಳಿವೆ.

ಆದರೆ ವಿಚಿತ್ರ ಸಂಶೋಧನೆಗಳ ಪಾಡು ಏನಾಗಬೇಕು? ಅವುಗಳ ಸುದ್ದಿ ಕೇಳಿದ ಜನರ ಅಪಹಾಸ್ಯವೇ ಪ್ರಶಸ್ತಿ ಎಂದುಕೊಳ್ಳಲಾದೀತೆ?

ಅಂತಹ ಪರಿಸ್ಥಿತಿ ಬೇಡ ಅಂತಲೇ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಎಂಬ ಸಂಸ್ಥೆ ವಿಚಿತ್ರ ಸಂಶೋಧನೆ-ಅಧ್ಯಯನಗಳಿಗೂ ಪ್ರಶಸ್ತಿ ನೀಡುವ ಪರಿಪಾಠ ಬೆಳೆಸಿಕೊಂಡಿದೆ. ವಿವಿಧ ಕ್ಷೇತ್ರಗಳಲ್ಲಿ ಆಯಾ ವರ್ಷ ದಾಖಲಾಗುವ ಅತ್ಯಂತ ವಿಚಿತ್ರ, ಹಾಸ್ಯಾಸ್ಪದ ಸಾಧನೆಗಳಿಗೆ 'ಇಗ್ನೊಬೆಲ್' ಹೆಸರಿನ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಕಳೆದ ಇಪ್ಪತ್ತೊಂದು ವರ್ಷಗಳಿಂದ ನೀಡಲಾಗುತ್ತಿರುವ ಇಗ್ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲು ನೊಬೆಲ್ ವಿಜೇತರನ್ನೇ ಆಹ್ವಾನಿಸಲಾಗುವುದು ವಿಶೇಷ.

'ಮೊದಲು ನಗಿಸಿ ಆನಂತರ ಯೋಚಿಸುವಂತೆ ಮಾಡುವ ಸಂಶೋಧನೆಗಳಿಗೆ ಈ ಪ್ರಶಸ್ತಿ' ಎನ್ನುವುದು ಇಗ್ನೊಬೆಲ್ ಆಯೋಜಕರ ಹೇಳಿಕೆ. ಅವರು ಎರಡು ತಿಂಗಳಿಗೊಮ್ಮೆ ಪ್ರಕಟಿಸುವ 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಧ್ಯೇಯವಾಕ್ಯವೂ ಇದೇ. ತಮ್ಮ ಸಂಶೋಧನೆಗಳ ಬಗೆಗೆ ಸುಳ್ಳುಹೇಳುವ ಅಥವಾ ಜನರ ಹಿತಕ್ಕೆ ವಿರೋಧವಾಗಿರುವ ಸಂಶೋಧಕ/ಸಂಸ್ಥೆಗಳಿಗೂ ಈ ಪ್ರಶಸ್ತಿ ಆಗಿಂದಾಗ್ಗೆ ಬಿಸಿಮುಟ್ಟಿಸುತ್ತದೆ.

ಈ ವರ್ಷದ ಇಗ್ನೊಬೆಲ್ ಪ್ರಶಸ್ತಿಗಳು ಇತ್ತೀಚೆಗಷ್ಟೆ ಪ್ರಕಟವಾಗಿ ವಿಶ್ವದ ಗಮನಸೆಳೆದಿವೆ. ಕಳೆದ ಸೆಪ್ಟೆಂಬರ್ ೩೦ರಂದು ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ವಿವಿಧ ವಿಜ್ಞಾನಿಗಳಿಗೆ, ಸಂಸ್ಥೆಗಳಿಗೆ ನೀಡಲಾಯಿತು.

ಇಂಜಿನಿಯರಿಂಗ್ ವಿಭಾಗದ ಪ್ರಶಸ್ತಿ ಗೆದ್ದದ್ದು ಬ್ರಿಟನ್ನಿನ ವಿಜ್ಞಾನಿ ಕರೀನಾ ವೈಟ್‌ಹೌಸ್ ಮತ್ತು ಅವರ ತಂಡ. ದೂರನಿಯಂತ್ರಿತ ಹೆಲಿಕಾಪ್ಟರ್ ಬಳಸಿ ತಿಮಿಂಗಿಲಗಳ ಉಸಿರಾಟದ ಅಧ್ಯಯನಮಾಡಿದ್ದು ಈ ತಂಡದ ಸಾಧನೆ. ತಿಮಿಂಗಿಲದ ಉಸಿರಿನಲ್ಲಿರುವ ಅನಿಲಗಳು, ಸಿಂಬಳ ಇತ್ಯಾದಿಗಳ ಅಧ್ಯಯನ ಮಾಡಿ ಅವುಗಳಲ್ಲಿರುವ ರೋಗಕಾರಕ ಸೂಕ್ಷ್ಮಾಣುಗಳನ್ನು ಪತ್ತೆಮಾಡುವುದು ಅವರ ಉದ್ದೇಶವಾಗಿತ್ತು.

ನೆದರ್‌ಲೆಂಡಿನ ಸೈಮನ್ ರೀಟ್‌ವೆಲ್ಡ್ ಮತ್ತು ಸಂಗಡಿಗರಿಗೆ ಆರೋಗ್ಯ ವಿಜ್ಞಾನ ಕ್ಷೇತ್ರದ ಇಗ್ನೊಬೆಲ್ ಪ್ರಶಸ್ತಿ ಬಂತು. ಏರುತಗ್ಗುಗಳಲ್ಲಿ ಅತಿವೇಗದ ಚಲನೆಯ ಅನುಭವ ನೀಡುವ ರೋಲರ್ ಕೋಸ್ಟರ್ ಯಾನ ಆಸ್ತಮಾ ರೋಗಕ್ಕೆ ಮದ್ದು ಎನ್ನುವುದು ಈ ತಂಡದ ಸಂಶೋಧನೆ.

ಭೌತಶಾಸ್ತ್ರದ ಪ್ರಶಸ್ತಿ ಬಂದದ್ದು ಇನ್ನೊಂದು ವಿಶಿಷ್ಟ ಸಂಶೋಧನೆಗೆ. ಚಳಿಗಾಲದಲ್ಲಿ ರಸ್ತೆಗಳಲ್ಲಿ ಹಿಮ ಬೀಳುತ್ತಲ್ಲ, ಆಗ ಜಾರಿಬೀಳುವುದನ್ನು ತಪ್ಪಿಸಲು ಕಾಲುಚೀಲವನ್ನು ಬೂಟಿನ ಮೇಲೆ ಹಾಕಿಕೊಳ್ಳಿ ಎಂದು ಹೇಳಿದ ನ್ಯೂಜಿಲೆಂಡಿನ ವಿಜ್ಞಾನಿಗಳಿಗೆ ಈ ಬಹುಮಾನ ನೀಡಲಾಗಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇಗ್ನೊಬೆಲ್ ಗೆದ್ದ ಸಂಶೋಧನೆಯದು ಇನ್ನೂ ತಮಾಷೆಯ ಕತೆ. ಸೂಕ್ಷ್ಮಜೀವಿಗಳು ಹೆಚ್ಚಾಗಿ ಗಡ್ಡಧಾರಿ ವಿಜ್ಞಾನಿಗಳಿಗೇ ಅಂಟಿಕೊಂಡಿರುತ್ತವೆ ಎಂದು ಕಂಡುಹಿಡಿದ ಅಮೆರಿಕಾದ ವಿಜ್ಞಾನಿಗಳು ಈ ಬಹುಮಾನ ಗೆದ್ದರು.

ಅಂದಹಾಗೆ ಇಗ್ನೊಬೆಲ್ ಪ್ರಶಸ್ತಿಗಳು ಬರಿಯ ವಿಜ್ಞಾನ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ತಾವೂ ಮುಳುಗುವ ಜೊತೆಗೆ ವಿಶ್ವದ ಅರ್ಥವ್ಯವಸ್ಥೆಯನ್ನೂ ಹದಗೆಡಿಸಿದ ಹಣಕಾಸು ಸಂಸ್ಥೆಗಳ ಅಧಿಕಾರಿಗಳಿಗೆ ಅರ್ಥಶಾಸ್ತ್ರ ಕ್ಷೇತ್ರದ ಪ್ರಶಸ್ತಿ ನೀಡಲಾಗಿದೆ. ಅಂತೆಯೇ ಬೇರೆಯವರಿಗೆ ಬಯ್ಯುವುದರಿಂದ ನಿಮ್ಮ ನೋವನ್ನು ಕಡಿಮೆಮಾಡಿಕೊಳ್ಳಬಹುದು ಎಂದು ಕಂಡುಹಿಡಿದವರಿಗೆ ಇಗ್ನೊಬೆಲ್ ಶಾಂತಿ ಪ್ರಶಸ್ತಿ ಬಂದಿದೆ.

ಇಗ್ನೊಬೆಲ್ ಪ್ರಶಸ್ತಿ ಕುರಿತ ಇನ್ನೂ ಹೆಚ್ಚಿನ ವಿವರಗಳು ಈ ತಾಣದಲ್ಲಿ ಲಭ್ಯವಿವೆ. ಇಗ್ನೊಬೆಲ್ ಪರಿಕಲ್ಪನೆಯ ಪರಿಚಯ, ಇದುವರೆಗೂ ಆ ಪ್ರಶಸ್ತಿ ಪಡೆದ ವಿಚಿತ್ರ ಸಂಶೋಧನೆಗಳ ವಿವರ, 'ಆನಲ್ಸ್ ಆಫ್ ಇಂಪ್ರಾಬಬಲ್ ರೀಸರ್ಚ್' ಪತ್ರಿಕೆಯ ಸಂಚಿಕೆಗಳು ಎಲ್ಲ ಇಲ್ಲಿ ದೊರಕುತ್ತವೆ.

ಅಕ್ಟೋಬರ್ ೧೯, ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

3 ಕಾಮೆಂಟ್‌ಗಳು:

Unknown ಹೇಳಿದರು...

Please change your photo

Unknown ಹೇಳಿದರು...

Please change your photo

Dr.A.Sathyanarayana ಡಾ.ಎ.ಸತ್ಯನಾರಾಯಣ ಹೇಳಿದರು...

ಚೆನ್ನಾಗಿದೆ. ವಿಜ್ಞಾನ ವಿಷಯಗಳ ಈ ಕಾಲಂ ನಿರಂತರವಾಗಲಿ... `ಕಾಲಮಿಸ್ಟ'ರಾಗಿ ಮತ್ತೊಮ್ಮೆ ಕಾಣಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಎ.ಸತ್ಯನಾರಾಯಣ

badge