ಗುರುವಾರ, ಅಕ್ಟೋಬರ್ 21, 2010

ಟಾಕಿನ್ ಎಂಬ ವಿಶಿಷ್ಟಜೀವಿ

ಟಿ ಜಿ ಶ್ರೀನಿಧಿ

"ಹದಿನೈದನೇ ಶತಮಾನದಲ್ಲಿ ಭೂತಾನಿನಲ್ಲೊಬ್ಬ ಸಂತನಿದ್ದನಂತೆ. ಆತ ಚಿತ್ರವಿಚಿತ್ರ ಪವಾಡಗಳನ್ನು ಮಾಡಬಲ್ಲ ಎಂಬ ನಂಬಿಕೆ ವ್ಯಾಪಕವಾಗಿತ್ತು. ಆತ ಎಲ್ಲಿಯೇ ಹೋದರೂ ಆತನ ಪವಾಡಗಳನ್ನು ನೋಡಲು ಜನರು ಮುಗಿಬೀಳುತ್ತಿದ್ದರು.

ಇಂಥದ್ದೇ ಒಂದು ಸಂದರ್ಭದಲ್ಲಿ ಆ ಸಂತನನ್ನು ಮುತ್ತಿಕೊಂಡ ಜನರು ತಮಗೇನಾದರೂ ಪವಾಡ ಮಾಡಿ ತೋರಿಸಿ ಅಂತ ದುಂಬಾಲುಬಿದ್ದರು. ಸರಿ ಅದಕ್ಕೇನಂತೆ ಅಂದ ಸಂತ ಮೊದಲು ನನಗೊಂದು ಮೇಕೆ ಮತ್ತೊಂದು ಹಸು ತಂದುಕೊಡಿ ಅಂದರು. ಓಹೋ ಇದೇನೋ ಭಾರೀ ಪವಾಡವೇ ಇರಬೇಕು ಅಂದುಕೊಂಡ ಜನ ಎಲ್ಲಿಂದಲೋ ಒಂದು ಹಸು, ಮೇಕೆ ಎರಡನ್ನೂ ಹಿಡಿದುಕೊಂಡು ಬಂದರೆ ಆ ಸಂತ ಎರಡನ್ನೂ ಹಿಡಿದು ತಿಂದೇಬಿಟ್ಟರು. ಮಿಕ್ಕಿದ್ದು ಬರಿಯ ಮೂಳೆ ಮಾತ್ರ.

ಜನರೆಲ್ಲ ಇದೊಳ್ಳೆ ಕಥೆಯಾಯಿತಲ್ಲ ಅಂದುಕೊಳ್ಳುತ್ತಿರುವಷ್ಟರಲ್ಲೇ ಹಸುವಿನ ದೇಹದ ಮೂಳೆಗಳಿಗೆ ಮೇಕೆಯ ತಲೆಬುರುಡೆ ಅಂಟಿಸಿದ ಸಂತ ಅದಕ್ಕೆ ಜೀವಕೊಟ್ಟರಂತೆ. ತಕ್ಷಣ ಮೇಲೆದ್ದ ಹಸುವಿನ ದೇಹ, ಮೇಕೆಯ ತಲೆಯ ಆ ವಿಚಿತ್ರ ಪ್ರಾಣಿ ಓಡಿಹೋಗಿ ಕಾಡುಸೇರಿತಂತೆ" - ಇದು ಟಾಕಿನ್ ಎಂಬ ವಿಚಿತ್ರಪ್ರಾಣಿ ಸೃಷ್ಟಿಯಾದ ಬಗೆಗೆ ಭೂತಾನಿನಲ್ಲಿ ಪ್ರಚಲಿತದಲ್ಲಿರುವ ಜಾನಪದ ಕತೆ.

ಹಸುವಿನ ದೇಹ, ಮೇಕೆಯ ತಲೆಯ ಟಾಕಿನ್ (Budorcas taxicolor) ಈ ಕಥೆಯಷ್ಟೇ ವಿಚಿತ್ರವಾಗಿರುವುದು ತಮಾಷೆಯ ಸಂಗತಿ. ಜೀವವಿಜ್ಞಾನಿಗಳಿಗೂ ಇದರ ವೈಚಿತ್ರ್ಯ ವಿಶೇಷವಾಗಿ ಕಾಣಿಸಿರುವುದರಿಂದ ಅವರೂ ಈ ಪ್ರಾಣಿಯನ್ನು ತನ್ನದೇ ಆದ ವಿಶೇಷ ಗುಂಪಿಗೆ ಸೇರಿಸಿಬಿಟ್ಟಿದ್ದಾರೆ. ಇನ್ನು ಭೂತಾನ್ ದೇಶವಂತೂ ಟಾಕಿನ್ ಅನ್ನು ತನ್ನ ರಾಷ್ಟ್ರೀಯ ಪ್ರಾಣಿಯಾಗಿ ಗುರುತಿಸಿದೆ.
ಹಿಮಾಲಯದ ಆಸುಪಾಸಿನ ಪ್ರದೇಶ ಹಾಗೂ ಚೀನಾದ ಪಶ್ಚಿಮ ಭಾಗಗಳು ಟಾಕಿನ್‌ಗಳ ನೆಲೆ. ನಾಲ್ಕುಸಾವಿರ ಅಡಿಗೂ ಎತ್ತರದ ಪರ್ವತಪ್ರದೇಶಗಳಲ್ಲಿ ಮಾತ್ರವೇ ಕಂಡುಬರುವ ಟಾಕಿನ್ ತನ್ನ ವಿಶಿಷ್ಟ ರೂಪ ಹಾಗೂ ದಟ್ಟ ತುಪ್ಪಳದಿಂದಾಗಿ ಗಮನಸೆಳೆಯುತ್ತದೆ. ಪರ್ವತ ಪ್ರದೇಶದಲ್ಲಿ ಚಳಿ ತೀವ್ರವಾದಾಗ ಮಾತ್ರ ಇವು ಕೆಳಗಿನ ಕಣಿವೆಗಳತ್ತ ವಲಸೆಹೋಗುತ್ತವೆ.

ಸುಮಾರು ನಾಲ್ಕು ಅಡಿಯಷ್ಟು ಎತ್ತರ ಹಾಗೂ ಐದಾರುನೂರು ಕೆಜಿ ತೂಕದವರೆಗೂ ಬೆಳೆಯುವ ಈ ಪ್ರಾಣಿ ಅಪ್ಪಟ ಸಸ್ಯಾಹಾರಿ. ಗಂಡು ಹೆಣ್ಣು ಎರಡರ ತಲೆ ಮೇಲೂ ಕೊಂಬು ನೋಡಬಹುದು. ತಮ್ಮ ನಿಲುಕಿಗೆ ಸಿಗಬಲ್ಲ ಯಾವುದೇ ಗಿಡ-ಮರದ ಸೊಪ್ಪು ಇವುಗಳ ಮುಖ್ಯ ಆಹಾರ. ಎಲೆಗಳು ಸುಲಭಕ್ಕೆ ನಿಲುಕದಿದ್ದರೆ ಎರಡು ಕಾಲುಗಳ ಮೇಲೆ ನಿಂತು ಅಥವಾ ಇನ್ನು ಕೆಲ ಸಂದರ್ಭಗಳಲ್ಲಿ ಗಿಡವನ್ನೇ ಬೀಳಿಸಿ ಮೇಯುವ ಅಭ್ಯಾಸ ಕೂಡ ಇದೆ.

ಹಗಲುಹೊತ್ತಿನಲ್ಲಿ ಚುರುಕಾಗಿರುವ ಈ ಪ್ರಾಣಿಗಳದು ಗುಂಪುಗಳಲ್ಲಿ ಮೇಯುವ ಅಭ್ಯಾಸ. ಒಂದೇ ಗುಂಪಿನಲ್ಲಿ ಮುನ್ನೂರು ಟಾಕಿನ್‌ಗಳನ್ನು ನೋಡಿರುವವರೂ ಇದ್ದಾರೆ. ಆದರೆ ವಯಸ್ಸಾದ ಗಂಡುಗಳು ಮಾತ್ರ ಒಬ್ಬಂಟಿಯಾಗಿರುತ್ತವೆ.

ಬೇಸಿಗೆಕಾಲ, ಟಾಕಿನ್‌ಗಳ ಸಂತಾನೋತ್ಪತ್ತಿಯ ಸಮಯ. ಏಳೆಂಟು ತಿಂಗಳ ನಂತರ ಹುಟ್ಟುವ ಮರಿ ಮೂರೇ ದಿನದಲ್ಲಿ ತಾಯಿಯೊಡನೆ ಸರಾಗವಾಗಿ ಓಡಾಡಲು ಕಲಿತುಬಿಡುತ್ತದೆ. ಹುಲಿಮರಿಯನ್ನು ಕಬ್ ಎಂದು ಕರೆಯುವಂತೆ ಟಾಕಿನ್ ಮರಿಯನ್ನು ಕಿಡ್ ಎನ್ನುತ್ತಾರೆ.

ಕರಡಿ, ಹಿಮಚಿರತೆ ಹಾಗೂ ತೋಳ ಟಾಕಿನ್‌ನನ್ನು ಕಾಡುವ ಪ್ರಮುಖ ಬೇಟೆಗಾರ ಪ್ರಾಣಿಗಳು. ಮಾನವ ಬೇಟೆಗಾರರ ಉಪಟಳವೂ ಇಲ್ಲದಿಲ್ಲ. ಜೊತೆಗೆ ಅರಣ್ಯಗಳಲ್ಲಿ ಮಾನವನ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಇವುಗಳ ನೆಲೆ ದಿನೇದಿನೇ ಕ್ಷೀಣಿಸುತ್ತಿದೆ; ಮೇವಿಗಾಗಿ ಸಾಕುಪ್ರಾಣಿಗಳೊಡನೆ ಸ್ಪರ್ಧಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.  ಹೀಗಾಗಿ ಇವನ್ನು ಸಂರಕ್ಷಣಾ ದೃಷ್ಟಿಯಿಂದ ತೊಂದರೆಗೊಳಗಾಗಿರುವ ಪ್ರಭೇದ (ವಲ್ನರಬಲ್ ಸ್ಪೀಷೀಸ್) ಎಂದು ಗುರುತಿಸಲಾಗಿದೆ.

ನವೆಂಬರ್ ೨೦೧೦ರ ವಿಜ್ಞಾನ ಲೋಕದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge