ಭಾನುವಾರ, ನವೆಂಬರ್ 28, 2010

ಮೊಬೈಲ್ ಬಗ್ಗೆ ಹೀಗೊಂದು ಬರಹ...

ಹಿಂದೊಮ್ಮೆ ಆಕಾಶವಾಣಿ ಮಡಿಕೇರಿಯ ಫೋನ್-ಔಟ್ ಕಾರ್ಯಕ್ರಮದಲ್ಲಿ ಮಾತನಾಡಲು ಬರೆದಿಟ್ಟಿದ್ದ ನೋಟ್ಸು ಇದು. ಬರೆವಣಿಗೆಯ ಬಗ್ಗೆ ನಿಮ್ಮ ಅನಿಸಿಕೆಗಳಿಗೆ ಸ್ವಾಗತ.

ಈಚಿನ ವರ್ಷಗಳಲ್ಲಿ ನಮ್ಮ ಬದುಕನ್ನು ತೀರಾ ಗಣನೀಯವಾಗಿ ಬದಲಿಸಿರುವ ವಸ್ತುಗಳಲ್ಲಿ ಮೊಬೈಲ್ ದೂರವಾಣಿಗೆ ಬಹಳ ಪ್ರಮುಖವಾದ ಸ್ಥಾನ. ಹೊಸದೊಂದು ವಸ್ತು ಮಾರುಕಟ್ಟೆಗೆ ಪರಿಚಯವಾದ ಕೆಲವೇ ವರ್ಷಗಳ ಅವಧಿಯಲ್ಲಿ ಇಷ್ಟೊಂದು ಜನಪ್ರಿಯವಾಗಿರುವ ಬೇರೆ ಯಾವುದೇ ಉದಾಹರಣೆ, ನಮ್ಮ ದೇಶದ ಮಟ್ಟಿಗಂತೂ, ಇಲ್ಲವೇ ಇಲ್ಲ ಅಂತ ಹೇಳಬೇಕಾಗುತ್ತದೆ.

ಮೊಬೈಲ್ ದೂರವಾಣಿಯ ಕಲ್ಪನೆ ಸುಮಾರು ಐವತ್ತು-ಅರವತ್ತು ವರ್ಷಗಳಷ್ಟು ಹಳೆಯದು. ಸಾಮಾನ್ಯ ದೂರವಾಣಿ - ಅಂದ್ರೆ ಲ್ಯಾಂಡ್‌ಲೈನು - ಆ ವೇಳೆಗಾಗ್ಲೇ ಸಾಕಷ್ಟು ವ್ಯಾಪಕವಾಗಿ ಬಳಕೆಯಾಗುತ್ತಿತ್ತು, ರೇಡಿಯೋ ಕಲ್ಪನೆ ಕೂಡ ಸುಮಾರು ಹಳೆಯದಾಗಿತ್ತು. ಒಬ್ಬರ ಮಾತನ್ನು ಇನ್ನೊಬ್ಬರಿಗೆ ತಲುಪಿಸುವ ಮಾಮೂಲಿ ಫೋನು ತಂತಿಗಳ ನೆರವಿಲ್ಲದೆ - ಅಂದರೆ ರೇಡಿಯೋ ರೀತಿಯಲ್ಲಿ - ಕೆಲಸ ಮಾಡಿದರೆ ಎಷ್ಟೊಂದು ಅನುಕೂಲ ಆಗುತ್ತಲ್ಲ ಎನ್ನುವ ಯೋಚನೆ ಮೊಬೈಲ್ ದೂರವಾಣಿಯ ಸೃಷ್ಟಿಗೆ ಕಾರಣವಾಯಿತು.

ಇದೆಲ್ಲ ಆಗಿದ್ದು ೧೯೪೦-೫೦ರ ದಶಕದಲ್ಲಿ. ಆದರೆ ಅವತ್ತಿನ ಮೊಬೈಲ್ ತಂತ್ರಜ್ಞಾನ ಇವತ್ತಿನಷ್ಟು ಮುಂದುವರೆದಿರಲಿಲ್ಲ. ಫೋನುಗಳು ತೀರಾ ದೊಡ್ಡದಾಗಿದ್ದವು, ಬೆಲೆ ವಿಪರೀತ ಜಾಸ್ತಿ ಇತ್ತು, ಹೋಗಲಿ ಅಂದರೆ ಅದರಲ್ಲಿ ಆಡುವ ಮಾತುಗಳಿಗೆ ಒಂಚೂರೂ ಪ್ರೈವಸಿ ಅನ್ನೋದೇ ಇರಲಿಲ್ಲ. ನೀವು ನಿಮ್ಮ ಹೆಂಡ್ತಿ ಜೊತೇನೋ ಬಾಸ್ ಜೊತೇನೋ ಗರ್ಲ್‌ಫ್ರೆಂಡ್ ಜೊತೇನೋ ಮೊಬೈಲಲ್ಲಿ ಮಾತಾಡ್ತಾ ಇದ್ರೆ ಅದ್ನ ಮೊಬೈಲ್ ಫೋನ್ ಇರುವ ಬೇರೆ ಯಾರು ಬೇಕಾದರೂ ಕೇಳಿಸಿಕೊಳ್ಳುವಂಥ ಪರಿಸ್ಥಿತಿ ಇತ್ತು. ಹೀಗಾಗಿ ಮೊಬೈಲ್ ಫೋನುಗಳಿಗೆ ಒಂದು ಭವಿಷ್ಯ ಇದೆ ಅಂತಲೇ ಯಾರೂ ನಂಬಿರಲಿಲ್ಲ.

ಆದರೆ ಎಲ್ಲಿಂದ ಎಲ್ಲಿಗೆ ಯಾವಾಗ ಬೇಕಾದರೂ ಕರೆಮಾಡುವ ಸೌಲಭ್ಯ ಒದಗಿಸ್ತಲ್ಲ ಈ ಮೊಬೈಲ್ ದೂರವಾಣಿ, ಆ ಅನುಕೂಲ ಮಾತ್ರ ಎಲ್ಲರ ನಿರೀಕ್ಷೆಯನ್ನೂ ಮೀರಿ ಜನಪ್ರಿಯವಾಯ್ತು. ಆದರೆ ಈ ಜನಪ್ರಿಯತೆ ಬರೋದಕ್ಕೆ ಸುಮಾರು ಐವತ್ತು ವರ್ಷ ಕಾಯಬೇಕಾಯ್ತು ಅಷ್ಟೆ.

ನಮ್ಮ ದೇಶದ ಉದಾಹರಣೆಯನ್ನೇ ತೊಗೊಂಡ್ರೆ ನಮ್ಮ ಮಾರುಕಟ್ಟೆಗೆ ಮೊಬೈಲ್ ದೂರವಾಣಿ ಬಂದಿದ್ದು ಸುಮಾರು ಹದಿನೈದು ವರ್ಷಗಳ ಹಿಂದೆ. ಆಗ ಇದ್ದ ಹ್ಯಾಂಡ್‌ಸೆಟ್ಟುಗಳು ಹೆಚ್ಚೂಕಡಿಮೆ ಇವತ್ತಿನ ಕಾರ್ಡ್‌ಲೆಸ್ ಫೋನುಗಳಷ್ಟು ದೊಡ್ಡದಾಗಿದ್ದವು. ಹ್ಯಾಂಡ್‌ಸೆಟ್ ಹೋಗಲಿ, ಮೊಬೈಲ್ ಬಳಸಿ ಮಾತಾಡಬೇಕು ಅಂದರೆ ನಿಮಿಷಕ್ಕೆ ಹದಿನೈದು ಇಪ್ಪತ್ತು ರುಪಾಯಿ ಕೊಡಬೇಕಿತ್ತು. ಔಟ್‌ಗೋಯಿಂಗ್‌ಗೂ ಅಷ್ಟು ದುಡ್ಡು, ಇನ್‌ಕಮಿಂಗ್‌ಗೂ ಅಷ್ಟೇ ದುಡ್ಡು!

ಯಾವಾಗ ಮೊಬೈಲ್ ಕ್ಷೇತ್ರದ ಮೇಲೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಥವಾ ಟ್ರಾಯ್ ಸಂಸ್ಥೆಯ ನಿಯಂತ್ರಣ ಬಂತೋ, ಅಲ್ಲಿಂದ ಪರಿಸ್ಥಿತಿ ನಿಧಾನಕ್ಕೆ ಬದಲಾಯ್ತು. ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿ ಆಯ್ತು, ಹೊಸಹೊಸ ಸಂಸ್ಥೆಗಳು ಮೊಬೈಲ್ ಸಂಪರ್ಕ ಕೊಡೋದಕ್ಕೆ ಪ್ರಾರಂಭಿಸಿದವು. ಇದರಿಂದ ಮೊಬೈಲ್‌ಗಾಗಿ ಮಾಡಬೇಕಾದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಯ್ತು. ತುಂಬಾ ಕಡಿಮೆ ಖರ್ಚಿನಲ್ಲಿ ದೂರವಾಣಿ ಸಂಪರ್ಕ ಸಿಗತ್ತೆ ಅಂತ ಆದ ತಕ್ಷಣ ಜನಪ್ರಿಯತೆನೂ ಜಾಸ್ತಿಯಾಯ್ತು.

ಇದೆಲ್ಲದರ ಪರಿಣಾಮ - ಪ್ರಪಂಚದಲ್ಲೇ ಅತಿ ಹೆಚ್ಚು ಮೊಬೈಲ್ ಸಂಪರ್ಕ ಹೊಂದಿರುವ ದೇಶಗಳಲ್ಲಿ ಭಾರತಕ್ಕೆ ಈಗ ಎರಡನೇ ಸ್ಥಾನ. ಮೊಬೈಲ್ ಸೇವೆಯ ಬೆಲೆ ಅತ್ಯಂತ ಕಡಿಮೆಯಿರುವ ದೇಶಗಳ ಸಾಲಿನಲ್ಲೂ ನಮಗೆ ಪ್ರಮುಖ ಸ್ಥಾನ ಇದೆ.

ಬಳಕೆದಾರರು ಜಾಸ್ತಿ ಆದ ಹಾಗೆ ಮೊಬೈಲ್ ಮೂಲಕ ಲಭ್ಯವಾಗ್ತಾ ಇರುವ ಸೌಲಭ್ಯಗಳೂ ಹೆಚ್ಚುತ್ತಿವೆ. ಮೊಬೈಲಲ್ಲಿ ಕರೆ ಮಾಡಿ ಮಾತಾಡಬಹುದು ಅನ್ನುವ ದಿನಗಳು ಹೋಗಿ ಇತರ ನೂರೆಂಟು ಕೆಲಸಗಳ ಜೊತೆಗೆ ದೂರವಾಣಿ ಕರೆಯನ್ನು ಕೂಡ ಮಾಡಬಹುದು ಅನ್ನುವಂತಹ ಸಂದರ್ಭ ಬಂದಿದೆ. ಎಸ್ಸೆಮ್ಮೆಸ್, ಎಮ್ಮೆಮ್ಮೆಸ್, ವಾಯ್ಸ್‌ಮೇಲ್ ಮುಂತಾದ ಸೌಲಭ್ಯಗಳಿಂದ ಪ್ರಾರಂಭಿಸಿ ಇಮೇಲ್ ಕಳಿಸೋದು, ಇಂಟರ್‌ನೆಟ್ ಬ್ರೌಸಿಂಗ್ ಮಾಡೋದು, ಟೀವಿ ನೋಡೋದು, ವೀಡಿಯೋಕಾನ್ಫರೆನ್ಸಿಂಗ್ - ಹೀಗೆ ನೂರೆಂಟು ಹೊಸ ಸಾಧ್ಯತೆಗಳು ನಮ್ಮ ಮುಂದೆ ಬಂದಿವೆ.

ಮೊಬೈಲ್ ಮೂಲಕ ಅಂತರಜಾಲ ಸಂಪರ್ಕ ಕಲ್ಪಿಸಿಕೊಳ್ಳೋದು ಸಾಧ್ಯ ಆದ ಮೇಲಂತೂ ಕಂಪ್ಯೂಟರ್ ಬಳಸಿ ಏನೇನು ಮಾಡ್ತೀವೋ ಅದೆಲ್ಲವನ್ನೂ ಮೊಬೈಲ್ ಮೂಲಕವೇ ಮಾಡಿಮುಗಿಸೋದು ಸಾಧ್ಯವಾಗಿದೆ. ಬ್ಯಾಂಕಿಂಗ್ ವ್ಯವಹಾರ, ಸಿನಿಮಾ ಟಿಕೆಟ್ ಬುಕಿಂಗ್ ಮಾಡೋದು, ಬೇರೆಬೇರೆ ವೆಬ್‌ಸೈಟುಗಳಲ್ಲಿ ನಮಗೆ ಬೇಕಾದ ಮಾಹಿತಿಗಾಗಿ ಹುಡುಕಾಟ ನಡೆಸೋದು ಇದೆಲ್ಲ ಸಾಧ್ಯವಾಗಿದೆ. ಥ್ರೀ-ಜಿ ಬಂದಮೇಲಂತೂ ನೀವು ಯಾರ ಜೊತೆ ಮಾತಾಡ್ತೀರೋ ಅವರನ್ನ ನಿಮ್ಮ ಫೋನಿನ ಪರದೆಯ ಮೇಲೆ ನೋಡಿಕೊಂಡೇ ಮಾತಾಡುವುದು ಸಾಧ್ಯವಾಗಿದೆ.
ಇನ್ನು ಮೌಲ್ಯವರ್ಧಿತ ಸೇವೆ ಅಥವಾ ವ್ಯಾಲ್ಯೂ ಆಡೆಡ್ ಸರ್ವಿಸ್ - ವಿಎಎಸ್. ಕ್ರಿಕೆಟ್ ಸ್ಕೋರ್ ಇಂದ ಪ್ರಾರಂಭಿಸಿ ದಿನಭವಿಷ್ಯದ ತನಕ ಏನೆಲ್ಲ ಮಾಹಿತಿಯಲ್ಲಿ ನಿಮಗೆ ಆಸಕ್ತಿ ಇದೆಯೋ ಅದೆಲ್ಲ ಎಸ್ಸೆಮ್ಮೆಸ್ ಮಾಧ್ಯಮದಲ್ಲಿ ಸಿಗ್ತಾ ಇದೆ. ಬಿಡುವಿನ ವೇಳೆಯಲ್ಲಿ ಕೇಳಲು ಹಾಡುಗಳನ್ನ ಆಟಾಡೋದಕ್ಕೆ ಗೇಮ್‌ಗಳನ್ನ ಡೌನ್‌ಲೋಡ್ ಮಾಡಿಕೊಳ್ಳೋದು, ರಿಂಗ್‌ಟೋನ್ ಕಾಲರ್ ಟ್ಯೂನ್ ಇವನ್ನೆಲ್ಲ ಇಷ್ಟಬಂದಹಾಗೆ ಇಷ್ಟಬಂದಷ್ಟು ಸಲ ಬದಲಾಯಿಸೋದು ಎಲ್ಲ ಚಿಟಿಕೆ ಹೊಡೆದಷ್ಟು ಸುಲಭ ಆಗಿಬಿಟ್ಟಿದೆ.

ಮೊಬೈಲ್ ಕ್ಷೇತ್ರದಲ್ಲಿ ಆಗಿರುವ ಇಷ್ಟೆಲ್ಲ ಬದಲಾವಣೆಗಳು ಇನ್ನೂ ಅದೆಷ್ಟೋ ಬಗೆಯ ಹೊಸಹೊಸ ಸೌಲಭ್ಯಗಳನ್ನ ನಾವೆಲ್ಲ ನಿರೀಕ್ಷಿಸುವ ಹಾಗೆ ಮಾಡಿವೆ. ಏನೇನಾಗುತ್ತೋ, ಕಾದು ನೋಡೋಣ!

3 ಕಾಮೆಂಟ್‌ಗಳು:

sridhara ಹೇಳಿದರು...

ಆರ್ಥಿಕ ವಲಯದಲ್ಲಿ ಮೊಬೈಲ್ ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಆನ್ ಲೈನ್ ಟ್ರೇಡಿಂಗ್ ಬಿ ಎಸ್ ಇ ನಲ್ಲಿ ಆರಂಭವಾಗಿದೆ. ಮೊಬೈಲ್ ಪೇಮೆಂಟ್ ಕಾರ್ಪೋರೇಷನ್ ಆಫ಼್ ಇಂಡಿಯ ಷುರುವಾಗಿದೆ. ಹಲವಾರು ಬ್ಯಾಂಕುಗಳು ಎಮ್ ಟು ಎಮ್ (ಮೊಬೈಲ್ ಬ್ಯಾಂಕಿಂಗ್ ಬೇರೆ) ಹಣ ರವಾನೆ ಶುರು ಮಾಡಿವೆ. ಫ಼ೈನಾನ್ಶಿಯಲ್ ಇನ್ಕ್ಲೂಷನ್ ನಲ್ಲಂತೂ ಮೊಬೈಲ್ ಪ್ರಮುಖ ಪಾತ್ರ ವಹಿಸುತ್ತಿದೆ.

ಇದು ಬರೀ ಫ಼ೋನ್ ಅಲ್ಲೋ ಅಣ್ಣ..............


ಶ್ರೀಧರ

V.N.Laxminarayana ಹೇಳಿದರು...

ಸದಾ ಅಮಾಯಕರ ಅಂಗೈಯ್ಯಲ್ಲಾಡುವ ಮೊಬೈಲ್ ಗೆ ಅದರ ಕಲ್ಯಾಣಗುಣಗಳನ್ನು ಕೊಂಡಾಡುವ ಜನರು ಹೆಚ್ಚಾಗಿ ಗಮನಿಸದ ಇನ್ನೊಂದು ಆಯಾಮವೂ ಇದೆ.ಅದು ಸಂಪರ್ಕ ಸಂವಹನೆಯ ಹೆಸರಿನಲ್ಲಿ ದಿನಂಪ್ರತಿ ಸುಮಾರು 82 ಕೋಟಿ ಅಮಾಯಕ/ಎಳೆಯ/ತಿಳಿಗೇಡಿ ಭಾರತೀಯರು ತಮ್ಮ ಪುಡಿಗಾಸುಗಳನ್ನು (ಬ್ಯಾಟರಿ ಬೆಲೆ/ಖರ್ಚು ಸೇರಿದಂತೆ)ಪ್ರತಿ ತಿಂಗಳೂ ಸರಾಸರಿ24600ಕೋಟಿ ರೂ.ಗಳಲೆಕ್ಕದಲ್ಲಿ ಗೊತ್ತಿಲ್ಲದಂತೆ ವಿಶ್ವದ ಶ್ರೀಮಂತ ಉದ್ಯಮಿಗಳಿಗೆ ವೃಥಾ ವರ್ಗಾಯಿಸುವ ಮಾಧ್ಯಮ.ಇದರಲ್ಲಿ ಮೊಬೈಲ್ ಉಪಕರಣಗಳ ಸರಾಸರಿ ಕನಿಷ್ಠಬೆಲೆ 174000 ಕೋಟಿ ರೂ ಸೇರಿಲ್ಲ. ಇದಲ್ಲದೆ ಆರೋಗ್ಯದ ಸಮಸ್ಯೆಗಳೂ ಇವೆಯೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇಲ್ಲವೆನ್ನುತ್ತಾರೆ. ಟವರ್ ಗಳದ್ದು ಬೇರೆಯದೇ ಆದ ಕತೆಯಿದೆ. ಮೊಬೈಲನ್ನು ಕೇವಲ ತುರ್ತು ಸಂಪರ್ಕ ಮಾಧ್ಯಮವನ್ನಾಗಿ ಮಾತ್ರ ಬಳಸಿದರೆ ಅನೇಕ ಉದ್ಯಮಿಗಳು ದಿವಾಳಿಯಾಗುತ್ತಾರೆ, ಇಲ್ಲವೆ ಮೊಬೈಲ್ ಸಂಪರ್ಕ ದುಬಾರಿಯಾಗುತ್ತದೆ.

V.N.Laxminarayana ಹೇಳಿದರು...

ಸದಾ ಅಮಾಯಕರ ಅಂಗೈಯ್ಯಲ್ಲಾಡುವ ಮೊಬೈಲ್ ಗೆ ಅದರ ಕಲ್ಯಾಣಗುಣಗಳನ್ನು ಕೊಂಡಾಡುವ ಜನರು ಹೆಚ್ಚಾಗಿ ಗಮನಿಸದ ಇನ್ನೊಂದು ಆಯಾಮವೂ ಇದೆ.ಅದು ಸಂಪರ್ಕ ಸಂವಹನೆಯ ಹೆಸರಿನಲ್ಲಿ ದಿನಂಪ್ರತಿ ಸುಮಾರು 82 ಕೋಟಿ ಅಮಾಯಕ/ಎಳೆಯ/ತಿಳಿಗೇಡಿ ಭಾರತೀಯರು ತಮ್ಮ ಪುಡಿಗಾಸುಗಳನ್ನು (ಬ್ಯಾಟರಿ ಬೆಲೆ/ಖರ್ಚು ಸೇರಿದಂತೆ)ಪ್ರತಿ ತಿಂಗಳೂ ಸರಾಸರಿ24600ಕೋಟಿ ರೂ.ಗಳಲೆಕ್ಕದಲ್ಲಿ ಗೊತ್ತಿಲ್ಲದಂತೆ ವಿಶ್ವದ ಶ್ರೀಮಂತ ಉದ್ಯಮಿಗಳಿಗೆ ವೃಥಾ ವರ್ಗಾಯಿಸುವ ಮಾಧ್ಯಮ.ಇದರಲ್ಲಿ ಮೊಬೈಲ್ ಉಪಕರಣಗಳ ಸರಾಸರಿ ಕನಿಷ್ಠಬೆಲೆ 174000 ಕೋಟಿ ರೂ ಸೇರಿಲ್ಲ. ಇದಲ್ಲದೆ ಆರೋಗ್ಯದ ಸಮಸ್ಯೆಗಳೂ ಇವೆಯೆಂದು ಕೆಲವರು ಹೇಳಿದರೆ ಇನ್ನು ಕೆಲವರು ಇಲ್ಲವೆನ್ನುತ್ತಾರೆ. ಟವರ್ ಗಳದ್ದು ಬೇರೆಯದೇ ಆದ ಕತೆಯಿದೆ. ಮೊಬೈಲನ್ನು ಕೇವಲ ತುರ್ತು ಸಂಪರ್ಕ ಮಾಧ್ಯಮವನ್ನಾಗಿ ಮಾತ್ರ ಬಳಸಿದರೆ ಅನೇಕ ಉದ್ಯಮಿಗಳು ದಿವಾಳಿಯಾಗುತ್ತಾರೆ, ಇಲ್ಲವೆ ಮೊಬೈಲ್ ಸಂಪರ್ಕ ದುಬಾರಿಯಾಗುತ್ತದೆ.

badge