ಟಿ. ಜಿ. ಶ್ರೀನಿಧಿ
ಮನೆ-ಕಚೇರಿಗಳಲ್ಲಿ ವೈ-ಫಿ ಸಂಪರ್ಕ ಅಭ್ಯಾಸವಾದವರಿಗೆ, ನಗರಗಳಲ್ಲಿ ಸದಾಕಾಲ ಥ್ರೀಜಿ-ಫೋರ್‌ಜಿಗಳ ವ್ಯಾಪ್ತಿ ಪ್ರದೇಶದಲ್ಲೇ ಇರುವವರಿಗೆ ಅಂತರಜಾಲ ಸಂಪರ್ಕವೆನ್ನುವುದು ಜೀವನದ ಒಂದು ಅವಿಭಾಜ್ಯ ಅಂಗ. ಇಂತಹವರಿಗೆ ಪ್ರವಾಸದ ಸಂದರ್ಭದಲ್ಲೂ ನಿರಂತರವಾಗಿ ಅಂತರಜಾಲ ಸಂಪರ್ಕ ಇರಲೇಬೇಕು ಎನಿಸುತ್ತಿರುತ್ತದೆ.
ಹೋದ ಜಾಗದಲ್ಲೇನೋ ಸರಿ - ತೀರಾ ದೂರದ ಪ್ರದೇಶಗಳನ್ನು ಹೊರತುಪಡಿಸಿ ಬಹಳಷ್ಟು ಕಡೆ ಅಂತರಜಾಲ ಸಂಪರ್ಕ ಸಿಕ್ಕಿಬಿಡುತ್ತದೆ. ಕಾರಿನಲ್ಲೋ, ಬಸ್ಸು-ರೈಲಿನಲ್ಲೋ ಪ್ರಯಾಣಿಸುವಾಗಲೂ ಮೊಬೈಲ್ ಸಂಪರ್ಕ ಇದ್ದ ಬಹುತೇಕ ಕಡೆಗಳಲ್ಲೊ ಅಂತರಜಾಲಾಟ ಸಾಧ್ಯ.
"ಮೊಬೈಲ್ ಸಂಪರ್ಕ ಇದ್ದ ಕಡೆ" ಎನ್ನುವುದೇ ಇಲ್ಲಿನ ದೊಡ್ಡ ಸಮಸ್ಯೆ. ನಗರ ಪ್ರದೇಶಗಳಲ್ಲಿ, ಹೆದ್ದಾರಿಗಳಲ್ಲಿ ಮೊಬೈಲ್ ಸಂಪರ್ಕ ಸಮಸ್ಯೆಯೇನಲ್ಲ. ಆದರೆ ಹೆದ್ದಾರಿಗಳನ್ನು ಬಿಟ್ಟು ದೂರಹೋದಂತೆ ಮೊಬೈಲ್ ಸಂಪರ್ಕ ಸಿಗುವುದು ಕಷ್ಟವಾಗುತ್ತದೆ; ಅಂತರಜಾಲ ನಮ್ಮಿಂದ ದೂರವೇ ಉಳಿಯುತ್ತದೆ.
ಕಚೇರಿ ಜಂಜಾಟದಿಂದ ಬೇಸತ್ತು ಪ್ರವಾಸ ಹೊರಟವರಿಗೆ ಅಂತರಜಾಲದ ಕಾಟವಿಲ್ಲ ಎನ್ನುವುದು ಖುಷಿಯ ವಿಷಯವೇ ಇರಬಹುದು. ಆದರೆ ಪ್ರಯಾಣಿಸುತ್ತಿರುವುದು ಕೆಲಸದ ಮೇಲೆಯೇ ಆದರೆ? ಬೇಕೆಂದಾಗ ಅಂತರಜಾಲ ಸಂಪರ್ಕ ದೊರಕದಿದ್ದರೆ ಕೆಲಸವೂ ಹಾಳು, ಸಮಯವೂ ವ್ಯರ್ಥ.
ಹೌದು, ನಮ್ಮ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಒಂದಷ್ಟು ಕಾಲ ಅಂತರಜಾಲ ಸಂಪರ್ಕ ಇಲ್ಲದಿದ್ದರೆ ಕಚೇರಿಯ ಕೆಲಸವೇ ನಡೆಯುವುದಿಲ್ಲ. ಸಿಬ್ಬಂದಿ ಎಲ್ಲೇ ಇದ್ದರೂ ಸರಿ, ಅವರು ಬೇಕೆಂದಾಗ ಅಂತರಜಾಲ ಸಂಪರ್ಕಕ್ಕೆ ಸಿಗುವಂತಿರಬೇಕು ಎನ್ನುತ್ತವೆ ಸಂಸ್ಥೆಗಳು.
ಹೀಗಿರುವಾಗ ಕಚೇರಿ ಕೆಲಸದ ಮೇಲೆ ಪ್ರಯಾಣಿಸುವ ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಸತತವಾಗಿ ಹಲವು ಗಂಟೆಗಳ ಕಾಲ ಅಂತರಜಾಲ ಸಂಪರ್ಕವಿಲ್ಲದೆ ಇರುವುದು ಎಲ್ಲಾದರೂ ಸಾಧ್ಯವೆ?
"ಖಂಡಿತ ಇಲ್ಲ, ಇಂದಿನ ಕಾಲದಲ್ಲಿ ಅಂತರಜಾಲ ಸಂಪರ್ಕ ಎಲ್ಲೆಡೆಯೂ ಸಿಗುತ್ತದೆ" ಎಂದಿರಾದರೆ ನಿಮ್ಮ ಉತ್ತರ ತಪ್ಪು. ಏಕೆಂದರೆ ಪ್ರಪಂಚದ ಬಹಳಷ್ಟು ಕಡೆಗಳಲ್ಲಿ ವಿಮಾನಯಾನ ಕೈಗೊಳ್ಳುವವರು ತಮ್ಮ ಪ್ರಯಾಣದ ಬಹುಸಮಯವನ್ನು ಅಂತರಜಾಲ ಸಂಪರ್ಕವಿಲ್ಲದೆ ಕಳೆಯುತ್ತಾರೆ, ಅವರು ಎಷ್ಟೇ ದೊಡ್ಡ ಸಂಸ್ಥೆಯ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ!
ನಿಜ. ತಂತ್ರಜ್ಞಾನ ಪ್ರಪಂಚ ಎಷ್ಟೆಲ್ಲ ಬೆಳೆದಿದ್ದರೂ ವಿಮಾನದಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇನ್ನೂ ವ್ಯಾಪಕವಾಗಿ ಬಳಕೆಗೆ ಬಂದಿಲ್ಲ. ಇದಕ್ಕೆ ಕಾರಣವೇನೆಂದು ಹುಡುಕಲು ಹೊರಟಾಗ ಕೆಲ ಕುತೂಹಲಕರ ಅಂಶಗಳು ನಮ್ಮೆದುರು ನಿಲ್ಲುತ್ತವೆ.
ಬಸ್ಸು ರೈಲುಗಳಲ್ಲಿ ಪ್ರಯಾಣಿಸುವಾಗ ನಾವು ಮೊಬೈಲ್ ಬಳಸಲು ಯಾವ ಅಡ್ಡಿಯೂ ಇಲ್ಲ. ಮೊಬೈಲ್ ನೆಟ್‌ವರ್ಕ್ ಇದ್ದರೆ ಸಾಕು, ಇನ್ನೇನು ಅಂತರಜಾಲ ಸಂಪರ್ಕವೂ ಸಿಕ್ಕ ಹಾಗೆಯೇ. ಆದರೆ ವಿಮಾನಗಳಲ್ಲಿ ಮೊಬೈಲ್ ಬಳಕೆ ನಿಷಿದ್ಧ; ಅಷ್ಟೆತ್ತರದಲ್ಲಿ ಹಾರುವಾಗ ಮೊಬೈಲ್ ಸಂಪರ್ಕ ಸಿಗುತ್ತದೋ ಇಲ್ಲವೋ ಎಂದು ಪರೀಕ್ಷಿಸುವುದಕ್ಕೂ ಮೊಬೈಲ್ ಫೋನ್ ಉಪಯೋಗಿಸುವಂತಿಲ್ಲ.
ಹಾಗಾಗಿ ವಿಮಾನಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಬೇಕೆಂದರೆ ವಿಮಾನಯಾನ ಸಂಸ್ಥೆಗಳು ಪ್ರತ್ಯೇಕ ವ್ಯವಸ್ಥೆಯನ್ನೇ ಮಾಡಬೇಕಾಗುತ್ತದೆ. ಆ ಸಂಸ್ಥೆಗಳಿಗಿರುವ ಮೊದಲ ಆಯ್ಕೆಯೆಂದರೆ ಆಕಾಶದಿಂದ ಭೂಮಿಯನ್ನು ಸಂಪರ್ಕಿಸುವುದು (ಏರ್ - ಟು - ಗ್ರೌಂಡ್) - ಅಂದರೆ, ಭೂಮಿಯ ಮೇಲಿನ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಸಂಪರ್ಕಿಸಿ ಅವುಗಳ ಮೂಲಕ ಅಂತರಜಾಲ ಸಂಪರ್ಕ ಒದಗಿಸುವುದು. ಇದು ಪ್ರಾಯೋಗಿಕವಾಗಿ ಸಾಧ್ಯ; ಆದರೆ ಇಡೀ ವಿಮಾನ ಒಂದೇ ಸಂಪರ್ಕ ಬಳಸಬೇಕಾದ್ದರಿಂದ ಅಷ್ಟೂ ಜನ ಪ್ರಯಾಣಿಕರು ಲಭ್ಯವಿರುವ ಬ್ಯಾಂಡ್‌ವಿಡ್ತ್ ಅನ್ನು ಹಂಚಿಕೊಳ್ಳಬೇಕಾಗುತ್ತದೆ. ಅಂದರೆ, ಅಂತರಜಾಲ ಸಂಪರ್ಕ ತೀರಾ ನಿಧಾನವಾಗಿರುತ್ತದೆ. ಭೂಮಿಯ ಮೇಲೆ ಥ್ರೀಜಿ-ಫೋರ್‌ಜಿ ವೇಗದಲ್ಲಿ ಹಾರುತ್ತಿದ್ದವರಿಗೆ ಆಕಾಶದಲ್ಲಿ ಡಯಲ್-ಅಪ್ ಸಂಪರ್ಕ ಕೊಟ್ಟ ಹಾಗಾಗುತ್ತದೆ ಈ ಕತೆ.
ಇದಕ್ಕೆ ಪರ್ಯಾಯವೆಂದರೆ ಉಪಗ್ರಹ ಆಧಾರಿತ ಸೇವೆಯನ್ನು ಒದಗಿಸುವುದು. ಉಪಗ್ರಹಗಳೊಡನೆ ಸಂಪರ್ಕ ಏರ್ಪಡಿಸಿಕೊಂಡು ಎಲ್ಲ ಪ್ರಯಾಣಿಕರಿಗೂ ಸಾಕಷ್ಟು ವೇಗದ ಅಂತರಜಾಲ ಸಂಪರ್ಕ ನೀಡುವುದು ಈ ವ್ಯವಸ್ಥೆಯಲ್ಲಿ ಸಾಧ್ಯ. ಹಲವು ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಈಗಾಗಲೇ ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಿಕೊಂಡಿವೆ. ಆದರೆ ಇದಕ್ಕೆ ತಗುಲುವ ಖರ್ಚು ವಿಪರೀತ: ಕಳೆದ ವರ್ಷದ ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯೊಂದು ಮೂರು ಎಂಬಿ ಮಿತಿಯೊಳಗೆ ಅಂತರಜಾಲ ಸಂಪರ್ಕ ಬಳಸಿಕೊಳ್ಳಲು ನೂರಿಪ್ಪತ್ತು ರೂಪಾಯಿ ಶುಲ್ಕ ವಿಧಿಸಿತ್ತು. ಮೂರು ಎಂಬಿಯ ಈ ಮಿತಿ ಫೇಸ್‌ಬುಕ್‌ನಲ್ಲೋ ಜಿಮೇಲ್‌ನಲ್ಲೋ ಐದು ನಿಮಿಷ ಕಳೆಯುವಷ್ಟರಲ್ಲೇ ಮುಗಿದುಹೋಗಿರುತ್ತದೆ. ಅಲ್ಲದೆ ಭೂಮಿಯ ಮೇಲೆ ಮೊಬೈಲ್ ಬ್ರಾಡ್‌ಬ್ಯಾಂಡ್ ಬಳಸಿದರೆ ಇಷ್ಟೇ ಹಣಕ್ಕೆ ಕನಿಷ್ಠ ನೂರು ಪಟ್ಟು ಹೆಚ್ಚು ಪ್ರಮಾಣದ ದತ್ತಾಂಶವನ್ನು ಬಳಸಿಕೊಳ್ಳಬಹುದು!
ಆಕಾಶದ ಈ ಅಂತರಜಾಲ ಸಾಮಾನ್ಯ ಬಳಕೆದಾರರಿಗೆ ದುಬಾರಿಯೆನಿಸಿದರೂ ಕೆಲಸದ ಮೇಲೆ ಪ್ರಯಾಣಿಸುವವರ ನಡುವೆ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿದೆ. ಹಾಗಾಗಿ ಹಲವು ವಿಮಾನಯಾನ ಸಂಸ್ಥೆಗಳು ಇದೀಗ ಹೆಚ್ಚುಹೆಚ್ಚು ಸಂಖ್ಯೆಯ ವಿಮಾನಗಳಲ್ಲಿ ಅಂತರಜಾಲ ಸಂಪರ್ಕ ಕಲ್ಪಿಸಲು ಪ್ರಾರಂಭಿಸಿವೆ. ಬಹುತೇಕ ನಷ್ಟದಲ್ಲಿ, ಇಲ್ಲವೇ ಬಹಳ ಕಡಿಮೆ ಲಾಭಾಂಶದಲ್ಲಿ ನಡೆಯುವ ಈ ಸಂಸ್ಥೆಗಳಿಗೆ ಇದೊಂದು ಆದಾಯದ ಹೊಸ ಮಾರ್ಗವಾಗಬಹುದೆಂಬ ಆಶಾಭಾವನೆ ಕೂಡ ಇದೆ.
ಭಾರತದಿಂದ ಹೊರದೇಶಗಳಿಗೆ ತೆರಳುವ ಕೆಲ ವಿಮಾನಗಳಲ್ಲಿ ಈಗಾಗಲೇ ಅಂತರಜಾಲ ಸಂಪರ್ಕ ದೊರಕುತ್ತಿದೆ. ಆದರೆ ನಮ್ಮ ದೇಶದೊಳಗೇ ಸಂಚರಿಸುವ ವಿಮಾನಗಳಲ್ಲಿ ಈವರೆಗೆ ಅಂತರಜಾಲ ಸಂಪರ್ಕ ಲಭ್ಯವಿರಲಿಲ್ಲ. ಇದೀಗ ನಮ್ಮಲ್ಲೂ ಈ ಸೇವೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಸರಕಾರ ಆಲೋಚಿಸುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ.
ಎಲ್ಲ ವಿಮಾನಗಳಲ್ಲೂ ಅಂತರಜಾಲ ಸಂಪರ್ಕ ದೊರಕುವಂತಾಗಲು ಕೊಂಚ ಸಮಯ ಬೇಕಾಗಬಹುದು, ನಿಜ. ಆದರೆ ಸರಕಾರದ ಅನುಮತಿ ದೊರಕುತ್ತಿದ್ದಂತೆ ಕೆಲವು ಸಂಸ್ಥೆಗಳಾದರೂ ಈ ಸೇವೆ ಪ್ರಾರಂಭಿಸಬಹುದು ಎನ್ನುವ ನಿರೀಕ್ಷೆಯಿದೆ. ಅಂದರೆ ಇನ್ನುಮುಂದೆ ಫೇಸ್‌ಬುಕ್‌ನಲ್ಲಿ "ಬೆಂಗಳೂರು ವಿಮಾನ ನಿಲ್ದಾಣದಲ್ಲಿದ್ದೇನೆ" ಎನ್ನುವ ಸ್ಟೇಟಸ್‌ಗೂ "ಮುಂಬಯಿ ತಲುಪಿದೆ" ಎನ್ನುವ ಸ್ಟೇಟಸ್‌ಗೂ ನಡುವೆ "ಆಕಾಶದಲ್ಲಿ ಸ್ಯಾಂಡ್‌ವಿಚ್ ತಿನ್ನುತ್ತಿದ್ದೇನೆ" ಎನ್ನುವ ಸಂದೇಶ ಕಾಣಸಿಗಬಹುದು, ಜೊತೆಗೆ ಸ್ಯಾಂಡ್‌ವಿಚ್ ಚಿತ್ರವೂ ಮೂಡಬಹುದು. ಬಹುಶಃ ಆ ಸಂದೇಶ ಸ್ಯಾಂಡ್‌ವಿಚ್‌ನಷ್ಟೇ ದುಬಾರಿಯಾಗಿರುತ್ತದೋ ಏನೋ!
ಏಪ್ರಿಲ್ ೧೩, ೨೦೧೫ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ