ಶುಕ್ರವಾರ, ಜೂನ್ 7, 2019

ವಾರಾಂತ್ಯ ವಿಶೇಷ: ಸೆನ್ಸರ್ ಎಂಬ ಸರ್ವಾಂತರ್ಯಾಮಿ

ಟಿ. ಜಿ. ಶ್ರೀನಿಧಿ


ಬೈಕಿನ ಕೀಲಿ ತಿರುಗಿಸುತ್ತಿದ್ದಂತೆಯೇ ಅದರಲ್ಲಿ ಎಷ್ಟು ಪೆಟ್ರೋಲ್ ಇದೆ ಎಂಬ ಮಾಹಿತಿ ನಮ್ಮ ಕಣ್ಣಿಗೆ ಬೀಳುತ್ತದೆ. ದೊಡ್ಡ ಹೋಟಲಿನಲ್ಲಿ ಊಟ ಮುಗಿಸಿ ಕೈತೊಳೆಯಲು ಹೋದರೆ ಅಲ್ಲಿನ ನಲ್ಲಿ ನಾವು ಕೈಯೊಡ್ಡಿದ ಕೂಡಲೇ ಸ್ವಯಂಚಾಲಿತವಾಗಿ ನೀರು ಬಿಡುತ್ತದೆ. ಕಾರು ರಿವರ್ಸ್ ಗೇರಿನಲ್ಲಿದ್ದಾಗ ಯಾವುದಾದರೂ ವಸ್ತುವೋ ವ್ಯಕ್ತಿಯೋ ಅಡ್ಡಬಂದರೆ ಅದರಲ್ಲಿರುವ ಸುರಕ್ಷತಾ ವ್ಯವಸ್ಥೆ ಸದ್ದುಮಾಡಿ ಎಚ್ಚರಿಸುತ್ತದೆ.

ಇದೆಲ್ಲ ಸಾಧ್ಯವಾಗುವುದು ಹೇಗೆಂದು ಹುಡುಕಲು ಹೊರಟರೆ ನಮಗೆ ಸಿಗುವುದು ಸೆನ್ಸರ್ ಎಂಬ ವಸ್ತು.

ನಿರ್ದಿಷ್ಟ ಸಂಗತಿಗಳನ್ನು ಗ್ರಹಿಸಿ ಅದಕ್ಕೆ ಪೂರ್ವನಿರ್ಧಾರಿತ ಪ್ರತಿಕ್ರಿಯೆ ನೀಡುವುದು (ಉದಾ: ಪೆಟ್ರೋಲ್ ಟ್ಯಾಂಕಿನಲ್ಲಿರುವ ಇಂಧನದ ಪ್ರಮಾಣ ಗ್ರಹಿಸಿ ಆ ಮಾಹಿತಿಯನ್ನು ಡ್ಯಾಶ್‌ಬೋರ್ಡಿಗೆ ಕಳಿಸುವುದು) ಈ ವಸ್ತುವಿನ ಕೆಲಸ. ಇದನ್ನು ಕನ್ನಡದಲ್ಲಿ 'ಸಂವೇದಿ' ಎಂದು ಕರೆಯುತ್ತಾರೆ. ತಾಪಮಾನ, ಚಲನೆ, ಒತ್ತಡ, ಶಬ್ದ, ಬೆಳಕು ಮುಂತಾದ ಅನೇಕ ಸಂಗತಿಗಳನ್ನು ಇವು ಗ್ರಹಿಸಬಲ್ಲವು.

ನಾವು ಪ್ರತಿದಿನವೂ ಬಳಸುವ ಹಲವಾರು ಸಾಧನಗಳಲ್ಲಿ ಸೆನ್ಸರುಗಳು ಸಾಕಷ್ಟು ಸಂಖ್ಯೆಯಲ್ಲಿರುತ್ತವೆ, ಮತ್ತು ನಮಗೆ ಗೊತ್ತಿಲ್ಲದೆಯೇ ನಾವು ಅವುಗಳ ಪ್ರಯೋಜನ ಪಡೆಯುತ್ತಿರುತ್ತೇವೆ. ಜ್ವರ ಬಂದಾಗ ಬಳಸುವ ಥರ್ಮಾಮೀಟರಿನಿಂದ ಹಿಡಿದು ಆಕಾಶದಲ್ಲಿ ಹಾರಾಡುವ ವಿಮಾನಗಳವರೆಗೆ ಪ್ರತಿಯೊಂದು ಕಡೆಯೂ ಈಗ ಸೆನ್ಸರುಗಳದ್ದೇ ಸಾಮ್ರಾಜ್ಯ!

ನಮಗೆಲ್ಲ ಅಂತರಜಾಲದ (ಇಂಟರ್‌ನೆಟ್) ಪರಿಚಯವಾದಾಗ ಅದು ವಿಶ್ವದೆಲ್ಲೆಡೆಯ ಕಂಪ್ಯೂಟರುಗಳನ್ನು ಸಂಪರ್ಕಿಸುವ ಜಾಲ ಎನ್ನುವ ಭಾವನೆಯಿತ್ತು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಕಂಪ್ಯೂಟರು - ಮೊಬೈಲುಗಳ ಜೊತೆಗೆ ಇನ್ನಿತರ ವಿದ್ಯುನ್ಮಾನ ಸಾಧನಗಳು, ಗೃಹೋಪಯೋಗಿ ವಸ್ತುಗಳು, ಯಂತ್ರಗಳು, ವಾಹನಗಳು ಎಲ್ಲವೂ ಅಂತರಜಾಲದ ಭಾಗವಾಗಿ ಬೆಳೆಯುತ್ತಿವೆ; ಕಂಪ್ಯೂಟರುಗಳ ಅಂತರಜಾಲ ಇದೀಗ 'ವಸ್ತುಗಳ ಅಂತರಜಾಲ'ವಾಗಿ (ಇಂಟರ್‌ನೆಟ್ ಆಫ್ ಥಿಂಗ್ಸ್) ಬದಲಾಗುತ್ತಿದೆ.

ಈ ಬದಲಾವಣೆಯಲ್ಲೂ ಸೆನ್ಸರುಗಳು ಮಹತ್ವದ ಪಾತ್ರ ವಹಿಸುತ್ತಿವೆ. ಮುಂಗೈಯ ವಾಚು ನಮ್ಮ ಹೃದಯ ಬಡಿತದ ಮೇಲೆ ನಿಗಾ ಇಡುವುದಕ್ಕೂ ಅಂಗೈಯ ಮೊಬೈಲು ನಾವು ಹೋಗಬೇಕಾದ ಹಾದಿ ತೋರಿಸುವುದಕ್ಕೂ ಸಾಧ್ಯವಾಗುವುದು ಬೇರೆಬೇರೆ ರೀತಿಯ ಸೆನ್ಸರುಗಳಿಂದಾಗಿಯೇ. ಕಿವಿಯ ಬಳಿ ಒಯ್ದೊಡನೆಯೇ ಮೊಬೈಲಿನ ಪರದೆ ನಿಷ್ಕ್ರಿಯವಾಗುವುದು, ಫೋನ್ ತಿರುಗಿಸಿದಾಗ ಅದರಲ್ಲಿ ಮೂಡಿರುವ ಚಿತ್ರವೂ ತಿರುಗುವುದು, ಮೊಬೈಲು ನಮ್ಮ ಬೆರಳೊತ್ತನ್ನು (ಫಿಂಗರ್‌ಪ್ರಿಂಟ್) ಗುರುತಿಸುವುದು - ಇವೆಲ್ಲದರ ಹಿಂದೆಯೂ ಸೆನ್ಸರುಗಳ ಕೈವಾಡ ಇರುತ್ತದೆ.

ವೈಯಕ್ತಿಕ ಬಳಕೆಯ ಸಾಧನಗಳಷ್ಟೇ ಅಲ್ಲ, ದೊಡ್ಡದೊಡ್ಡ ಕಾರ್ಖಾನೆಗಳಲ್ಲಿ ಯಂತ್ರಗಳ ಕಾರ್ಯಾಚರಣೆಯ ಮೇಲೂ ಸೆನ್ಸರುಗಳು ನಿಗಾ ಇಡಬಲ್ಲವು. ನಿಗಾ ಇಡುವುದರ ಜೊತೆಗೆ ಅವುಗಳಿಂದ ಉಪಯುಕ್ತ ದತ್ತಾಂಶ ಸಂಗ್ರಹಿಸಿ ರವಾನಿಸುವ ಪ್ರಕ್ರಿಯೆಯನ್ನೂ ನಿರಂತರವಾಗಿ ಮಾಡಬಲ್ಲವು. ಹೀಗೆ ದೊರೆತ ದತ್ತಾಂಶವನ್ನು ಸೂಕ್ತವಾಗಿ ಸಂಸ್ಕರಿಸುವುದರಿಂದ ಬಹುಮೂಲ್ಯ ಮಾಹಿತಿಯನ್ನು ಪಡೆದುಕೊಳ್ಳುವುದು ಮತ್ತು ಉಪಯೋಗಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ಉದಾಹರಣೆಗೆ, ಕಾರ್ಖಾನೆಯ ಯಾವುದೋ ಯಂತ್ರ ಸುದೀರ್ಘ ಅವಧಿಯವರೆಗೆ ಒಂದು ನಿರ್ದಿಷ್ಟ ತಾಪಮಾನ ಹಾಗೂ ವೇಗದಲ್ಲಿ ಕೆಲಸಮಾಡುತ್ತಿದೆ ಎಂದುಕೊಳ್ಳಿ. ಇದೇ ಮಟ್ಟವನ್ನು ಕಾಪಾಡಿಕೊಳ್ಳದಿದ್ದರೆ ಯಂತ್ರದಲ್ಲಿ ದೋಷ ಕಾಣಿಸಿಕೊಳ್ಳಬಹುದು, ಕಾರ್ಖಾನೆಯ ಕಾರ್ಯಾಚರಣೆಗೆ ತೊಂದರೆಯಾಗಬಹುದು. ಆ ಯಂತ್ರಕ್ಕೆ ಸೆನ್ಸರುಗಳನ್ನು ಅಳವಡಿಸಿದ್ದರೆ ಅದರಿಂದ ಸತತವಾಗಿ ದೊರಕುವ ದತ್ತಾಂಶ ಬಳಸಿ ಇಂತಹ ಯಾವುದೇ ಅನಿರೀಕ್ಷಿತ ಬದಲಾವಣೆಯನ್ನು ಥಟ್ಟನೆ ಗ್ರಹಿಸಬಹುದು, ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬಹುದು.

ಇಂತಹ ಪ್ರಯೋಜನಗಳು ದೊಡ್ಡದೊಡ್ಡ ಯಂತ್ರಗಳಿಗೆ, ಕಾರ್ಖಾನೆಗಳಿಗೆ ಮಾತ್ರವೇ ಸೀಮಿತವೇನಲ್ಲ. ನಮ್ಮ ಸ್ಮಾರ್ಟ್ ಕೈಗಡಿಯಾರದಲ್ಲಿರುವ ಸೆನ್ಸರುಗಳು ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು (ಹೃದಯಬಡಿತದ ದರ ಇತ್ಯಾದಿ) ಗಮನಿಸುತ್ತಿರುತ್ತವಲ್ಲ, ಅವು ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ ನಮ್ಮ ಆರೋಗ್ಯದಲ್ಲಿ ಉಂಟಾಗುವ ಏರುಪೇರುಗಳ ಬಗ್ಗೆ ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ದೂರವಾಣಿ ಹಾಗೂ ಅಂತರಜಾಲದ ಮೂಲಕ ವೈದ್ಯಕೀಯ ಸೇವೆ ಒದಗಿಸುವುದು ಕೂಡ ಸೆನ್ಸರುಗಳಿಂದಾಗಿ ಸಾಧ್ಯವಾಗುತ್ತದೆ.

ಇಂತಹ ಉದ್ದೇಶಗಳಿಗಾಗಿ ಸೆನ್ಸರ್ ಬಳಕೆ ಹಾಗಿರಲಿ, ಸೆನ್ಸರುಗಳನ್ನೇ ಆಧರಿಸಿ ರೂಪುಗೊಂಡಿರುವ ಪರಿಕಲ್ಪನೆಗಳೂ ಇವೆ. ಈಚೆಗೆ ಸುದ್ದಿಯಲ್ಲಿರುವ ಸ್ವಯಂಚಾಲಿತ ವಾಹನಗಳ ಪರಿಕಲ್ಪನೆ ಇದಕ್ಕೊಂದು ಉದಾಹರಣೆ. ಚಾಲಕರ ಅಗತ್ಯವಿಲ್ಲದೆ ಚಲಿಸುವ ಈ ವಾಹನಗಳು ಪ್ರತಿ ಹಂತದಲ್ಲೂ ಬೇರೆಬೇರೆ ರೀತಿಯ ಸೆನ್ಸರುಗಳನ್ನು ಅವಲಂಬಿಸಿರುತ್ತವೆ. ಹೋಗಬೇಕಾದ ದಾರಿ, ಆಸುಪಾಸಿನ ವಾಹನ ಹಾಗೂ ಅಡೆತಡೆಗಳು, ವಾಹನದಿಂದ ಅವುಗಳ ದೂರ - ಇವೆಲ್ಲವನ್ನೂ ವಾಹನದಲ್ಲಿರುವ ಕಂಪ್ಯೂಟರಿಗೆ ಹೇಳುವುದು ಸೆನ್ಸರಿನದೇ ಕೆಲಸ. ಸ್ಮಾರ್ಟ್‌ಫೋನು, ಸ್ಮಾರ್ಟ್ ಮನೆಗಳ ವಿಸ್ತರಣೆಯಾಗಿ ಸ್ಮಾರ್ಟ್ ನಗರಗಳು ರೂಪುಗೊಳ್ಳುತ್ತಿವೆಯಲ್ಲ, ಅಲ್ಲೂ ಸೆನ್ಸರುಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಅಂತರಿಕ್ಷಕ್ಕೆ ಹಾರುವ ರಾಕೆಟ್ ಹಾಗೂ ಉಪಗ್ರಹಗಳೂ ಬೇರೆಬೇರೆ ರೀತಿಯ ಸೆನ್ಸರುಗಳನ್ನು ಬಳಸುತ್ತವೆ.

ಇಷ್ಟೆಲ್ಲ ವೈವಿಧ್ಯಮಯ ಕೆಲಸಗಳನ್ನು ಮಾಡುವುದರಿಂದಲೇ ತಂತ್ರಜ್ಞಾನದ ಜಗತ್ತಿನಲ್ಲಿ ಸೆನ್ಸರುಗಳಿಗೆ ಈಗ ರಾಜಮರ್ಯಾದೆ. ೨೦೨೫ರ ವೇಳೆಗೆ ಜಾಗತಿಕ ಸೆನ್ಸರ್ ಮಾರುಕಟ್ಟೆಯ ವಾರ್ಷಿಕ ವಹಿವಾಟು ಇಪ್ಪತ್ತು ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಈ ಕ್ಷೇತ್ರ ವಿಶ್ವದಾದ್ಯಂತ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದೂ ಅಂದಾಜಿಸಲಾಗಿದೆ.

ಜೂನ್ ೨೦೧೯ರ ತುಷಾರದಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge