ಬುಧವಾರ, ಜುಲೈ 24, 2019

ಫೇಸ್ಆಪ್ ಎಂಬ ಹೊಸ ಮುಖ: ಎಷ್ಟು ಸುಖ, ಎಷ್ಟು ದುಃಖ?

ಟಿ. ಜಿ. ಶ್ರೀನಿಧಿ


ಸಮಾಜಜಾಲಗಳಲ್ಲಿ ಸದಾಕಾಲ ಹೊಸ ವಿಷಯಗಳದೇ ಸುದ್ದಿ. ಸುದ್ದಿ ಮಾತ್ರವೇ ಏಕೆ, ಕೆಲವು ವಿಷಯಗಳು ಬಳಕೆದಾರರಲ್ಲಿ ಅತ್ಯುತ್ಸಾಹವನ್ನೂ ಮೂಡಿಸಿಬಿಡುತ್ತವೆ.

ಈಚಿನ ಕೆಲ ವಾರಗಳಲ್ಲಿ ಇಂತಹ ಅತ್ಯುತ್ಸಾಹಕ್ಕೆ ಕಾರಣವಾಗಿರುವ ವಿಷಯಗಳ ಪೈಕಿ 'ಫೇಸ್‌ಆಪ್' ಎಂಬ ಮೊಬೈಲ್ ತಂತ್ರಾಂಶಕ್ಕೆ ಪ್ರಮುಖ ಸ್ಥಾನವಿದೆ. ರಷ್ಯನ್ ಸಂಸ್ಥೆಯೊಂದು ಎರಡು ವರ್ಷಗಳ ಹಿಂದೆಯೇ ರೂಪಿಸಿದ್ದರೂ ಈಗ ದಿಢೀರ್ ಜನಪ್ರಿಯತೆ ಗಳಿಸಿಕೊಂಡಿರುವುದು ಈ ಆಪ್‌ನ ಹೆಚ್ಚುಗಾರಿಕೆ. ಫೇಸ್‌ಬುಕ್ ಹಾಗೂ ವಾಟ್ಸ್‌ಆಪ್ ಎರಡೂ ಹೆಸರುಗಳ ಅರ್ಧರ್ಧ ಸೇರಿಸಿ ಹೆಸರಿಟ್ಟಂತೆ ತೋರುವ ಈ ತಂತ್ರಾಂಶವನ್ನು ಈವರೆಗೆ ಗೂಗಲ್ ಪ್ಲೇಸ್ಟೋರ್‌ ಒಂದರಿಂದಲೇ ಹತ್ತು ಕೋಟಿಗೂ ಹೆಚ್ಚುಬಾರಿ ಡೌನ್‌ಲೋಡ್ ಮಾಡಿಕೊಳ್ಳಲಾಗಿದೆ!

ಈ ಆಪ್ ಮಾಡುವ ಕೆಲಸ? ನಮ್ಮ ಫೋಟೋಗಳನ್ನು ಬೇರೆಬೇರೆ ರೀತಿಯಲ್ಲಿ ಬದಲಿಸಿಕೊಡುವುದು. ಅಷ್ಟೇ ಆಗಿದ್ದರೆ ಈ ಕೆಲಸವನ್ನು ಬೇರೆ ಆಪ್‌ಗಳೂ ಮಾಡುತ್ತವಲ್ಲ ಎನ್ನಬಹುದಾಗಿತ್ತು. ಏಕೆಂದರೆ ನಮ್ಮ ಫೋಟೋಗೆ ಟೋಪಿ-ಕನ್ನಡಕ ತೊಡಿಸುವ, ಮೊಲದ ಕಿವಿ-ಬೆಕ್ಕಿನ ಮೀಸೆ ಸೇರಿಸುವ ಬೇಕಾದಷ್ಟು ಆಪ್‌ಗಳು ಈಗಾಗಲೇ ಇವೆ.

ಅಷ್ಟಕ್ಕೇ ಸೀಮಿತವಾಗದೆ ನಮ್ಮ ಚಿತ್ರಗಳಲ್ಲಿ ಗಮನಾರ್ಹ ಬದಲಾವಣೆ ತಂದುಕೊಡುವುದು ಫೇಸ್‌ಆಪ್‌ನ ಹೆಚ್ಚುಗಾರಿಕೆ. ಹೇರ್‌ಸ್ಟೈಲ್ ಬದಲಿಸುವುದಿರಲಿ, ನಗದವರನ್ನೂ ನಗಿಸುವುದಿರಲಿ, ಫೋಟೋದಲ್ಲಿರುವವರ ವಯಸ್ಸಿಗೆ ಒಂದಷ್ಟು ವರ್ಷಗಳನ್ನು ಸೇರಿಸುವುದೇ ಇರಲಿ - ಇದು ಎಲ್ಲವನ್ನೂ ಮಾಡಬಲ್ಲದು. ಫೋಟೋಶಾಪ್‌ನಲ್ಲಿ ಮಾಡಲು ಪರಿಣತರಿಗೂ ಸಾಕಷ್ಟು ಸಮಯ ಬೇಕಾಗುವಂತಹ ಬದಲಾವಣೆಗಳು ಈ ಆಪ್‌ನಲ್ಲಿ ಚಿಟಿಕೆ ಹೊಡೆದಷ್ಟು ಸುಲಭ!

ಮೂವತ್ತು ವರ್ಷದ ವ್ಯಕ್ತಿಗೆ ಐವತ್ತು ವರ್ಷ ವಯಸ್ಸಾದಾಗ ಆತ ಹೇಗೆ ಕಾಣಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದು, ಆ ಕಲ್ಪನೆಯನ್ನು ಚಿತ್ರರೂಪದಲ್ಲಿ ತೋರಿಸುವುದು ಸುಲಭದ ಸಂಗತಿಯೇನಲ್ಲ. ಈ ಕೆಲಸವನ್ನು ಥಟ್ಟನೆ ಮಾಡಿಕೊಡಲು ತಾನು ಕೃತಕ ಬುದ್ಧಿಮತ್ತೆಯನ್ನು (ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಐ) ಬಳಸುವುದಾಗಿ ಫೇಸ್‌ಆಪ್ ಹೇಳಿಕೊಂಡಿದೆ. ಅಸಂಖ್ಯ ಛಾಯಾಚಿತ್ರಗಳನ್ನು ನೋಡಿ ಕಲಿತಿರುವ ವಿಷಯಗಳನ್ನು ಬಳಸುವ ಅವರ ತಂತ್ರಾಂಶ ಅದರ ನೆರವಿನಿಂದ ನಮ್ಮ ಸೆಲ್ಫಿಗಳನ್ನು ಬದಲಿಸುತ್ತದಂತೆ.


ಕೃತಕ ಬುದ್ಧಿಮತ್ತೆಯಂತಹ ಇಂದಿನ ತಂತ್ರಜ್ಞಾನಗಳಿಂದ ಏನೆಲ್ಲ ಸಾಧ್ಯವಾಗಬಹುದು ಎನ್ನುವುದನ್ನು ತೋರಿಸಲು ಇದೊಂದು ಉತ್ತಮ ಉದಾಹರಣೆ, ಸರಿ. ಆದರೆ ಇದೇ ಉದಾಹರಣೆ ತಂತ್ರಜ್ಞಾನದಿಂದ ಆಗಬಹುದಾದ ಕೆಡುಕುಗಳ ಬಗ್ಗೆಯೂ ಚಿಂತಿಸುವಂತೆ ಮಾಡುತ್ತಿದೆ ಎನ್ನುವುದು ವಿಷಾದದ ಸಂಗತಿ.
ಚಹರೆಯನ್ನು ನೋಡಿ ವ್ಯಕ್ತಿಗಳನ್ನು ಗುರುತಿಸುವ (ಫೇಸ್ ರೆಕಗ್ನಿಶನ್) ತಂತ್ರಜ್ಞಾನದ ಅಗಾಧ ಸಾಧ್ಯತೆಗಳ ಕಾರಣದಿಂದಾಗಿ ಅದು ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಫೇಸ್‌ಆಪ್ ಸಂಗ್ರಹಿಸುತ್ತಿರುವ ಮಾಹಿತಿ ಅಂತಹ ತಂತ್ರಜ್ಞಾನದ ಅಭಿವೃದ್ಧಿಗೆ ಬಳಕೆಯಾಗಬಹುದು ಎನ್ನುವ ಅಂಶ, ಅದರ ಬಗ್ಗೆಯೂ ಸಂಶಯಗಳನ್ನು ಹುಟ್ಟುಹಾಕಿದೆ.
ಫೇಸ್‌ಆಪ್ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಆತಂಕಕ್ಕೆ ಕಾರಣ, ಅದು ಬಳಕೆದಾರರ ಚಿತ್ರಗಳನ್ನು ನಿಭಾಯಿಸುತ್ತಿರುವ ವಿಧಾನ. ಕೃತಕ ಬುದ್ಧಿಮತ್ತೆ ಬಳಸಿ ಚಿತ್ರಗಳನ್ನು ಬದಲಿಸಲು ಹೆಚ್ಚಿನ ಸಂಸ್ಕರಣಾ ಸಾಮರ್ಥ್ಯ ಬೇಕು, ಹಾಗಾಗಿ ನಿಮ್ಮ ಚಿತ್ರಗಳನ್ನು ನಾವು ನಮ್ಮ ಸರ್ವರ್‌ಗೆ ವರ್ಗಾಯಿಸಿಕೊಳ್ಳುತ್ತೇವೆ ಎನ್ನುವುದು ಫೇಸ್‌ಆಪ್ ಸಂಸ್ಥೆಯ ವಾದ. ಆದರೆ ವಾಸ್ತವ ಇಷ್ಟು ಸರಳವಾಗಿಲ್ಲ. ಒಮ್ಮೆ ಪಡೆದುಕೊಂಡ ಚಿತ್ರಗಳನ್ನು ನಾವು ಯಾವಾಗ ಹೇಗೆ ಬೇಕಾದರೂ ಬಳಸಿಕೊಳ್ಳಲು ಸ್ವತಂತ್ರರಿದ್ದೇವೆ ಎಂಬ ಅಂಶ ಅವರ ನಿಬಂಧನೆಗಳ ಪಟ್ಟಿಯಲ್ಲಿದೆ. ನಮ್ಮ ಚಿತ್ರವನ್ನು ಚೆಂದಗಾಣಿಸುವ ಆತುರದಲ್ಲಿ ನಾವು ಅದನ್ನೆಲ್ಲ ಓದದೆಯೇ ಓಕೆ ಒತ್ತುತ್ತಿದ್ದೇವೆ.

ನಮ್ಮ ಖಾಸಗಿ ಮಾಹಿತಿಯನ್ನು ಜೋಪಾನಮಾಡಿಕೊಳ್ಳುವ ನಿಟ್ಟಿನಿಂದ ಇಂತಹ ಅಜಾಗರೂಕತೆ ಒಳ್ಳೆಯದಲ್ಲ ಎಂದು ಮಾಹಿತಿ ಸುರಕ್ಷತೆ ಕ್ಷೇತ್ರದ ತಜ್ಞರು ಅಭಿಪ್ರಾಯಪಡುತ್ತಾರೆ. ಮೊಬೈಲ್ ಫೋನಿನ ದುರ್ಬಳಕೆ ತಡೆಯಲು 'ಫೇಸ್ ಅನ್‌ಲಾಕ್‌'‌ನಂತಹ (ಚಹರೆ ಗುರುತಿಸಿ ಪರದೆಯ ಬೀಗ ತೆಗೆಯುವ) ಸೌಲಭ್ಯ ಬಳಸಿಕೊಳ್ಳುವ ನಾವು, ಅದೇ ಮೊಬೈಲಿನಲ್ಲಿರುವ ಫೇಸ್‌ಆಪ್‌ನಂತಹ ತಂತ್ರಾಂಶಗಳಿಗೆ ನಮ್ಮ ಫೋಟೋಗಳನ್ನು ಮುಕ್ತವಾಗಿ ಕೊಟ್ಟುಬಿಡುವುದು ಎಷ್ಟು ಸರಿ ಎನ್ನುವುದು ಅವರ ಪ್ರಶ್ನೆ. ಫೇಸ್‌ಆಪ್ ಒಂದೇ ಅಲ್ಲ, ಕಂಡಕಂಡ ಆಪ್‌ಗಳನ್ನೆಲ್ಲ ಹಿಂದೆಮುಂದೆ ನೋಡದೆ ಇಳಿಸಿಕೊಳ್ಳುವುದು - ಅವು ಕೇಳಿದ ಅನುಮತಿಗಳನ್ನೆಲ್ಲ ಕಣ್ಣುಮುಚ್ಚಿ ಕೊಟ್ಟುಬಿಡುವುದು ಖಂಡಿತಾ ಒಳ್ಳೆಯದಲ್ಲ ಎಂದು ಅವರು ಹೇಳುತ್ತಾರೆ.
ಈ ಹಿಂದೆ ಸಾಕಷ್ಟು ಸುದ್ದಿಮಾಡಿದ್ದ ಕೇಂಬ್ರಿಜ್ ಅನಲಿಟಿಕಾ ಪ್ರಕರಣದಲ್ಲಿ ಬಳಕೆದಾರರ ಮಾಹಿತಿಯನ್ನು ರಸಪ್ರಶ್ನೆಯ ಸೋಗಿನಲ್ಲಿ ಕದ್ದು ಬಳಸಲಾಗಿತ್ತು. ಇದೀಗ ಸೆಲ್ಫಿ ಚೆಂದಗಾಣಿಸುವ ನೆಪದಲ್ಲಿ ಫೇಸ್‌ಆಪ್ ನಮ್ಮ ಚಿತ್ರಗಳನ್ನು ಪಡೆದುಕೊಳ್ಳುತ್ತಿರುವುದು ಮತ್ತೊಂದು ಸಂಭಾವ್ಯ ದುರ್ಬಳಕೆಯ ಸಂದೇಹ ಮೂಡಿಸಿದೆ.
ಲಕ್ಷಾಂತರ ಬಳಕೆದಾರರ ಮಾಹಿತಿಯನ್ನು ಮುಕ್ತವಾಗಿ ಬಳಸಿಕೊಳ್ಳುವ ಸ್ವಾತಂತ್ರ್ಯ, ಈಗ ಫೇಸ್‌ಆಪ್‌ಗೆ ಸಿಕ್ಕಿರುವಂತೆ, ಯಾವುದೇ ತಂತ್ರಾಂಶ ಅಥವಾ ತಂತ್ರಜ್ಞಾನಕ್ಕೆ ಸಿಕ್ಕಿದರೆ ಏನಾಗಬಹುದು ಎಂದು ಊಹಿಸುವುದು ಬಹಳ ಕಷ್ಟವೇನಲ್ಲ. ಯಾರದೇ ಛಾಯಾಚಿತ್ರಗಳು ಹಾಗೂ ಧ್ವನಿಯ ದಾಖಲೆ ಬಳಸಿಕೊಂಡು ಅವರು ಹೇಳಿಯೇ ಇಲ್ಲದ್ದನ್ನೆಲ್ಲ ಹೇಳಿದಂತೆ ತೋರಿಸುವ ವೀಡಿಯೋಗಳನ್ನು ಸೃಷ್ಟಿಸುವ 'ಡೀಪ್ ಫೇಕ್' ತಂತ್ರಜ್ಞಾನ ಈಗಾಗಲೇ ಇದೆ. ತಮ್ಮ ಮಾಹಿತಿಯನ್ನೆಲ್ಲ ಹಿಂದೆಮುಂದೆ ಯೋಚಿಸದೆ ಹಂಚಿಕೊಳ್ಳುತ್ತಿರುವ ಬಳಕೆದಾರರಿರುವಾಗ ಆ ಮಾಹಿತಿಯೇನಾದರೂ ಇಂತಹ ತಂತ್ರಜ್ಞಾನದ ಅಭಿವೃದ್ಧಿಗಾಗಿ ಬಳಕೆಯಾದರೆ ಅದರಿಂದ ಏನು ಬೇಕಾದರೂ ಆಗಬಹುದು. ಇಂದು ಫೇಸ್‌ಆಪ್‌ಗೆ ಚಿತ್ರಗಳನ್ನು ಪೂರೈಸುತ್ತಿರುವ ನಾವು, ನಾಳೆ ಇನ್ನಾವುದೋ ತಂತ್ರಾಂಶದಲ್ಲಿ ಧ್ವನಿಯನ್ನು ರೆಕಾರ್ಡ್ ಮಾಡುವ ಟ್ರೆಂಡ್ ಸೃಷ್ಟಿಯಾದರೆ ಅದನ್ನೂ ಕಣ್ಣುಮುಚ್ಚಿಕೊಂಡು ಮಾಡುವುದಿಲ್ಲ ಎನ್ನುವುದಾದರೂ ಹೇಗೆ?

ಹೊಸ ಸಾಧ್ಯತೆಗಳನ್ನು ಪರೀಕ್ಷಿಸಿನೋಡುವ ನಮ್ಮ ಆತುರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವ ಉದಾಹರಣೆಗಳು ಫೇಸ್‌ಆಪ್ ಪ್ರಕರಣದಲ್ಲೇ ಕಾಣಸಿಕ್ಕಿವೆ. 'ಫೇಸ್‌ಆಪ್' ಹೆಸರನ್ನೇ ಹೋಲುವ ಹಲವು ನಕಲಿ ಆಪ್‌ಗಳು ಸೃಷ್ಟಿಯಾಗಿದ್ದು, ಇನ್‌ಸ್ಟಾಲ್ ಮಾಡಿಕೊಂಡ ಬಳಕೆದಾರರ ಮೊಬೈಲಿಗೆ ಅವು ಕುತಂತ್ರಾಂಶಗಳನ್ನು (ಮಾಲ್‌ವೇರ್) ಸೇರಿಸುತ್ತಿವೆ ಎಂದು ಸುರಕ್ಷತಾ ಸಂಸ್ಥೆಯೊಂದು ಎಚ್ಚರಿಸಿರುವ ವಿಷಯ ಈಗಾಗಲೇ ಸಾಕಷ್ಟು ಸುದ್ದಿಮಾಡಿದೆ.
ಯಾವುದೇ ಆಪ್ ಇರಲಿ, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಅದು ಯಾವೆಲ್ಲ ಅನುಮತಿಗಳನ್ನು (ಪರ್ಮಿಶನ್ಸ್) ಕೇಳುತ್ತಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಬಸ್ ಟಿಕೇಟ್ ಖರೀದಿಸಲು ಬಳಸುವ ತಂತ್ರಾಂಶ ನಿಮ್ಮ ಮೊಬೈಲಿನಲ್ಲಿರುವ ಕಡತಗಳನ್ನೆಲ್ಲ ನೋಡಲು ಅನುಮತಿ ಕೇಳಿದರೆ ಅದು ನಿಮ್ಮಲ್ಲಿ ಸಂಶಯವನ್ನು ಹುಟ್ಟುಹಾಕಲೇಬೇಕು!
ಮಾಹಿತಿ ತಂತ್ರಜ್ಞಾನ ಜಗತ್ತಿನಲ್ಲಿ ಸುರಕ್ಷತೆಯ ಸಮಸ್ಯೆ ಫೇಸ್‌ಆಪ್ ಒಂದರಿಂದಲೇ ಸೃಷ್ಟಿಯಾಗಿಲ್ಲ, ನಿಜ. ಇದೊಂದು ಆಪ್ ಬಳಸದಿದ್ದ ಮಾತ್ರಕ್ಕೆ ಆ ಸಮಸ್ಯೆ ಪರಿಹಾರವಾಗುವುದಿಲ್ಲ ಎನ್ನುವುದೂ ನಿಜವೇ. ಆದರೆ ಹೆಚ್ಚಿನ ಪ್ರತಿಫಲವೇನೂ ಇಲ್ಲದ ಕಡೆಯಲ್ಲೂ ನಾವು ನಮ್ಮ ಮಾಹಿತಿಯನ್ನು ಹೀಗೆ ಹಂಚಿಕೊಳ್ಳುತ್ತಾ ಹೋದರೆ ಮುಂದೆ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತಲೇ ಹೋಗುತ್ತದೆ. ಅದನ್ನು ಮಾತ್ರ ನಾವು ನೆನಪಿನಲ್ಲಿ ಇಟ್ಟುಕೊಂಡಿರಲೇಬೇಕು!

ಜುಲೈ ೨೪, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ; ಚಿತ್ರಗಳು: faceapp.comನಿಂದ

ಕಾಮೆಂಟ್‌ಗಳಿಲ್ಲ:

badge