ಸೋಮವಾರ, ಜುಲೈ 29, 2019

ಗ್ಯಾಜೆಟ್ ಇಜ್ಞಾನ: 'ಟೆಕ್ನೋ ಫ್ಯಾಂಟಮ್ ೯' ಫೋನಲ್ಲಿ ಏನೆಲ್ಲ ಇದೆ?

ಇಜ್ಞಾನ ವಿಶೇಷ


ಸಾಮಾನ್ಯ ಫೋನುಗಳ ಹೋಲಿಕೆಯಲ್ಲಿ ಮುಂದುವರೆದ ಸೌಲಭ್ಯಗಳು, ಹೆಚ್ಚು ಸಾಮರ್ಥ್ಯ ಹಾಗೂ ಕಾರ್ಯಕ್ಷಮತೆಯಿರುವ 'ಫ್ಲ್ಯಾಗ್‌ಶಿಪ್'ಗಳು ಮೊಬೈಲ್ ಜಗತ್ತಿನಲ್ಲಿ ಸದಾ ಸುದ್ದಿಯಲ್ಲಿರುತ್ತವೆ. ಹತ್ತಾರು ವೈಶಿಷ್ಟ್ಯಗಳೊಡನೆ ಮಾರುಕಟ್ಟೆಗೆ ಬರುವ ಈ ಫೋನುಗಳ ಬೆಲೆಯೂ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಈ ಹಣೆಪಟ್ಟಿ ಹೊತ್ತುಬರುವ ಫೋನುಗಳ ಬೆಲೆ ಆರಂಕಿ ಮುಟ್ಟುವುದೂ ಅಪರೂಪವೇನಲ್ಲ.

ಕೈಗೆಟುಕುವ ಬೆಲೆಯ ಫೋನುಗಳಲ್ಲೂ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟು ಫ್ಲ್ಯಾಗ್‌ಶಿಪ್‌ಗಳೊಡನೆ ಸೀಮಿತ ಮಟ್ಟದಲ್ಲಾದರೂ ಸ್ಪರ್ಧೆಗಿಳಿಯುವ ಪ್ರಯತ್ನಗಳನ್ನು ಹಲವು ಸಂಸ್ಥೆಗಳು ಮಾಡುತ್ತಾ ಬಂದಿವೆ. ಇಂತಹ ಪ್ರಯತ್ನಗಳ ಫಲವಾಗಿ ಹಲವು ಹೊಸ ಮಾದರಿಗಳೂ ಮಾರುಕಟ್ಟೆಗೆ ಬಂದಿವೆ, ಬರುತ್ತಿವೆ.

ಇಂತಹ ಮಾದರಿಗಳಿಗೆ ಲೇಟೆಸ್ಟ್ ಉದಾಹರಣೆಯೇ ಟೆಕ್ನೋ ಸಂಸ್ಥೆಯ 'ಫ್ಯಾಂಟಮ್ ೯'.
ಈ ಮಾದರಿಯ ಜೊತೆಗೆ ಟೆಕ್ನೋ ಸಂಸ್ಥೆ ಇ-ಕಾಮರ್ಸ್ ಪ್ರಪಂಚವನ್ನು ಪ್ರವೇಶಿಸಿರುವುದು ವಿಶೇಷ. ಭಾರತದಲ್ಲೇ ತಯಾರಿಸಲಾಗಿರುವ ಈ ಫೋನು ಜುಲೈ ೧೭, ೨೦೧೯ರಿಂದ ಫ್ಲಿಪ್‌ಕಾರ್ಟ್ ಮೂಲಕ ರೂ. ೧೪,೯೯೯ಕ್ಕೆ ಲಭ್ಯವಿದೆ.

ಇದೇ ಜುಲೈ ಪ್ರಾರಂಭದಲ್ಲಿ 'ಫ್ಯಾಂಟಮ್ ೯' ಲೋಕಾರ್ಪಣೆಗೊಂಡ ಕಾರ್ಯಕ್ರಮದಲ್ಲಿ ಟೆಕ್ನೋ ಸಂಸ್ಥೆಯ ಆಹ್ವಾನದ ಮೇರೆಗೆ ಇಜ್ಞಾನ ಡಾಟ್ ಕಾಮ್ ಪ್ರತಿನಿಧಿ ಕೂಡ ಭಾಗವಹಿಸಿದ್ದರು. ಈ ಫೋನಿನಲ್ಲಿ ಏನೆಲ್ಲ ವೈಶಿಷ್ಟ್ಯಗಳಿವೆ ಎನ್ನುವುದರ ಕುರಿತು ಅವರು ನೀಡಿರುವ ವಿವರಗಳ ಪಟ್ಟಿ ಇಲ್ಲಿದೆ.

  • ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಪರದೆಯ ಕೆಳಬದಿ ಅಥವಾ ಫೋನಿನ ಹಿಂಭಾಗದಲ್ಲಿ ನೀಡುವ ಬದಲು ಈ ಫೋನಿನ  ಪರದೆಯ ಭಾಗವಾಗಿಯೇ ಅಳವಡಿಸಲಾಗಿದೆ. 'ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್' ಎಂದು ಕರೆಸಿಕೊಳ್ಳುವ ಈ ತಂತ್ರಜ್ಞಾನ ಹೊಸದೇನಲ್ಲ, ನಿಜ. ಆದರೆ ಹದಿನೈದು ಸಾವಿರಕ್ಕಿಂತ ಕಡಿಮೆ ಬೆಲೆಯ ಫೋನುಗಳಲ್ಲಿ ಇದನ್ನು ಮೊತ್ತಮೊದಲ ಬಾರಿ ಪರಿಚಯಿಸಿದ ಸಾಧನೆ ಫ್ಯಾಂಟಮ್ ೯ ಮೊಬೈಲಿನದು ಎಂದು ಟೆಕ್ನೋ ಸಂಸ್ಥೆ ಹೇಳಿಕೊಂಡಿದೆ. 
  • ತ್ರಿವಳಿ (ಟ್ರಿಪಲ್) ಪ್ರಾಥಮಿಕ ಕ್ಯಾಮೆರಾಗಳು ಈ ಫೋನಿನಲ್ಲಿರುವ ಇನ್ನೊಂದು ಹೆಚ್ಚುಗಾರಿಕೆ. ೧೬ ಎಂಪಿ (ಮುಖ್ಯ ಕ್ಯಾಮೆರಾ), ೮ ಎಂಪಿ (ವೈಡ್-ಆಂಗಲ್) ಹಾಗೂ ೨ ಎಂಪಿಯ (ಡೆಪ್ತ್-ಸೆನ್ಸಿಂಗ್) ಈ ಕ್ಯಾಮೆರಾಗಳನ್ನು ಬಳಸಿ ಅತ್ಯುತ್ತಮ ಭಾವಚಿತ್ರಗಳನ್ನು, ವೈಡ್ ಆಂಗಲ್ ಹಾಗೂ ಮ್ಯಾಕ್ರೋ ಚಿತ್ರಗಳನ್ನೂ ಸೆರೆಹಿಡಿಯಬಹುದು. ಇದರ ಜೊತೆಗೆ ೩೨ ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹಾಗೂ ಅದರೊಡನೆ ಆಕರ್ಷಕ ವಿನ್ಯಾಸದ ಜೋಡಿ (ಡ್ಯುಯಲ್) ಫ್ಲ್ಯಾಶ್‌ಲೈಟ್ ಸೌಲಭ್ಯ ಕೂಡ ಇದೆ.
  • ಟೆಕ್ನೋ ಸಂಸ್ಥೆಯ ಸ್ವಂತ ಹೈಓಎಸ್ ೫.೦ (ಆಂಡ್ರಾಯ್ಡ್ ೯.೦ ಆಧರಿತ) ಕಾರ್ಯಾಚರಣ ವ್ಯವಸ್ಥೆ ಬಳಸುವ ಈ ಫೋನಿನಲ್ಲಿ ೬ ಜಿಬಿ ರ್‍ಯಾಮ್ ಹಾಗೂ ೧೨೮ ಜಿಬಿ ಆಂತರಿಕ ಶೇಖರಣಾ ಸಾಮರ್ಥ್ಯ ಇದೆ. ಎರಡು ಸಿಮ್ ಜೊತೆಯಲ್ಲಿ ಹೆಚ್ಚುವರಿ ಮೆಮೊರಿ ಕಾರ್ಡನ್ನೂ ಬಳಸಿ ೨೫೬ ಜಿಬಿವರೆಗಿನ ಮಾಹಿತಿ ಸಂಗ್ರಹಿಸಿಕೊಳ್ಳುವುದು ಸಾಧ್ಯ. ಈ ಫೋನಿನಲ್ಲಿ ಬಳಕೆಯಾಗಿರುವುದು ಹೀಲಿಯೋ ಪಿ೩೫ ೨.೩ ಗಿಗಾಹರ್ಟ್ಸ್ ಆಕ್ಟಾಕೋರ್ ಪ್ರಾಸೆಸರ್.
  • ಈ ಫೋನಿನಲ್ಲಿ ೬.೪ ಇಂಚಿನ FHD+ AMOLED ಪರದೆ ಇದೆ. ತೆಳ್ಳನೆಯ ಗೆರೆಗಳಿರುವ ಹಿಂಬದಿ ಕವಚದ ವಿನ್ಯಾಸ ಆಕರ್ಷಕವಾಗಿದ್ದು ಮೂರು ಆಯಾಮದ ಅನುಭವ ನೀಡುತ್ತದೆ. ಸಾಕಷ್ಟು ತೆಳ್ಳಗಿರುವ (೭.೭೫ ಎಂಎಂ) ಈ ಫೋನಿನ ತೂಕವೂ ಬಹಳ ಕಡಿಮೆ (೧೬೪ ಗ್ರಾಂ). ಬಾಕ್ಸಿನಲ್ಲಿ ಮೊಬೈಲ್ ಹಾಗೂ ಚಾರ್ಜರ್ (ಮೈಕ್ರೋ ಯುಎಸ್‌ಬಿ) ಜೊತೆ ಇಯರ್ ಫೋನ್ ಹಾಗೂ ಹಿಂಬದಿ ರಕ್ಷಾಕವಚ ಕೂಡ ಇದೆ. ಪರದೆಯ ಮೇಲೆ ಸ್ಕ್ರೀನ್ ಗಾರ್ಡ್ ಅನ್ನು ಮುಂಚಿತವಾಗಿಯೇ ಅಂಟಿಸಲಾಗಿದೆ.
  • ಟೆಕ್ನೋ ಫ್ಯಾಂಟಮ್ ೯ರ ಬ್ಯಾಟರಿ ೩೫೦೦ mAhನದು (ಲಿಥಿಯಂ-ಪಾಲಿಮರ್). ಫಿಂಗರ್‌ಪ್ರಿಂಟ್ ಸ್ಕ್ಯಾನರಿನ ಜೊತೆ ಈ ಫೋನಿನಲ್ಲಿ ಎಐ ಫೇಸ್ ಅನ್‌ಲಾಕ್ ಕೂಡ ಇದೆ. ಬೇರೆಲ್ಲ ಟೆಕ್ನೋ ಫೋನುಗಳಂತೆ ಈ ಮಾದರಿ ಕೂಡ "೧೧೧" ಭರವಸೆಯೊಡನೆ ಬರುತ್ತದೆ. ಈ ಭರವಸೆಯಡಿ ಗ್ರಾಹಕರಿಗೆ ಒಂದು ಬಾರಿ ಸ್ಕ್ರೀನ್ ರೀಪ್ಲೇಸ್‌ಮೆಂಟ್ (ಆರು ತಿಂಗಳವರೆಗೆ ಅನ್ವಯ), ನೂರು ದಿನಗಳ ಉಚಿತ ರೀಪ್ಲೇಸ್‌ಮೆಂಟ್ ಹಾಗೂ ಒಂದು ತಿಂಗಳ ಹೆಚ್ಚುವರಿ ವಾರಂಟಿ (ಒಟ್ಟು ೧೩ ತಿಂಗಳು) ದೊರಕುತ್ತದೆ.

ಕಾಮೆಂಟ್‌ಗಳಿಲ್ಲ:

badge