ಹೊಸ ಉತ್ಪನ್ನಗಳನ್ನು ತಯಾರಿಸಲು ಹೊರಟಾಗ ಅವುಗಳ ವಿನ್ಯಾಸ, ಮೊದಲ ಮಾದರಿಯ ತಯಾರಿ ಮೊದಲಾದ ಕೆಲಸಗಳಲ್ಲಿ ತಂತ್ರಾಂಶಗಳನ್ನು (ಸಾಫ್ಟ್‌ವೇರ್) ಬಳಸುವುದು ಸಾಮಾನ್ಯ. ಆನಂತರ ಉತ್ಪಾದನೆಯ ಕೆಲಸ ಶುರುವಾದಮೇಲೆ ಅಲ್ಲೂ ಕಂಪ್ಯೂಟರಿನ ಬಳಕೆ ಇರುತ್ತದೆ. ಇಷ್ಟೆಲ್ಲ ಆದನಂತರ ತಯಾರಾಗುತ್ತದಲ್ಲ ಉತ್ಪನ್ನ, ಅದೂ ಕಂಪ್ಯೂಟರಿನೊಳಗೇ ಇರುವಂತಿದ್ದರೆ?
ವಿಚಿತ್ರವೆಂದು ತೋರುವ ಈ ಯೋಚನೆಯನ್ನು ಪ್ರಾಯೋಗಿಕವಾಗಿ ಸಾಧ್ಯವಾಗಿಸುವುದು 'ಡಿಜಿಟಲ್ ಟ್ವಿನ್' ಎಂಬ ಪರಿಕಲ್ಪನೆ.
ಯಾವುದೇ ವಸ್ತುವಿನ ಕಂಪ್ಯೂಟರೀಕೃತ ಪ್ರತಿರೂಪವೇ ಅದರ ಡಿಜಿಟಲ್ ಟ್ವಿನ್. ಜಗತ್ತಿನಲ್ಲಿ ಘಟಿಸುವ ಘಟನೆಗಳಿಗೆ ತನ್ನ ಭೌತಿಕ ಜೋಡಿಯಂತೆಯೇ ಸ್ಪಂದಿಸುವುದು ಇದರ ಹೆಚ್ಚುಗಾರಿಕೆ. ಭೌತಿಕ ಜಗತ್ತನ್ನೂ ಡಿಜಿಟಲ್ ಜಗತ್ತನ್ನೂ ಒಟ್ಟಿಗೆ ಬೆಸೆಯುವ ಮೂಲಕ ಒಟ್ಟಾರೆ ಕಾರ್ಯಾಚರಣೆಯನ್ನು ಹೆಚ್ಚು ಸಕ್ಷಮಗೊಳಿಸಲು ಡಿಜಿಟಲ್ ಟ್ವಿನ್ ಪರಿಕಲ್ಪನೆ ನೆರವಾಗುತ್ತದೆ.
ಉದಾಹರಣೆಗೆ, ಸಂಕೀರ್ಣ ಯಂತ್ರೋಪಕರಣಗಳಿರುವ ಸ್ವಯಂಚಾಲಿತ ವಾಹನವೊಂದನ್ನು ಅಂತರಿಕ್ಷಕ್ಕೋ ಸಮುದ್ರದ ಆಳಕ್ಕೋ ಕಳುಹಿಸಲಾಗುತ್ತಿದೆ ಎಂದುಕೊಳ್ಳೋಣ. ಬೇಕೆಂದಾಗ ಭೌತಿಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲದ ಇಂತಹ ಪರಿಸ್ಥಿತಿಯಲ್ಲಿ ಆ ವಾಹನದ ಪ್ರತಿ ಭಾಗದ ಮೇಲೂ - ನಮ್ಮ ಕಂಪ್ಯೂಟರಿನ ಮುಂದೆ ಕುಳಿತೇ - ನಿಗಾ ಇಡುವುದನ್ನು ಅದರ ಡಿಜಿಟಲ್ ಟ್ವಿನ್ ಸಾಧ್ಯವಾಗಿಸಬಲ್ಲದು. ಉಷ್ಣಾಂಶ, ಒತ್ತಡ, ವೇಗ ಮುಂತಾದ ಪ್ರತಿ ವಿವರವನ್ನೂ ಭೌತಿಕ ಯಂತ್ರದಲ್ಲಿರುವ ಸೆನ್ಸರುಗಳ ಮೂಲಕ ಪಡೆದುಕೊಂಡು ಅದಕ್ಕೆ ಯಂತ್ರದ ಭಾಗಗಳು ಹೇಗೆ ಸ್ಪಂದಿಸುತ್ತಿವೆ, ಮುಂದೆ ಹೇಗೆ ಸ್ಪಂದಿಸಬಹುದು ಎನ್ನುವುದನ್ನೆಲ್ಲ ದೂರದಲ್ಲೆಲ್ಲೋ ಇರುವ ಕಂಪ್ಯೂಟರಿನಲ್ಲೇ - ಅಲ್ಲಿರುವ ಡಿಜಿಟಲ್ ಪ್ರತಿರೂಪದ ವರ್ತನೆಯನ್ನು ಗಮನಿಸಿ - ತಿಳಿದುಕೊಳ್ಳಬಹುದು. ಅಂತರಜಾಲ ಸಂಪರ್ಕವನ್ನು ಕಂಪ್ಯೂಟರು-ಮೊಬೈಲುಗಳಿಂದಾಚೆಗೆ ಸಾಮಾನ್ಯ ವಸ್ತುಗಳಿಗೂ ವಿಸ್ತರಿಸಲು ಹೊರಟಿರುವ ವಸ್ತುಗಳ ಅಂತರಜಾಲ (ಇಂಟರ್‌ನೆಟ್ ಆಫ್ ಥಿಂಗ್ಸ್, ಐಓಟಿ) ಹಾಗೂ ಮಾಹಿತಿಯನ್ನು ಅಂತರಜಾಲದಲ್ಲೇ ಉಳಿಸಿಟ್ಟು ಬಳಸಲು ನೆರವಾಗುವ ಕ್ಲೌಡ್ ತಂತ್ರಜ್ಞಾನಗಳು ಇಲ್ಲಿ ಬಳಕೆಯಾಗುತ್ತವೆ.
ವಿಮಾನದ ಎಂಜಿನ್, ಗಾಳಿಯಂತ್ರದ ಟರ್ಬೈನ್, ಬಾಹ್ಯಾಕಾಶ ವಾಹನ ಮುಂತಾದ ಸಂಕೀರ್ಣ ಯಂತ್ರಗಳನ್ನು ನಿಭಾಯಿಸುವಲ್ಲಿ ಡಿಜಿಟಲ್ ಟ್ವಿನ್ ಪರಿಕಲ್ಪನೆ ಈಗಾಗಲೇ ಬಳಕೆಯಾಗುತ್ತಿದೆ. ಕಟ್ಟಡಗಳು ಹಾಗೂ ಸುರಂಗ - ಸೇತುವೆಯಂತಹ ನಿರ್ಮಿತಿಗಳಿರಲಿ, ವಾಹನ ಅಥವಾ ಗೃಹೋಪಯೋಗಿ ವಸ್ತುಗಳೇ ಇರಲಿ - ಇಂತಹ ಅನೇಕ ವಸ್ತು ವಿಶೇಷಗಳ ಸದ್ಯದ ಸ್ಥಿತಿಗತಿ ಅರಿತುಕೊಳ್ಳುವಲ್ಲೂ ಇದರ ಬಳಕೆ ಸಾಧ್ಯವಿದೆ.
ಸದ್ಯದ ಸ್ಥಿತಿಗತಿ ಮಾತ್ರವೇ ಅಲ್ಲ, ಸದ್ಯದ ಮಾಹಿತಿಯ ಆಧಾರದ ಮೇಲೆ ತನ್ನ ಭೌತಿಕ ಜೋಡಿಯ ಮುಂದಿನ ವರ್ತನೆಯನ್ನೂ ಅದರ ಡಿಜಿಟಲ್ ಟ್ವಿನ್ ಅಂದಾಜಿಸಬಲ್ಲದು. ಅನಿರೀಕ್ಷಿತ ಅವಘಡಗಳನ್ನು, ದುರಸ್ತಿಯ ವೆಚ್ಚವನ್ನು ಈ ಮೂಲಕ ಕಡಿಮೆಮಾಡುವುದು ಸಾಧ್ಯ. ಹೀಗೆ ಪಡೆದುಕೊಂಡ ಅರಿವಿನ ಸಹಾಯದಿಂದ ಮುಂದೆ ತಯಾರಿಸುವ ಯಂತ್ರಗಳಲ್ಲಿ ಸೂಕ್ತ ಬದಲಾವಣೆಗಳನ್ನೂ ಮಾಡಿಕೊಳ್ಳಬಹುದು; ಆ ಬದಲಾವಣೆಗಳನ್ನು ಪರೀಕ್ಷಿಸುವಾಗಲೂ ಅದರ ಡಿಜಿಟಲ್ ಟ್ವಿನ್ ಸಹಾಯ ಪಡೆದುಕೊಳ್ಳಬಹುದು!
ಕಾರ್ಯಾಚರಣೆ - ದುರಸ್ತಿಯಂತಹ ವಿವರಗಳ ಜೊತೆಗೆ ಯಾವುದೇ ಉತ್ಪನ್ನವನ್ನು ಹೇಗೆ ಬಳಸಲಾಗುತ್ತಿದೆ ಎಂದು ಅರಿತುಕೊಳ್ಳಲೂ ಡಿಜಿಟಲ್ ಟ್ವಿನ್ ಸಹಕಾರಿ. ಯಾವ ಸೌಲಭ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ, ಯಾವುದರ ಬಳಕೆ ಕಡಿಮೆ ಎನ್ನುವ ವಿವರಗಳೆಲ್ಲ ಆ ಉತ್ಪನ್ನದ ತಯಾರಕರಿಗೆ - ಯಾವುದೇ ಪ್ರಶ್ನೋತ್ತರ ಅಥವಾ ಪತ್ರವ್ಯವಹಾರದ ಅಗತ್ಯವಿಲ್ಲದೆ - ಈ ಮೂಲಕ ನಿಖರವಾಗಿ ತಿಳಿದುಬಿಡುತ್ತದೆ. ಈ ಮಾಹಿತಿಯನ್ನು ಬಳಸಿ ತಮ್ಮ ಉತ್ಪನ್ನದಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಿಕೊಳ್ಳಲು ತಯಾರಕರಿಗೆ ಇದೊಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಡಿಜಿಟಲ್ ಟ್ವಿನ್ ಪರಿಕಲ್ಪನೆ ಬರಿಯ ಒಂದು ಉತ್ಪನ್ನ ಅಥವಾ ಅದರ ಭಾಗಗಳಿಗೆ ಮಾತ್ರ ಸೀಮಿತವಲ್ಲ. ಮೇಲೆ ಹೇಳಿದ ಸ್ವಯಂಚಾಲಿತ ವಾಹನದ ಉದಾಹರಣೆಯನ್ನೇ ತೆಗೆದುಕೊಂಡರೆ ಆ ವಾಹನದ ಎಲ್ಲ ಭಾಗಗಳು, ಅವುಗಳ ನಡುವಿನ ಒಡನಾಟ ಹಾಗೂ ಅವುಗಳ ಮೇಲೆ ಬಾಹ್ಯ ಪರಿಸರದ ಪರಿಣಾಮಗಳಷ್ಟನ್ನೂ ಡಿಜಿಟಲ್ ಲೋಕದಲ್ಲಿ ಮರುಸೃಷ್ಟಿಸಿ ನಿರ್ವಹಿಸುವುದು ಸಾಧ್ಯ. ಅಂದರೆ, ಈವರೆಗೆ ಬರಿಯ ಕಂಪ್ಯೂಟರ್ ಆಟಗಳಲ್ಲಿ - ಅನಿಮೇಶನ್‌ಗಳಲ್ಲಷ್ಟೇ ಕಾಣಿಸುತ್ತಿದ್ದ ಡಿಜಿಟಲ್ ಜಗತ್ತು ಇದೀಗ ಕಲ್ಪನೆಯ ಎಲ್ಲೆಯನ್ನು ದಾಟಿ ನಿಜ ಪ್ರಪಂಚದ ಪ್ರತಿರೂಪವಾಗಿಯೇ ಬೆಳೆಯುತ್ತಿದೆ. ನೋಡಿದಿರಾ ಹೇಗಿದೆ, ಡಿಜಿಟಲ್ ಜೋಡಿಯ ಈ ಮೋಡಿ?!
ಅಂದಹಾಗೆ ಡಿಜಿಟಲ್ ಟ್ವಿನ್ ಪರಿಕಲ್ಪನೆ ತೀರಾ ಹೊಸದೇನೂ ಅಲ್ಲ - ನಾಸಾದಂತಹ ಸಂಸ್ಥೆಗಳು ಇದನ್ನು ಬಹಳ ವರ್ಷಗಳಿಂದಲೇ ಬಳಸುತ್ತಿವೆ. ವಸ್ತುಗಳ ಅಂತರಜಾಲದ (ಇಂಟರ್‌ನೆಟ್ ಆಫ್ ಥಿಂಗ್ಸ್, ಐಓಟಿ) ಅಭಿವೃದ್ಧಿಯೊಡನೆ ಇದು ಈಗ ಬಹಳ ಕ್ಷಿಪ್ರವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆ ಎಷ್ಟರಮಟ್ಟಿಗಿದೆ ಎಂದರೆ ೨೦೧೯ರಲ್ಲಿ ತಂತ್ರಜ್ಞಾನ ಜಗತ್ತಿನ ಒಟ್ಟಾರೆ ಗತಿಯನ್ನು ನಿರ್ಣಯಿಸಲಿವೆಯೆಂದು ಅಂದಾಜಿಸಲಾಗಿರುವ ಸಂಗತಿಗಳ ಪಟ್ಟಿಯಲ್ಲಿ ಅದಕ್ಕೂ ಸ್ಥಾನ ದೊರೆತಿದೆ. ವಿಶ್ವದ ಪ್ರಮುಖ ಸಂಶೋಧನಾ ಹಾಗೂ ಸಲಹಾ ಸಂಸ್ಥೆ ಗಾರ್ಟ್‌ನರ್ ಈ ಪಟ್ಟಿಯನ್ನು ಪ್ರಕಟಿಸಿದೆ.ಜನವರಿ ೯, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ