ಮಂಗಳವಾರ, ಜನವರಿ 1, 2019

ನಿಮ್ಮ ಫೋನಿಗೆ ಎಷ್ಟು ಅಂಕ?

ಟಿ. ಜಿ. ಶ್ರೀನಿಧಿ


ಮೊಬೈಲ್ ಫೋನ್ ಮಾರುಕಟ್ಟೆಗೆ ಒಂದರ ಹಿಂದೆ ಒಂದರಂತೆ ಹೊಸ ಮಾದರಿಗಳು ಬರುತ್ತಲೇ ಇರುತ್ತವೆ. ಈ ಪೈಕಿ ನಮ್ಮ ಅಗತ್ಯಗಳಿಗೆ ಸರಿಹೊಂದುವ ಫೋನನ್ನು ಆರಿಸಿಕೊಳ್ಳುವುದು ನಿಜಕ್ಕೂ ಗೊಂದಲ ಮೂಡಿಸುವ ಕೆಲಸ. ತಾಂತ್ರಿಕ ವಿವರಗಳೆಲ್ಲ ಹಾಗಿರಲಿ, ನಿರ್ದಿಷ್ಟ ಬೆಲೆಯ ಫೋನನ್ನು ಕೊಳ್ಳುತ್ತೇವೆ ಎಂದುಕೊಂಡರೂ ಆ ಬೆಲೆಯ ಆಸುಪಾಸಿನಲ್ಲೇ ಲಭ್ಯವಿರುವ ಹತ್ತಾರು ಮಾದರಿಗಳು ನಮ್ಮ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿಯೊಂದು ಉತ್ತರಕ್ಕೂ ಇಂತಿಷ್ಟು ಅಂಕವೆಂದು ನಿಗದಿಪಡಿಸಿ, ಗಳಿಸಿದ ಒಟ್ಟು ಅಂಕಗಳ ಮೇಲೆ ಬೇರೆಬೇರೆ ಶ್ರೇಣಿಗಳನ್ನೆಲ್ಲ ಘೋಷಿಸುತ್ತಾರಲ್ಲ. ಮೊಬೈಲುಗಳಿಗೂ ಹಾಗೊಂದು ಪರೀಕ್ಷೆ ಇದ್ದಿದ್ದರೆ? ಫಸ್ಟ್ ಕ್ಲಾಸ್ ಬಂದ ಫೋನನ್ನೇ ಕೊಳ್ಳಬಹುದಾಗಿತ್ತು ಅಲ್ಲವೇ?

ಇದ್ದಿದ್ದರೆ ಎಂದುಕೊಳ್ಳಬೇಕಾದ ಅಗತ್ಯವೇನಿಲ್ಲ, ಏಕೆಂದರೆ ಇಂತಹ ಹಲವು ಪರೀಕ್ಷೆಗಳು ಈಗಾಗಲೇ ಇವೆ. ಮೊಬೈಲ್ ಫೋನಿನ ವಿವಿಧ ಭಾಗಗಳು ಹಾಗೂ ಚಟುವಟಿಕೆಗಳನ್ನು ಒಂದೇ ರೀತಿಯಾಗಿ ಪರೀಕ್ಷಿಸಿ, ಬೇರೆಬೇರೆ ಫೋನುಗಳ ಕಾರ್ಯನಿರ್ವಹಣೆಯ ಮಟ್ಟವನ್ನು ಪರಸ್ಪರ ಹೋಲಿಸಿ ಅಂಕಗಳನ್ನು ನೀಡುವ ಇಂತಹ ಪರೀಕ್ಷೆಗಳನ್ನು ಬೆಂಚ್‌ಮಾರ್ಕ್ ಟೆಸ್ಟ್ ಅಥವಾ ಮಾನದಂಡ ಪರೀಕ್ಷೆ ಎಂದು ಕರೆಯುತ್ತಾರೆ.

ಇಂತಹ ಪರೀಕ್ಷೆಗಳ ಪರಿಕಲ್ಪನೆ ಮೊಬೈಲ್‌ಗಳಿಗೆಂದೇ ರೂಪುಗೊಂಡಿದ್ದೇನಲ್ಲ. ಕಂಪ್ಯೂಟರ್ ಪ್ರಪಂಚದಲ್ಲಿ ಬೆಂಚ್‌ಮಾರ್ಕ್ ಟೆಸ್ಟುಗಳು ಹಲವಾರು ವರ್ಷಗಳಿಂದಲೇ ಇವೆ. ಪ್ರಾಸೆಸರನ್ನು ಬದಲಿಸುವಾಗಲೋ ಹೊಸ ಗ್ರಾಫಿಕ್ಸ್ ಕಾರ್ಡ್ ಕೊಳ್ಳುವಾಗಲೋ ನಮ್ಮ ಕಂಪ್ಯೂಟರಿಗೆ ಹೆಚ್ಚುವರಿಯಾಗಿ ಎಷ್ಟು ಸಂಸ್ಕರಣಾ ಸಾಮರ್ಥ್ಯ ಸಿಗುತ್ತಿದೆ ಎನ್ನುವುದನ್ನು ಇಂತಹ ಪರೀಕ್ಷೆಗಳು ತಿಳಿಸುತ್ತಿದ್ದವು.

ಮೊಬೈಲ್ ಫೋನುಗಳಿಗಾಗಿ ರೂಪುಗೊಂಡಿರುವ ಪರೀಕ್ಷೆಗಳು ಕೆಲಸಮಾಡುವುದು ಕೂಡ ಹೀಗೆಯೇ. ಹ್ಯಾಂಡ್‌ಸೆಟ್‌ನ ಆಂತರಿಕ ಭಾಗಗಳನ್ನು, ತಂತ್ರಾಂಶಗಳನ್ನು ನಿರ್ದಿಷ್ಟ ಪರೀಕ್ಷೆಗಳಿಗೆ ಗುರಿಪಡಿಸಿ ಅವುಗಳ ಕಾರ್ಯಾಚರಣೆಯ ಮಟ್ಟವನ್ನು ಅಳೆಯುವುದು ಇಂತಹ ಪರೀಕ್ಷೆಗಳ ಕಾರ್ಯವಿಧಾನ.

ಕ್ಲಿಷ್ಟ ಲೆಕ್ಕಾಚಾರಗಳನ್ನು ನಡೆಸಿ ಪ್ರಾಸೆಸರ್ ವೇಗವನ್ನು ಅರಿತುಕೊಳ್ಳುವುದು, ಬೇರೆಬೇರೆ ತಂತ್ರಾಂಶಗಳನ್ನು ಒಮ್ಮೆಗೇ ಬಳಸುತ್ತ ರ್‍ಯಾಮ್ ಪ್ರತಿಕ್ರಿಯೆಯನ್ನು ಗಮನಿಸುವುದು, ಸಂಕೀರ್ಣ ವೀಡಿಯೋಗಳನ್ನು ಬಳಸಿ ಗ್ರಾಫಿಕ್ಸ್ ಕಾರ್ಡ್ ಕಾರ್ಯಾಚರಣೆಯನ್ನು ಅಳೆಯುವುದು, ಬೇರೆಬೇರೆ ರೀತಿಯಲ್ಲಿ ಬಳಸಿದಾಗ ಬ್ಯಾಟರಿ ಎಷ್ಟುಹೊತ್ತು ಬಾಳುತ್ತದೆ ಎಂದು ನೋಡುವುದು - ಇವೆಲ್ಲ ಬೆಂಚ್‌ಮಾರ್ಕ್ ಟೆಸ್ಟ್‌ನ ವಿವಿಧ ಹೆಜ್ಜೆಗಳಾಗಿರುವುದು ಸಾಧ್ಯ. ಇಂತಹ ಪರೀಕ್ಷೆಗಳಲ್ಲಿ ಯಂತ್ರಾಂಶ ಮಾತ್ರವಲ್ಲದೆ ತಂತ್ರಾಂಶಗಳ ಕಾರ್ಯನಿರ್ವಹಣೆಯನ್ನೂ ಗಮನಿಸುವುದು ಸಾಧ್ಯ. ಉದಾಹರಣೆಗೆ, ಒಂದೇ ವೆಬ್ ಪುಟವನ್ನು ಪದೇಪದೇ ರಿಫ್ರೆಶ್ ಮಾಡುವ ಮೂಲಕ ಬ್ರೌಸರ್ ಆಪ್‌ನ ಕಾರ್ಯಕ್ಷಮತೆಯ ಬಗ್ಗೆ ತಿಳಿದುಕೊಳ್ಳಬಹುದು.

ಅದೆಲ್ಲ ಸರಿ, ಈ ಪರೀಕ್ಷೆಗಳನ್ನು ನಡೆಸುವವರು ಯಾರು? ಆ ಬಗ್ಗೆ ನಾವೇನೂ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಏಕೆಂದರೆ ಬೆಂಚ್‌ಮಾರ್ಕ್ ಟೆಸ್ಟುಗಳನ್ನು ನಡೆಸಲೆಂದೇ ರೂಪಿಸಲಾಗಿರುವ ಹಲವಾರು ಆಪ್‌ಗಳು ಲಭ್ಯವಿವೆ. ಬಹುತೇಕ ಉಚಿತವಾಗಿಯೇ ದೊರಕುವ ಇಂತಹ ಆಪ್‌ಗಳನ್ನು ಬಳಸಿ ನಾವು ನಮ್ಮ ಮೊಬೈಲನ್ನು ಪರೀಕ್ಷೆಗೆ ಗುರಿಪಡಿಸಬಹುದು. ಬೇರೆಬೇರೆ ಮಾದರಿಯ ಫೋನುಗಳನ್ನು ಹೋಲಿಸಲಷ್ಟೇ ಅಲ್ಲ, ಕಾಲಕ್ರಮೇಣ ನಮ್ಮ ಫೋನಿನ ಕಾರ್ಯಾಚರಣೆಯ ಮಟ್ಟದಲ್ಲಿ ಕಾಣಬಹುದಾದ ಬದಲಾವಣೆಗಳನ್ನು ತಿಳಿದುಕೊಳ್ಳಲೂ ನಾವು ಇಂತಹ ಪರೀಕ್ಷೆಗಳನ್ನು ಬಳಸಬಹುದು.

ಬೇರೆಬೇರೆ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು ತಮ್ಮದೇ ಆದ ಪ್ರತ್ಯೇಕ ಪರೀಕ್ಷೆಗಳನ್ನು ನಡೆಸುತ್ತವಲ್ಲ, ಅದೇರೀತಿ ಮೊಬೈಲ್‌ಗಳಿಗೂ ಬೇರೆಬೇರೆ ಸಂಸ್ಥೆಗಳು ಬೇರೆಬೇರೆ ರೀತಿಯ ಬೆಂಚ್‌ಮಾರ್ಕ್ ಟೆಸ್ಟುಗಳನ್ನು ರೂಪಿಸಿವೆ. ಇಂತಹ ಪ್ರತಿಯೊಂದು ಪರೀಕ್ಷೆಯೂ ತನ್ನದೇ ಆದ ಪರೀಕ್ಷಾಕ್ರಮ ಅನುಸರಿಸುವುದು, ತನ್ನದೇ ಆದ ರೀತಿಯಲ್ಲಿ ಅಂಕಗಳನ್ನು ನೀಡುವುದು ಸಾಧ್ಯ.

ಅಂಟುಟು, ಗೀಕ್‌ಬೆಂಚ್ - ಇವೆಲ್ಲ ಸದ್ಯ ಮಾರುಕಟ್ಟೆಯಲ್ಲಿರುವ ಬೆಂಚ್‌ಮಾರ್ಕಿಂಗ್ ತಂತ್ರಾಂಶಗಳಿಗೆ ಕೆಲ ಉದಾಹರಣೆಗಳು. ಸಾಮಾನ್ಯ ಬಳಕೆದಾರರಷ್ಟೇ ಅಲ್ಲದೆ ಮೊಬೈಲ್ ಫೋನುಗಳ ವಿಮರ್ಶಕರು ಕೂಡ ಇಂತಹ ತಂತ್ರಾಂಶಗಳನ್ನು ಬಳಸುವುದು ಸಾಮಾನ್ಯ. ಹೀಗಾಗಿ ಮೊಬೈಲ್ ತಯಾರಕರು ಕೂಡ ಇಂತಹ ಪರೀಕ್ಷೆಗಳಲ್ಲಿ ತಮ್ಮ ಉತ್ಪನ್ನಗಳ ನಿರ್ವಹಣೆಯ ಬಗ್ಗೆ ಸಾಕಷ್ಟು ತಲೆಕೆಡಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಇಂತಹ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯಲು ಮೊಬೈಲ್ ನಿರ್ಮಾತೃಗಳು ಕೆಲವು ಸಂದರ್ಭಗಳಲ್ಲಿ ಅಡ್ಡದಾರಿ ಹಿಡಿದ ಉದಾಹರಣೆಗಳೂ ಇವೆ. ಹೀಗಾಗಿಯೇ, ಮೊಬೈಲ್ ಕೊಳ್ಳಲು ಹೊರಟಾಗ ಬೆಂಚ್‌ಮಾರ್ಕ್ ಪರೀಕ್ಷೆಯ ಅಂಕಗಳಿಗೆ ವಿಪರೀತ ಮಹತ್ವ ನೀಡುವುದು ಅನಗತ್ಯ ಎನ್ನುವ ಅಂಶ ನಮ್ಮ ಗಮನದಲ್ಲಿರಬೇಕಾಗುತ್ತದೆ.

ಮೊಬೈಲಿನ ವಿವಿಧ ಅಂಗಗಳನ್ನು ಒಟ್ಟಾಗಿ ಪರೀಕ್ಷಿಸಿ ಅಂಕ ನೀಡುವ ಪರೀಕ್ಷೆಗಳು ಇದ್ದಹಾಗೆ ನಿರ್ದಿಷ್ಟ ಉದ್ದೇಶದ ಬೆಂಚ್‌ಮಾರ್ಕ್ ಪರೀಕ್ಷೆಗಳೂ ಇವೆ. ಸ್ಮಾರ್ಟ್‌ಫೋನುಗಳು ಸೆರೆಹಿಡಿಯುವ ಚಿತ್ರಗಳ ಗುಣಮಟ್ಟ, ಲೆನ್ಸ್‌ ಹಾಗೂ ಕ್ಯಾಮೆರಾಗಳನ್ನಷ್ಟೇ ಪರೀಕ್ಷಿಸಿ ಅಂಕಗಳನ್ನು ನೀಡುವ ಡಿಎಕ್ಸ್‌ಓಮಾರ್ಕ್ ಇಂತಹ ವ್ಯವಸ್ಥೆಗಳಿಗೊಂದು ಉದಾಹರಣೆ.

ಡಿಸೆಂಬರ್ ೧೨, ೨೦೧೮ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge