ಬುಧವಾರ, ಸೆಪ್ಟೆಂಬರ್ 4, 2019

ಮೋಡಿ ಮಾಡಿದ ಡಾರ್ಕ್ ಮೋಡ್

ಟಿ. ಜಿ. ಶ್ರೀನಿಧಿ


ಹಲವು ವರ್ಷಗಳ ಹಿಂದೆ ವಾಹನಗಳ ನಂಬರ್ ಪ್ಲೇಟು ಕಪ್ಪು ಬಣ್ಣದಲ್ಲಿರುತ್ತಿತ್ತು. ಅದರ ಮೇಲೆ ಬಿಳಿಯ ಅಕ್ಷರ ಬರೆಯುವ ಪರಿಪಾಠವನ್ನು ಬದಲಿಸಿ ಆಮೇಲೆ ಯಾವಾಗಲೋ ಬಿಳಿಯ ನಂಬರ್ ಪ್ಲೇಟನ್ನೂ ಕರಿಯ ಅಕ್ಷರಗಳನ್ನೂ ಪರಿಚಯಿಸಲಾಯಿತು.

ಈ ಘಟನೆಯನ್ನು ನೆನಪಿಸುವ ಸಂಗತಿಯೊಂದು ಇದೀಗ ಮೊಬೈಲ್ ಫೋನ್ ಜಗತ್ತಿನಲ್ಲೂ ನಡೆಯುತ್ತಿದೆ. ಬಿಳಿ ಹಿನ್ನೆಲೆಯ ಪರದೆಯ ಮೇಲೆ ಕಪ್ಪು ಅಕ್ಷರಗಳು ಮೂಡುವುದು ಅಲ್ಲಿ ಸಾಮಾನ್ಯ ತಾನೇ? ಈ ಹಳೆಯ ಅಭ್ಯಾಸವನ್ನು ಬದಲಿಸಿಕೊಳ್ಳುತ್ತಿರುವ ಹಲವಾರು ಬಳಕೆದಾರರು ಇದೀಗ ಕಪ್ಪು ಹಿನ್ನೆಲೆಯನ್ನು ಇಷ್ಟಪಡುತ್ತಿದ್ದಾರೆ. ಬೇರೆ ಕಾರಣಗಳೇನೇ ಇರಲಿ, ಇದು ಟೆಕ್ ಲೋಕದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿರುವುದಂತೂ ನಿಜ.

ವಿವಿಧ ಆಪ್‌ಗಳನ್ನು ಬಳಸುವಾಗ ಕಾಣುವ ಹಿನ್ನೆಲೆಯನ್ನು ಬಿಳಿಯಿಂದ ಕಪ್ಪು ಬಣ್ಣಕ್ಕೆ ಬದಲಿಸಿಕೊಡುವ ಈ ಸೌಲಭ್ಯವೇ ಡಾರ್ಕ್ ಮೋಡ್. ಕೆಲವು ಕಡೆ ಇದನ್ನು ಡಾರ್ಕ್ ಥೀಮ್ ಎಂದೂ ಕರೆಯುತ್ತಾರೆ. ಪ್ರತ್ಯೇಕ ಆಪ್‌ಗಳಲ್ಲಷ್ಟೇ ಏಕೆ, ಆಂಡ್ರಾಯ್ಡ್ ಹಾಗೂ ಐಓಎಸ್ ಕಾರ್ಯಾಚರಣ ವ್ಯವಸ್ಥೆಗಳಲ್ಲೂ ಈ ಸೌಲಭ್ಯ ಇದೆ.

ಪರದೆಯ ಹಿನ್ನೆಲೆ ಹಾಗೂ ಅದರಲ್ಲಿ ಮೂಡುವ ಪಠ್ಯದ ಬಣ್ಣವನ್ನು ಬದಲಿಸುವುದಕ್ಕೆ ಇಷ್ಟೆಲ್ಲ ಸಂಭ್ರಮ ಏಕೆ ಎಂದು ನೀವು ಕೇಳಬಹುದು. ಅದನ್ನು ಅರ್ಥಮಾಡಿಕೊಳ್ಳಲು ಮೊದಲಿಗೆ ನಾವು ಮೊಬೈಲ್ ಹಾಗೂ ಕಂಪ್ಯೂಟರ್ ಪರದೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.

ಇವೆರಡೂ ಪರದೆಗಳ ಮೇಲೆ ಏನಿದೆ ಎಂದು ನಮಗೆ ಕಾಣುವುದು ಅಲ್ಲಿಂದ ಹೊರಹೊಮ್ಮುವ ಬೆಳಕಿನ ಮೂಲಕ. ಸೂರ್ಯನ ಬೆಳಕಿನಂತೆ ಈ ಬೆಳಕಿನಲ್ಲೂ ಬೇರೆಬೇರೆ ಬಣ್ಣ ಹಾಗೂ ತರಂಗಾಂತರಗಳ (ವೇವ್‌ಲೆಂತ್) ಕಿರಣಗಳಿರುತ್ತವೆ ಹಾಗೂ ಅವುಗಳ ಶಕ್ತಿಯ (ಎನರ್ಜಿ) ಪ್ರಮಾಣ ಬೇರೆಬೇರೆಯಾಗಿರುತ್ತದೆ.

ಈ ಕಿರಣಗಳಲ್ಲಿ ನೀಲಿ ಕಿರಣಗಳೂ ಇರುತ್ತವೆ. ಕಾಮನಬಿಲ್ಲಿನಲ್ಲಿರುವ ನೀಲಿ, ಇಂಡಿಗೋ ಹಾಗೂ ನೇರಳೆ ಬಣ್ಣಗಳು ಇದೇ ಬಗೆಯವು. ಇವನ್ನೆಲ್ಲ ಒಟ್ಟಾಗಿ ನೀಲಿ ಬೆಳಕು (ಬ್ಲೂ ಲೈಟ್) ಎಂದು ಗುರುತಿಸಲಾಗುತ್ತದೆ.
ಕಣ್ಣಿಗೆ ಕಾಣುವ ಬೆಳಕಿನ ಕಿರಣಗಳ ಪೈಕಿ ನೀಲಿ ಕಿರಣಗಳ ತರಂಗಾಂತರ ಕಡಿಮೆ ಹಾಗೂ ಶಕ್ತಿಯ ಪ್ರಮಾಣ ಹೆಚ್ಚು. ಇದಕ್ಕಿಂತ ಹೆಚ್ಚಿನ ಶಕ್ತಿ ಇರುವುದು ಅತಿನೇರಳೆ (ಅಲ್ಟ್ರಾ‌ವಯಲೆಟ್) ಕಿರಣಗಳಿಗೆ ಮಾತ್ರ.

ಕಂಪ್ಯೂಟರ್ ಹಾಗೂ ಮೊಬೈಲ್ ಪರದೆಗಳನ್ನು ದೀರ್ಘಕಾಲದವರೆಗೆ ನೋಡುತ್ತಲೇ ಇರುವುದು ನಮಗೆಲ್ಲ ಅಭ್ಯಾಸವಾಗಿಬಿಟ್ಟಿದೆ. ಬೆಳಕಿನ ಮೂಲಗಳನ್ನು ಇಷ್ಟೆಲ್ಲ ಸಮಯ ದಿಟ್ಟಿಸಿನೋಡುವುದೇ ಕಣ್ಣಿಗೆ ಶ್ರಮ.  ಈ ಪರದೆಗಳಿಂದ ಹೊರಹೊಮ್ಮುವ ಬೆಳಕಿನ ಒಂದು ಭಾಗವಾದ ನೀಲಿ ಬೆಳಕು ಸುಲಭವಾಗಿ ಚದರುವುದರಿಂದ (ಸ್ಕ್ಯಾಟರ್) ನಮ್ಮ ಕಣ್ಣಿನ ಶ್ರಮವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆ ಕಡಿಮೆಯಾದರೆ ನೀಲಿ ಬೆಳಕಿನ ಪ್ರಭಾವ ಹಾಗೂ ಕಣ್ಣಿನ ಶ್ರಮ ಎರಡೂ ಕಡಿಮೆಯಾಗುತ್ತದೆ. ಆದರೆ ಅವುಗಳ ಬಳಕೆ ಕಡಿಮೆ ಮಾಡಲು ನಮಗೆ ಇಷ್ಟವೂ ಇಲ್ಲ, ಕೆಲವು ಸಂದರ್ಭಗಳಲ್ಲಿ ಅದು ಸಾಧ್ಯವೂ ಆಗುತ್ತಿಲ್ಲ. ಹಾಗಾಗಿಯೇ ತಂತ್ರಜ್ಞರು ನೀಲಿ ಬೆಳಕಿನ ಕಿರಿಕಿರಿ ತಪ್ಪಿಸಲು ಹೊಸ ಉಪಾಯಗಳನ್ನು ಹುಡುಕುತ್ತಿದ್ದಾರೆ.

ಪರದೆಯಿಂದ ಹೊರಹೊಮ್ಮುವ ನೀಲಿ ಬೆಳಕನ್ನು ತಡೆಹಿಡಿಯುವುದು ಇಂತಹ ಪ್ರಯೋಗಗಳಲ್ಲೊಂದು. ತಂತ್ರಾಂಶದ ಸಹಾಯದಿಂದ ಮಾತ್ರವೇ ಅಲ್ಲದೆ ಪ್ರತ್ಯೇಕ ಸೋಸುಕವನ್ನು (ಫಿಲ್ಟರ್) ಬಳಸುವ ಮೂಲಕವೂ ಇದನ್ನು ಸಾಧಿಸುವ ಪ್ರಯತ್ನಗಳು ಈಗಾಗಲೇ ನಡೆದಿವೆ. ನೀಲಿ ಬೆಳಕಿನ ಅನುಪಸ್ಥಿತಿಯಲ್ಲಿ ಕಣ್ಣಿಗೆ ಶ್ರಮ ಕಡಿಮೆಯಾದರೂ ಪರದೆ ವಿಚಿತ್ರವಾಗಿ ಕಾಣುವುದರಿಂದ ಈ ಪ್ರಯೋಗ ಅಷ್ಟಾಗಿ ಜನಪ್ರಿಯತೆ ಗಳಿಸಿಕೊಂಡಿಲ್ಲ.

ಈ ನಿಟ್ಟಿನಲ್ಲಿ ಇದೀಗ ನಡೆದಿರುವ ಪ್ರಯತ್ನವೇ ಡಾರ್ಕ್ ಮೋಡ್. ಪರದೆಯ ಹಿನ್ನೆಲೆಯನ್ನು ಕಪ್ಪು ಬಣ್ಣಕ್ಕೆ ಬದಲಿಸಿ ಅದರ ಮೇಲೆ ಬಿಳಿ ಬಣ್ಣದ ಪಠ್ಯವನ್ನು ಮೂಡಿಸುವುದು ಈ ಪ್ರಯತ್ನದ ಹೂರಣ. ಇದರಿಂದಾಗಿ ಕಣ್ಣಿಗೆ ಶ್ರಮ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ, ಹೊರಗಿನ ಬೆಳಕು ಕಡಿಮೆಯಿರುವಾಗಲೂ ಕಪ್ಪು ಹಿನ್ನೆಲೆ ಕಣ್ಣಿಗೆ ಹೆಚ್ಚು ಹಿತಕರವೆನಿಸುತ್ತದೆ.

ಆಂಡ್ರಾಯ್ಡ್ ೯ (ಪೈ) ಆವೃತ್ತಿಯಿಂದ ಪ್ರಾರಂಭಿಸಿ ಕಾರ್ಯಾಚರಣ ವ್ಯವಸ್ಥೆಯ (ಓಎಸ್) ಮಟ್ಟದಲ್ಲೇ ಡಾರ್ಕ್ ಮೋಡ್ ಸೌಲಭ್ಯವನ್ನು ನೀಡಲಾಗುತ್ತಿದೆ. ಗೂಗಲ್ ಕೀಪ್, ಕ್ಯಾಲೆಂಡರ್ ಮುಂತಾದ ಆಪ್‌ಗಳಲ್ಲಿ ಈ ಸೌಲಭ್ಯವನ್ನು ಪ್ರತ್ಯೇಕವಾಗಿಯೂ ನೀಡಲಾಗುತ್ತಿದೆ. ಐಓಎಸ್ ಹಾಗೂ ವಿಂಡೋಸ್ ಬಳಸುವ ಸಾಧನಗಳಲ್ಲೂ ಡಾರ್ಕ್ ಮೋಡ್ ಹೆಚ್ಚುಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.

ಆಂಡ್ರಾಯ್ಡ್‌ನ ಹೊಸ ಆವೃತ್ತಿಯಲ್ಲಿ (ಆಂಡ್ರಾಯ್ಡ್‌ ೧೦) ಈ ಸೌಲಭ್ಯ ಇನ್ನಷ್ಟು ವ್ಯಾಪಕವಾಗಿ ದೊರಕಲಿದ್ದು ಅದಕ್ಕೆ ಬಳಕೆದಾರರ ಪ್ರತಿಕ್ರಿಯೆ ಹೇಗಿರಬಹುದು ಎನ್ನುವುದನ್ನು ಕಾದುನೋಡಬೇಕಿದೆ. ಇಂತಹ ಸೌಲಭ್ಯಗಳನ್ನು ನೆಚ್ಚಿಕೊಳ್ಳುವ ಜೊತೆಗೆ ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆಯನ್ನು ಕಡಿಮೆ ಮಾಡಲು ಏನೆಲ್ಲ ಮಾಡಬಹುದು ಎಂಬ ಪ್ರಶ್ನೆಯನ್ನೂ ನಮಗೆ ನಾವೇ ಹಾಕಿಕೊಳ್ಳಬೇಕಿದೆ!

ಆಗಸ್ಟ್ ೭, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ; ಚಿತ್ರ: Marco Verch / flickr / CC BY 2.0

ಕಾಮೆಂಟ್‌ಗಳಿಲ್ಲ:

badge