ಬುಧವಾರ, ಆಗಸ್ಟ್ 28, 2019

ನಿಮ್ಮ ಡಿಜಿಟಲ್ ಆರೋಗ್ಯ ಹೇಗಿದೆ?

ಟಿ. ಜಿ. ಶ್ರೀನಿಧಿ


ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆ ನಮ್ಮನ್ನೆಲ್ಲ ಸೋಮಾರಿಗಳನ್ನಾಗಿಸುತ್ತಿದೆ ಎನ್ನುವುದು ಈಗಾಗಲೇ ಹಳೆಯದಾಗಿರುವ ಆರೋಪ. ಸೋಮಾರಿ ಪೆಟ್ಟಿಗೆಯೆಂದೇ ಹೆಸರಾಗಿರುವ ಟೀವಿಗೆ ರಿಮೋಟ್ ಸೌಲಭ್ಯ ಬಂದಾಗಲೂ ಈ ಆರೋಪ ಇತ್ತು, ಮೊಬೈಲಿನ ಪರದೆಯನ್ನು ಮುಟ್ಟಿ ಊಟವನ್ನು ಮನೆಗೇ ತರಿಸಿಕೊಳ್ಳುವ ಈ ಕಾಲದಲ್ಲೂ ಅದೇ ಆರೋಪ ಉಳಿದುಕೊಂಡಿದೆ.

ಈ ಆರೋಪ ಸುಳ್ಳೇನೂ ಅಲ್ಲ. ಹೋಟಲಿಗೆ ಹೋಗಿಬರುವುದು, ದಿನಸಿ ಖರೀದಿಗೆ ಅಂಗಡಿಗೆ ಹೋಗುವುದೆಲ್ಲ ದೈಹಿಕ ಶ್ರಮ ಎಂದು ನಮಗೆ ಅನ್ನಿಸಲು ಶುರುವಾಗಿರುವುದು ತಂತ್ರಜ್ಞಾನದ ಕಾರಣದಿಂದಲೇ. ಇನ್ನು ತಂತ್ರಜ್ಞಾನದ ಲೋಕ ನಮ್ಮ ನೆನಪಿನಶಕ್ತಿಯ ವಿಸ್ತರಣೆಯಂತೆಯೇ ಆಗಿಬಿಟ್ಟಿರುವುದು ಕೂಡ ವಾಸ್ತವ ಸಂಗತಿ. ಮೊಬೈಲಿನ ಅಡ್ರೆಸ್ ಬುಕ್ ಇಲ್ಲದೆ ಫೋನ್ ನಂಬರುಗಳನ್ನೂ, ಫೇಸ್‌ಬುಕ್ ಸಹಾಯವಿಲ್ಲದೆ ಜನ್ಮದಿನಗಳನ್ನೂ ನೆನಪಿಟ್ಟುಕೊಳ್ಳುವುದನ್ನು ಬಿಟ್ಟು ಯಾವುದೋ ಕಾಲವಾಗಿದೆಯಲ್ಲ!

ದೈಹಿಕ ಶ್ರಮ ಬೇಡುವ ಪ್ರತಿಯೊಂದು ಕೆಲಸವನ್ನೂ ತಂತ್ರಜ್ಞಾನದ ಸಹಾಯದಿಂದಲೇ ಮಾಡಿಕೊಳ್ಳುವ ಅಭ್ಯಾಸವಾದರೆ ನಾವೆಲ್ಲ 'ವಾಲ್-ಇ' ಸಿನಿಮಾದಲ್ಲಿ ಬರುವ ಸೋಮಾರಿ ಮನುಷ್ಯರಂತೆ ಆಗಿಬಿಡುತ್ತೇವೆಯೇ? ಹಾಗೆ ಆಗಬಾರದು ಎಂದೇ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಉಂಟುಮಾಡುವ ಕೆಲಸ ಈಚೆಗೆ ವ್ಯಾಪಕವಾಗಿ ನಡೆಯುತ್ತಿದೆ. ತಂತ್ರಜ್ಞಾನದ ಜೊತೆಗೆ ಬಂದ ಸೋಮಾರಿತನವನ್ನು ತಂತ್ರಜ್ಞಾನದ್ದೇ ನೆರವಿನಿಂದ ದೂರಮಾಡುವ ಪ್ರಯತ್ನವೂ ಸಾಗಿದೆ.

ವ್ಯಾಯಾಮ ಮಾಡಲು ಮಾರ್ಗದರ್ಶನ ನೀಡುವ, ದೈಹಿಕ ಚಟುವಟಿಕೆಯ ಲೆಕ್ಕ ಇಟ್ಟುಕೊಳ್ಳುವ ಮೊಬೈಲ್ ಆಪ್‌ಗಳು ಇಂತಹ ಪ್ರಯತ್ನಗಳಿಗೊಂದು ಉದಾಹರಣೆ. ದೈಹಿಕ ಚಟುವಟಿಕೆಯ ಮೇಲೆ ನಿಗಾ ಇಡುವ ತಂತ್ರಾಂಶಗಳು ತಮ್ಮ ಕಾರ್ಯಾಚರಣೆಯಲ್ಲಿ ಮೊಬೈಲ್ ಫೋನಿನಲ್ಲಿರುವ ಅನೇಕ ಸವಲತ್ತುಗಳನ್ನು (ಉದಾ: ನಡಿಗೆಯ ಲೆಕ್ಕವಿಡಲು ಆಕ್ಸೆಲರೋಮೀಟರ್) ಬಳಸುತ್ತವೆ. ನಾವು ಎಲ್ಲೆಡೆಯೂ ಮೊಬೈಲನ್ನು ನಮ್ಮೊಡನೆ ಕೊಂಡೊಯ್ಯುವುದರಿಂದ ಪೂರ್ತಿ ದಿನದ ಚಟುವಟಿಕೆಗಳನ್ನು ಗಮನಿಸಿಕೊಳ್ಳುವುದು, ದಿನದ ಕೊನೆಯಲ್ಲಿ ಅದರ ಸಾರಾಂಶ ತಿಳಿಸುವುದು ಈ ತಂತ್ರಾಂಶಗಳಿಗೆ ಸಾಧ್ಯವಾಗುತ್ತದೆ. ಈ ತಂತ್ರಾಂಶಗಳಲ್ಲಿ ದಿನಕ್ಕೆ ಇಷ್ಟು ಚಟುವಟಿಕೆಯೆಂದು ಮೊದಲೇ ಗುರಿ ನಿಗದಿಪಡಿಸಿಕೊಂಡು ಅದಕ್ಕೆ ನಮ್ಮ ಚಟುವಟಿಕೆಯನ್ನು ಹೋಲಿಸಿಕೊಳ್ಳಲೂಬಹುದು.

ವ್ಯಾಯಾಮ ಮಾಡುವಾಗ ಜೊತೆಯಲ್ಲಿ ಮೊಬೈಲು ಏಕೆ ಎನ್ನುವವರಿಗಾಗಿ ಪ್ರತ್ಯೇಕ ಸಾಧನಗಳೂ ರೂಪುಗೊಂಡಿವೆ. ನೋಡಲು ಕೈಗಡಿಯಾರದಂತೆಯೇ ಕಾಣುವ, ಕೈಗಡಿಯಾರದ ಕೆಲಸವನ್ನೂ ಮಾಡುವ ಈ ಸಾಧನಗಳನ್ನು 'ಫಿಟ್‌ನೆಸ್ ಬ್ಯಾಂಡ್‌'ಗಳೆಂದು ಗುರುತಿಸಲಾಗುತ್ತದೆ. ನಡಿಗೆ ಮತ್ತು ಓಟದ ಲೆಕ್ಕವಿಡಲು ಮಾತ್ರವೇ ಅಲ್ಲ, ಕೆಲ ಫಿಟ್‌ನೆಸ್ ಬ್ಯಾಂಡ್‌ಗಳನ್ನು ಈಜುವಾಗಲೂ ಬಳಸುವುದು ಸಾಧ್ಯ. ಹೃದಯ ಬಡಿತದ ದರ ಹಾಗೂ ನಿದ್ದೆಯ ಗುಣಮಟ್ಟವನ್ನು ಗಮನಿಸಿಕೊಳ್ಳುವ ಫಿಟ್‌ನೆಸ್ ಬ್ಯಾಂಡ್‌ಗಳೂ ಇವೆ. ಹಿಂದಿನ ಕೈಗಡಿಯಾರಗಳ ಬದಲು ಈಗ ಸ್ಮಾರ್ಟ್ ವಾಚ್‌ಗಳು ಬಂದಿವೆಯಲ್ಲ, ಅವುಗಳಲ್ಲೂ ಇಂತಹ ಹಲವು ಸವಲತ್ತುಗಳಿರುವುದು ಸಾಮಾನ್ಯ.

ನಮ್ಮ ದೈಹಿಕ ಚಟುವಟಿಕೆಯ ಮೇಲೆ ನಿಗಾ ಇಡಲು ತಂತ್ರಜ್ಞಾನದ ಸಹಾಯ ಪಡೆದುಕೊಳ್ಳುವುದೇನೋ ಸರಿ, ಒಟ್ಟಾರೆ ಆರೋಗ್ಯ ಚೆನ್ನಾಗಿರಲು ಮಾನಸಿಕ ಒತ್ತಡಗಳೂ ಕಡಿಮೆಯಾಗಬೇಕಲ್ಲ!

ಈಚಿನ ದಿನಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ತಂತ್ರಜ್ಞಾನದ - ಅದರಲ್ಲೂ ವಿಶೇಷವಾಗಿ ಮೊಬೈಲ್ ಫೋನಿನ - ಕೈವಾಡ ಇದೆ. ಬರಿಯ ಸಮಾಜಜಾಲಗಳಿಂದಲೇ (ಸೋಶಿಯಲ್ ನೆಟ್‌ವರ್ಕ್) ನಮ್ಮ ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುತ್ತಿವೆ. ಅಲ್ಲಿ ಕಳೆಯುವ ಸಮಯ ಹೆಚ್ಚಿದಂತೆ ಅನಗತ್ಯ ವಾದವಿವಾದಗಳಲ್ಲಿ ತೊಡಗುವುದು, ಇತರರನ್ನು ಟೀಕಿಸುವುದು, ಮೂರನೆಯವರ ವಿಷಯದಲ್ಲಿ ಮೂಗುತೂರಿಸುವುದು - ಎಲ್ಲವೂ ಸಾಮಾನ್ಯವಾಗುತ್ತಿವೆ. ಬಾಹ್ಯ ಜಗತ್ತಿನಲ್ಲಿ ನಾವು ಮೆಚ್ಚುವ ಮಂದಿ ಮತ್ತವರ ಹಿಂಬಾಲಕರು ಸಮಾಜಜಾಲಗಳಲ್ಲಿ ವರ್ತಿಸುವ ರೀತಿ ಕೂಡ ನಮ್ಮನ್ನು ಋಣಾತ್ಮಕವಾಗಿ ಪ್ರಭಾವಿಸುತ್ತಿದೆ. ಕೊನೆಯಿಲ್ಲದ ಪೋಸ್ಟುಗಳ ಹರಿವನ್ನು ಗಂಟೆಗಟ್ಟಲೆ ನೋಡುವುದರಿಂದ, ಗೊತ್ತುಗುರಿಯಿಲ್ಲದಂತೆ ವೀಡಿಯೋ ವೀಕ್ಷಣೆಯಲ್ಲಿ ತೊಡಗುವುದರಿಂದ ಅಮೂಲ್ಯ ಸಮಯ ಕೂಡ ವ್ಯರ್ಥವಾಗುತ್ತಿದೆ.

ಪ್ರತಿ ದಿನ ನಾವು ಇಂತಹ ಚಟುವಟಿಕೆಗಳಿಗಾಗಿ ಎಷ್ಟು ಸಮಯ ವ್ಯಯಿಸುತ್ತಿದ್ದೇವೆ ಎಂದು ತಿಳಿದರೆ ಪರಿಸ್ಥಿತಿ ಕೊಂಚವಾದರೂ ಬದಲಾಗಬಹುದು. ಇದನ್ನು ಸಾಧಿಸುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಗೂಗಲ್‌ನ 'ಡಿಜಿಟಲ್ ವೆಲ್‌ಬೀಯಿಂಗ್' ಯೋಜನೆ (www.wellbeing.google) ಇಂತಹ ಪ್ರಯತ್ನಗಳಿಗೊಂದು ಉದಾಹರಣೆ. ನಮ್ಮ ಮೊಬೈಲಿನ ವಿವಿಧ ಆಪ್‌ಗಳನ್ನು ನಾವು ದಿನವೂ ಎಷ್ಟುಹೊತ್ತು ಬಳಸುತ್ತಿದ್ದೇವೆ, ದಿನಗಳು ಕಳೆದಂತೆ ಈ ಪ್ರಮಾಣ ಹೇಗೆ ಬದಲಾಗುತ್ತಿದೆ ಎನ್ನುವುದನ್ನೆಲ್ಲ ಈ ಸೌಲಭ್ಯ ಬಳಸಿ ನಮ್ಮ ಮೊಬೈಲಿನಲ್ಲೇ ತಿಳಿದುಕೊಳ್ಳಬಹುದು. ಯಾವುದಾದರೂ ಆಪ್ ಅನ್ನು ವಿಪರೀತವಾಗಿ ಬಳಸುತ್ತಿದ್ದೇವೆ ಎನ್ನಿಸಿದರೆ ದಿನಕ್ಕೆ ಇಂತಿಷ್ಟು ಸಮಯಕ್ಕಿಂತ ಹೆಚ್ಚು ಅದನ್ನು ಬಳಸಲಾಗದಂತೆ ದೈನಂದಿನ ಮಿತಿಗಳನ್ನೂ ರೂಪಿಸಿಕೊಳ್ಳಬಹುದು. ಅಷ್ಟೇ ಅಲ್ಲ, ಬೇಡದ ಆಪ್ ನೋಟಿಫಿಕೇಶನ್‌ಗಳನ್ನು ತಡೆಹಿಡಿಯಲು ಹಾಗೂ ವಿರಾಮದ ಸಮಯದಲ್ಲಿ ಮೊಬೈಲ್ ನಮಗೆ ತೊಂದರೆಕೊಡದಂತೆ ನೋಡಿಕೊಳ್ಳಲು ಕೂಡ ಇದು ನೆರವಾಗುತ್ತದೆ. ಆಂಡ್ರಾಯ್ಡ್ ಪೈ ಬಳಸುವ ನಿರ್ದಿಷ್ಟ ಮೊಬೈಲುಗಳಲ್ಲಿ ಮಾತ್ರವೇ ದೊರಕುತ್ತಿರುವ ಈ ಸೌಲಭ್ಯ ಇಷ್ಟರಲ್ಲೇ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದೆಯಂತೆ.

ಜುಲೈ ೧೦, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge