ಬುಧವಾರ, ಆಗಸ್ಟ್ 14, 2019

ಕಂಪ್ಯೂಟರ್ ಜಗತ್ತಿನ ಫೋರ್ಡ್ ಕಾರು

ಟಿ. ಜಿ. ಶ್ರೀನಿಧಿ


ಜಾಗತಿಕ ಆಟೋಮೊಬೈಲ್ ಇತಿಹಾಸದಲ್ಲಿ ಫೋರ್ಡ್ ಸಂಸ್ಥೆಯ 'ಮಾಡೆಲ್ ಟಿ' ಕಾರಿಗೆ ಬಹಳ ಮಹತ್ವದ ಸ್ಥಾನವಿದೆ. ಕಾರುಗಳೇನಿದ್ದರೂ ಶ್ರೀಮಂತರಿಗೆ ಮಾತ್ರ ಎನ್ನುವ ಅನಿಸಿಕೆಯನ್ನು ಮೊತ್ತಮೊದಲ ಬಾರಿಗೆ ಹೋಗಲಾಡಿಸಿದ್ದು, ಕೈಗೆಟುಕುವ ಬೆಲೆ ನಿಗದಿಪಡಿಸುವ ಮೂಲಕ ಮಧ್ಯಮವರ್ಗದ ಜನರೂ ಕಾರು ಕೊಳ್ಳುವುದನ್ನು ಸಾಧ್ಯವಾಗಿಸಿದ್ದು ಈ ಕಾರಿನ ಹೆಗ್ಗಳಿಕೆ. ಈ ಮಾದರಿಯ ಕಾರುಗಳ ಪೈಕಿ ಮೊದಲನೆಯದು ಸಿದ್ಧವಾದದ್ದು ನೂರಾ ಹನ್ನೊಂದು ವರ್ಷಗಳ ಹಿಂದೆ, ಇದೇ ಆಗಸ್ಟ್ ತಿಂಗಳಿನಲ್ಲಿ.

ಕ್ರಾಂತಿಕಾರಕ ಬದಲಾವಣೆ ತಂದ ಇಂತಹ ಘಟನೆಗಳನ್ನು ನಾವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ನೋಡಬಹುದು. 'ಕಮಡೋರ್ ೬೪' ಎಂಬ ಕಂಪ್ಯೂಟರಿನ ಸೃಷ್ಟಿಯನ್ನು ಇಂತಹ ಘಟನೆಗಳ ಸಾಲಿನಲ್ಲಿ ಪ್ರಮುಖವಾಗಿ ಉದಾಹರಿಸಬಹುದು.

ಅದು ೧೯೮೦ರ ದಶಕ. ಕಂಪ್ಯೂಟರುಗಳ ಪರಿಚಯ ಅದಾಗಲೇ ಆಗಿತ್ತಾದರೂ ಅವುಗಳ ಬೆಲೆ ಮಾತ್ರ ಇನ್ನೂ ಸಾಕಷ್ಟು ದುಬಾರಿ ಎನಿಸುವ ಮಟ್ಟದಲ್ಲೇ ಇತ್ತು. ಫೋರ್ಡ್ ಮಾಡೆಲ್ ಟಿ ಬರುವ ಮುನ್ನ ಕಾರುಗಳ ವಿಷಯದಲ್ಲಿ ಇದ್ದಂತಹುದೇ ಅಭಿಪ್ರಾಯ ಆಗ ಕಂಪ್ಯೂಟರುಗಳ ಬಗೆಗೂ ಚಾಲ್ತಿಯಲ್ಲಿತ್ತು.

ಈ ಪರಿಸ್ಥಿತಿಯನ್ನು ಬದಲಿಸಲು ಪ್ರಯತ್ನಿಸಿದ್ದು ಜಾಕ್ ಟ್ರಾಮೆಲ್ ಎಂಬ ತಂತ್ರಜ್ಞ. ಕಂಪ್ಯೂಟರುಗಳು ಎಲ್ಲರ ಮನೆಯಲ್ಲೂ ಇರಬೇಕು, ಎಲ್ಲರ ಕೈಗೂ ಸಿಗಬೇಕು ಎನ್ನುವುದು ಆತನ ಉದ್ದೇಶವಾಗಿತ್ತು. ಈ ಉದ್ದೇಶದ ಪರಿಣಾಮವೇ 'ಕಮಡೋರ್ ೬೪' ಕಂಪ್ಯೂಟರಿನ ಸೃಷ್ಟಿ. ಕಂಪ್ಯೂಟರುಗಳ ಬೆಲೆಯನ್ನು ಸುಮಾರು ಎರಡು ಸಾವಿರ ಡಾಲರುಗಳ ಆಸುಪಾಸಿನಿಂದ ಕೆಲವೇ ನೂರು ಡಾಲರುಗಳಿಗೆ ಇಳಿಸಿದ್ದು, ಅವು ಸೂಪರ್‌ಮಾರ್ಕೆಟ್‌ಗಳಲ್ಲೂ ಸಿಗುವಂತೆ ಮಾಡಿದ್ದು ಈ ಕಂಪ್ಯೂಟರಿನ ಸಾಧನೆ. ಇದನ್ನು ತಯಾರಿಸಿ ಮಾರುಕಟ್ಟೆಗೆ ತಂದದ್ದು ಕಮಡೋರ್ ಬಿಸಿನೆಸ್ ಮಶೀನ್ಸ್ (ಸಿಬಿಎಂ) ಎಂಬ ಸಂಸ್ಥೆ.

ಕಂಪ್ಯೂಟರ್ ಬೆಲೆ ಕಡಿಮೆಮಾಡಿದ್ದು ಮಾತ್ರವೇ ಅಲ್ಲ, ಅದು ನಿಜ ಅರ್ಥದಲ್ಲಿ ಜನಸಾಮಾನ್ಯರನ್ನೂ ತಲುಪುವಂತೆ ಮಾಡಿದ್ದು 'ಕಮಡೋರ್ ೬೪'ರ ಸಾಧನೆ. ಈ ಕಂಪ್ಯೂಟರಿನಲ್ಲಿ ಆಟ ಆಡುವುದು, 'ಬೇಸಿಕ್' ಭಾಷೆಯನ್ನು ಬಳಸಿ ಸರಳ ಪ್ರೋಗ್ರಾಮುಗಳನ್ನು ಬರೆಯುವುದು, ಸಂಗೀತ ಹೊರಡಿಸುವುದೆಲ್ಲ ಬಹಳ ಸುಲಭವಾಗಿತ್ತು. ಪ್ರತ್ಯೇಕ ಮಾನಿಟರ್ ಇಲ್ಲದಿದ್ದರೇನಂತೆ, ಮನೆಯ ಟೀವಿಗೇ ಈ ಕಂಪ್ಯೂಟರನ್ನು ಸಂಪರ್ಕಿಸಿಕೊಳ್ಳುವುದೂ ಸಾಧ್ಯವಿತ್ತು!

ಅಂದಹಾಗೆ ಈ ಕಂಪ್ಯೂಟರಿನಲ್ಲಿದ್ದದ್ದು ೬೪ ಕಿಲೋಬೈಟ್ ಸಾಮರ್ಥ್ಯದ ರ್‍ಯಾಮ್. ಈಗ ಕೇಳಲು ತಮಾಷೆಯೆನಿಸಿದರೂ ಅಂದಿನ ಕಾಲಕ್ಕೆ ಇದೇ ಬಹಳ ದೊಡ್ಡ ಪ್ರಮಾಣದ ಮೆಮೊರಿ ಎನಿಸಿಕೊಂಡಿತ್ತು. ಅಷ್ಟೇ ಏಕೆ, ಕಮಡೋರ್ ಹೆಸರಿನ ಬಾಲಂಗೋಚಿಯಾಗಿ ಅಂಟಿಕೊಂಡ '೬೪'ರ ಮೂಲವೂ ಇದೇ!

'ಇಂದು ಲಭ್ಯವಿರುವ ಅತ್ಯುತ್ತಮ ಹೋಮ್ ಕಂಪ್ಯೂಟರ್' (The best home computer available today) ಎಂದು ಕರೆಸಿಕೊಂಡಿದ್ದ ಈ ಕಂಪ್ಯೂಟರಿನ ವಿನ್ಯಾಸ ಕೂಡ ವಿಶಿಷ್ಟವಾಗಿತ್ತು. ಅದು ಕೆಲಸಮಾಡಲು ಬೇಕಿದ್ದ ಕೇಂದ್ರ ಸಂಸ್ಕರಣ ಘಟಕದ (ಸಿಪಿಯು) ಸಮಸ್ತ ಭಾಗಗಳೂ ಕೀಬೋರ್ಡ್‌ನೊಳಗೇ ಅಡಕವಾಗಿದ್ದವು. ಫ್ಲಾಪಿ ಡ್ರೈವ್, ಜಾಯ್‌ಸ್ಟಿಕ್, ಮೋಡೆಮ್ ಹೀಗೆ ಬೇರೆ ಯಾವ ಭಾಗ ಬೇಕಿದ್ದರೂ ಅದನ್ನು ಪ್ರತ್ಯೇಕವಾಗಿ ಕೊಂಡು ಬಳಸುವುದು ಸಾಧ್ಯವಿತ್ತು. ತಂತ್ರಾಂಶಗಳೂ ಅಷ್ಟೇ - ಐದೂಕಾಲು ಇಂಚಿನ ಫ್ಲಾಪಿಯಲ್ಲಿ ಸಿಗುತ್ತಿದ್ದ ನೂರಾರು ತಂತ್ರಾಂಶಗಳನ್ನು, ಆಟಗಳನ್ನು ಬೇಕೆಂದಾಗ ಕೊಂಡು ಬಳಸಬಹುದಾಗಿತ್ತು.

ಎಂಬತ್ತರ ದಶಕದಲ್ಲಿ ಅಮೆರಿಕಾದ ಕಂಪ್ಯೂಟರ್ ಮಾರುಕಟ್ಟೆಯ ಮೂರನೇ ಒಂದು ಭಾಗವನ್ನು ತನ್ನದಾಗಿಸಿಕೊಂಡಿದ್ದ ಕಮಡೋರ್ ಕಂಪ್ಯೂಟರುಗಳು ಭಾರೀ ಪ್ರಮಾಣದಲ್ಲಿ ಮಾರಾಟವಾಗಿದ್ದವು. ಈ ಮಾದರಿಯ ಒಂದೂವರೆ ಕೋಟಿಗೂ ಹೆಚ್ಚು ಕಂಪ್ಯೂಟರುಗಳು ಮಾರಾಟವಾಗಿದ್ದು ಮಾಹಿತಿ ತಂತ್ರಜ್ಞಾನ ಜಗತ್ತಿನ ಮರೆಯಲಾಗದ ದಾಖಲೆಗಳಲ್ಲೊಂದು.

ಇಷ್ಟೆಲ್ಲ ದೊಡ್ಡ ಪ್ರಮಾಣದಲ್ಲಿದ್ದ ಕಮಡೋರ್ ೬೪ ಜನಪ್ರಿಯತೆ ಹೆಚ್ಚು ಕಾಲ ಉಳಿಯದೆ ಹೋದದ್ದು ದುರದೃಷ್ಟಕರ. ಜಾಕ್ ಟ್ರಾಮೆಲ್ ರಾಜೀನಾಮೆ, ಮಾರುಕಟ್ಟೆಯಲ್ಲಿ ಹೆಚ್ಚಿದ ಸ್ಪರ್ಧೆ ಮುಂತಾದ ಹಲವು ಕಾರಣಗಳಿಂದ ಕಮಡೋರ್ ಕಂಪ್ಯೂಟರುಗಳ ಮಾರಾಟ ಕಡಿಮೆಯಾಗುತ್ತಾ ಬಂತು. ತೊಂಬತ್ತರ ದಶಕದ ಪ್ರಾರಂಭದ ವೇಳೆಗಾಗಲೇ ನಷ್ಟದಲ್ಲಿದ್ದ ಕಮಡೋರ್ ಬಿಸಿನೆಸ್ ಮಶೀನ್ಸ್, ೧೯೯೪-೯೫ರ ವೇಳೆಗೆ ದಿವಾಳಿಯಾಗಿದೆ ಎಂದು ಘೋಷಿಸಲಾಯಿತು. ೨೦೧೦ರ ವೇಳೆಗೆ ಬೇರೊಂದು ಸಂಸ್ಥೆಯ ಮೂಲಕ ಕಮಡೋರ್ ಬ್ರಾಂಡ್ ಅನ್ನು ಪುನರುತ್ಥಾನಗೊಳಿಸುವ ಪ್ರಯತ್ನ ನಡೆಯಿತಾದರೂ ಅದಕ್ಕೂ ಯಶಸ್ಸು ಸಿಗಲಿಲ್ಲ.

ಅದೆಲ್ಲ ಏನೇ ಆದರೂ ಕಮಡೋರ್ ೬೪ನ ಹೆಸರು ಹಾಗೂ ಸಾಧನೆ ಮಾತ್ರ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದೆ. ಫೋರ್ಡ್ ಮಾಡೆಲ್ ಟಿ ಕಾರಿನ ಹೆಸರಿನಷ್ಟು ಜನಪ್ರಿಯವಲ್ಲದಿದ್ದರೆ ಏನೆಂತೆ, ಕಂಪ್ಯೂಟರ್ ಕಲಿಕೆಯಲ್ಲಿ ಕಮಡೋರ್ ೬೪ರ ಸಹಾಯ ಪಡೆದುಕೊಂಡ ಸಾವಿರಾರು ಜನರ ಪಾಲಿಗಂತೂ ಕಮಡೋರ್ ೬೪ ಹೆಸರು ಇಂದಿಗೂ ಪ್ರಿಯವೇ! 

ಆಗಸ್ಟ್ ೧೪, ೨೦೧೯ರ ವಿಜಯವಾಣಿಯಲ್ಲಿ ಪ್ರಕಟವಾದ ಲೇಖನ

ಕಾಮೆಂಟ್‌ಗಳಿಲ್ಲ:

badge